೫೩. ಶ್ರೀ ಲಲಿತಾ ಸಹಸ್ರನಾಮ ೧೫೪ರಿಂದ ೧೫೭ನೇ ನಾಮಗಳ ವಿವರಣೆ

Submitted by makara on Tue, 06/25/2013 - 08:59

ಲಲಿತಾ ಸಹಸ್ರನಾಮ ೧೫೪ - ೧೫೭

Nirupādhiḥ निरुपाधिः (154)

೧೫೪. ನಿರುಪಾಧಿಃ

           ಆಕೆಯು ಉಪಾಧಿ ಇಲ್ಲದವಳಾಗಿದ್ದಾಳೆ; ಉಪಾಧಿ ಎಂದರೆ ಪರಿಮಿತಿ. ಉಪಾಧಿಯ ದೆಸೆಯಿಂದಾಗಿ ಅಪರಿಮಿತವಾದ ವಸ್ತುವು ಪರಿಮಿತಿ ಹೊಂದಿದಂತೆ ಕಾಣುವುದು. ಉದಾಹರಣೆಗೆ ಆಕಾಶವು ಪರಿಮಿತಿಯುಳ್ಳದ್ದೆಂದು ಕಾಣುತ್ತದೆ; ಆದರೆ ವಾಸ್ತವವಾಗಿ ಅದು ಅನಂತವಾದದ್ದು ಅಥವಾ ಪರಿಮಿತಿಯಿಲ್ಲದ್ದು. ಉಪಾಧಿಯನ್ನು ಒಂದು ವಸ್ತುವಿಗೆ ಇಲ್ಲದೇ ಇರುವ ಗುಣವನ್ನು ಆರೋಪಿಸುವುದು ಎಂದೂ ಕೂಡಾ ವ್ಯಾಖ್ಯಾನಿಸಬಹುದು. ಉದಾಹರಣೆಗೆ, ಸ್ಪಟಿಕದೊಂದಿಗೆ ಇರಿಸಲ್ಪಟ್ಟ ದಾಸವಾಳದ ಹೂವು; ಇಲ್ಲಿ ಸ್ಪಟಿಕಕ್ಕೆ ಯಾವುದೇ ವಿಧವಾದ ಬಣ್ಣವಿರುವುದಿಲ್ಲ. ದಾಸವಾಳದ ಕೆಂಪು ಬಣ್ಣದಿಂದಾಗಿ ಸ್ಪಟಿಕವೂ ಕೂಡಾ ಕೆಂಪಾಗಿ ಕಾಣಿಸುವುದು; ಇದನ್ನೇ ಉಪಾಧಿ ಎನ್ನುವುದು. ಉಪಾಧಿ ಎನ್ನುವುದನ್ನು ಹೀಗೆ ನಿಷ್ಪತ್ತಿಗೊಳಿಸಬಹುದು. ಉಪ ಎಂದರೆ ಹತ್ತಿರ ಮತ್ತು ಆಧಿ ಎಂದರೆ ಗುಣಗಳು. ಅಜ್ಞಾನವು ಉಪಾಧಿ, ಏಕೆಂದರೆ ಅಜ್ಞಾನಿಯೊಬ್ಬನ ಅಜ್ಞಾನವು ಅವನ ನಡೆ-ನುಡಿಗಳಲ್ಲಿ ಪ್ರತಿಫಲಿತವಾಗುವುದು. ದೇವಿಯು ಈ ರೀತಿಯ ಉಪಾಧಿಗಳನ್ನು ಹೊಂದಿಲ್ಲದೇ ಇರುವವಳು ಮತ್ತು ಆಕೆಯು ಪರಿಮಿತಿಯಿಲ್ಲದವಳು. ಬ್ರಹ್ಮವು ಎಲ್ಲಾ ವಿಧವಾದ ಮಿತಿಗಳಿಗೆ ಅತೀತವಾದದ್ದು. ದೇವಿಯು ವರ್ಣರಹಿತಳಾಗಿದ್ದಾಳೆ ಮತ್ತು ಪಾರದರ್ಶಕವಾಗಿದ್ದಾಳೆ ಮತ್ತು ಆಕೆ ಸ್ಪಟಿಕದಂತೆ ಕಾಣಿಸುತ್ತಾಳೆ. ಸಹಸ್ರನಾಮದ ಧ್ಯಾನ ಶ್ಲೋಕಗಳು ಶಕ್ತಿಯು ಕೆಂಪಾದ ಬಣ್ಣವನ್ನು ಹೊಂದಿದವಳೆಂದು ಹೇಳುತ್ತವೆ. ಯಾವಾಗ ಆಕೆಯು ಶಿವನ ಬಳಿಯಲ್ಲಿ ಕುಳಿತುಕೊಳ್ಳುತ್ತಾಳೆಯೋ ಆಗ ಅವನೂ ಕೂಡಾ ಕೆಂಪು ಮೈಕಾಂತಿ ಉಳ್ಳವನಾಗಿ ಕಾಣುತ್ತಾನೆ. ದೇವಾನುದೇವತೆಗಳು ಈ ದೃಶ್ಯವನ್ನು ನೋಡಿ ಉದಯಿಸುವ ಸೂರ್ಯನೆನ್ನುವ ಭ್ರಮೆಗೊಳಗಾಗುತ್ತಾರೆ, ಇದು ಕೂಡಾ ಉಪಾಧಿಯೇ.

Nīriśvarā नीरिश्वरा (155)

೧೫೫. ನಿರೀಶ್ವರಾ

           ಈಶ್ವರಾ ಎಂದರೆ ಶ್ರೇಷ್ಠವಾದ/ಉನ್ನತವಾದ ಅಥವಾ ಒಡೆಯ. ದೇವಿಗಿಂತ ಉನ್ನತವಾದವರು ಅಥವಾ ವರಿಷ್ಠರಾದವರು ಯಾರೂ ಇಲ್ಲ, ಆಕೆಯೇ ಪರಮ ಪಾಲಕಿ. ಶಿವನು ಆಕೆಗಿಂತ ಉನ್ನತವಾದ ಸ್ಥಾನದಲ್ಲಿದ್ದಾನೆಂದು ಒಬ್ಬರು ವಾದ ಮಾಡಬಹುದು. ಶಿವನಿಗೆ ಕೆಲವು ನಿರ್ಧಿಷ್ಟವಾದ ಕಾರ್ಯಗಳಿವೆ ಅದರಲ್ಲಿ ತನ್ನ ಪ್ರಕಾಶ ರೂಪದಿಂದ ಶಕ್ತಿಯನ್ನು ಸೃಷ್ಟಿಸುವುದು; ಅವನು ಸೃಷ್ಟಿ ಕ್ರಿಯೆಯಲ್ಲಿ ನಿಷ್ಕ್ರಿಯ ಪಾಲುದಾರನಾಗಿದ್ದರೂ ಕೂಡಾ ಅವನು ಸ್ವಯಂ ಆಗಿ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ. ಶಿವನು ಶಕ್ತಿಯ ಆಡಳಿತದಲ್ಲಿ (ವಿಮರ್ಶಾ ರೂಪವು ಶಕ್ತಿ ಎಂದು ಕರೆಯಲ್ಪಡುತ್ತದೆ) ತಲೆ ಹಾಕುವುದಿಲ್ಲ. ಆದ್ದರಿಂದ ಆಕೆಗಿಂತ ಉನ್ನತವಾದವರು ಯಾರೂ ಇಲ್ಲ ಎಂದು ಹೇಳಲಾಗಿದೆ.

           ಈ ನಾಮಕ್ಕೆ  ಅನೇಕ ವ್ಯಾಖ್ಯಾನಗಳಿದ್ದರೂ ಕೂಡಾ ಇಲ್ಲಿ ಬ್ರಹ್ಮದ ವಿವರಣೆಗೆ ಸೂಕ್ತವಾದ ಅರ್ಥವನ್ನು ಕೊಡುವ ವ್ಯಾಖ್ಯಾನವನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಬ್ರಹ್ಮದ ಲಕ್ಷಣಗಳನ್ನು ಕುರಿತಾಗಿ ಚರ್ಚಿಸುತ್ತಿರುವಾಗ, ಅದಕ್ಕಿಂತ ಭಿನ್ನವಾದ ಅರ್ಥಗಳನ್ನು ಕೊಡುವ ವ್ಯಾಖ್ಯಾನಗಳನ್ನು ವಿಶ್ಲೇಷಿಸುವುದು ಸಮಂಜಸವೆನಿಸುವುದಿಲ್ಲ.

           ಈ ನಾಮದೊಂದಿಗೆ ದೇವಿಯ ನಿರ್ಗುಣ ಬ್ರಹ್ಮದ ಲಕ್ಷಣಗಳ ವಿವರಣೆಯು ಕೊನೆಗೊಳ್ಳುತ್ತದೆ. ಬ್ರಹ್ಮಕ್ಕೆ ಯಾವುದೇ ಗುಣ-ಲಕ್ಷಣಗಳಿಲ್ಲದಿದ್ದರೂ ಒಬ್ಬರು ವಾಕ್-ದೇವಿಗಳೇಕೆ ಬ್ರಹ್ಮದ ಗುಣಗಳನ್ನು ವರ್ಣಿಸುತ್ತಿದ್ದಾರೆ ಎಂದು ಚಕಿತರಾಗಬಹುದು! ಈ ಮೊದಲೇ ತಿಳಿಸಿದಂತೆ ಸಾಮಾನ್ಯ ಮನುಷ್ಯನಿಗೆ, ಬ್ರಹ್ಮವು ಇದಲ್ಲ ಎನ್ನುವುದರ ಮೂಲಕ ವಿವರಿಸಬಹುದು ಏಕೆಂದರೆ ಬ್ರಹ್ಮವು ಗ್ರಹಣೇಂದ್ರಿಯಗಳಿಂದ ಅರಿಯಲಸಾಧ್ಯವಾದದ್ದು. ಆದ್ದರಿಂದ ಪೂರ್ವ ಪ್ರತ್ಯಯಗಳಾದ ನಿಸ್ ಅಥವಾ ನಿರ್ (ಇಲ್ಲ/ರಹಿತ) ಎನ್ನುವುಗಳನ್ನು ೧೩೨-೧೫೫ರವರೆಗಿನ ಎಲ್ಲಾ ನಾಮಗಳಲ್ಲಿ ಉಪಯೋಗಿಸಲಾಗಿದೆ; ೧೪೧ನೇ ನಾಮವನ್ನು ಹೊರತುಪಡಿಸಿ. ಬ್ರಹ್ಮದ ಕುರಿತಾಗಿ ಜ್ಞಾನವು ’ಅದು ಅಲ್ಲ’ ಎನ್ನುವುದರಿಂದ ಪ್ರಾರಂಭವಾಗಿ ’ಅದು ನಾನೇ’ ಎನ್ನುವುದರೊಂದಿಗೆ ಕೊನೆಗೊಳ್ಳುತ್ತದೆ. ಮೊದಲನೆಯದು ನಕಾರಾತ್ಮಕವಾದುದಾದರೆ ಕೊನೆಯದು ಸಕಾರಾತ್ಮಕವಾದುದು ಅಥವಾ ದೃಢವಾದದ್ದು. ಯಾವುದೇ ಹೇಳಿಕೆಯು ದೃಢವಾದದ್ದೆಂದು ಸಾಧಿಸಬೇಕಾದರೆ ಆ ವಿಷಯದ ಕುರಿತಾಗಿ ಒಬ್ಬನಿಗೆ ಕೂಲಂಕುಷವಾದ ಜ್ಞಾನವು ಇರಬೇಕಾಗುತ್ತದೆ. ೧೫೬ರಿಂದ ೧೯೫ನೇ ನಾಮಗಳು ಆಕೆಯ ನಿರಾಕಾರ ರೂಪವನ್ನು ಪೂಜಿಸುವುದರಿಂದ ಉಂಟಾಗುವ ಫಲಗಳನ್ನು ಕುರಿತಾಗಿ ಚರ್ಚಿಸುತ್ತದೆ.

Nīrāgā नीरागा (156)

೧೫೬. ನಿರಾಗಾ

          ರಾಗವೆಂದರೆ ಆಸೆ; ದೇವಿಯು ಆಶಾ ರಹಿತಳಾಗಿದ್ದಾಳೆ. ಈ ನಾಮ ಮತ್ತು ಈ ಹಿಂದಿನ ಗುಂಪಿನ ಕೆಲವು ನಾಮಗಳು ಒಂದೇ ತೆರನಾಗಿ ಕಂಡರೂ ವಾಸ್ತವವಾಗಿ ಅವು ಹಾಗಿಲ್ಲ. ಅಂತಃಕರಣವು ನಾಲ್ಕು ವಿಧವಾದ ವಸ್ತುಗಳನ್ನು ಒಳಗೊಂಡಿದೆ, ಅವೆಂದರೆ ಮನಸ್ಸು, ಬುದ್ಧಿ, ಚಿತ್ತ/ಪ್ರಜ್ಞೆ (ಮನಸ್ಸಿನಲ್ಲಿ ರೂಪಾಂತರ ಹೊಂದಿದ ಸ್ಥಿತಿಯಲ್ಲಿರುತ್ತದೆ) ಮತ್ತು ಅಹಂಕಾರ. ಈ ನಾಲ್ಕೂ ವಸ್ತುಗಳು ಯಾವುದೇ ವಿಧದಲ್ಲಿ ಬ್ರಹ್ಮ ಅಥವಾ ಆತ್ಮಕ್ಕೆ ಸಂಭಂದಿಸಿಲ್ಲ. ಆದರೆ ಅಂತಃಕರಣದ ಈ ಅಂಶಗಳು ಆತ್ಮಸಾಕ್ಷಾತ್ಕಾರಕ್ಕೆ ಇರುವ ತಡೆಗಳಾಗಿವೆ. ಅಂತಃಕರಣಕ್ಕೆ ಹೊರತಾಗಿ ಇನ್ನೂ ಆರು ಅಡಚಣೆಗಳಿವೆ ಅವೆಂದರೆ ಆಸೆ, ಕೋಪ, ದ್ವೇಷ, ಗೊಂದಲ, ಗರ್ವ ಮತ್ತು ಹೊಟ್ಟೆಕಿಚ್ಚು. ಈ ಆರು ವಿಷಯಗಳ ಕುರಿತಾಗಿ ವಿವರಿಸುವ ಅವಶ್ಯಕತೆಯಿಲ್ಲ, ಏಕೆಂದರೆ ಅವುಗಳ ಹೆಸರೇ ಅವು ಎಷ್ಟು ಭಯಂಕರವಾದವುಗಳೆನ್ನುವುದನ್ನು ಸೂಚಿಸುತ್ತದೆ. ಈ ನಾಮಗಳು ಅವುಗಳಿಂದ ಹೇಗೆ ಮುಕ್ತರಾಗ ಬೇಕೆನ್ನುವುದನ್ನು ವಿವರಿಸುತ್ತವೆ. ಮೊದಲನೆಯದಾಗಿ, ವಾಕ್ ದೇವಿಗಳು ಬ್ರಹ್ಮದ ಪರಿಕಲ್ಪನೆಯನ್ನು ಕುರಿತಾಗಿ ಹೇಳುತ್ತವೆ ಮತ್ತು ಈಗ ಅವು ಆ ಪರಬ್ರಹ್ಮವನ್ನು ಹೇಗೆ ಅರಿಯಬೇಕು ಎನ್ನುವುದರ ಕುರಿತಾಗಿ ವಿವರಿಸುತ್ತಾ ಸಾಗುತ್ತಿವೆ; ಇಲ್ಲಿ ಆತ್ಮ ಸಾಕ್ಷಾತ್ಕಾರದೆಡೆಗೆ ಹಂತಹಂತವಾಗಿ ಸಾಗುವ ಮಾರ್ಗದರ್ಶನವಿದೆ.

Rāgamathanī रागमथनी (157)

೧೫೭. ರಾಗಮಥನೀ

          ದೇವಿಯು ತನ್ನ ಭಕ್ತರ ಆಸೆಗಳನ್ನು ನಾಶಮಾಡುತ್ತಾಳೆ. ಇದು ದೇವಿಯ ಪರಬ್ರಹ್ಮ ರೂಪವನ್ನು (ನಿರಾಕಾರ ರೂಪವನ್ನು) ಆರಾಧಿಸುವ ಮೂಲಕ ಹೊಂದಲ್ಪಡುವ ಹಲವಾರು ಒಳಿತುಗಳಲ್ಲಿ ಮೊದಲನೆಯದು. ಆಸೆ ಎನ್ನುವುದು ಆಧ್ಯಾತ್ಮಿಕ ಮಾರ್ಗದಲ್ಲಿನ ಮೂಲ ಅಡಚಣೆಯಾಗಿದೆ ಮತ್ತು ಇದು ವ್ಯಕ್ತಿಯನ್ನು ಪ್ರಾಪಂಚಿಕ ಬಂಧನಗಳಿಗೆ ಕಟ್ಟಿ ಹಾಕುತ್ತದೆ.

          ಪಾತಂಜಲಿಯ ಯೋಗ ಸೂತ್ರ (೨.೩) ಹೇಳುತ್ತದೆ, " ಒಬ್ಬನ ಜೀವನದಲ್ಲಿ ಐದು ವಿಧವಾದ ನೋವನ್ನುಂಟು ಮಾಡುವ ಅಡಚಣೆಗಳಿವೆ; ಅವುಗಳೆಂದರೆ - ಅಜ್ಞಾನ ಮತ್ತದರಿಂದ ಉಂಟಾಗುವ ಪರಿಣಾಮಗಳು. ಆ ಪರಿಣಾಮಗಳೆಂದರೆ ಅಹಂಕಾರ, ಮೋಹ, ದ್ವೇಷ, ಬದುಕಿಗೆ ಜೋತು ಬೀಳುವುದು."

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 154-157 http://www.manblunder.com/2009/09/lalitha-sahasranamam-154-157.html  ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
No votes yet

Comments

nageshamysore

Wed, 06/26/2013 - 05:18

ಶ್ರೀಧರರೆ, 154-157 ತಮ್ಮ ಅವಗಾಹನೆ / ಪರಿಶೀಲನೆಗೆ ಸಿದ್ದ - (ರಾತ್ರಿಯೆ ಪ್ರಥಮ ಅವೃತ್ತಿ ಸಿದ್ದವಿತ್ತು, ಆದರೆ ಹಿಂದಿನ ಕಂತಲ್ಲಿ ಹೆಚ್ಚು ತಿದ್ದುಪಡಿ ಬರಬಹುದೆಂಬ ನಿರೀಕ್ಷೆಯಲ್ಲಿ ಪೂರ್ತಿ ತಿದ್ದದೆ ಕಾದಿರಿಸಿಟ್ಟಿದ್ದೆ; ಆಮೇಲೆ ನಿದ್ರಾವಶನಾಗಿ ಮಲಗಿಬಿಟ್ಟೆ, ಮತ್ತೆ ಎದ್ದಿದ್ದೂ ತಡವಾಗಿ ಹೋಯ್ತು :-)
ಈ ಬಾರಿ ಕೆಲವು ಪದಗಳ ಒಟ್ಟುಗೂಡಿಸಿದ ಜೋಡನೆ ಪ್ರಯೋಗ ಸರಿಯಿದೆಯೆ ಎನ್ನುವ ಅನುಮಾನವಿದೆ. ನಿಮ್ಮ ಪರಿಶೀಲನೆಯ ನಂತರ ಅಗತ್ಯ ರೀತಿಯಲ್ಲಿ ತಿದ್ದೋಣ - ನಾಗೇಶ ಮೈಸೂರು

ಲಲಿತಾ ಸಹಸ್ರನಾಮ ೧೫೪ - ೧೫೭
೧೫೪. ನಿರುಪಾಧಿಃ  
ಸ್ಪಟಿಕ ಶುಭ್ರ ಪಾರದರ್ಶಕ ಲಲಿತೆ ವರ್ಣರಹಿತೆ ರೋಹಿತೆ
ಜ್ಞಾನಾಜ್ಞಾನಾತೀತೆ ಅಪರಿಮಿತೆ ಪ್ರತಿಫಲನವಿರದ ಮಾತೆ
ಕಣ್ಣಿಗೆ ಕಾಣಲಷ್ಟೆ ಉಪಾಧಿ ಅನಂತಾಗಸದ ತರ ತಳಹದಿ
ಸರ್ವಮಿತಿಗತೀತ ಬ್ರಹ್ಮವೆ ಲಲಿತೆ, ನಿರುಪಾಧಿಯೆ ಪರಿಧಿ!

[ ಜ್ಞಾನಾಜ್ಞಾನಾತೀತೆ = (ಜ್ಞಾನ+ಅಜ್ಞಾನ+ಅತೀತೆ) ಎನ್ನುವ ಅರ್ಥದಲ್ಲಿ ಬಳಸಿದ್ದು ]

೧೫೫. ನಿರೀಶ್ವರಾ  
ಗುಣ ಲಕ್ಷಣವಿರದ ಬ್ರಹ್ಮಕೆ ವರ್ಣಿಸಲ್ಹೇಗೊ ಗುಣ ಲಕ್ಷಣ
ಗುಣಗಳಲ್ಲವೆನ್ನುತಲೆ ಅದು ನಾನೆ ಎಂದು ಹೇಳುವ ಗುಣ
ಪರಮಪಾಲಕಿ ವರಿಷ್ಟೆ ಒಡತಿಯಾಗೆಲ್ಲ ಸೃಷ್ಟಿ ಸ್ಥಿತಿ ಲಯ
ಶಕ್ತಿಯಾಡಳಿತದಲಿ ಶಿವನೂ ವೀಕ್ಷಕನಷ್ಟೆ ಲಲಿತಾಮಯ!

೧೫೬. ನಿರಾಗ  
ಅಂತಃಕರಣದಂತರ್ಗತ ಬುದ್ಧಿ ಮನಸು ಚಿತ್ತಾ ಅಹಂಕಾರ
ಆಸೆ ಕೋಪ ಹೊಟ್ಟೆಕಿಚ್ಚು ಗೊಂದಲ ಗರ್ವ ದ್ವೇಷ ಜತೆಗಾರ
ಅಂತಃಕರಣ ಅಡಚಣೆ ಜೋಡಿ ಬಿಡದಾ ಆತ್ಮ ಸಾಕ್ಷಾತ್ಕಾರ
ರಾಗಮುಕ್ತರಾಗೆ ಆಶಾರಹಿತ ದೇವಿ ತೆರೆಯಳೆ ಬ್ರಹ್ಮದ್ವಾರ!

೧೫೭. ರಾಗಮಥನೀ  
ಅಜ್ಞಾನವೆ ಅಡಚಣೆ, ಅಡ್ಡ ಪರಿಣಾಮಗಳೆ ಪಾತಾಳಕೆ ಮೇನೆ
ಅಹಂಕಾರ ಮೋಹ ದ್ವೇಷ, ಜೋತುಬಿದ್ದ ಸಂಸಾರದ ಗೋಣೆ
ಬಿಡಿಸೆ ಪ್ರಾಪಂಚಿಕ ಬಂಧನ, ಭಕ್ತರಾಸೆ ನಶಿಸೊ ದೇವಿಗಮನ
ಆಧ್ಯಾತ್ಮಿಕ ಪಥ ಕುತ್ತ ನಿವಾರಿಸುತ, ಪರಬ್ರಹ್ಮದತ್ತಾ ಯಾನ!

ನಾಗೇಶರೇ, ನಿಮ್ಮ ಕವನಗಳು ಕಂತಿನಿಂದ ಕಂತಿಗೆ ಸರಳವಾಗಿ ಮತ್ತು ಉತ್ತಮವಾಗಿ ಮೂಢಿ ಬರುತ್ತಿವೆ. ನಿಮ್ಮ ಕವನ ಹೆಣೆಯುವ ನಾಗಾಲೋಟದ ಮುಂದೆ ನನ್ನದು ಆಮೆ ನಡಿಗೆಯಾಗಿದೆ. ಇರಲಿ, ಇದರಲ್ಲಿ ಹೆಚ್ಚಿನ ದೋಷಗಳೇನಿಲ್ಲ; ಒಂದೆರಡು ಕಣ್ತಪ್ಪಿನ ದೋಷಗಳು ಹೊರತಾಗಿ. ಅವು ಹೀಗಿವೆ.
೧೫೬. ನಿರಾಗ
ಅಂತಃಕರಣದಂತರ್ಗತ ಬುದ್ಧಿ ಮನಸು ಚಿತ್ತಾ ಅಹಂಕಾರ
ಚಿತ್ತಾ = ಚಿತ್ತ (ದೀರ್ಘದ ಅವಶ್ಯಕತೆಯಿಲ್ಲ)
.........
...........
ರಾಗಮುಕ್ತರಾಗೆ ಆಶಾರಹಿತ ದೇವಿ ತೆರೆಯಳೆ ಬ್ರಹ್ಮದ್ವಾರ!
ತೆರೆಯಳೆ=ತೆರೆಯಳೇ (ಇಲ್ಲಿ ದೀರ್ಘವಿದ್ದರೆ ಒತ್ತು ಕೊಟ್ಟಂತಾಗುತ್ತದೆ)

೧೫೭. ರಾಗಮಥನೀ
.......................................................
ಅಹಂಕಾರ ಮೋಹ ದ್ವೇಷ, ಜೋತುಬಿದ್ದ ಸಂಸಾರದ ಗೋಣೆ
ಗೋಣೆ - ಇದನ್ನು ಯಾವ ಅರ್ಥದಲ್ಲಿ ಬಳಸಿದ್ದೀರ ಸ್ವಲ್ಪ ವಿವರಿಸಿ
ಬಿಡಿಸೆ ಪ್ರಾಪಂಚಿಕ ಬಂಧನ, ಭಕ್ತರಾಸೆ ನಶಿಸೊ ದೇವಿಗಮನ
ನಶಿಸೊ-ಇಲ್ಲಿ ಪೂರೈಸೋ ದೇವಿಗಮನ ಎಂದರೆ ಸೂಕ್ತವಾಗುತ್ತದೆ ಎಂದುಕೊಳ್ಳುತ್ತೇನೆ. ಇಲ್ಲದಿದ್ದ ಪಕ್ಷದಲ್ಲಿ ವಿರುದ್ಧಾತ್ಮಕ ಅರ್ಥಕೊಡುತ್ತದೆ.
ಆಧ್ಯಾತ್ಮಿಕ ಪಥ ಕುತ್ತ ನಿವಾರಿಸುತ, ಪರಬ್ರಹ್ಮದತ್ತಾ ಯಾನ!
ಪಥ=ಪಥದಿ; ಮತ್ತು ಪರಬ್ರಹ್ಮದತ್ತಾ=ಪರಬ್ರಹ್ಮದತ್ತ ಮಾಡಿ.
ಶುಭದಿನ, ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ.

ನಾಗೇಶರೇ, ನನಗೆ ದಿನಕ್ಕೆ ಒಂದು ಕಂತನ್ನೇ ಸರಿಯಾಗಿ ಅನುವಾದ ಮಾಡಲಾಗುತ್ತಿಲ್ಲ; ಅಂತಹದರಲ್ಲಿ ನೀವು ಇದರಲ್ಲಿರುವ ಸಾರವನ್ನು ಗ್ರಹಿಸಿ ಪದ್ಯವನ್ನು ಹೆಣೆಯುವುದಲ್ಲದೇ; ಸಂಪದದಲ್ಲಿನ ಎಲ್ಲಾ ಬರಹಗಳನ್ನು ಓದಿ ಅದಕ್ಕೂ ಸೂಕ್ತವಾಗಿ ಕವನ/ಬರಹಗಳ ಮೂಲಕ ಪ್ರತಿಕ್ರಿಯಿಸುವುದಲ್ಲದೇ ನೀವೂ ಸಹ ಕವನ/ಬರಹಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ಸೋಜಿಗವೆನಿಸುತ್ತದೆ. ಇದರೊಂದಿಗೆ ನಿಮ್ಮ ದೈನಂದಿನ ಕಾರ್ಯಕಲಾಪಗಳನ್ನು ಹೇಗೆ ನಿಭಾಯಿಸುತ್ತೀರೋ?

ಶ್ರೀಧರರೆ, ನಿಮ್ಮ ಸಲಹೆಗಳನ್ನು (156/157) ಸೇರಿಸಿದ ತಿದ್ದುಪಡಿ ಇಲ್ಲಿದೆ. 'ಪೂರೈಸೋ' ಬದಲು 'ಪೊರೆಯೊ' ಎಂದಿದ್ದೇನೆ. ಹಾಗೆ 'ಗೋಣೆ' ಪ್ರಯೋಗದ ವಿವರಣೆಯೂ ಇದೆ. ಈಗ ಸರಿಕಂಡೀತೆ ನೋಡಿ.

- ನಿಮ್ಮ ಸಮಯದ ಕುರಿತ ಪ್ರಶ್ನೆಗೆ ಉತ್ತರ: ಈ ಲಲಿತಾ ಕವನಗಳು, ವಿಮರ್ಶೆ ಇತ್ಯಾದಿ ಬರೆಯುವುದು ಸಾಮಾನ್ಯವಾಗಿ ಸಣ್ಣಪುಟ್ಟ ಬಿಡುವು ಸಿಕ್ಕಾಗ (ಊಟದ ಹೊತ್ತ ಬಿಡುವು, ಟ್ರೈನು/ ಬಸ್ಸಲಿದ್ದಾಗ ಇತ್ಯಾದಿ). ಹೀಗಾಗಿ ಪ್ರತಿ ಬಾರಿಯು ಸ್ವಲ್ಪಸ್ವಲ್ಪವೆ ತಯಾರಾಗುವ ಪಾಕ. ಕೆಲವೊಮ್ಮೆ ಈ ಕಾರಣದಿಂದಲೆ ತಪ್ಪುಗಳು ನುಸುಳಿದರೂ, ಮೂಲ ಅವೃತ್ತಿ ಸೃಷ್ಟಿಸಲು ತುಸು ವೇಗ ಸಿಗುತ್ತದೆ. ಉಳಿದಂತೆ ಈಗ ಜೂನು - ಸ್ಕೂಲಿಗೆ ರಜೆ - ಹೀಗಾಗಿ ಮಗನ ಜತೆ ದಿನಾ ಕೂತು ಮಾಡುವ / ಮಾಡಿಸುವ ಹೊಂವರ್ಕ್ ಇತ್ಯಾದಿಗೂ ರಜೆ - ಅರ್ಥಾತ್ ಸಂಜೆ ತುಸು ಹೆಚ್ಚು ಸಮಯ ಸಿಗುತ್ತಿದೆ. ಬಹುಶಃ ಮುಂದಿನ ವಾರದಿಂದ ನಾನು ಮತ್ತೆ ಸಹ ಸಮಯದ ಹಿಂದೆ ಬೀಳಬೇಕಾಗುತ್ತದೆಂದು ಕಾಣುತ್ತದೆ!
- ನಾಗೇಶ ಮೈಸೂರು

೧೫೬. ನಿರಾಗ
ಅಂತಃಕರಣದಂತರ್ಗತ ಬುದ್ಧಿ ಮನಸು ಚಿತ್ತ ಅಹಂಕಾರ
ಆಸೆ ಕೋಪ ಹೊಟ್ಟೆಕಿಚ್ಚು ಗೊಂದಲ ಗರ್ವ ದ್ವೇಷ ಜತೆಗಾರ
ಅಂತಃಕರಣ ಅಡಚಣೆ ಜೋಡಿ ಬಿಡದಾ ಆತ್ಮ ಸಾಕ್ಷಾತ್ಕಾರ
ರಾಗಮುಕ್ತರಾಗೆ ಆಶಾರಹಿತ ದೇವಿ ತೆರೆಯಳೇ ಬ್ರಹ್ಮದ್ವಾರ!

೧೫೭. ರಾಗಮಥನೀ
ಅಜ್ಞಾನವೆ ಅಡಚಣೆ, ಅಡ್ಡ ಪರಿಣಾಮಗಳೆ ಪಾತಾಳಕೆ ಮೇನೆ
ಅಹಂಕಾರ ಮೋಹ ದ್ವೇಷ, ಜೋತುಬಿದ್ದ ಸಂಸಾರದ ಗೋಣೆ
ಬಿಡಿಸೆ ಪ್ರಾಪಂಚಿಕ ಬಂಧನ, ಭಕ್ತರಾಸೆ ಪೊರೆಯೆ ದೇವಿಗಮನ
ಆಧ್ಯಾತ್ಮಿಕ ಪಥದಿ ಕುತ್ತ ನಿವಾರಿಸುತ, ಪರಬ್ರಹ್ಮದತ್ತ ಯಾನ!

ಗೋಣೆ - ಸಂಸಾರದ ಎಲ್ಲಾ ಬಂಧಗಳಿಗೂ ಗೋಣು ಹಾಕುತ್ತ ಹೋಗುವ ಸ್ವಭಾವ ( ಗೋಣು ಹಾಕುವುದು, ಗೋಣಾಡಿಸುವುದು ಎನ್ನುವರಲ್ಲ ಹಾಗೆ) - ಈ ವಿವರಣೆಯೊಂದಿಗೆ ಈ ಪದ ಸರಿ ಹೊಂದಿವುದೆ?

ಶ್ರೀಧರರೆ, 'ಗೋಣೆ' ಪದ ಸೂಕ್ತ ಕಾಣಿಸದಿದ್ದರೆ 'ಹೊಣೆ' ಎಂದು ಸೇರಿಸಬಹುದೆಂದು ಕಾಣುತ್ತದೆ. ಆಗ ಈ ಕೆಳಕಂಡಂತೆ ಬದಲಾಗುತ್ತದೆ - ರಾಗಮಥನೀ. ಅಂದ ಹಾಗೆ 38 ರಿಂದ 67ರವರೆಗೆ ಪರಿಷ್ಕರಿತ ಕಂತುಗಳಲ್ಲಿ ಇದೂ (53) ಸೇರಿ, ಒಟ್ಟು ಮೂರು ಕಂತುಗಳನ್ನು (53, 42 , 37) ಅಂತಿಮ ಪರಿಷ್ಕರಿಸಿದರೆ ಆಗ ಸರಣಿಯ ನಡುವಲ್ಲಿ ಯಾವುದೂ ಬಾಕಿ ಇರುವುದಿಲ್ಲ(38 ರಿಂದ 67). ಸಮಯವಾದಾಗ ಆ ಮೂರು ಕಂತನ್ನು ಗಮನಿಸಿ. - ನಾಗೇಶ ಮೈಸೂರು

೧೫೭. ರಾಗಮಥನೀ
ಅಜ್ಞಾನವೆ ಅಡಚಣೆ, ಅಡ್ಡ ಪರಿಣಾಮಗಳೆ ಪಾತಾಳಕೆ ಮೇನೆ
ಅಹಂಕಾರ ಮೋಹ ದ್ವೇಷ, ಜೋತು ಬಿದ್ದ ಸಂಸಾರದ ಹೊಣೆ
ಬಿಡಿಸೆ ಪ್ರಾಪಂಚಿಕ ಬಂಧನ, ಭಕ್ತರಾಸೆ ಪೊರೆಯೆ ದೇವಿಗಮನ
ಆಧ್ಯಾತ್ಮಿಕ ಪಥದಿ ಕುತ್ತ ನಿವಾರಿಸುತ, ಪರಬ್ರಹ್ಮದತ್ತ ಯಾನ!

ನಾಗೇಶರೆ,
ಮಧ್ಯದಲ್ಲಿ ಗೂಗಲ್ ಕ್ರ‍್ಯಾಷ್‌ನ ಪ್ರಭಾವದಿಂದಾಗಿ ಬಹುಶಃ ಈ ಕಂತಿನ ಪರಿಷ್ಕರಣೆಯನ್ನು ಮರುಪರಿಶೀಲಿಸಿರಲಿಲ್ಲ. ಇರಲಿ ಬಿಡಿ, ಈ ಕೆಳಗಿನಂತೆ ಮಾರ್ಪಾಟುಗೊಳಿಸಿದರೆ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಸರಿಹೋಗಬಹುದೆನಿಸುತ್ತದೆ.
೧೫೭. ರಾಗಮಥನೀ
ಅಜ್ಞಾನವೆ -----------------------------------
ಅಹಂಕಾರ ಮೋಹ ದ್ವೇಷ, ಜೋತು ಬಿದ್ದ ಸಂಸಾರದ ಹೊಣೆ
ಹೊಣೆ=ಬೇನೆ ಸರಿಹೋದೀತು, ಏಕೆಂದರೆ ಬೇನೆ ಎಂದರೆ ಖಾಯಿಲೆ, ರೋಗ ರುಜಿನ ಹಾಗಾಗಿ ಸಾಂಸಾರಿಕ ರೋಗವನ್ನು ಸಂಸರಾದ ಬೇನೆ ಎಂದು ಪ್ರಯೋಗಿಸಬಹುದು.
ಬಿಡಿಸೆ ಪ್ರಾಪಂಚಿಕ ಬಂಧನ, ಭಕ್ತರಾಸೆ ಪೊರೆಯೆ ದೇವಿಗಮನ
ಪೊರೆಯೆ=ಪೊರೆ ಎಂದರೆ ಪಾಲಿಸು ಕಾಪಾಡು ಎನ್ನುವ ಅರ್ಥಗಳಿವೆ. ಸಾಮಾನ್ಯವಾಗಿ ದೇವಿಯು ಭಕ್ತರನ್ನು ಕಾಪಾಡುತ್ತಾಳೆಯೇ ಹೊರತು ಅವರ ಆಸೆಗಳನ್ನಲ್ಲ! ತಾರ್ಕಿಕವಾಗಿ ಇದು ಸರಿಯೆನಿಸಿದರೂ ಅದು ಇಲ್ಲಿ ಹೆಚ್ಚು ಸೂಕ್ತವೆನಿಸದು. ಆದ್ದರಿಂದ ಅದನ್ನು ಪೂರೈಕೆ ಎಂದು ಮಾಡಿದರೆ ಅಂತ್ಯಪ್ರಾಸಕ್ಕೆ ಧಕ್ಕೆಬಾರದು.
-------------------------------------ಯಾನ! ಮೊದಲ ಹಾಗು ಕಡೆಯ ಸಾಲಿನಲ್ಲಿ ಬದಲಾವಣೆಯ ಅವಶ್ಯಕತೆಯಿಲ್ಲ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಭಾನುವಾರ ಬಿಡುವಾಗಿದ್ದೀರೆಂದು ಅರ್ಥವಾಯಿತು, ಅದಕ್ಕೋಸ್ಕರ ನಿಮ್ಮನ್ನು ಸ್ವಲ್ಪ ಬ್ಯುಸಿಯಾಗಿರಿಸಲು ಮತ್ತೊಂದು ಕಂತನ್ನು ಸೇರಿಸಿದ್ದೇನೆ :)) ಮಿಸ್ಸಾದ ದಿನಗಳ ಕ್ಲಾಸಿನ ಪೋರ್ಷನ್ನನ್ನು ಮುಗಿಸಬೇಕಲ್ಲವೇ?

^^^^^^ಭಾನುವಾರ ಬಿಡುವಾಗಿದ್ದೀರೆಂದು ಅರ್ಥವಾಯಿತು, ಅದಕ್ಕೋಸ್ಕರ ನಿಮ್ಮನ್ನು ಸ್ವಲ್ಪ ಬ್ಯುಸಿಯಾಗಿರಿಸಲು ಮತ್ತೊಂದು ಕಂತನ್ನು ಸೇರಿಸಿದ್ದೇನೆ^^^^^^ 
ಬಿಡುವಲ್ಲೂ ಬಿಡಿಸುತ ಮಾಯೆ, ಲಲಿತಾ ನಾಮಾವಳಿ ದಯೆ :-) 
ಶ್ರೀಧರರೆ, ಪರಿಷ್ಕರಿಸಿದ ನಂತರ:
೧೫೭. ರಾಗಮಥನೀ
ಅಜ್ಞಾನವೆ ಅಡಚಣೆ, ಅಡ್ಡ ಪರಿಣಾಮಗಳೆ ಪಾತಾಳಕೆ ಮೇನೆ
ಅಹಂಕಾರ ಮೋಹ ದ್ವೇಷ, ಜೋತು ಬಿದ್ದ ಸಂಸಾರದ ಬೇನೆ
ಬಿಡಿಸೆ ಪ್ರಾಪಂಚಿಕ ಬಂಧನ, ಭಕ್ತರಾಸೆ ಪೂರೈಕೆ ದೇವಿಗಮನ
ಆಧ್ಯಾತ್ಮಿಕ ಪಥದಿ ಕುತ್ತ ನಿವಾರಿಸುತ, ಪರಬ್ರಹ್ಮದತ್ತ ಯಾನ!
- ನಾಗೇಶ ಮೈಸೂರು