೫೬. ಶ್ರೀ ಲಲಿತಾ ಸಹಸ್ರನಾಮ ೧೭೦ರಿಂದ ೧೭೫ನೇ ನಾಮಗಳ ವಿವರಣೆ

Submitted by makara on Thu, 06/27/2013 - 09:41

ಲಲಿತಾ ಸಹಸ್ರನಾಮ ೧೭೦ - ೧೭೫

Nirlobhā निर्लोभा (170)

೧೭೦. ನಿರ್ಲೋಭಾ

            ದೇವಿಯು ದುರಾಸೆ ಇಲ್ಲದವಳಾಗಿದ್ದಾಳೆ. ಆಕೆಯು ತನ್ನ ಭಕ್ತರೆಡೆಗೆ ಉದಾರತೆಯನ್ನು ತೋರುತ್ತಾಳೆ.

Lobhanāśinī लोभनाशिनी (171)

೧೭೧. ಲೋಭನಾಶಿನೀ

            ದೇವಿಯು ತನ್ನ ಭಕ್ತರ ಲೋಭವನ್ನು (ದುರಾಸೆಯನ್ನು) ನಾಶ ಮಾಡುತ್ತಾಳೆ. ಕೃಷ್ಣನು (ಭಗವದ್ಗೀತೆ ೨೬.೨೧) ಹೇಳುತ್ತಾನೆ, "ನರಕದ ದ್ವಾರಕ್ಕೆ ಕೊಂಡೊಯ್ಯಲು ಮೂರು ದ್ವಾರಗಳಿವೆ - ಕಾಮ, ಕ್ರೋಧ ಮತ್ತು ಲೋಭ. ಇವೆಲ್ಲವನ್ನೂ ಹೋಗಲಾಡಿಸಿಕೊಳ್ಳಬೇಕು, ಏಕೆಂದರೆ ಇವು ಆತ್ಮ ವಿನಾಶಕ್ಕೆ ದಾರಿಮಾಡಿ ಕೊಡುತ್ತವೆ, ಆದ್ದರಿಂದ ದೇವಿಯು ತನ್ನ ಭಕ್ತರ ಲೋಭವನ್ನು ಇಲ್ಲವಾಗಿಸುತ್ತಾಳೆ.

Niḥsaṃśayā निःसंशया (172)

೧೭೨. ನಿಃಸಂಶಯಾ

            ದೇವಿಯು ಸಂಶಯವಿಲ್ಲದವಳಾಗಿದ್ದಾಳೆ. ಜ್ಞಾನವನ್ನು ಅರಸಿ ಹೊರಟಾಗ ಸಂಶಯಗಳು ಉಂಟಾಗುತ್ತವೆ; ಆದರೆ ದೇವಿಯು ಜ್ಞಾನದ ಮೂರ್ತರೂಪವಾಗಿರುವಾಗ ಆಕೆಗೆ ಸಂಶಯದ ಪ್ರಶ್ನೆ ಉದ್ಭವಿಸದು.

Saṃśayaghnī संशयघ्नी (173)

೧೭೩. ಸಂಶಯಘ್ನೀ

             ದೇವಿಯು ತನ್ನ ಭಕ್ತರ ಸಂಶಯಗಳನ್ನು ಹೋಗಲಾಡಿಸುತ್ತಾಳೆ. ಆಕೆಯು ಬುದ್ಧಿವಂತರ ಸಂಶಯಗಳನ್ನೂ ನಿವಾರಿಸುತ್ತಾಳೆ; ಏಕೆಂದರೆ ಹಿಂದಿನ ನಾಮದಲ್ಲಿ ನೋಡಿದಂತೆ ಆಕೆಯು ಜ್ಞಾನದ ಮೂರ್ತರೂಪವಾಗಿದ್ದಾಳೆ. ೬೦೩ನೇ ನಾಮವಾದ ’ಗುರುಮೂರ್ತಿಃ’ ಪ್ರಕಾರ ದೇವಿಯು ಗುರುವಿನ ರೂಪವನ್ನು ತಾಳುತ್ತಾಳೆ. ಗುರುವೆನ್ನಿಸಿಕೊಂಡವನು ಸಂಶಯಾತೀತನಾಗಿರಬೇಕು; ತನ್ನ ಶಿಷ್ಯರ ಸಂಶಯಗಳನ್ನು ತಕ್ಷಣವೇ ನಿವಾರಿಸಬೇಕು ಮತ್ತು ಅವರಿಂದ ಪ್ರತಿಯಾಗಿ ಏನನ್ನೂ ಬಯಸಬಾರದು. "ಆಧ್ಯಾತ್ಮಿಕತೆಯನ್ನು ಮಾರಾಟ ಮಾಡಲಾಗದು" ಎನ್ನುವ ಹೇಳಿಕೆಯಿದೆ. ಇದೇ ಸಮಯದಲ್ಲಿ, ಯಾರು ಜ್ಞಾನವನ್ನು ಪಡೆಯಲಿಚ್ಛಿಸುತ್ತಾರೋ ಅವರು ಗುರುವಿಗೆ ಹಣಕಾಸಿನ ರೂಪದಲ್ಲಿ ಅದಕ್ಕೆ ಪರಿಹಾರವನ್ನು ಒದಗಿಸಬೇಕು ಏಕೆಂದರೆ ಗುರುವಿಗೂ ಕೂಡಾ ತನ್ನ ಉಪಜೀವನವನ್ನು ಸಾಗಿಸಲು ಹಣದ ಅವಶ್ಯಕತೆಯಿದೆ ಎನ್ನುವುದನ್ನು ತಿಳಿದುಕೊಂಡರೆ ಒಳಿತು. ಆದರೆ ಯಾವುದೇ ಹಂತದಲ್ಲೂ ಶಿಷ್ಯನೆನಿಸಿಕೊಂಡವನು ತನ್ನ ಯೋಗ್ಯತೆಗೆ ಮೀರಿ ಗುರುವಿಗೆ ಪರಿಹಾರವನ್ನು ಕೊಡಬಾರದು ಮತ್ತು ನಿಜವಾದ ಗುರುವಾದವನು ತನ್ನ ಶಿಷ್ಯರು ತನಗೆ ಅರ್ಪಿಸಿದ್ದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ.

             ಮುಂಡಕ ಉಪನಿಷತ್ತು (೨.೨.೮) ಹೀಗೆ ವಿವರಿಸುತ್ತದೆ, "ಒಬ್ಬ ವ್ಯಕ್ತಿಯು ಬ್ರಹ್ಮವನ್ನು ಅರಿತರೆ, ಬ್ರಹ್ಮ ಮತ್ತು ಅದರ ಕಾರಣ, ಬ್ರಹ್ಮದ ಪರಿಣಾಮವಾದ ಆತ್ಮ, ತನ್ನ ವ್ಯಕ್ತಿತ್ವದ ಎಲ್ಲಾ ವೈಶಿಷ್ಠ್ಯಗಳೆಲ್ಲಾ ಮಾಯವಾಗುತ್ತವೆ ಮತ್ತು ಅವನ ಸಂಶಯಗಳೆಲ್ಲಾ ಚದುರಿ ಹೋಗುತ್ತವೆ. ಒಬ್ಬನು ಈ ಹೇಳಿಕೆಯ ಪರಿಮಿತಿಯೊಳಗೆ ಇಮಡುವ ಗುರುವನ್ನು ಅರಸ ಬೇಕು".

             ಭಗವದ್ಗೀತೆಯಲ್ಲಿ (೪.೩೪) ಕೃಷ್ಣನು ಹೇಳುತ್ತಾನೆ, " ನಿಜವಾದ ಜ್ಞಾನದ ಸ್ವರೂಪವನ್ನು ಮಹಾತ್ಮರ (ಪ್ರಜ್ವಲಿತ ಆತ್ಮರ) ಬಳಿಗೆ ಸಾರಿ ಅರ್ಥಮಾಡಿಕೊಳ್ಳಿ. ನೀವು ಅವರ ಪಾದಗಳಿಗೆರಗಿ, ಅವರ ಸೇವೆಯನ್ನು ಕೈಗೊಂಡು ನಂತರ ಅವರಿಗೆ ನಿಷ್ಕಲ್ಮಶ ಮತ್ತು ತುಂಬು ಹೃದಯದಿಂದ ಪ್ರಶ್ನೆಯನ್ನು ಕೇಳಿದರೆ ಬುದ್ಧಿವಂತರಾದ ಮತ್ತು ಸತ್ಯಾನ್ವೇಷಿಕರಾದ ಆ ಋಷಿಗಳು ನಿಮಗೆ ಆ ಜ್ಞಾನದ ಬಗೆಗೆ ತಿಳಿಸಿ ಹೇಳುವರು".

            ಈ ದಿನಗಳಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಮೂರು ಬಗೆಯ ಗುರುಗಳಿದ್ದಾರೆ. ಮೊದಲನೆಯ ವರ್ಗಕ್ಕೆ ಸೇರಿದವರು ಮಂತ್ರ ದೀಕ್ಷೆಯನ್ನು ಕೊಡುತ್ತಾರೆ. ಬಹಳಷ್ಟು ಜನ ಆ ಮಂತ್ರದ ಪ್ರತಿಪಾದಕರಾಗಿದ್ದು ಅವರು ಮಂತ್ರಕ್ಕಿಂತ ಮುಂದುವರಿಯುವುದಿಲ್ಲ. ಎರಡನೇ ವರ್ಗದವರು ಯಾರೆಂದರೆ ಯೋಗವನ್ನು ಹೇಳಿಕೊಡುವವರು ಮತ್ತು ಇದರಲ್ಲಿ ಬಹುತೇಕ ಜನರು ಮೋಜಿಗೊಳಗಾದ ಮತ್ತು ದುಂಬಾಲು ಬೀಳುವ ಕುಂಡಲಿನೀ ಯೋಗವೂ ಸೇರಿದೆ. ಮೂರನೆಯ ವರ್ಗವು ನಿಜವಾದ ಗುರುಗಳಿಂದ ಕೂಡಿದ್ದು ಅವರು ತಮ್ಮ ಅನುಭವದಿಂದ ಕಂಡುಕೊಂಡ ಬ್ರಹ್ಮಜ್ಞಾನವನ್ನು ಜನರಿಗೆ ಹಂಚುತ್ತಾರೆ; ಆದರೆ ಈ ವರ್ಗವು ಬಹಳ ಅಪರೂಪವಾಗಿ ಸಿಗುತ್ತದೆ. ಶಿವನು ಗುರುವಿನ ಬಗೆಗಿನ ಜ್ಞಾನವನ್ನು ತನ್ನ ಸಂಗಾತಿಯಾದ ಪಾರ್ವತಿಗೆ ೨೭೪ ಶ್ಲೋಕಗಳನ್ನೊಳಗೊಂಡ ’ಗುರು ಗೀತಾ’ದ ಮೂಲಕ ಉಪದೇಶಿಸಿದ್ದಾನೆ.

           ಈ ನಾಮದ ಹಿಂದಿರುವ ಉದ್ದೇಶವೇನೆಂದರೆ ದೇವಿಗೆ ಮತ್ತು ಗುರುಗಳಿಗೆ (ಮೂರನೆಯ ವರ್ಗದ - ನಿಜವಾದ ಆಧ್ಯಾತ್ಮಿಕ ಗುರುಗಳಿಗೆ) ಯಾವುದೇ ಭೇದವಿಲ್ಲ ಎನ್ನುವುದಾಗಿದೆ.

Nirbhavā निर्भवा (174)

೧೭೪. ನಿರ್ಭವಾ

           ದೇವಿಯು ಯಾವುದೇ ಮೂಲವಿಲ್ಲದವಳಾಗಿದ್ದಾಳೆ. ಆಕೆಯು ಆದಿ (ಮೊದಲನೆಯವಳು) ಮತ್ತು ಅನಾದಿ (ಪೂರ್ವಿಕರಿಲ್ಲದಿರುವವಳು ಅಥವಾ ಪ್ರಾರಂಭವಿಲ್ಲದೇ ಇರುವವಳು). ಸಾಮಾನ್ಯವಾಗಿ ಶಿವನಿಗೆ ಯಾವುದೇ ಮೂಲವಿಲ್ಲವೆನ್ನುತ್ತಾರೆ; ಏಕೆಂದರೆ ಅವನನ್ನು ಯಾರೂ ಸೃಷ್ಟಿಸಿಲ್ಲ. ಇಲ್ಲಿ ಲಲಿತಾಂಬಿಕೆಗೆ ಯಾವುದೇ ಮೂಲವಿಲ್ಲವೆಂದು ಹೇಳಲಾಗಿದೆ ಏಕೆಂದರೆ ಆಕೆಯಲ್ಲಿ ಮತ್ತು ಶಿವನಲ್ಲಿ ಯಾವುದೇ ಭೇದವಿಲ್ಲದೇ ಇರುವುದರಿಂದ. ಅವರ ಸಂಯುಕ್ತ ರೂಪವನ್ನು ಬ್ರಹ್ಮವೆಂದು ಕರೆಯಲಾಗಿದೆ.

            ಭಗವದ್ಗೀತೆಯಲ್ಲಿ (೧೩.೧೨) ಕೃಷ್ಣನು ಹೇಳುತ್ತಾನೆ, " ಆ ಪರಬ್ರಹ್ಮವು, ಯಾರು ಆದ್ಯಂತರಹಿತಗಳ ಒಡೆಯನೋ, ಅವನು ಸತ್ ಅಥವಾ ಅಸತ್ ಅಲ್ಲ (ಅವನು ಅಸ್ತಿತ್ವದಲ್ಲಿ ಇರುವವನು ಅಥವಾ ಇಲ್ಲದಿರುವವನು) ಎಂದು ಹೇಳಲಾಗುತ್ತದೆ". ಶ್ರೀ ಕೃಷ್ಣನ ಈ ಹೇಳಿಕೆಯು ಸರ್ವೋಪನಿಷತ್ತುಗಳ ಸಾರವನ್ನು ಕ್ರೋಢೀಕರಿಸಿದೆ.

Bhavanaśinī भवनशिनी (175)

೧೭೫. ಭವನಾಶಿನೀ

            ದೇವಿಯು ತನ್ನ ಭಕ್ತರ ಜನನ-ಮರಣ ಚಕ್ರಗಳನ್ನು ನಾಶಗೊಳಿಸುತ್ತಾಳೆ. ಈ ಜನನ-ಮರಣಗಳ ಚಕ್ರವನ್ನೇ ಸಂಸಾರ ಎಂದು ಕರೆಯುತ್ತಾರೆ. ಯಾವಾಗ ದೇವಿಯನ್ನು ಆಕೆಯ ನಿರಾಕಾರ ರೂಪದ ಮೂಲಕ ಪೂಜಿಸುತ್ತೇವೆಯೋ ಆಗ ಒಬ್ಬರು ಬಂಧನಗಳಿಂದ ಮುಕ್ತರಾಗಬಹುದು ಎಂದು ಈ ನಾಮವು ಸೂಚಿಸುತ್ತದೆ. ಬಂಧನ ಅಥವಾ ಮೋಹವು ಸಂಸಾರಕ್ಕೆ ಕಾರಣ ಅಥವಾ ಈ ಮೋಹಬಂಧನವೇ ಸಂಸಾರವಾಗಿದೆ.

            ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೧೨.೬ ಮತ್ತು ೭), "ಯಾರು ಕೇವಲ ನನ್ನ ಮೇಲೆಯೇ ವಿಶ್ವಾಸವಿರಿಸಿ ಮತ್ತು ತಮ್ಮೆಲ್ಲಾ ಕ್ರಿಯೆಗಳನ್ನು ನನಗೇ ಸಮರ್ಪಿಸುತ್ತಾನೆಯೋ, ನನ್ನನ್ನೇ ಪೂಜಿಸುತ್ತಾ, ನಿರಂತರವಾಗಿ ನನ್ನನ್ನೇ ಏಕಾಗ್ರ ಭಕ್ತಿಯಿಂದ ಧ್ಯಾನಿಸುತ್ತಾರೆಯೋ ಅವರನ್ನು ಜನನ-ಮರಣಗಳ ಸಂಸಾರ ಸಾಗರದಿಂದ ಉದ್ಧರಿಸುತ್ತೇನೆ" ಎಂದು ಹೇಳುತ್ತಾನೆ. ಇದೂ ಸಹ ಒಬ್ಬ ನಿಜವಾದ ಭಕ್ತನ ವ್ಯಾಖ್ಯೆಯನ್ನು ಕೊಡುತ್ತದೆ.

           ಯಾರು ಚಂಡಿ ಹೋಮವನ್ನು ನವಮಿ ತಿಥಿಯಂದು ಕೈಗೊಳ್ಳುತ್ತಾರೆಯೋ ಅವರೂ ಸಹ ಸಂಸಾರದ ಬಾಧೆಯಿಂದ (ಸಾಂಸಾರಿಕ ಕ್ಲೇಷಗಳಿಂದ) ಮುಕ್ತರಾಗುತ್ತಾರೆಂದು ಹೇಳಲಾಗುತ್ತದೆ.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 170-175 http://www.manblunder.com/2009/09/lalitha-sahasranamam-170-175.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
No votes yet

Comments

nageshamysore

Thu, 06/27/2013 - 20:43

ಶ್ರೀಧರರೆ, 170-175, ತಮ್ಮ ಅವಗಾಹನೆ, ಪರಿಶೀಲನೆಗೆ ಸಿದ್ದ - ನಾಗೇಶ ಮೈಸೂರು :-)

ಲಲಿತಾ ಸಹಸ್ರನಾಮ ೧೭೦ - ೧೭೫

೧೭೦. ನಿರ್ಲೋಭಾ 
ಲೋಭ ದುರಾಸೆಯಿಲ್ಲದವಳಾಗಿ ಬ್ರಹ್ಮಲಲಿತೆ
ತನ್ನದೆಲ್ಲವ ಭಕ್ತಗೆ ದಯಪಾಲಿಸೊ ಉದಾರತೆ
ಪಡೆದೆಲ್ಲಾ ಕರುಣೆ ನಿರ್ಲೋಭಿಯಾಗದ ಹೊಣೆ
ಭಕ್ತನಿಗಿರೆ ಮುಕ್ತಿ ಪಥಕೆ ನಡೆಸೆ ದೇವಿ ನಿಪುಣೆ!

೧೭೧. ಲೋಭನಾಶಿನೀ 
ಕಾಮ ಕ್ರೋಧ ಲೋಭ ಮೂರು ನರಕದ ದ್ವಾರ
ಆತ್ಮ ವಿನಾಶಕೆ ದಾರಿ ತೆರೆಯುವಾ ಭಯಂಕರ
ಮನ ನುಗ್ಗಿದ ಚೋರರೆ ಕಾಡುತ್ತಲೆ ಸಾಮಾನ್ಯರ
ಭಕ್ತರಿಗಿಲ್ಲ ಚಿಂತೆ ಲೋಭವಿನಾಶ ದೇವಿಯ ವರ!

೧೭೨. ನಿಃಸಂಶಯಾ 
ಅರಿವನರಸಿ ಹೊರಟಿಹ ಅಜ್ಞಾನಿ ಜನ ಮನುಜ
ಜ್ಞಾನಾರ್ಜನೆ ಪಥದಲಿ ಸಂಶಯ ಕಾಡೇ ಸಹಜ
ಜ್ಞಾನದ ಮೂರ್ತರೂಪವೆ ನಂಬಿದರೆ ಲಲಿತೆಯ
ಹರಿಸೆಲ್ಲ ಸಂಶಯ, ಅರಿಸುವಳು ನಿಃಸಂಶಯಾ!

೧೭೩. ಸಂಶಯಘ್ನೀ 
ಬ್ರಹ್ಮವನರಿತವಗೆ ಸಂಶಯವೆಲ್ಲಾ ಮಾಯ
ಸಂಶಯಾತೀತ ಜ್ಞಾನ ರೂಪಿ ದೇವಿ ಅಭಯ
ಮಂತ್ರ ಯೋಗ ಬ್ರಹ್ಮಜ್ಞಾನಗಳ ಗುರುವರ್ಗ
ಬ್ರಹ್ಮವೆ ಲಲಿತೆ ನಿವಾರಿಸೆ ಸಂಶಯ ಮಾರ್ಗ!
   
೧೭೪. ನಿರ್ಭವಾ 
ಆದ್ಯಂತರಹಿತಕೆ ಒಡೆಯನವನಾಗಿ ಪರಬ್ರಹ್ಮ
ಆದಿ ಅನಾದಿಯೆ ದೇವಿ ಮೂಲವಿಲ್ಲದ ಪರಮ
ಯಾರೂ ಸೃಷ್ಟಿಸದ ಶಿವ ಶಕ್ತಿಯಾಗಿ ಸಂಯುಕ್ತ
ಸಾಕಾರವೆ ಬ್ರಹ್ಮ ರೂಪ ನಿರ್ಭವಾ ಹೆಸರಾಯ್ತ!

೧೭೫. ಭವನಾಶಿನೀ 
ಜನನ ಮರಣಾ ನಿರಂತರ ಚಕ್ರವೆ ಸಂಸಾರ
ಮೋಹಬಂಧನ ಕಾರಣ ಚಿಟ್ಟು ಜೀವನ ಚಿತ್ರ
ಪೂಜಿಸೆ ನಿರಾಕಾರ ಮುಕ್ತವಾಗಿಸುತೆ ಜನನಿ
ಪರಿಹರಿಸಿ ಚಕ್ರ ಬಂಧ ಸಲಹಿ ಭವನಾಶಿನೀ!

೧೭೦-೧೭೫ನೇ ನಾಮಗಳ ಪರಿಷ್ಕರಣೆ
ನಾಗೇಶರೆ,
ನಿನ್ನೆ ರಾತ್ರಿಯೇ ಈ ಕಂತಿನ ಕಾವ್ಯಗಳನ್ನು ಸೇರಿಸಿರುವುದನ್ನು ನಾನು ಗಮನಿಸಲಿಲ್ಲ. ಬೆಳಿಗ್ಗೆ ಸ್ವಲ್ಪ ನೆಟ್-ವರ್ಕ್ ತೊಂದರೆಯಿಂದಾಗಿ ಸಂಪದವನ್ನು ನೋಡಲಾಗಲಿಲ್ಲ. ತಡವಾಗಿ ನೋಡುತ್ತಿರುವುದಕ್ಕೆ ಕ್ಷಮೆಯಿರಲಿ. ಎಲ್ಲಾ ಪಂಕ್ತಿಗಳೂ ಚೆನ್ನಾಗಿ ಮೂಢಿ ಬಂದಿವೆ, ನನಗೆ ಮೆಚ್ಚುಗೆಯಾದ ಸಾಲುಗಳು ಇವು.
>>>>>ಪಡೆದೆಲ್ಲಾ ಕರುಣೆ ನಿರ್ಲೋಭಿಯಾಗದ ಹೊಣೆ
ಭಕ್ತನಿಗಿರೆ ಮುಕ್ತಿ ಪಥಕೆ ನಡೆಸೆ ದೇವಿ ನಿಪುಣೆ!........+೧
ಉಳಿದಂತೆ ಕೆಲವೊಂದು ಕಣ್ತಪ್ಪಿನಿಂದಾಗಿರಬಹುದಾದ ಕೆಳಗಿನ ದೋಷಗಳತ್ತ ಸ್ವಲ್ಪ ಗಮನಿಸಿ.
೧೭೨. ನಿಃಸಂಶಯಾ
ಹರಿಸೆಲ್ಲ ಸಂಶಯ, ಅರಿಸುವಳು ನಿಃಸಂಶಯಾ!
ಅರಿಸುವಳು=ಹರಸುವಳು

೧೭೪. ನಿರ್ಭವಾ
ಆದಿ ಅನಾದಿಯೆ ದೇವಿ ಮೂಲವಿಲ್ಲದ ಪರಮ
ಪರಮ-ಪ್ರಥಮ ಮಾಡಿ ಹೆಚ್ಚು ಅರ್ಥಪೂರ್ಣವಾಗುತ್ತದೆ, ಏಕೆಂದರೆ ಆಕೆ ಆದಿ ಮೂಲಳು.

೧೭೫. ಭವನಾಶಿನೀ
ಮೋಹಬಂಧನ ಕಾರಣ ಚಿಟ್ಟು ಜೀವನ ಚಿತ್ರ
ಚಿಟ್ಟು-ಇದನ್ನು ಯಾವ ಅರ್ಥದಲ್ಲಿ ಬಳಸಿದ್ದೀರಿ; ಬೇರೆ ಏನಾದರೂ ಸೂಕ್ತ ಪದದ ಬಗ್ಗೆ ಆಲೋಚಿಸಿ.

ಪೂಜಿಸೆ ನಿರಾಕಾರ ಮುಕ್ತವಾಗಿಸುತೆ ಜನನಿ
ಪರಿಹರಿಸಿ ಚಕ್ರ ಬಂಧ ಸಲಹಿ ಭವನಾಶಿನೀ!
ಸಲಹಿ=ಸಲಹುವ ಸರಿಹೋಗಬಹುದು ಎಂದುಕೊಳ್ಳುತ್ತೇನೆ.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ತಿದ್ದಿದ 172,174,175 ಇಲ್ಲಿದೆ, ಸೂಕ್ತವಿದೆಯೆ ನೋಡಿ - ನಾಗೇಶ ಮೈಸೂರು, ಸಿಂಗಾಪುರದಿಂದ

೧೭೨. ನಿಃಸಂಶಯಾ
ಅರಿವನರಸಿ ಹೊರಟಿಹ ಅಜ್ಞಾನಿ ಜನ ಮನುಜ
ಜ್ಞಾನಾರ್ಜನೆ ಪಥದಲಿ ಸಂಶಯ ಕಾಡೇ ಸಹಜ
ಜ್ಞಾನದ ಮೂರ್ತರೂಪವೆ ನಂಬಿದರೆ ಲಲಿತೆಯ
ಹರಿಸೆಲ್ಲ ಸಂಶಯ, ಹರಸುವಳು ನಿಃಸಂಶಯಾ!
 
೧೭೪. ನಿರ್ಭವಾ
ಆದ್ಯಂತರಹಿತಕೆ ಒಡೆಯನವನಾಗಿ ಪರಬ್ರಹ್ಮ
ಆದಿ ಅನಾದಿಯೆ ದೇವಿ ಮೂಲವಿಲ್ಲದ ಪ್ರಥಮ
ಯಾರೂ ಸೃಷ್ಟಿಸದ ಶಿವ ಶಕ್ತಿಯಾಗಿ ಸಂಯುಕ್ತ
ಸಾಕಾರವೆ ಬ್ರಹ್ಮ ರೂಪ ನಿರ್ಭವಾ ಹೆಸರಾಯ್ತ!

೧೭೫. ಭವನಾಶಿನೀ
ಜನನ ಮರಣಾ ನಿರಂತರ ಚಕ್ರವೆ ಸಂಸಾರ
ಮೋಹಬಂಧನ ಕಾರಣ ಹೆಗಲೇರಿದ ಭಾರ
ಪೂಜಿಸೆ ನಿರಾಕಾರ ಮುಕ್ತವಾಗಿಸುತೆ ಜನನಿ
ಪರಿಹರಿಸಿ ಚಕ್ರಬಂಧ ಸಲಹುವ ಭವನಾಶಿನೀ!

ಅಂದಹಾಗೆ, ಈ ತಿದ್ದುವಿಕೆಯನ್ನು ಬೇರೆ ಕಡೆ ಮಾಡಿ ಪರಿಷ್ಕರಿಸಿದ ಆವೃತ್ತಿ ನೇರ ಹಾಕುವಂತಿದ್ದರೆ ಚೆನ್ನವೊ ಏನೊ....(ಪ್ರಾಯಶಃ ಬ್ಲಾಗ್ ಸೈಟಿನಲ್ಲಿ ಮೊದಲು ಪರಿಷ್ಕರಿಸಬಹುದು) ಇಲ್ಲಿ ನೇರ ತಿದ್ದುವಿಕೆ ಸಾಧ್ಯವಿಲ್ಲದ ಕಾರಣ, ಓದುವವರು ಸರಾಗವಾಗಿ ಒಂದೆಡೆ ನೋಡದೆ ಎರಡು ಮೂರು ಕಡೆ ಅಡ್ಡಾಡಬೇಕು....