೫೧. ಶ್ರೀ ಲಲಿತಾ ಸಹಸ್ರನಾಮ ೧೪೩ರಿಂದ ೧೪೬ನೇ ನಾಮಗಳ ವಿವರಣೆ

೫೧. ಶ್ರೀ ಲಲಿತಾ ಸಹಸ್ರನಾಮ ೧೪೩ರಿಂದ ೧೪೬ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೪೩ - ೧೪೬

Nirupaplavā निरुपप्लवा (143)

೧೪೩. ನಿರುಪಪ್ಲವಾ

          ದೇವಿಯು ನಿತ್ಯ ನಿರಂತರವಾಗಿರುವವಳು; ಇದು ಬ್ರಹ್ಮದ ಇನ್ನೊಂದು ಗುಣವಾಗಿದೆ. ಇದೇ ಅರ್ಥವನ್ನು ೧೮೦ನೇ ನಾಮವು ಕೊಡುತ್ತದೆ.

          ಇನ್ನೊಂದು ರೀತಿಯ ವಿಶ್ಲೇಷಣೆಯೂ ಇದೆ, ಅದು ಏನು ಹೇಳುತ್ತದೆಂದರೆ ದೇವಿಯು ಮನುಷ್ಯ ದೇಹದ ೭೨,೦೦ ನಾಡಿಗಳಲ್ಲಿ ಪಸರಿಸುವ ಅಮೃತವನ್ನು ಉತ್ಪತ್ತಿಸುತ್ತಾಳೆ. ಇದು ದೇವಿಯ ಸೂಕ್ಷ್ಮಾತಿಸೂಕ್ಷ್ಮ ರೂಪವಾದ ಕುಂಡಲಿನೀ ರೂಪದ ಬಗ್ಗೆ ಹೇಳುತ್ತದೆ. ಯಾವಾಗ ಕುಂಡಲಿನಿಯು ಸಹಸ್ರಾರವನ್ನು ಸೇರುತ್ತದೆಯೋ, ಅದು ಅಮೃತವನ್ನು ಉತ್ಪಾದಿಸುತ್ತದೆ ಮತ್ತು ಅದು ಗಂಟಲಿನ ಮೂಲಕ ತೊಟ್ಟಿಕ್ಕುತ್ತಾ ಸಂಪೂರ್ಣ ನರಮಂಡಲವನ್ನು ವ್ಯಾಪಿಸುತ್ತದೆ. ಈ ನಾಮಾವಳಿಯನ್ನು ನಿರ್(ನಿರ್ ಪ್ರತ್ಯಯಕ್ಕೆ ಹಲವಾರು ಅರ್ಥಗಳಿದ್ದು ಈ ಸಂದರ್ಭದಲ್ಲಿ ಅದು ದೇಹವನ್ನು ಸೂಚಿಸುತ್ತದೆ)+ಉಪ(ಉಪಕ್ರಮಿಸು)+ಪ್ಲವ(ತೊಟ್ಟಿಕ್ಕು). ಇದರ ಅರ್ಥವೇನೆಂದರೆ ಕುಂಡಲಿನಿಯು ಸಹಸ್ರಾರದೆಡೆಗೆ ಉಪಕ್ರಮಿಸಿದಾಗ ದೇಹ ವ್ಯವಸ್ಥೆಯೊಳಗೆ ಅಮೃತವು ತೊಟ್ಟಿಕ್ಕಲು ಪ್ರಾರಂಭಿಸುತ್ತದೆ.

Nitya-muktā नित्य-मुक्ता (144)

೧೪೪. ನಿತ್ಯ-ಮುಕ್ತಾ

           ಆಕೆಯು ನಿರಂತರ ಮುಕ್ತಳಾಗಿರುವವಳು; ಇದು ಬ್ರಹ್ಮದ ಇನ್ನೊಂದು ಲಕ್ಷಣವಾಗಿದೆ. ಬ್ರಹ್ಮವನ್ನು ಅರಿಯಬೇಕಾದರೆ ಒಬ್ಬನು ಎಲ್ಲಾ ವಿಧವಾದ ಬಂಧನಗಳಿಂದ ಮುಕ್ತನಾಗಿರಬೇಕು.

Nirvikārā निर्विकारा (145)

೧೪೫. ನಿರ್ವಿಕಾರಾ

           ದೇವಿಯು ಎಲ್ಲಾ ವಿಧವಾದ ವಿಕಾರಗಳಿಗೆ ಹೊರತಾಗಿದ್ದಾಳೆ (ವಿಕಾರವೆಂದರೆ ರೂಪಾಂತರ). ಬ್ರಹ್ಮವು ಬದಲಾವಣೆಗೆ ಒಳಪಡುವುದಿಲ್ಲ. ಸೃಷ್ಟಿ ಕಾರ್ಯದಲ್ಲಿ ಎರಡು ಅಂಶಗಳಿವೆ; ಅವು ಪುರುಷ ಮತ್ತು ಪ್ರಕೃತಿ. ಪುರುಷವು ಪರಮ ಚೈತನ್ಯವಾಗಿದ್ದು ಅದು ಬಂಧನಗಳಿಂದ ಮುಕ್ತವಾಗಿದೆ, ಜ್ಞಾನ ಮತ್ತು ಸೃಷ್ಟಿಸುವ ಚೈತನ್ಯದಿಂದ ತುಂಬಿದೆ. ಈ ವಿಶ್ವವನ್ನು ಸೃಷ್ಟಿಸಿದ ಕ್ರಿಯಾಶೀಲ ಅಥವಾ ದೈವೀ ಅಂಶಗಳುಳ್ಳ ಚಿಕ್ಕದಾದ ವಸ್ತುವೆಂದು ಇನ್ನೊಂದು ರೀತಿಯಾಗಿ ಇದನ್ನು ವಿಶ್ಲೇಷಿಸಬಹುದು. ಒಬ್ಬನಿಗೆ ಸೃಷ್ಟಿ ಮಾಡುವ ಶಕ್ತಿಯಿದ್ದರೆ ಅವನಿಗೆ ಸೃಷ್ಟಿ ಕಾರ್ಯವನ್ನು ಕೈಗೊಳ್ಳಬಲ್ಲ ಪೂರ್ವಭಾವಿ ಜ್ಞಾನವು ಇರಬೇಕು. ಸೃಷ್ಟಿ ಕಾರ್ಯವನ್ನು ಕೈಗೊಳ್ಳುವವನಿಗೆ ಸೂಕ್ತವಾದ ಜ್ಞಾನವಿಲ್ಲದಿದ್ದರೆ ಅವನ ಸೃಷ್ಟಿಯು ವ್ಯರ್ಥವಾಗುತ್ತದೆ (Hay Wire). ಪುರುಷನು ತನ್ನ ದೇಹ, ಮನಸ್ಸು ಮತ್ತು ಇಂದ್ರಿಯಗಳೊಂದಿಗೆ ಸಂಭಂದವನ್ನು ಹೊಂದಿಲ್ಲ. ಅದು ರೂಪಾಂತರವನ್ನು ಹೊಂದುವುದಿಲ್ಲ ಆದರೆ ಎಣೆಯಿಲ್ಲದಷ್ಟು ಉಂಟಾಗುತ್ತಿರುವ ರೂಪಾಂತರಗಳನ್ನು ಅದು ನಿರಂತರವಾಗಿ ಸಾಕ್ಷೀಭೂತವಾಗಿ ನೋಡುತ್ತಿರುತ್ತದೆ. ಪ್ರಕೃತಿಯು ಪುರುಷನಿಗೆ ವಿರುದ್ಧವಾದದ್ದಾಗಿದೆ. ಅದು ಸೃಷ್ಟಿಗೆ ಮೂಲ ಕಾರಣವಾಗಿದ್ದು ಅದು ನಿರಂತರ ಬದಲಾವಣೆಯನ್ನು ಹೊಂದುತ್ತಿರುತ್ತದೆ. ಅದು ಮೂರು ಗುಣಗಳಿಂದ ಕೂಡಿರುತ್ತದೆ. ಯಾವಾಗ ಪುರುಷ ಮತ್ತು ಪ್ರಕೃತಿಯರ ಸಂಯೋಗವುಂಟಾಗುತ್ತದೆಯೋ ಆಗ ವಿಶ್ವದ ಸೃಷ್ಟಿಯಾಗುತ್ತದೆ.

          ಇಲ್ಲಿ ಬದಲಾವಣೆಗೆ ಹೊರತಾಗಿದೆ ಎಂದರೆ ಅದು ಇಪ್ಪತ್ಮೂರು ತತ್ವಗಳಿಗೆ ಮಾತ್ರ ಅನ್ವಯಿಸುತ್ತದೆ. ಮಹತ್ ಎನ್ನುವುದು ಪ್ರಕೃತಿಯ ಉತ್ಪನ್ನವಾಗಿದೆ. ಅದು ಬುದ್ಧಿ ಅಥವಾ ಮೇಧಾವಿತನದ ಮಹಾನ್ ತತ್ವವಾಗಿದೆ. ಸಾಂಖ್ಯ ಪದ್ಧತಿಯ ಅನ್ವಯ ಇಪ್ಪತ್ಮೂರು ತತ್ವಗಳಲ್ಲಿ ಮಹತ್ ಎರಡನೆಯದಾಗಿದ್ದು ಅದು ಅಹಂಕಾರ (ನಾನು ಎನ್ನುವ ಪ್ರಜ್ಞೆ) ಮತ್ತು ಮನಸ್ಸು ಇವುಗಳ ಪ್ರಮುಖ ಮೂಲವಾಗಿದೆ. ಮಹತ್, ಅಹಂಕಾರ ಮತ್ತು ಐದು ತನ್ಮಾತ್ರೆಗಳು (ಶಬ್ದ, ರಸ, ಗಂಧ, ರೂಪ ಮತ್ತು ಸ್ಪರ್ಷ). ಈ ಏಳು ವಸ್ತುಗಳು ಕಾರಣಗಳೆಂದು ಕರೆಯಲ್ಪಟ್ಟಿವೆ. ಐದು ಜ್ಞಾನೇಂದ್ರಿಗಳು (ಕಣ್ಣು, ಕಿವಿ, ನಾಲಿಗೆ, ಮೂಗು ಮತ್ತು ಚರ್ಮ), ಐದು ಕರ್ಮೇಂದ್ರಿಯಗಳು (ಕೈ, ಕಾಲು, ಬಾಯಿ, ಜನನಾಂಗ ಮತ್ತು ವಿಸರ್ಜನಾಂಗ), ಐದು ಮೂಲ ಧಾತುಗಳು (ಪಂಚ ಮಹಾಭೂತಗಳಾದ ಪೃಥ್ವಿ, ಅಪ್, ತೇಜ, ವಾಯು ಮತ್ತು ಆಕಾಶ) ಮತ್ತು ಮನಸ್ಸು ಉಳಿದ ಹದಿನಾರು ತತ್ವಗಳಾಗಿವೆ. ಈ ಹದಿನಾರು ತತ್ವಗಳು ಕಾರ್ಯಗಳಾಗಿವೆ. ಆದ್ದರಿಂದ ಪ್ರಕೃತಿಯು ಕಾರಣ ಮತ್ತು ಕಾರ್ಯಗಳಿಂದ ಕೂಡಿದ ಇಪ್ಪತ್ಮೂರು ವಸ್ತುಗಳಿಂದ ರಚಿತವಾಗಿದೆ ಮತ್ತು ಪುರುಷವು ಇದಕ್ಕೆ ಹೊರತಾಗಿದೆ. ಆದರೆ ಸೃಷ್ಟಿ ಕಾರ್ಯವನ್ನು ಕೈಗೊಳ್ಳಲು ಪುರುಷ ಮತ್ತು ಪ್ರಕೃತಿ ಎರಡರ ಅವಶ್ಯಕತೆಯೂ ಇದೆ. ಇದು ಶಿವ-ಶಕ್ತಿಯರ ಐಕ್ಯತೆಯನ್ನು ಸೂಚಿಸುತ್ತದೆ. (ಸಾಂಖ್ಯ ದರ್ಶನದ ಕುರಿತಾದ ಹೆಚ್ಚಿನ ಮಾಹಿತಿಗೆ ಈ ಬರಹವನ್ನು ನೋಡಿ http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6%E0%B2%B0%E0%B3%8D%E0%B2%B6%E0%B2%A8%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AB-%E0%B3%A7/11/04/2012/36328 )

          ಆದರೆ ಈ ನಾಮದಲ್ಲಿ ದೇವಿಯನ್ನು ಪುರುಷ ಅಂದರೆ ಬ್ರಹ್ಮವೆಂದು ಸಂಭೋದಿಸಲಾಗಿದೆ. ಪುರುಷ ಮತ್ತು ಪ್ರಕೃತಿಯರ ಕುರಿತಾಗಿ ಮುಂದಿನ ನಾಮಗಳಲ್ಲಿ ವಿವರವಾಗಿ ಚರ್ಚಿಸಲಾಗಿದೆ.

Niṣprapañcā निष्प्रपञ्चा (146)

೧೪೬. ನಿಷ್ಪ್ರಪಂಚಾ

           ಪ್ರಪಂಚವೆಂದರೆ ಆಕುಚನಗೊಳ್ಳುವುದು (ವಿಕಾಸವಾಗುವುದು), ಅಭಿವೃದ್ಧಿ ಹೊಂದುವುದು ಅಥವಾ ರೂಪಾಂತರ ಹೊಂದುವುದು. ದೇವಿಯು ಈ ರೀತಿಯಾದ ಗುಣಗಳಿಗೆ ಹೊರತಾಗಿದ್ದಾಳೆ. ಬ್ರಹ್ಮವು ಆದಿ (ಮೊದಲನೆಯದು) ಮತ್ತು ಅನಾದಿಯಾಗಿರುವುದರಿಂದ (ತಂದೆ-ತಾಯಿಗಳಿಲ್ಲದೆ ಇರುವುದು ಅಥವಾ ಇದರ ಪೂರ್ವದಲ್ಲಿ ಏನೂ ಇಲ್ಲದೇ ಇರುವುದು) ಅದಕ್ಕೆ ಯಾವುದೇ ರೀತಿಯ ನಿಯಂತ್ರಣವಿರುವುದಿಲ್ಲ ಮತ್ತು ಅದಕ್ಕೆ ಯಾವುದೇ ರೀತಿಯ ಬದಲಾವಣೆ ಅಥವಾ ರೂಪಾಂತರದ ಅವಶ್ಯಕತೆಯಿಲ್ಲ. ಇದು ಏಕೆಂದರೆ ಬ್ರಹ್ಮವು ತುಂಬಿದೆ ಅಥವಾ ಪೂರ್ಣತೆಯಿಂದ ಕೂಡಿದೆ ಅಂದರೆ ಪರಿಪೂರ್ಣವಾದದ್ದು. ಮಾಂಡೂಕ್ಯ ಉಪನಿಷತ್ತು (ಶ್ಲೋಕ ೭) ಹೀಗೆ ಹೇಳುತ್ತದೆ, "ಪ್ರಾಪಂಚಿಕತೆಯಿಂದ ವಿಮುಕ್ತವಾಗಿರುವುದು, ಶಾಂತಮೂರ್ತಿ (ಶಾಂತಿಯ ಬಗ್ಗೆ ವಿವರಗಳಿಗೆ ೧೪೧ನೇ ನಾಮವನ್ನು ಕೂಡಾ ನೋಡಿ), ಒಳ್ಳೆಯದರ ಸಂಪೂರ್ಣತೆ (ಮೂಲ ಶ್ಲೋಕದಲ್ಲಿ ಒಳ್ಳೆಯದು ಅಥವಾ ಶುಭಕರವಾದದ್ದನ್ನು ಸೂಚಿಸಲು ಶಿವ ಎನ್ನುವ ಶಬ್ದವನ್ನು ಬಳಸಲಾಗಿದೆ), ಅದ್ವಿತೀಯವಾದದ್ದು (ಏಕೆಂದರೆ ಇದು ಆದಿ ಮತ್ತು ಅಂತ್ಯವಿಲ್ಲದ್ದು), ನಾಲ್ಕನೆಯ ಆಯಾಮವಾದ ತುರಿಯಾವಸ್ಥೆಯುಳ್ಳದ್ದು (ತುರಿಯಾವಸ್ಥೆಯು ನಾಲ್ಕನೆಯದಾಗಿದ್ದು, ಮೊದಲ ಮೂರು ಅವಸ್ಥೆಗಳು ಎಚ್ಚರ/ನಿದ್ರೆ, ಕನಸಿನ ಸ್ಥಿತಿ ಮತ್ತು ದೀರ್ಘನಿದ್ರಾವಸ್ಥೆ ಅಥವಾ ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿಗಳಾಗಿವೆ); ಇದನ್ನೇ ಆತ್ಮವೆಂದು ಆಲೋಚಿಸಿ ಅದನ್ನು ಅರಿಯಬೇಕು". ಬ್ರಹ್ಮವು ಮೂರು ಅವಸ್ಥೆಗಳಿಗೆ ನಿಲಕದ್ದಾಗಿದ್ದು ಅದನ್ನು ನಾಲ್ಕನೆಯ ಹಂತವಾದ ತುರೀಯಾದಲ್ಲಿ ಮಾತ್ರ ಅರಿಯಬಹುದಾಗಿದೆ. ಈ ಅವಸ್ಥೆಯು ಶಾಂತತೆ ಮತ್ತು ಎಲ್ಲಾ ರೀತಿಯ ಮಂಗಳಕರ ವಸ್ತುಗಳ ಮೂರ್ತರೂಪವಾಗಿದೆ. ಈ ಹಂತಗಳನ್ನು ೨೫೭ನೇ ನಾಮದಿಂದ  ವಿವರವಾಗಿ ಚರ್ಚಿಸಲಾಗಿದೆ.

           ಈ ಎಲ್ಲಾ ವಿವರಣೆಗಳು ನಿರ್ಗುಣ ಬ್ರಹ್ಮವನ್ನು ಸೂಚಿಸುತ್ತವೆ. ಈ ನಾಮವು ದೇವಿಯು ಯಾವುದೇ ವಿಧವಾದ ಆಕುಚನಕ್ಕೆ ಒಳಗಾಗುವುದಿಲ್ಲ ಎಂದರೆ ಆಕೆಯು ಯಾವುದೇ ವಿಧವಾದ ಬದಲಾವಣೆ ಅಥವಾ ರೂಪಾಂತರಗಳನ್ನು ಹೊಂದುವುದಿಲ್ಲ ಎಂದು ತಿಳಿಸುತ್ತದೆ.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 143-146 http://www.manblunder.com/2009/08/lalitha-sahasranamam-143-146.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by nageshamysore Sat, 06/22/2013 - 22:52

ಶ್ರೀಧರರೆ, 143-146 ನಾಮಾವಳಿ ಸಾರ ಅವಗಾಹನೆ, ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು

೧೪೩. ನಿರುಪಪ್ಲವಾ 
ಕುಂಡಲಿನಿ ಸೇರಿದಾಗ ಸಹಸ್ರಾರ ಗಮ್ಯ
ಅಮೃತೋತ್ಪತ್ತಿಸೆ ನಿತ್ಯ ನಿರಂತರ ರಮ್ಯ
ತೊಟ್ಟುತೊಟ್ಟಾಗಿ ಗಂಟಲಿಂದ ನರನಾಡಿ
ಆಕ್ರಮಿಸೆಲ್ಲಾ ಪರಿಶುದ್ಧವಾಗೆ ದೇಹವಿಡಿ!

೧೪೪. ನಿತ್ಯ-ಮುಕ್ತಾ 
ನಿತ್ಯ ನಿರಂತರದಂತೆ ನಿತ್ಯ ಮುಕ್ತಾ ಲಲಿತೆ
ಬ್ರಹ್ಮಲಕ್ಷಣ ಸಾರಿ ಮುಕ್ತಿ ಮಾರ್ಗ ಸಂಹಿತೆ
ಅರಿಯಲ್ಹೇಗೆ ಬ್ರಹ್ಮ ಅರಿಯದೆ ದೇವಿ ಮನ
ಮುಕ್ತನಾಗದೆ ಇಹಬಂಧನ ಸಿಗಲೆಲ್ಲಿ ಜ್ಞಾನ!

೧೪೫. ನಿರ್ವಿಕಾರ 
ಬ್ರಹ್ಮಕೆಲ್ಲಿ ರೂಪಾಂತರ ರೂಪ ರಹಿತ ಶೂನ್ಯ ಸರೋವರ
ಪುರುಷ ಪ್ರಕೃತಿ ಸಂಯೋಗ ವಿಶ್ವಸೃಷ್ಟಿಗೆ ಮುನ್ನುಡಿ ಸರ
ಬಂಧಮುಕ್ತ ಪರಮಚೈತನ್ಯ ಸೃಷ್ಟಿ ಜ್ಞಾನ ಪುರುಷ ಸ್ಥಿರತೆ
ಸಾಕ್ಷಿಭೂತಜತೆ ತ್ರಿಗುಣಪ್ರಕೃತಿ ಸೃಷ್ಟಿಕಾರಣ ಚಂಚಲತೆ!

ಅಹಂಕಾರ ಮಹತ್ ತನ್ಮಾತ್ರೆಯೈದೂ ಕಾರಣ ವಸ್ತು 
ಪಂಚೇಂದ್ರ ಕರ್ಮೇಂದ್ರ ಮೂಲಧಾತು ಮನಸೆ ಕಲೆತು
ಇಪ್ಪತ್ಮೂರು ಕಾರಣ ಕಾರ್ಯವಸ್ತು ಪ್ರಕೃತಿಯ ರಚಿಸೆ
ರೂಪರಹಿತ ಸ್ಥಿರ ಪುರುಷ ಸೃಷ್ಟಿಸೆ ಪ್ರಕೃತಿ ಜತೆ ಬೆಸೆ!

೧೪೬. ನಿಷ್ಪ್ರಪಂಚಾ 
ಅಭಿವೃದ್ಧಿ ವಿಕಸನ ರೂಪಾಂತರ ಪ್ರಪಂಚ ಕರಣ
ಆದಿ-ಅನಾದಿ ಬ್ರಹ್ಮ ಅನಿಯಂತ್ರಣಾ ಪರಿಪೂರ್ಣ
ಇಹವಿಮುಕ್ತಿ ಶಾಂತಮೂರ್ತಿ ಶುಭಕೆಸಂಪೂರ್ಣತೆ
ಅದ್ವಿತೀಯತೆ ತುರಿಯಾವಸ್ಥೆ ನಿರ್ಗುಣಬ್ರಹ್ಮವಂತೆ!

Submitted by makara Sun, 06/23/2013 - 06:02

In reply to by nageshamysore

ಈ ಕಂತನ್ನು ಬರೆಯುವಾಗ ನನಗೆ ವಿಷಯದ ಪೂರ್ಣ ಸ್ಪಷ್ಟತೆಯುಂಟಾಗಲಿಲ್ಲ. ಹಾಗಾಗಿ ಈ ಕಂತು ಸ್ವಲ್ಪ ಗೋಜಲು ಗೋಜಲಾಗಿದೆ ಎಂದುಕೊಳ್ಳುತ್ತೇನೆ. ಅದೇ ಗೋಜಲು ಸ್ವಲ್ಪ ನಿಮ್ಮ ಕಾವ್ಯದ ಮೇಲೂ ಪ್ರಭಾವ ಬೀರಿದಂತೆ ಕಾಣುತ್ತದೆ ನಾಗೇಶರೆ. ಹಾಗಾಗಿ ಈ ಕಂತಿನ ಕವನಗಳಲ್ಲಿ ಸ್ವಲ್ಪ ಹೆಚ್ಚು ಮಾರ್ಪಾಡುಗಳ ಅವಶ್ಯಕತೆಯಿದೆ ಎನಿಸುತ್ತಿದೆ. ಇರಲಿ, ನನಗೆ ತೋಚಿದ ಕೆಲವೊಂದು ಅನುಮಾನಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

೧೪೪. ನಿತ್ಯ-ಮುಕ್ತಾ
ನಿತ್ಯ ನಿರಂತರದಂತೆ ನಿತ್ಯ ಮುಕ್ತಾ ಲಲಿತೆ
ಇಲ್ಲಿ ನಿತ್ಯ ನಿರಂತರದಂತೆ ನಿತ್ಯ ಮುಕ್ತಾ ಲಲಿತೆ ಎನ್ನುವಲ್ಲಿ ನಿತ್ಯಕ್ಕೆ ನಿತ್ಯವನ್ನೇ ಹೋಲಿಕೆ ಮಾಡುತ್ತಿರುವುದರಿಂದ ಈ ಸಾಲು ಪ್ರಾಸಬದ್ಧವಾಗಿದ್ದರೂ ಸಹ ಅದು ಅರ್ಥರಹಿತವೆನಿಸುತ್ತದೆ. ಅದನ್ನು ಬೇರೆ ವಿಧವಾಗಿ ಬರೆಯಬಹುದೇನೋ ಆಲೋಚಿಸಿ.

೧೪೫. ನಿರ್ವಿಕಾರ
ಬ್ರಹ್ಮಕೆಲ್ಲಿ ರೂಪಾಂತರ ರೂಪ ರಹಿತ ಶೂನ್ಯ ಸರೋವರ
ಪುರುಷ ಪ್ರಕೃತಿ ಸಂಯೋಗ ವಿಶ್ವಸೃಷ್ಟಿಗೆ ಮುನ್ನುಡಿ ಸರ
ಬಂಧಮುಕ್ತ ಪರಮಚೈತನ್ಯ ಸೃಷ್ಟಿ ಜ್ಞಾನ ಪುರುಷ ಸ್ಥಿರತೆ
ಸಾಕ್ಷಿಭೂತಜತೆ ತ್ರಿಗುಣಪ್ರಕೃತಿ ಸೃಷ್ಟಿಕಾರಣ ಚಂಚಲತೆ!

ಮೊದಲನೇ ಸಾಲಿನಲ್ಲಿನ ಅಂತ್ಯ ಪ್ರಾಸವಾದ ಸರೋವರವೇನೋ ಸರಿ, ಆದರೆ ಅದಕ್ಕೆ ಪೂರಕವಾಗಿ ಎರಡನೇ ಸಾಲಿನಲ್ಲಿರುವ ’ಮುನ್ನುಡಿ ಸರ’ ಎನ್ನುವುದೇನೋ ಪ್ರಾಸಬದ್ಧವಾಗಿದೆ. ಆದರೆ ಸರ ಎನ್ನುವುದನ್ನು ಹೇಗೆ ಸೂಕ್ತವಾಗುತ್ತದೆಯೋ ಸ್ವಲ್ಪ ವಿವರಿಸಿ. ಅದು ಸೂಕ್ತವೆನಿಸಿದರೆ ಹಾಗೆಯೇ ಉಳಿಸಿಕೊಳ್ಳೋಣ. ಮೂರನೇ ಸಾಲಿನ ಪರಮಚೈತನ್ಯದ ಬದಲಿಗೆ ಚೈತನ್ಯ ಮಾತ್ರ ಉಪಯೋಗಿಸಿ; ಏಕೆಂದರೆ ಪರಮಚೈತನ್ಯವು ಸಾಂಖ್ಯ ದರ್ಶನದ ಪ್ರಕಾರ ಸೃಷ್ಟಿಯಲ್ಲಿ ಪಾಲ್ಗೊಳ್ಳುವುದಿಲ್ಲ; ಕೇವಲ ಚೈತನ್ಯರೂಪಿಯಾದ ಪುರಷನು ಅಂದರೆ ಆತ್ಮಗಳು ಮಾತ್ರವೇ ಅದರಲ್ಲಿ ಭಾಗಿಯಾಗುತ್ತವೆ. ನಾಲ್ಕನೇ ಸಾಲಿನಲ್ಲಿ ಸಾಕ್ಷೀಭೂತ ಎಂದಾಗಬೇಕು.

ಅಹಂಕಾರ ಮಹತ್ ತನ್ಮಾತ್ರೆಯೈದೂ ಕಾರಣ ವಸ್ತು
ಪಂಚೇಂದ್ರ ಕರ್ಮೇಂದ್ರ ಮೂಲಧಾತು ಮನಸೆ ಕಲೆತು
ಇಪ್ಪತ್ಮೂರು ಕಾರಣ ಕಾರ್ಯವಸ್ತು ಪ್ರಕೃತಿಯ ರಚಿಸೆ
ರೂಪರಹಿತ ಸ್ಥಿರ ಪುರುಷ ಸೃಷ್ಟಿಸೆ ಪ್ರಕೃತಿ ಜತೆ ಬೆಸೆ!

ಮೇಲಿನ ಪದ್ಯವು ಎಲ್ಲಾ ವಿಷಯಗಳನ್ನೂ ಒಳಗೊಂಡಿದ್ದರೂ ಸಹ ಸ್ವಲ್ಪ ಗೋಜಲೆನಿಸುತ್ತದೆ. ಏಕೆಂದರೆ ಮೊದಲನೇ ಸಾಲಿನಲ್ಲಿ ಕಾರಣ ವಸ್ತುವನ್ನು ಪ್ರಸ್ತಾವಿಸಿದ ಮೇಲೆ ಅದಕ್ಕೆ ಪೂರಕವಾದ ಕಾರ್ಯವಸ್ತುಗಳ ಬಗೆಗೆ ಹೇಳಿರುವುದೇನೋ ಸರಿ ಆದರೆ ಅವುಗಳ ಪ್ರಸ್ತಾಪ ಬಂದಿಲ್ಲ. ಮತ್ತು ಎರಡನೇ ಸಾಲಿನಲ್ಲಿ ಮೂಲಧಾತು ಎನ್ನುವ ಬದಲು ಪಂಚಭೂತ ಎಂದು ಹೇಳಿದರೆ ಹೆಚ್ಚು ಸ್ಪಷ್ಟತೆ ಬರುತ್ತದೆ ಎಂದುಕೊಳ್ಳುತ್ತೇನೆ.

೧೪೬. ನಿಷ್ಪ್ರಪಂಚಾ
ಅಭಿವೃದ್ಧಿ ವಿಕಸನ ರೂಪಾಂತರ ಪ್ರಪಂಚ ಕರಣ
ಆದಿ-ಅನಾದಿ ಬ್ರಹ್ಮ ಅನಿಯಂತ್ರಣಾ ಪರಿಪೂರ್ಣ
ಇಹವಿಮುಕ್ತಿ ಶಾಂತಮೂರ್ತಿ ಶುಭಕೆಸಂಪೂರ್ಣತೆ
ಅದ್ವಿತೀಯತೆ ತುರಿಯಾವಸ್ಥೆ ನಿರ್ಗುಣಬ್ರಹ್ಮವಂತೆ!

ಮೂರನೇ ಸಾಲಿನ ಶುಭಕೆಸಂಪೂರ್ಣತೆ ಬದಲು ಶುಭ ಸಂಪೂರ್ಣತೆ ಸಾಕೆನಿಸುತ್ತದೆ.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by nageshamysore Sun, 06/23/2013 - 07:36

In reply to by makara

ಶ್ರೀಧರರೆ, ನಿಮ್ಮ ಅಗಾಧ ಸಹನೆಗೆ ಮೊದಲು ನಮಸ್ಕಾರ. ನಿಮ್ಮ ಬರಹದ ಸ್ಪಷ್ಟತೆಗಿಂತ ಹೆಚ್ಚು, ನನ್ನ ಗ್ರಹಿಕೆಯ ದೋಷವೆ ಈ ಅಸ್ಪಷ್ಟತೆಗೆ ಅಥವ ತಪ್ಪು ಗ್ರಹಿಕೆಗೆ ಕಾರಣವಿದ್ದೀತು. ದಯವಿಟ್ಟು ಹೀಗೆ ಸಹನೆಯಿಂದ ತಿದ್ದುವುದನ್ನು ಮುಂದುವರೆಸಿ. ನಾನೂ ಹೆಚ್ಚು ಗಮನವಿಡಲು ಪ್ರಯತ್ನಿಸುತ್ತೇನೆ :-)
----------------------------------------------------------------------------------------------------------------------------
೧೪೪. ನಿತ್ಯ-ಮುಕ್ತಾ 
ನಿರಂತರ ಮುಕ್ತಳಲ್ಲವೆ ಮಾತೆ ಶ್ರೀ ಲಲಿತೆ
ಬ್ರಹ್ಮಲಕ್ಷಣ ಸಾರಿ ಮುಕ್ತಿ ಮಾರ್ಗ ಸಂಹಿತೆ
ಅರಿಯಲ್ಹೇಗೆ ಬ್ರಹ್ಮ ಅರಿಯದೆ ದೇವಿ ಮನ
ಮುಕ್ತನಾಗದೆ ಇಹಬಂಧನ ಸಿಗಲೆಲ್ಲಿ ಜ್ಞಾನ!

(ನನ್ನ ಹಿಂದಿನ ವರ್ಣನೆ 143ರ ವಿವರಣೆಯನ್ನು ಜತೆಗೂಡಿಸಿ ಹೋಲಿಸುವ ರೂಪದಲ್ಲಿತ್ತು - 143 ಹೇಗೆ ಬ್ರಹ್ಮ ಲಕ್ಷಣವೊ, ಇದೂ ಹಾಗೆ ಎನ್ನುವ ಅರ್ಥದಲ್ಲಿ. ಆದರೆ ಬ್ಙ್ರಿ 144ನ್ನು ಮಾತ್ರ ಓದಿದಾಗ ಅದು ಗೊಂದಲಕ್ಕೆಡೆ ಮಾಡುವುದರಿಂದ, ನಿಮ್ಮ ಅನಿಸಿಕೆ ಸರಿ. ಈ ಮಾರ್ಪಡು ಸರಿಯಾದ ವಿವರಣೆಗೆ ಹೊಂದುವುದೊ ನೋಡಿ

----------------------------------------------------------------------------------------------------------------------------

೧೪೫. ನಿರ್ವಿಕಾರ
ಬ್ರಹ್ಮಕೆಲ್ಲಿ ರೂಪಾಂತರ ರೂಪ ರಹಿತ ಶೂನ್ಯ ಸರೋವರ
ಪುರುಷ ಪ್ರಕೃತಿ ಸಂಯೋಗ ವಿಶ್ವಸೃಷ್ಟಿಗೆ ಮುನ್ನುಡಿ ಸ್ವರ  
ಬಂಧ ಮುಕ್ತ ಚೈತನ್ಯ ರೂಪಿ ಸೃಷ್ಟಿ ಜ್ಞಾನ ಪುರುಷ ಸ್ಥಿರತೆ
ಸಾಕ್ಷೀಭೂತ ಜತೆ ತ್ರಿಗುಣಪ್ರಕೃತಿ ಸೃಷ್ಟಿಕಾರಣ ಚಂಚಲತೆ!

ಇಲ್ಲಿ ಎರಡನೆ ಸಾಲಿನಲ್ಲಿ, ಸರವೆನ್ನುವುದನ್ನು 'ಸರಣಿ'ಯ ಅರ್ಥದಲ್ಲಿ (ಚೈನ್ ರಿಯಾಕ್ಷನ್ ರೀತಿ) ಬಳಸಿದ್ದೆ. ನನಗೂ ಬರೆಯುವಾಗ 'ಸರ' ಬಳಸುವುದೊ'ತರ' ಬಳಸುವುದೊ ಗೊಂದಲವಿತ್ತು. ಆದರೆ 'ತರ' ಬಳಸಿದರೆ ಅರ್ಥಪಲ್ಲಟವಾಗುವಂತೆ ಕಂಡಿತು (ಸಂಯೋಗವೆ 'ಮುನ್ನುಡಿ' ಎಂದು ಹೇಳುವ ಬದಲು 'ಮುನ್ನುಡಿಯ ತರ' ಎಂದು ಹೋಲಿಸಿದಂತಾಗುತ್ತದೆ). ಈಗ ಮುನ್ನುಡಿ 'ಸ್ವರ'ವೂ ಸೂಕ್ತವಾದೀತೆಂಬ ಹೊಸ ಅನಿಸಿಕೆ ಬರುತ್ತಿದೆ. ಸದ್ಯಕ್ಕೆ 'ಸ್ವರ' ಬಳಸುತ್ತೇನೆ. ನೀವು ಈ ಮೂರರಲ್ಲಿ ಯಾವುದು ತುಂಬ ಸೂಕ್ತವೊ ನೋಡಿ, ಅದನ್ನೆ ಕೊನೆಯದಾಗಿ ಉಳಿಸಿಕೊಳ್ಳೋಣ.

ಉಳಿದ ಬದಲಾವಣೆ: ಪರಮಚೈತನ್ಯ ಈಗ 'ಚೈತನ್ಯ ರೂಪಿ' ಆಗಿದೆ - ಸೂಕ್ತ ಕಾಣುವುದೆ, ನೋಡಿ. ಸಾಕ್ಷೀಭೂತವನ್ನು ತಿದ್ದಿದ್ದೇನೆ

----------------------------------------------------------------------------------------------------------------------------

ಅಹಂಕಾರ ಮಹತ್ ತನ್ಮಾತ್ರೆಯೈದೂ ಕಾರಣ ವಸ್ತು
ಪಂಚೇಂದ್ರ ಕರ್ಮೇಂದ್ರ ಪಂಚಭೂತ ಮನಸೂ ಕಲೆತು
ಇಪ್ಪತ್ಮೂರು ಕಾರಣ ಕಾರ್ಯವಸ್ತು ಪ್ರಕೃತಿಯ ರಚಿಸೆ
ರೂಪರಹಿತ ಸ್ಥಿರ ಪುರುಷ ಸೃಷ್ಟಿಗೆ ಪ್ರಕೃತಿ ಜತೆ ಬೆಸೆ!

ಮೂಲಧಾತುವಿನ ಬದಲು 'ಪಂಚಭೂತ' ಬಳಸಿದ್ದೇನೆ. ಹಾಗೆಯೆ 'ಮನಸು' ಬದಲೂ 'ಮನಸೂ' ಎಂದಾಗಿಸಿದ್ದೇನೆ (ಸಾಲಿನ ಉಳಿದೆಲ್ಲವು ಐದರ ಗುಂಪು, ಇದೊಂದು ಮಾತ್ರ ಗುಂಪಿನಲ್ಲಿಲ್ಲದ್ದು ಎಂಬುದನ್ನು ಎತ್ತಿ ತೋರಿಸಲು - ಪೂರ್ಣಾರ್ಥಕ್ಕೆ ಸರಿಕಾಣದಿದ್ದರೆ 'ಮನಸು' ಎಂದೆ ಉಳಿಸಿಕೊಳ್ಳಬಹುದು.

ಕೊನೆಯ ಸಾಲಿನಲ್ಲಿದ್ದ 'ಸೃಷ್ಟಿಸೆ' ಬದಲು 'ಸೃಷ್ಟಿಗೆ' ಸೂಕ್ತವೆನಿಸಿತು. ದಯವಿಟ್ಟು ಅದನ್ನೂ ಪರಿಶೀಲಿಸಿ.

ಕಾರಣ ವಸ್ತು ಪ್ರಸ್ತಾಪದ ಕುರಿತು: ಸಾಲಿನ ಸ್ವಯಂ ನಿರ್ಬಂಧದಿಂದಾಗಿ ಎಲ್ಲವನ್ನು ಪ್ರಸ್ತಾಪಿಸುವುದು ಸಾಧ್ಯವಾಗಲಿಲ್ಲ. ಬದಲಿಗೆ ಅದನ್ನೆ ಮತ್ತೆ ನಾಲ್ಕು ಸಾಲಾಗಿಸಲೆತ್ನಿಸಿದ್ದೇನೆ ( ಇಲ್ಲೂ ಸಾಮಾನ್ಯವಾಗಿ ಗೊತ್ತಿರುವ ಇಂದ್ರೀಯಗಳ ಮತ್ತು ಪಂಚ ಭೂತಗಳ ಪ್ರಸ್ತಾಪ ಬಿಟ್ಟು,  ಕಾರಣ ವಸ್ತುಗಳೇಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ - ಉಳಿದದ್ದು ಪ್ರಸ್ತಾಪಿಸಲೆಂದರೆ ಮತ್ತೊಂದು ಕವನವಾಗುತ್ತದೆಂದು ಕಾಣುತ್ತದೆ:-) )

ಸಾಂಖ್ಯ ತತ್ವಗಳಿಪ್ಪತ್ಮೂರದರಲಿ ಕಾರಣ ವಸ್ತುಗಳೇಳು
ಶಬ್ದ ರಸ ಗಂಧ ರೂಪ ಸ್ಪರ್ಷ ತನ್ಮಾತ್ರೆ ಜತೆ ಮಹತ್ ಅಹಂಕಾರಗಳು 
ಮಹಾನ್ ತತ್ವವೀ  ಮಹತ್ ಮೂಲವಾಗಿ ಅಹಂಕಾರ ಮನಸು
ಪಂಚಭೂತ ಪಂಚೇಂದ್ರಿಯ ಕರ್ಮೇಂದ್ರಿಯ ಜತೆಗೂಡಿದ ಸೊಗಸು!
----------------------------------------------------------------------------------------------------------------------------

೧೪೬. ನಿಷ್ಪ್ರಪಂಚಾ
ಅಭಿವೃದ್ಧಿ ವಿಕಸನ ರೂಪಾಂತರ ಪ್ರಪಂಚ ಕರಣ
ಆದಿ-ಅನಾದಿ ಬ್ರಹ್ಮ ಅನಿಯಂತ್ರಣಾ ಪರಿಪೂರ್ಣ
ಇಹವಿಮುಕ್ತಿ ಶಾಂತಮೂರ್ತಿ ಶುಭ ಸಂಪೂರ್ಣತೆ
ಅದ್ವಿತೀಯತೆ ತುರಿಯಾವಸ್ಥೆ ನಿರ್ಗುಣಬ್ರಹ್ಮವಂತೆ!

ಮೂರನೇ ಸಾಲಿನ 'ಶುಭಕೆಸಂಪೂರ್ಣತೆ' ಬದಲು 'ಶುಭ ಸಂಪೂರ್ಣತೆ' ಯಾಗಿ ಬದಲಿಸಿದ್ದೇನೆ.

----------------------------------------------------------------------------------------------------------------------------

ವಂದನೆಗಳೊಂದಿಗೆ,
ನಾಗೇಶ ಮೈಸೂರು

Submitted by nageshamysore Sun, 06/23/2013 - 10:44

In reply to by nageshamysore

ಶ್ರೀಧರರೆ ಮತ್ತೊಂದು ತಾತ್ವಿಕ ಪ್ರಶ್ನೆ: ಪ್ರಕೃತಿಯ ಇಪ್ಪತ್ಮೂರು ತತ್ವಗಳ ಮಾತಿಗೆ ಬಂದಾಗ (ಪುರುಷವು ಸೇರಿ 23+1=24 ಅಂದುಕೊಂಡರೆ) ನಮ್ಮ ಜೀನ್ಸ್ ಗಳಲ್ಲಿರುವ ಡಿ.ಏನ್.ಏ ಯ ವರ್ಣತಂತುಗಳಿಗೂ ಈ ತತ್ವಗಳಿಗೂ ಏನಾದರೂ ಸಂಬಂಧವಿದೆಯೆ? ಏಕೆಂದರೆ ಅಲ್ಲೂ ಸೃಷ್ಟಿಕ್ರಿಯೆ ನಿಯಂತ್ರಣದ ಸೂತ್ರವಾಗಿ ವೀರ್ಯಾಣುವಿನಲ್ಲಿ 23 ಜತೆ ಎಕ್ಸ್-ಎಕ್ಸ್ ಮತ್ತು ಒಂದು ಜತೆ ವೈ-ವೈ ತಂತುವಿದ್ದರೆ, ಅಂಡಾಣುವಿನಲ್ಲಿ ಎಲ್ಲಾ 24 ಜತೆ ಎಕ್ಸ್-ಎಕ್ಸ್ ತಂತುಗಳಿವೆಯಾಗಿ, ಎರಡರಲ್ಲೂ ಇರುವ 23 ಎಕ್ಸ್-ಎಕ್ಸ್ ತಂತುಗಳು ಈ ಇಪ್ಪತ್ಮೂರು ತತ್ವಗಳ ಸಾಂಕೇತಿಕ ಪ್ರತಿರೂಪವೆ - ಎಂದು (ಉಹಾತ್ಮಕ) ಸಂಶಯ - ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Sun, 06/23/2013 - 22:51

In reply to by nageshamysore

ನಾಗೇಶರೆ,
ಮೊದಲು ನಿಮ್ಮ ತಾತ್ವಿಕ ಪ್ರಶ್ನೆಗೆ ಉತ್ತರಿಸುತ್ತೇನೆ. ಆಮೇಲೆ ಪದ್ಯದ ಕಡೆಗೆ ನೋಡೋಣ. ೨೩ ಜೊತೆ ವರ್ಣತಂತುಗಳನ್ನು ೨೩+೧ ತತ್ವಗಳಿಗೆ ಹೋಲಿಸಿರುವ ನಿಮ್ಮ ಊಹೆ ನನ್ನನ್ನು ಈ ವಿಧವಾಗಿ ಆಲೋಚನೆ ಮಾಡುವಂತೆ ಪ್ರೇರೇಪಿಸಿದೆ. ಸಾಂಖ್ಯ ದರ್ಶನ*ದಲ್ಲಿ ಒಟ್ಟು ತತ್ವಗಳು ೨೫. ಅದರಲ್ಲಿ ಪುರುಷ+ಪ್ರಕೃತಿ ಎರಡು ಅವಕ್ಕೆ ಪದ್ಯದಲ್ಲಿ ಪ್ರಸ್ತಾಪಿಸಿರುವ ೨೩ ವಸ್ತುಗಳನ್ನು ಸೇರಿಸಿದರೆ ಒಟ್ಟು ೨೫ ಆಗುತ್ತದೆ. ಈ ೨೩ವಸ್ತುಗಳೂ ಸಹ ಪ್ರಕೃತಿಯ ಉತ್ಪನ್ನಗಳೇ ಏಕೆಂದರೆ ಇವು ಮೂಲಭೂತವಾಗಿ ಪ್ರಕೃತಿಯಲ್ಲಿನ ತ್ರಿಗುಣಗಳ ವಿವಿಧ ಪ್ರಮಾಣದ ಸಂಕರಣಗಳಿಂದ ಉಂಟಾಗಿವೆ. ಹಾಗಾಗಿ ಇಪ್ಪತ್ತ ಮೂರು ವರ್ಣತಂತುಗಳು ಈ ಇಪ್ಪತ್ತಮೂರು ತತ್ವಗಳನ್ನು ಪ್ರತಿನಿಧಿಸುತ್ತವೆ ಎಂದುಕೊಳ್ಳಬಹುದು. ಅಂಡಾಣು ಮತ್ತು ವೀರ್ಯಾಣುಗಳು ಪುರುಷ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುತ್ತವೆಂದುಕೊಳ್ಳಬಹುದು; ಏಕೆಂದರೆ ಇವರೆಡಲ್ಲವೇ ಸೃಷ್ಟಿ ಕ್ರಿಯೆಯಲ್ಲಿ ಒಂದಾಗುವುದು. ವಾಸ್ತವವಾಗಿ ಮನುಷ್ಯನ ಕರ್ಮೇಂದ್ರಿಯ, ಜ್ಞಾನೇಂದ್ರಿಯ, ತನ್ಮಾತ್ರೆಗಳು, ಮನಸ್ಸು ಮತ್ತು ಬುದ್ದಿಗಳ ಬೆಳವಣಿಗೆಗೆ ಕಾರಣವಾಗಿರುವುದು ವರ್ಣತಂತಗಳಲ್ಲಿರುವ ವಂಶವಾಹಕಗಳೇ ಆಗಿರುವುದರಿಂದ ನಿಮ್ಮ ತರ್ಕದಂತೆಯೇ ಊಹೆ ಮಾಡಬಹುದು. ಪ್ರಕೃತಿಯ ಮೊದಲ ಉತ್ಪನ್ನವಾದ ಮಹತ್ತನ್ನು ಬಹುಶಃ ಕ್ಯಾಲಸ್ ಅಥವಾ ಝೈಗೋಟಿಗೆ ಹೋಲಿಸಬಹುದೇನೋ?
ದೇಹದಲ್ಲಿ ಉತ್ಪನ್ನವಾಗುವ ಎಲ್ಲಾ ವಿಧವಾದ ರಸಾಯನಿಕಗಳು ಸಹ ಪಂಚಭೂತಗಳನ್ನೇ ಒಳಗೊಂಡಿರುವುದರಿಂದ ನಿಮ್ಮ ಊಹೆಗೆ ಮತ್ತಷ್ಟು ಪುಷ್ಠಿ ದೊರೆಯುತ್ತದೆ. ಇದು ನಿಜವಿದ್ದರೂ ಇರಬಹುದು ಏಕೆಂದರೆ ಸೂಕ್ಷ್ಮದ ಪ್ರತಿಬಿಂಬವೇ ಸ್ಥೂಲದಲ್ಲಿಯೂ ಕಾಣಿಸಬಹುದು. ಪ್ರಕೃತಿಯ ಮೊದಲ ಉತ್ಪನ್ನವಾದ ಮಹತ್ತನ್ನು ಬಹುಶಃ ಕ್ಯಾಲಸ್ ಅಥವಾ ಝೈಗೋಟಿಗೆ ಹೋಲಿಸಬಹುದೇನೋ?
(*ಸಾಂಖ್ಯ ದರ್ಶನದ ಕುರಿತಾದ ಹೆಚ್ಚಿನ ವಿವರಣೆಗಳಿಗೆ ಈ ಬರಹದಲ್ಲಿ ಕೊಟ್ಟಿರುವ ಲಿಂಕನ್ನು ನೋಡಿ. ಆಗ ಇಲ್ಲಿ ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಹೆಚ್ಚು ಸ್ಪಷ್ಟನೆ ದೊರಕುತ್ತದೆ).
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Sun, 06/23/2013 - 23:18

In reply to by nageshamysore

೧೪೩, ೧೪೪ ಮತ್ತು ೧೪೬ ಕವನಗಳು ಈಗ ಸರಿಯಾಗಿವೆ ನಾಗೇಶರೆ. ೧೪೫ರ ವಿವರಣೆಯಲ್ಲಿ ಎರಡರೊಂದಿಗೆ ಮತ್ತೊಂದು ಪಂಕ್ತಿ ಸೇರಿದರೂ ಪರವಾಗಿಲ್ಲ. ಅದನ್ನು ಮತ್ತೊಮ್ಮೆ ಒಟ್ಟು ಅರ್ಥ ಬರುವಂತೆ ಪರಿಷ್ಕರಿಸುವುದು ಒಳಿತು. ಒಟ್ಟು ಅರ್ಥಕ್ಕೆ ೧೪೫ರ ಮೊದಲನೇ ಪಂಕ್ತಿಯಿಂದಾಗಿ ದೋಷವೇನೂ ಇರದು; ಆದ್ದರಿಂದ ಸರಳವಾಗಿ ಅದರಲ್ಲಿರುವ ಎರಡನೇ ಪಂಕ್ತಿಯನ್ನು ಮತ್ತು ನೀವು ಹೊಸದಾಗಿ ರಚಿಸಿರುವ ಮೂರನೇ ಪಂಕ್ತಿಯನ್ನು ಕೈಬಿಡುವುದು ಒಳಿತು. ನಿಮ್ಮ ಸಹನೆ ಪರೀಕ್ಷಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಶುಭರಾತ್ರಿ, ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by nageshamysore Sun, 06/23/2013 - 23:56

In reply to by makara

ಶ್ರೀಧರರೆ, ಮೊದಲ ಪಂಕ್ತಿಯನ್ನು ಹಾಗೆ ಉಳಿಸಿಕೊಂಡು ಎರಡನೆ ಹಾಗೂ ಮೂರನೆ ಪಂಕ್ತಿಗಳನ್ನು ಕೈ ಬಿಟ್ಟರೂ ಒಟ್ಟರ್ಥಕ್ಕೆ ಧಕ್ಕೆಯಾಗದೂ ಎಂದಲ್ಲವೆ ನಿಮ್ಮ ಮಾತಿನ ಸಾರ (ಅಥವಾ ಹಾಗೆ ಉಳಿಸಿಕೊಂಡ ಮೊದಲ ಪಂಕ್ತಿಗೆ ಇನ್ನು ಪರಿಷ್ಕರಣೆಯ ಅಗತ್ಯವಿದೆಯೆ)? ವ್ಯಾಮೋಹ ತ್ಯಜಿಸಿ ನಿರ್ಮೋಹಿಯಾಗಬೇಕೆಂದಲ್ಲವೆ ನಿಮ್ಮ ಪಾಠದ ಸಾರ ಸಹ?  ಅದೆ ಸರಳ ದಾರಿ ಕೂಡ ಆಗಿರುವುದರಿಂದ - ಇಗೊ ಬಿಟ್ಟೆ :-) ಹೀಗಾಗಿ ಕೊನೆಯದಾಗಿ 145 ರಲ್ಲಿ ಉಳಿಯುವ ಮೊದಲ ಪಂಕ್ತಿ (ಮತ್ತೇನು ಪರಿಷ್ಕರಣೆ ಬೇಕಿರದಿದ್ದಲ್ಲಿ):
೧೪೫. ನಿರ್ವಿಕಾರ
ಬ್ರಹ್ಮಕೆಲ್ಲಿ ರೂಪಾಂತರ ರೂಪ ರಹಿತ ಶೂನ್ಯ ಸರೋವರ
ಪುರುಷ ಪ್ರಕೃತಿ ಸಂಯೋಗ ವಿಶ್ವಸೃಷ್ಟಿಗೆ ಮುನ್ನುಡಿ ಸ್ವರ 
ಬಂಧ ಮುಕ್ತ ಚೈತನ್ಯ ರೂಪಿ ಸೃಷ್ಟಿ ಜ್ಞಾನ ಪುರುಷ ಸ್ಥಿರತೆ
ಸಾಕ್ಷೀಭೂತ ಜತೆ ತ್ರಿಗುಣಪ್ರಕೃತಿ ಸೃಷ್ಟಿಕಾರಣ ಚಂಚಲತೆ!

ಅಂದ ಹಾಗೆ ಈ ವಿಷಯದಲ್ಲಿ ಬರೆಯುವುದು ಕವಿಯ ಸ್ವತಂತ್ರ ಆಲೋಚನೆಗಿಂತ ಭಿನ್ನವಾದದ್ದು. ಈ ವಿಷಯದ ಪರಿಣಿತಿಯೂ ನನಗೆ ಸೊನ್ನೆಯಿಂದ-ಆರಂಭದ ಕಲಿಕೆಯ ಮಟ್ಟದಲ್ಲಿರುವುದರಿಂದ ನೀವು, ಗಣೇಶರಂತೆ ಮತ್ತಿತರ ಅನುಭವಿಗಳು ತಿದ್ದುವಿರೆಂಬ ಧೈರ್ಯದ ಮೇಲೆ ನಾನು ನಿರಾಳವಾಗಿ ತೋಚಿದ ರೀತಿ ದಾಖಲಿಸುತ್ತಿದ್ದೇನೆ ('start with a wrong aasumption to reach right conclusion' ಅನ್ನುವ ಹಾಗೆ). ಎಷ್ಟು ಬಾರಿ ಪರಿಷ್ಕೃತವಾದರೂ 'ಅತ್ಯಂತ ಸರಿಯಾದ' ಆವೃತ್ತಿ ಇಲ್ಲಿ ದಾಖಲಾಗುವುದು ಮುಖ್ಯವಾದ ಕಾರಣ, ನನಗಂತೂ ಬೇಸರವಿಲ್ಲ. ಹೆಚ್ಚು ಚರ್ಚೆಯಾದಷ್ಟೂ ಹೆಚ್ಚು ಚೆನ್ನಾಗಿ ಅರ್ಥವಾಗುತ್ತದೆ. ನನಗೂ ಈ ರೂಪದಲ್ಲಿ ಬರೆಯುವುದು, ಒಂದು ರೀತಿ ಸರಿಯಾಗಿ ಅರ್ಥ ಮಾಡಿಕೊಂಡೆನೊ ಇಲ್ಲವೊ ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಕೂಡ :-)
ತಮಗೂ ಶುಭ ರಾತ್ರಿ!
- ನಾಗೇಶ ಮೈಸೂರು

Submitted by makara Mon, 06/24/2013 - 09:34

In reply to by nageshamysore

ಈಗಿರುವುದು ಸರಿಯಾದ ರೂಪವಾಗಿದೆ ನಾಗೇಶರೆ. ನಾನೂ ಸಹ ಕಲಿಯುತ್ತಿರುವವನೇ ಆದ್ದರಿಂದ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಾಗ ಹೊಸ ವಿಷಯಗಳು ತಿಳಿಯುತ್ತವೆ. ಅಂದಹಾಗೆ, ನೀವು ಹೇಳಿದ ಮಾತುಗಳನ್ನು ನೆನಪಿಡಬೇಕಾದ್ದೇ - Start with a wrong assumption to reach the right conclusion. ರಾತ್ರಿ ಇನ್ನು ನೀವು ಮಲಗಿರುತ್ತೀರೆಂದು ಕೊಂಡು ಶುಭರಾತ್ರಿ ಹೇಳಿ ನನ್ನ ಸಿಸ್ಟಂ ಅನ್ನು ಕ್ಲೋಸ್ ಮಾಡಿದೆ. ಈಗ ನೋಡಿದರೆ ನೀವು ರಾತ್ರಿಯೇ ಇದನ್ನು ಗಮನಿಸಿ ಪ್ರತಿಕ್ರಿಯಿಸಿದ್ದೀರ!
ಶುಭದಿನದ ವಂದನೆಗಳೊಂದಿಗೆ,
ಶ್ರೀಧರ ಬಂಡ್ರಿ

Submitted by nageshamysore Mon, 06/24/2013 - 09:51

In reply to by makara

ಶ್ರೀಧರರೆ, ಅದು ಸ್ಮಾರ್ಟ್ಫೋನಿನೊಳಗೆ ನುಸುಳುವ ಮಿಂಚಂಚೆ ಪ್ರಭಾವ - 24 x 7 ಹಾಗೆ (ಬೇರೆ ಕಡೆ ಬಿಜಿಯಾಗಿರದಿದ್ದರೆ). ಇದರಿಂದಾಗಿ ನಾನು ಕಂಪ್ಯೂಟರು ತೆರೆಯುವ / ಮುಚ್ಚುವ ಅಗತ್ಯವಿಲ್ಲ. ಆದರೆ ಇದು ಪ್ರೊಫೈಲಿನ ಸೆಟ್ಟಿಂಗಿನ ಮೇಲೆ ಮಾತ್ರ ಸಾಧ್ಯವೆಂದು ಕಾಣುತ್ತದೆ.
ಈಗ ಓವರ್ ಟು ಗಣೇಶ್ ಜಿ :-)
ಶುಭದಿನ,
- ನಾಗೇಶ ಮೈಸೂರು