ಧರ್ಮ, ಧಾರ್ಮಿಕತೆ ಮತ್ತು ಜೀವನ

ಧರ್ಮ, ಧಾರ್ಮಿಕತೆ ಮತ್ತು ಜೀವನ

ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯ ಪ್ರತೀ ದಿನ ನಿದ್ದೆ ಇಂದ ಎದ್ದು ತನ್ನ ನಿತ್ಯ ಕಾರ್ಯಗಳಿಗೆ ಹೊರಟು ಮತ್ತೆ ಸಂಜೆ ತನ್ನಗೂಡಿಗೆ ಮರಳಿ ನಿದ್ದೆಯ ಮಡಿಲಿಗೆ ಸೇರುವವರೆಗೆ ಅನೇಕಾನೇಕ ವಿಷಯ ವಿಚಾರಗಳನ್ನ, ಏರುಪೇರುಗಳನ್ನ, ಅಡೆತಡೆಗಳನ್ನ ಸುಖ, ದುಃಖಗಳನ್ನ ಕಾಣ್ತಾನೆ, ಕೇಳ್ತಾನೆ, ಅನುಭವಿಸುತ್ತಾನೆ, ಕೊನೆಗೆ ಮರೆತು ಹೋಗ್ತಾನೆ. ನಿತ್ಯವೂ ತನ್ನ ಸುತ್ತ ನಡೆಯುವ ಪ್ರತಿಯೊಂದು ಒಳ್ಳೆಯದಕ್ಕೂ ದೇವರನ್ನ ನೆನಪಿಸಿಕೊಳ್ತ, ಪ್ರತಿ ಕೆಟ್ಟದ್ದಕ್ಕೂ ತನ್ನ ಗ್ರಹಚಾರವನ್ನ ಶಪಿಸುತ್ತಾ ಕಾಲನ ಚಕ್ರದೊಂದಿಗೆ ಸಾಗ್ತಾ ಇರ್ತಾನೆ.

ಯಾವತ್ತಾದರೂ ಇದನ್ನ ಯೋಚಿಸಿದ್ದೇವ? ನಾವು ಯಾಕೆ ಹೀಗೆ ಅಂತ? ಒಳ್ಳೆಯದಕ್ಕೆಲ್ಲಾ ಯಾಕೆ ಭಗವಂತ ನೆನಪಾಗ್ತಾನೆ? ಈ ಗ್ರಹಚಾರ ತಾಪತ್ರಯಗಳು ಅಂದರೇನು? ಇಂತೆಲ್ಲ ವಿಷಯಗಳು ಯೋಚನೆ ಮಾಡುವ ಸಂದರ್ಭ ನಮಗೆ ಎಂದಾದರೂ ಬಂದಿದೆಯ?

          ಎಷ್ಟೋ ಸಾರಿ ಬಸ್ ನಲ್ಲೋ ಅಥವ ಇನ್ಯಾವುದರಲ್ಲೋ ಸಾಗುತ್ತಿರ ಬೇಕಾದರೆ,  ಎಲ್ಲೋ ದೇವಸ್ಥಾನದ ಗಂಟೆ ಶಬ್ದ ಕೇಳಿದರೆ ಮನಸ್ಸಿನಲ್ಲೇ ಒಂದು ಕ್ಷಣ ದೇವರನ್ನ ನೆನೆಸಿಕೊಳ್ತೀವಿ, ಮತ್ತೆಲ್ಲೋ ಮತ್ಯಾರಿಗೋ ಅಕಸ್ಮಾತ್ ಆಗಿ ನಮ್ಮ ಕಾಲು ತಾಗಿದರೆ ತಕ್ಷಣ ನಮ್ಮ ಎದೆ ಮುಟ್ಟಿ, ಹಣೆ ಮುಟ್ಟಿ ತಪ್ಪಾಯ್ತು ಅಂತ ಅಂದು ಕೊಳ್ತೀವಿ.  

ಬಹುಷಃ ನಮ್ಮಲ್ಲಿ ಹೆಚ್ಚಿನ ಜನರಿಗೆ ತಮ್ಮ ನಿತ್ಯ ಜೀವನದಲ್ಲಿ ಹಾದು ಹೋಗುವ ಇಂತಹ ಹಲವಾರು ವಿಷಯಗಳು, ಅಚ್ಚರಣೆಗಳು, ನಂಬಿಕೆಗಳು ಅನುಭವಕ್ಕೆ ಬಂದಿರಲಿಕ್ಕಿಲ್ಲಾ.  ಅನುಭವಕ್ಕೆ ಬಂದರೂ ಅದರಲ್ಲೇನು ವಿಶೇಷ ಅನ್ನಿಸೊಲ್ಲ.

ಯಾಕೆ ಹೀಗೆ? ನಮಗೆ ಇದನ್ನೆಲ್ಲ ಯಾರು ಹೇಳಿಕೊಟ್ಟಿದ್ದು? ಇದು ನಮ್ಮ ಜೀವದಲ್ಲಿ ಬೆರೆತು ಹೋಗಿದ್ದಾದರೂ ಹೇಗೆ?

 ಈ ಎಲ್ಲಾ ಯೋಚನೆ ಗ್ರಹಿಕೆಗಳ ಮೂಲ ಪ್ರತಿಯೊಬ್ಬನಲ್ಲಿರುವ ಅವನವನ ಧಾರ್ಮಿಕತೆ ಅಥವ ಧಾರ್ಮಿಕ ಪ್ರಜ್ನೆ!

ಪ್ರಪಂಚದಲ್ಲಿ ಹಲವಾರು ಧರ್ಮಗಳಿವೆ ಹಿಂದು, ಕ್ರೈಸ್ಥ, ಮುಸಲ್ಮಾನ, ಬೌದ್ದ, ಜೈನ, ಪಾರಸಿಕ. ಎಲ್ಲವೂ ಕೂಡ ತನ್ನದೇ ಆದ ತತ್ವ ನಂಬಿಕೆ, ಅಚರಣೆಗಳನ್ನ ಬೆಳೆಸಿಕೊಂಡು ಬಂದಿದೆ. ಆದರೆ ದೇವನೊಬ್ಬ ನಾಮ ಹಲವು ಎನ್ನುವಂತೆ ಎಲ್ಲಾ ಧರ್ಮಗಳೂ ಕೂಡ ನಾರಾಯಣ, ಏಸು, ಅಲ್ಲಾಹ್ ಅಂತ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ “ಭಗವಂತ” ಎನ್ನುವ ಒಂದು ಧನಾತ್ಮಕ ಶಕ್ತಿಯ ಸುತ್ತ ಸುತ್ತುತ್ತಾ ಇರುತ್ತದೆ. ಮನುಷ್ಯ ತನ್ನ ಜೀವನದ ಪ್ರತಿಯೊಂದು ಕೆಲಸಕ್ಕೆ ಕೈ ಹಾಕುವಾಗಲೂ ಅವನ ಧಾರ್ಮಿಕ ಪ್ರಜ್ನೆ ಅವನ ಯೋಚನೆಗಳನ್ನ ನಿಯಂತ್ರಿಸುತ್ತವೆ. ಹೀಗೆ ಕೆಲವೊಂದು ಕಣ್ಣಿಗೆ ಕಂಡರೆ ಕೆಲವೊಂದು ಕೇವಲ ಅನುಭವವಾಗಿರುತ್ತದೆ.

ಹಾಗಾದರೆ ಧಾರ್ಮಿಕತೆ ಅಂದರೇನು? ಎಷ್ಟರಮಟ್ಟಿಗೆ ನಮ್ಮ ಜೀವನ ಮಟ್ಟ ಅದನ್ನ ಅವಲಂಬಿದೆ? ಧರ್ಮಕ್ಕೂ ಜೀವನಕ್ಕೂ ಏನು ಸಂಬಂಧ?

ನಾನು ತಿಳಿದಿರುವ ಮಟ್ಟಿಗೆ ಯಾವುದೇ ಒಂದು ಧರ್ಮದ ತತ್ವ ಆದರ್ಶಗಳ ಆಚರಣೆಯ ಕ್ರಿಯಾ ರೂಪವೇ ಧಾರ್ಮಿಕತೆ.

ಹಾಗಾದರೆ ಕೇವಲ ಧರ್ಮ ಗ್ರಂಥಗಳ ಪಾರಾಯಣ, ವಿಜೃಂಭಣೆಯ ಪೂಜೆ ಪುನಸ್ಕಾರ, ಹರಕೆ ನಿತ್ಯಾನುಷ್ಟಾನ ಇವುಗಳಷ್ಟೇನ ಧಾರ್ಮಿಕತೆ ಅಂದರೆ?.... ಖಂಡಿತ ಅಲ್ಲ.

ನಮ್ಮ ಜೊತೆಯಲ್ಲಿರುವ ಒಂದು ಸಣ್ಣ ಛತ್ರಿ ಮಳೆಯಲ್ಲಿಯೂ ಮುಂದೆ ಸಾಗಲು ಸಹಕಾರಿ ಆಗುತ್ತದೆಯೆ ಹೊರತು ಯಾವತ್ತಿಗೂ ಕೂಡ ನಾವು ಛತ್ರಿಯಿಂದ ಮಳೆಯನ್ನ ಸಂಪೂರ್ಣವಾಗಿ ನಿಲ್ಲಿಸೋದಕ್ಕೆ ಸಾಧ್ಯವಿಲ್ಲ. ಹಾಗೆ ನಮ್ಮ ನಾವು ನಂಬುವ ಧರ್ಮ, ದೇವರು, ನಮ್ಮಲ್ಲಿರುವ ಧಾರ್ಮಿಕ ಭಾವನೆಗಳು ಕೂಡ ಜೀವನದಲ್ಲಿ ಬರುವ ಸಮಸ್ಯೆಗಳನ್ನ ತಡೆಯೋದಿಲ್ಲ ಆದರೆ ಆ ಸಮಸ್ಯೆಗಳನ್ನ ಎದುರಿಸೋ ಶಕ್ತಿಯನ್ನ ನಮಗೆ ಒದಗಿಸುತ್ತವೆ. ಧರ್ಮ ಅನ್ನೋದು ಎಲ್ಲವುಗಳನ್ನ ಮೀರಿದ್ದು, ಧಾರ್ಮಿಕತೆ ಅನ್ನೋದು ಮನುಷ್ಯನ ಸಾಮಾನ್ಯ ಲೌಕಿಕ  ತಿಳುವಳಿಕೆ, ಅವನ ವ್ಯವಹಾರ ಜ್ನಾನ. ಸ್ವತಂತ್ರವಾಗಿ ಯೋಚನಾ ಲಹರಿಯನ್ನು ಹರಿಯಲು ಬಿಡದ ಧರ್ಮವೇ ಅಲ್ಲ, ಧಾರ್ಮಿಕತೆಯೂ ಅಲ್ಲ.

ನಾವು ಯೋಚಿಸ ಬಹುದು ಯಾಕೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಇಷ್ಟೊಂದು ದೇವಾನು ದೇವತೆಗಳು, ವೇದ ಪುರಾಣಗಳು, ಮಹಾಭಾರತ, ರಾಮಾಯಣಗಳು, ಭಗವದ್ಗೀತೆಗಳು, ಉಪನಿಷತ್ ಗಳು. ಏಕೆಂದರೆ ನಾವಿರುವ ಭಾರತ ಭೂಮಿ ಎಷ್ಟು ವಿಶಾಲವಾಗಿ ಹರಡಿಕೊಂಡಿದೆಯೋ ನಮ್ಮ ಧಾರ್ಮಿಕತೆ, ಸಂಸ್ಕೃತಿಗಳೂ ಅಷ್ಟೇ ವಿಶಾಲವಾಗಿದೆ. ನಾಲ್ಕು ಹೆಜ್ಜೆಗಳಿಗೆ ಬದಲಾಗುವ ಭಾಷೆ, ಹತ್ತು ಹೆಜ್ಜೆಗಳಿಗೊಂದು ಬದಲಾಗುವ ಸಂಸ್ಕೃತಿ, ಶ್ರೀಮಂತ ಜ್ನಾನ ಭಂಡಾರ ಬಹುಷಃ ಭಾರತವನ್ನ ಬಿಟ್ಟರೆ ಪ್ರಪಂಚದಲ್ಲಿ ಬೇರಾವುದೇ ದೇಶದಲ್ಲಿ ಇಂತಹ ವೈಚಿತ್ರ್ಯ ಕಾಣಲು ಖಂಡಿತಾ ಸಾಧ್ಯವಿಲ್ಲ. ಅದೆಷ್ಟೋ ಮಹಾನ್ ಪುರುಷರು ಅವತರಿಸಿ, ಅವರು ಬೊಧಿಸಿದ ವಿಚಾರಧಾರೆಗಳು ಈಗಲು ಪ್ರಸ್ತುತ ಅನ್ನಿಸುತ್ತವೆ. ಬಾಲ್ಯ, ಯವ್ವನ, ಗೃಹಸ್ಥ, ಸನ್ಯಾಸ ಹೀಗೆ ಪ್ರತಿಯೊಂದು ಸ್ಥರದಲ್ಲೂ ಜೀವನ ಸಾಗಿಸುವ ಮಾರ್ಗವನ್ನ ಸೂಚಿಸಿದೆ ನಮ್ಮ ಈ ಶ್ರೀಮಂತ ಧಾರ್ಮಿಕತೆ.

          ಧಾರ್ಮಿಕತೆ ಮತ್ತು ಜೀವನ ಅನ್ನುವ ವಿಷಯ ಬಂದಾಗ ಮಹಾಭಾರತ, ರಾಮಾಯಣದಂತಹ ಧಾರ್ಮಿಕ ಕಥಾಹಂದರವನ್ನ ಪ್ರಸ್ತಾಪಿಸಲೇ ಬೇಕು. ಮಹಾಭಾರತ ಅನ್ನುವುದು ಅರ್ಥ ಪೂರ್ಣಗಳಿಂದ ಕೂಡಿದ ಮಹತ್ತರವಾದ ಗ್ರಂಥ. ಮನೋವೈಜ್ನಾನಿಕವಾಗಿ ಜೀವನದ ಮೌಲ್ಯಗಳನ್ನ ಸಾರುವ ಗ್ರಂಥ, ಧರ್ಮ- ಅಧರ್ಮ, ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯಗಳ ನಡುವೆ ನಡೆಯುವ ಹೋರಾಟ. ಪಂಚಪಾಂಡವರ ಪಾತ್ರವರ್ಗವು ಒಬ್ಬ ಮನುಷ್ಯನಲ್ಲಿರ ಬೇಕಾದ ಹದಿನೆಂಟು ಗುಣಗಳನ್ನ ಪ್ರತಿನಿದಿಸುತ್ತವೆ.

ಧರ್ಮರಾಜ- ಧರ್ಮ

ಭೀಮ ಸೇನ- ಭಕ್ತಿ, ಜ್ನಾನ, ವೈರಾಗ್ಯ, ಪ್ರಜ್ನಾ, ಮೇಧಾ, ಧೃತಿ, ಸ್ಥಿತಿ, ಯೋಗ ಪ್ರಾಣ ಮತ್ತು ಬಲ

ಅರ್ಜುನ- ಶ್ರವಣ, ಮನನ ಮತ್ತು ನಿಧಿಸ್ಯಾನ.

ನಕುಲ ಮತ್ತು ಸಹದೇವ- ಶೀಲ ಮತ್ತು ವಿನಯ

ದ್ರೌಪದಿ- ವೇದ ವಿದ್ಯೆ.

ಭಗವಾನ್ ಶ್ರೀಕೃಷ್ಣನಿಗೆ ಹದಿನೆಂಟು ದಿನಗಳವರೆಗೆ ಸಾಗುವ ಯುದ್ದವನ್ನ ಮನಸ್ಸು ಮಾಡಿದರೆ ಕೆಲವೇ ಕ್ಷಣದಲ್ಲಿ ಮುಗಿಸ ಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಕಾರಣ ಅವನಿಗೆ ಸತ್ಯ-ಅಸತ್ಯ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ ಗಳನ್ನ ವಿವರಿಸಿ ಹೇಳ ಬೇಕಾಗಿತ್ತು.

ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು ೭೦೦ ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು.

ರಾಮಾಯಣ ಎನ್ನುವ ಮಹಾಕಾವ್ಯದ ವಿಷಯಕ್ಕೆ ಬಂದರೆ ವಾಲ್ಮಿ ಮಹಾಮುನಿಗಳು ರಾಮನ ರೂಪದಲ್ಲಿ ಮನುಷ್ಯನ ಬಾಳುವೆಯನ್ನ ಚಿತ್ರಿಸಿದಾರೆ. ರಾಮನನ್ನು ಅತಿಮಾನಷನೆಂದು ಚಿತ್ರಿಸದೆ ಗುಣ ದೋಷಗಳಿಂದ ಕೂಡಿದ ಮತ್ತು ಧರ್ಮ ಮಾರ್ಗವನ್ನ ಅನುಸರಿಸಿ ಗೆದ್ದಂತಹ ಸಹಜ ಮಾನವನಾಗಿ ಸೃಷ್ಟಿಸಲಾಗಿದೆ.

ತನ್ನ ತಂದೆ ತಾಯಿಯರನ್ನ ಭುಜದಲ್ಲಿ ಹೊತ್ತು ಸಾಗುವ ಶ್ರವಣ ಕುಮಾರನಿರಬಹುದು, ಪಿತೃಪಾಲಕನಾದ ರಾಮನಿರಬಹುದು, ರಾಮನನ್ನನುಸರಿಸುವ ಸೀತಾಮಾತೆ, ಸಹೋದರತೆಯನ್ನ ಸಾರುವ ಲಕ್ಷ್ಮಣ, ಭರತ, ಶತ್ರುಘ್ನರಿರಬಹುದು, ಪರಮ ಸೇವಕ ಹನುಮ, ಹೆಣ್ಣಿನ ಮೇಲಿನ ಮೋಹದಿಂದ ನಿರ್ನಾಮವಾದ ರಾವಣನಿರ ಬಹುದು. ಹೀಗೆ ಪ್ರತಿಯೊಂದು ಪಾತ್ರಗಳು ಪಿತೃ ಭಕ್ತಿ, ತ್ಯಾಗ, ಪ್ರೀತಿ, ಮಮತೆ, ಸ್ವಾಮಿ ನಿಷ್ಟೆ, ಮೋಹ ಹೀಗೆ ಮಾನವ ಸಹಜವಾದ ಜೀವನದ ಆಗು ಹೋಗುಗಳನ್ನ, ಏರು ಪೇರುಗಳನ್ನ ಸುಂದರವಾಗಿ ಚಿತ್ರಿಸಲಾಗಿದೆ.

ಮಹಾಭಾರತ, ರಾಮಾಯಣಗಳು ಕಥೆಗಳಾಗಿದ್ದರೂ ಕೂಡ, ಭಾರತೀಯರಾದ ನಾವು ಇವುಗಳನ್ನ ಧಾರ್ಮಿಕ ಪೂಜನೀಯ ಗ್ರಂಥಗಳಾಗಿಯೇ ಪರಿಗಣಿಸುತ್ತೇವೆ. ಧರ್ಮದ ಹಾದಿಯಲ್ಲೇ ನಡೆದು ಗೆಲ್ಲುವ ಪಾಂಡವರು, ಏಕಪತ್ನೀ ವೃತಸ್ಥನಾಗಿ ಮರ್ಯಾದ ಪುರುಷೋತ್ತಮನೆನೆಸಿಕೊಂಡ ರಾಮ, ಅವನ ಆದರ್ಶ ಎಲ್ಲವೂ ಕೂಡ ಧಾರ್ಮಿಕ ರೀತಿಯಲ್ಲಿ ಮನುಷ್ಯನ ಲೌಕಿಕ ಜೀವನವನ್ನ ಜಾಗೃತಿಗೊಳಿಸುತ್ತದೆ.

ಈ ಸಂದರ್ಭದಲ್ಲಿ ಆದಿಗುರು ಶಂಕರಾಚಾರ್ಯರನ್ನ ನೆನಪಿಸಿಕೊಳ್ಳದೆ ಇದ್ದರೆ ಅದು ಘೋರ ಅಪರಾಧವಾಗ ಬಹುದೇನೊ ಅನ್ನಿಸಿ ಬಿಡುತ್ತದೆ. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. "ಅಹಂ ಬ್ರಹ್ಮಾಸ್ಮಿ" (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), "ತತ್ ತ್ವಮ್ ಅಸಿ" (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಆದಿ ಶಂಕರಾಚಾರ್ಯರು ಪರಮಾತ್ಮ, ಅಂದರೆ "ಆತ್ಮ", ಅದು ಮಾತ್ರ ಸತ್ಯ; ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ "ಸರ್ವಂ ಬ್ರಹ್ಮಮಯಂ ಜಗತ್" (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.

ಕಾಶಿಯಲ್ಲಿದ್ದ ಆಚಾರ್ಯರಿಗೆ ಒಮ್ಮೆ ಒಬ್ಬ ವಯಸ್ಸಾದ ವ್ಯಕ್ತಿ ಪಾಣಿನಿಯ ವ್ಯಾಕರಣವನ್ನ ಅಭ್ಯಸಿಸುವುದನ್ನ ಕಂಡರು. ಆ ಮುದುಕನ ಅವಸ್ಥೆಯನ್ನ ನೋಡಿ ಅವರಿಗೆ ಮರುಕ ಉಂಟಾಯಿತು. ಸಾವು ಸನ್ನಿಹಿತವಾದ ಸಮಯದಲ್ಲಿ ದೇವರನ್ನ ಪ್ರಾರ್ಥಿಸಿ, ಮನಸ್ಸನ್ನ ನಿಯಂತ್ರಿಸುವ ಬದಲು ಬೌಧಿಕ ಸಾಧನೆಗಾಗಿ ಶ್ರಮಿಸುತ್ತಿರುವ ದೃಶ್ಯ ಅವರ ಮನಕಲುಕಿತು. ಆಗ ಅವರ ಮನಸ್ಸಿನಲ್ಲಿ ಮೂಡಿದ್ದೆ.

ಭಜ ಗೋವಿಂದಂ ಭಜ ಗೋವಿಂದಮ್

ಭಜ ಗೋವಿಂದಮ್ ಮೂಢಮತೆ

ಸಂಪ್ರಾಪ್ತೆ ಸನ್ನಿಹಿತೇ ಕಾಲೆ

ನಹಿ ನಹಿ ರಕ್ಷತಿ ಡುಕ್ರಿಂಕರಣೇ

ಅಂದರೆ ಓ ಮೂಢ ಆ ಗೋವಿಂದನ್ನನು ಭಜಿಸು, ನಿನ್ನ ಸಾವು ಸಮೀಪಿಸುವಾಗ ವ್ಯಾಕರಣದ ಸೂತ್ರಗಳು ನಿನ್ನನ್ನ ರಕ್ಷಿಸುವುದಿಲ್ಲ.

ಇಡೀಯ ಅವರ ಪದ್ಯಗಳಲ್ಲಿ ಮೃದುತ್ವದ ಹೊರತಾಗಿ,  ನೇರವಾದ ಚುಚ್ಚು ನುಡಿಗಳಿಂದ ಕೂಡಿದಂತಿದೆ.

ಎರಡನೆ ಸಾಲಿನಲ್ಲಿ ಅವರು ಹೇಳುತ್ತಾರೆ “ ಹೇ ಮೂರ್ಖ ಹಣವನ್ನ ಕೂಡಿಡುವುದನ್ನು ನಿಲ್ಲಿಸಿ, ಸತ್ಯವೇನೆಂಬುದನ್ನು ಯೋಚಿಸು, ನೀನು ಈ ಹಿಂದೆ ಮಾಡಿದ ಕರ್ಮಗಳಿಂದ ಏನು ಫಲ ಪ್ರಾಪ್ತಿಯಾಗಿದೆಯೆಂದು ಯೋಚಿಸು.”

ಅನ್ನುತ್ತಾರೆ.

ಇನ್ನು ಕೆಲವು ಪ್ರಮುಖವಾದುದೆಂದರೆ 5 ನೇ ಸಾಲಿನ ಇವರು ಹೇಳುತ್ತಾರೆ

“ ಒಬ್ಬ ಮನುಷ್ಯ ಇಡೀಯ ಕುಟುಂಬವನ್ನ ಸಾಕಿ ನಿರ್ವಹಿಸಲು ಶಕ್ತನಾದರೆ ಎಲ್ಲರೂ ಅವನನ್ನು ಇಷ್ಟಪಟ್ಟು ಅವನನ್ನು ಪ್ರೀತಿಸುತ್ತಾರೆ. ಆದ್ರೆ ವಯಸ್ಸಿನ ಕಾರಣದಿಂದ ಆತ ಅಶಕ್ತನಾದರೆ ಆತನನ್ನು ಯಾರು ಇಷ್ಟಪಡುವುದಿಲ್ಲ, ಪ್ರೀತಿಸುವುದಿಲ್ಲ.

ನೀನು ಜೀವಂತವಾಗಿದ್ದಾಗ ಎಲ್ಲರೂ ನಿನ್ನನ್ನು ಪ್ರೀತಿಯೊಂದ ಮಾತನಾಡಿಸುತ್ತಾರೆ. ಅದೇ ನಿನ್ನ ದೇಹದಿಂದ ನಿನ್ನ ಜೀವವು ಹೊರ ಹೋದಾಗ ನಿನ್ನ ಪತ್ನಿಯೂ ಕೂಡ ನಿನ್ನ ಶವದ ಬಳಿ ಬರಲು ಹೆದರುತ್ತಾಳೆ.

ಇವರ ಆಧ್ಯಾತ್ಮಿಕ ಚಿಂತನೆಗಳಿಂದ ಮೂಡಿ ಬಂದ “ಭಜ ಗೋವಿಂದಂ” ಲೌಕಿಕ್ ಜೀವನದ ಅರ್ಥವನ್ನ ವಿವರಿಸುವ ಒಂದು ಸರ್ವ ಶ್ರೇಷ್ಟ ರಚನೆ, ವೇದ ಸಾರಗಳನ್ನ ಒಳಗೊಂಡು, “ನಾನು ಇಲ್ಲಿರಲು ಕಾರಣವೇನು? ಈ ಸಂಪತ್ತು, ಸಂಬಂಧ ಗಳಿದರೂ ನನಗೇಕೆ ಶಾಂತಿ ಎಂಬುದಿಲ್ಲ? ಯಾವುದು ಸತ್ಯ? ಈ ಜೀವನದ ಉದ್ದೇಶವೇನು? ಎನ್ನುವ ಪ್ರಶ್ನೆಗಳನ್ನ ಕೇಳುತ್ತ ಕೇವಲ ಬೌದ್ದಿಕ, ಸುಖ ಸಂತೋಷಗಳನ್ನ ಅನುಭವಿಸಿ ದೈವೀಕ ಧ್ಯಾನವನ್ನು ಮರೆತ ಮನುಷ್ಯನ ಸಹಜತನವನ್ನ ವಿವರಿಸಿ, ಆಧ್ಯಾತ್ಮಿಕತೆಯತ್ತ ಯೊಚನೆಯನ್ನ ಹೊರಳಿಸುವ ಒಂದು ಅಸಾಧಾರಣ ಕೃತಿ. ಅವರ ಮಾತುಗಳು ಚುಚ್ಚು ನುಡಿಯಂತಿದ್ದರೂ ಕೂಡ, ನೋವಿನ ಗಡೆಯನ್ನು ಕೊಯ್ಯಲು ವೈದ್ಯರು ಚಾಕು ಉಪಯೋಗಿಸಿದಂತೆ, ಅವರ ಮಾತಿನಿಂದ ಮನುಷ್ಯನ ಹೃದಯದಲ್ಲಿರುವ ರೋಗದ ಗಡ್ಡೆಯನ್ನು ಕಿತ್ತು ಹಾಕುವ ಪ್ರಯತ್ನ ಮಾಡಿದ್ದಾರೆ.

 

ಸ್ವಲ್ಪ ಯೋಚಿಸಿ ಇದು ಎಷ್ಟೋ ಸಾವಿರ ವರುಷಗಳ ಹಿಂದೆ ರಚಿಸಲ್ಪಟ್ಟ ತತ್ವ ಶಾಸ್ತ್ರ, ಆದ್ರೆ ಅದು ಈಗಲೂ ಪ್ರಸ್ತುತ.

ಇದು ಯಾವುದನ್ನು ಯಾವ ಶಾಲೆ, ಕಾಲೇಜು ಗಳಲ್ಲಿಯೂ ಬೋದಿಸುವುದಿಲ್ಲ. ಇಂತಹ ವಿಷಯಗಳು ಕೇವಲ, ಧಾರ್ಮಿಕ ಚಿಂತನೆಗಳಿಂದ ಮಾತ್ರ ತಿಳಿಯಲು ಸಾಧ್ಯ.

ಪ್ರತಿಯೊಂದು ಧಾರ್ಮಿಕ ಆಚರಣೆ, ಕಟ್ಟಪಾಡುಗಳು ಸುಖಾ ಸುಮ್ಮನೆ ಸೃಷ್ಟಿಯಾದವುಗಳಲ್ಲ. ಪ್ರತಿಯೊಂದಕ್ಕು ತನ್ನದೆ ಆದ ವಿಶೇಷ ಅರ್ಥ,ಆಸಕ್ತಿ, ಕಾಳಜಿ, ಸಿದ್ದಾಂತಗಳಿರುತ್ತವೆ. ಹಬ್ಬ ಹರಿದಿನಗಳನ್ನ ಆಚರಿಸಬೇಕು ಎನ್ನುವುದರ ಹಿಂದೆ ದೈನಂದಿನ ಜಂಜಾಟಗಳಿಂದ ದೂರ ಉಳಿದು ಅವತ್ತು ಕುಟುಂಬದ, ಆಪ್ತೇಷ್ಟರೊಂದಿಗೆ ಸಂತಸ ಹಂಚಿಕೊಳ್ಳಬೇಕು ಎನ್ನುವ ಕಾಳಜಿ ಇದೆ. ಪೂಜೆ ಪುನಸ್ಕಾರದ ದಿವಸ ದಾನ ಕೊಡ ಬೇಕು ಎನ್ನುವ ಹಿಂದೆ ಒಬ್ಬ ಸಂಪತ್ತು ಉಳ್ಳವನಿಂದ, ಸಂಪತ್ತಿನ ಅವಶ್ಯಕತೆ ಉಳ್ಳ ಇನ್ನೊಬ್ಬನಿಗೆ ಅದು ದೊರಕಿ ಸಂಪತ್ತು ಒಂದೇ ಕಡೆ ಕ್ರೋಢೀಕರಣ ತಪ್ಪ ಬೇಕು ಅನ್ನುವ ಒಂದು ಮಹದಾಶವಿದೆ. ಧಾರ್ಮಿಕತೆ ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗ.. ಆದ್ದರಿಂದಲೆ ನಾನು ಹೇಳಿದ್ದು ಧರ್ಮ ಎನ್ನುವುದು ಒಂದು ಸಾಮಾನ್ಯ ಲೌಕಿಕ ಜೀವನದ ತಿಳುವಳಿಕೆ ಎಂದು. ಧರ್ಮ ವಿಮುಖನಾಗಿ ಮನುಷ್ಯ ಬಾಳುವುದು ಕಷ್ಟಸಾಧ್ಯ. ಧರ್ಮವಿರುವುದೇ ಮನುಕುಲದ ಉದ್ಧಾರಕ್ಕಾಗಿ.

ಜೀವನವು ಕ್ಷಣಭಂಗುರವಾಗಿದ್ದು ಭೋಗಲಾಲಸೆಯ ನೀತಿಯು ಅರ್ಥಹೀನವಾದದ್ದು.

ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ, ನಷ್ಟಗಳಿಗಾಗಿ ಅಲ್ಲ.

ಧರ್ಮೋ ರಕ್ಷತಿ ರಕ್ಷಿತಃ

ಸರ್ವೇ ಜನಾಃ ಸುಖಿನೋ ಭವಂತು