ಸೃಷ್ಟಿ ಒಂದು ದೃಷ್ಟಿ ಹಲವು

ಸೃಷ್ಟಿ ಒಂದು ದೃಷ್ಟಿ ಹಲವು

ಚಿತ್ರ

ಸೃಷ್ಟಿ ಒಂದು ದೃಷ್ಟಿ ಹಲವು


ಸೃಷ್ಟಿ ಒಂದು ದೃಷ್ಟಿ ಹಲವು
------------------------------

ಈಚಿನ ರುದ್ರಪ್ರಯಾಗದ ಪ್ರವಾಹದ ದೃಷ್ಯಗಳನ್ನು ವಿವಿದ ಚಾನಲ್ ರವರು ತೋರಿಸುವಾಗ ಪದೆ ಪದೆ ಕಾಣುತ್ತಿದ್ದ ದೃಷ್ಯ , ಅ ಮಹಾಪ್ರವಾಹದಲ್ಲಿ ನಸುನಗುತ್ತ ನಿಂತಿದ್ದ ಶಿವನ ವಿಗ್ರಹ. ಗಂಗೆ ಬೋರ್ಗರೆಯುತ್ತ ಅವನನ್ನು ಆವರಿಸುತ್ತಿದ್ದಾಗಲು, ಅವನನ್ನು ಅಲ್ಲಿಂದ ಕದಲಿಸಲು ಯತ್ನಿಸುತ್ತ ಇದ್ದಾಗಲು ಅವನ ಮುಖದಲ್ಲಿ ಅದೆ ನಿರ್ಲಿಪ್ತ ನಗು. ಅದನ್ನು ಕಾಣುವಾಗ ಹಿಂದೊಮ್ಮೆ ಭಗೀರಥನೆಂಬ ಸೂರ್ಯವಂಶದ ಮಹಾರಾಜ ಗಂಗೆಯನ್ನು ಭೂಮಿಗೆ ತಂದಾಗ ಅವಳ ರಭಸ ತಡೆಯಲು ನಿಂತ ಶಿವನ ಪುರಾಣಕತೆಯ ಚಿತ್ರ ಕಣ್ಮುಂದೆ ನಿಲ್ಲುತ್ತಿತ್ತು. ಹಾಗೆಯೆ ಅದನ್ನು ಸಂಪದದಲ್ಲಿ ಹಾಕಿ ಕವನ ರಚಿಸುವರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರ ಎನ್ನುವ ಕುತೂಹಲದೊಡೆನೆ ಕಾಯುತ್ತಿದ್ದೆ. ನಾಗೇಶಮೈಸೂರುರವರಿಗೆ ಪದ್ಯ ರಚಿಸುವಂತೆ ಬೇಡಿಕೆ ಇಟ್ಟಿದ್ದೆ, ಆ ಕೋರಿಕೆಗೆ ಮನ್ನಣೆ ನೀಡಿ ನಾಗೇಶರು ತಮ್ಮ ಶೈಲಿಯಲ್ಲಿ ಕವನಗಳನ್ನು ರಚಿಸಿದರು, ಅವರಿಗಿಂತ ಮುಂಚೆಯೆ ವೆಂಕಟೇಶರು ಪ್ರತಿಕ್ರಿಯೆ ನೀಡಿದ್ದು ಖುಷಿ ನೀಡಿತು ಹಾಗೆ ಮತ್ತು ಕೆಲವರು ಸಹ ಪ್ರತಿಕ್ರಿಯಿಸಿದರು. ಅದನ್ನೆಲ್ಲ ಸಂಗ್ರಹ ರೂಪದಲ್ಲಿ ಇಲ್ಲಿ ಹಾಕುತ್ತಿರುವೆ.

ಸಪ್ತಗಿರಿಯವರ ದೃಷ್ಟಿ
-----------------------
ಅಂದು -
ಗಂಗೆಯ ಅಂಕೆಯಲ್ಲಿಟ್ಟ
ತಲೆಯಲ್ಲಿ ಜಾಗ ಕೊಟ್ಟು
ಶಿವ ಶಂಕರ -ಆದ
ಗಂಗಾಧರ..
-------------------------------------------
ಇಂದು -
ಪರ ಶಿವನ -ಹರನ
ಎತ್ತಿ-ಹೂತ್ತೊಯ್ಯುತಿರ್ವಳು ಗಂಗೆ
ಋಣ ಮುಕ್ತಳಾದಂಗೆ
ಹರಿವ ನೀರು -ಬೀಸೋ ಗಾಳಿಗೆ ಇಲ್ಲ ಅಂಕೆ
--------------------------------------------
ಹರ ಮುನಿದರೆ -ಹರಿ ಮುನಿದರೆ
ಗುರು ಕಾಯ್ವನು,
ಗಂಗೆ ಹರಿದರ-ಮುನಿದರ-
ಸುರಿದರ-ಜೀವ ಜಗತ್ತು ತತ್ತರ ..!!




 ನಾಗೇಶ ಮೈಸೂರು ಅವರ ದೃಷ್ಟಿ, ಸಿಂಗಪುರದಿಂದ

ಗಂಗಾವತಾರಣ (ಗಂಗಾ + ಅವತಾರ + ರಣ)
---------------------------------------------

ಬಾರೆನೆಂದತ್ತೆ ನಾನಂದು ಇಳೆಗೆ
ಸಿಡುಕಿ ಭೋರಿಟ್ಟೆ ರೊಚ್ಚು ಭುವಿಗೆ
ಹೆಡೆಮುರಿಕಟ್ಟಿ ಮುಡಿಗೆ ಮುಡಿದೆ
ಯಾರೋ ಭಗೀರಥನಿಗಿತ್ತೆ ಬಿಡದೆ!

ಒಲ್ಲದವಳನ್ನೆತ್ತಿ ಸಲ್ಲಾಪವೆಲ್ಲ ಬತ್ತೆ
ಏಕಾಕಿ ನರಳಿದರು ನೀನಿಲ್ಲಾ ಪತ್ತೆ
ಗಂಡಸಿಗೇಕಿರಬೇಕೋ ಗೌರಿ ದುಃಖ
ಯಾರು ಕೇಳಿದರಿಲ್ಲೆನ್ನಾ ಕಷ್ಟಸುಖ!

ಬಿಟ್ಟೆನ್ನ ಪಾಪನಾಶಿನಿಯ ಪಟ್ಟ ಕಟ್ಟಿ
ಯಾರದೆಲ್ಲ ಪಾಪವೆನ್ನ ಕೊರಳಸುತ್ತಿ
ನಿಷ್ಕರುಣೆಯಲ್ಲೆ ಮಾಡಿ ನೀರಪಾಲು
ಮೈಲಿಗೆ ಬೇಡೆನ್ನೆ ನ್ಯಾಯವೆ ಹೇಳು!

ಹಾಳಾಗಲಿ ತಿರುಗಿ ಒಯ್ಯಲೂ ಒಲ್ಲೆ
ಜಗವಿರುವವರೆಗೆ ನಾನಿರಬೇಕೇನಿಲ್ಲೆ?
ಲಯದೊಡೆಯ ತಾನೆ ನಿ ಉಕ್ಕಿಸಯ್ಯ
ತರಿಸಿಬಿಡು ತುಸು ಮುನ್ನವೆ ಪ್ರಳಯ!

ಸೃಷ್ಟಿ ಸ್ಥಿತಿಗಳೆಲ್ಲ ಕಳೆದಾಯ್ತು ಕಾಲ
ಭುವಿಯೆಂದೊ ಲಯವಾಗಬೇಕಿತ್ತಲ್ಲ
ನೀ ಮಾಡದೆಲೆ ಕರ್ತವ್ಯದಾ ಪ್ರಳಯ
ಸುಮ್ಮ ತಪ ಕೂಡೆ ಸರಿಯೆ ಶಿವಯ್ಯಾ?

ಮಿತಿ ಮೀರಿ ಹೋಯ್ತೊ ಮನ ತಾಳ್ಮೆ
ಬರಿ ಹೆಸರಷ್ಟೆ ಗಂಗಾಧರನಾ ಹಿರಿಮೆ
ಮೌನದೆ ಸಂಭಾಳಿಸಲೆಂತಾ ವಿವಾಹ
ಮರೆತುಬಿಟ್ಟೆಯಾ ನನದೂ ಪ್ರವಾಹ!

ಕೊನೆಗೂ ಅರಿಯದಾದೆ ಗಂಗೆ ದುಃಖ
ನಾ ಅತ್ತರೂ ಕಾಣದ ನೀರೆ ನನ್ನ ಸಖ
ಮೇರೆ ಮೀರಿ ಸಂಕಟ ನೆರೆಯಾ ರೂಪ
ಈ ನೆಲದೆ ನೀ ಲಯ ನಿನಗಿತ್ತ ಶಾಪ!


ಶ್ರೀಧರ್ ಬಂಡ್ರಿಯವರ ದೃಷ್ಟಿ
------------------------------
"ಅಂದು ತಲೆಯ ಮೇಲೆ ಏರಿಸಿಕೊಂಡಿದ್ದರಿಂದ,
 ಇಂದು ಕೊಚ್ಚಿಕೊಂಡು ಹೋಗುವಂತಾಯ್ತು ಶಿವನ ಪರಿಸ್ಥಿತಿ,
 ಪಾಪ!"

ಸಪ್ತಗಿರಿಯವರ ಕವನದಿಂದ ಪ್ರೇರಿತರಾದ ನಾಗೇಶಮೈಸೂರುರವರು ಮತ್ತೆ ಹೇಳುತ್ತಾರೆ
----------------------------------------------------------------------------------------------
01. ರುದ್ರಾವೇಷ!
ಅಂದಾಗಿ ರುದ್ರಾದಿರುದ್ರಾ ವೀರಭದ್ರ ಹಮ್ಮಿನಲಿ
ರೊಚ್ಚಿನಲಿಳಿದವಳಾವೇಶವ ಜುಟ್ಟಲೇ ತಡೆದ ಕಲಿ
ಅಚ್ಚರಿಗೆ ನೋಡೆ ನಂದಿಶ ಕೈ ಸೊಂಟಕಿಟ್ಟೆ ಗೌರೀಶ
ಸಲಿಲವಾಗ್ಹರಿಸೆ ಗಂಗೆಯ ಭಗೀರಥನ ಮನದಾಶ!

02. ಗಂಗಾ ರೋಷವೆ?
ಅರ್ಧನಾರೀಶ್ವರನೆನೆ ಮುಳುಗಿಸಿ ಮರಳಲರ್ಧ
ತಾ ಮಾತ್ರ ತಲೆಯೆತ್ತಿ ಬೀಗಿಹಳೆ ಮುಡಿಯಿಂದ
ಕಟ್ಟಿಟ್ಟರೂ ಜಟೆಯಲಿ ಕಟ್ಟೊಡೆಸಿದ ವೀರಾವೇಶ
ಅಚಲ ಶಿಲೆಯಾಗಿ ಕೂರಿಸಿಬಿಟ್ಟಿತೆ ಗಂಗಾರೋಷ!

03. ಕೂತೆ ನಿರ್ಲಿಪ್ತನಂತೆ...!
ಕೂತುಬಿಟ್ಟನೇಕೊ ಶಿವ ನಿರ್ಲಿಪ್ತ ಅರೆ ನಿಮಿಲಿತ
ಕಂಡೂ ಕಾಣದಂತೆ ಭಾಗೀರಥಿ ಮುನಿಸ ದುರಿತ
ಇದ್ದರು ಕೋಪ ತ್ರಿನೇತ್ರ ತೆರೆಯಲ್ಹೇಗೆ ಹಣೆಗಣ್ಣ
ಜಟೆ ಕೂತವಳ ಮೇಲದನು ಬಿಡಲ್ಹೇಗೆ ಮುಕ್ಕಣ್ಣ!


ಅದೇಕೊ ಆ ಚಿತ್ರಗಳು ನಾಗೇಶರನ್ನು ಕಾಡುವುದು ನಿಲ್ಲಿಸಿಲ್ಲ ಮತ್ತೆ ನೋಡಿ ಅವರ ಕವನ
----------------------------------------------------------------------------------------------
ಕಾದು ನವ ಭಗೀರತರ...!
--------------------------

ಇತಿಹಾಸವೊ ಪುರಾಣವೊ
ಛಲ ಬಿಡದ ಭಗೀರತ
ಹಲುಬಿಟ್ಟು ಬಯಸಿದ ಗಂಗೆ;
ನೂತನ ಭುವಿಯನುಭವಕೆ
ಹಿಗ್ಗಿನಿಂದೊರಟವಳ ರಣೋತ್ಸಾಹ
ರಭಸಾವೇಶ ನಿಯಂತ್ರಣಕೆ
ಬಿಚ್ಚಬೇಕಾಯ್ತೆ ಮುಡಿ ಪರಶಿವ -
ಹರಿಯಬಿಟ್ಟವಳ ಮೆಲುವಾಗಿ
ಕಟ್ಟಬೇಕಾಯ್ತೆ ಜಟೆಯಲಿ
ಲೋಕಹಿತ ಭಾವ!

ಇಂದಿಲ್ಲಾರಿಲ್ಲ ಭಗೀರತರು
ಕೇಳಲಾರು ಜನಹಿತ ಸ್ವಗತ..
ನೋಡರು ನೆರೆ ಪ್ರವಾಹ ಪ್ರಕೋಪ
ಬರಗಾಲದ ಶಾಪ ಬಿರುಕು ನೆಲ;
ಕಾದು ಕುಳಿತು ಕೋರಿದವನ
ಬೇಸತ್ತು ಕುಸಿದನೆ ಗಂಗಾಧರ
ಹತಾಶೆಗಿತ್ತನೆ ಅಣತಿ
ಕಡಿವಾಣವಿಡದೆ ಜಟೆಯೊಳಗೆ
ಕಣ್ಮುಚ್ಚಿ ನೋಡುತ ಪೂರ್ಣಾಹುತಿ?
ಹೀಗೊಂದೆಚ್ಚರಿಸೊ ಪ್ರಯೋಗವೆ
ಜಗ ಲಯವಾಗಿಸುವ ರೀತಿ..?
ಹಂತ ಹಂತವಾಗಿ
ನುಂಗುತ ಸೃಷ್ಟಿ, ಸ್ಠಿತಿ
ಪ್ರಕೃತಿ
ಮಿಕ್ಕುಳಿಸೊ ಪ್ರಳಯ
ಘೋರ ವಾಸ್ತವ ಲಯಕೆ
ಕೂತಲ್ಲೆ ಶಿವನೂ ಅಸಹಾಯಕ!

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

ಕಡೆಗೊಮ್ಮೆ ಗಣೇಶರು ಎಲ್ಲವನ್ನು ಬೇರೆಯದ ಆದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ
------------------------------------------------------------------------------------
ಭೋರ್ಗರೆದು ಧುಮುಕಿದ ಗಂಗೆಯನ್ನು ಅಂದು
ಶಿವ(ಪ್ರಕೃತಿ) ತನ್ನ ಜಟೆ(ಮರ ಗಿಡ)ಯಿಂದ ಬಂಧಿಸಿ, ನಿದಾನಕ್ಕೆ ಹರಿಯಲು ಬಿಟ್ಟದ್ದು.
ಈಗ ಗಂಗೆಯ ಹರಿವಿನ ಉದ್ದಕ್ಕೂ ಜಟೆಯನ್ನು ಬೋಳಿಸಿ,
ಅಂಗಡಿ,ಹೋಟಲ್..ಬೆಳೆಸಿ ಗಂಗೆಗೇ ಸವಾಲ್ ಹಾಕಿದ್ದಾರೆ.
ಎತ್ತರೆತ್ತರ ಕಾಂಕ್ರಿಟ್ ಶಿವನನ್ನು ನಿರ್ಮಿಸಿ "ಒಂ ನಮಃ ಶಿವಾಯ" ಎನ್ನುವ ಬದಲು
ಮುಗಿಲೆತ್ತರಕ್ಕೆ ಮರವನ್ನು ಬೆಳೆಯಲು ಬಿಟ್ಟು ಅದರಲ್ಲಿ ಶಿವನನ್ನು ಕಾಣಬೇಕು.

ಹೀಗೆ ಒಂದೆ ಸೃಷ್ಟಿ ನೋಡುವ ಕಣ್ಣುಗಳಲ್ಲಿ ಕಾಣುವಾಗ ಹಲವಾರು ದೃಷ್ಟಿ.
ಎಲ್ಲರ ಪ್ರಯತ್ನಕ್ಕೆ ನಿಮ್ಮ ಮೆಚ್ಚುಗೆ ಹಾಗು ಚಪ್ಪಾಳೆ ಇರಲಿ



 

Rating
No votes yet

Comments

Submitted by kavinagaraj Tue, 06/25/2013 - 22:00

ರುದ್ರಮನೋಹರವೆಂದರೆ ಇದೇನೇ!! ಇದಕೆಲ್ಲಾ ಕಾರಣನು ಈ ಮನುಜನೇ!! ಲಯಕರ್ತ, ಸೃಷ್ಟಿಕರ್ತ, ಸ್ಥಿತಿಕರ್ತನೂ ಅವನೇ!!! ಹೊರಗೆಲ್ಲಾ ಸುತ್ತಿ ಬಂದಿಳಿಯುವುದು ಅಲ್ಲೇ!!