ಇಂದು ಸಂಬಂಧಗಳೆಂದರೆ- ಅಂಕಲ್ ಗಳು ಮತ್ತು ಆಂಟಿಯರು ಮಾತ್ರ!

ಇಂದು ಸಂಬಂಧಗಳೆಂದರೆ- ಅಂಕಲ್ ಗಳು ಮತ್ತು ಆಂಟಿಯರು ಮಾತ್ರ!

ಸಮಯ ಆಗಲೇ ರಾತ್ರಿ ಎಂಟು ದಾಟಿತ್ತು, ಒಂದು ಗಂಟೆಯ ಹಿಂದೆ ಹೋದ ವಿದ್ಯುತ್ ಇನ್ನು ಪತ್ತೆಯೇ ಇಲ್ಲ. ಅಪರೂಪಕ್ಕೊಮ್ಮೆ ಅತಿಥಿಗಳಂತೆ ಬರುವ ಮಳೆ, ಕಳೆದ ಎರಡು ಮೂರು ದಿನಗಳಿಂದ ರಾತ್ರಿಯೊಂದಿಗೆ ತಾನು ಬರುತಿತ್ತು. ಇಂದಂತೂ ತುಂಭಾ ಜೋರಾಗಿ ಬರುತಿತ್ತು. ಗುಡುಗು ಸಿಡಿಲುಗಳೇನು? ಮಿಂಚುಗಳ ಆರ್ಭಟಗಳೇನು? ಒಂದು ಗಂಟೆಯ ಹಿಂದೆ ಕಚ್ಚಿದ್ದ ಮೊಂಬತ್ತಿ ಆಗಲೇ ತಳ ಸೇರುವುದರಲ್ಲಿತ್ತು. ಹೊರಗಡೆ ಚುಮು ಚುಮು ಚಳಿಯಿದ್ದರೂ, ಬೇಸಿಗೆಯ ಕಡೆಯದಿನಗಳಾಗಿದ್ದರಿಂದಲೋ ಏನೋ ಒಳಗಡೆ ಸಖೆಯಿನ್ನು ಕಡಿಮೆಯಾಗಿರಲಿಲ್ಲ. ಮನೆಯಲ್ಲಿ ಒಬ್ಬಂಟಿ ಬೇರೆ. ಹೆಂಡತಿ ಮಕ್ಕಳನ್ನು ಊರಲ್ಲಿ ಬಿಟ್ಟು ಬಂದು ಆಗಲೇ ಒಂದು ವಾರ ಕಳೆದಿತ್ತು. ಹಾಗಾಗಿ ಮನೆಯಲ್ಲಿ ಏನೋ ಒಂಥರಾ ನೀರವ ನಿಶ್ಯಬ್ಧ. ಶನಿವಾರ ಬೇರೇ ಆಗಿದ್ದರಿಂದ ಇನ್ನೂ ಮನೆಯಲ್ಲೆ ಇದ್ದೆ. ಹೊರಗೆ ಗುಡುಗು ಮಳೆಯ ಸಪ್ಪಳ ಬಿಟ್ಟರೆ ಎಲ್ಲವೂ ಮೌನ. ಯಾರಿಗಾದರೂ ಕರೆ ಮಾಡೋಣ ಅಂತ ಮೊಬೈಲ್ ನೋಡಿದರೆ, ಮೊಬೈಲ್ ಬ್ಯಾಟರಿಯೂ ನಾನು ಉರಿಸುತ್ತಿದ್ದ ಮೊಂಬತ್ತಿಯಂತಾಗಿತ್ತು. ವಿದ್ಯುತ್ ಬರುವವರೆಗಾದರೂ ತುರ್ತು ಕರೆಗಳು ಬಂದರೆ, ಚಾರ್ಜ ಇರಲಿ ಎಂದು ಹಾಗೆಯೇ ಇಟ್ಟೆ. ಊಟನಾದರೂ ಮಾಡಿ ಬರೋಣವೆಂದರೆ ಹೊರಗಡೆ ಮಳೆ. ಛತ್ರಿ ಬೇರೆ ಇರಲಿಲ್ಲ. ನೋಡೋಣ ಅಂತ ಹಾಗೆ ಕುಳಿತೆ.

ಅಷ್ಟರಲ್ಲೇ ಯಾರೋ ಕದ ಬಡಿದ ಸದ್ದು. ಅದು ಹೊರಗಡೆಯ ಗುಡುಗಿನ ಶಭ್ದಕ್ಕಿಂತಲೂ ಜೋರಾಗಿತ್ತು. ಈ ಮಳೆಯಲ್ಲಿ ಯಾರಪ್ಪಾ ಎಂದು ಹೋಗಿ ಸಿಟ್ಟಿನಿಂದ ಕದ ತೆರೆದೆ. ಅಲ್ಲಿಯೇ ನಿಂತಿದ್ದ ನಮ್ಮ ಕೆಳ ಮಹಡಿಯ ಹುಡುಗ. ಅಂಕಲ್, 'ಕರೆಂಟ್ ಬಿಲ್' ಎಂದು ಕೊಟ್ಟು ನಡೆದ. ಸಿಟ್ಟು ಇನ್ನೂ ಜಾಸ್ತಿಯಾಯಿತು. ದಿನಕ್ಕೆ ಮೂರು ನಾಲ್ಕು ತಾಸು ಕರೆಂಟ್ ಇಲ್ಲದಿದ್ದರೂ, ತಿಂಗಳಿಗೊಮ್ಮೆ ಮಾತ್ರ ಕರೆಂಟ್ ಬಿಲ್ ಮಾತ್ರ ತಪ್ಪಲ್ಲ. ಬಿಲ್ ನೋಡಿದೆ ೯೫೨ ರೂಪಾಯಿ. ಅಭ್ಭಾ! ಇಷ್ಟೊಂದಾ ಅನ್ನಿಸಿತು. ಈಗಿರುವ ಸ್ಥಿತಿಯಲ್ಲಿ ಇದಕ್ಕಿಂತ ಕಡಿಮೆ ಉಳಿಸಲು ಸಾಧ್ಯವಿಲ್ಲ ಅನ್ನಿಸಿತು. ಹೇಗೂ ವಿದ್ಯುತ್ ಕಂಪನಿಯವರೇ ದಿನಕ್ಕೆರಡು ಬಾರಿ ವಿದ್ಯುತ್ ತೆಗೆದು ಉಳಿಸುತ್ತಾರಲ್ಲಾ ಎಂದು ಸಮಾಧಾನ ಪಡೋಣ ಎಂದರೆ, ಆ ಹುಡುಗ ಅಂಕಲ್ ಎಂದು ಕರೆದಿದ್ದು ಹಾಗೆ ಕಿವಿಯಲ್ಲಿ ಕೊರೆಯಹತ್ತಿತು.

ಬೆಂಗಳೂರಲ್ಲಿ ಇದು ಸಾಮಾನ್ಯವಲ್ಲವೇ? ಹುಡುಗ ಮದುವೆಯಾದರೆ ಅಂಕಲ್, ಹುಡುಗಿ ಮದುವೆಯಾದರೆ ಆಂಟಿ. ಅವರ ವಯಸ್ಸಿಗಿಂತ ಅವರ ಮದುವೆಯ ಆದಾರದ ಮೇಲೆ ಕರೆಯುವುದು ಇಲ್ಲಿಯವಾಡಿಕೆಯಲ್ಲವೇ? ನನಗಿಂತ ೧೦ ವರ್ಷ ದೊಡ್ಡವಳಾದ ಅವಳಮ್ಮನೇ, ನನಗಿಂತ ೫ ವರ್ಷ ಚಿಕ್ಕವಳಾದ ನನ್ನ ಹೆಂಡತಿಯನ್ನು ಆಂಟಿ ಎಂದು ಕರೆಯುವಾಗ, ಈ ಹುಡುಗ ನನ್ನನ್ನು ಅಂಕಲ್ ಎಂದಿದ್ದರಲ್ಲಿ ತಪ್ಪಿಲ್ಲ ಎನ್ನಿಸಿತು.

ನಾವು ಆಗಿನ್ನೂ ಐದಾರು ವರ್ಷದ ಎಳೆ ಹುಡುಗರು, ರಜೆ ಬಿದ್ದಾಗ ಅಮ್ಮನೊಡನೆ ಅವಳ ತವರೂರಿಗೆ ಹೋಗುತ್ತಿದ್ದೆವು. ಅಮ್ಮನ ತವರು ಮನೆ ಬಸ್ ನಿಲ್ದಾಣದಿಂದ ಒಂದರ್ದ್ ಕಿಲೋಮೀಟರ್ ದೂರದಲ್ಲಿತ್ತು. ಬಸ್ ಇಳಿದು ನಡದೆ ಹೋಗಬೇಕಿತ್ತು. ಹಾಗೆ ಹೋಗುವಾಗ ನಮ್ಮ ಅಮ್ಮನಿಗೆ ಪರಿಚಯದವರು ಯಾರದರೂ ಸಿಕ್ಕಲ್ಲಿ, ಏನಕ್ಕ ಒಬ್ಬಳೇ ಬಂದಿದ್ದಿಯಾ ಭಾವ ಬರಲಿಲ್ಲವೇ ಎಂದು ಕೇಳುತಿದ್ದರು. ನಾನೊಮ್ಮೆ ಅಮ್ಮನನ್ನ್ ಅವರೆಲ್ಲ ಯಾರು ಎಂದು ಕೇಳಿದಾಗ, ಅಮ್ಮ ಅವರೆಲ್ಲ ನನ್ನ ಮಾವಂದಿರೆಂದು ಉತ್ತರಿಸಿದ್ದಳು. ಆಗ ನನಗನ್ನಿಸುತಿತ್ತು ನನಗೆ ಇಷ್ಟೊಂದು ಮಾವಂದಿರಿದ್ದಾರ ಅಂತ. ಅದು ಅಲ್ಲಿಯ ವಾಡಿಕೆ, ಆ ಊರಿನ ಹೆಣ್ಣನ್ನು ಮದುವೆಯಾದವರೆಲ್ಲರೂ ಅವರಿಗೆ ಭಾವಂದಿರೋ, ಇಲ್ಲಾ ಅಳಿಯಂದಿರೋ ಆಗಿರುತಿದ್ದರು. ಅಲ್ಲಿಂದ ಮದುವೆಯಾಗಿ, ತಮ್ಮ ಮಕ್ಕಳೊಂದಿಗೆ ತವರಿಗೆ ಬರುವಾಗ, ಪರಿಚಿತರು ಸಿಕ್ಕಲ್ಲಿ ತಮ್ಮ ಮಕ್ಕಳಿಗೆ, ಆ ಮಾವ, ಈ ಮಾವ ಅಂತ ಪರಿಚಯಿಸುತಿದ್ದರೂ. ಇಂದಿಗೂ ಅದು ಕೆಲವು ಹಳ್ಳಿಗಳಲ್ಲಿ ಆ ರೀತಿಯ ಸಂಪ್ರದಾಯವಿದೆ. ನಮ್ಮ ಊರಲ್ಲೂ ಅಷ್ಟೆ, ನಮಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರನ್ನು ಅಣ್ಣ ಅಂತಲೋ, ನಮ್ಮ ತಂದೆಯ ಸಮಾನ ವಯಸ್ಕರಾಗಿದ್ದಲ್ಲಿ ಹೆಸರಿನೊಂದಿಗೆ ಅಪ್ಪ ಸೇರಿಸಿ (ಉದಾಹರಣೆಗೆ ಹೆಸರು ಉದಯ ಎಂದಿದ್ದರೆ, ಉದಯಪ್ಪ ಅಂತ) ಕರೆಯುತಿದ್ದೆವು. ಇನ್ನೂ ತುಂಭಾ ಹಿರೀಯರಾಗಿದ್ದಲ್ಲಿ ಗಂಡಾದರೆ ಅಜ್ಜಾ ಅಂತಲೋ, ಹೆಣ್ಣಾಗಿದ್ದರೆ ಅಜ್ಜಿ ಅಂತಲೋ ಕರೆಯುತಿದ್ದೆವು. ನಮಗಿಂತ ಚಿಕ್ಕವರಾಗಿದ್ದಲ್ಲಿ, ಇಲ್ಲವೇ ಸಮಾನ ವಯಸ್ಕರಾಗಿದ್ದಲ್ಲಿ ಮಾತ್ರ ನಾವು ಹೆಸರಿಡಿದು ಕರೆಯುತಿದ್ದೆವು. ಅದು ಇಂದಿಗೂ ವಾಡಿಕೆಯಲ್ಲಿದೆ. ಏಕೆಂದರೆ ಹಿರೀಯರು ತಮ್ಮ ಮಕ್ಕಳನ್ನ ಆ ರೀತಿ ಬೆಳೆಸಿದ್ದಾರೆ. ಗುರು ಹಿರಿಯರಿಗೆ ಗೌರವ ಕೊಡುವುದನ್ನು ಹೇಳಿ ಕಲಿಸಿದ್ದಾರೆ. 

ಆದರೆ ಬೆಂಗಳೂರಲ್ಲಿ ಹಾಗಲ್ಲವಲ್ಲ. ಮಕ್ಕಳಿಗೆ ಇವೆಲ್ಲ ಹೇಳಿಕೊಡಲು ತಂದೆ ತಾಯಂದಿರು ಮನೆಯಲ್ಲಿದ್ದರೆ ತಾನೆ? ದಿನಾ ಬೆಳಿಗ್ಗೆ ಮಕ್ಕಳು ಏಳುವ ಮೊದಲೆ ಹೋಗಿ ರಾತ್ರಿ ಮಕ್ಕಳು ಮಲಗಿದ ಮೇಲೆ ಮನೆ ಸೇರಿದರೆ ಯಾವಾಗ ಮಕ್ಕಳಿಗೆ ಇವೆಲ್ಲ ಹೇಳಿ ಕೊಡುವುದು. ಹಾಗಾಗಿ ಮಕ್ಕಳಿಗೆ ಅಪ್ಪ-ಅಮ್ಮಂದಿರನ್ನು ಬಿಟ್ಟರೆ ಉಳಿದವರೆಲ್ಲರೂ ಅಂಕಲ್ - ಆಂಟಿಯರೆ.

ಇನ್ನೂ ಸಂಬಂಧಗಳ ಬಗ್ಗೆ ಹೇಳುವುದಾದರೆ. ಅಂದು ಅವಿಭಕ್ತ ಕುಟುಂಬಗಳಿದ್ದವು. ಮನೆಯಲ್ಲಿ ಅಪ್ಪ ಅಮ್ಮಂದಿರ ಜೊತೆಯಲ್ಲಿ ಅಜ್ಜ-ಅಜ್ಜಿಯರು, ದೊಡ್ಡಪ್ಪ-ದೊಡ್ಡಮ್ಮಂದಿರು, ಚಿಕ್ಕಪ್ಪ-ಚಿಕ್ಕಮ್ಮಂದಿರು, ಅವರೆಲ್ಲರ ಮಕ್ಕಳು ಒಟ್ಟಿಗೆ ಇರುತ್ತಿದ್ದರು. ಇನ್ನೂ ಅಪ್ಪನಿಗೆ ಅಕ್ಕ-ತಂಗಿಯರಿದ್ದರೆ ಅವರು ಆಗಾಗ ಬಂದು ಹೋಗುತಿದ್ದರು. ತಾಯಿಯ ತವರು ಮನೆಗೆ ಹೋದಲ್ಲಿ ಮಾವಂದಿರು, ಅತ್ತೆಯರು, ದೊಡ್ಡಮ್ಮ, ಚಿಕ್ಕಮ್ಮಂದಿರು ಇರುತಿದ್ದರು. ಹೀಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೆ ಸಂಬಂಧಗಳ ಪರಿಚಯವಿರುತಿತ್ತು. ಅತ್ತೆ ಅಂದರೆ ಯಾರು? ಚಿಕ್ಕಮ್ಮ ಅಂದರೆ ಯಾರು? ದೊಡ್ಡಪ್ಪ ಅಂದರೆ ಯಾರು? ಎಲ್ಲವು ತಿಳಿದಿರುತಿತ್ತು. ಆದರೆ ಇಂದು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ, ಸಂಸಾರ ಎಂದರೆ ಗಂಡ-ಹೆಂಡತಿ, ಅವರ ಮಗು ಎಂದಾದ ಮೇಲೆ ಮಕ್ಕಳಿಗೆ ಅವೆಲ್ಲ ಹೇಗೆ ತಿಳಿಯಬೇಕು (ಈಗಿಗ ಒಂದೇ ಮಗು ಸಾಮಾನ್ಯವಾಗಿದ್ದುದರಿಂದ, ಮಕ್ಕಳು ಎನ್ನುವುದಕ್ಕಿಂತ ಮಗು ಎಂದರೆ ಸೂಕ್ತ). ಅದೂ ಬೆಂಗಳೂರಿನಂತ ಸಹರದಲ್ಲಿ ಇನ್ನೂ ಕಷ್ಟ. ಅಪ್ಪ ಅಮ್ಮಂದಿರು ಮಕ್ಕಳೊಂದಿಗೆ ಮನೆಯಲ್ಲಿರುವುದು ರಜಾದಿನಗಳಲ್ಲಿ ಮಾತ್ರ. ಇನ್ನು ರಜಾ ದಿನಗಳಲ್ಲಿ ಸಮಯವೆಲ್ಲಾ ಮನೆಕೆಲಸಕ್ಕೆ ವಿನಿಯೋಗವಾಗುವಾಗ ಮಕ್ಕಳಿಗೆ ಹೇಳಿಕೊಡುವುದು ಯಾವಾಗ? ತಂದೆ ತಾಯಿಯರೇ ಮಕ್ಕಳಿಗೆ ಸಂಬಂಧಗಳ ಹೇಳಿಕೊಡದಿದ್ದ ಮೇಲೆ, ಇವನ್ನೆಲ್ಲ ಪ್ಲೇ ಹೋಮ್ ಗಳಾಗಲೇ, ಬೇಬಿ ಸಿಟ್ಟರ್ ಗಳಾಗಲಿ ಹೇಳಿಕೊಡುತ್ತವೆಯೇ? ಹಾಗಾಗಿ ಇಂದಿನ ಮಕ್ಕಳಿಗೆ ತಂದೆ ತಾಯಿರನ್ನು ಬಿಟ್ಟರೆ ಉಳಿದವರೆಲ್ಲ ಅಂಕಲ್-ಆಂಟಿಯರೇ.

                                                                                                                    --ಮಂಜು ಹಿಚ್ಕಡ್

Comments

Submitted by hema hebbagodi Mon, 07/01/2013 - 10:03

ಸಂಬಂಧ ಸೂಚಕ ಪದಗಳು ನಮ್ಮಿಂದ ನಿಧಾನವಾಗಿ ಕಣ್ಮರೆಯಾಗುತ್ತಿರುವುದು ಒಂದು ರೀತಿಯಲ್ಲಿ ನಮ್ಮ ಭಾಷೆಯನ್ನು ನಾವು ಕಳೆದುಕೊಳ್ಳುತ್ತಿರುವುದನ್ನು ತೋರಿಸುತ್ತದೆ.
Submitted by kavinagaraj Mon, 07/01/2013 - 14:54

ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. :(
Submitted by Vinutha B K Mon, 07/01/2013 - 15:11

ಹೌದು ,ನಿಜವಾದ ಮಾತುಗಳು ,ನಮ್ಮ ಮನೆಯಲ್ಲೂ ನನ್ನ ಚಿಕ್ಕಪ್ಪಂದಿರನ್ನು ಹೆಸರ ಮುಂದೆ ಅಣ್ಣ ಎಂದು ಸೇರಿಸಿ ಕರೆಯುವ ಅಭ್ಯಾಸವಿದೆ ಆದರೆ ನನ್ನ ಅಮ್ಮ,ಅಪ್ಪನ ಮನೆಯ ಕಡೆಯವರ ಸಂಬಂದಗಳನ್ನ ನನ್ನ ಅಮ್ಮ ಸಮಂಜಸವಾಗಿ ಬಿಡಿಸಿ ಹೇಳಿಕೊಟ್ಟಿದ್ದರು ಇದರಿಂದ aptitude ಟೆಸ್ಟ್ ಲಿ ರಿಲೇಶನ್ಶಿಪ್ ಪ್ರಶ್ನೆಗಳಿಗೆ ಬಹುಬೇಗ ಉತ್ತರಿಸುತ್ತಿದ್ದೆ ಅದು ನೆನಪಾಗುತ್ತಿದೆ . ಈಗ ಸರಿಯಾಗಿ ಸಂಬಂದ ಗುರುತಿಸಿ ಕರೆಯುವ ಮತ್ತು ಹೇಳುವ ಅಭ್ಯಾಸವಾಗಿಬಿಟ್ಟಿದೆ.