೫೦. ಶ್ರೀ ಲಲಿತಾ ಸಹಸ್ರನಾಮ ೧೩೯ರಿಂದ ೧೪೨ನೇ ನಾಮಗಳ ವಿವರಣೆ

೫೦. ಶ್ರೀ ಲಲಿತಾ ಸಹಸ್ರನಾಮ ೧೩೯ರಿಂದ ೧೪೨ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೩೯ - ೧೪೨

Nirguṇā निर्गुणा (139)

೧೩೯. ನಿರ್ಗುಣಾ

           ಆಕೆಯು ಗುಣಗಳಿಂದಾಗಿ ಮಾರ್ಪಾಡು ಹೊಂದುವುದಿಲ್ಲ. ಗುಣಗಳು ಮೂರು ವಿಧಗಳಾಗಿವೆ; ಅವೆಂದರೆ ಸತ್ವ, ರಜಸ್ ಮತ್ತು ತಮಸ್. ಈ ಗುಣಗಳು ಸ್ಥೂಲ ಶರೀರದ ರಚನೆಗೆ ಕಾರಣವಾಗಿವೆ ಮತ್ತು ಇವು ಪ್ರಕೃತಿಯಿಂದ ಉದ್ಭವವಾಗುತ್ತವೆ (ಪ್ರಕೃತಿಯು ’ಕಾರಣ’ದ ಮೂಲವಾಗಿದೆ ಮತ್ತು ಇದನ್ನು ಮಾಯಾ ಎಂದೂ ಕರೆಯಲಾಗಿದೆ). ದೇವಿಗೆ ಸ್ಥೂಲ ಶರೀರವಿಲ್ಲದೇ ಇರುವುದರಿಂದ ಆಕೆಯನ್ನು ನಿರ್ಗುಣಾ ಎಂದು ಕರೆಯಲಾಗಿದೆ. ಬ್ರಹ್ಮವೊಂದೇ ಗುಣರಹಿತವಾಗಿರುವುದು, ಏಕೆಂದರೆ ಬ್ರಹ್ಮಕ್ಕೆ ಮಾತ್ರ ಸ್ಥೂಲ ಶರೀರವಿಲ್ಲ.

           ಶ್ವೇತಾಶ್ವತರ ಉಪನಿಷತ್ತು (೬.೧೧) ಹೇಳುತ್ತದೆ, "ಏಕಃ ದೇವಃ" ಅಂದರೆ ದೇವನು ಅದ್ವಿತೀಯನಾಗಿದ್ದಾನೆ. ದೇವಃ ಎಂದರೆ ಪ್ರಕಾಶ ಎನ್ನುವ ಅರ್ಥವಿದ್ದರೂ ಕೂಡಾ ಇಲ್ಲಿ ಅದು ಬ್ರಹ್ಮವನ್ನೇ ಹೇಳುತ್ತದೆ ಏಕೆಂದರೆ ಬ್ರಹ್ಮವೊಂದೇ ಸ್ವಯಂ ಪ್ರಕಾಶಿತವಾಗಿರುವುದು. ಬ್ರಹ್ಮವನ್ನು ಗುರುತಿಸಿದ ಮೇಲೆ ಉಪನಿಷತ್ತು ಬ್ರಹ್ಮದ ಲಕ್ಷಣಗಳನ್ನು ಕುರಿತಾಗಿ ಹೇಳುತ್ತದೆ. ಅದು ಹೇಳುತ್ತದೆ, "ನಿರ್ಗುಣ ಮತ್ತು ನಿರಾಕಾರ". ಇವೆಲ್ಲಾ ಹೇಳಿಕೆಗಳಿಂದ ಲಲಿತಾಂಬಿಕೆಯು ಬ್ರಹ್ಮವೇ ಎನ್ನುವುದು ದೃಢವಾಗುತ್ತದೆ.

ಗುಣಗಳ ಬಗ್ಗೆ ಇನ್ನಷ್ಟು ವಿವರಗಳು:

           ಗುಣವೆಂದರೆ ಮೂಲಭೂತ ವಸ್ತುಗಳೆಂದು ವ್ಯಾಖ್ಯಾನಿಸಬಹುದು. ಮೂರು ವಿಧವಾದ ಗುಣಗಳಿವೆ. ಅವೆಂದರೆ ಸತ್ವ, ರಜಸ್ ಮತ್ತು ತಮಸ್. ಸತ್ವ ಗುಣವೆಂದರೆ ಅದು ಪರಿಶುದ್ಧತೆ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತದೆ. ರಜೋ ಗುಣವೆಂದರೆ ಚಟುವಟಿಕೆ ಮತ್ತು ರಾಗ-ದ್ವೇಷಗಳು. ತಮೋ ಗುಣವೆಂದರೆ ಜಡತ್ವ ಮತ್ತು ಅಜ್ಞಾನ. ಬ್ರಹ್ಮವು ಸತ್ವ ಗುಣದ ಸ್ವರೂಪವಾಗಿದೆ, ಆದರೆ ತೋರಿಕೆಯ ಜೀವಿಗಳು (ವ್ಯಕ್ತಿಗತವೆಂದು ಕಾಣಲ್ಪಡುವ ಆತ್ಮಗಳು) ಇತರೇ ಎರಡು ಗುಣಗಳೊಂದಿಗೆ ಹೆಚ್ಚಿನ ಸಂಭಂದವನ್ನು ಹೊಂದಿವೆ. ಪ್ರಕೃತಿಯು ಮೂಲತತ್ವವಾಗಿದ್ದು ಅದು ಅತ್ಯಂತ ಅಭೌತಿಕ ತತ್ವವಾಗಿದೆ ಮತ್ತು ಅದರಲ್ಲಿ ಬೃಹತ್ತಾದ ತೋರಿಕೆಯ ಬ್ರಹ್ಮಾಂಡವಾಗಿ ಮಾರ್ಪಾಡುವ ಅಂತರ್ಗತ ಶಕ್ತಿ ಅಡಗಿದೆ. ಸೃಷ್ಟಿ ಕಾರ್ಯದಲ್ಲಿ ಪ್ರಪಂಚವು ಪ್ರಕೃತಿಯೊಳಗೆ ಅಂತರ್ಗತ ಶಕ್ತಿಯಾಗಿ ಇರುತ್ತದೆ; ಎಲ್ಲಿಯವರೆಗೆಂದರೆ ತ್ರಿಗುಣಗಳು ವಿಚಲಿತಗೊಳ್ಳದೇ ಇರುವವರೆಗೆ. ಯಾವಾಗ ತ್ರಿಗುಣಗಳ ಈ ಸಾಮರಸ್ಯದ ಸ್ಥಿತಿಯಲ್ಲಿ ವ್ಯತ್ಯಯವಾಗುತ್ತದೆಯೋ ಆಗ ಪ್ರಕೃತಿಯು ತನ್ನ ಅಭೌತಿಕ ತತ್ವಗಳನ್ನು ಅನಾವರಣಗೊಳಿಸುತ್ತಾ ಸೃಷ್ಟಿ ಕಾರ್ಯವನ್ನು ಪ್ರಾರಂಭಿಸುತ್ತದೆ.

Niṣkalā निष्कला (140)

೧೪೦. ನಿಷ್ಕಲಾ

           ದೇವಿಯು ಯಾವುದೇ ಅವಯವಗಳಿಲ್ಲದೇ ಇದ್ದಾಳೆ. ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ, ಏಕೆಂದರೆ ಆಕೆಯು ನಿರ್ಗುಣಳಾಗಿರುವುದರಿಂದ ಆಕೆಯು ನಿಷ್ಕಲಾ ಆಗಿದ್ದಾಳೆ. ಕಲಾ ಎಂದರೆ ಭಾಗಗಳು. ಬ್ರಹಕ್ಕೆ ಕೂಡಾ ಶಬ್ದಶಃ ಅರ್ಥದಲ್ಲಿ ವಿಭಾಗಗಳಿಲ್ಲ. ಶ್ರೀ ಕೃಷ್ಣನು ಈ ನಾಮಗಳ ಮೇಲೆ ಹೆಚ್ಚು ಬೆಳಕನ್ನು ಚೆಲ್ಲುತ್ತಾನೆ. ಅವನು ಹೇಳುತ್ತಾನೆ (ಭಗವದ್ಗೀತಾ ೧೦ನೇ ಅಧ್ಯಾಯ), "ಈ ನಿಯಂತ್ರಿತ ಪ್ರಪಂಚದಲ್ಲಿ ಜೀವಿಗಳು ನನ್ನ ಬಾಹ್ಯ ಅವಯವಗಳಾಗಿದ್ದಾರೆ ಮತ್ತು ಅವರು ಮನಸ್ಸನ್ನೊಳಗೊಂಡ ಆರು ಇಂದ್ರಿಯಗಳ ಮೂಲಕ ಯಾತನೆಯನ್ನು ಅನುಭವಿಸುತ್ತಿದ್ದಾರೆ". ಇದನ್ನೇ ವಿಜ್ಞಾನ ಭೈರವದ ೧೪೬ನೇ ಶ್ಲೋಕವು ಇನ್ನಷ್ಟು ಸುಂದರವಾಗಿ ಹೀಗೆಂದು ವಿವರಿಸುತ್ತದೆ, "ವಿಚಲಿತಗೊಳ್ಳದ ಬುದ್ಧಿ (ಸ್ಥಿರವಾದ ಬುದ್ಧಿ) ಯಾವುದೇ ರೀತಿಯ ಛಾಯೆಗಳು (ಚಿತ್ರಗಳು) ಅಥವಾ ಆಧಾರಗಳಿಲ್ಲದಿದ್ದರೆ ಧ್ಯಾನವನ್ನು ಉಂಟುಮಾಡುತ್ತದೆ. ಅವಯವಗಳುಳ್ಳ ದೈವದ ಬಗೆಗಿನ ಕಲ್ಪನೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಧ್ಯಾನವಾಗುವುದಿಲ್ಲ". ಅದು ಕೇವಲ ಜ್ಞಾನದಿಂದ ಮಾತ್ರವೇ ಸಾಧ್ಯವಾಗುತ್ತದೆ.

             ಬ್ರಹ್ಮಸೂತ್ರವೂ (೨.೩.೪೩) ಕೂಡಾ ಹೀಗೆ ಹೇಳುತ್ತದೆ, "ವ್ಯಕ್ತಿಗತ ಆತ್ಮಗಳೂ ಕೂಡಾ ಬ್ರಹ್ಮನ ಭಾಗಗಳಾಗಿವೆ ಏಕೆಂದರೆ ಅವನ್ನು ಬೇರೆಯೆಂದು ಕರೆದಿರುವುದರಿಂದ". ವ್ಯಕ್ತಿಯೊಬ್ಬನು ಕೇವಲ ತೋರಿಕೆಗಷ್ಟೇ ಭಾಗವಾಗಿದ್ದಾನೆ, ಏಕೆಂದರೆ ವಿಭಾಗಗಳಿಲ್ಲದ ಬ್ರಹ್ಮಕ್ಕೆ ಶಬ್ದಶಃ ಅರ್ಥದ ಪ್ರಕಾರ ಯಾವುದೇ ಭಾಗಗಳಿಲ್ಲ. ಆದ್ದರಿಂದ ಇಲ್ಲಿ ಸ್ಪಷ್ಟವಾಗಿ ಹೇಳಿರುವುದೇನೆಂದರೆ ಬ್ರಹ್ಮಕ್ಕೆ ಯಾವುದೇ ವಿಧವಾದ ರೂಪವಿಲ್ಲ ಮತ್ತು ರೂಪವಿರುವುದನ್ನು ಕುರಿತು ಧ್ಯಾನ ಮಾಡಿದರೆ ಅದು ಬ್ರಹ್ಮದ ಕುರಿತಾದ ಧ್ಯಾನವಾಗುವುದಿಲ್ಲ. ಛಾಂದೋಗ್ಯ ಉಪನಿಷತ್ತು (೮.೭.೧) ಬ್ರಹ್ಮದ ಕುರಿತಾದ ವಿವರಣೆಯನ್ನು ಹೀಗೆ ಕೊಡುತ್ತದೆ, "ಪಾಪಗಳಿಂದ, ಮುದಿತನದಿಂದ, ಸಾವಿನಿಂದ, ದುಃಖದಿಂದ, ಹಸಿವೆಯಿಂದ ಮತ್ತು ಬಾಯಾರಿಕೆಯಿಂದ ಮುಕ್ತನಾಗಿರುವುದು. ಅದು ಸತ್ಯವನ್ನು ಹೊಂದಬೇಕೆಂಬ ಆಸೆಗೆ ಕಾರಣವಾದದ್ದು ಮತ್ತು ಸತ್ಯಕ್ಕೆ ಬದ್ಧವಾಗಿರುವುದು. ಆ ಆತ್ಮವನ್ನೇ ಹೊಂದಬೇಕಾಗಿರುವುದು ಮತ್ತು ಕೂಲಂಕುಷವಾಗಿ ಅರಿಯಬೇಕಾಗಿರುವುದು"

Śantā शन्ता (141)

೧೪೧. ಶಾಂತಾ

            ನಕಾರಾತ್ಮಕತೆಯು ಈ ನಾಮದಲ್ಲಿ ಇಲ್ಲದೇ ಇರುವುದನ್ನು ಗಮನಿಸಬೇಕು. ನಿಶ್ ಅಥವ ನಿರ್ ಪೂರ್ವ ಪ್ರತ್ಯಯವು ಗುಣದ ಇಲ್ಲದಿರುವಿಕೆಯನ್ನು ಸೂಚಿಸುತ್ತದೆ. ಉದಾಹರಣೆಗೆ ಕಲಾ ಎಂದರೆ ಭಾಗಗಳು ಮತ್ತು ನಿಷ್ಕಲಾ ಎಂದರೆ ಭಾಗಗಳಿಲ್ಲದೇ ಇರುವುದು. ಈ ನಾಮವು ದೇವಿಯು ನೆಮ್ಮದಿ ಹಾಗೂ ನಿರಾತಂಕಳಾಗಿ ಪ್ರಶಾಂತವಾಗಿದ್ದಾಳೆ ಎಂದು ತಿಳಿಸುತ್ತದೆ.

           ೧೩೩ನೇ ನಾಮದಲ್ಲಿ ಉಲ್ಲೇಖಿಸಿದ ಶ್ವೇತಾಶ್ವತರ ಉಪನಿಷತ್ತಿನ ೬ನೇ ಅಧ್ಯಾಯದ ೧೯ನೇ ಸೂತ್ರವು ಇಲ್ಲಿ ಕೂಡಾ ಅನ್ವಯಿಸುತ್ತದೆ. ಬ್ರಹ್ಮದ ಈ ಎಲ್ಲಾ ಗುಣಗಳನ್ನು ವಾಕ್ ದೇವಿಯರು ಈ ಸಹಸ್ರನಾಮದಲ್ಲಿ ಇಲ್ಲಿ ಉಲ್ಲೇಖಿಸಿದ್ದಾರೆ. ಬ್ರಹ್ಮದ ಮತ್ತೊಂದು ಗುಣವಾದ ಪ್ರಶಾಂತತೆಯನ್ನು ಇಲ್ಲಿ ವಿವರಿಸಲಾಗಿದೆ. ಇಲ್ಲಿ ನಾವು ನಿರ್ಗುಣ ಬ್ರಹ್ಮದ ಲಕ್ಷಣಗಳನ್ನು ಚರ್ಚಿಸುತ್ತಿದ್ದೇವೆ ಎನ್ನುವುದನ್ನು ನೆನಪಿಡಿ. ಉಪನಿಷತ್ತುಗಳಲ್ಲಿ ಹಾಗೂ ಈ ಸಹಸ್ರನಾಮದಲ್ಲಿ ನಿರ್ಗುಣ ಬ್ರಹ್ಮವನ್ನು ತಿಳಿಯಲು ಅನುಕೂಲವಾಗುವಂತೆ ಕೆಲವೊಂದು ಗುಣಗಳನ್ನು ನಕಾರಾತ್ಮಕವಾಗಿ ಹೇಳಿದರೆ ಕೆಲವೊಂದನ್ನು ಸಕಾರಾತ್ಮಕವಾಗಿ ಹೇಳಲಾಗಿದೆ.

           ಯಾವಾಗ ಒಬ್ಬನು ಮೋಹಪಾಶಗಳಿಗೆ ಒಳಗಾಗುತ್ತಾನೆಯೋ ಆಗ ಅವನು ಪ್ರಶಾಂತನಾಗಿರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಶಾಂತಚಿತ್ತರಾಗಿರುವುದು ಆತ್ಮಸಾಕ್ಷಾತ್ಕಾರಕ್ಕೆ ಅತ್ಯವಶ್ಯಕ ಗುಣವೆಂದು ಪರಿಗಣಿಸಲಾಗಿದೆ.

Niṣkāmā निष्कामा (142)

೧೪೨. ನಿಷ್ಕಾಮಾ

           ದೇವಿಗೆ ಯಾವುದೇ ರೀತಿಯ ಆಸೆಗಳಿಲ್ಲ. ಇದು ಹಿಂದಿನ ನಾಮಕ್ಕೆ ಕಾರಣವಾಗಿದೆ. ಯಾವಾಗ ಒಬ್ಬನಿಗೆ ಆಸೆಯು ಇರುತ್ತದೆಯೋ ಆಗ ಅವನಿಗೆ ಪ್ರಶಾಂತವಾದ ಮನಸ್ಸಿರುವುದಿಲ್ಲ. ಪರಿಪೂರ್ಣನಾದ ಬ್ರಹ್ಮಕ್ಕೆ ಯಾವುದೇ ವಿಧವಾದ ಆಸೆಗಳ ಪ್ರಶ್ನೆಯೇ ಉದ್ಭವಿಸದು. ಬ್ರಹ್ಮಕ್ಕೆ ಯಾವುದೇ ವಿಧವಾದ ಆಸೆಗಳಿರಲು ಸಾಧ್ಯವಿಲ್ಲ ಇದನ್ನು ಹಿಂದಿನ ನಾಮಗಳಲ್ಲಿ ದೃಢಪಡಿಸಿಕೊಳ್ಳಲಾಗಿದೆ. ಈ ನಾಮಗಳು ಬೃಹದಾರಣ್ಯಕ ಉಪನಿಷತ್ತಿನೊಂದಿಗೆ (೨.೩.೬) ಏಕೀಭವಿಸುತ್ತವೆ; ಅದು ಏನು ಹೇಳುತ್ತದೆಂದರೆ, "ನೇತಿ ನೇತಿ" ಅಂದರೆ ಇದಲ್ಲ ಇದಲ್ಲ. ಈ ಉಪನಿಷತ್ತು ಗೊತ್ತಿರುವ ಗುಣಗಳನ್ನು ಅಲ್ಲಗಳೆಯುತ್ತಾ ಬ್ರಹ್ಮವನ್ನು ಶೂನ್ಯವಾಗಿಸುತ್ತಾ ಹೋಗುತ್ತದೆ. ಅಂತಿಮವಾಗಿ ಈ ಶ್ಲೋಕವು "ಸತ್ಯಸ್ಯ ಸತ್ಯಮ್" ಅಂದರೆ ’ಸತ್ಯಗಳ ಸತ್ಯನು’ ಎಂದು ಕೊನೆಗೊಳ್ಳುತ್ತದೆ. ಅದು ಸತ್ಯವು ಬ್ರಹ್ಮದ ಲಕ್ಷಣಗಳಲ್ಲಿ ಒಂದು ಎಂದು ಗುರುತಿಸುತ್ತದೆ. ಅದೇ ಉಪನಿಷತ್ತು (೫.೧) ಬ್ರಹ್ಮವನ್ನು ವಿಶದಪಡಿಸುತ್ತದೆ, "ಅದು (ಬ್ರಹ್ಮವು) ಅನಂತವಾದದ್ದು ಮತ್ತು ಇದು (ಪ್ರಪಂಚವು) ಅನಂತವಾದದ್ದು. ಅನಂತವು ಅನಂತದಿಂದಲೇ ಉದ್ಭವವಾಗುತ್ತದೆ. ಆಮೇಲೆ ಅನಂತವಾದ ಬ್ರಹ್ಮಾಂಡದ ಅನಂತತೆಯನ್ನು ಹೊಂದಿ, ಅದು ಅನಂತವಾಗಿಯೇ (ಪರಬ್ರಹ್ಮವಾಗಿಯೇ) ಉಳಿಯುತ್ತದೆ. ಮೂಲ ಶ್ಲೋಕವು ಈ ರೀತಿಯಾಗಿದೆ.

पूर्णमदः पूर्णमिदम् पूर्णात्पूर्णमुदच्यते।

पूर्णस्य पूर्णमादाय पूर्णमेवावशिष्यते॥

ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ಪೂರ್ಣಮುದಚ್ಯತೇ|

ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ||

ಈ ನಾಮವು ದೇವಿಯ ಬ್ರಹ್ಮಸ್ವರೂಪವನ್ನು ಖಚಿತ ಪಡಿಸುತ್ತದೆ. ಈ ಸಹಸ್ರನಾಮದ ಉದ್ದಕ್ಕೂ ಒಬ್ಬರು ಈ ರೀತಿಯ ಹಲವಾರು ದೃಢೀಕರಣಗಳನ್ನು ಕಾಣುತ್ತಾ ಹೋಗಬಹುದು.

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 139-142 http://www.manblunder.com/2009/08/lalaitha-sahasranamam-139-142.html  ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)

Comments

Submitted by nageshamysore Sat, 06/22/2013 - 09:15

ಶ್ರೀಧರರೆ, 139 - 142 ತಮ್ಮ ಅವಗಾಹನೆ ಮತ್ತು ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು

೧೩೯. ನಿರ್ಗುಣಾ 
ಸತ್ವ ರಾಜಸ ತಾಮಸ ತ್ರಿಗುಣ, ದೇಹ ಸ್ಥೂಲಾಕಾರ ಕಾರಣ
ಕಾರಣೀಭೂತ ಮೂಲಪ್ರಕೃತಿ ಮಾಯ, ಅಶರೀರೆ ದೇವಿಗುಣ
ಸ್ವಪ್ರಕಾಶ ಬ್ರಹ್ಮ ಗುಣ-ಶರೀರ ರಹಿತ, ನಿರ್ಗುಣಾ ಶ್ರೀ ಲಲಿತ
ಸ್ವಯಂಸಿದ್ಧ ಬ್ರಹ್ಮಗುಣ ಸಮೃದ್ಧ, ಲಲಿತಾಂಬೇ ಬ್ರಹ್ಮವೆನುತ!

೧೪೦. ನಿಷ್ಕಲಾ
ಸತ್ಯ ಸಾಕ್ಷಾತ್ಕಾರ ಬದ್ದತೆ ಬಯಸೊ ಮುಕ್ತಾತ್ಮನ ವರಿಸೆ
ನಿರಾವಯವ ಧ್ಯಾನವಷ್ಟೆ ಬ್ರಹ್ಮ ಮೂರ್ತರೂಪ ಬರಿ ನಶೆ
ಭಕ್ತ ಮನಸೇಂದ್ರೀಯಾವಯವ ಯಾತನಾನುಭವ ತರಿಸೆ
ನಿರವಯವ ಲಲಿತೆ ಧ್ಯಾನಿಸೆ ನಿಷ್ಕಲಾ ಮನಸಿನಾವರಸೆ!

೧೪೧. ಶಾಂತಾ 
ನಿರ್ಗುಣ ಬ್ರಹ್ಮಕೆಷ್ಟು ಲಕ್ಷಣ ಪ್ರಶಾಂತತೆಗೂ ನಿರ್ಗುಣ
ಶಾಂತಿ ನೆಮ್ಮದಿ ಮನದಾ ವಿಕಾರಗಳ ತೊಳೆವ ಸ್ನಾನ
ನೆಮ್ಮದಿ ನಿರಾತಂಕೆ ಸದಾ ದೇವಿ ಪ್ರಶಾಂತಿನಿ ಅನ್ವರ್ಥ
ಮೋಹಪಾಶಾವರ್ಜಿತ ಆತ್ಮಸಾಕ್ಷಾತ್ಕಾರ ಶಾಂತಚಿತ್ತ!

೧೪೨. ನಿಷ್ಕಾಮಾ 
ಕಾಮನೆ ಮೋಹದೆಡೆಯಲ್ಲಿ ಇರದೆ ಪ್ರಶಾಂತ ಮನ ಬಗಲಲ್ಲಿ
ಪ್ರಶಾಂತಬ್ರಹ್ಮ ಪರಿಪೂರ್ಣ ಗುಣವಲ್ಲದ ನಿರ್ಗುಣ ಶೂನ್ಯದಲಿ
ಸತ್ಯಾತಿಸತ್ಯ ಬ್ರಹ್ಮಲಕ್ಷಣ ಅನಂತವೆ ಇಹಕನಂತವಾಗಿಸುತ
ಅನಂತೆ ಅನಂತೋತ್ಪತ್ತಿ ನಿಷ್ಕಾಮಾನಂತ ಬ್ರಹ್ಮಾಂಡ ಲಲಿತ!

Submitted by makara Sat, 06/22/2013 - 10:09

In reply to by nageshamysore

ಎಂದಿನಂತೆ ಸಾರಗ್ರಹಿತ ಕಾವ್ಯರಚನೆ ಮಾಡಿದ್ದೀರ ನಾಗೇಶರೆ, ಅಭಿನಂದನೆಗಳು ನಿಮಗೆ. ಈ ಎರಡು ಸಣ್ಣ ಕಾಗುಣಿತ ದೋಷಗಳನ್ನು ತಿದ್ದಿದರೆ ಚೆನ್ನಾಗಿರುತ್ತದೆನಿಸುತ್ತದೆ.

೧೩೯. ನಿರ್ಗುಣಾ
ಸತ್ವ ರಾಜಸ ತಾಮಸ ತ್ರಿಗುಣ, ದೇಹ ಸ್ಥೂಲಾಕಾರ ಕಾರಣ
ಕಾರಣೀಭೂತ ಮೂಲಪ್ರಕೃತಿ ಮಾಯ, ಅಶರೀರೆ ದೇವಿಗುಣ

ಇಲ್ಲಿನ ಎರಡನೇ ಸಾಲಿನಲ್ಲಿ ಅಶರೀರೆ ಎನ್ನುವುದು ಅಶರೀರ ಎಂದರೆ ಚೆನ್ನಾಗಿರುತ್ತದೆ; ಏಕೆಂದರೆ ಈ ಶಬ್ದವು ಎಲ್ಲಾ ಲಿಂಗಗಳಿಗೂ ಅನ್ವಯವಾಗುತ್ತದೆ.

೧೪೧. ಶಾಂತಾ
ನಿರ್ಗುಣ ಬ್ರಹ್ಮಕೆಷ್ಟು ಲಕ್ಷಣ ಪ್ರಶಾಂತತೆಗೂ ನಿರ್ಗುಣ
ಶಾಂತಿ ನೆಮ್ಮದಿ ಮನದಾ ವಿಕಾರಗಳ ತೊಳೆವ ಸ್ನಾನ
ಇಲ್ಲಿ ಮನದಾ ಎನ್ನುವ ಬದಲು ಮನದ ಸರಿ ಇಲ್ಲದಿದ್ದರೆ ಮನದಾ ವಿಕಾರ ಹೋಗೆ ಮನದ ಅವಿಕಾರ ಆಗುವ ಸಾಧ್ಯತೆ ಇದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by nageshamysore Sat, 06/22/2013 - 11:05

In reply to by makara

ಶ್ರೀಧರರೆ ಧನ್ಯವಾದ - 141 ರ ಎರಡನೆ ಸಾಲಿನ ತಿದ್ದುಪಡಿಗೆ ಜತೆಯಲ್ಲಿ 'ಸ್ನಾನದ' ಬದಲು' 'ಆಸ್ಥಾನ' ಸೂಕ್ತವೆನಿಸಿತು - ನಿಮಗೆ ಯಾವುದು ಸೂಕ್ತವಾಗಿ ಕಾಣುತ್ತಿದೆ (ಸ್ನಾನ, ಆಸ್ಥಾನದ ನಡುವೆ) - ನಾಗೇಶ ಮೈಸೂರು

೧೩೯. ನಿರ್ಗುಣಾ
ಸತ್ವ ರಾಜಸ ತಾಮಸ ತ್ರಿಗುಣ, ದೇಹ ಸ್ಥೂಲಾಕಾರ ಕಾರಣ
ಕಾರಣೀಭೂತ ಮೂಲಪ್ರಕೃತಿ ಮಾಯ, ಅಶರೀರ ದೇವಿಗುಣ
ಸ್ವಪ್ರಕಾಶ ಬ್ರಹ್ಮ ಗುಣ-ಶರೀರ ರಹಿತ, ನಿರ್ಗುಣಾ ಶ್ರೀ ಲಲಿತ
ಸ್ವಯಂಸಿದ್ಧ ಬ್ರಹ್ಮಗುಣ ಸಮೃದ್ಧ, ಲಲಿತಾಂಬೇ ಬ್ರಹ್ಮವೆನುತ!

೧೪೧. ಶಾಂತಾ
ನಿರ್ಗುಣ ಬ್ರಹ್ಮಕೆಷ್ಟು ಲಕ್ಷಣ, ಪ್ರಶಾಂತತೆಗೂ ನಿರ್ಗುಣ
ಶಾಂತಿ ನೆಮ್ಮದಿ ಮನದ ವಿಕಾರಗಳ ತೊಳೆವ ಆಸ್ಥಾನ 
ನೆಮ್ಮದಿ ನಿರಾತಂಕೆ ಸದಾ ದೇವಿ ಪ್ರಶಾಂತಿನಿ ಅನ್ವರ್ಥ
ಮೋಹಪಾಶಾವರ್ಜಿತ ಆತ್ಮಸಾಕ್ಷಾತ್ಕಾರ ಶಾಂತಚಿತ್ತ!

Submitted by makara Sat, 06/22/2013 - 14:29

In reply to by nageshamysore

೧೪೧ರ ಬದಲಾವಣೆ,
ನಾಗೇಶರೆ, ಹೀಗೆ ಮಾಡಿದರೆ ಹೆಚ್ಚು ಸೂಕ್ತವೆನಿಸಬಹುದೇನೋ ನೋಡಿ. ’ಆಸ್ಥಾನ’ದ ಬದಲಿಗೆ ’ಸ್ಥಾನ’; ನಿರಾತಂಕೆ - ನಿರಾತಂಕ; ಮೋಹಪಾಶಾವರ್ಜಿತ - ಮೋಹಪಾಶವಿವರ್ಜಿತ. ಅದನ್ನು ಬದಲಿಸಿದ ಮೇಲೆ ಹೀಗೆ ಕಾಣುತ್ತದೆ.

ನಿರ್ಗುಣ ಬ್ರಹ್ಮಕೆಷ್ಟು ಲಕ್ಷಣ, ಪ್ರಶಾಂತತೆಗೂ ನಿರ್ಗುಣ
ಶಾಂತಿ ನೆಮ್ಮದಿ ಮನದ ವಿಕಾರಗಳ ತೊಳೆವ ಸ್ಥಾನ
ನೆಮ್ಮದಿ ನಿರಾತಂಕ ಸದಾ ದೇವಿ ಪ್ರಶಾಂತಿನಿ ಅನ್ವರ್ಥ
ಮೋಹಪಾಶವಿವರ್ಜಿತ ಆತ್ಮಸಾಕ್ಷಾತ್ಕಾರ ಶಾಂತಚಿತ್ತ!
(ಆಸ್ಥಾನವನ್ನು ಏನಾದರೂ ವಿಶೇಷ ಅರ್ಥದಲ್ಲಿ ಉಪಯೋಗಿಸಿದ್ದರೆ ತಿಳಿಸಿ; ಆಗ ಸೂಕ್ತ ಬದಲಾವಣೆಯ ಬಗ್ಗೆ ಆಲೋಚಿಸಬಹುದು.)

Submitted by nageshamysore Sat, 06/22/2013 - 23:01

In reply to by makara

ಶ್ರೀಧರರೆ,  'ಶಾಂತಿ ನೆಮ್ಮದಿ ತುಂಬಿರುವ ದೇವಿಯ ಸನ್ನಿಧಿಯೆ ಮನ ವಿಕಾರಗಳನ್ನು ತೊಳೆವ ಆಸ್ಥಾನ ' ಎಂಬ ಭಾವಾರ್ಥದಲ್ಲಿ ಆ ಪದ ಬಳಸಿದ್ದೆ. 'ಸ್ಥಾನ' ಕೂಡ ಅಷ್ಟೆ ಚೆನ್ನಾಗಿ ಹೊಂದುತ್ತದೆ ('ಸ್ಥಾನ'ವೆಂದರೆ ಎಲ್ಲಾದರೂ ಆಗಬಹುದು, 'ಆಸ್ಥಾನ'ವೆಂದರೆ ಅರಮನೆ, ಅಂತಃಪುರದಂತಹ ಸೀಮಿತ ಸ್ಥಳಗಳನ್ನು  ಮಾತ್ರ ಸಂಕೇತಿಸುತ್ತದೆ. ನೀವು ಮಾಡಿರುವ ಉಳಿದ ಪರಿಷ್ಕರಣೆಯೂ ಅಮೋಘವಾಗಿದೆ. ಅದನ್ನು ಹೀಗೆ ಉಳಿಸಿಕೊಳ್ಳೋಣ :-) - ನಾಗೇಶ ಮೈಸೂರು