೫೫. ಶ್ರೀ ಲಲಿತಾ ಸಹಸ್ರನಾಮ ೧೬೫ರಿಂದ ೧೬೯ನೇ ನಾಮಗಳ ವಿವರಣೆ

Submitted by makara on Wed, 06/26/2013 - 10:39

ಲಲಿತಾ ಸಹಸ್ರನಾಮ ೧೬೫-೧೬೯

Mamatā-hantrī ममता-हन्त्री (165)

೧೬೫. ಮಮತಾ-ಹಂತ್ರೀ

         ದೇವಿಯು ತನ್ನ ಭಕ್ತರ ಸ್ವಾರ್ಥವನ್ನು ಅಳಿಸಿ ಹಾಕುತ್ತಾಳೆ. ಸ್ವಾರ್ಥವು ಸಾಕ್ಷಾತ್ಕಾರಕ್ಕೆ ಅಡಚಣೆಯಾಗಿರುವ ಅಹಂಕಾರವನ್ನು ಉಂಟುಮಾಡುತ್ತದೆ.

Niṣpāpā निष्पापा (166)

೧೬೬. ನಿಷ್ಪಾಪಾ

         ದೇವಿಯು ಪಾಪರಹಿತಳಾಗಿದ್ದಾಳೆ. ಪಾಪಗಳು ಆಸೆಯಿಂದಾಗಿ ಹುಟ್ಟುತ್ತವೆ. ೧೫೬ನೇ ನಾಮವಾದ ’ನಿರಾಗಾ’ದಲ್ಲಿ ದೇವಿಯು ಆಸೆ ಇಲ್ಲದವಳಾಗಿದ್ದಾಳೆ ಎಂದು ಚರ್ಚಿಸಲಾಗಿದೆ. ಭಗವದ್ಗೀತೆಯ ೪ನೇ ಅಧ್ಯಾಯದ ೧೪ನೇ ಶ್ಲೋಕದಲ್ಲಿ ಶ್ರೀಕೃಷ್ಣನು, "ನಾನು ಯಾವುದೇ ಕಾರ್ಯಗಳಿಂದ ಪ್ರಭಾವಿತನಾಗುವುದಿಲ್ಲ ಮತ್ತು ನಾನು ಯಾವುದೇ ಕ್ರಿಯೆಯ ಪ್ರತಿಫಲವನ್ನೇಪಿಕ್ಷಿಸುವುದಿಲ್ಲ" ಎಂದಿದ್ದಾನೆ.

Pāpanāśinī पापनाशिनी (167)

೧೬೭. ಪಾಪನಾಶಿನೀ

         ದೇವಿಯು ತನ್ನ ಭಕ್ತರ ಪಾಪಗಳನ್ನು ವಿನಾಶ ಮಾಡುತ್ತಾಳೆ. ಭಕ್ತನೆಂದರೆ ಯಾರು ಅವಳನ್ನು ಕೇವಲ ಮಂತ್ರೋಚ್ಛಾರಣೆಯ ಸಮಯದಲ್ಲಿ, ಅಥವಾ ಆಚರಣಾ ವಿಧಿಗಳನ್ನು ಕೈಗೊಳ್ಳುವಾಗ ಮಾತ್ರವಾಗಲೀ ಅಲ್ಲದೇ ಸದಾಕಾಲವೂ ಆಕೆಯನ್ನೇ ಕುರಿತು ಆಲೋಚಿಸುತ್ತಿರುತ್ತಾನೆಯೋ ಅವನು. ಅಂತಹ ಭಕ್ತರಿಗೆ ಮಂತ್ರಗಳು ಮತ್ತು ಆಚರಣೆಗಳು ಅರ್ಥವಿಲ್ಲದವುಗಳಾಗಿವೆ. ಆಕೆಯ ಭಕ್ತರು ಪಾಪವೆಂದು ಕರೆಯಲ್ಪಡುವ ಕಾರ್ಯಗಳನ್ನು ಕೈಗೊಳ್ಳುವುದಿಲ್ಲವೆಂದೂ ತಿಳಿಯಲಾಗಿದೆ. ಒಬ್ಬನು ತಿಳಿದೂ ಪಾಪ ಕಾರ್ಯವನ್ನು ಎಸಗಿದರೆ ಅಂತಹವನ ರಕ್ಷಣೆಗೆ ದೇವಿಯು ಮುಂದಾಗುವುದಿಲ್ಲ. ಹಾಗಾದರೆ ದೇವಿಯು ತನ್ನ ಪಾಪ ಕಾರ್ಯಗಳನ್ನು ನಾಶಗೊಳಿಸುವುದರ ಅವಶ್ಯಕತೆಯಾದರೂ ಏನು? ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೪.೧೪) ಇದಕ್ಕೆ ಉತ್ತರವನ್ನು ಕೊಡುತ್ತಾನೆ, "ಯಾರು ನನ್ನ ಬಗೆಗಿನ ಈ ಸತ್ಯವನ್ನು  (ಹಿಂದಿನ ನಾಮವನ್ನು ನೋಡಿ) ಅರಿಯುತ್ತಾರೆಯೋ, ಅವನು ಕರ್ಮದಿಂದ ಉಂಟಾಗುವ ಪ್ರತಿಫಲಗಳಲ್ಲಿ (ಕರ್ಮದಿಂದ ಉಂಟಾದ ಫಲಿತಾಂಶಗಳಲ್ಲಿ) ಸಿಲುಕಿಕೊಳ್ಳುವುದಿಲ್ಲ. ಕರ್ಮ ಸಿದ್ಧಾಂತವು ನ್ಯೂಟನ್ನನ ಮೂರನೆಯ ನಿಯಮವಾದ - ಪ್ರತಿಯೊಂದು ಕ್ರಿಯೆಗೂ ತತ್ಸಮಾನವಾದ ಪ್ರತಿಕ್ರಿಯೆ ಇರುತ್ತದೆ ಎನ್ನುವುದರ ಪ್ರತಿಬಿಂಬವಾಗಿದೆ. ಈ ರೀತಿಯಾದ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆಯೇ ಕರ್ಮ. ದೇವಿಯು ತನ್ನ ಭಕ್ತರು ಮುಕ್ತಿಯ ಪಥವನ್ನು ಅನುಸರಿಸಬೇಕೆಂದು ಇಚ್ಛಿಸುತ್ತಾಳೆ ಅದರಲ್ಲಿ ಪಾಪಗಳು ಅಡಚಣೆಗಳಾಗಿವೆ. ದೇವಿಯು ಅವರ ಪಾಪಗಳನ್ನು ಹೇಗೆ ನಾಶವಾಗಿಸುತ್ತಾಳೆ? ಛಾಂದೋಗ್ಯ ಉಪನಿಷತ್ತು (೫.೨೪.೩) ಹೇಳುತ್ತದೆ, "ಪಾಪ್ಮಾನಃ ಪ್ರದೂಯಂತೆ" ಅಂದರೆ ಪಾಪಗಳು ಸುಡಲ್ಪಡುತ್ತವೆ. ಈ ಉಪನಿಷತ್ತು ಮುಂದುವರೆಸುತ್ತಾ ಹೇಳುತ್ತದೆ, "ಅಂತಹ ಪಾಪಗಳು ಬೆಂಕಿಯಲ್ಲಿ ಹಾಕಿದ ಒಣ ಹುಲ್ಲಿನಂತೆ ಸುಟ್ಟುಹೋಗುತ್ತವೆ". ಇಲ್ಲಿ ನಾವು ತಿಳಿಯ ಬೇಕಾದ ಮುಖ್ಯ ಸಂಗತಿ ಏನೆಂದರೆ ದೇವಿಯನ್ನು ತುಂಬು ಪ್ರಾಮಾಣಿಕತೆಯಿಂದ ಪೂಜಿಸಿದಾಗ ಭಕ್ತನ ಪ್ರಾರಬ್ದ ಕರ್ಮದಿಂದ ಉತ್ಪನ್ನವಾಗಿ ಅನುಭವಿಸಲೇ ಬೇಕಾದ ಪಾಪಗಳನ್ನು ಹೊರತುಪಡಿಸಿ ಎಲ್ಲಾ ವಿಧವಾದ ಪಾಪಗಳು ನಾಶವಾಗುತ್ತವೆ. (ಹಿಂದಿನ ಎಲ್ಲಾ ಜನ್ಮಗಳಿಂದ ಉಂಟಾದ ಒಟ್ಟು ಪಾಪದ ಫಲವೇ ಪ್ರಾರಬ್ಧ ಕರ್ಮ).

Niṣkrodhā निष्क्रोधा (168)

೧೬೮. ನಿಷ್ಕ್ರೋಧಾ

         ದೇವಿಯು ಕೋಪವಿಲ್ಲದವಳು. ಪೂರ್ತಿ ಲಯವಾಗುವ ಸಮಯದಲ್ಲಿಯೂ (ಮಹಾ-ಪ್ರಳಯದ ಕಾಲದಲ್ಲಿಯೂ), ಬ್ರಹ್ಮವು ಕೋಪವಿಲ್ಲದೇ ಇರುತ್ತದೆ. ಭಗವದ್ಗೀತೆಯಲ್ಲಿ (೯.೨೯) ಕೃಷ್ಣನು ಹೀಗೆ ಹೇಳುತ್ತಾನೆ, ನಾನು ಯಾರನ್ನೂ ದ್ವೇಷಿಸುವುದಿಲ್ಲ ಮತ್ತು ನನಗೆ ಯಾರೂ ಆತ್ಮೀಯರಲ್ಲ". ಇದು ಬ್ರಹ್ಮದ ಒಂದು ಗುಣವಾಗಿದೆ. ಬ್ರಹ್ಮವು ಕನ್ನಡಿಯಂತಿರುತ್ತದೆ. ಒಬ್ಬನು ಕನ್ನಡಿಯ ಮುಂದೆ ನಿಲ್ಲದ ಹೊರತು ಅವನ ಬಿಂಬವು ಕಾಣಿಸುವುದಿಲ್ಲ. ಎಲ್ಲಿಯವರೆಗೆ ಒಬ್ಬನು ದೇವಿಯಲ್ಲಿ ಭಕ್ತಿಯಿರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವನು ಆಕೆಯ ಕೃಪೆಯನ್ನು ಅರಿಯಲಾರ. ಒಬ್ಬನು ಆಕೆಯ ಭಕ್ತನಿರಬಹುದು ಅಥವಾ ಇಲ್ಲದಿರಬಹುದು, ಆದರೆ ದೇವಿಯು ಅವನ ಬಗ್ಗೆ ಕೋಪವನ್ನು ಹೊಂದಿದವಳಾಗುವುದಿಲ್ಲ. 

Krodha-śamanī क्रोध-शमनी (169)

೧೬೯. ಕ್ರೋಧ-ಶಮನೀ

         ದೇವಿಯು ತನ್ನ ಭಕ್ತರ ಕೋಪವನ್ನು ಶಮನಗೊಳಿಸುತ್ತಾಳೆ. ಕ್ರೋಧವು ಆತ್ಮಸಾಕ್ಷಾತ್ಕಾರಕ್ಕೆ ಅಡ್ಡಿಯುಂಟು ಮಾಡುವ ಅರಿಷಡ್ವರ್ಗಗಳಲ್ಲಿ (ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬ ಮನುಷ್ಯನೊಳಗಿನ ಆರು ಶತ್ರುಗಳು) ಒಂದು. ಕ್ರೋಧದಿಂದ ಕೈಗೊಂಡ ಯಾವುದೇ ವಿಧವಾದ ಪೂಜೆಯು ಅದರ ಫಲವನ್ನು ನಾಶವಾಗಿಸುತ್ತದೆ ಎಂದು ಹೇಳಲಾಗಿದೆ. ಕೃಷ್ಣನು ಭಗವದ್ಗೀತೆಯ ೨ನೇ ಅಧ್ಯಾಯದ ೬೩-೬೪ನೇ ಶ್ಲೋಕಗಳಲ್ಲಿ ಕೋಪದ ಕಾರಣಗಳನ್ನು ಉಲ್ಲೇಖಿಸುತ್ತಾನೆ, "ವಿಷಯ ವಸ್ತುಗಳನ್ನು ಕುರಿತಾಗಿ ಚಿಂತಿಸುತ್ತಿದ್ದರೆ, ಒಬ್ಬನು ಅವುಗಳ ಬಗ್ಗೆ ಮೋಹಗೊಳ್ಳುತ್ತಾನೆ ಮತ್ತು ಇಂತಹ ಮೋಹದಿಂದಾಗಿ ಅವನು ಅದರ ಬಗ್ಗೆ ಆಸೆಯನ್ನು ಬೆಳೆಸಿಕೊಳ್ಳುತ್ತಾನೆ; ಈ ವಿಧವಾದ ಆಸೆಯಿಂದಾಗಿ ಕ್ರೋಧವು ಹುಟ್ಟುತ್ತದೆ ಮತ್ತು ಕ್ರೋಧದಿಂದ ಸರ್ವನಾಶವುಂಟಾಗುತ್ತದೆ.....". ಈ ಕಾರಣಗಳಿಂದಾಗಿ ಪಂಚೇಂದ್ರಿಯಗಳನ್ನು ಪಾಪಕಾರಕಗಳೆಂದು ಪರಿಗಣಿಸಿರುವುದು. ಕೃಷ್ಣನು ಉದ್ವೇಗದ ಪ್ರಾಪಂಚಿಕ ಅವಸ್ಥೆಯು ಎಲ್ಲಾ ವಿಧವಾದ ಯಾತನೆಗಳಿಗೆ ಮೂಲವಾಗಿದೆ ಎಂದು ಹೇಳುತ್ತಾನೆ.

******
         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 165-169 http://www.manblunder.com/2009/09/lalitha-sahasranamam-165-169.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
No votes yet

Comments

nageshamysore

Wed, 06/26/2013 - 21:21

ಶ್ರೀಧರರೆ, 165-169 - ತಮ್ಮ ಅವಗಾಹನೆ ಮತ್ತು ಪರಿಶೀಲನೆಗೆ ಸಿದ್ದ , ನಾಗೇಶ ಮೈಸೂರು :-)

ಲಲಿತಾ ಸಹಸ್ರನಾಮ ೧೬೫-೧೬೯

೧೬೫. ಮಮತಾ-ಹಂತ್ರೀ  
ಬ್ರಹ್ಮ ಸಾಕ್ಷಾತ್ಕಾರಕೆ ಅಡಚಣೆ ಅಹಂಕಾರ
ಉಂಟುಮಾಡುವ ಸ್ವಾರ್ಥವೆ ನೂರೆಂಟುತರ
ಭಕ್ತ ಸ್ವಾರ್ಥ ಅಳಿಸುತ ದೇವಿ ಮಹಾಧಾತ್ರಿ
ಬ್ರಹ್ಮಕಡೆತಡೆ ನಿವಾರಿಸೊ ಮಮತಾ-ಹಂತ್ರೀ!

೧೬೬. ನಿಷ್ಪಾಪಾ  
ಆಸೆಯೆ ಪಾಪದ ಮೂಲ, ಲಲಿತೆಗೆಲ್ಲಿದೆ ಆಶಾ
ದೇವಿ ನಿರಾಗಾ ಬಲ, ಪಾಪರಹಿತೆಯಾ ವೇಷ
ಪ್ರಭಾವಿತವಾಗದ ಪ್ರತಿಫಲಾಪೇಕ್ಷಿಸದ ರೂಪ
ಸಾಧಿಸೊ ಭಕ್ತಗಣಕು ಲೇಪಿಸುತಲೆ ನಿಷ್ಪಾಪಾ!

೧೬೭. ಪಾಪನಾಶಿನೀ 
ಸದಾ ಸ್ಮರಿಸುವ ನಿಜ ಭಕ್ತ, ಮಂತ್ರಾಚರಣೆ ನೇಪಥ್ಯ
ಪ್ರಾಮಾಣಿಕ ಪೂಜೆಗೆ, ಸುಟ್ಟು ಹೋಗಿ ಪಾಪವೆ ಮಿಥ್ಯ 
ಅನುಭವಿಸುತಲಷ್ಟೆ ಜನ್ಮಾಂತರಾ ಪ್ರಾರಬ್ದದ ಚೂರ್ಣ
ಪಾಪದ ಹೊರೆಯಿಳಿಸುವ ಪಾಪನಾಶಿನಿ ಅಂತಃಕರಣ!

೧೬೮. ನಿಷ್ಕ್ರೋಧಾ  
ಆಸ್ತಿಕನೋ ನಾಸ್ತಿಕನೋ ಕೋಪಿಸಳೂ ಲಲಿತ
ದ್ವೇಷಾ ಆತ್ಮೀಯತೆ ಬ್ರಹ್ಮ ಗುಣವಲ್ಲಾ ವರ್ಜಿತ
ಭಕ್ತಿಯವತರಿಸದೆ ಅರಿಯಲ್ಹೇಗೆ ಕೃಪಾ ಸುಧಾ 
ಪ್ರಳಯಕಾಲಕು ಶಾಂತಿ ತೋರುವ ನಿಷ್ಕ್ರೋಧಾ!

೧೬೯. ಕ್ರೋಧ-ಶಮನೀ 
ವಸ್ತು ವಿಷಯಾಸಕ್ತಿ ಚಿಂತಿಸೆ, ಬಿತ್ತೊ ಮೋಹ
ಬೀಜ ಬೆಳೆದು ಆಸೆಯ ಸಸಿ, ಕ್ರೋಧಕೆ ದಾಹ
ಅಡ್ಡಿಯಾಗಿ ಆತ್ಮಕೆ, ಸಾಕ್ಷಾತ್ಕಾರ ಸರ್ವನಾಶ
ಶಮನಗೊಳಿಸಿ ಭಕ್ತಕ್ರೋಧ, ಗೆಲಿಸೊ ಪ್ರಕಾಶ!

೧೬೫ - ೧೬೯ನ ಪರಿಷ್ಕರಣೆ
ನಾಗೇಶರೇ,
ಇದರಲ್ಲಿನ ಪದ್ಯಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿವೆ. ಅದರಲ್ಲೂ ಬಹಳ ಚೆನ್ನಾಗಿ ಅನಿಸಿದ್ದು ಪಾಪನಾಶಿನಿಯ ಈ ಪದ್ಯ
೧೬೭. ಪಾಪನಾಶಿನೀ
ಸದಾ ಸ್ಮರಿಸುವ ನಿಜ ಭಕ್ತ, ಮಂತ್ರಾಚರಣೆ ನೇಪಥ್ಯ
ಪ್ರಾಮಾಣಿಕ ಪೂಜೆಗೆ, ಸುಟ್ಟು ಹೋಗಿ ಪಾಪವೆ ಮಿಥ್ಯ
ಅನುಭವಿಸುತಲಷ್ಟೆ ಜನ್ಮಾಂತರಾ ಪ್ರಾರಬ್ದದ ಚೂರ್ಣ
ಪಾಪದ ಹೊರೆಯಿಳಿಸುವ ಪಾಪನಾಶಿನಿ ಅಂತಃಕರಣ!

ಇನ್ನು ಪರಿಷ್ಕರಣೆಗೆ ಬಂದರೆ ನನ್ನ ಗಮನಕ್ಕೆ ಬಂದಂತೆ ಎರಡೇ ಕಡೆ ಸ್ವಲ್ಪ ತಿದ್ದುಪಡಿಯ ಅವಶ್ಯಕತೆಯಿದೆ.
೧೬೬. ನಿಷ್ಪಾಪಾ - ೪ನೇ ಸಾಲು
ಪ್ರಭಾವಿತವಾಗದ ಪ್ರತಿಫಲಾಪೇಕ್ಷಿಸದ ರೂಪ
ಸಾಧಿಸೊ ಭಕ್ತಗಣಕು ಲೇಪಿಸುತಲೆ ನಿಷ್ಪಾಪಾ!
ನಿಷ್ಷಾಪವನ್ನು ಲೇಪಿಸಲಾಗದು, ಪಾಪವನ್ನು ತೊಡೆಯಬಹುದಷ್ಟೇ. ಆದ್ದರಿಂದ ಅದನ್ನು ಕಾವ್ಯಾತ್ಮಕವಾಗಿ ಸ್ವಲ್ಪ ಬದಲಾಯಿಸಿ.

೧೬೮. ನಿಷ್ಕ್ರೋಧಾ
ಆಸ್ತಿಕನೋ ನಾಸ್ತಿಕನೋ ಕೋಪಿಸಳೂ ಲಲಿತ
(ಕೋಪಿಸಳೂ=ಕೋಪಿಸಳು)
ದ್ವೇಷಾ ಆತ್ಮೀಯತೆ ಬ್ರಹ್ಮ ಗುಣವಲ್ಲಾ ವರ್ಜಿತ
ಈ ಸಾಲು ಅರ್ಥವೇಕೋ ಸ್ಪಷ್ಟವೆನಿಸುತ್ತಿಲ್ಲ; ಸ್ವಲ್ಪ ವಿವರಿಸಿ. ಮೂರು ಹಾಗು ನಾಲ್ಕನೇ ಸಾಲು ಚೆನ್ನಾಗಿವೆ.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, 165-169, ತಿದ್ದುಪಡಿಯಾದ ನಂತರ, ಪುನರ್ಪರಿಶೀಲನೆಗೆ. 168ರ ಸಾಲನ್ನು ವಿವರಿಸುವ ಬದಲು ಮಾರ್ಪಡಿಸಿದ್ದೇನೆ, ಈಗ ಸೂಕ್ತ ಕಾಣುವುದೆ? (ಮೊದಲಿನ ಸಾಲು -'ದ್ವೇಷವಾಗಲಿ ಅಸೂಯೆಯಾಗಲಿ ಬ್ರಹ್ಮಕ್ಕೆ ಒಂದೆ ತರಹ , ಭೇಧ ಭಾವವೆಲ್ಲ ವರ್ಜಿತ ' - ಅನ್ನುವ ಭಾವದಲ್ಲಿ ಬಳಸಿದ್ದೆ)    - ನಾಗೇಶ ಮೈಸೂರು :-)

೧೬೬. ನಿಷ್ಪಾಪಾ 
ಆಸೆಯೆ ಪಾಪದ ಮೂಲ, ಲಲಿತೆಗೆಲ್ಲಿದೆ ಆಶಾ
ದೇವಿ ನಿರಾಗಾ ಬಲ, ಪಾಪರಹಿತೆಯಾ ವೇಷ
ಪ್ರಭಾವಿತವಾಗದ ಪ್ರತಿಫಲಾಪೇಕ್ಷಿಸದ ರೂಪ
ಸಾಧಿಸೊ ಭಕ್ತಗಣಕೆ ತೊಳೆವಳೆಲ್ಲ ತರ ಪಾಪ!

೧೬೮. ನಿಷ್ಕ್ರೋಧಾ 
ಆಸ್ತಿಕನೋ ನಾಸ್ತಿಕನೋ ಕೋಪಿಸಳು ಲಲಿತಾ
ದ್ವೇಷಾ-ಆತ್ಮೀಯತೆ ಗಣಿಸದ ಬ್ರಹ್ಮವೆ ನಿರ್ಲಿಪ್ತ
ಭಕ್ತಿಯವತರಿಸದೆ ಅರಿಯಲ್ಹೇಗೆ ಕೃಪಾ ಸುಧಾ
ಪ್ರಳಯಕಾಲಕು ಶಾಂತಿ ತೋರುವ ನಿಷ್ಕ್ರೋಧಾ!

೧೬೫-೧೬೯ ಈಗ ಸರಿಯಾಗಿದೆ ನಾಗೇಶರೆ. ೧೬೬ರಲ್ಲಿನ ಎರಡನೇ ಸಾಲಿನಲ್ಲಿ ಪಾಪಾರಹಿತೆಯಾ ವೇಷ ಕವಿತೆಯ ಆಶಯಕ್ಕೆ ಧಕ್ಕೆ ಬರುತ್ತದೆ ಎನಿಸುತ್ತದೆ. ನಾನೂ ಇದನ್ನು ಈ ಮೊದಲು ಗಮನಿಸಲಿಲ್ಲ ಕ್ಷಮಿಸಿ. ಇದನ್ನು ಪಾಪರಹಿತಾ ಸ್ವರೂಪ ಎಂದು ಬದಲಾಯಿಸಬಹುದೇನೋ ನೋಡಿ.
ನಿರಾಗಾ ಬಲ, ಪಾಪರಹಿತೆಯಾ ವೇಷ = ನಿರಾಗಾ ಬಲ, ಪಾಪರಹಿತಾ ಸ್ವರೂಪ
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ ಧನ್ಯವಾದ,166 ರ ಮಾರ್ಪಡಿಸಿದ ರೂಪ - ನಾಗೇಶ ಮೈಸೂರು :-)
೧೬೬. ನಿಷ್ಪಾಪಾ
ಆಸೆಯೆ ಪಾಪದ ಮೂಲ, ಲಲಿತೆಗೆಲ್ಲಿದೆ ಆಶಾ
ದೇವಿ ನಿರಾಗಾ ಬಲ, ಪಾಪರಹಿತಾ ಸ್ವರೂಪ
ಪ್ರಭಾವಿತವಾಗದ ಪ್ರತಿಫಲಾಪೇಕ್ಷಿಸದ ರೂಪ
ಸಾಧಿಸೊ ಭಕ್ತಗಣಕೆ ತೊಳೆವಳೆಲ್ಲ ತರ ಪಾಪ!

ಗಣೇಶ

Wed, 06/26/2013 - 23:38

ಪೂಜೆಗೆ.. ನಿರ್ಮಲ ಮನಸ್ಸಿನಿಂದ.. ಏಕಾಗ್ರಚಿತ್ತದಿಂದ.. ಮಣ್ಣು ಮಸಣ ಏನೂ ಬೇಕಾಗಿಲ್ಲ.
ದೇವಿಯ ಪ್ರಾರ್ಥನೆ ಮಾಡಿದರಾಯಿತು.ನಮ್ಮಲ್ಲಿದ್ದ ಕ್ರೋಧ, ಸ್ವಾರ್ಥ..ಇತ್ಯಾದಿ ದುರ್ಗುಣಗಳ ನಾಶವನ್ನು ಆಕೆಯೇ ಮಾಡುವಳು. ತಾಯಿಯಲ್ಲವಾ..