೪೯. ಶ್ರೀ ಲಲಿತಾ ಸಹಸ್ರನಾಮ ೧೩೪ರಿಂದ ೧೩೮ನೇ ನಾಮಗಳ ವಿವರಣೆ

೪೯. ಶ್ರೀ ಲಲಿತಾ ಸಹಸ್ರನಾಮ ೧೩೪ರಿಂದ ೧೩೮ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೩೪ - ೧೩೮

Nirlepā निर्लेपा (134)

೧೩೪. ನಿರ್ಲೇಪಾ

          ದೇವಿಗೆ ಯಾವುದೇ ರೀತಿಯ ಮೋಹ ಮಮತೆಗಳಿಲ್ಲ. ’ಲೇಪಾ’ ಎಂದರೆ ಕಲೆ ಅಥವಾ ಮಲಿನತೆ ಅಂದರೆ ಅಶುದ್ಧವಾದದ್ದು. ಮೋಹವು ಬಂಧನದಿಂದ ಉಂಟಾಗುತ್ತದೆ ಮತ್ತು ಈ ಬಂಧನವು ಕರ್ಮಗಳ ಫಲಿತವಾಗಿದೆ. ಕರ್ಮಗಳು ಕ್ರಿಯೆಗಳಿಂದ ಉಂಟಾಗುತ್ತವೆ. ಆಕೆಯು ಕ್ರಿಯೆಗಳಿಂದ ಉಂಟಾಗುವ ಕರ್ಮಗಳಿಗೆ ಅತೀತಳಾದವಳು. ಇದನ್ನು ಎರಡು ರೀತಿಯಾಗಿ ವಿಶ್ಲೇಷಿಸಬಹುದು. ಆಕೆಯು ತನ್ನ ಭಕ್ತರ ಬಗ್ಗೆ ಮೋಹವುಳ್ಳವಳಾಗಿದ್ದಾಳೆ. ಹಲವಾರು ಭಕ್ತರು ಆಕೆಯನ್ನು ತಮ್ಮೊಳಗೆ ಆವಾಹನೆ ಮಾಡಿಕೊಳ್ಳಲು ಶಕ್ತರಾಗಿದ್ದಾರೆ. ಅಂತಹ ಸಂದರ್ಭಗಳಲ್ಲಿ ಆಕೆಯು ತನ್ನ ಭಕ್ತರ ದೇಹಗಳೊಂದಿಗೆ ಒಂದಾಗುತ್ತಾಳೆ. ಆಕೆಯ ಭಕ್ತರ ಕರ್ಮಗಳು ಆಕೆಯ ಮೇಲೆ ಪ್ರಭಾವ ಉಂಟು ಮಾಡುವುದಿಲ್ಲ. ವಾಸ್ತವವಾಗಿ ಯಾವುದಾದರೂ ಭಕ್ತನಿಗೆ ಈ ರೀತಿಯ ಅವಕಾಶಗಳು ದೊರೆತರೆ ಅವನು ಎಲ್ಲಾ ಕರ್ಮಗಳಿಂದ ಮುಕ್ತನಾಗುತ್ತಾನೆ. ಇದು ಏಕೆಂದರೆ ದೈವೀ ಶಕ್ತಿಯು ತನ್ನ ಶಕ್ತಿಯನ್ನು ಸಮರ್ಥವಾಗಿ ತಡೆದುಕೊಳ್ಳಬಲ್ಲ ಮತ್ತು ಎಲ್ಲಾ ರೀತಿಯಿಂದ ಸೂಕ್ತವಾದ ಶರೀರವನ್ನು ಮಾತ್ರವೇ ಪ್ರವೇಶಿಸುತ್ತದೆ. ಸೂಕ್ತವಾದ ಶರೀರವೆಂದರೆ ಬಲಯುತವಾಗಿದ್ದು ಅದು ಬಾಹ್ಯಾಂತರ ಶುಚಿಯನ್ನು ಒಳಗೊಂಡಿರಬೇಕು. ಕೆಲವೊಂದು ಪುರಾತನ ಕೃತಿಗಳು ಭಕ್ತನೊಬ್ಬನ ಶರೀರವು ದೇವಿಯ ಕುರಿತಾದ ಜ್ಞಾನವನ್ನು ಹೊಂದಿದರೆ ಸಾಕು ಅವನ ದೇಹವು ಪರಿಶುದ್ಧವಾಗುತ್ತದೆ ಎಂದು ಸಾರುತ್ತವೆ.

          ಎರಡನೆಯ ವ್ಯಾಖ್ಯಾನವು ಕೃಷ್ಣನ ಹೇಳಿಕೆಯೊಂದಿಗೆ ಏಕೀಭವಿಸುತ್ತದೆ. ಭಗವದ್ಗೀತೆಯ ೫ನೇ ಆಧ್ಯಾಯದ ೧೦ನೇ ಶ್ಲೋಕವು, "ಯಾರು ಯಾವುದೇ ರೀತಿಯ ಫಲಾಪೇಕ್ಷೆಗಳಿಲ್ಲದೆ ಕಾರ್ಯವನ್ನು ಕೈಗೊಳ್ಳುತ್ತಾನೆಯೋ, ಫಲಗಳನ್ನು ಪರಮಾತ್ಮನಿಗೆ ಅರ್ಪಿಸುತ್ತಾನೆಯೋ ಅವನು ಪಾಪಕಾರ್ಯಗಳಿಂದ ಬಾಧಿತನಾಗುವುದಿಲ್ಲ" ಎಂದು ಹೇಳುತ್ತದೆ. "ಯಾವುದೇ ಕರ್ಮವು ನನ್ನ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ ಅಥವಾ ನಾನು ಕರ್ಮಗಳ ಫಲಗಳನ್ನು ಬಯಸುವವನೂ ಅಲ್ಲ" ಎಂದು ಶ್ರೀಕೃಷ್ಣನು ಭಗವದ್ಗೀತೆಯ ೪ನೇ ಅಧ್ಯಾಯದ ೧೪ನೇ ಶ್ಲೋಕದಲ್ಲಿ ಹೇಳುತ್ತಾನೆ. ಲಲಿತಾಂಬಿಕೆಯು ಈ ವಿವರಣೆಗೆ ಸೂಕ್ತವಾಗಿ ಹೊಂದುತ್ತಾಳೆ. ಆಕೆಯು ತನ್ನ ಕಾರ್ಯಗಳನ್ನು ಶಿವನ ಆಣತಿಯಂತೆ ನಿರ್ವಹಿಸುತ್ತಾಳೆ, ಆದ್ದರಿಂದ ಅದರಿಂದ ಉದ್ಭವವಾಗುವ ಕರ್ಮಫಲಗಳು ಆಕೆಯ ಮೇಲೆ ಪ್ರಭಾವ ಬೀರುವುದಿಲ್ಲ. ಇದು ಯೋಗಿಗಳ ವಿಷಯದಲ್ಲೂ ನಿಜವಾಗಿದೆ. ಯೋಗಿಗಳು ಪ್ರಾಪಂಚಿಕ ಕರ್ತವ್ಯಗಳನ್ನು ಕೈಗೊಳ್ಳುತ್ತಾರೆ, ಶಾಸ್ತ್ರವಿಧಿತ ಕರ್ಮಗಳನ್ನು ಮಾಡುತ್ತಾರೆ, ಯಜ್ಞ-ಯಾಗಾದಿಗಳನ್ನು, ಬಾಹ್ಯ ಪೂಜೆ ಮೊದಲಾದ ಕಾರ್ಯಗಳನ್ನು ಕೈಗೊಂಡರೂ ಕೂಡಾ ಅವುಗಳ ಫಲಗಳನ್ನೆಲ್ಲಾ ಅದರಿಂದ ಒಳಿತಾಗಲಿ ಅಥವಾ ಕೆಡುಕಾಗಲಿ ಭಗವಂತನಿಗೆ ಸಮರ್ಪಣೆ ಮಾಡುತ್ತಾರೆ. ವೇಷಭೂಷಣಗಳಿಂದ ಒಬ್ಬನು ಯೋಗಿಯಾಗುವುದಿಲ್ಲ; ಆದರೆ ಆಲೋಚನೆ ಮತ್ತು ಕ್ರಿಯೆಗಳಿಂದ ಒಬ್ಬನು ಆದರ್ಶ ಯೋಗಿಯಾಗಬಲ್ಲ. ಒಬ್ಬನು ಬ್ರಹ್ಮದ ಬಗೆಗೆ ಸಂಪೂರ್ಣ ಜ್ಞಾನವನ್ನು ಹೊಂದಿ ಅದರೊಂದಿಗೆ ನಿರಂತರವಾಗಿ ಇದ್ದರೆ ಅಂತಹವನ ಮೇಲೆ ಕರ್ಮಗಳ ಪ್ರಭಾವವು ಉಂಟಾಗುವುದಿಲ್ಲ.

Nirmalā निर्मला (135)

೧೩೫. ನಿರ್ಮಲಾ

           ಮಲವೆಂದರೆ ಅಶುದ್ಧ ವಸ್ತುವಿನಿಂದ ಉಂಟಾಗುವ ಕೊಳೆ, ಎಲ್ಲಿ ಒಬ್ಬ ವ್ಯಕ್ತಿ ಎನಿಸಿಕೊಂಡವನು ತನ್ನ ಬಾಧೆಗೊಳಗಾದ ಮಾನಸಿಕ ಸ್ಥಿತಿಯಿಂದಾಗಿ ತನ್ನಷ್ಟಕ್ಕೆ ತಾನೇ ತನ್ನ ಮಲಿನತೆಯಿಂದ ಅಸಮರ್ಥನಾಗಿ (ವಿಕಲಾಂಗನಾಗಿ) ತನ್ನ ಕಾರ್ಯಗಳ ಬಗ್ಗೆ ಅಂದರೆ ಸಂಸಾರದ ಬಗ್ಗೆ ಮೋಹಗೊಳ್ಳುತ್ತಾನೆ. ದೇವಿಯು ಈ ರೀತಿಯಾದ ಮಲಿನತೆ ಇಲ್ಲದವಳಾಗಿದ್ದಾಳೆ. ಹಿಂದಿನ ನಾಮದಲ್ಲಿ ಮನಸ್ಸಿನಿಂದ ಉಂಟಾಗುವ ಮಲಿನತೆಯ ಬಗ್ಗೆ ಚರ್ಚಿಸಲಾಯಿತು ಈ ನಾಮದಲ್ಲಿ ವಸ್ತುಗಳಿಂದ ಉಂಟಾಗುವ ಕೊಳೆಯ ಬಗ್ಗೆ ಚರ್ಚಿಸಲಾಗುತ್ತಿದೆ. ಇಲ್ಲಿ ಒಂದು ಅಂಶವನ್ನು   ನೆನಪಿನಲ್ಲಿಡಬೇಕು ಅದೇನೆಂದರೆ ಮನಸ್ಸು ಮತ್ತು ವಸ್ತು ಎರಡೂ ಶಕ್ತಿಯೇ ಆಗಿವೆ. ಮಲವು ಒಂದು ತೆರನಾದ ಅಸಂಪೂರ್ಣತನೆಯನ್ನು ಉಂಟುಮಾಡಿ ಆತ್ಮದ ಬಗೆಗಿನ ಅಜ್ಞಾನಕ್ಕೆ ಎಡೆಮಾಡಿಕೊಡುತ್ತದೆ ಮತ್ತು ಪರಮಾತ್ಮದ ಪೂರ್ಣಸ್ವರೂಪವು ವ್ಯಕ್ತಗೊಳ್ಳುವುದಕ್ಕೆ ತಡೆಯುಂಟು ಮಾಡುತ್ತದೆ. ಈ ರೀತಿಯಾದ ಅಜ್ಞಾನವು ಅಹಂಕಾರದಿಂದಾಗಿ ಉಂಟಾಗುತ್ತದೆ ಅದನ್ನೇ ಮಲ ಅಥವಾ ’ಆಣವ ಮಲ’ ಎಂದು ಕರೆಯುತ್ತಾರೆ.

           ಒಟ್ಟಾರೆಯಾಗಿ ಈ ನಾಮವು ಸ್ಪಷ್ಟಪಡಿಸುವುದೇನೆಂದರೆ ಒಬ್ಬನು ತನ್ನ ಅಹಂಕಾರವನ್ನು ಇಲ್ಲವಾಗಿಸಿಕೊಂಡು ಎಲ್ಲಾ ರೀತಿಯ ವಸ್ತುಗಳ ಮೋಹಗಳಿಂದ ವಿಮುಕ್ತನಾದರೆ ಅವನಿಗೆ ಜ್ಞಾನವು ಪ್ರಾಪ್ತಿಯಾಗುತ್ತದೆ. ಮಲದ ಇರುವಿಕೆಯು ಅಜ್ಞಾನವನ್ನು ಉಂಟು ಮಾಡುವುದಲ್ಲದೆ ಗೊಂದಲ, ಮಲಿನತೆ ಮತ್ತು ಕತ್ತಲೆಯೆಡೆಗೆ ಕೊಂಡೊಯ್ಯುತ್ತದೆ. ಈ ರೀತಿಯಾದ ಕತ್ತಲೆಯನ್ನು ದೇವಿಯ ಕುರಿತಾದ ಧ್ಯಾನದಿಂದ ಹೋಗಲಾಡಿಸಿ ತನ್ಮೂಲಕ ಜ್ಞಾನವನ್ನು ಪಡೆಯಬಹುದು. ಆಸಕ್ತಿಕರ ವಿಷಯವೇನೆಂದರೆ ನಿರ್ಗುಣ ಬ್ರಹ್ಮದ ಕುರಿತಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೇಳುವ ನಾಮಗಳು ಧಾನ್ಯದ ಬಗ್ಗೆ ಉಲ್ಲೇಖಿಸುತ್ತವೆ.

ಮಲಗಳ ಕುರಿತಾಗಿ ಇನ್ನಷ್ಟು ವಿವರಗಳು:

           ಮಲವೆಂದರೆ ಆತ್ಮದ ನೈಜ ಸ್ವರೂಪವನ್ನು ಮರೆಮಾಡುವ ಜನ್ಮತಃ ಇರುವ ಸ್ವಾಭಾವಿಕ ಅಜ್ಞಾನ. ಬಹುಶಃ ನಾವು ಅಪರಿಪೂರ್ಣರು ಮತ್ತು ಮಿತಿಯುಳ್ಳವರು ಎನ್ನುವ ತಪ್ಪು ಗ್ರಹಿಕೆಯಿಂದಾಗಿ ಅದು ಎಣೆಯಿಲ್ಲದಷ್ಟು ವೈಯ್ಯಕ್ತಿಕ ಜೀವಿಗಳ ಉಗಮಕ್ಕೆ ಕಾರಣವಾಗಿದೆ. ಇದು ಅಶುದ್ಧತೆ ಅಥವಾ ಮಲಕ್ಕೆ ನಿಮಿತ್ತ ಕಾರಣವಾಗಿದೆ. ಒಬ್ಬನ ಕರ್ಮದ ಶೇಷವೇ ಅವನ ಜನ್ಮಸಿದ್ಧವಾದ ಅಜ್ಞಾನದ ಮಟ್ಟಕ್ಕೆ ಕಾರಣವಾಗಿದೆ. ಈ ರೀತಿಯಾದ ಅಜ್ಞಾನವು ಎರಡು ವಿಧದ್ದಾಗಿದೆ, ಒಂದು ಆಂತರಿಕವಾಗಿದ್ದರೆ ಮತ್ತೊಂದು ಬಾಹ್ಯವಾದದ್ದು. ಒಂದು ಹಳೆಯ ಅಥವಾ ಪೂರ್ವಜನ್ಮಗಳ ವಾಸನೆಗಳ (ಅಚ್ಚಾಗಿರುವ ವಿಷಯಗಳ) ಬಡಿದೆಬ್ಬಿಸುವಿಕೆಯಿಂದ (ಪುನರುಜ್ಜೀವನಗೊಳಿಸುವುದರಿಂದ) ಉಂಟಾದರೆ ಮತ್ತೊಂದು ಯಾವುದಾದರೂ ಗ್ರಹಣೇಂದ್ರಿಯವು (ಪಂಚೇಂದ್ರಿಯವು) ಮತ್ತೊಂದು ಬಾಹ್ಯ ವಸ್ತುವಿನ ಸಂಪರ್ಕಕ್ಕೆ ಬಂದಾಗ ಉಂಟಾಗುತ್ತದೆ. ಬೌದ್ಧಿಕ ಅಜ್ಞಾನವು ಆಧ್ಯಾತ್ಮಿಕ ಅಜ್ಞಾನಕ್ಕಿಂತ ಭಿನ್ನವಾದುದೆಂದು ನೆನಪಿಡಿ. ಬೌದ್ಧಿಕ ಅಜ್ಞಾನವು ಜೊತೆಯಲ್ಲಿರುವ ವ್ಯಕ್ತಿಯ ದೇಹ ಮತ್ತು ಆತ್ಮದೊಂದಿಗಿನ ಸಂಭಂದದ ಮೇಲೆ ಅವಲಂಭಿತವಾಗಿದೆ. ಆದರೆ ಆಧ್ಯಾತ್ಮಿಕ ಅಜ್ಞಾನದ ವಿಷಯವನ್ನು ತೆಗೆದುಕೊಂಡರೆ ಅದು ಬೌದ್ಧಿಕ ಅಜ್ಞಾನಕ್ಕೆ ಸಂಭಂದವಿಲ್ಲದೆ ಸ್ವತಂತ್ರವಾದದ್ದಾಗಿದೆ. ಈ ವ್ಯತ್ಯಾಸದಿಂದಾಗಿ ಮುಕ್ತಿಯು ಕೇವಲ ಬೌದ್ಧಿಕ ಜ್ಞಾನದ ಮೂಲಕ ಹೊಂದಲ್ಪಡದು. ನಿಜವಾದ ಮುಕ್ತಿಯನ್ನು ಬೌದ್ಧಿಕ ಜ್ಞಾನ ಮತ್ತು ಆಧ್ಯಾತ್ಮಿಕ ಜ್ಞಾನಗಳ ಸಮ್ಮಿಲನದಿಂದ ಮಾತ್ರವೇ ಪಡೆಯಬಹುದು.

Nityā नित्या (136)

೧೩೬. ನಿತ್ಯಾ

           ನಿತ್ಯ ಎಂದರೆ ನಿರಂತರವಾಗಿ ಬದಲಾವಣೆ ಇಲ್ಲದೇ ಇರುವುದು. ನಿರ್ಗುಣ ಬ್ರಹ್ಮದ ಕುರಿತಾಗಿ ಇಲ್ಲಿ ಚರ್ಚಿಸುತ್ತಿರುವುದರಿಂದ ಬ್ರಹ್ಮದ ಗುಣಗಳಲ್ಲಿ ಒಂದನ್ನು ಇಲ್ಲಿ ವಿವರಿಸಲಾಗಿದೆ. ಬೃಹದಾರಣ್ಯಕ ಉಪನಿಷತ್ತು (೪.೫.೧೪) ಬ್ರಹ್ಮವನ್ನು ಹೀಗೆ ವಿವರಿಸುತ್ತದೆ, "ಆತ್ಮವು ರೂಪಾಂತರ ರಹಿತವಾಗಿದೆ ಮತ್ತು ವಿನಾಶವಿಲ್ಲದ್ದಾಗಿದೆ". ಬ್ರಹ್ಮವು ಬದಲಾವಣೆಗೆ ಅತೀತವಾಗಿದ್ದು ಅದು ಎಲ್ಲೆಡೆ ಇರುತ್ತದೆ ಅಂದರೆ ಅದು ಸರ್ವಾಂತರಯಾಮಿಯಾಗಿದೆ. ನಿತ್ಯರೆಂದರೆ ಹದಿನೈದು ತಿಥಿ ನಿತ್ಯಾ ದೇವತೆಗಳಾಗಿದ್ದು ಅವು ಚಾಂದ್ರಮಾನದ ಹದಿನೈದು ದಿವಸಗಳನ್ನು (ಪಾಡ್ಯದಿಂದ ಅಮವಾಸ್ಯೆ/ಹುಣ್ಣಿಮೆಯವರೆಗೆ) ಪ್ರತಿನಿಧಿಸುತ್ತವೆ. ಈ ದೇವತೆಗಳನ್ನು ಶ್ರೀ ಚಕ್ರವನ್ನು ಪೂಜಿಸುವಾಗ ಪೂಜೆಗೈಯ್ಯುತ್ತಾರೆ. ಪ್ರತಿಯೊಂದು ದೇವತೆಗೂ ಒಂದು ಮೂಲ ಮಂತ್ರವಿದ್ದು ಪ್ರತಿಯೊಂದು ದೇವತೆಗೂ ಒಂದೊಂದು ಸಿದ್ಧಿಯನ್ನು ಕರುಣಿಸುವ ಸಾಮರ್ಥ್ಯವಿದೆ.

ನಿತ್ಯ ದೇವತೆಗಳ ಬಗ್ಗೆ ಇನ್ನಷ್ಟು ವಿವರಗಳು:

         ನಿತ್ಯವು ಪೂಜೆಗೊಳ್ಳುವ ಅತ್ಯುನ್ನತವಾದ ವಸ್ತುವಾಗಿದ್ದು ಅದು ಕುಲಾ ಪೂಜಾ ಪದ್ಧತಿಯ ಅಂತಿಮ ಆಧ್ಯಾತ್ಮಿಕ ತತ್ವವಾಗಿದೆ. ಕುಲಾ ಶಬ್ದವು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಈ ಹದಿನೈದು ನಿತ್ಯರಲ್ಲದೆ ಹದಿನಾರನೇ ನಿತ್ಯವು ಸ್ವಯಂ ಲಲಿತಾಂಬಿಕೆಯೇ ಆಗಿದ್ದಾಳೆ ಮತ್ತು ಆಕೆಯನ್ನು ಮಹಾ ತ್ರಿಪುರ ಸುಂದರೀ ಎಂದೂ ಕರೆಯಲಾಗಿದೆ. ಈ ಎಲ್ಲಾ ನಿತ್ಯ ದೇವತೆಗಳ ಪೈಕಿ, ಕಡೆಯ ಮೂರು ನಿತ್ಯ ದೇವತೆಗಳು ಆಂತರಿಕ ಪೂಜೆಗೆ ಹೆಚ್ಚು ಸಂಭಂದವನ್ನು ಹೊಂದಿದ್ದಾರೆ. ಈ ನಿತ್ಯ ದೇವತೆಗಳ ಕುರಿತಾಗಿ ಅನುಷ್ಠಾನ ಕೈಗೊಳ್ಳುವ ಒಂಭತ್ತು ರೀತಿಯ ತಂತ್ರಗಳಿವೆ. ಶಕ್ತಿ ದೇವತೆಯ ಬಲವನ್ನೂ ಕೂಡಾ ನಿತ್ಯ ಎಂದು ಕರೆಯಲಾಗುತ್ತದೆ ಎಂದು ಹೇಳುತ್ತಾರೆ.

Nirākārā निराकारा (137)

೧೩೭. ನಿರಾಕಾರಾ

           ದೇವಿಯು ರೂಪರಹಿತಳಾಗಿದ್ದಾಳೆ. ಆಕಾರವೆಂದರೆ ರೂಪ, ಚಿತ್ರ, ಸ್ವರೂಪ ಮೊದಲಾದ ಅರ್ಥಗಳಿವೆ. ಇದೂ ಕೂಡಾ ನಿರ್ಗುಣ ಬ್ರಹ್ಮದ ಬಹುಮುಖ್ಯ ಲಕ್ಷಣವಾಗಿದೆ (ನಿರ್ಗುಣವೆಂದರೆ ಗುಣ ಅಥವಾ ಲಕ್ಷಣಗಳಿಲ್ಲದಿರುವುದು). ಇಲ್ಲಿ ನಿರಾಕಾರ ಬ್ರಹ್ಮದ ಒಂದೊಂದೇ ಲಕ್ಷಣಗಳನ್ನು ವಾಗ್ದೇವಿಗಳು ಒಂದರ ನಂತರ ಒಂದನ್ನು ವಿವರಿಸುತ್ತಿದ್ದಾರೆ.

Nirākulā निराकुला (138)

೧೩೮. ನಿರಾಕುಲಾ

           ದೇವಿಯು ಉದ್ವೇಗವಿಲ್ಲದವಳಾಗಿದ್ದಾಳೆ. ಅಕುಲಾ ಎಂದರೆ ಕಂಗಾಲಾದವಳು, ಗೊಂದಲಕ್ಕೊಳಗಾದವಳು, ಕೋಲಾಹಲ ಅಥವಾ ಸಡಗರಗೊಂಡವಳು, ಉದ್ವೇಗಗೊಂಡವಳು, ಅಸ್ತವ್ಯಸ್ತವಾಗಿರುವವಳು, ವ್ಯಾಕುಲಗೊಂಡವಳು ಮೊದಲಾದ ಅರ್ಥಗಳಿವೆ. ನಿರ್ ಎನ್ನುವುದು ಅಕುಲಾದ ಎಲ್ಲಾ ಗುಣಗಳು ಅವಳಲ್ಲಿ ಇಲ್ಲವಾಗಿವೆ ಎಂದು ತಿಳಿಸುತ್ತದೆ. ಅಂದರೆ ಆಕೆಯು ವ್ಯಾಕುಲ ಅಥವಾ ಗೊಂದಲಗೊಳ್ಳುವುದಿಲ್ಲ, ಮುಂತಾದವುಗಳಾಗಿವೆ. ದೇವಿಯು ಈ ಎಲ್ಲಾ ಗುಣಗಳಿಗೆ ಕಾರಣೀಭೂತಳಾಗಿದ್ದಾಳೆ ಆದರೆ ಅಕೆಯು ಈ ವಸ್ತುಗಳಿಂದ ಪ್ರಭಾವಿತಗೊಳ್ಳುವುದಿಲ್ಲ. ದೇವಿಯು ಅಜ್ಞಾನ ಅಥವಾ ಅವಿದ್ಯೆಯೊಂದಿಗೆ ಸಂಭಂದ ಹೊಂದಿದ್ದರೂ ಕೂಡಾ ಅವಳು ಅವುಗಳಿಂದ ವಿಚಲಿತಳಾಗುವುದಿಲ್ಲ. ಆಕೆಯು ಅಜ್ಞಾನದೊಂದಿಗೆ ಸಂಭಂದ ಹೊಂದಿದ್ದಾಳೆ ಎಂದರೆ ಆಕೆಯು ಅವಿದ್ಯೆಗೆ ಕಾರಣಳಾಗಿದ್ದಾಳೆ ಎಂದು ಅರ್ಥ. ಆಕೆಯು ಮಾಯೆಯ ಅಥವಾ ಭ್ರಮೆಯ ರೂಪದಲ್ಲಿದ್ದಾಗ ಆಕೆಯು ಅಜ್ಞಾನವನ್ನು ಉಂಟುಮಾಡುತ್ತಾಳೆ. ಮಾಯೆಯು ಸಾಧಕನು ಜ್ಞಾನ ಹೊಂದುವುದಕ್ಕೆ ಅಡಚಣೆಯನ್ನುಂಟು ಮಾಡುತ್ತದೆ.

           ಈ ನಾಮದ ಒಟ್ಟಾರೆ ಅರ್ಥವು ಅಜ್ಞಾನಕ್ಕೆ ದೇವಿಯು ಕಾರಣಳಾಗಿದ್ದರೂ ಕೂಡಾ ಆಕೆಯು ಈ ಅಜ್ಞಾನದಿಂದ ವಿಚಲಿತಳಾಗುವುದಿಲ್ಲ ಎಂದು ತಿಳಿಸುತ್ತದೆ.

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 134-138 http://www.manblunder.com/2009/08/lalaitha-sahasranamam-139-142.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by nageshamysore Fri, 06/21/2013 - 19:23

ಶ್ರೀಧರರೆ 134 - 138 ರ ಸಾರ ಅವಗಾಹನೆ, ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು

೧೩೪. ನಿರ್ಲೇಪಾ 
ಕ್ರಿಯಾಕರ್ಮಾತೀತೆ ಲಲಿತೆ ಮೋಹಬಂಧ ವಿಮುಕ್ತೆ
ಭಕ್ತ ಮೋಹಿತೆ ಕರ್ಮ ಕಳೆದವರೊಳಗೇ ಆವಾಹಿತೆ
ಸೂಕ್ತ ಭಕ್ತ ತನುಮನ ಸಶಕ್ತ ಜೀವಾಭಾವ ಸಂಬಂಧ
ದೇವಿ ಜ್ಞಾನದೆ ಪರಿಶುದ್ಧ ನಿರ್ಲೇಪಿಸುತ ಭಕ್ತನ ಸದ!

೧೩೫. ನಿರ್ಮಲಾ 
ಮಲಿನ ಮನ ವಿಕಲಾಂಗ ಇಹ ಮೋಹ ಜೀವನ
ಅಹಂಮೂಲ ಅಜ್ಞಾನ ಬಿಡ ಪರಮಾತ್ಮಾದರ್ಶನ
ದೇವಿ ನಿರ್ಮಲೆ ಅಂತೆ ಮೋಹ ವಿಮುಕ್ತಗೆ ಜ್ಞಾನ
ಅಣವಮಲ ಕತ್ತಲೆ ತೊಳೆಸೆ ಛವಿಲಲಿತಾಧ್ಯಾನ!
           
೧೩೬. ನಿತ್ಯಾ 
ಸರ್ವಾಂತರ್ಯಾಮಿ ನಿರ್ಗುಣ ಬ್ರಹ್ಮ ನಿತ್ಯ ನಿರಂತರ
ಅವಿನಾಶಿ ರೂಪರಹಿತ ನಿತ್ಯಾದೇವತ ಸಿದ್ದಿಗೆ ಮಂತ್ರ
ಷೋಡಶ ನಿತ್ಯಾ ಲಲಿತೆ ಮಹಾತ್ರಿಪುರಸುಂದರಿ ಜತೆ
ಆಂತರಿಕ ಪೂಜೆಗೆ ಕಡೆ ತ್ರಿದೇವಿ ನಿತ್ಯಾ ಅನ್ಯೋನ್ಯತೆ!
           
೧೩೭. ನಿರಾಕಾರಾ 
ನಿರ್ಗುಣಕೆಲ್ಲಿ ರೂಪಾ ನಿರಾಕಾರವೆ ಸ್ವರೂಪ
ಲಲಿತಾ ರೂಪರಹಿತ ಗುಣಲಕ್ಷಣಾಂತರ್ಗತ
ನಿರ್ಗುಣಬ್ರಹ್ಮ ಆಕಾರರಹಿತ ವಾಗ್ದೇವಿ ಚಿತ್ರ
ಆತ್ಮಸಾಕ್ಷಾತ್ಕಾರಪಥ ಇದ್ದೂ ಇರದ ಸಚಿತ್ರ!

೧೩೮. ನಿರಾಕುಲಾ 
ಗೊಂದಲ ವ್ಯಾಕುಲ ಉದ್ವೇಗ ಸಡಗರ ಕೋಲಾಹಲ
ಕಾರಣೀಭೂತಳೆ ಲಲಿತೆ ಸ್ಥಿತಪ್ರಜ್ಞೆ ತಾನಾಗಿ ಅಚಲ
ಮಾಯಾಜಾಲದೆ ಸಿಲುಕೊ ಸಾಧಕನಿಗಿತ್ತೇ ಅಜ್ಞಾನ
ಕಮಲಕಂಟದ ನೀರಂತೆ ತಾನಾಗಿ ಬರಿ ಶುದ್ಧ ಜ್ಞಾನ!

Submitted by makara Fri, 06/21/2013 - 19:33

In reply to by nageshamysore

>>>>>>>>>ಮಾಯಾಜಾಲದೆ ಸಿಲುಕೊ ಸಾಧಕನಿಗಿತ್ತೇ ಅಜ್ಞಾನ
ಕಮಲಕಂಟದ ನೀರಂತೆ ತಾನಾಗಿ ಬರಿ ಶುದ್ಧ ಜ್ಞಾನ!.........+೧

ನಾಗೇಶ್ ಅವರೆ, ನಿನ್ನೆಯ ಸ್ಪೆಷಲ್ ಕ್ಲಾಸಿನ ಪಾಠ ಹೆಚ್ಚಾಯಿತೆನಿಸಿತು ಆದ್ದರಿಂದ ಒಂದು ಕ್ಲಾಸನ್ನು ಕಡಿತಗೊಳಿಸಿ ಈ ದಿನ ನಿತ್ಯ ತರಗತಿ ಮಾತ್ರವನ್ನೇ ತೆಗೆದುಕೊಳ್ಳುತ್ತಿದ್ದೇನೆ :))

Submitted by nageshamysore Fri, 06/21/2013 - 21:13

In reply to by makara

ಶ್ರೀಧರರೆ, ನಿಮ್ಮ ಪರವಾಗಿ ಪಾರ್ಥರು ಆಗಲೆ ಸ್ಪೆಶಲ್ ಕ್ಲಾಸ್ ತೆಗೆದುಕೊಂಡು ಲಲಿತೆಯ ಜಾಗದಲ್ಲಿ ಭಗೀರತೆಯನ್ನು ಕೂರಿಸಿಬಿಟ್ಟಿದ್ದಾರೆ ; ವೀಕ್ ಎಂಡ್ ಬೋನಸ್ ರಜೆಗೆ ಧನ್ಯವಾದಗಳು:-) - ನಾಗೇಶ ಮೈಸೂರು

Submitted by nageshamysore Sat, 07/13/2013 - 21:58

ಶ್ರೀಧರರೆ, 49 ನೆ ಕಂತಿನ ಶ್ರೀಯುತ ರವಿಯವರ ಮೂಲ ಲೇಖನದ ಕೊಂಡಿ ತಪ್ಪಾಗಿರುವಂತಿದೆ. ಸಂಪದ ನಿರ್ವಹಣಾ ತಂಡದ ಮೂಲಕ ಸರಿಪಡಿಸಲು ಸಾಧ್ಯವೆ ನೋಡಿ, ವೆಬ್ ಸೈಟಿಗೆ ಲಿಂಕಿಸಲು ನೋಡುತ್ತಿದ್ದೆ, ಹೀ ಗಾಗಿ ಗಮನಕ್ಕೆ ಬಂತು - ನಾಗೇಶ ಮೈಸೂರು

Submitted by makara Sun, 07/14/2013 - 00:08

In reply to by nageshamysore

೪೯. ಶ್ರೀ ಲಲಿತಾ ಸಹಸ್ರನಾಮ ೧೩೪ರಿಂದ ೧೩೮ರ ವಿವರಣೆಯ ಮೂಲ ಲೇಖಕರ ಕೊಂಡಿ ಸಂಪದದಲ್ಲಿ ತಪ್ಪಾಗಿ ಅಚ್ಚಾಗಿದೆ ಎನ್ನುವುದು ಸರಿ. ಅದನ್ನು ನನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ಮೂಲ ಬರಹದಲ್ಲಿ ೧೩೩ನೇ ನಾಮವು ಎರಡು ಬಾರಿ ಪುನರಾವೃತಗೊಂಡಿದೆ. ಹಾಗಾಗಿ ಆ ಗೊಂದಲದಲ್ಲಿ ಇಲ್ಲಿನ ಲಿಂಕನ್ನು ತಪ್ಪಾಗಿ ನಕಲು ಮಾಡಿಕೊಂಡಿದ್ದೇನೆನಿಸುತ್ತಿದೆ. ಅದರ ಸರಿಯಾದ ಕೊಂಡಿ ಈ ಕೆಳಗಿನಂತಿದೆ.
http://www.manblunder.com/2009/08/lalitha-sahasranamam-133-138.html ನೋಡೋಣ ಇದನ್ನು ಸಂಪದ ನಿರ್ವಹಣಾ ತಂಡದವರ ದೃಷ್ಟಿಗೂ ತರುತ್ತೇನೆ.

ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ