“ನಿಜವ ತಿಳಿಯೋಣ”

“ನಿಜವ ತಿಳಿಯೋಣ”

 [ ನನ್ನ ಗುರುಗಳಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಕಳೆದ 25 ವರ್ಷಗಳಿಂದ ಹಲವು ಗುರುಗಳ ಹತ್ತಿರ  ನಿಯಮಿತವಾಗಿ ವೇದಾಧ್ಯಯನ ಮಾಡುತ್ತಿರುವ ಪಂಡಿತರು. ನಮ್ಮ ಸುಖಮಯ ಜೀವನಕ್ಕೆ ವೇದವು ಎಷ್ಟು ಉಪಕಾರಿ ಯಾಗಿದೆ, ಎಂದುದನ್ನು ಬಲು ಸರಳ ಸ್ಪಷ್ಟ ನುಡಿಗಳಲ್ಲಿ ತಮ್ಮ ಉಪನ್ಯಾಸ ಮಾಲೆಯಲ್ಲಿ ತಿಳಿಸಿಕೊಟ್ಟಿದ್ದಾರೆ.  ಉಪನ್ಯಾಸದ ಬರಹ ರೂಪವನ್ನು ಈ ಸಂಚಿಕೆಯಿಂದ ಆರಂಭಿಸಿ ಸುಮಾರು 20 ಸಂಚಿಕೆಯಲ್ಲಿ ಪ್ರಕಟಿಸಲಾಗುವುದು]  

ಯಾವುದೇ ವಿಚಾರವನ್ನು ನಾವು ನಂಬಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅಥವಾ ಬೇರೆಯವರಿಗೆ ತಿಳಿಸಬೇಕಾದರೆ ಒಂದು ಎಚ್ಚರಿಕೆಯನ್ನು ನಾವು ವಹಿಸಬೇಕು.ಅದೇನದು? “ನಾವು ಆಡುತ್ತಿರುವ ಮಾತು ಸತ್ಯವಾಗಿದೆಯೇ? ಪ್ರಿಯವಾಗಿದೆಯೇ? ಮತ್ತು ಎಲ್ಲರ ಹಿತಕ್ಕಾಗಿ ಈ ವಿಚಾರ ಇದೆಯೇ?ನಾವು ಆಡುವ ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ಹಿತ ಈ ಮೂರು ಅಂಶಗಳು ಇವೆಯೇ ಎಂಬುದನ್ನು ನಾವು ಮೊದಲು ಗಮನಿಸಿಕೊಳ್ಳಬೇಕು.ಯಾವ ನಮ್ಮ ಮಾತಿನಲ್ಲಿ ಯಾವ ನಮ್ಮ ನಂಬಿಕೆಯಲ್ಲಿ ಈ ಮೂರು ಅಂಶಗಳು ಇಲ್ಲ,ಅವು ನಮಗೆ ಜೀವನದಲ್ಲಿ ನಿಶ್ಪ್ರಯೋಜಕ. ಬೆಳಗಿನಿಂದ ಸಂಜೆಯವರಗೆ ನಾವು ಆಡಿರುವ ಮಾತಿನಲ್ಲಿ ಈ ಮೂರೂ ಅಂಶಗಳು ಇವೆಯೇ?  ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ನೋಡೋಣ.ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವಾಡುವ ಬಹಳಷ್ಟು ಮಾತುಗಳು ಈ ಮೂರೂ ಅಂಶಗಳಿಗಿಂದ ದೂರವೇ ಇರುತ್ತದೆ. ಹೀಗಿರುವುದರಿಂದ ನಾವಾಡುವ ಮಾತಿನಿಂದ ಯಾವ ಪ್ರಭಾವ ಆಗುತ್ತಿಲ್ಲ,ಜೀವನದಲ್ಲಿ ಯಾವ ಪರಿವರ್ತನೆ ಆಗಬೇಕಿತ್ತು ಅದು ಆಗುತ್ತಿಲ್ಲ, ಮಾತು ತನ್ನ ಶಕ್ತಿಯನ್ನು ಕಳೆದುಕೊಂಡಿದೆ.ನಮ್ಮ ಜೀವನ “ಇಷ್ಟೇನಾ?” ಎನ್ನುವಂತೆ ಸಪ್ಪೆಯಾಗಿದೆ.ಆದರೆ ಹೀಗಿರಬೇಕಾಗಿಲ್ಲ. ನಮ್ಮ ಜೀವನವನ್ನು ನಗುನಗುತ್ತಾ ಸಂತಸದಿಂದ ಕಳೆಯಲು ಸಾಧ್ಯ.ನಾವು ಚೆನ್ನಾಗಿರುವುದರ ಜೊತೆಗೆ ಬೇರೆಯವರನ್ನೂ ಚೆನ್ನಾಗಿಕಾಣುತ್ತಾ ಬದುಕಬಹುದು.ಅದಕ್ಕೆ ಬೇಕಾದ ಸಕಲ ಸೂತ್ರಗಳೂ ಸಿದ್ಧವಿದೆ.ಹೊಸದಾಗಿ ಹುಡುಕುವ ಅಗತ್ಯವಿಲ್ಲ. ಅದು ಯಾವುದೆಂದರೆ ಅದುವೇ ವೇದದ ಜ್ಞಾನ.

ವೇದ ಎಂಬುದು ನಾವು ನಿತ್ಯಜೀವನದಲ್ಲಿ ಹೇಗೆ ಬಾಳಬೇಕೆಂಬುದನ್ನು ತಿಳಿಸಿಕೊಡುವ ಜ್ಞಾನ. ಈ ಮಾನವ ಜೀವನದಲ್ಲಿ ಹೇಗೆ ಬದುಕಬೇಕು, ಜೀವನ ಮಾಡುತ್ತಲೇ ಅಧ್ಯಾತ್ಮಸಾಧನೆಯನ್ನು ಹೇಗೆ ಮಾಡಬೇಕೆಂಬ   ಅರಿವನ್ನು ವೇದವು ತಿಳಿಸಿಕೊಡುತ್ತದೆ.ಲೌಕಿಕ ಜೀವನವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆಯೂ ಅದ್ಭುತವಾದ ಮಾರ್ಗದರ್ಶನವಿದೆ, ಮತ್ತು ಈ ಜೀವನದ ಪರಮ ಉದ್ಧೇಶವು ಕೆವಲ ಸಂಪತ್ತನ್ನುಗಳಿಸಿ ಭೋಗಜೀವನದಲ್ಲಿಮುಳುಗುವುದಲ್ಲ, ಅದರಾಚೆಗಿರುವ ಆಧ್ಯಾತ್ಮ ಸಾಧನೆಯನ್ನೂ ಮಾಡಬೇಕೆಂಬುದನ್ನು ತಿಳಿಸಿಕೊಡುತ್ತದೆ.ಇದೊಂದು ಸಮನ್ವಯದ ಚಿಂತನೆ.  ಇದನ್ನು ಅರ್ಥಮಾಡಿಕೊಳ್ಳಲು ಮಾಜದಲ್ಲಿರುವ ಎರಡು ವಿಪರೀತವಾದಗಳನ್ನು ನೋಡಬೇಕು.ಒಂದು ವಿಪರೀತವಾದವೇನೆಂದರೆ ಎಷ್ಟು ವರ್ಷಗಳು ಬದುಕ ಬೇಕಾಗಿದೆ! ಬದುಕಿರುವಷ್ಟು ಕಾಲ ಜೀವನವನ್ನು  ಭೋಗಿಸಿ ಬಿಡೋಣ.ಸಾಲಮಾಡಿಯಾದರೂ ತುಪ್ಪ ತಿನ್ನು. ಈ ಜೀವನವನ್ನು ಭೋಗವಾದ ಎನ್ನುತ್ತಾರೆ.ಇದು ಒಂದು ವಿಪರೀತವಾದದ ಗುಂಪು.

 ಈ ಜೀವನ ಎಂಬುದನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಮಾತನಾಡುವ ಮತ್ತೊಂದು  ಗುಂಪು. ಇದು ಪುನ: ವಿಪರೀತವೇ ಸರಿ. ಜೀವನವನ್ನು ಪೂರ್ಣ ತಿರಸ್ಕರಿಸಿ ಬದುಕುವ ಬಗೆಯಾದರೂ ಹೇಗೆ? ಆದರೂ ಇಂತಾದೊಂದು ವಾದವಿದೆ.ವಿಚಿತ್ರವೆಂದರೆ ವೈರಾಗ್ಯದ ಮಾತನಾಡುವವರೂ ಕೂಡ ಲೌಕಿಕವನ್ನು ಬಿಟ್ಟು ಬದುಕಲಾರರು. ಹಾಗಾಗಿ ಈ ಎರಡೂ ವಿಪರೀತವಾದಗಳ  ನಡುವೆ ಎರಡನ್ನೂ ಸಮನ್ವಯಗೊಳಿಸುವ ಒಂದು ಮಾರ್ಗವಿದೆ. ಅದೇ ವೇದದ ನಿಜವಾದ ಮಾರ್ಗ. ಅದು ಏನು ಹೇಳುತ್ತದೆ? ಮಾನವ ಜೀವನದಲ್ಲಿ ಲೌಕಿಕ ಜೀವನವನ್ನು ಅಲ್ಲಗಳೆಯುವಂತಿಲ್ಲ. ಅದು ಇರಲಿ. ಅಂದರೆ ಹೆಂಡತಿ ಮಕ್ಕಳು, ಐಶ್ವರ್ಯ, ಸಂಪತ್ತು ಎಲ್ಲವೂ ಇರಲಿ. ಆದರೆ…..ಇದೇ ಜೀವನದ ಅಂತಿಮ ಲಕ್ಷ್ಯ ಗುರಿ ಅಲ್ಲ.ಅದರಾಚೆಗೂ ಇನ್ನೇನೋ ಇದೆ. ಹಾಗಾಗಿ ಇವುಗಳಲ್ಲಿ ಮುಳುಗಿಹೋಗಬೇಡ.ಅಧ್ಯಾತ್ಮ ವಿಚಾರವನ್ನು ಮಾತನಾಡುವವನಿಗೂ ಹಸಿವಾಗುತ್ತದೆ, ಆದ್ದರಿಂದ ಅನ್ನವನ್ನು ತಿರಸ್ಕರಿಸುವಂತಿಲ್ಲ, ಐಶ್ವರ್ಯ ಸಂಪಾದನೆಯನ್ನು ತಿರಸ್ಕರಿಸುವಂತಿಲ್ಲ, ಎಲ್ಲವೂ ಬೇಕು, ಆದರೆ ಎಲ್ಲವೂ ಜೀವನಕ್ಕೆ ಎಷ್ಟುಬೇಕೋ ಅಷ್ಟರಲ್ಲಿರಲಿ, ಹೆಚ್ಚು ಮಾಡಿಕೊಂಡರೇ ನೀನೇ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳ ಬೇಕಾಗುತ್ತದೆ, ಹೆಚ್ಚಾಗಿ ದುಡಿದ ಯಾವ ಸಂಪತ್ತೂ ಕಡೆಯಲ್ಲಿ ನಿನ್ನಜೊತೆ ಬರುವುದಿಲ್ಲ. ಈ ದೇಹವನ್ನು ಬಿಡುವಾಗ ಎಲ್ಲವನ್ನೂ ಬಿಟ್ಟೇ ಹೋಗಬೇಕಲ್ಲವೇ? ತೆಗೆದುಕೊಡುಹೋದವರನ್ನು ಯಾರಾದರೂ ನೋಡಿದ್ದೀರಾ?

ಆದ್ದರಿಂದ ಕಡೆಯಲ್ಲಿ ಬಿಟ್ಟೇ ಹೋಗಬೇಕಾದ ಸಂಪತ್ತನ್ನು ಎಷ್ಟು ಮಾಡಿಕೊಳ್ಳಬೇಕು? ಇದಕ್ಕಾಗಿ ವಾಮಮಾರ್ಗದಲ್ಲೂ ಸಂಪಾದಿಸಬೇಕೇ? ಇರುವಾಗ ಬದುಕಲು ಹಣದ ಅವಶ್ಯಕತೆ ಇದೆ, ಅದಕ್ಕಾಗಿ ಸಂಪಾದಿಸಲೇ ಬೇಕು.ಅದು ಸರಿ. ಅದು ಕರ್ತವ್ಯವೂ ಕೂಡ.ಸರಿ, ಹಾಗಾದರೆ ಉಳಿದ ಸಮಯವನ್ನೆಲ್ಲಾ ಕಳೆಯುವುದಾದರೂ ಹೇಗೆ? ಅದನ್ನೇ ತಿಳಿದುಕೊಳ್ಳಬೇಕಾದ್ದು. ನಿನ್ನ ಅಗತ್ಯ ದುಡಿಮೆಗೆ ಹೊರತಾಗಿ ಹೆಚ್ಚಾಗಿ ಇರುವ ಸನಯವನ್ನು ಆಧ್ಯಾತ್ಮದ ಸಾಧನೆಗಾಗಿ ಬಳಸಿಕೋ.ಕಾರಣ  ಏನೆಂದರೆ ಈ ಆಧ್ಯಾತ್ಮಿಕ ಸಾಧನೆಮಾಡಲು ಈ ಮನುಷ್ಯಜನ್ಮದಲ್ಲಿ ಮಾತ್ರವೇ ವಿಶೇಷ ಅವಕಾಶವಿದೆ. ಬೇರೆ ಯಾವ ಜನ್ಮದಲ್ಲೂ ಆಧ್ಯಾತ್ಮಿಕ ಸಾಧನೆಮಾಡಲು ಸಾಧ್ಯವಿಲ್ಲ. ಏಕೆಂದರೆ ಮನುಷ್ಯೇತರ ಜೀವಿಗಳಿಗೆ  ಇರುವ ಶರೀರ, ಇಂದ್ರಿಯ ಮನಸ್ಸುಗಳಿಗೆ ಆಧ್ಯಾತ್ಮಿಕ ಸಾಧನೆ ಮಾಡುವ ಸಾಮರ್ಥ್ಯ ಇಲ್ಲ. ಸರಳವಾಗಿ ಹೇಳಬೇಕೆಂದರೆ  ನಮ್ಮ ಶರೀರವು ಒಂದು   ಸೈಂಟಿಫಿಕ್ ಕ್ಯಾಲ್ಕುಲೇಟರ್ ಇದ್ದಂತೆ.ಮಿಕ್ಕ ಜೀವಿಗಳದ್ದು ಸಾಮಾನ್ಯ ಕ್ಯಾಲ್ಕುಲೇಟರ್ . ಅದರಲ್ಲಿ ಕೂಡು,ಕಳೆ,ಗುಣಿಸು, ಭಾಗಿಸು ಇಷ್ಟು ಮಾತ್ರ ಮಾಡಲು ಸಾಧ್ಯ. ನಮ್ಮ ಕ್ಯಾಲ್ಕುಲೇಟರ್ ಆದರೋ ವಿಶೇಷ ಕ್ಯಾಲ್ಕುಲೇಟರ್. ಅದರಲ್ಲಿ ಕೂಡು,ಕಳೆ,ಗುಣಿಸು, ಭಾಗಿಸು,ಜೊತೆಗೆ ಟ್ಯಾನ್ ತೀಟಾ, ಕಾಸ್ ತೀಟಾ, ಟ್ಯಾನ್ ಇನ್ವರ್ಸ್ ಅಲ್ಲದೆ ಇನ್ನೂ ಹಲವಾರು ವಿಶೇಷ ಲಾಭಕ್ಕಾಗಿ ಉಪಯೋಗಿಸಬಹುದು.ಆದರೆ ಸಾಮಾನ್ಯ  ಭೋಗ ಜೀವನ ಅಪೇಕ್ಷಿಸುವವನು ಈ ಒಂದು ಸೈಂಟಿಫಿಕ್ ಕ್ಯಾಲ್ಕುಲೇಟರ್ ನ್ನು ಕೇವಲ  ಕೂಡು,ಕಳೆ,ಗುಣಿಸು, ಭಾಗಿಸುವುದಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಇಷ್ಟು ಸಾಧಾರಣ ಕೆಲಸ ಮಾಡಲು ಇಂತಹಾ ಉತ್ತಮ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬೇಕಾಗಿತ್ತೇ? ಪ್ರಾಣಿಗಳಂತೆ ಕೇವಲ  ತಿಂದುಉಂಡು ಮಕ್ಕಳನ್ನು ಹಡೆಯಲು ಮನುಷ್ಯ ಶರೀರವೇ ಬೇಕೇ? ಯಾವ ಪ್ರಾಣಿಯೂ ಇಷ್ಟು ಕೆಲಸ ಮಾಡುತ್ತೆ.  ಅಷ್ಟನ್ನೇ ಮನುಷ್ಯ ಶರೀರದಲ್ಲೂ ಮಾಡಿದರೆ ಸೈಂಟಿಫಿಕ್ ಕ್ಯಾಲ್ಕುಲೇಟರ್ ನ್ನು ಕೇವಲ ಕೂಡು ಕಳೆಯುವುದಕ್ಕೆ ಉಪಯೋಗಿಸಿದಂತಾಗುತ್ತದೆ.ಇಷ್ಟೇ ಸರಳವಾದ ವಿಚಾರವಿದು.ಮನುಷ್ಯ ಶರೀರ ಸಿಕ್ಕಿರುವಾಗ ಅದನ್ನು ಉಪಯೋಗಿಸಿಕೊಂಡು ಎಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಬೇಕು.ಆಗ ಮಾತ್ರ ಮನುಷ್ಯನಾಗಿ ಹುಟ್ಟಿದ್ದಕ್ಕೂ ಸಾರ್ಥಕ ವಾಗುತ್ತದೆ.ಹಾಗಾದರೆ ಕೂಡು ಕಳೆಯುವ ಲೆಕ್ಖಾಚಾರ ಬೇಡವೇ? ಅದೂ ಬೇಕು. ಆದರೆ ನಮ್ಮ ಜೀವನ ಅಷ್ಟಕ್ಕೇ ನಿಲ್ಲ ಬಾರದು. ಈ ವಿಶಿಷ್ಟವಾದ ಮಾನವ ಶರೀರವನ್ನು ಉಪಯೋಗಿಸಿಕೊಂಡು ಏನಾದರೂ ಉತ್ತಮ ಕೆಲಸ ಮಾಡಬೇಕು.

ನಮಗೆ ಈಗ ಅರ್ಥವಾಗಬಹುದು ಸಮನ್ವಯದ ಸೂತ್ರ. ಲೌಕಿಕ ಜೀವನ ಬೇಡವೇ? ಬೇಕು. ಶರೀರ  ಮನಸ್ಸು ಇಂದ್ರಿಯಗಳ ಪೋಷಣೆಗಾಗಿ ಏನೇನು ಬೇಕೋ ಎಲ್ಲವೂ ಬೇಕು. ಆದರೆ ಅದೇ ಕೊನೆಯಲ್ಲ. ಅದನ್ನು ಆಧಾರವಾಗಿಟ್ಟುಕೊಂಡು ಮುಂದೆ ಆಧ್ಯಾತ್ಮಿಕ ಸಾಧನೆಮಾಡಬೇಕಾಗಿದೆ ಏಕೆಂದರೆ ಮನುಷ್ಯಜೀವ ಒಂದೇ ಅಧ್ಯಾತ್ಮ ಸಾಧನೆ ಮಾಡಲು ಇರುವ ಅವಕಾಶ. ಈ ಶರೀರವನ್ನು ಬಳಸಿ ಕೊಂಡು ಸಾಧನೆ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ.ಇದೇ ಸಮನ್ವಯದ ಗುಟ್ಟು.ಇದನ್ನೇ ಶ್ರೀ ಕೃಷ್ಣ ಹೇಳಿದ್ದು “ಸಮತ್ವಂ ಯೋಗ ಉಚ್ಚತೇ”. ಇದನ್ನು ಗುರುತಿಸಿಕೊಂಡವನು ಸಾಧನೆ ಮಾಡಬಲ್ಲ. ಹಿಂದಿನ ಋಷಿಮುನಿಗಳೆಲ್ಲಾ ಬಹುಪಾಲು ಗೃಹಸ್ಥರೇ ಆಗಿದ್ದರು. ವೈರಾಗ್ಯದ ಹೆಸರಲ್ಲಿ ತಮ್ಮ ಲೌಕಿಕ ಜೀವನವನ್ನು ಅಲ್ಲಗಳೆದವರಲ್ಲ. ಅವರು ಲೌಕಿಕ ಜೀವನದಲ್ಲಿದ್ದುಕೊಂಡೇ ಆಧ್ಯಾತ್ಮಿಕ ಸಾಧನೆ ಮಾಡಿದವರು.ಇದೇ ಸರಿಯಾದ ಮಾರ್ಗ. ಇದುವೇ ಸಮತ್ವದ ಜೀವನ. ಈ ಮಾರ್ಗವನ್ನು ತಿಳಿಸುವ ಏಕೈಕ ವಿಜ್ಞಾನ ಶಾಸ್ತ್ರವೆಂದರೆ ಅದು ವೇದ. ವೇದವೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಬೇಕಾದ, ಶ್ರಾದ್ಧಾದಿಗಳನ್ನು ಮಾಡಿಸಲು ಇರುವ ಮಂತ್ರಗಳಲ್ಲ. ಒಂದೊಂದು ವೇದ ಮಂತ್ರದಲ್ಲೂ ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಾದ ಅದ್ಭುತವಾದ ಜ್ಞಾನ ಭಂಡಾರ ಇದೆ. ನಾವು ಅದನ್ನು ಉಪಯೋಗಿಸಿಕೊಂದು  ಬದುಕಿಗೆ  ಅಳವಡಿಸಿಕೊಂಡು ಜೀವನ ಮಾಡಿದ್ದೇ ಆದರೆ ನಾವೂ ಚೆನ್ನಾಗಿರಬಹುದು, ಜೊತೆಯಲ್ಲಿರುವ ಇತರರನ್ನೂ ಚೆನ್ನಾಗಿರುವಂತೆ ಮಾಡಬಹುದು.ಲೌಕಿಕ ಮತ್ತು ಆಧ್ಯಾತ್ಮಿಕದ ಸಮತ್ವವನ್ನು ಕಾಪಾಡಿಕೊಂಡು ಜೀವನ ನಡೆಸಲು ಇದರಿಂದ ಸಾಧ್ಯ.

ಹಿಂದಿನ ತಲೆಮಾರಿನವರು ಆಧ್ಯಾತ್ಮಿಕ ವಿಷಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆದರೆ  ಈಗಿನ ಪೀಳಿಗೆ “ಯಾಕೆ” ಅಂತ ಪ್ರಶ್ನೆ ಕೇಳಿದರೆ ಹಿಂದಿನ ತಲೆಮಾರಿನವರಲ್ಲಿ ಸ್ಪಷ್ಟ ಉತ್ತರವಿಲ್ಲ. ನಮ್ಮ ಹಿಂದಿನವರು ಮಾಡುತ್ತಿದ್ದರು. ಅದಕ್ಕೆ ನಾನೂ ಮಾಡುತ್ತಿರುವೆ. ನೀನೂ ಮಾಡು, ಹೀಗೆ ಕೊಡುವ ಉತ್ತರದಿಂದ ಇಂದಿನ ಯುವ ಪೀಳಿಗೆಗೆ ಸಮಾಧಾನವಾಗುವುದಿಲ್ಲ. ಹಿಂದಿನ ತಲೆಮಾರು ಮತ್ತು ಈಗಿನ ಯುವ ಪೀಳಿಗೆಯ ನಡುವೆ ಇರುವ ಸಮಸ್ಯೆಯೇ ಇದು. ಇಂದಿನ ಯುವ ಪೀಳಿಗೆ ಏನು ಹೇಳಬಹುದು? ಜೀವನದಲ್ಲಿ ಅನುಭವಿಸಲು ಏನೋ ಸಿಗುತ್ತಿರುವ ಹೊತ್ತಿಗೆ ನೀವು ಅಡ್ಡಿ ಮಾಡುವುದು ಸರಿಯೇ? ಎಂದು ಹಿಂದಿನ ತಲೆಮಾರಿನವರಿಗೆ ಪ್ರಶ್ನೆ ಹಾಕುತ್ತಾರೆ. ಇಂದಿನ ಪೀಳಿಗೆಯ ಪ್ರಶ್ನೆಗೆ ಹಿಂದಿನ ತಲೆಮಾರಿನವರಿಗೆ ಉತ್ತರ ಕೊಡಲು ಗೊತ್ತಿಲ್ಲದಿರುವುದು ಇಂದಿನ ಸಮಸ್ಯೆಗೆಲ್ಲಾ ಮೂಲ ಕಾರಣವಾಗಿದೆ. ಎಲ್ಲರ ಮನೆಗಳಲ್ಲೂ ಈ ಸಮಸ್ಯೆಯನ್ನು ಕಾಣಬಹುದಾಗಿದೆ. ಈ ಎರಡೂ ಪೀಳಿಗೆಗೆ ಸರಿಯಾಗಿ ಸಮನ್ವಯ ಮಾಡುವ ಸಾಮರ್ಥ್ಯ ಇರುವುದು ವೇದಕ್ಕೆ ಮಾತ್ರ. ಹಿಂದಿನವರು ಗೊಡ್ಡು ಸಂಪ್ರದಾಯವನ್ನು ಹೇಳುತ್ತಿದ್ದರೆ ಅದು ಹಾಗಲ್ಲ, ಇದು ಸರಿಯಾದ ಮಾರ್ಗ ಎಂದು ಋಜುಮಾರ್ಗವನ್ನು  ತೋರಿಸಿ ಅವರನ್ನು ತಿದ್ದಲು ಸಹಾಯಕವಾಗುತ್ತದೆ. ಅದೇ ಸಮಯದಲ್ಲಿ ಇಂದಿನ ಪೀಳಿಗೆಯವರ ಪ್ರಶ್ನೆಗಳಿಗೆ ಸರಿಯಾದ ವೈಜ್ಞಾನಿಕ ಉತ್ತರಕೊಟ್ಟು ಅವರ ಅಭ್ಯುದಯಕ್ಕೂ ಕಾರಣ ವಾಗುತ್ತದೆ. ಇದು ವೇದದ ವೈಶಿಷ್ಠ್ಯ.

[ಮುಂದಿನ ಭಾನುವಾರ ಮುಂದುವರೆಯುತ್ತದೆ]

-ಬರಹರೂಪ:

ಹರಿಹರಪುರಶ್ರೀಧರ್

Rating
No votes yet

Comments

Submitted by makara Thu, 07/04/2013 - 08:44

>>>>> “ನಾವು ಆಡುತ್ತಿರುವ ಮಾತು ಸತ್ಯವಾಗಿದೆಯೇ? ಪ್ರಿಯವಾಗಿದೆಯೇ? ಮತ್ತು ಎಲ್ಲರ ಹಿತಕ್ಕಾಗಿ ಈ ವಿಚಾರ ಇದೆಯೇ?ನಾವು ಆಡುವ ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ಹಿತ ಈ ಮೂರು ಅಂಶಗಳು ಇವೆಯೇ ಎಂಬುದನ್ನು ನಾವು ಮೊದಲು ಗಮನಿಸಿಕೊಳ್ಳಬೇಕು....ಬಹಳ ಅರ್ಥಪೂರ್ಣ ಮಾತುಗಳು ಶ್ರೀಧರ್ ಸರ್. ಉನ್ನತವಾದ ವಿಚಾರಗಳನ್ನು ಬಹಳ ಸರಳವಾಗಿ ಶ್ರೀಯುತ ಸುಧಾಕರ ಶರ್ಮ ಅವರು ಹೇಳಿದ್ದಾರೆ ಅದನ್ನೇ ನೀವು ಅತ್ಯುತ್ತಮವಾಗಿ ಬರಹ ರೂಪದಲ್ಲಿರಿಸಿದ್ದೀರ. ಇಬ್ಬರಿಗೂ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ