ಕಿವುಡು ಪುಟ್ಟಮ್ಮ

ಕಿವುಡು ಪುಟ್ಟಮ್ಮ

ಚಿತ್ರ

ಪುಟ್ಟಮ್ಮ ಎಂದು ಕರೆದಾಗ
ಹತ್ತಿರ ಬಂದು ಅಪ್ಪಿಕೊಂಡಳು

ಎಡವಿ ಬೀಳುವಿ ಪುಟ್ಟಿ ಹುಷಾರು ಎಂದಾಗ
ಅಪ್ಪನ ಕೈ ಆಸರೆ ಪಡೆದು ನಡೆವಳು


ನಾಯಿ ಬಾಲ ಎಳೆಯ ಬೇಡ
ಅದು ಕೈ ಕಚ್ಚುತ್ತೆ ಎಂದ ಅಣ್ಣನ ಮಾತ ನಂಬಿದಳು

ಹೊರಗೆ ಕತ್ತಲೆಯಮ್ಮ ಗುಮ್ಮನಿರುವ ಎನ್ನುವ
ಅಮ್ಮನ ಮಾತಿಗೆ ಅವಳ ತೋಳ ಸೇರಿದಳು

ಅಪ್ಪ ಹೇಳಿದ ಸಾಲು ಸಾಲು ಕತೆಗಳನ್ನೆಲ್ಲ
ಕೇಳಿ ಕಣ್ಣರಳಿಸಿ ನಂಬಿದ ಪುಟ್ಟಮ್ಮ

ಹೊರಗೆ ಜನರ ಜೊತೆ ವ್ಯವಹಾರ ಕಷ್ಟ
ಎಂದು ಎಚ್ಚರಿಸಿದಾಗ ಸ್ವಾತಂತ್ರ್ಯವಿಲ್ಲ ಎಂದಳು

ಹೊರಗೆ ನೂರಾರು ತೋಳಗಳು ಹರಿದು
ತಿನ್ನಲು ಕಾದಿವೆ ಹುಷಾರು ಎಂದ
ಹಿರಿಯರ ಮಾತಿಗೆ ಉಸಿರು ಕಟ್ಟುತ್ತಿದೆ ಅಂದಳು

ಕನಸಿನಲ್ಲಿ ನಡೆದರು ಸಾಲದು ಪುಟ್ಟಮ್ಮ
ಎಚ್ಚರದಲ್ಲಿ ಕಣ್ಬಿಟ್ಟು ನಡೆಯಬೇಕು
ಇದು ಹಳ್ಳ ಮುಳ್ಳುಗಳಿರುವ ಹಾದಿ ಎಂದು
ಅಮ್ಮನೆಂದರೆ ಅದನ್ನು
ಅಭಿಪ್ರಾಯದ ಹೇರಿಕೆ ಅಂದಳು

ಅಪ್ಪ ಅಮ್ಮ ಹಿರಿಯರ ಕಣ್ಣೀರ
ಹಿಂದಿನ ಹೃದಯವ ಮರೆತ ಪುಟ್ಟಮ್ಮ
ತನ್ನತನದಿ ಮೆರೆದು
’ನಾನು ಉಸಿರಾಡಿದ್ದು ಹುಟ್ಟಿದಾಗ ಮಾತ್ರ ಎಂದಳು’

ಇಪ್ಪತ್ತು ವರ್ಷ ಇಷ್ಟಪಟ್ಟು ಬೆಳೆಸಿದ
ತಪಸನ್ನ ಅಪ್ಪ ಅಮ್ಮನ ಹಿರಿಯರ ಪ್ರೀತಿಯನ್ನ
ಕಾಲಲ್ಲಿ ತುಳಿಯುತ್ತ
’ಕ್ರಾಂತಿಯ , ಸ್ವಾತಂತ್ರ್ಯದ ಬಾವುಟವನ್ನು’
ಎತ್ತಿ ಹಿಡಿದಳು
ಹೇಗಾದರು ಸುಖವಾಗಿರು ಎನ್ನುವ ಅಪ್ಪ ಅಮ್ಮನ
ಪಿಸುಮಾತಿಗೆ ಕಿವುಡಾದಳು
ಇದು ಎಷ್ಟು ಅಪ್ಪ ಅಮ್ಮಂದಿರ ವ್ಯಥೆಯೊ !!

(ಯಾರದೊ ಕವನಕ್ಕೆ ಪ್ರತಿಕ್ರಿಯೆ ನೀಡಲು ಹೋದೆ ಅದೆ ಒಂದು ಕವನದ ರೂಪವಾಯಿತು)

Rating
No votes yet

Comments

Submitted by nageshamysore Wed, 06/26/2013 - 21:35

ಪಾರ್ಥಾ ಸಾರ್, ಕವಿರತ್ನ ಕಾಳಿದಾಸ ಚಿತ್ರದಲ್ಲಿ ನೋಡಿದ್ದೆ - ಒಂದು ಸಮಸ್ಯೆ ಬರುತ್ತದೆ, ಭೋಜರಾಜನ ಮುಂದೆ : 'ಕಮಲೆ ಕಮಲೋತ್ಪತ್ತಿಃ ...' ಅಂತ. ಹಾಗೆ ಇದಕ್ಕೆ ಇನ್ನೊಂದು ಕವನ ಸ್ಪೂರ್ತಿಯಾದ ಕಾರಣ ' ಕವನೆ ಕವನೋತ್ಪತ್ತಿಃ..' ಅನ್ನಬಹುದೆಂದು ಕಾಣುತ್ತದೆ :-)

ಎಳೆಗರುವಿನ ಮುಗ್ದತೆಯಿಂದ ಆರಂಭವಾಗಿ ಎಲ್ಲವನ್ನು ಧಿಕ್ಕರಿಸುವ ಯೌವ್ವನಸಹಜ ಹಮ್ಮಿನವರೆಗು ಸೊಗಸಾಗಿ ಓಡುವ ಕವಿತೆ; ಹಾಗೆಯೆ ಹಿರಿತನದ ಫ್ರೌಡಿಮೆ, ನುಂಗಿಕೊಂಡು ಸಾವರಿಸುವ ಮೂಕ ಪ್ರೀತಿ ಚೆನ್ನಾಗಿ ಬಿಂಬಿತವಾಗಿದೆ. ಬಹುಶಃ ಇದನ್ನು ಪೀಳಿಗೆಗಳ ಹಾಡು ಅನ್ನಬಹುದೆಂದು ಕಾಣುತ್ತದೆ - ಯಾಕೆಂದರೆ, ಯಾವುದೊ ಒಂದು ರೂಪದಲ್ಲಿ ಇದೇ ಹಾಡು, ಪ್ರತೀ ಪೀಳಿಗೆಯಲ್ಲೂ ಪುನರಾವರ್ತನೆ ಆಗುವುದರಿಂದ...ನಾಗೇಶ ಮೈಸೂರು.

Submitted by ಗಣೇಶ Wed, 06/26/2013 - 23:28

ಪ್ರೀತಿಯೆಂಬ ಜೈಲಿನಿಂದ ಸ್ವಾತಂತ್ರ್ಯದೆಡೆಗೆ...ಪಾರ್ಥರೆ ಕವನ ಚೆನ್ನಾಗಿದೆ.

Submitted by makara Thu, 06/27/2013 - 09:51

ಪುಟ್ಟಮ್ಮ ಪುಟ್ಟಿಯಾಗಿ ಉಳಿಯದೇ ದೊಡ್ಡಕ್ಕನಾದ ಮೇಲೆಯೂ ತಂದೆ-ತಾಯಿಗಳು ಅವಳನ್ನು ಪುಟ್ಟಮ್ಮನಾಗಿಯೇ ಕಂಡದ್ದರ ಪ್ರಭಾವ ಆಕೆ ಅವರ ಮಾತಿಗೆ ಕಿವುಡಾದಳೋ ಏನೋ! ಅವಳಿಗೆ ಸ್ವೇಚ್ಛೆ ಮತ್ತು ಸ್ವಾತಂತ್ರದ ವ್ಯತ್ಯಾಸಗಳನ್ನು ತಿಳಿಸಿ ಹೇಳಿದ್ದರೆ ಸರಿ ಹೋಗುತ್ತಿತ್ತೇನೋ? ತಂದೆ-ತಾಯಿಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕೆನಿಸುತ್ತದೆ ಇಲ್ಲದಿದ್ದರೆ ವ್ಯಥೆ ಮಾತ್ರ ಉಳಿಯುತ್ತದೆ. ಇರಲಿ ಬಿಡಿ, ಇದರ ಮೂಲಕ ತಂದೆ-ತಾಯಿಗಳಿಗೂ ಒಂದು ಸೂಕ್ಷ್ಮ ಸಂದೇಶವನ್ನು ಕೊಟ್ಟಿದ್ದೀರ ಪಾರ್ಥರೆ.

Submitted by venkatb83 Thu, 06/27/2013 - 16:32

"’ನಾನು ಉಸಿರಾಡಿದ್ದು ಹುಟ್ಟಿದಾಗ ಮಾತ್ರ ಎಂದಳು’"

;((
ಗುರುಗಳೇ
ನನ್ನ ಕಣ್ಣ ನೋಟಕ್ಕೆ ಇಂದು ಬಿದ್ದಳು ಪುಟ್ಟಮ್ಮ !!...
ಊರಿಗೆ ಅರಸನಾದರೂ ತಾಯಿಗೆ ಮಗ ಗಾದೆ ಕೇಳಿದ್ದೆ .
ಹಾಗೇ ಮಗ ಮಗಳು ಎಸ್ಟೇ ದೊಡ್ಡವರಾದರೂ ಅವರು ಪುಟ್ಟ - ಪುಟ್ತೀನೆ ..

ಅತಿ ಸ್ವಾತಂತ್ರ್ಯ ಸ್ವೆಚ್ಚೆಗೆ ದಾರಿ
ಅತಿ ಪ್ರೀತಿ -ಮುದ್ದು ಗುದ್ದು ..... !!

"’ನಾನು ಉಸಿರಾಡಿದ್ದು ಹುಟ್ಟಿದಾಗ ಮಾತ್ರ ಎಂದಳು’"

ಈ ಸಾಲು ಓದಿದಾಗ ಪುಟ್ಟಮ್ಮನವರು ಹಿರಿಯರ ಪೋಷಕರ ಅತಿ ಕಾಳಜಿ -ಅತೀವ ಪ್ರೀತಿಯಲ್ಲಿ ಅನುಭವಿಸುವ ಮಾನಸಿಕ ವೇದನೆ ತಿಳಿವದು.
ಎಲ್ಲವೂ ಹಿತಮಿತವಾಗಿರಬೇಕು ಅನಿಸುತ್ತಿದೆ .
ಇದು ನನ್ನ ಅನುಭವಕ್ಕೆ ಇನ್ನೂ ಆಗದ್ದು ,
ಅಂದ್ ಹಾಗೆ ನೀವ್ ಯಾರ ಯಾವ ಬರಹಕ್ಕೆ ಪ್ರತಿಕ್ರಿಯಿಸಲು ಹೋಗಿ ಈ ಅಚಾನಕ್ ಬರಹದ ಪುಟ್ಟಮ್ಮ ಬಂದಳು?
!!
ಶುಭವಾಗಲಿ

\।