ಚಂದ್ರಗಿರಿಯ ತೀರದ ಹೋರಾಟದ ಹಕ್ಕಿ

ಚಂದ್ರಗಿರಿಯ ತೀರದ ಹೋರಾಟದ ಹಕ್ಕಿ

ಕನ್ನಡ ಸಾಹಿತ್ಯಲೋಕಕ್ಕೆ ಮುಸ್ಲಿಂ ಮಹಿಳೆಯರ ದನಿ ಕೇಳಿಸಿದ ಹಿರಿಯ ಲೇಖಕಿ ಸಾರಾ ಅಬೂಬಕರ್‍. ಲಿಂಗಾಧಾರಿತ ಅಸಮಾನತೆಯ ವಿರುದ್ಧ ಇಂದಿಗೂ ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಇವರ ವೈಯುಕ್ತಿಕ ಬದುಕಿನ ಕಥನವೇ ಜ್ಞಾನಕ್ಕಾಗಿ, ಸಮಾನತೆಗಾಗಿ ಹಸಿದ ಮನಸ್ಸೊಂದರ ಹುಡುಕಾಟದ ಕತೆ.

ಸಂಪ್ರದಾಯವಾದಿ ಮುಸ್ಲಿಂ ವಾತಾವರಣವಿದ್ದ ಕೇರಳದ ಕಾಸರಗೋಡಿನ ಚಮನಾಡುವಿನಲ್ಲಿ 1936 ಜೂನ್‍ 30ರಂದು ಸಾರಾ ಅಬೂಬಕರ ಜನಿಸಿದರು. ಇವರ ತಾತ ಪುಡಿಯಾಪುರ ಮಹಮದ್‍ ಕೃಷಿಕರಾಗಿದ್ದರೂ ಕೂಡ ಪ್ರಗತಿಪರ ಧೋರಣೆ ಹೊಂದಿದ್ದರು. ಇವರ ತಂದೆ ಪುಡಿಯಾಪುರ ಅಹಮದ್‍ ವೃತ್ತಿಯಲ್ಲಿ ವಕೀಲರಾಗಿದ್ದರು. ಇವರಿಬ್ಬರ ಪ್ರಗತಿಪರ ಮನೋಭಾವಗಳು ಸಾರಾರವರು ಅಕ್ಷರ ಲೋಕಕ್ಕೆ ಕಾಲಿಡಲು ಕಾರಣವಾಯಿತು. ‘ಮಗಳಿಗೆ ಹದಿನಾರು ವರ್ಷವಾಗದೆ, ಎಸ್‍ಎಸ್‍ಎಲ್‍ಸಿ ಮಾಡಿಸದೆ ಮದುವೆ ಮಾಡುವುದಿಲ್ಲ’ ಎಂಬ ತಮ್ಮ ತಂದೆಯ ನಿರ್ಧಾರದಿಂದ ಸಾರಾರವರಿಗೆ ಓದಲು ಅವಕಾಶ ದೊರೆಯುತ್ತದೆ. ಅಂದಿನ ಕಾಲಕ್ಕೆ ಇದು ಕ್ರಾಂತಿಕಾರಿಕ ವಿಚಾರವಾಗಿತ್ತು. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದುದೆ ಅಪರೂಪವಾಗಿದ್ದ ದಿನಗಳಲ್ಲಿ ಸಾರಾ ಮನೆಯಿಂದ ಹೊರಗಡೆ ಅಡಿಯಿಟ್ಟರು. ತಲೆಯ ಮೇಲೆ ಸೆರಗು ಹೊದೆಯದೆ ದಾರಿಯಲ್ಲಿ ಹೋಗುತ್ತಿದ್ದ ಅವರನ್ನು ಜನ ವಿಚಿತ್ರವಾಗಿ ನೋಡುತ್ತಿದ್ದರಂತೆ ಇಂತಹ ಮುಜುಗರಗಳ ನಡುವೆಯೂ ತಮ್ಮ ಓದಿನ ಕಡೆಗಿನ ಆಸಕ್ತಿಯಿಂದಾಗಿ ಎಸ್‍ಎಸ್‍ಎಲ್‍ಸಿಯನ್ನು ಯಶಸ್ವಿಯಾಗಿ ಪೂರೈಸಿದರು. ನಂತರ ಮಂಗಳೂರಿನಲ್ಲಿ ಇಂಜಿನಿಯರ್‍ ಆಗಿದ್ದ ಅಬೂಬಕರರನ್ನು ಮದುವೆಯಾಗಿ ಕಾಸರಗೋಡಿನಿಂದ ಮಂಗಳೂರಿಗೆ ಬಂದರು.

ಮಂಗಳೂರಿಗೆ ಬಂದ ಮೇಲೆ ಕೂಡ ಸಾರಾ ಧಾರ್ಮಿಕ ಕಟ್ಟುಪಾಡುಗಳಿಂದ ಪಾರಾಗಲಿಲ್ಲ. ಗಂಡ ವಿದ್ಯಾವಂತನಾದರೆ ಘೋಷಾ ತೊಡಬೇಕಾದ ಪ್ರಮೇಯವಿರುವುದಿಲ್ಲ ಎಂದುಕೊಂಡವರಿಗೆ ಗಂಡನ ಮನೆಗೆ ಹೋಗಬೇಕಾದ ಮೊದಲ ದಿನವೇ ಘೋಷಾ ತೊಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಷ್ಟೇ ಅಲ್ಲ ತಾಯಿಯ ಮನೆಯಲ್ಲಿ ಓಡಾಡಿದಂತೆ ಈ ಮನೆಯಲ್ಲಿ ಸ್ವತಂತ್ರವಾಗಿ ಓಡಾಡುವಂತಿರಲಿಲ್ಲ. ಗಂಡಸರ ಎದುರಿಗೆ ಬರುವಂತೆಯೇ ಇರಲಿಲ್ಲ. ತಮ್ಮ ನಾದಿನಿಯರ ಗಂಡಂದಿರ ಎದುರಿಗಾಗಲೀ, ಮನೆಯ ಡ್ರೈವರುಗಳ ಎದುರಾಗಲೀ ಅಪ್ಪಿತಪ್ಪಿಯೂ ಸುಳಿಯುವಂತಿರಲಿಲ್ಲ. ಅತ್ತೆಯ ಮನೆಯದು ಸುಮಾರು 45 ಮಂದಿಯಿದ್ದ ಅವಿಭಕ್ತ ಕುಟುಂಬ. ಇಂತಹ ಕಟ್ಟುಪಾಡುಗಳಿಂದ ಅವರಿಗೆ ಸ್ವಲ್ಪ ಮಟ್ಟಿಗೆ ಬಿಡುಗಡೆ ದೊರೆತದ್ದು ವಿಭಕ್ತ ಕುಟುಂಬವಾದ ಮೇಲೆಯೇ.

ಪ್ರಗತಿಪರ ಧೋರಣೆಯವರಾಗಿದ್ದರೂ ಕೂಡ ಸಾರಾರವರ ತಂದೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ವಿಷಯಬಂದಾಗ ಗಂಡುಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೆ ಹೊರತು ಸಾರಾರನ್ನಲ್ಲ. ಸ್ನೇಹಿತೆಯರೊಂದಿಗೆ ಹೊರಗೆ ಓಡಾಡುವ ಅವಕಾಶ ಕೂಡ ಇರಲಿಲ್ಲ. ಗಂಡನ ಮನೆಗೆ ಬಂದ ಮೇಲೆ ಕೂಡ ಪರಿಸ್ಥಿತಿ ಬದಲಾಗಲಿಲ್ಲ. ಮನೆಯ ಪಕ್ಕದಲ್ಲೇ ಸರ್ಕಸ್‍ ಕಂಪೆನಿ ಬೀಡು ಬಿಟ್ಟಾಗಲೂ ಕೂಡ ಅದರ ಸದ್ದುಗಳನ್ನು ಕಿವಿಯ ಮೇಲೆ ಬೀಳುತ್ತಿತ್ತೇ ಹೊರತು ನೋಡುವ ಅವಕಾಶವಿರಲಿಲ್ಲ. ತಾವೇಕೆ ಸಿನಿಮಾ ನೋಡಬಾರದು ಎಂದು ಪತಿಯನ್ನು ಒಮ್ಮೆ ಪ್ರಶ್ನಿಸುತ್ತಾರೆ. ಹೀಗೆ ಲಿಂಗತಾರತಮ್ಯದ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಮೇಲೆ ಹೇರಲಾಗಿರುವ ಕಟ್ಟುಪಾಡುಗಳನ್ನು ಪ್ರಶ್ನಿಸುವ ಒಳತುಡಿತ ಸಾರಾರವರಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿತ್ತು. ತಮ್ಮ ತಂದೆಯೇ ತಮ್ಮಲ್ಲಿ ಪ್ರಶ್ನಿಸುವ ಧೈರ್ಯವನ್ನು ತುಂಬಿದವರು ಎಂದು ಸಾರಾ ಹೇಳುತ್ತಾರೆ.

ಶಾಲಾ ದಿನಗಳಲ್ಲಿ ಕೈಗೆ ಸಿಗುತ್ತಿದ್ದ ಪತ್ತೇದಾರಿ ಕಾದಂಬರಿಗಳನ್ನು ಓದುತ್ತಾ ತಮ್ಮ ಓದಿನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಗಂಡನ ಮನೆಗೆ ಬಂದಮೇಲೆ ಅಲ್ಲಿ ತರಿಸುತ್ತಿದ್ದ ‘ನವಭಾರತ’ಎನ್ನುವ ಪತ್ರಿಕೆಯನ್ನು ಹಲವು ಚೂರುಗಳಾಗಿ ಹರಿದಿದ್ದರೂ ಅದನ್ನು ಒಟ್ಟುಗೂಡಿಸಿ ಓದಿಕೊಳ್ಳುವ ಮೂಲಕ ತಮ್ಮ ಓದಿನ ದಾಹವನ್ನು ತೀರಿಸಿಕೊಳ್ಳುತ್ತಿದ್ದರಂತೆ. ತಮ್ಮ ತಾಯಿಯ ಮನೆಗೆ ಹೊರಟಾಗ ಬಸ್‍ನಿಲ್ದಾಣಗಳಲ್ಲಿ ಪುಸ್ತಕಗಳನ್ನು ಕೊಂಡು ಓದುತ್ತಿದ್ದರಂತೆ. ನಂತರ ವಿಭಕ್ತ ಕುಟುಂಬವಾದ ಮೇಲೆ ಸ್ವತಂತ್ರವಾಗಿ ಸಾರ್ವಜನಿಕ ಗ್ರಂಥಾಲಯಗಳಿಂದ ಪುಸ್ತಕ ತಂದು ಓದಲಾರಂಭಿಸಿದರಂತೆ. ಈ ಓದು ಅವರಲ್ಲಿ ಬರೆಯುವ ತುಡಿತವನ್ನು ಹುಟ್ಟುಹಾಕಿತು. ಮೊದಮೊದಲು ಪತ್ರಿಕೆಗಳಿಗೆ ಕಳಿಸಿದ ಕತೆಗಳು ಪ್ರಕಟವಾಗದೇ ಅವರು ನಿರಾಶರಾದರಂತೆ. 1980ರಲ್ಲಿ ಲಂಕೇಶ್‍ ಪತ್ರಿಕೆಯಲ್ಲಿನ ಲೇಖನವೊಂದಕ್ಕೆ ಪ್ರತಿಕ್ರಿಯೆ ಬರೆದು ಕಳಿಸಿದ್ದು ಪ್ರಕಟವಾಗಿ ಅವರ ಬರವಣಿಗೆಯ ಜೀವನಕ್ಕೆ ತಿರುವನ್ನು ತಂದುಕೊಟ್ಟಿತು. ನಂತರ ಆ ಪತ್ರಿಕೆಯಲ್ಲೇ ಅವರ ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಮತ್ತು ‘ಚಂದ್ರಗಿರಿಯ ತೀರದಲ್ಲಿ’ ಪ್ರಕಟವಾಗಿ ಅವರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕಿಯಾಗಿ ಸ್ಥಾನಮಾನ ತಂದುಕೊಟ್ಟಿತು. ನಂತರ ಅವರ ಬರವಣಿಗೆ ಹಲವು ಮಜಲುಗಳನ್ನು ಕಂಡಿತು. ಈ ಹಾದಿ ಸುಗುಮವಾದದ್ದೇನು ಆಗಿರಲಿಲ್ಲ. ಇವರ ಪ್ರಗತಿಪರ ಧೋರಣೆ ಮತ್ತು ಬರವಣಿಗೆಯನ್ನು ಸಹಿಸದ ಸಂಪ್ರದಾಯವಾದಿ ಸಂಕುಚಿತ ಮನಸ್ಸುಗಳು ಇವರಿಗೆ ಕಿರುಕಳ ನೀಡಲಾರಂಭಿಸಿದರು. ತಮ್ಮ ತಂದೆಯ ನೆರವಿನಿಂದ ಕಾನೂನು ಹೋರಾಟ ಮಾಡುವ ಮೂಲಕ ಸಾರಾ ತಮ್ಮ ವೈರಿಗಳಿಗೆ ಸೂಕ್ತ ಉತ್ತರ ನೀಡಿದರು.

‘ಚಂದ್ರಗಿರಿಯ ತೀರದಲ್ಲಿ’, ‘ಸಹನಾ’, ‘ವಜ್ರಗಳು’ ಇತ್ಯಾದಿ ಕಾದಂಬರಿಗಳು, ‘ಚಪ್ಪಲಿಗಳು’, ‘ಪಯಣ ಮತ್ತು ಇತರ ಕಥೆಗಳು’ ಇತ್ಯಾದಿ ಕಥಾಸಂಕಲನಗಳು, ‘ಲೇಖನ ಗುಚ್ಛ’ ಮತ್ತು ಅನಾವರಣ ಲೇಖನಸಂಕಲಗಳನ್ನು, ‘ಮನೋಮಿ’, ಬಲೆ, ‘ನಾನಿನ್ನೂ ನಿದ್ರಿಸುವೆ’ ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಬಹುಪಾಲು ಕೃತಿಗಳ ಅವರು ಮುಸ್ಲಿಂ ಸಮಾಜದಲ್ಲಿ ಕಂಡುಂಡ ನೋವುಗಳು ಹಾಗೂ ತಾರತಮ್ಯಗಳ ಚಿತ್ರಣವಾಗಿದೆ.

ಇವರಿಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಂಜನಗೂಡು ತಿರುಮಲಾಂಬ ಶಾಶ್ವತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮೊದಲಾದ ಗೌರವಗಳು ಲಭಿಸಿವೆ.

ಚಿತ್ರ ಕೃಪೆ: http://mitramaadhyama.co.in/archives/2105

Comments

Submitted by kavinagaraj Mon, 07/01/2013 - 14:59

ಸಂಪ್ರದಾಯಗಳು ವೈಚಾರಿಕತೆಯ ಪರಿಧಿಗೊಳಪಡಬೇಕು. ಅಂಧ ಸಂಪ್ರದಾಯಗಳನ್ನು ಮೆಟ್ಟಿನಿಲ್ಲುವ, ವೈಚಾರಿಕತೆಯನ್ನು ಪೋಷಿಸುವ ಮುಸ್ಲಿಮರ ಸಂಖ್ಯೆ ಹೆಚ್ಚಾದಾಗ ಮಾತ್ರ ಬದಲಾವಣೆ ನಿರೀಕ್ಷಿಸಬಹುದು. ಸಾರಾ ಅಬೂಬಕ್ಕರರಿಗೆ ಸಲಾಮ್! ಪರಿಚಯಿಸಿದ ನಿಮಗೂ ಸಲಾಮ್!
Submitted by arunkumar.bengaluru Tue, 07/02/2013 - 12:18

ಮನಕಲಕುವಂಥ "ಚಂದ್ರಗಿರಿಯ ತೀರದಲ್ಲಿ..." ಕಾದಂಬರಿ ಓದಿ, ಸಾರಾಅವರ ಅಭಿಮಾನಿಯಾಗಿದ್ದೆ. ಇಲ್ಲಿ ಅವರ ಪೂರ್ಣ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.