ಸ್ವಯಂದೀಪಕತೆಯ ಸಾಕ್ಷಾತ್ಕಾರ

Submitted by ರಾಮಕುಮಾರ್ on Tue, 06/25/2013 - 14:53

 

 

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು

ಬಿನ್ನಗಾಗಿದೆ ಮನವು. ಬಗೆಯೊಳಗನೇ ತೆರೆದು

ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ

ಪನ್ನತಿಕೆ ಬರುವನಕ ನನ್ನ ಬಾಳಿದು ನರಕ.

 

ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ ಮೊದಲ ಪದ್ಯ "ನನ್ನ ನುಡಿ"ಯ ಸಾಲುಗಳು. ಕನ್ನಡ ನವ್ಯಕಾವ್ಯದ ಪ್ರವರ್ತಕರಾದ ಅಡಿಗರ ಕಾವ್ಯಮಾರ್ಗದ ಹೊರಳುವಿಕೆಯನ್ನ ವಿಮರ್ಶಕರು(ಹಾಗೂ ಸ್ವತ: ಅಡಿಗರು) ಅವರ ಕವನ ಸಂಕಲನ "ನಡೆದು ಬಂದ ದಾರಿ"ಯಿಂದ ಎಂದು ಗುರುತಿಸಿದ್ದರೂ ತನ್ನದೇ ಹೊಸ ಕಾವ್ಯಮಾರ್ಗ ನಿರ್ಮಿಸಿಕೊಳ್ಳುವ ಅವರ ತುಡಿತ ಈ ಮೊದಲ ಪದ್ಯದಲ್ಲೇ ವ್ಯಕ್ತವಾಗಿದೆ. "ಚ೦ದ್ರ ಸೂರ್ಯರ ನೆರವಿ೦ದೆ ಬೆಳಗುವಳೀ ವಸು೦ಧರೆಗೆ೦ದು ಬಹುದೋ ಸ್ವಯ೦ದೀಪಕತೆ". ಈ ಸಾಲು ಕೂಡ ಅದೇ ಕವನದ್ದು. ಅಡಿಗರ ಸಮಗ್ರ ಕಾವ್ಯ  ಪುಸ್ತಕ ಓದುತ್ತಿರುವ ನನಗೆ ಅವರ ಕಾವ್ಯಯಾನ ಈ ಸ್ವಯ೦ದೀಪಕತೆಯ ಸಾಕ್ಷಾತ್ಕಾರದಂತೆ ತೋರುತ್ತಿದೆ.

ಅವರ ಪ್ರಸಿದ್ಧ ಪದ್ಯ "ಭೂತ" [https://sites.google.com/site/kavanasangraha/Home/itara-lekhanagalu/gopalakrsna-adigara-bhuta---sunatha] ದಲ್ಲಿ ವ್ಯಕ್ತಪಡಿಸಿರುವ ಬಯಕೆ ಇದು-

 

ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ

ಇನ್ನಾದರೂ ಕೊಂಚ ಕಲಿಯಬೇಕು :

ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---

ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.

 

ಸಮಗ್ರ ಕಾವ್ಯ ಓದುತ್ತಿರುವಾಗ ಈ ಅಸಲು ಕಸಬಿನ ಸಿದ್ಧಿ ಸಾಧ್ಯವಾದದ್ದು ಸಮ್ಯಕ್ ವೇದ್ಯವಾಗುತ್ತದೆ.

 

ಅಡಿಗರ ಮೊದಮೊದಲಿನ ಕವನಗಳಲ್ಲಿ ಭಾವಗೀತಾತ್ಮಕ ಲಯವಿದೆ. ಸಹಜವಾಗಿಯೆ ಭಾವಗೀತೆಗಳಾಗಿ ಪ್ರಸಿದ್ಧವಾಗಿರುವ "ಇಂದು ಕೆಂದಾವರೆ", "ಯಾವ ಮೋಹನ ಮುರಳಿ", "ಮೌನ ತಬ್ಬಿತು ನೆಲವ" , "ಅಳುವ ಕಡಲೊಳು" ಇತ್ಯಾದಿಗಳು ಅವರ ಆರಂಭಿಕ ಕವನ ಸಂಕಲನಗಳಲ್ಲಿವೆ.ಹಾಡುಗಳಾಗಿ ಜನಮಾನಸವನ್ನ ಮುಟ್ಟಿವೆ.ಆದರೆ ಅಡಿಗರ ಟ್ರೇಡ್ ಮಾರ್ಕ್ ಕಾವ್ಯ ಸುಗಮ ಸಂಗೀತದ ನಿಲುಕಿಗೆ ಸಿಗದೇ ಹೋಗಿದೆ,ಕೆಲವು ಅಪವಾದಗಳೊಂದಿಗೆ.ಉದಾಹರಣೆಗೆ,ಗಾಯಕ ಚಂದ್ರಶೇಖರ ಕೆದ್ಲಾಯರ ದನಿಯಲ್ಲಿ ಅಡಿಗರ "ಬರುತ್ತಾರೆ" ಕವನದ ಆ ತೀಕ್ಷ್ಣ ವ್ಯಂಗ್ಯ ಚೆನ್ನಾಗಿ ಮೂಡಿಬಂದಿದೆ. [ http://www.youtube.com/watch?v=BMi1VDyYXSk ].

 

ಅಡಿಗರು ತಮ್ಮ ಮೂರನೆ ಸಂಕಲನ "ನಡೆದು ಬಂದ ದಾರಿ" ಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ.

"..ಆಧುನಿಕ ಕನ್ನಡ ಕಾವ್ಯದಲ್ಲಿ ಒಂದು ಘಟ್ಟ ಕಳೆದು ಇನ್ನೊಂದು ಘಟ್ಟ ಮೊದಲಾಗುತ್ತಿದೆ.ಕಾವ್ಯರೂಪದಲ್ಲಿ ಬದಲಾವಣೆ ಆಗಬೇಕಾದ ಕಾಲ ಆಗಲೇ ಬಂದು ಬಿಟ್ಟಿದೆ.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ತನಕ ಇದ್ದ ವಾತಾವರಣ ಈಗ ಸಮೂಲ ಪರಿವರ್ತನಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಉತ್ಸಾಹ, ಉದ್ವೇಗ ಆದರ್ಶಪರವಶತೆಯ ಹಾರಾಟ ಮುಗಿದು ಈಗ ನಮ್ಮ ಮನಸ್ಸು ಮತ್ತೆ ನೆಲಕ್ಕಿಳಿದಿದೆ, ಮೋಡವಾಗಿ ಮೇಲೇರಿದ ಮನಸ್ಸು ಮಳೆಯಾಗಿ ಬಿದ್ದು ಮತ್ತೆ ಹಳ್ಳ ಕೊಳ್ಳಗಳಲ್ಲಿ ತುಂಬಿಕೊಂಡಿದೆ . ತಳದಲ್ಲಿ ಕೂತಿದ್ದ ಕೊಳೆಕಸರಾಡಿಯೆಲ್ಲ ಈಗ ಮೇಲೆದ್ದು ಬಂದು ಕನ್ನಡಿಯಂಥ ನೀರು ಕಲಕಿದೆ.ಹೊಸ ಆದರ್ಶಕ್ಕಾಗಿ ಹೊಸ ಕಣಸಿಗಾಗಿ ದೇಶದ ಮನಸ್ಸು ಹಸಿದು ಕಾಯುತ್ತಿದೆ. ಇಂಥ ವಾತಾವರಣ ಸುತ್ತಮುತ್ತಲೂ ಇರುವಾಗ, ಜೀವನಾವಲಂಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ. ಗಾಂಧಿಯುಗದಲ್ಲಿ ಬರೆದ ರೀತಿಯಲ್ಲೆ ಇನ್ನೂ ಬರೆದರೆ ಬಹುಶ: ಅದು ಕಾವ್ಯಾಭಾಸವಾಗುತ್ತದೆ, ಇಲ್ಲವೆ ಸತ್ವಹೀನ ಕಾವ್ಯವಾಗುತ್ತದೆ; ಚರ್ವಿತ ಚರ್ವಣವಾಗುತ್ತದೆ. ಆಗ ಭಾವವನ್ನು ಕೊಲ್ಲುವ ಮಾತು ಭೇತಾಳದಂತೆ ನಮ್ಮ ಬೆನ್ನು ಹತ್ತಿ, ಸಮಾಜದ ಬೆಳವಣಿಗೆಗೆ ಮಾರಕವಾಗುತ್ತದೆಂದು ನನಗೆ ತೋರುತ್ತದೆ.ಆದಕಾರಣ ಈಗ ಕಾಣುತ್ತಿರುವ ಹೊಸ ಮನೋಧರ್ಮವನ್ನು ವ್ಯಕ್ತಪಡಿಸಲು ಹೊಸ ನಾಲಗೆ, ನುಡಿಗಟ್ಟು ರೂಪುಗೊಳ್ಳಬೇಕಾಗಿದೆ."

ಹೀಗೆ ದಾರಿ ಬದಲಾಯಿಸಿದ್ದನ್ನ ಹೇಳಿದ ಅಡಿಗರ "ನಡೆದು ಬಂದ ದಾರಿ" ಪದ್ಯ ಶುರುವಾಗುವುದು ಹೀಗೆ-

 

ನಡೆದು ಬಂದ ದಾರಿಕಡೆಗೆ

ತಿರುಗಿಸಬೇಡ-

ಕಣ್ಣ-

ಹೊರಳಿಸಬೇಡ.

 

ಹೀಗೆ ನಂತರದ ಪದ್ಯಗಳಲ್ಲಿ ಕವನದಿಂದ ಕವನಕ್ಕೆ ವ್ಯಂಗ್ಯ,ವಿಷಾದ, ವ್ಯವಸ್ಥೆಯ ಬಗ್ಗೆ ರೋಷ ತೀಕ್ಷ್ಣವಾಗುತ್ತ ಸಾಗುತ್ತದೆ.ಅಂತೆಯೆ ಕವನಗಳ ಪ್ರತಿಮಾ ಲೋಕ ಯಾವಯಾವುದೋ ಆಕರಗಳಿಂದ ಸ್ಪೂರ್ತಿ ಪಡೆದು ನನ್ನಂತ ಸಾಮಾನ್ಯವಾದ ಓದುಗನಿಗೆ ಅರ್ಥೈಸಲು ಕಷ್ಟವಾಗಿ ಕಕ್ಕಾವಿಕ್ಕಿಯಾಗುತ್ತದೆ. [ಪ್ರಾಸಂಗಿಕವಾಗಿ ಇಲ್ಲಿ ಅಡಿಗರ ಕಾವ್ಯ ಅರ್ಥೈಸಲು ಓದುಗನಿಗೆ ಗರುಡಪುರಾಣ ಗೊತ್ತಿರಬೇಕು ಎಂದ ತೇಜಸ್ವಿಯವರ ಮಾತನ್ನು ಉಲ್ಲೇಖಿಸಬಹುದು]. ಅನಂತಮೂರ್ತಿಯವರು ಬರೆದ ಅಡಿಗರ  "ಶ್ರೀರಾಮನವಮಿಯ ದಿವಸ"[http://kendasampige.com/article.php?id=5523] ಪದ್ಯದ ವಿಶ್ಲೇಷಣೆ "ಪದ್ಯ ಬಗೆಯುವ ಬಗೆ" ಓದದಿದ್ದರೆ ನಿಮಗೆ ಆ ಪದ್ಯದ ಸೂಕ್ಷ್ಮ ಒಳನೋಟಗಳು ದಕ್ಕದೆ ಹೋಗಬಹುದು. ಯಾರಾದರು ಅಡಿಗರ ಎಲ್ಲ ಪದ್ಯಗಳನ್ನ ಹೀಗೆ ವಿಶ್ಲೇಷಿಸಿದ್ದರೆ ಚೆನ್ನಿತ್ತು ಅನಿಸಿದೇ ಇರದು. ಆದರೆ ಒಂದು ಕವನದ ಅರ್ಥ ಓದುಗನ ಭಾವಕೋಶದಲ್ಲಿದ್ದು ಬೇರೆಯವರ ವಿಶ್ಲೇಷಣೆಯಿಂದ ಮಾತ್ರ ದಕ್ಕಿಸಿಕೊಂಡರೆ ಅದು ಅವರ ಕನ್ನಡಕದಲ್ಲಿ ಜಗತ್ತನ್ನ ನೋಡಿದಂತೆ ಎಂಬ ವಿವೇಕ ನಮ್ಮನ್ನು ಕಾಯಬೇಕು. ಅವರೇ "ಅರ್ಥವಾಗುವ ಹಾಗೆ ಬರೆಯಬೇಕು" ಅಂತ ವ್ಯಂಗ್ಯದ ಕವನದ ಬರೆದಿದ್ದಾರೆ! ಇದರ ಹಿನ್ನೆಲೆಗಾಗಿ ಎಸ್.ದಿವಾಕರರ ಈ ಲೇಖನ ನೋಡಿ.[http://www.prajavani.net/show_page.php?nid=151734

 

ಕುವೆಂಪುರವರ ಕಾವ್ಯನಾಯಕನಿಗೆ ತನ್ನ ವಾಣಿಯ ಉತ್ತಾಲತೆಯಲ್ಲಿ ಅತೀವ ವಿಶ್ವಾಸ[ಉದಾಹರಣೆಗೆ ನೋಡಿ ಕುವೆಂಪುರವರ "ನನ್ನ ಕವಿತೆ ತನ್ನ ವಿಮರ್ಶಕನಿಗೆ"[http://kanaja.in/ಕೃತ್ತಿಕೆ-ನನ್ನ-ಕವಿತೆ-ತನ್ನ್ನ/] ನೋಡಿ]. ಆದರೆ ಅಡಿಗರ ಕಾವ್ಯನಾಯಕ ಹಾಗಲ್ಲ.ಆತನಿಗೆ ತನ್ನ ಸಾಮರ್ಥ್ಯದ ಬಗ್ಗೆ ಅಪನಂಬಿಕೆ, ತನ್ನನ್ನೇ ಗೇಲಿ ಮಾಡಿಕೊಳ್ಳುವ ಸ್ವಭಾವ, ವ್ಯವಸ್ಥೆಯ ಅರೆಕೊರೆಯ ಬಗ್ಗೆ ಸಿಟ್ಟು. ಅಡಿಗರ ಭೂತ, ವರ್ಧಮಾನ,ಕೂಪಮಂಡೂಕ, ನೆಹರೂ ನಿವೃತ್ತರಾಗುವುದಿಲ್ಲ,ಬತ್ತಲಾರದ ಗಂಗೆ ಮೊದಲಾದ ಕವನಗಳು ಅವರ ಕಾವ್ಯಶೈಲಿಗೆ ಟಿಪಿಕಲ್ ಮಾದರಿಗಳು.ತನ್ನನ್ನೆ ಗೇಲಿ ಮಾಡಿಕೊಳ್ಳುವ ರೀತಿಗೆ "ನನ್ನ ಅವತಾರ" ಪದ್ಯ ನೋಡಬಹುದು[https://www.facebook.com/permalink.php?story_fbid=562477400429928&id=169019336500051]. ಮತ್ತೊಂದು ಗಮನಾರ್ಹ ವಿಷಯ ಅವರ ಕಾವ್ಯದಲ್ಲಿ ಬರುವ ಭೀಭತ್ಸ್ಯದ ಪ್ರತಿಮೆಗಳು.ಚ೦ಡೆ ಮದ್ದಳೆ ಕವನ ಸ೦ಕಲನದ "ಹಿಮಗಿರಿಯ ಕ೦ದರಪದ್ಯದ  “ಮಿದುಳು - ಬಚ್ಚಲ ಹ೦ಡೆಯಲ್ಲಿ ಬೇಯುವ ಆಮೆಎದ್ದೆದ್ದು ಬಿದ್ದು ಒದ್ದಾಡುತ್ತಿತ್ತು. ಕಿಟಕಿಯಲಿ ಬೆ೦ಕಿ ಹೊಳೆಹರಿದು ಕುರ್ಚಿಯಮೇಲೆ ಉರಿಕೆ೦ಡ, ಮೇಜು ಅಗ್ನಿಯ ಕು೦ಡ.ಸಾಲು ಗಮನಿಸಿ.

 

"ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು" ಎನ್ನುವ ನಾಸ್ಟಾಲಾಜಿಕ್ ಹಳಹಳಿಕೆಯಲ್ಲಿ ಕವಿಗೆ ನಂಬಿಕೆಯಿಲ್ಲ. "ಇಂದು ನಮ್ಮೀ ನಾಡು" ಪದ್ಯದಲ್ಲಿ ಅಂತಹ ಮನೋಭಾವವನ್ನ ಲೇವಡಿಮಾಡಿದ್ದಾರೆ.[http://sampada.net/ಇಂದು-ನಮ್ಮೀ-ನಾಡು] .

 

ಇತ್ತುಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗೂ,
ಇದೆ ಹೃದಯದ್ರಾವ ಬೇಡ ನಿನಗೆ.
ಮರವುಂಟು, ಮರಕೆ ಬಂಗಾರವುಂಟಲ್ಲದೆಯೇ
ಕಟ್ಟೆಯುಂಟಲ್ಲ! ನೀರಿಕ್ಕು ಅದಕೆ!

 

 

ಇಂತಹ ಅಡಿಗರು ಇತ್ತುಗಳ ಧ್ವಜವ ಹಿಡಿದೆತ್ತಿ ನಿಲ್ಲಿಸುವ ಪಕ್ಷವೊಂದರಿಂದ ಚುನಾಚಣೆಗೆ ನಿಂತದ್ದು ಸೋಜಿಗದ ವಿಷಯ. ಇಂತಹ ವೈರುಧ್ಯಗಳನ್ನ ನೇರನುಡಿಯ ನಿಷ್ಥುರ ವಿಮರ್ಶಕ ಜಿ.ರಾಜಶೇಖರ ಅಡಿಗರ ಕವನ ಸಂಕಲನವೊಂದಕ್ಕೆ ಬರೆದ ಮುನ್ನುಡಿಯಲ್ಲೇ ಗುರುತಿಸಿದ್ದಾರೆ!

 

ಅಡಿಗರ ಪದ್ಯಗಳ ಹಲವಾರು ರೂಪಕ,ಪ್ರತಿಮೆಗಳನ್ನ  ಓದಿದಾಗ ಹೀಗೂ ಬರೆಯಲು ಸಾಧ್ಯವೆ ಅನಿಸುತ್ತದೆ. ಉದಾಹರಣೆಗೆ-

 

"ಕಾರ್ಮೋಡ ಕುಡಿದುಬಿಟ್ಟಿದೆ ಕಣೋ, ಕಡಲ ಪಡಖಾನೆಯಲಿ ನೊರೆಗರೆವ ವ್ಹಿಸ್ಕಿ ಸೋಡಾ"

 

"ಹರೆಯದೀ ಮಾ೦ತ್ರಿಕನ ಮಾಟ ಮುಸುಳುವ ಮುನ್ನ"

 

ದೊಡ್ಡ ದೊಡ್ಡ ಮಾತು ಬೆಲೂನು ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ

 

ತನ್ನ ರಾಜಕುಮಾರತನದ ಮೀಸೆಯ ಚಿಗುರು 

ದೇಶ ಕಾಣದ ಹಾಗೆ ನೆರೆದು, ಕತ್ತಿನ ಕುಣಿಕೆ 

            ಹರಿದು ಹರವೋ ಹರ. ಹುಲ್ಲು, ಧರೆ, ಗಿಡ, ಹೊದರು- 

ಎಲ್ಲವನ್ನೆತ್ತೆತ್ತಿ ಕುತ್ತಿ ತೀರದ ತುರಿಕೆ 

ಮೊಳೆವ ಕೊಂಬಿಗೆ. ಆಕಾಶ ಕೈಗೆಟುಕದಿದ್ದಕ್ಕೆ, 

                                 ಕೋಶಾವಸ್ಥೆ ಮರಳಿಬಾರದ್ದಕ್ಕೆ, ತನಗಿಂತ ಮೊದಲೆ ತನ್ನಪ್ಪ ಹುಟ್ಟಿದ್ದಕ್ಕೆ, 

ಮೊಲೆ ಬಿಡಿಸಿದವಮಾನ ಮುಯ್ಯಿ ತೀರದ್ದಕ್ಕೆ 

ರೊಚ್ಚು; ಕೊಚ್ಚುತ್ತಾನೆ ಗಾಳಿಮೋಪು; 

ರೇಗಿ ಕಿರುಚುತ್ತಾನೆ ಭಾರಿ ರೋಪು; 

ಹೂಂಕರಿಸಿ ಹಾರುತ್ತಾನೆ ಮೂರು ಗುಪ್ಪು. 

                              (ವರ್ಧಮಾನ)

 

ಏನಾದರೂ ಮಾಡುತಿರು ತಮ್ಮ; 
ನೀ ಸುಮ್ಮನಿರಬ್ಯಾಡ; 
ಆ ಸಸಿಯ ಕೀಳು, ಚಿವುಟೀ ಚಿಗುರ. 
ಹೂವ ಕಂಡರೆ ಹಿಸುಕಿ ಬಿಸುಡು; ಹುಲ್ಲೆಲ್ಲೆಲ್ಲಿ 
ಅಲ್ಲಲ್ಲಿ ಕೊಳ್ಳಿ ಹಿಡಿದಾಡು ಲಂಕಾದಹನ. 
ಮರಿ ಚಿಟ್ಟೆ, ಗಿಳಿ, ಗುಬ್ಬಿ - ಎಲ್ಲಿ ಕಂಡರೆ ಅಲ್ಲಿ 
ಅಟ್ಟು, ಹಿಡಿ, ಕುಟ್ಟು; ಕಿತ್ತೆಸೆ ಪಕ್ಕಪುಕ್ಕಗಳ. 
ಕಾಡಾನೆ ಹೊಕ್ಕ ನಂದನದಲ್ಲಿ 
ಬಿಕ್ಕುತಿದೆ ಇಲ್ಲಿ ಮಲ್ಲಿಗೆ ಅಲ್ಲಿ ಹೊಂಬಾಳೆ. 
ಸುತ್ತಲೂ ಗೋಡೆ ಮೇಲೆಲ್ಲ ಪೌರುಷಬಲದ
ಸ್ವಿಚ್ಚು; ಕಣ್ಣನು ಮುಚ್ಚು; 
ಒತ್ತು ಹತ್ತಿಪ್ಪತ್ತನೊಂದೆ ಸಲ; ನೆಲ; ನೀರು; ಆಕಾಶ - 
-ಬಂಗಾರಮೊಟ್ಟೆಕೋಳಿಯ ಹೊಟ್ಟೆ - ಬಗೆ ಸೀಳು. 

 

ಕೊನೆಯದಾಗಿ ನಿಮಗೆ ಸಾಹಿತ್ಯ ರಚನೆಯಲ್ಲಿ ಆಸಕ್ತಿಯಿದ್ದರೆ ಅಡಿಗರ ಈ ಸಂದರ್ಶನವನ್ನ ತಪ್ಪದೇ ಓದಿ.

http://kanaja.in/ಬೆತ್ತಲೆ-ಪೂಜೆ-ಯಾಕೆ-ಕೂಡದು-/