ಎಂದೂ ಮುಳಗದ ಬೋಟು...

ಎಂದೂ ಮುಳಗದ ಬೋಟು...

ಬರಹ

ನಾವೊಂದಷ್ಟು ಮಂದಿ ಬೈಕನೇರಿ ಬೆಳ್ಳಂಬೆಳಗ್ಗೆನೇ ಹೋರಟಿದ್ದು ತೀರ್ಥಹಳ್ಳಿ ರಸ್ತೆಯ ಮಾರ್ಗದಲ್ಲಿ. ಶಿವಮೊಗ್ಗದಿಂದ ಗಾಜನೂರು ಅಣೆಕಟ್ಟೆ ದಾಟುವಷ್ಟರಲ್ಲೇ ಇರುವ ಸಕ್ಕರೆಬೈಲು ಆನೆ ಬಿಡಾರ ನಮ್ಮ ಮೊದಲ ನಿಲುಗಡೆಯ ಸ್ಥಳ. ಹಿನ್ನೀರಿನಲ್ಲಿ ಬಂಡೆಗಳಂತೆ ಆನೆಗಳನ್ನು ಕೆಡವಿಕೊಂಡು ಅವುಗಳ ಮೈ ತಿಕ್ಕುವ ಮಾವುತರ ಕೆಲಸವನ್ನು ಅಚ್ಚರಿಯಿಂದ ನೋಡುತ್ತಿದ್ದಂತೆ ನಮ್ಮ ಬಳಿ ಬಂದವನು ಸಾದಿಕ್. ‘ಸಾರ್ ಬನ್ನಿ ಆ...ಲ್ಲಿ ಕಾಣ್ತಿದೆಯಲ್ಲಾ ಆ ಮರದವರೆಗೂ ಬೋಟಿನಲ್ಲಿ ಕರೆದುಕೊಂಡು ಹೋಗ್ತಿನಿ. ಒಬ್ಬರಿಗೆ ಬರೀ ಹದಿನೈದು ರುಪಾಯಿ ಅಷ್ಟೇ ಸಾರ್’ ಅಂದ. ಆತ ತೋರಿದ ಬೋಟು ನೋಡಿದರೆ ನಮಗೆ ಒಳಗೊಳಗೆ ದಿಗಿಲು. ನಮ್ಮ ಅನುಮಾನ ತುಂಬಿದ ಮುಖಗಳನ್ನು ನೋಡಿ ಅರ್ಥಮಾಡಿಕೊಂಡ ಆತ ‘ಸಾರ್ ಇದು ಕಬ್ಬಿಣದ ಬೋಟು ಸಾರ್....ಯಾವತ್ತೂ ಮುಳಗಲ್ಲ ನೋಡಿ, ಒಂದ್ಸಲ ಹತ್ತಿ ಸಾರ್ ನಿಂಗೆ ಗೋತ್ತಾಗುತ್ತೆ’ ಎಂದ. ಆತನ ಮಾತನ್ನು ನಾವೇನೂ ನಂಬಲಿಲ್ಲ. ಆದರೆ, ಹಿನ್ನಿರಿನಲ್ಲಿ ವಿಹರಿಸುವ ಆಸೆ ಹತ್ತಿಕ್ಕಿಕೊಳ್ಳಲಾಗದೆ ಆಗಿದ್ದಾಗಲಿ ಎಂದು ಆತ ತೋರಿದ ಎಂದೂ ಮುಳುಗದ ಬೋಟನ್ನೇರಿ, ಆತ ತೋರಿದಂತ ವಾಸ್ತು ಪ್ರಕಾರ ಕುಳಿತೆವು. ನೋಡಿ ಸಾರ್ ಆ ನೀರನಲ್ಲಿ ಇದ್ಯಲ್ಲಾ ಆ ಆನೆಯತ್ರ ಹೋದಾಗ ಗಲಾಟೆ ಮಾಡಬೇಡಿ... ಅದೇ ಆನೆ ಮೊನ್ನೆ ಟಾಟಾ ಸುಮೋನ ಪಲ್ಟಿ ಮಾಡಿತ್ತು ಎಂದ.. ನಾವು ಹತ್ತಿ ಕೂಂತಿದ್ದ ಎಂದೂ ಮುಳುಗದ ಬೋಟು ಆ ಆನೆಗೆ ಟಾಟಾ ಸುಮೋದಂಗೆ ಕಂಡರೇನು ಮಾಡೋದು ಅನ್ಕೊಂಡು ನಾವು ಸಮಸ್ತವನ್ನು ಮುಚ್ಚಿಕೊಂಡು ಕಣ್ಣನ್ನು ಮಾತ್ರ ಬಿಟ್ಟುಕೊಂಡು ಇರುವ ದೃಢ ನಿರ್ಧಾರ ಮಾಡಿದೆವು. ಆದರೆ, ಆತ ಮೊದಲು ಅತ್ಲಾಕಡೆ ಹೋಗಿ ಬರೋಣ ಸಾರ್.. ಎಂದು ಕರೆದೊಯ್ದ. ಸಧ್ಯ ಪಲ್ಟಿ ಮಾಡಿಸುವ ಆನೆಯಿಂದ ದೂರದಲ್ಲೇ ಹೋಗುತ್ತಿದ್ದೇವೆ ಅನ್ಕೊಂಡು ಹಿನ್ನೀರಿನಲ್ಲಿ ಎಂದೂ ಮುಳಗದ ಬೋಟನ್ನೇರಿ ಹೊರಟೆವು.