೫೪. ಶ್ರೀ ಲಲಿತಾ ಸಹಸ್ರನಾಮ ೧೫೮ರಿಂದ ೧೬೪ನೇ ನಾಮಗಳ ವಿವರಣೆ

೫೪. ಶ್ರೀ ಲಲಿತಾ ಸಹಸ್ರನಾಮ ೧೫೮ರಿಂದ ೧೬೪ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೫೮ - ೧೬೪

Nirmadā निर्मदा (158)

೧೫೮. ನಿರ್ಮದಾ

          ದೇವಿಯು ಗರ್ವವಿಲ್ಲದವಳು. ಮದವೆಂದರೆ ಗರ್ವವೆಂದರ್ಥ. ಯಾರ ಬಳಿಯಲ್ಲದಾರೂ ಇನ್ನೊಬ್ಬರ ಬಳಿ ಇಲ್ಲದಿರುವ ವಸ್ತುವು ಇದ್ದರೆ ಅದು ಗರ್ವಕ್ಕೆ ಎಡೆಮಾಡಿ ಕೊಡುತ್ತದೆ. ಆಕೆಯ ಬಳಿ ಎಲ್ಲವೂ ಇದೆ ಮತ್ತು ಎಲ್ಲವೂ ಆಕೆಯಿಂದಲೇ ಹೊರಹೊಮ್ಮುತ್ತದೆ. (ಹಿರಣ್ಯಗರ್ಭ ಅಥವಾ ಬಂಗಾರದ ಮೊಟ್ಟೆ/ಗರ್ಭವು ನಾಶಹೊಂದದೇ ಇರುವ ಸಂಕೀರ್ಣ ವಸ್ತುವಾದ ಪರಬ್ರಹ್ಮವಾಗಿದೆ. ಅದು ಹೊಳೆಯುವ ಬೆಂಕಿಯ ಸಿಂಚನ (ಮಂಜು) ಅಥವಾ ಪಾರಮಾರ್ಥಿಕ ವಸ್ತು; ಇದರಿಂದ ಈ ಪ್ರಪಂಚವು ಉದ್ಭವವಾಯಿತು ಮತ್ತು ಇದನ್ನು ಬ್ರಹ್ಮಕ್ಕೆ ಆರೋಪಿಸಲಾಗುತ್ತದೆ. ಇದನ್ನು ಋಗ್-ವೇದದಲ್ಲಿ, “ಅದು ಬಂಗಾರದ ಮೊಟ್ಟೆಯಿಂದ ಹುಟ್ಟಿತು, ಮತ್ತದು ನೀರಿನಲ್ಲಿರಿಸಿದ ಬೀಜದಿಂದ ಉಂಟಾಯಿತು ಮತ್ತು ಇದು ಸ್ವಯಂ ಅಸ್ತಿತ್ವ ಹೊಂದಿರುವವನ ರೂಪಾಂತರಗಳಿಂದ ಉತ್ಪನ್ನವಾಗಿದೆ” ಎಂದು ವಿವರಿಸಲಾಗಿದೆ). ದೇವಿಗೆ ಯಾವುದೋ ಒಂದು ವಸ್ತುವಿನ ಬಗೆಗೆ ಗರ್ವಪಡುವ ಅವಶ್ಯಕತೆಯಿಲ್ಲ.

Madanāśinī मदनाशिनी (159)

೧೫೯. ಮದನಾಶಿನೀ

          ದೇವಿಯು ತನ್ನ ಭಕ್ತರ ಮದವನ್ನು ನಾಶಪಡಿಸುತ್ತಾಳೆ. ಗರ್ವವನ್ನು ಕಳೆದುಕೊಳ್ಳುವುದು ಬ್ರಹ್ಮವನ್ನು ಅರಿಯುವುದಕ್ಕೆ ಬೇಕಾಗಿರುವ ಪೂರ್ವನಿಯಮಗಳಲ್ಲಿ ಒಂದಾಗಿದೆ. ಯಾವುದು ಅನುಸರಿಸಲ್ಪಡುತ್ತದೆಯೋ ಅದೇ ಬೋಧಿಸಲ್ಪಡಬೇಕು. ದೇವಿಯು ಗರ್ವರಹಿತಳಾಗಿದ್ದಾಳೆ ಆದ್ದರಿಂದ ಆಕೆಯು ತನ್ನ ಭಕ್ತರೂ ಕೂಡಾ ಗರ್ವರಹಿತರಾಗಿರ ಬೇಕೆಂದು ಬಯಸುತ್ತಾಳೆ.

Niścintā निश्चिन्ता (160)

೧೬೦. ನಿಶ್ಚಿಂತಾ

          ದೇವಿಯು ಚಿಂತೆಯಿಲ್ಲದವಳಾಗಿದ್ದಾಳೆ. ಚಿಂತೆಗಳು ಹಿಂದಿನ ನೆನಪುಗಳನ್ನು ಜ್ಞಾಪಿಸಿಕೊಳ್ಳುವುದರಿಂದ ಹುಟ್ಟುತ್ತವೆ. ದೇವಿಯು ದೇಶ ಮತ್ತು ಕಾಲಕ್ಕೆ ಅತೀತಳಾದವಳಾದ್ದರಿಂದ ಆಕೆಗೆ ಯಾವುದೇ ವಿಧವಾದ ಹಿನ್ನಲೆ ಅಥವಾ ಚರಿತ್ರೆ ಇಲ್ಲ. ದೇವಿಯು ಈ ಪ್ರಪಂಚವನ್ನು ನಿರ್ವಹಿಸುವ ಹೊಣೆಯನ್ನು ಹೊತ್ತುಕೊಂಡಿದ್ದರೂ ಕೂಡಾ ಆಕೆಗೆ ಯಾವುದೇ ವಿಧವಾದ ಚಿಂತೆಗಳು ಇಲ್ಲ, ಏಕೆಂದರೆ ದೇವಿಯು ತನ್ನ ಬುದ್ಧಿವಂತಿಕೆಯಿಂದ ಮಂತ್ರಿಗಳಾದ ವಾರಾಹಿ ಮತ್ತು ಶ್ಯಾಮಲಾ ದೇವಿಯರಿಗೆ ಕಾರ್ಯನಿರ್ವಹಣೆಯನ್ನು ವಹಿಸಿದ್ದಾಳೆ. ದೇವಿಯನ್ನು ಶ್ರೀ ಚಕ್ರದಲ್ಲಿ ನವಾವರಣ ಪೂಜೆಯ ಮೂಲಕ ಆರಾಧಿಸುವಾಗ ಇದನ್ನು ತಿಳಿಯಬಹುದಾಗಿದೆ. ಈ ವಿಷಯವು ೧೫೫ ನೇ ನಾಮವಾದ ’ನಿರೀಶ್ವರಾ’ಕ್ಕೆ ಪೂರಕವಾಗಿದೆ.

Nirahaṃkārā निरहंकारा (161)

೧೬೧. ನಿರಹಂಕಾರಾ

          ಆಕೆಯು ಅಹಂಕಾರ ರಹಿತಳಾಗಿದ್ದಾಳೆ. ಅಹಂಕಾರವು ಮೂರು ಗುಣಗಳಿಂದ ಉಂಟಾಗುತ್ತದೆ; ಅವೆಂದರೆ ಸತ್ವ, ರಜಸ್ ಮತ್ತು ತಮಸ್; ಇವುಗಳನ್ನಾಗಲೇ ನಾಮ ೧೩೯ರಲ್ಲಿ ಚರ್ಚಿಸಲಾಗಿದೆ; ಅದರಲ್ಲಿ ದೇವಿಯು ಈ ಮೂರು ಗುಣಗಳಿಲ್ಲದವಳಾಗಿದ್ದಾಳೆ ಎಂದು ಹೇಳಲಾಗಿದೆ. ಆಕೆಗೆ ಯಾವುದೇ ಗುಣಗಳಿಲ್ಲವೆಂದು ಹೇಳಿರುವುದರಿಂದ ಇದು ಆಕೆಯು ಅಹಂಕಾರ ರಹಿತಳೆನ್ನುವುದನ್ನು ಪ್ರತಿಪಾದಿಸುತ್ತದೆ.

Nirmohā निर्मोहा (162)

೧೬೨. ನಿರ್ಮೋಹಾ

          ಮೋಹವೆಂದರೆ ಅವಿವೇಕದೆಡೆಗೆ ಕರೆದೊಯ್ಯುವ ದಿಗ್ಭ್ರಮೆ, ಕಂಗೆಡುವುದು, ಗಲಿಬಿಲಿ, ಆಕರ್ಷಣೆ, ವ್ಯಾಮೋಹ, ಮರುಳಾಗುವುದು. ಭ್ರಮೆಗೊಳಗಾಗುವುದು ಮೊದಲಾದವುಗಳು. ದೇವಿಯು ಮನಸ್ಸಿನಿಂದ ಉದ್ಭವಿಸುವ ಯಾವುದೇ ವಿಧವಾದ ಗೊಂದಲವಿಲ್ಲದವಳಾಗಿದ್ದಾಳೆ. ಮನಸ್ಸು ದೇವರನ್ನು ಅರಿಯುವಲ್ಲಿ ಮಹತ್ತರವಾದದ್ದು; ಮನಸ್ಸನ್ನು ಚಿಂತನಾರಹಿತ ಸ್ಥಿತಿಗೆ ಅನುಗೊಳಿಸುವುದರ ಮೂಲಕ ಅದು ಆತ್ಮ ಸಾಕ್ಷಾತ್ಕಾರಕ್ಕೆ ಕರೆದೊಯ್ಯುತ್ತದೆ. ಈಶ ಉಪನಿಷತ್ತು (ಶ್ಲೋಕ ೭) ಪ್ರಶ್ನಿಸುತ್ತದೆ, "ಯಾವಾಗ ಒಬ್ಬ ವ್ಯಕ್ತಿಯು ತಾನೇ ಎಲ್ಲವೂ ಅಗಿರುವುನೆಂದು ತಿಳಿದ ನಂತರ ಮತ್ತು ವಿವಿಧ ವಸ್ತುಗಳಲ್ಲಿನ ಏಕತೆಯನ್ನು ಗುರುತಿಸಿದ ನಂತರ ಒಬ್ಬನು ಅದು ಹೇಗೆ ತಾನೆ ಯಾವುದನ್ನಾಗಲಿ ಮೋಹಿಸುವುದಾಗಲಿ ಅಥವಾ ದ್ವೇಷಿಸುವುದಾಗಲಿ ಮಾಡಬಲ್ಲ?" ಪ್ರೀತಿ ಮತ್ತು ದ್ವೇಷಗಳು ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ. ಭಗವದ್ಗೀತೆಯ ೧೪ನೇ ಅಧ್ಯಾಯದ ೨೨ರಿಂದ ೨೫ನೇ ಶ್ಲೋಕಗಳಲ್ಲಿ ಭಗವಾನ್ ಕೃಷ್ಣನು ಹೀಗೆ ಹೇಳುತ್ತಾನೆ, " ಯಾರು ಈ ಎಲ್ಲಾ ಗುಣ ಸ್ವಭಾವಗಳಿಂದುಂಟಾದ ಪ್ರತಿಕ್ರಿಯೆಗಳ ಮೂಲಕ ವಿಚಲಿತನಾಗದೆ ಮತ್ತು ಗೊಂದಲಕ್ಕೊಳಗಾಗದೆ ಸ್ಥಿತಪ್ರಜ್ಞನಾಗಿ ಮತ್ತು ಅವುಗಳಿಗೆ ಅತೀತನಾಗಿರುತ್ತಾನೆಯೋ, ಈ ಸ್ಥಿತಿಗಳಷ್ಟೇ ಕ್ರಿಯಾಶೀಲವಾಗಿವೆಯೆಂದು ಅರಿಯುತ್ತಾನೆಯೋ, ಯಾರು ಆತ್ಮದಲ್ಲಿಯೇ ಲೀನವಾಗಿರುತ್ತಾನೋ ಮತ್ತು ಸುಖ-ಸಂತೋಷಗಳನ್ನು ಒಂದೇ ವಿಧವಾಗಿ ಸ್ವೀಕರಿಸುತ್ತಾನೆಯೋ; ಯಾರು ಒಂದು ಮಣ್ಣಿನ ಹೆಂಟೆಯನ್ನು, ಒಂದು ಕಲ್ಲನ್ನು ಹಾಗೂ ಒಂದು ಬಂಗಾರದ ತುಣುಕನ್ನು ಒಂದೇ ದೃಷ್ಟಿಯಿಂದ ಕಾಣುತ್ತಾನೆಯೋ....ಅಂತಹ ವ್ಯಕ್ತಿಯು ಸ್ವಭಾವದ ವಿವಿಧ ಸ್ಥಿತಿಗಳನ್ನು ಅಧಿಗಮಿಸಿದವನಾಗಿರುತ್ತಾನೆ". ಅಂತಹ ವ್ಯಕ್ತಿಗೆ ಯಾವುದೇ ವಿಧವಾದ ಗೊಂದಲ (ನಾಮಾವಳಿ ೧೬೨), ಅಹಂಕಾರ (ನಾಮಾವಳಿ ೧೬೧) ಮತ್ತು ಚಿಂತೆಗಳಿರುವುದಿಲ್ಲ (ನಾಮಾವಳಿ ೧೬೦).

Mohanāśinī मोहनाशिनी (163)

೧೬೩. ಮೋಹನಾಶಿನೀ

          ದೇವಿಯು ತನ್ನ ಭಕ್ತರ ಮನದಲ್ಲೇಳುವ ಸಂಶಯಗಳನ್ನು ನಾಶಗೊಳಿಸುತ್ತಾಳೆ. ಯಾವಾಗ ಭಕ್ತನು ಯಾವುದೇ ವಿಧವಾದ ಗೊಂದಲವಿಲ್ಲದವನಾಗುತ್ತಾನೆಯೋ ಆಗ ಅವನು ಆಧ್ಯಾತ್ಮಿಕ ಪಥದಲ್ಲಿ ಮುಂದುವರಿಯುತ್ತಾನೆ. ಈಶೋಪನಿಷತ್ತು (ಶ್ಲೋಕ ೭) ಹೇಳುತ್ತದೆ, "ಏಕತ್ವಂ ಅನು ಪಶ್ಯತಃ" ಅಂದರೆ ಎಲ್ಲೆಡೆಯಲ್ಲಿಯೂ ಒಂದೇ ವಸ್ತುವನ್ನು - ಬ್ರಹ್ಮವನ್ನು ನೋಡುವುದು”. ಈ ಮುಂಚೆಯೇ ನೋಡಿದಂತೆ ಕೇವಲ ‘ಶಕ್ತಿ’ ಮಾತ್ರಳೇ ಒಬ್ಬನನ್ನು ಬ್ರಹ್ಮನೆಡೆಗೆ ಕರೆದೊಯ್ಯಬಲ್ಲಳು. ಯಾವಾಗ ಮಾಯೆಯೆಂದು ಕರೆಯಲ್ಪಟ್ಟಿರುವ ಶಕ್ತಿಯು ಒಬ್ಬನನ್ನು ಶಿವನ (ಪರಬ್ರಹ್ಮದ) ಬಳಿ ಕೊಂಡೊಯ್ದು ದೂರ ಸರಿಯುವಳೋ ಆಗ ಆಕೆಯು ಬ್ರಹ್ಮವನ್ನು ಅರಿಯಲು ಪೂರಕವಾಗುತ್ತಾಳೆ. ಸ್ವಯಂಪ್ರಕಾಶಿತ ಬ್ರಹ್ಮವು ಮಾಯೆಯು ನಾಶಹೊಂದಿದಾಗ ಮಾತ್ರವೇ ಸಾಕ್ಷಾತ್ಕಾರವಾಗುವುದು.

Nirmamā निर्ममा (164)

೧೬೪. ನಿರ್ಮಮಾ

          ಆಕೆಗೆ ತನ್ನ ಬಗ್ಗೆ ಮಮಕಾರವಿಲ್ಲ. ಒಬ್ಬನಿಗೆ ಮಮಕಾರವಿದ್ದರೆ ಅವನು ತಾನು ಬ್ರಹ್ಮಕ್ಕಿಂತ ಭಿನ್ನವಾದವನೆಂದು ಗುರುತಿಸಿಕೊಳ್ಳುತ್ತಾನೆ. ಇದನ್ನೇ ದ್ವೈತವೆಂದು ಕರೆಯಲಾಗುತ್ತದೆ ಮತ್ತು ಇದನ್ನು ಅನುಸರಿಸಬಾರದು. ಇದನ್ನು ಮೊದಲನೇ ನಾಮವಾದ ’ಶ್ರೀ ಮಾತಾ’ ಎನ್ನುವುದರ ದೃಷ್ಟಿಕೋನದಿಂದ ನೋಡಿದಾಗ, ಜಗನ್ಮಾತೆಯು ತನ್ನ ಬಗ್ಗೆ ತಾನು ಕಾಳಜಿ ಹೊಂದಿರುವುದಿಲ್ಲ, ಆಕೆಯ ಕಾಳಜಿ ಏನಿದ್ದರೂ ತನ್ನ ಮಕ್ಕಳು ಅಂದರೆ ಈ ಬ್ರಹ್ಮಾಂಡದ ಜೀವಿಗಳ ಕುರಿತಾಗಿ ಇರುತ್ತದೆ. ಪರಬ್ರಹ್ಮದ ದೃಷ್ಟಿಯಿಂದ ನೋಡಿದಾಗ ಮಮಕಾರ ರಾಹಿತ್ಯತೆ ಎನ್ನುವುದನ್ನು ನಕಾರಾತ್ಮಕ ಕೋನದಿಂದ ಹೇಳಲಾಗಿದೆ.

           ಆಸಕ್ತಿಕರ ವಿಷಯವೇನೆಂದರೆ ನಾಮ ೧೬೪ರ ಮುಂದಿನ ನಾಮಗಳು ಆಕೆಗೆ ಇಂತಹ ಗುಣಗಳಿಲ್ಲವೆಂದು ಹೇಳಿದರೆ ಅದರ ಮುಂದಿನ ನಾಮವು ಆಕೆಯು ತನ್ನ ಭಕ್ತರ ಇಂತಹ ಗುಣಗಳನ್ನು ನಾಶಗೊಳಿಸುತ್ತಾಳೆ ಎಂದು ಹೇಳುತ್ತದೆ. ಉದಾಹರಣೆಗೆ, ೧೬೬ನೇ ನಾಮವು ‘ನಿಷ್ಪಾಪಾ’ (ಪಾಪವಿಲ್ಲದವಳು) ಎಂದರೆ ಅದರ ಮುಂದಿನ ೧೬೭ನೇ ನಾಮವು ‘ಪಾಪ-ನಾಶಿನೀ’ (ತನ್ನ ಭಕ್ತರ ಪಾಪವನ್ನು ಇಲ್ಲವಾಗಿಸುವವಳು) ಎನ್ನುತ್ತದೆ. (ಇದೇ ವಿಧವಾಗಿ ೧೫೮ - ನಿರ್ಮದಾ ಆದರೆ ೧೫೯ - ಮದನಾಶಿನೀ; ೧೬೨ - ನಿರ್ಮೋಹಾ, ಮೋಹನಾಶಿನೀ ಕೂಡಾ ಇವೆ. ಆದರೆ ಇವುಗಳ ಮಧ್ಯೆ ಬೇರೆ ನಾಮಗಳೂ ಇವೆ).

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 158-164 http://www.manblunder.com/2009/09/lalitha-sahasranamam-158-164.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 

 

Rating
No votes yet

Comments

Submitted by nageshamysore Wed, 06/26/2013 - 21:19

ಶ್ರೀಧರರೆ, 158-164 - ತಮ್ಮ ಅವಗಾಹನೆ ಮತ್ತು ಪರಿಶೀಲನೆಗೆ ಸಿದ್ದ , ನಾಗೇಶ ಮೈಸೂರು :-)

ಲಲಿತಾ ಸಹಸ್ರನಾಮ ೧೫೮ - ೧೬೪
 

೧೫೮. ನಿರ್ಮದಾ  

ಎಲ್ಲವೂ ಅವಳ ಕಾಲಡಿ, ಚಿನ್ನದ ಗರ್ಭದಿಂದೆಲ್ಲ ಹೊಮ್ಮಿದ ಮೋಡಿ
ಅವಿನಾಶಿ ಪರಬ್ರಹ್ಮ ಪ್ರಕಾಶ, ಬ್ರಹ್ಮ ಪ್ರಪಂಚವನ್ಹುಟ್ಟಿಸಿದ ಗಾರುಡಿ
ಸ್ವಯಂಭುವೆ ಜಲಬೀಜದಿಂದ, ರೂಪಾಂತರಿಸಿದ ಉತ್ಪನ್ನ ಸಮೃದ್ಧಾ
ಎಲ್ಲವು ತನ್ನದಾಗಿಹ ಲಲಿತೆಗೆಲ್ಲೀ ಗರ್ವ, ತಾ ಬ್ರಹ್ಮವಾಗಿ ನಿರ್ಮದಾ!

೧೫೯. ಮದನಾಶಿನೀ  
ಗರ್ವದಿ ಮೆರೆದರೆ ಭಕ್ತ, ಬ್ರಹ್ಮವನರಿಯಲು ಸಾಧ್ಯವೆ
ಪಾಲಿಸಲಾಗದ ಭೋಧನೆ, ಅನುಸರಿಸೆ ಅಸಮ್ಮತವೆ  
ಬ್ರಹ್ಮವೆ ತಾನಾಗಿದ್ದು, ನಿಗರ್ವಿಯಾಗಿಹಳೆ ಜಗಜ್ಜನನಿ
ಬ್ರಹ್ಮವರಸೊ ಭಕ್ತರ, ಗರ್ವ ತೊಡೆವಳೆ ಮದನಾಶಿನೀ! 
೧೬೦. ನಿಶ್ಚಿಂತಾ  
ದೇಶ ಕಾಲಾತೀತೆ ಲಲಿತೆ, ಅಸಂಗತ ಹಿನ್ನಲೆ ಚರಿತೆ
ಕಾರ್ಯ ನಿರ್ವಹಣೆಗೆ, ಮಂತ್ರಿಣೀ ದೇವಿ ಸದಾ ಜೊತೆ
ಹೊತ್ತಿದ್ದರೂ ಜಗದ ಹೊಣೆ, ದೇವಿಗಿಲ್ಲಾ ಚಿಂತೆ ಬವಣೆ
ನಿಶ್ಚಿಂತೆಯಲಿ ಭಕ್ತರಕಾಯುವ, ಕರುಣೆಗೆ ಎಲ್ಲಿದೆ ಎಣೆ!

೧೬೧. ನಿರಹಂಕಾರಾ  
ಸತ್ವಗುಣ ರಾಜಸ ತಾಮಸ, ಜತೆ ಸೇರಿದರೆ ಅಹಂಕಾರ 
ತ್ರಿಗುಣಗಳನಂಕೆಯಲಿಡದಿರೆ ತೊಡಕೆ, ಸಾಧನೆಗೆ ದೂರ
ನಿರ್ಗುಣಬ್ರಹ್ಮರೂಪದೇವಿ, ತ್ರಿಗುಣರಹಿತೆ ನಿರಹಂಕಾರಾ
ಗುಣ ಲಕ್ಷಣವೆ ಇರದ ಲಲಿತೆ, ಬ್ರಹ್ಮವಾಗಿ ಸಾಕ್ಷಾತ್ಕಾರ!
 

೧೬೨. ನಿರ್ಮೋಹಾ
ದಿಗ್ಬ್ರ್ಹಮೆ ಗಲಿಬಿಲಿ ಭ್ರಮೆ ಮರುಳು, ಆಕರ್ಷಣೆ ವ್ಯಾಮೋಹ ಕಂಗೆಡಿಸೆ
ಗೊಂದಲ ತುಂಬಿದೀ ಮೋಹಗಳೆ, ಮನಸನು ಅವಿವೇಕದೆಡೆಗೆ ನಡೆಸೆ 
ತಾನೆ ಎಲ್ಲವೆಂದರಿತ ಮನ ಚಿಂತನಾರಹಿತ, ಎಲ್ಲ ತಾನಾಗುತಾ ಈಶ
ಅವಿಚಲಿತ ಸ್ಥಿತಪ್ರಜ್ಞ ಪ್ರೀತಿ-ದ್ವೇಷ, ಗೊಂದಲಕತೀತನಾಗೆ ನಿರ್ಮೋಹ!  

೧೬೩. ಮೋಹನಾಶಿನೀ  

ಗೊಂದಲವಿಲ್ಲದ ಸಾಧಕಗೆ, ಸುಲಭದ ನಡೆ ಆಧ್ಯಾತ್ಮಿಕ
ನೋಡಿದೆಲ್ಲೆಡೆ ಕಾಣುತೆ ಮುಖ, ಬ್ರಹ್ಮವಾಗಿ ಎಲ್ಲ ಸುಖ
ಅದನರಿಸುವ ಪೂರಕ ಶಕ್ತಿ, ಕೈಹಿಡಿದೆ ಕರೆದವಳ ದನಿ  
ಮಾಯೆಯ ಗೆಲ್ಲೆ ಸಾಕ್ಷಾತ್ಕಾರ, ದೇವಿ ಮೋಹನಾಶಿನೀ!

೧೬೪. ನಿರ್ಮಮಾ  
ಸ್ವಮಮಕಾರವಿರೆ ಮನುಜ, ಬ್ರಹ್ಮ ತಾನಲ್ಲದ ಗುರುತು
ಎರಡೆಂದುಕೊಳ್ಳೆ ದ್ವೈತ, ಬ್ರಹ್ಮ ತಾನಾಗದವನ ಮಾತು
ಸಲಹುವಂತೆ ಮಾತೆ, ಬ್ರಹ್ಮಾಂಡ ಜೀವಿಗಳ ನಿರ್ಮಮಾ
ರೂಪ ಗುಣವಿಲ್ಲದಾ ತನ್ನನೆ, ಬ್ರಹ್ಮವೆಂದರಿಸುವ ಪ್ರೇಮ!

Submitted by makara Thu, 06/27/2013 - 10:27

In reply to by nageshamysore

೧೫೮-೧೬೪ರ ಪರಿಷ್ಕರಣೆ,
ನಾಗೇಶರೆ,
ಈ ಕಂತಿನಲ್ಲಿ ನನಗೆ ಅತ್ಯಂತ ಸಂತೋಷಕೊಟ್ಟಿದ್ದು ೧೫೮ (ನಿರ್ಮದಾ) ಮತ್ತು ೧೬೪ ನಿರ್ಮಮಾ. ಅದರಲ್ಲೂ ಅತೀ ಸುಂದರವಾಗಿರುವುದು ಈ ಸಾಲುಗಳು,
ಸ್ವಮಮಕಾರವಿರೆ ಮನುಜ, ಬ್ರಹ್ಮ ತಾನಲ್ಲದ ಗುರುತು
ಎರಡೆಂದುಕೊಳ್ಳೆ ದ್ವೈತ, ಬ್ರಹ್ಮ ತಾನಾಗದವನ ಮಾತು

ಉಳಿದಂತೆ, ಈ ಸಣ್ಣ ಪುಟ್ಟ ಪರಿಷ್ಕರಣೆಗಳತ್ತ ಗಮನ ಹರಿಸಿ.
೧೫೮. ನಿರ್ಮದಾ
ಅವಿನಾಶಿ ಪರಬ್ರಹ್ಮ ಪ್ರಕಾಶ, ಬ್ರಹ್ಮ ಪ್ರಪಂಚವನ್ಹುಟ್ಟಿಸಿದ ಗಾರುಡಿ
ಪ್ರಪಂಚವನ್ಹುಟ್ಟಿಸಿದ= ಪ್ರಪಂಚವ ಸೃಜಿಸಿದ ಗಾರುಡಿ ಹೆಚ್ಚು ಸೂಕ್ತವಾಗುತ್ತದೆ.

೧೫೯. ಮದನಾಶಿನೀ
ಗರ್ವದಿ ಮೆರೆದರೆ ಭಕ್ತ, ಬ್ರಹ್ಮವನರಿಯಲು ಸಾಧ್ಯವೆ
ಬ್ರಹ್ಮವನರಿಯಲು=ಬ್ರಹ್ಮವರಿಯಲು
ಪಾಲಿಸಲಾಗದ ಭೋಧನೆ, ಅನುಸರಿಸೆ ಅಸಮ್ಮತವೆ
ಬ್ರಹ್ಮವೆ ತಾನಾಗಿದ್ದು, ನಿಗರ್ವಿಯಾಗಿಹಳೆ ಜಗಜ್ಜನನಿ
ನಿಗರ್ವಿಯಾಗಿಹಳೆ=ನಿಗರ್ವಿಯಾಗಿಹ
ಬ್ರಹ್ಮವರಸೊ ಭಕ್ತರ, ಗರ್ವ ತೊಡೆವಳೆ ಮದನಾಶಿನೀ!
ತೊಡೆವಳೆ=ತೊಡೆವ
ಇಲ್ಲದಿದ್ದರೆ, ನಿಗರ್ವಿಯಾಗಿಹಳೆ/ತೊಡೆವಳೆ ಎಂದರೆ ದೇವಿಯನ್ನು ಪ್ರಶ್ನಿಸಿದಂತಾಗುತ್ತದೆ. ಆದ್ದರಿಂದ ಅವುಗಳನ್ನು ಸೂಕ್ತವಾಗಿ ಮಾರ್ಪಡಿಸಿ.

೧೬೩. ಮೋಹನಾಶಿನೀ

.......................................................
ನೋಡಿದೆಲ್ಲೆಡೆ ಕಾಣುತೆ ಮುಖ, ಬ್ರಹ್ಮವಾಗಿ ಎಲ್ಲ ಸುಖ
ಅದನರಿಸುವ ಪೂರಕ ಶಕ್ತಿ, ಕೈಹಿಡಿದೆ ಕರೆದವಳ ದನಿ
..........................................................
ಈ ಎರಡು ಸಾಲುಗಳು ಸ್ವಲ್ಪ ಗೋಜಲೆನಿಸುತ್ತವೆ. ಸ್ವಲ್ಪ ಸ್ಪಷ್ಟತೆ ತರಲು ಸಾಧ್ಯವಿದೆಯೋ ನೋಡಿ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by nageshamysore Thu, 06/27/2013 - 21:10

In reply to by makara

ಶ್ರೀಧರರೆ, 158-164, ತಿದ್ದುಪಡಿಯಾದ ನಂತರ ಹೀಗಿದೆ, ಪುನರ್ಪರಿಶೀಲನೆಗೆ - ನಾಗೇಶ ಮೈಸೂರು :-)

೧೫೮. ನಿರ್ಮದಾ 
ಎಲ್ಲವೂ ಅವಳ ಕಾಲಡಿ, ಚಿನ್ನದ ಗರ್ಭದಿಂದೆಲ್ಲ ಹೊಮ್ಮಿದ ಮೋಡಿ
ಅವಿನಾಶಿ ಪರಬ್ರಹ್ಮ ಪ್ರಕಾಶ, ಬ್ರಹ್ಮ ಪ್ರಪಂಚವ ಸೃಜಿಸಿದ ಗಾರುಡಿ
ಸ್ವಯಂಭುವೆ ಜಲಬೀಜದಿಂದ, ರೂಪಾಂತರಿಸಿದ ಉತ್ಪನ್ನ ಸಮೃದ್ಧಾ
ಎಲ್ಲವು ತನ್ನದಾಗಿಹ ಲಲಿತೆಗೆಲ್ಲೀ ಗರ್ವ, ತಾ ಬ್ರಹ್ಮವಾಗಿ ನಿರ್ಮದಾ!

೧೫೯. ಮದನಾಶಿನೀ 
ಗರ್ವದಿ ಮೆರೆದರೆ ಭಕ್ತ, ಬ್ರಹ್ಮವರಿಯಲು ಸಾಧ್ಯವೆ
ಪಾಲಿಸಲಾಗದ ಭೋಧನೆ, ಅನುಸರಿಸೆ ಅಸಮ್ಮತವೆ 
ಬ್ರಹ್ಮವೆ ತಾನಾಗಿದ್ದು, ನಿಗರ್ವಿಯಾಗಿಹ ಜಗಜ್ಜನನಿ
ಬ್ರಹ್ಮವರಸೊ ಭಕ್ತರ, ಗರ್ವ ತೊಡೆವ ಮದನಾಶಿನೀ!

೧೬೩. ಮೋಹನಾಶಿನೀ 
ಗೊಂದಲವಿಲ್ಲದ ಸಾಧಕಗೆ, ಸುಲಭದ ನಡೆ ಆಧ್ಯಾತ್ಮಿಕ
ನೋಡಿದೆಲ್ಲೆಡೆ ಬ್ರಹ್ಮವ, ಕಾಣುವ ಅಂತರಾಳದ ಚಳಕ
ಲಲಿತೆ ಅರಿವಿಗೆ ಪೂರಕ, ಗೆಲುತಿರೆ ಭಕ್ತ ಮಾಯೆ ಬಲಿ
ಸಾಕ್ಷಾತ್ಕರಿಸೆ ಬ್ರಹ್ಮವ, ಮೋಹನಾಶಿನೀ ಹರಸುತಲಿ!