ಒಳಗೊಳಗೆ...

ಒಳಗೊಳಗೆ...

ಹುಷಾರು ತಪ್ಪಿದಾಗ ಇನ್ನಿಲ್ಲದಂತೆ ಮನೆಯವರು ಮತ್ತು ಅನೇಕ ಗೆಳೆಯರು ನೆನಪಾಗುತ್ತಾರೆ. ಉಳಿದಂತೆ, ಕೆಲಸದ ಒತ್ತಡಗಳು ಭಾವನೆಗಳನ್ನು ಸರಾಸಗಟಾಗಿ ನುಂಗಿಕೊಳ್ಳುವುದರಿಂದ ಹಲವೊಮ್ಮೆ ಭಾವಹೀನರಾಗಿ ನಾವೆಲ್ಲಾ ಬದುಕು ನಡೆಸಬೇಕಾತ್ತದೆ. ಇಂಜೆಕ್ಷನ್ ಎಂದರೆ ಭಯ ಬೀಳುವ ನಾನು ಹುಷಾರು ತಪ್ಪಿದಾಗ ಆತ್ಮೀಯರಿಗೆ ಹೇಳುವುದೇ ಇಲ್ಲ. ಆದರೂ ವಾರಕ್ಕೊಮ್ಮೆ ನನ್ನನ್ನು ಕಾಣಲೆಂದೇ ಬರುವ ಗೆಳೆಯ ಲಕ್ಷ್ಮಣ್ ನನ್ನ ಕಣ್ಣನ್ನು ನೋಡಿಯೇ ‘ನಿನಗೆ ಹುಷಾರಿಲ್ಲ, ಮೊದಲು ಆಸ್ಪತ್ರೆಗೆ ನಡೆ’ ಎನ್ನುತ್ತಾನೆ. ‘ಇಲ್ಲ ಮಾರಾಯ, ಕಣ್ಣಿಗೆ ಧೂಳು ಬಿದ್ದಿದೆ, ಸುಮ್ನೆ ತಲೆ ತಿನ್ನಬೇಡ’ ಎಂದರೂ ಬಿಡಲೊಲ್ಲ. ಹೀಗೆ, ಇಂದು ಮುಂಜಾನೆಯೇ ಬಂದು ಕುತ್ತಿಗೆಯ ಪಟ್ಟಿ ಹಿಡಿದು ಆಸ್ಪತ್ರೆಗೆ ಎಳೆದುಕೊಂಡು ಹೋಗಿ ಕುಂಡಿಗೆ ಸೂಜಿ ಚುಚ್ಚಿಸಿದ್ದರ ಭಯ ಇನ್ನೂ ಮನಸ್ಸಿನಿಂದ ಆರಿಲ್ಲ.

 

ಈ ಹಾಳಾದ ಮೊಬೈಲನ್ನು ಅದಾರು ಕಂಡು ಹಿಡಿದರೋ ಏನೋ. ಅವರ ಈ ಮಹತ್ಕಾರ್ಯಕ್ಕೆ ನನ್ನ ಧಿಕ್ಕಾರ! ನನ್ನ ವೈಯಕ್ತಿಕ ಬದುಕನ್ನು ನುಂಗಿಕೊಳ್ಳಲೆಂದೇ ಹುಟ್ಟಿಕೊಂಡಿದೆ ಇದು. ಈ ಲಕ್ಷ್ಮಣ್ ದಿನಕ್ಕೈದಾರು ಬಾರಿ ಫೋನ್ ಮಾಡುತ್ತಾನೆ, ‘ಊಟ ಮಾಡ್ದಾ? ಬ್ರೆಡ್ ತಿಂದಾ? ಬಿಸಿ ನೀರು ಕುಡಿ, ಮಾತ್ರೆ ನುಂಗು’-ಇವೇ ಮಾತುಗಳು. ನಾಲಗೆ ಅಂಗಳೆಲ್ಲಾ ಕಹಿ ಹೊಡೆದರೂ ಈ ನೋವು ಸಂಕಟ ಒತ್ತಡಗಳನ್ನು ತಾಳಲಾರದೆ ಮಾತ್ರೆ ನುಂಗಬೇಕು. ನಿದ್ದೆ ಬರದಿದ್ದರೂ ಹೊರಳಾಡಬೇಕು. ಕೂರಬೇಕು, ಮತ್ತೆ ಮಲಗಬೇಕು, ಏಳಬೇಕು. ಒಟ್ಟಿನಲ್ಲಿ ಲಕ್ಷ್ಮಣ್ ಆಜ್ಞೆಯಂತೆ ನಾಳೆಯ ಮುಂಜಾನೆಯೊಳಗೆ ನಾನು ತಯಾರಿರಬೇಕು. ಅವನ ಹಳ್ಳಿಗೆ ಹೋಗಲು!

 

ಲಕ್ಷ್ಮಣ್, ನಿಜಕ್ಕೂ ನನಗೆ ನನ್ನ ಕುಟುಂಬ ಸದಸ್ಯರಿಗಿಂತಲೂ ಆತ್ಮೀಯ. ನಾನೆಂದರೆ ಅವನು, ಅವನೆಂದರೆ ನಾನು. ಮುಂಜಾನೆಯ ಎಳೆ ಚಳಿಯಲ್ಲಿ ಆತ ಬಂದಾಗ ನನ್ನನ್ನು ಭಾವುಕಗೊಳಿಸಿದ ಒಂದು ವಿಚಾರವಿತ್ತು. ಎಡಗೈಗೆ ಬ್ಯಾಂಡೇಜು ಸುತ್ತಿ ಅದಕ್ಕೊಂದು ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕಿಕೊಂಡಿದ್ದ. ಸ್ವಾಧೀನವಿದ್ದರೂ ಸದ್ಯಕ್ಕೆ ಆ ಕೈ ಉಪಯೋಗವಿಲ್ಲದಂತಾಗಿ ಎಲ್ಲಾ ಕೆಲಸವನ್ನು ಬಲಗೈಯಿಂದ, ಅನಿವಾರ್ಯವೆನಿಸಿದರೆ ಮತ್ತೊಂದು ಕೈಯಿಯ ಕೆಲಸವನ್ನು ತನ್ನ ಹಲ್ಲುಗಳ ಮೂಲಕ ಮಾಡಿಕೊಳ್ಳುತ್ತಿದ್ದ. ಆ ಕೈಗೆ ಇದು ಮೊದಲ ಅಪಘಾತವೇನಲ್ಲ, ಹಿಂದೊಮ್ಮೆ ಸ್ಕೂಟರ್‍ನಿಂದ ಜಾರಿಬಿದ್ದು ಅದೇ ಕೈಯನ್ನು ಮುರಿದುಕೊಂಡಿದ್ದ. ಆಪರೇಷನ್ ಮಾಡಲು ಕೊಯ್ದಿದ್ದ ಜಾಗ ಕೀವುಕಟ್ಟಿ ವ್ರಣವಾಗಿ ಮತ್ತೆ ಮತ್ತೆ ತೊಂದರೆ ಕೊಡುತ್ತಿತ್ತು. ಈ ಅಪಘಾತವನ್ನು ತನ್ನ ಸ್ವಯಂಕೃತ ತಪ್ಪೆಂದು ಒಪ್ಪಿಕೊಂಡಿದ್ದ, ಆದರೆ ಮೊದಲ ಅಪಘಾತವನ್ನು ತನ್ನ ಶತ್ರುಗಳ ವ್ಯವಸ್ಥಿತ ಒಳ ಸಂಚೆಂದು ಬಗೆದಿದ್ದ. ತಲೆಗೆ ಯಾವುದೋ ತಂತಿ ತಾಗಿಯೇ ತಾನು ಮೈಸೂರು ವಿಶ್ವವಿದ್ಯಾಲಯದ, ಮಾನಸ ಗಂಗೋತ್ರಿಯ ಅಂಗಳದಲ್ಲಿ ಜಾರಿ ಬಿದ್ದೆನೆಂದು ಒಂದು ದೂರನ್ನೂ ದಾಖಲಿಸಿದ್ದ. ದಾಖಲಿಸಿದಷ್ಟೇ ವೇಗವಾಗಿ ಆ ದೂರು ಸಮಾಧಿ ಕಟ್ಟಿಕೊಂಡು ಸಂಭ್ರಮಿಸಿತ್ತು. ಇನ್ನೂ ಸಂಭ್ರಮಿಸುತ್ತಿದೆ!

 

ಆತ ಹೇಳಿದ್ದು ನಿಜವೂ ಹೌದು. ಕೆಲವು ವರ್ಷಗಳ ಹಿಂದೆ ನಾನು ಮತ್ತು ಅವನು ಒಟ್ಟಿಗೆ ಮಾನಸ ಗಂಗೋತ್ರಿಯಲ್ಲಿ ಓದುತ್ತಿದ್ದಾಗ ಕತ್ತಲಿನ ಹಾದಿಯ ಬೆಂಚುಗಳಲ್ಲಿ ಅಥವಾ ಹಾಸ್ಟೆಲ್‍ಗಳ ಟೆರೆಸ್‍ನಲ್ಲಿ ಆ ರೀತಿಯ ಸಂಚುಗಳು ವ್ಯವಸ್ಥಿತವಾಗಿಯೇ ರೆಕ್ಕೆ ಬಿಚ್ಚಿಕೊಳ್ಳುತ್ತಿದ್ದವು. ಗುಂಪು ಗುಂಪುಗಳ ನಡುವಿನ ವೈಷಮ್ಯಗಳು ವ್ಯವಸ್ಥಿತ ಪ್ರತಿಕಾರಗಳಿಗೆ ಎಡೆ ಮಾಡಿಕೊಟ್ಟು ಗಂಗೋತ್ರಿಯ ಆವರಣದಲ್ಲೆಲ್ಲಾ ಬಿಗುವಿನ ವಾತಾವರಣ ಉಂಟಾಗುತ್ತಿತ್ತು. ಈ ವಿಚಾರವಾಗಿ ಅನೇಕ ಬಾರಿ ನಾನೂ ಕೂಡ ಲಕ್ಷ್ಮಣನೊಂದಿಗೆ ಕೈ ಜೋಡಿಸಿದ್ದೇನೆ. ಗರ್ಕನಾಗಿ ನಕ್ಷೆ ತಯಾರಿಸಿಕೊಟ್ಟು ಎಷ್ಟೋ ದಬ್ಬಾಳಿಕೆಗಳನ್ನು ಹಣಿದಿದ್ದೇನೆ. ಈ ಜಗತ್ತೆಂದರೆ ಒಂದು ಅದ್ಭುತ ಸೃಷ್ಟಿ, ಆದರೆ ಅಲ್ಲಲ್ಲಿ ಭೂಮಿ ಕೊರೆದುಕೊಂಡು ನಮ್ಮದು ತಮ್ಮದೆಂದು ಚೀರಾಡುವ ಜನರೇ ಸೃಷ್ಟಿಸಿಕೊಂಡ ಮೇಲು ಕೀಳೆಂಬ ತಾರತಮ್ಯ, ಸಾಮಾಜಿಕ ದಾರ್ಷ್ಯ ವ್ಯತ್ಯಾಸಗಳ ವಿರುದ್ಧ ಲಕ್ಷ್ಮಣನದು ಮೊದಲಿನಿಂದಲೂ ಬಿಚ್ಚುಮಾತು ಮತ್ತು ಕೆಚ್ಚೆದೆಯ ಕೆಲಸ. ಆತ ಒಂದು ರೀತಿಯಾಗಿ ಹಿಂಸೆಯ ಮೂಲಕ ಗಾಂಧಿತತ್ತ್ವವನ್ನು ಸಾಧಿಸಲು ಹೊರಟವನು. ಮಾನವತೆಯ ಪ್ರತೀಕವೆಂದು ಹೆಸರು ಮಾಡಿದ್ದ ಆತ ಗಂಗೋತ್ರಿಯ ಆವರಣದಲ್ಲಿ ನಿಜಕ್ಕೂ ಒಬ್ಬ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡಿದ್ದವನು. ಮೇಲ್ವರ್ಗ ಎನಿಸಿಕೊಂಡ ವೈರಸ್ ಜನತೆ ತಮ್ಮನ್ನು ಇಲ್ಲಿಯೂ ತುಳಿಯಲು ಹೊಂಚು ಹಾಕುತ್ತಿದ್ದಾರೆ, ಅವರಿಲ್ಲದ ಜಾಗವೇ ಇಲ್ಲ, ಅವರ ಗೊಡ್ಡು ಪಾವಿತ್ರ್ಯತೆ ನನ್ನ ಎಕ್ಕಡಕ್ಕೆ ಸಮಾನ ಎಂದು ಆವೇಶ ಭರಿತನಾಗಿ ಆಗಾಗ ಆತ ನುಡಿಯುತ್ತಿದ್ದ ಮಾತು ಅಲ್ಲಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿತ್ತು. ಯಾವೊತ್ತಿನಲ್ಲಾಗಲಿ, ಯಾರೇ ಆಗಲಿ, ತನ್ನವರನ್ನು ಕೀಳಾಗಿ ಕಂಡರೆ ಸಾಕು ತನ್ನ ದಂಡಿನೊಂದಿಗೆ ದಾಳಿಗೆ ನಿಂತುಬಿಡುತ್ತಿದ್ದ. ಕೂಡಲೇ ಪ್ರತಿಭಟನೆ, ತರಗತಿಗಳಿಗೆ ನುಗ್ಗಿ ಚೀರಾಡಿ ಪಾಠ ಪ್ರವಚನವನ್ನು ಬಹಿಷ್ಕರಿಸುವುದು, ಹಾಸ್ಟೆಲ್ ಗಳಿಗೆ ನುಗ್ಗಿ ಎಲ್ಲರನ್ನೂ ಎಳೆದುಕೊಂಡು ಬರುವುದು, ಹೀಗೆ...

 

ಹಾಸ್ಟೆಲ್ ಊಟದ ವ್ಯವಸ್ಥೆ ಕೊಂಚವೂ ಸರಿಯಾಗಿಲ್ಲ, ಅರ್ಧವಷ್ಟೇ ಬೇಯುವ ಅಕ್ಕಿಯ ಅನ್ನವನ್ನು ತಿನ್ನಬೇಕು, ಸರ್ಕಾರದ ಸವಲತ್ತು ನೆಲಸಮವಾಗುತ್ತಿದೆ, ಟೆಂಡರ್ ಪ್ರಕ್ರಿಯೆ ಉಳ್ಳವರ ಪಾಲಾಗುತ್ತಿದೆ, ರಾಜಕಾರಣಿಗಳೇ ಅಡ್ಡದಾರಿ ಹಿಡಿದು ಸ್ಥಳೀಯ ಗೂಂಡಾಗಳ ಮೂಲಕ ಟೆಂಡರ್ ಕೊಂಡು ಲೂಟಿ ಹೊಡೆಯುತ್ತಿದ್ದಾರೆ, ಇಲ್ಲಿಯೂ ನಿರಂಕುಶ ಪ್ರಭುಗಳು ಮೆರೆದಾಡುತ್ತಿದ್ದಾರೆ, ಇಂತಹವರಿಗೆ ನಾವು ಸ್ಥಳೀಯ ಭಯೋತ್ಪಾದಕರಾಗಿ ಕೆಲಸ ಮಾಡಲೇಬೇಕು ಎಂಬುದ್ದೇಶವಿಟ್ಟುಕೊಂಡು ಡೀನ್ ಮನೆ ಮುಂದೆ ಧರಣಿ ಕೂರಲು ನಕ್ಷೆ ತಯಾರಿಸಿದ್ದಾಗ, ಒಂದಿಬ್ಬರು ‘ಪ್ರತಿಭಟನೆಗೆ ಭಾಗವಹಿಸುವುದಿಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲವೆಂದು’ ಖಡಕ್ಕಾಗಿ ಹೇಳಿ ರೂಮು ಸೇರಿಕೊಂಡಿದ್ದರು. ಆ ಕ್ಷಣದಲ್ಲಿ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆಗೆ ನಿಂತಿದ್ದ ಆತ, ಕೂಡಲೇ ಅವರಿಬ್ಬರನ್ನು ಹೊರಗೆಳೆದು ರೂಮಿಗೆ ಬೆಂಕಿ ಹಚ್ಚಿಬಿಟ್ಟಿದ್ದ.

 

ಆತನ ಕಿಚ್ಚೇ ಆ ರೀತಿಯದ್ದಾಗಿತ್ತು. ಆತ ಬೆಳೆದು ಬಂದ ಹಾದಿಯಲ್ಲಿ ಆತನನುಭವಿಸಿದ ನೋವು, ಸಂಕಟ ತಾರತಮ್ಯಗಳು ಆತನೆದೆಯಲ್ಲಿ ಹೋರಾಟದ ಕಿಚ್ಚನ್ನು ಹಿಡಿ ಹಿಡಿಯಾಗಿ, ಕಿಡಿ ಕಿಡಿಯಾಗಿ ಹೊತ್ತಿಸಿದ್ದವು. ಯಾರಿಗೂ ಬಗ್ಗದೇ ನೀನೋ ನಾನೋ ನೋಡಿ ಇಂದೇ ಸಾಯುವ ಎಂಬ ಮನೋಭಾವದಲ್ಲಿ ಎದೆ ಸೆಟೆಸಿ ನಿಂತವನು. ತಾನು ಓದುತ್ತಿದ್ದ ಸ್ನಾತಕೋತ್ತರ ವಿಭಾಗದ ಛೇರ್‍ಮ್ಯಾನ್ ರಂಗಪ್ಪನವರ ಎಚ್ಚರಿಕೆಗೂ ತಲೆ ಕೆಡಿಸಿಕೊಳ್ಳದೇ, ‘ನಿಮ್ಮ ದೊಡ್ಡತವನ್ನು ನಮ್ಮ ಮುಂದೆ ತೋರಿಸಬೇಡಿ’ ಎಂದು ವಾಗ್ವಾದಕ್ಕೆ ಇಳುಗಿದ್ದವನು. ಕಾಲೇಜು ದಿನಗಳಲ್ಲಿಯೇ ‘ಅಭಿವ್ಯಕಿ’ ಎಂಬ ಕ್ರಾಂತಿಕಾರಿ ಪತ್ರಿಕೆಯನ್ನು ಹುಟ್ಟುಹಾಕಿ ಬೆಳೆಸಿದವನು. ಆತ ಆವೊತ್ತಿನಿಂದ ಇಂದಿನವರೆವಿಗೂ ನನ್ನಂತಹ ಅನೇಕರಿಗೆ ಹೋರಾಟದ ಸ್ಪೂರ್ತಿ. ಈ ವಿಚಾರವಾಗಿ ನಾನು ಲಕ್ಷ್ಮಣನಿಗೆ ಬಲಗೈ ಆಗಿ ಪರಿವರ್ತಿತಗೊಂಡರೆ ಎಂದರೆ ಉತ್ಪ್ರೇಕ್ಷೆಯಾಗುವುದಿಲ್ಲ. ನಾನು ಮೊಟ್ಟ ಮೊದಲು ಆತನೊಂದಿಗೆ ಧೈರ್ಯವಾಗಿ ಕೈ ಜೋಡಿಸಿದ್ದೇ ನಮ್ಮೆಲ್ಲರ ನಲ್ಮೆಯ ಗೆಳೆಯನಾಗಿದ್ದ ರಾಜೇಂದ್ರನ ರಿಜಿಸ್ಟರ್ಡ್ ಮದುವೆಗೆ. ರಾಜೇಂದ್ರನದು ಅಂತರ್ಜಾತಿ ಮದುವೆ, ಮೊಬೈಲ್ ಮೂಲಕ ತಪ್ಪಿ ಸಿಕ್ಕ ಹುಡುಗಿಯೊಂದಿಗೆ ಪ್ರೇಮಾಂಕುರವಾಗಿತ್ತು. ತನ್ನ ಮೊಬೈಲ್ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆದದ್ದನ್ನು ಖಾತ್ರಿ ಪಡಿಸಿಕೊಂಡು ಟೆರೆಸ್ ಹತ್ತಿ ಹರಟೆ ಹೊಡೆಯಲು ಶುರುವಿಟ್ಟುಕೊಂಡರೆ ನಂತರ ಆತ ಕೆಳಕ್ಕೆ ಇಳುಗುತ್ತಿದ್ದದ್ದು ಮತ್ತೆ ಬ್ಯಾಟರಿ ಚಾರ್ಚ್ ಮಾಡಲು. ಈ ಸಂಬಂಧದ ಪ್ರಸ್ತಾಪ ಮನೆಯಲ್ಲಿ ಮಾಡಿದ್ದರೂ ಅನ್ಯ ಜಾತಿಯ ಕಾರಣ ಒಪ್ಪಿಗೆಯ ಮುದ್ರೆ ಬಿದ್ದಿರಲಿಲ್ಲ. ಈ ಕಾರಣ ಲಕ್ಷ್ಮಣನನ್ನು ತೀವ್ರವಾಗಿ ಕೆರಳಿಸಿತ್ತು. ಹಿರಿಯರ ಎಚ್ಚರಿಕೆಯನ್ನೂ ಧಿಕ್ಕರಿಸಿ ಈ ಮದುವೆಯ ಸಾರಥ್ಯವನ್ನು ಆತ ವಹಿಸಿದ್ದ. ಅಂದು ಮಟ ಮಟ ಮಧ್ಯಾಹ್ನದ ಹೊತ್ತಿನಲ್ಲಿ ಲಕ್ಷ್ಮಣನೊಡಗೂಡಿ ಈ ಮದುವೆಗೆ ಸಾಕ್ಷಿಯಾಗಿ ಹಾಳೆಯ ಮೇಲೆ ಸಹಿ ಮಾಡಿದ್ದೆ. ಈ ಗೆಲುವಿನ ವಿಚಾರವಾಗಿ ನನ್ನಿಂದ ಒಂದು ಕ್ರಾಂತಿಕಾರಿ ಲೇಖನವನ್ನೂ ಲಕ್ಷ್ಮಣ್ ಬರೆಸಿ ಒಂದಷ್ಟು ಉತ್ತಮ ಪ್ರತಿಕ್ರಿಯೆಗಳನ್ನು ಕಲೆ ಹಾಕಿದ್ದ. ಮುಂದೊಂದು ದಿನ ರಾಜೇಂದ್ರ, ಆತನ ಹೆಂಡತಿ ಮಗುವಿನ ಫೋಟೋವನ್ನು ಮುಖಪುಟದಲ್ಲಿಯೇ ಅಚ್ಚಿಸಿದ್ದ.

 

ಹೇಳಿದ ಸಮಯಕ್ಕೆ ಸರಿಯಾಗಿ ಲಕ್ಷ್ಮಣ್ ಬಂದಿದ್ದ. ಈಗೀಗ, ವಿಶೇಷವಾಗಿ ಮದುವೆಯ ನಂತರ ಯಾಕೋ ಆತನ ಹುಮ್ಮಸ್ಸು ಕಡಿಮೆಯಾಗಿದೆ ಎಂದೆನಿಸುತ್ತಿದೆ. ‘ಅಭಿವ್ಯಕ್ತಿ’ ಪತ್ರಿಕೆಯನ್ನು ನಷ್ಟದ ನೆಪವೊಡ್ಡಿ ನಿಲ್ಲಿಸಿದ್ದ. ವಿದ್ಯಾರ್ಥಿದೆಸೆಯಲ್ಲಿನ ಕ್ರಾಂತಿಕಾರಿ ಧೋರಣೆಗಳು ಆತನಲ್ಲಿ ಇನ್ನೂ ಕೂಡ ಇವೆ. ಆದರೆ ಮದುವೆ, ಸಂಸಾರ, ದುಡಿಮೆ ನಿರ್ವಹಣೆ, ಜವಾಬ್ದಾರಿಗಳು ಆತನನ್ನು ಮಾನಸಿಕವಾಗಿ ಸ್ವಲ್ಪ ಕುಗ್ಗಿಸಿರಬಹುದು ಎಂದೆನಿಸಿತ್ತು. ಸುಮ್ಮನೆ ಕೆಣಕಿದೆ-‘ಏನು ಸಾಯೇಬ್ರು, ಧಿಕ್ಕಾರ ಕೂಗೋದು ಮರೆತುಬಿಟ್ರಾ?’ ಎಂದೊಡನೆ ‘ನೋಡೋ, ನೀನು ಧಿಕ್ಕಾರ ಅಂದಾಗ ನನ್ನ ಮೈ ರೋಮಗಳು ನೆಟ್ಟಗೆ ನಿಂತ್ಕೊಂಡ್ವು, ಈ ರಕ್ತ ಯಾವತ್ತೂ ಬಿಸಿ ಇರುತ್ತೆ ಕಣೋ’ ಎಂದ.

‘ಆದ್ರೂ, ಇತ್ತೀಚೆಗೆ ನೀನು ಮಗು ತತ್ಕೊಂಡು ಓಡಾಡೋದೆ ಆಯ್ತು, ಅಭಿವ್ಯಕ್ತಿ ಪತ್ರಿಕೆ ನಿಲ್ಲಿಸಬಾರದಿತ್ತು’

‘ಅದು ಬೇಜಾರು ಕಣೋ, ಆ ಪತ್ರಿಕೆಯ ಧೋರಣೆ ಎಲ್ಲರಿಗೂ ಇಷ್ಟವಾಗದೆ ನಷ್ಟಕ್ಕೆ ಬಿದ್ದು, ಕೊನೆಗೆ ಕೆಲಸ ಮಾಡೋರಿಗೆ ಸಂಬಳನೂ ಕೋಡೋಕಾಗ್ಲಿಲ್ಲ, ನನಗೆ ಆಗದೇ ಇರೋರು ಎಷ್ಟೋ ಜನ ಅದರ ವಿರುದ್ಧವಾಗಿ ಕೆಲಸ ಮಾಡಿದ್ರು, ಆ ಛಾನ್ಸಲರ್ ನರೇಶ್ ಭಟ್ಟನ ಕುಮ್ಮಕ್ಕೂ ಇತ್ತು. ಏನೇ ಆಗಲಿ, ನನ್ನ ಹೋರಾಟ ಕೊನೆ ಆಗೋದು ನನ್ನೆದೆ ಮೇಲೆ ಸೌದೆ ಬಿದ್ದಾಗಲೇ, ನಾಳೆ ನೋಡುವೆ ಬಾ’

‘ನಾಳೆ?’

‘ಹೌದು, ನಮ್ಮ ಬೀದಿ ಹುಡುಗರಿಗೆ ಮೇಲ್ಗಡೆ ಬೀದಿಯವರು ಒಡೆದಿದ್ದಾರೆ, ನಮ್ಮ ಬೀದಿಯವರದೂ ಸಂಘ ಇದೆ, ನಾಳೆ ಊರಲ್ಲಿ ಏನಾದರೊಂದು ಆಗುತ್ತೆ ನೋಡುವೆ ಬಾ’

 

ಪಟ್ಟಣ ಪಟ್ಟಣಗಳ ದಾಟಿ, ಕಾಡು ಮೇಡನ್ನು ಸವರಿ ಹೊರಳಾಡಿಕೊಂಡು ಬಂದ ಬಸ್ಸು ಹಳ್ಳಿ ತಲುಪುವ ವೇಳೆಗೆ ರಾತ್ರಿ ಹನ್ನೊಂದಾಗಿತ್ತು. ಇಡಿ ಹಳ್ಳಿಯೇ ಮುಗುಮ್ಮಾಗಿ ಮೌನಕ್ಕೆ ಶರಣಾಗಿತ್ತು. ಗಾಳಿಯ ರಭಸವಿಲ್ಲದೆ, ವಾತಾವರಣವೆಲ್ಲಾ ನಿರ್ವಾತಗೊಂಡಂತೆನಿಸಿ, ಎಲ್ಲಾ ಮನೆಗಳು ಸತ್ತು ಬಿದ್ದು ಒಂದು ರೀತಿಯ ಏಕತಾನತೆ ಅಲ್ಲೆಲ್ಲಾ ಹಬೆಯಾಡುತ್ತಿತ್ತು. ಲಕ್ಷ್ಮಣನ ಮನೆ ಸೇರಿಕೊಂಡಿದ್ದೇ, ಅಮ್ಮ ಮುದ್ದೆ, ನಾಟಿ ಕೋಳಿ ಸಾರು ಬಡಿಸಿ ಅಮೃತಕ್ಕೂ ಮಿಗಿಲಾದ ರುಚಿ ಹತ್ತಿಸಿದರು. ತನ್ನ ಅಣ್ಣನಿಗಿಂತಲೂ ತುಸು ಹೆಚ್ಚೆ ಭ್ರಾತೃತ್ವವನ್ನು ನನ್ನಿಂದ ಪಡೆದುಕೊಳ್ಳುವ ಲಕ್ಷ್ಮಣನ ತಂಗಿ ರಾಧಾಳ ನಗುಮುಖ ಮತ್ತಷ್ಟು ಅರಳಿತ್ತು. ಅವಳೊಂದಿಗೆ ಸ್ವಲ್ಪ ಹೊತ್ತಿನ ಹರಟೆಯೂ ಆಯಿತು. ದಣಿದಿದ್ದ ಮನಸ್ಸು ಮೈಗೆ ಗಡತ್ತಾದ ಊಟ ಸಿಕ್ಕಿದ್ದೇ ನಿದ್ದೆಯೂರಿಗೆ ಸದ್ದಿಲ್ಲದೇ ಸೇರಿಕೊಂಡವು.

 

ಮುಂಜಾನೆ ಆರಕ್ಕೆಲ್ಲಾ ಲಕ್ಷ್ಮಣನನ್ನು ಎಬ್ಬಿಸಿಕೊಂಡು ಕೆರೆಕಡೆಗೆ ಬಂದುಬಿಟ್ಟಿದ್ದೆ. ಈ ಹಳ್ಳಿಗಳಿಗೆ ಬಂದರೆ, ಉದರೆಬಾಧೆಯೆಂಬುದು ನಿಜಕ್ಕೂ ಪ್ರಾಣ ಸಂಕಟದ ವಿಚಾರ. ನಮ್ಮ ಪಟ್ಟಣದ ಮನೆಗಳಂತೆ ಅಡುಗೆ ಮನೆಯ ಪಕ್ಕವೇ ಕಕ್ಕಸ್ಸು ಮನೆ ಕಟ್ಟಿಕೊಳ್ಳುವುದೆಂದರೆ ನಮ್ಮ ಹಳ್ಳಿಗರಿಗೆ ಇನ್ನಿಲ್ಲದ ವಾಕರಿಕೆ. ‘ಅಲ್ಲೇ ಅಡ್ಗೆ ಮನೆ, ಅಲ್ಲೇ ದೇವರ ಮನೆ, ಅಲ್ಲೇ ಬಚ್ಚಲು ಮನೆ, ಥೂ’ ಎನ್ನುತ್ತಾರೆ. ಬಚ್ಚಲು ಮನೆಗಿರುವಷ್ಟು ಸ್ವಾತಂತ್ರ್ಯ ನಿಜಕ್ಕೂ ದೇವರು ಮನೆಗಿಲ್ಲ. ಇವರುಗಳಿಗೆ, ಈ ರೀತಿಯಾಗಿ ಬಯಲಿನಲ್ಲಿ ಪಂಚೆ ಮೇಲಕ್ಕೆತ್ತಿ ಕುಳಿತುಕೊಂಡು, ಒಂದು ಬೀಡಿ ಕಚ್ಚಿಕೊಂಡರಷ್ಟೇ ಸಮಾಧಾನ. ಬೇವಿನ ಕಡ್ಡಿಗಳನ್ನು ಕಿತ್ತುಕೊಂಡು ಬ್ರೆಡ್ಡು ಜಾಮಿನಂತೆ ಜಗಿದು, ಬಾಯಿಯಲ್ಲಿಟ್ಟುಕೊಂಡು, ಅಲ್ಲಿಯೇ ಇದ್ದ ಹಳ್ಳಕ್ಕೆ ಇಳುಗಿ ಇಬ್ಬರೂ ಒಂದೊಂದು ಕಡೆ ಮೆಳೆ ಸಂದಿಯಲ್ಲಿ ಕುಳಿತುಕೊಂಡೆವು.

 

ಈ ಯಾವತ್ತೂ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಲಕ್ಷ್ಮಣ್ ರಸ್ತೆಗೆ ಬರುವಷ್ಟರಲ್ಲಿ ನಾನು ಕೆರೆಗೆ ಇಳುಗಿ ಮೇಲೆ ಬಂದಿದ್ದೆ. ಮೇಲೆ ಬಂದವನೇ ‘ಯೋ ಮಾರಾಯ, ನಾನು ಕೂಗ್ತಾ ಇದ್ರು ಆ ಕೆರೆಗೆ ಹೋದ್ಯಲ್ಲ, ಸದ್ಯ ಯಾರೂ ನೋಡ್ಲಿಲ್ಲ’ ಎಂದ. ‘ಯಾಕೋ ಮಾರಾಯ’ ಎಂದೊಡನೆ ಆತ ‘ಶ್! ಆ ಕೆರೆಗೆ ನಾವು ಹೋಗೋವಂಗಿಲ್ಲ, ಅದು ಆ ಸೂಳೆಮಕ್ಳ ಕೆರೆ, ಬಡ್ಡೈಕಳು’ ಎಂದ. ಮಲ ವಿಸರ್ಜಿಸುವುದರಲ್ಲಿಯೂ ಇದೆಂಥ ತಾರತಮ್ಯವೆಂದು ಆಶ್ಚರ್ಯವಾಯಿತು. ಲಕ್ಷ್ಮಣ್ ಮಾತು ಮುಂದುವರೆಸಿದ – ‘ನಮ್ಮ ಹಳ್ಳಿ ಅಂದ್ರೆ ಹೀಗೇನಪ್ಪ, ಅಲ್ನೋಡು ಆ ಮಾಳ ಇದೆಯಲ್ಲ, ನಾವಲ್ಲಿಯಷ್ಟೇ ಹೇಲೋಕೆ, ಉಚ್ಚೆ ಹುಯ್ಯೋಕೆ ಹೋಗ್ಬೇಕು, ಈ ಕೆರೆ ಮಾತ್ರ ನಾವು ಉಪಯೋಗಿಸ್ಬೇಕು, ಈ ಮಾಳದಲ್ಲಿ ಇಡೀ ಹಳ್ಳಿ ಜನನೇ ಹೋಗಬಹುದು, ನಾವು ಅಲ್ಲಿಗೆ ಹೋಗಿದ್ದೇ ಆದ್ರೆ ಆ ದಿನವೆಲ್ಲಾ ಊರಲ್ಲಿ ಜಗಳ, ಪಂಚಾಯ್ತಿ ರಾಜಿ, ನಮಗೆ ಅವಮಾನ, ಇನ್ನೊಂದಷ್ಟು ರೂಲ್ಸು ರೆಗ್ಯೂಲೇಷನ್ಸು. ಮೊನ್ನೆ ನಮ್ಮ ಹುಡುಗ್ರು ಅವರ ಕೆರೆಗೆ ಹೋಗಿ ನೀರು ಅಟ್ಟಿಕೊಂಡದ್ದೇ ಹೊಡೆಸ್ಕೊಂಡು ಬರಲು ಕಾರಣವಾದದ್ದು’

‘ಇದೆಂಥಾ ರೂಲ್ಸೋ ಮಾರಾಯ?’ - ನಾನಂದೆ. ಮನೆ ಕಡೆ ನಡೆದೆವು.

‘ಇಂಥ ರೂಲ್ಸಿಂದಾನೇ ನಮ್ಮಲ್ಲಿ ಒಗ್ಗಟ್ಟಿಲ್ಲ, ಯಾರೋ ನಮ್ಮ ನಮ್ಮಲ್ಲೇ ಗುಂಪು ಮಾಡಿ ಹೊಡ್ದಾಡೋದು ನೋಡ್ಕೊಂಡು ಒಳಗೊಳಗೆ ಮುಸಿ ಮುಸಿ ನಗ್ತಾವ್ರೆ ಅನಿಸುತ್ತೆ, ಅದನ್ನ ನಾವು ಫಾಲೋವ್ ಮಾಡ್ತಾ ಇದ್ದೀವಷ್ಟೇ, ಆ ಆಲದ ಮರದ ಕಟ್ಟೆ ಇದೆ ನೋಡು, ಅಲ್ಲಿ ನಮ್ಮವರು ಕೂರೋ ಹಾಗಿಲ್ಲ, ಅಲ್ಲಿ ಕೂರೋರೆಲ್ಲ ಅವರ ಕಡೆಯ ಕುಡುಕ್ರು, ಜೂಜಾಡೋರು, ಸೋಂಬೇರಿಗಳು ಇವರೇ... ನಮ್ಮವರೇನಾದ್ರೂ ಈಕ್ಕಡೆ ಅಪ್ಪಿ ತಪ್ಪಿ ಬಂದ್ರೆ, ‘ಏನುಡೋ, ಯಾಕ್ಲಾ, ಬಾರ್ಲಾ, ಹೊಲೆಯಾರ್ ಬಡ್ಡೈದ್ನೆ’ ಇವೇ ಮಾತು, ಈ ಹೋಟೆಲ್ ಇದೆಯಲ್ಲಾ, ಇಲ್ಲಿ ಎಲ್ಲಾ ಜನಗಳು ಬಂದು ಟೀ ಕುಡಿಬೋದು, ತಿಂಡಿ ತಿನ್ನಬಹುದು, ಒಂದೇ ಎಂಜಲು ಲೋಟ ಕಚ್ಚಬಹುದು, ಆದ್ರೆ ನಾವು ಬರೋ ಹಾಗಿಲ್ಲ, ಬಂದ್ರೂ ಹೋಟೆಲ್ ಹೊರಗಿನ ಸೂರಿನಲ್ಲಿ ಒಂದು ಲೋಟ ಸಿಗ್ಸಿರ್ತಾರೆ, ಅದೇ ಲೋಟದಲ್ಲಿ ಟೀ ಕುಡಿಬೇಕು, ಆದ್ರೂ ನಮ್ಮಲ್ಲೇ ಕೆಲವರು ಅಡ್ಡದಾರಿಗೆ ಹುಟ್ಟಿದವರು ಇಲ್ಲಿಗೆ ಬಂದು ಆ ಲೋಟ ಎತ್ಕೊಂಡು, ಅವನು ಕೈ ಎತ್ತಿ ಸುರಿಯೋ ಟೀ ಕಾಫಿಯನ್ನ ತಲೆ ಬಗ್ಗಿಸ್ಕೊಂಡು ಲೋಟಕ್ಕೆ ಹಾಕಿಸ್ಕೊಂಡು ಪೀರ್ತವೆ, ನಾಚಕೆ ಇಲ್ದೇ ಇರೋ ದರಿದ್ರ ಬಡ್ಡೆತವು’ ಎಂದ.

‘ಈಗ ನಾನು ಹೋದ್ರೆ ಟೀ ಕೊಡ್ತಾರಾ?’ – ಆಶ್ಚರ್ಯಗೊಂಡು ಕೇಳಿದೆ.

‘ಖಂಡಿತ ಕೊಡ್ತಾರೆ, ನೀನು ಯಾರು ಅಂಥ ಅವರಿಗೆ ಗೊತ್ತಿಲ್ಲ, ಯಾವೂರು, ಯಾವ ಜಾತಿ ಅನ್ನೋದು ಅವರಿಗೆ ಈಗ ಬೇಡ, ಸದ್ಯಕ್ಕೆ ನೀನೊಬ್ಬ ಮನುಷ್ಯ ಅಷ್ಟೇ. ಆದರೆ, ನನ್ನ ವಿಚಾರದಲ್ಲಿ ಅವರು ಮನುಷ್ಯರಲ್ಲ’

 

ಆತ ಹಾದಿಯುದ್ದಕ್ಕೂ ಅಲ್ಲಲ್ಲಿ ಹಾಸುಹೊಕ್ಕಾಗಿ ಮಲಗಿರುವ ತಾರತಮ್ಯಗಳನ್ನು ವಿವರಿಸಿಕೊಂಡು ಬಂದ. ಹತ್ತು ಹತ್ತು ಹೆಜ್ಜೆಗೊಂದೊಂದು ಜಾತಿಯ ಬೀದಿಗಳನ್ನು ಹೆಸರಿಸಿದ. ಅವರೆಲ್ಲರೂ ತಮ್ಮ ಸುತ್ತ ಗೆರೆಗಳನ್ನು ಎಳೆದುಕೊಂಡು ಒಳಗೊಳಗೆ ಬದುಕುತ್ತಿದ್ದರು, ಜೊತೆ ಜೊತೆಗೆ ನಲುಗುತ್ತಿದ್ದರು. ಒಂದಷ್ಟು ದೇವಸ್ಥಾನಗಳನ್ನು ತೋರಿಸಿ ‘ನಮ್ಮ ಹಳ್ಳಿಯಲ್ಲಿ ನಮ್ಮನ್ನು ಅಸ್ಪøಶ್ಯಗೊಳಿಸಲು ಪ್ರಮುಖ ಪಾತ್ರ ವಹಿಸುವ ಜಾಗಗಳು, ಆಗಾಗ ಊರಿನಲ್ಲಿ ಉಂಟಾಗುವ ಅನೇಕ ಗದ್ದಲಗಳಿಗೆ ಈ ದೇವಸ್ಥಾನಗಳೇ ಕಾರಣ’ ಎಂದು ದೂರಿದ. ನಮ್ಮ ತಾತ, ಮುತ್ತಾತ, ಅಪ್ಪ ಅಮ್ಮ ನಾವುಗಳೆಲ್ಲಾ ಈ ಹಳ್ಳಿಯೊಳಗಿದ್ದು ಇಲ್ಲಿಲ್ಲದವರಂತೆ ಬದುಕುತ್ತಿದ್ದೇವೆ, ನಮ್ಮ ಬೀದಿಯಾಯಿತು, ನಾವಾಯಿತು ಅಷ್ಟೇ, ಯಾರೋ ಹಿಂದಿನವರು ನಮ್ಮನ್ನು ಗಂಟು ಮೂಟೆ ಕಟ್ಟಿ ತಂದು ಇಲ್ಲಿ ಒಗೆದು ಹೋದಂತಾಗಿದೆ ನಮ್ಮ ಬಾಳು, ನಾವಿಲ್ಲಿ ಅಪರಿಚಿತರು, ಪ್ರತಿ ಸಂತಸ ಉತ್ಸವವನ್ನು ನಮ್ಮ ಗೆರೆಯೊಳಗೆ ನಿಂತಷ್ಟೇ ನಾವು ಸವಿಯಬೇಕು, ನಾವು ಭಾಗವಹಿಸಿದರೆ ಪಾವಿತ್ರ್ಯವನ್ನು ಹಾಳು ಮಾಡಿದಂತೆ, ಆದರೆ ನಮ್ಮ ಕಣ್ಣಿನ ಎಲ್ಲೆಗೆ ಎಲ್ಲವನ್ನೂ ಮೀರುವ ಶಕ್ತಿಯಿದೆ, ಅವರೆಲ್ಲರ ಕಣ್ಣಿಗಿರುವಂತೆ’ ಎಂದ.

 

ಆತನ ಕ್ರಾಂತಿಕಾರಿ ಧೋರಣೆಗೆ ಈ ರೀತಿಯಾದ ನೂರಾರು ಕಾರಣಗಳಿವೆ. ಅವುಗಳು ಆಕ್ರೋಶವಾಗಿ ಭೋರ್ಗರೆಯುತ್ತವೆ, ಬೆಂಕಿಯುಂಡೆಯಾಗಿ ಸಿಡಿಯುತ್ತವೆ. ಅಷ್ಟಕ್ಕೆ ಪಂಚಾಯಿತಿ ಕಟ್ಟೆಗೆ ಕರೆದುಕೊಂಡು ಬಂದ. ಆತ ಹೇಳಿದ ಹೊಡೆದಾಟ ಬಡಿದಾಟಗಳಿಗೆ ಕಾರಣ ಪ್ರತಿ ಕಾರಣ, ರೋಷಾವೇಷಗಳು ಜ್ವಾಲಾಮುಖಿಯಂತೆ ಉದ್ಭವಿಸುತ್ತಿದ್ದವು. ಲಕ್ಷ್ಮಣನ ಹೋರಾಟದ ಶಕ್ತಿ ಇಲ್ಲಿ ಮತ್ತೆ ರೂಪಿತವಾಗಬಹುದು ಎಂದುಕೊಂಡಿದ್ದ ನನ್ನ ನಿರೀಕ್ಷೆ ಯಾಕೋ ಹುಸಿಯಾದಂತೆನಿಸಿತು. ಆತ ಮಾತನಾಡಿದ, ಆದರೂ ಬಸ್ಸಿನಲ್ಲಿದ್ದಷ್ಟು ಗಡಸುತನವಿರಲಿಲ್ಲ. ತಾನು ಓದಿದ್ದನ್ನೆಲ್ಲಾ ಒದರಿದ, ಆದರೂ ತನ್ನದೇ ಜನಗಳ ಬಾಯಿ ಮಾತಿನಿಂದ ಆತ ಮೌನವಾದ. ಆ ಜಾಗಕ್ಕೆ ನೀವು ಬಂದದ್ದು ಮೊದಲ ತಪ್ಪು ಎಂದು ನಿರೂಪಿಸಿದ ಊರಿನ ಯಜಮಾನರು ‘ತಪ್ಪು ಕಾಣಿಕೆ’ಯನ್ನಿರಿಸಿಕೊಂಡು ಸಭೆಯನ್ನು ವಿಸರ್ಜಿಸಿದರು. ಅಷ್ಟಕ್ಕೇ ಅಲ್ಲಿಗೆ ಬಂದ ಲಕ್ಷ್ಮಣನ ತಂದೆ ನಮ್ಮಿಬ್ಬರಿಗೂ ಉಗಿದು ಮನೆಗೆ ಎಳೆದುಕೊಂಡು ಹೋಗಿ ಗಂಟು ಮೂಟೆ ಕಟ್ಟಿಸಿ ನನ್ನನ್ನು ಬೆಂಗಳೂರಿಗೆ ಹತ್ತಿಸಿಬಿಟ್ಟರು. ಯಾವುದೋ ಪ್ರಮುಖ ವಿಚಾರವಾಗಿ ಮಾತನಾಡಬೇಕಾಗಿದೆ ಎಂಬ ಕಾರಣ ನೀಡಿ ಲಕ್ಷ್ಮಣ್‍ನನ್ನು ಅಲ್ಲಿಯೇ ಉಳಿಸಿಕೊಂಡರು.

 

ಇದಾದ ಎರಡು ದಿನಗಳ ನಂತರ, ಹಳ್ಳಿಯೆಲ್ಲಾ ಸುತ್ತಾಡಿ, ನೀರಿನ ವ್ಯತ್ಯಾಸವಾದ ಕಾರಣವೋ ಏನೋ, ಮತ್ತೆ ಹುಷಾರು ತಪ್ಪಿ ಸೂಜಿಗೆ ಕೈ ಒಡ್ಡಬೇಕಾಯಿತು. ಡಾಕ್ಟರ್‍ಗಳ ಕಟ್ಟಪ್ಪಣೆಯ ಮೇರೆಗೆ ಎರಡು ದಿನದ ಕೆಲಸಕ್ಕೆ ರಜೆ ನೀಡಿ ಮನೆಯಲ್ಲಿಯೇ ಉಳಿದುಕೊಂಡಿದ್ದೆ. ನನ್ನನ್ನು ಆಗಾಗ ಆಟವಾಡಿಸುವ ನನ್ನ ಶತ್ರುವೆಂದರೆ ನಿದ್ದೆ. ಈ ರೀತಿಯಾಗಿ ವಿರಾಮವಾಗಿದ್ದಾಗ ನನ್ನ ಬಳಿ ಅದು ಬರಲೊಲ್ಲದು. ಅದು ಬರುವ ವೇಳೆಯಲ್ಲಿ ನಾನು ಬ್ಯುಸಿಯಿರುತ್ತೇನೆ! ಹಾಸಿಗೆಯ ಮೇಲೆ ಹೊರಳಾಡಿ ಹೊರಳಾಡಿ ಕೆರಳುವಾಗ ನನ್ನ ಮನೆಯ ಗೇಟನ್ನು ಯಾರೋ ತೆರೆದಂತಹ ಶಬ್ದವಾಯಿತು. ಯಾರಿರಬಹುದೆಂಬ ಕುತೂಹಲದಿಂದ ಕಿಟಕಿಯಲ್ಲಿಣುಕಿದೆ. ಅರೆ! ಆಶ್ಚರ್ಯ! ಲಕ್ಷ್ಮಣನ ತಂಗಿ ರಾಧಾ!

 

ನನ್ನನ್ನು ನೋಡಿದ್ದೇ ಅಣ್ಣ ಎಂದು ಭುಜದ ಮೇಲೊರಗಿದಳು. ಅವಳ ಅಳು ಕಂಡು ನನಗೆ ಆಶ್ಚರ್ಯವಾಯಿತು. ಮೊದಲು ಒಳಗೆ ಬನ್ನಿ ಎಂದು ಅವಳನ್ನೂ, ಅವಳ ಜೊತೆ ಬಂದಿದ್ದ ಮತ್ತೊಬ್ಬ ಹುಡುಗನನ್ನು ಮನೆಯೊಳಗೆ ಕರೆ ತಂದೆ.

‘ಕೂಲ್ ಡೌನ್, ಅಳ್ಬೇಡ, ಏನಾಯ್ತು?’ – ಕುಡಿಯಲು ಕೈಗೆ ಜ್ಯೂಸ್ ಇಟ್ಟು ಕೇಳಿದೆ.

‘ಅಣ್ಣ, ನಾನು ಈ ಹುಡುಗನ ಜೊತೆ ಓಡಿ ಬಂದ್ಬಿಟ್ಟಿದ್ದೇನೆ, ನಾನು ತುಂಬಾ ಹಚ್ಕೊಂಡಿರೋನು, ನಾನು ಲವ್ ಮಾಡ್ತಾ ಇರೋನು’

‘ಈ ರೀತಿ ಓಡಿ ಬರೋ ಬದಲು ಮನೆಯಲ್ಲಿ ಹೇಳಿ ಮದ್ವೆ ಆಗೋದಲ್ವೇ?’

‘ನೀವು ಬಂದ ದಿನವೇ ಹೇಳಿದ್ದೆ, ಅಪ್ಪ ಅಮ್ಮ ಜೋರಾಗಿ ಭಾರಿಸಿದ್ರು, ಆಗ್ಲೇ ಬೇರೆ ಹುಡುಗನ್ನ ನೋಡೋದರ ಬಗ್ಗೆ ಮಾತಾಡ್ತಾ ಇದ್ರು, ನನಗೆ ಬೇರೆ ದಾರಿ ಇಲ್ದೇ ಬಂದ್ಬಿಟ್ಟೆ’

‘ಹೌದಾ? ಆಶ್ಚರ್ಯ! ಒಪ್ದೇ ಇರೋಕೆ ಕಾರಣ?’

‘ಇವರು ನಮ್ಮ ಪಕ್ಕದ ಮಾದಿಗ ಬೀದಿಯವರು, ಜಾತಿಯಲ್ಲಿ ನಮಗಿಂತ ಸ್ವಲ್ಪ ಕೀಳು ಅನ್ನೋದೆ ಕಾರಣ’

 

ಇಲ್ಲಿರುವುದು ಸುರಕ್ಷಿತವಲ್ಲ ಎಂಬ ಕಾರಣ ಒಡ್ಡಿ ಆಕೆ ತನ್ನ ಗೆಳತಿಯ ಮನೆಗೆ ಹೊರಡಲು ಅನುವಾದಳು. ‘ನಾನಿದ್ದೇನೆ, ಧೈರ್ಯದಿಂದಿರು’ ಎಂಬ ಮಾತನ್ನಷ್ಟೇ ಹೇಳಿದ್ದೆ. ಒಳ ಬಂದವನೇ ಹಾಸಿಗೆ ಮೇಲೆ ಕುಸಿದು ಬಿದ್ದೆ. ಮೈ ಜ್ವರ ಮತ್ತಷ್ಟು ಏರಿತ್ತು. ಲಕ್ಷ್ಮಣ್ ಕರೆ ಮಾಡುತ್ತಿದ್ದ, ಮೊಬೈಲ್ ಯಾಕೋ ಇಂದು ತುಸು ಹೆಚ್ಚೇ ಒದರುತ್ತಿತ್ತು. ಈ ಬೀದಿ ಬಗ್ಗೆ ಲಕ್ಷ್ಮಣ್ ಸೊಲ್ಲೆತ್ತಲಿಲ್ಲವಲ್ಲ ಎಂಬ ಕೊರಗು ಎದೆಯಲ್ಲಿ ಹುತ್ತಗಟ್ಟುತ್ತಿತ್ತು.

Comments

Submitted by hema hebbagodi Sun, 06/23/2013 - 22:05

ನಿರೂಪಣೆ ಚೆನ್ನಾಗಿದೆ. ಆದರೆ ನನಗನ್ನಿಸಿತು ಇದನ್ನು ಇನ್ನೂ ಕಡಿಮೆ ಮಾತಿನಲ್ಲಿ ನಿಮಗೆ ಕಟ್ಟಿಕೊಡಲು ಸಾಧ್ಯವಿದೆ. ಕೆಲವೆಡೆ ಮಾತುಗಾರಿಕೆ ತುಸು ಹೆಚ್ಚಾಯಿತು. ಈ ಮಾತುಗಾರಿಕೆ ನಿರೂಪಣೆಯ ಧ್ವನಿಶಕ್ತಿಯನ್ನು ಮರೆಮಾಡುತ್ತದೆ.
Submitted by Mohan V Kollegal Sun, 06/23/2013 - 22:56

In reply to by hema hebbagodi

ಧನ್ಯವಾದಗಳು ಮೇಡಂ... ನಿಮ್ಮ ಸಲಹೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದಿನ ಬರಹಗಳಲ್ಲಿ ಪಾಲಿಸುತ್ತೇನೆ... ತಿದ್ದುಪಡಿಗೆ ವಂದನೆಗಳು... :)