ಟೂರಿಂಗ್‍ ಟಾಕೀಸ್‍

ಟೂರಿಂಗ್‍ ಟಾಕೀಸ್‍

ಪುಸ್ತಕದ ಲೇಖಕ/ಕವಿಯ ಹೆಸರು
ಜಯಂತ ಕಾಯ್ಕಿಣಿ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
150

ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರೀತಿ ಕುತೂಹಲಕಾರಿಯಾದದ್ದು. ಅದರಲ್ಲೂ ಸಣ್ಣ ವಯಸ್ಸಿನ ಬೆರಗು ಕಣ್ಣುಗಳ ಮೂಲಕ ನಮ್ಮೊಳಗೆ ಪ್ರವೇಶ ಪಡೆಯುವ ನಮ್ಮ ನೆಚ್ಚಿನ ತಾರೆಯರು ತಮ್ಮೆಲ್ಲ ಹಾವಭಾವ ನಡೆನುಡಿಗಳೊಂದಿಗೆ ನಮ್ಮ ಬದುಕಿನ ಹಲವು ವರ್ತನೆಗಳನ್ನು ಸೂಕ್ಷ್ಮವಾಗಿ ಪ್ರಭಾವಿಸುತ್ತಿರುತ್ತಾರೆ. ನಮ್ಮ ಹಾವಭಾವ, ಉಡುಪು, ಮಾತು, ವರ್ತನೆ ಇವುಗಳ ಮೇಲಿನ ಸಿನೆಮಾಗಳ ಪ್ರಭಾವ ಗುರುತಿಸುವಂತದ್ದು.

ಜಯಂತ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್‍’ ಇಂತಹ ಸಿನೆಮಾದ ವಿವಿಧ ಆಯಾಮಗಳು ಹಾಗೂ ಅದರ ಪ್ರಭಾವಗಳನ್ನು ಗುರುತಿಸುವ ಲೇಖನಗಳ ಪುಸ್ತಕ. ಕಾಯ್ಕಿಣಿಯವರ ಸೂಕ್ಷ್ಮ ಗ್ರಹಿಕೆ, ಸಂವೇದನೆಗಳು ಈ ಬರಹಗಳನ್ನು ಆಪ್ತಗೊಳಿಸುತ್ತವೆ. ನಮ್ಮೆಲ್ಲರ ಖಾಸಗಿಯೆನಿಸುವ ಸಿನೆಮಾದೊಂದಿಗಿನ ಆಪ್ತನೆನಪುಗಳನ್ನು ಈ ಪುಸ್ತಕದ ಲೇಖನಗಳು ಮರುಕಳಿಸುತ್ತವೆ. ‘ಟೈಟಲ್‍ ಕಾರ್ಡ್‍ಗಳ ರೋಚಕತೆ’ ಲೇಖನವನ್ನೇ ನೋಡುವುದಾದರೆ ಅದು ಟೈಟಲ್‍ ಕಾರ್ಡ್‍ಗಳ ಇತಿಹಾಸ ಮತ್ತು ಟೈಟಲ್‍ ಕಾರ್ಡ್‍ಗಳೊಂದಿಗೆ ತಳುಕು ಹಾಕಿಕೊಂಡಿರುವ ಸಿನೆಮಾದ ಆರಂಭದ ಪ್ರೇಕ್ಷಕನ ಅನುಭವ ಕಥನವನ್ನು ಹಿಡಿದಿಡುತ್ತದೆ. ಅದೇ ರೀತಿ ‘ಸಿನೆಮಾನುಭೂತಿ ಎಂಬ ಪಬ್ಲಿಕ್‍ ಪ್ರಾಪರ್ಟಿ’ ತುಂಬಿದ ಥಿಯೇಟರ್‍ಗಳಲ್ಲಿ ಪ್ರೇಕ್ಷಕರ ನಡುವೆ ಸಿನೆಮಾ ನೋಡುವಾಗಿನ ಅನುಭವವನ್ನು ಚಿತ್ರಿಸುತ್ತದೆ. ‘ನಕ್ಷತ್ರ ಹಿಡಿದು ಚಲಿಸುವ ಪೋರಿಯರ- ಆಫ್‍ ಸೈಡ್’, ‘ನೋಡಲು ಹೊಸ ಕಿವಿ ಬೇಕು’, ಇಂಡಿಯಾನ ಜೋನ್ಸ್‍ ಮತ್ತು ಕಠಾರಿ ವೀರ’, ‘ಉತ್ಪ್ರೇಕ್ಷೆ ಮತ್ತು ಸಾವರಿಯಾ’ ಮೊದಲಾದ ಲೇಖನಗಳು ಸಿನೆಮಾಗಳ ರಸವಿಮರ್ಶೆಯನ್ನು ಮಾಡುತ್ತದೆ.

‘ಮಾಯವಾಗುತ್ತಿರುವ ಸ್ತ್ರೀ ಸೋಲೋ’, ‘ಸಿನೆ ಮಾಧುರ್ಯದ ಘರಾನಾ’, ಅಶರೀರವಾಣಿಯ ಎಫ್.ಎಂ ವರಸೆ- ಇವುಗಳು ಸಿನೆಮಾ ಸಂಗೀತ ಕುರಿತು ಮಾತಾಡುತ್ತಲೇ ಬದಲಾಗುತ್ತಿರುವ ಸಿನೆಮಾ ಸಂಗೀತದ ಶಕ್ತಿ ಹಾಗೂ ಮಿತಿಗಳನ್ನು ಗುರುತಿಸುತ್ತವೆ. ಅದೇರೀತಿ ನೃತ್ಯನಿರ್ದೇಶಕನ ನವ್ಯ ಅವತಾರ ಕೊರಿಯಾಗ್ರಫಿ ಪಡೆದುಕೊಂಡಿರುವ ಹೊಸ ಆಯಾಮವನ್ನು ಕಟ್ಟಿಕೊಡುತ್ತದೆ.

‘ಹೆಬ್ಬಾವೋ? ಶ್ರೀದೇವಿಯ ಕಾಲೋ?’, ‘ಅಮ್ಮಾ ನಿನ್ನ ಆಶೀರ್ವಾದ’ horn ok please!’, ‘ಅಶರೀರವಾಣಿಯ ಎಫ್‍.ಎಂ ವರಸೆ’ ಇಂತಹ ಲೇಖನಗಳು ಸಿನೆಮಾ ಜನಸಾಮಾನ್ಯನ ಬದುಕಿನಲ್ಲಿ ಹುಟ್ಟುಹಾಕುವ ಕೌತುಕ, ಆಪ್ತತೆ, ಕನಸು ಹಾಗೂ ಬೆಳೆಸುವ ಒಂದು ಬಗೆಯ ರುಚಿ ಸಂಸ್ಕಾರ ಇವುಗಳನ್ನು ಶೋಧಿಸುತ್ತದೆ.

ಒಟ್ಟು ನಲವತ್ತು ಲೇಖನಗಳಿರುವ ಈ ಪುಸ್ತಕದಲ್ಲಿ ಸಿನೆಮಾ ಕುರಿತಾದ ವ್ಯಕ್ತಿಗತ ಅನುಭವಗಳಿವೆ, ಮೆಚ್ಚಿದ ಸಿನೆಮಾಗಳ ರಸಕೇಂದ್ರಿತ ವಿಮರ್ಶೆಯೊಂದಿಗೆ ಬದಲಾಗುತ್ತ ಸಾಗಿದ ಸಿನೆಮಾ ಯಾನದ ಇತಿಹಾಸವನ್ನು ಗುರುತಿಸುವ ಪ್ರಯತ್ನವಿದೆ, ಶ್ಯಾಂಬೆನಗಲ್‍, ಶಮ್ಮಿಕಪೂರ್‍, ಸಂತೋಷಕುಮಾರ್‍ಗುಲ್ವಾಡಿ, ಸುಂದರನಾಥ ಸುಮರ್ಣ ಮೊದಲಾದ ಕೆಲವು ವ್ಯಕ್ತಿಗಳ ವ್ಯಕ್ತಿಚಿತ್ರಗಳಿವೆ, ಮಾಧ್ಯಮವೊಂದು ಉದ್ಯಮವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಯುವ ಪೀಳಿಗೆಗೆ ಹೇಗೆ ಮಾರ್ಗದರ್ಶನ ಮಾಡಬಹುದು, ಅವಕಾಶಗಳ ಬಾಗಿಲು ಹೇಗೆ ತೆರೆಯಬಹುದು ಎನ್ನುವ ಚಿಂತನೆಗಳಿವೆ. ಅದರೊಂದಿಗೆ ಸಾಧನೆಗಳನ್ನು ಮೆಚ್ಚುಗೆಯಿಂದ ನೋಡುತ್ತಲೇ ಮತ್ತೊಂದೆಡೆ ಚಿತ್ರರಂಗ ಎಡವಟ್ಟು ಹೆಜ್ಜೆಗಳನ್ನು ಗುರುತಿಸುವ ವಿಮರ್ಶಕ ಮನಸ್ಸು ಕಂಡುಕೊಂಡ ಸತ್ಯಗಳನ್ನು ಹೇಳುವ ಲೇಖನಗಳಿವೆ.

ಓದಿನ ಖುಷಿಯನ್ನು ಕೊಡುವುದರೊಂದಿಗೆ ನೆನಪುಗಳಿಗೆ ಲಗ್ಗೆಯಿಡುವ ಗುಣ ಇಲ್ಲಿನ ಲೇಖನಗಳಲ್ಲಿವೆ. ಸಿನೆಮಾ ಕುರಿತಾಗಿ ಕನ್ನಡದಲ್ಲಿ ಬಂದಿರುವ ಒಂದು ಒಳ್ಳೆಯ ಪುಸ್ತಕವಿದು. ‘ಬೊಗಸೆಯಲ್ಲಿ ಮಳೆ’ ಅಂಕಣ ಬರಹಗಳ ಕಾವ್ಯ ಗುಣ ಇಲ್ಲಿ ಕೂಡ ಅಲ್ಲಲ್ಲಿ ಇಣುಕಿದೆ. ಒಟ್ಟಿನಲ್ಲಿ ಸಿನೆಮಾ ಲೋಕದಲ್ಲಿ ಒಂದು ಟೂರು ಹೋಗಿಬರಬಹುದು.