೬೦. ಶ್ರೀ ಲಲಿತಾ ಸಹಸ್ರನಾಮ ೧೯೩ರಿಂದ ೨೦೦ನೇ ನಾಮಗಳ ವಿವರಣೆ

೬೦. ಶ್ರೀ ಲಲಿತಾ ಸಹಸ್ರನಾಮ ೧೯೩ರಿಂದ ೨೦೦ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೯೩ - ೨೦೦

Duṣṭadūrā दुष्टदूरा (193)

೧೯೩. ದುಷ್ಟದೂರಾ

            ದೇವಿಯು ದುಷ್ಟರಿಂದ ದೂರವಿರುತ್ತಾಳೆ ಅಥವಾ ಆಕೆಯು ದುಷ್ಟರಿಗೆ ಲಭ್ಯವಾಗುವುದಿಲ್ಲ. ದುಷ್ಟರೆಂದರೆ ಕೆಟ್ಟವರು ಹಾಗು ಮೋಸಗಾರರು ಮತ್ತು ಅವರು ಜಗನ್ಮಾತೆಯನ್ನು ಕುರಿತು ಆಲೋಚಿಸುವವರಲ್ಲ ಮತ್ತು ಅವರು ಆಕೆಯನ್ನು ಯಾವತ್ತಿಗೂ ಹೊಂದಲಾರರು. ಇದರಿಂದ ಸ್ಪಷ್ಟವಾಗುವುದೇನೆಂದರೆ ದುಷ್ಟರಿಗೆ ಮುಕ್ತಿಯು ಲಭ್ಯವಾಗುವುದಿಲ್ಲ.

Durācāra-śamanī दुराचार-शमनी (194)

೧೯೪. ದುರಾಚಾರ-ಶಮನೀ

         ಶಾಸ್ತ್ರವು ನಿಷೇಧಿಸಿದ ಆಚರಣೆಗಳನ್ನು ಕೈಗೊಳ್ಳುವುದನ್ನು ದುರ್-ಆಚಾರ ಎಂದು ಕರೆಯಲಾಗಿದೆ. ಆಚಾರವೆಂದರೆ ಸಂಪ್ರದಾಯ ಮತ್ತು ಪದ್ಧತಿಗಳು. ಈ ವಿಧವಾದ ಸಂಪ್ರದಾಯಗಳು ಎರಡು ತೆರನಾಗಿವೆ, ಅವುಗಳಲ್ಲಿ ವೇದದಲ್ಲಿ ವಿಧಿಸಲ್ಪಟ್ಟಂತಹವು ಮೊದಲನೇ ವರ್ಗಕ್ಕೆ ಸೇರುತ್ತವೆ. ಎರಡನೆಯ ವಿಧಾವಾದ ಸಂಪ್ರದಾಯಗಳು ಇತ್ತೀಚಿನ ಆಧುನಿಕ ಕಾಲದಲ್ಲಿ ಪರಿಚಯಿಸಲ್ಪಟ್ಟಿರುವುವು ಮತ್ತು ಇವು ವೇದಗಳಲ್ಲಿ ಪ್ರಸ್ತಾವಿಸಲ್ಪಟ್ಟಿಲ್ಲ. ಆಧುನಿಕ ಕಾಲದಲ್ಲಿ ಪರಿಚಯಿಸಲ್ಪಟ್ಟಿರುವ ಈ ಪದ್ಧತಿಗಳಿಗೆ ಆಧ್ಯಾತ್ಮಿಕವಾಗಿ ಯಾವುದೇ ಮಹತ್ವದ ಸ್ಥಾನವಿಲ್ಲ. ಕೇವಲ ಒಂದು ನಿಮಿಷ ಆಳವಾದ ಭಕ್ತಿಯಿಂದ ಮಾಡಿದ ಪ್ರಾರ್ಥನೆಯು ದುಬಾರಿ ವೆಚ್ಚದಲ್ಲಿ ಮಾಡಿದ ಯಜ್ಞಗಳಿಗಿಂತ ಹೆಚ್ಚು ಶಕ್ತಿಯುತವಾದದ್ದು. ವೇದಗಳು, ಒಬ್ಬನು ತನ್ನ ಆದಾಯಕ್ಕೆ ಮಿಂಚಿದ ಖರ್ಚನ್ನು ಮಾಡಿ ಯಾಗಗಳನ್ನು ಮಾಡಬೇಕೆಂದು ಯಾವತ್ತೂ ವಿಧಿಸಿಲ್ಲ; ಆದರೆ ಈ ವಿಷಯವನ್ನು ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಉತ್ಪ್ರೇಕ್ಷೆಗೊಳಿಸಲಾಗಿದೆ.

Doṣa-varjitā दोष-वर्जिता (195)

೧೯೫. ದೋಷ-ವರ್ಜಿತಾ

             ದೇವಿಯು ಯಾವುದೇ ವಿಧವಾದ ಕಲೆಗಳು ಅಥವಾ ಕಳಂಕವಿಲ್ಲದವಳಾಗಿದ್ದಾಳೆ ಮತ್ತದು ಬ್ರಹ್ಮದ ಮತ್ತೊಂದು ಲಕ್ಷಣವಾಗಿದೆ. ಕಳಂಕವು ದ್ವೇಷ, ಕಾಮ ಮೊದಲಾದವುಗಳಿಂದ ಹುಟ್ಟುತ್ತದೆ. ಇಲ್ಲಿ ಕಳಂಕವೆಂದರೆ ಅದು ಮನಸ್ಸಿಗೆ ಸಂಭಂದಿಸಿದ್ದುದಾಗಿದೆಯೇ ಹೊರತು ಸ್ಥೂಲ ಶರೀರಕ್ಕೆ ಸಂಭಂದಪಟ್ಟದ್ದಲ್ಲ. ಅವಳಿಗೆ ಯಾವುದೇ ರೀತಿಯಾದ ಕಲೆಗಳಿಲ್ಲ - ಇದನ್ನು ಈ ಸಹಸ್ರನಾಮದ ಮುಂಚಿನ ನಾಮಗಳಲ್ಲಿ ಚರ್ಚಿಸಲಾಗಿದೆ.

            ಈ ನಾಮದೊಂದಿಗೆ ದೇವಿಯನ್ನು ನಿರಾಕಾರ ಅಥವಾ ನಿರ್ಗುಣ ರೂಪದ ಮೂಲಕ ಆರಾಧಿಸುವುದರಿಂದ ಹೊಂದಲ್ಪಡುವ ಪರಿಣಾಮಗಳ ಕುರಿತಾದ ಚರ್ಚೆಯು       ಮುಕ್ತಾಯಗೊಳ್ಳುತ್ತದೆ. ೧೯೬ರಿಂದ ೨೪೮ನೇ ನಾಮಗಳು ದೇವಿಯ ವಿವಿಧ ರೂಪಗಳು ಅಥವಾ ಸಗುಣ ಬ್ರಹ್ಮದ ಕುರಿತಾಗಿ ಚರ್ಚಿಸುತ್ತವೆ. ದೇವರನ್ನು ರೂಪ ಮತ್ತು ಆಕಾರಗಳಿಲ್ಲದೆ ಪೂಜಿಸುವುದನ್ನು ಶ್ರೇಷ್ಠವಾದುದ್ದೆಂದು ಪರಿಗಣಿಸಲಾಗಿದೆ. ದೇವರನ್ನು ವಿವಿಧ ಆಕಾರಗಳ ಮೂಲಕ ಪೂಜಿಸುವುದನ್ನು ಸಗುಣ ಆರಾಧನೆ ಎನ್ನುತ್ತಾರೆ. ವಿವಿಧ ಮತಗಳು ಸಗುಣ ಆರಾಧನೆಯ ಮೇಲೆ ನಿಂತಿವೆ.

Sarvajñā सर्वज्ञा (196)

೧೯೬. ಸರ್ವಜ್ಞಾ

          ದೇವಿಯು ಸಕಲವನ್ನೂ ತಿಳಿದವಳು, ಕೇವಲ ಪರಬ್ರಹ್ಮವೊಂದೇ ಸರ್ವಜ್ಞವಾಗಲು ಸಾಧ್ಯ. ಮುಂಡಕ ಉಪನಿಷತ್ತು (೧.೧.೯), "ಆ ಬ್ರಹ್ಮವು, ಸಾಮಾನ್ಯವಾಗಿ ಎಲ್ಲವನ್ನೂ ತಿಳಿದಿರುವಂತದ್ದು ಮತ್ತು ಕೂಲಂಕುಷವಾಗಿಯೂ ಎಲ್ಲವನ್ನೂ ತಿಳಿದಿರುವಂತದ್ದು ಮತ್ತದರ ಪವಿತ್ರತೆಯೇ ಜ್ಞಾನವಾಗಿದೆ ಮತ್ತು ಅದರಿಂದ ಅಂದರೆ ಆ ಪರಬ್ರಹ್ಮದಿಂದ ಈ ಅಪರ ಬ್ರಹ್ಮವು ಹೊರಹೊಮ್ಮಿದೆ ಮತ್ತು ನಾಮ, ರೂಪ ಮತ್ತು ಆಹಾರಗಳೆಂಬ ಭೇದಗಳನ್ನು ಹೊಂದುತ್ತದೆ" ಎಂದು ಹೇಳುತ್ತದೆ. ಈ ಉಪನಿಷತ್ತು ನಿರ್ಧಿಷ್ಟವಾಗಿ ತಪಸ್ಸು ಎನ್ನುವ ಶಬ್ದವನ್ನು ಉಪಯೋಗಿಸುತ್ತದೆ; ತಪವೆಂದರೆ ಧ್ಯಾನದ ಅತ್ಯುನ್ನತ ರೂಪ. ಪರಾ ಬ್ರಹ್ಮವು ನಿರ್ಗುಣ ಬ್ರಹ್ಮವಾಗಿದೆ ಮತ್ತು ಅಪರಾ ಬ್ರಹ್ಮವು ಸಗುಣ ಬ್ರಹ್ಮವಾಗಿದೆ.

Sāndrakaruṇā सान्द्रकरुणा (197)

೧೯೭. ಸಾಂದ್ರಕರುಣಾ

           ದೇವಿಯು ಕರುಣಾಮಯಿಯಾಗಿದ್ದಾಳೆ ಏಕೆಂದರೆ ಆಕೆಯು ಜಗದ ಮಾತೆಯಾಗಿದ್ದಾಳೆ. "ಆಕೆಗೆ ಬೇರೆಲ್ಲರಿಗಿಂತ ವಿಶಾಲವಾದ ಹೃದಯವಿದೆ ಏಕೆಂದರೆ ಆಕೆಯು ಬ್ರಹ್ಮಾಂಡದ ತಾಯಿಯಾಗಿದ್ದಾಳೆ. ಆಕೆಯ ಕರುಣೆಯು ಅಂತ್ಯವಿಲ್ಲದ್ದು ಮತ್ತು ಬತ್ತಿಹೋಗದಂತಹದ್ದು; ಅವಳ ದೃಷ್ಟಿಯಲ್ಲಿ ಎಲ್ಲರೂ ಆಕೆಯ ಮಕ್ಕಳು ಮತ್ತು ಅವರು ಆ ಒಂದರ (ಅಂದರೆ ಪರಬ್ರಹ್ಮದ) ಭಾಗ. ಆಕೆಯ ವಿರೋಧವು (ಅವಳ ಭಕ್ತರಲ್ಲದವರೆಡೆಗೆ) ಕೇವಲ (ಅವಳ ಕೃಪೆ ಹರಿಸುವಿಕೆಯ) ಮುಂದೂಡಿಕೆಯಾಗಿದೆ ಮತ್ತು ಆಕೆಯ ಶಿಕ್ಷೆಯೂ ಕೂಡಾ ಅವಳ ಕೃಪೆಯೇ ಆಗಿದೆ. ಆದರೆ ಆಕೆಯ ಪ್ರೀತಿಯು ಆಕೆಯ ವಿವೇಚನೆಯನ್ನು ಕುರುಡಾಗಿಸುವುದಿಲ್ಲ ಅಥವಾ ಅವಳು ತನ್ನ ಶಿಕ್ಷಿಸುವ ಕ್ರಿಯೆಯಿಂದ (ಕರ್ಮದ ನಿಯಮದಿಂದ) ದೂರ ಸರಿಯುವುದಿಲ್ಲ".ಈ ಸುಂದರವಾದ ಸಾಲುಗಳು ಶ್ರೀ ಅರವಿಂದರು ತಮ್ಮ "ತಾಯಿ" (ಇಂಗ್ಲೀಷ ಮೂಲ - ‘The Mother’) ಪುಸ್ತಕದಲ್ಲಿ ಬರೆದಂತಹವು. 

Samānādhika-varjitā समानाधिक-वर्जिता (198)

೧೯೮. ಸಮಾನಾಧಿಕ-ವರ್ಜಿತಾ

             ದೇವಿಗೆ ಸಮಾನರಾದವರಿಲ್ಲ. ಶ್ವೇತಾಶ್ವತರ ಉಪನಿಷತ್ತು (೬.೮), ಅವನಿಗೆ ದೇಹವಿಲ್ಲ ಮತ್ತು ಯಾವುದೇ ಅವಯವಗಳಿಲ್ಲ. ಯಾರೂ ಅವನ ಸಮಾನರಿಲ್ಲ. ಯಾರೂ ಅವನಿಗಿಂತ ಶ್ರೇಷ್ಠರಾದವರೂ ಇಲ್ಲ. ಅವನು ಜ್ಞಾನದ ಹಲವಾರು ಶಕ್ತಿಗಳನ್ನು ಹೊಂದಿದ್ದಾನೆ ಮತ್ತು ಕ್ರಿಯಾ ಶಕ್ತಿಗಳುಳ್ಳವನಾಗಿದ್ದಾನೆ" ಎನ್ನುತ್ತದೆ. ಈ ಉಪನಿಷತ್ತು ಬ್ರಹ್ಮದ ಲಕ್ಷಣಗಳನ್ನು ಕುರಿತಾಗಿ ಹೇಳುತ್ತದೆ.

              ಅರ್ಜುನನು ಭಗವದ್ಗೀತೆಯಲ್ಲಿ (೧೧.೪೩) ಶ್ರೀ ಕೃಷ್ಣನನ್ನು ಈ ವಿಧವಾಗಿ ಪ್ರಶ್ನಿಸುತ್ತಾನೆ, "ನೀನು ಮೂರು ಲೋಕಗಳಲ್ಲಿಯೂ ಅಪ್ರತಿಮ ಶೂರನಾಗಿದ್ದೀಯ ಮತ್ತು ನಿನಗೆ ಸಮಾನರಾದವರು ಯಾರೂ ಇಲ್ಲ, ಹಾಗಿದ್ದಾಗ ನಿನಗಿಂತ ಉತ್ತಮರಾದವರು ಯಾರು?" ದೇವಿಯೂ ಕೂಡಾ ಈ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾಳೆ.

Sarvaśakti-mayī सर्वशक्ति-मयी (199)

೧೯೯. ಸರ್ವಶಕ್ತಿ-ಮಯೀ

            ದೇವಿಯು ಎಲ್ಲಾ ಶಕ್ತಿಗಳ ಹಿಂದಿರುವ ಬಲವಾಗಿದ್ದಾಳೆ. ಶಕ್ತಿಗೆ ಎರಡು ವಿಧವಾದ ಅರ್ಥಗಳಿವೆ ಒಂದು ಬಲ (Power) ಮತ್ತೊಂದು ಸಾಮಾನ್ಯ ಅರ್ಥದಲ್ಲಿ ಬಳಸಲ್ಪಡುವ ಶಕ್ತಿ (Energy). ದೇವಿಯ ಶಕ್ತಿಯನ್ನು ಕುರಿತಾಗಿ ಹೇಳಬೇಕೆಂದರೆ ಆಕೆಯದು ದೈವೀ ಶಕ್ತಿಯಾಗಿದೆ, ಆಕೆಯು ಈ ಶಕ್ತಿಯನ್ನು ತನ್ನ ಕಾರ್ಯಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಉಪಯೋಗಿಸುತ್ತಾಳೆ. ಇಲ್ಲಿ ಆಕೆಯ ಸಗುಣ ರೂಪವನ್ನು ಕುರಿತು ಚರ್ಚಿಸುತ್ತಿರುವುದರಿಂದ ಆಕೆಗೆ ಮಂತ್ರಿಣಿಗಳಾದ ವಾರಾಹೀ, ಶ್ಯಾಮಲಾ, ಅಥವಾ ದಶ ಮಹಾ ವಿದ್ಯಾ ಎಂದು ಕರೆಯಲ್ಪಡುವ ಅವಳ ಹತ್ತು ರೂಪಗಳು ಇವೆಲ್ಲಾ ಆಕೆಯ ಶಕ್ತಿಗಳು. ಈ ಸಂದರ್ಭದಲ್ಲಿ ಶಕ್ತಿಯೆಂದರೆ ಆಕೆಯ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ದೇವಿಯರು. ಪದಶಃ ಅರ್ಥದಲ್ಲಿ, ಪರಬ್ರಹ್ಮವು ಸರ್ವಾಂತರಯಾಮಿಯಾದ ಗುಣವನ್ನು ಹೊಂದಿರುವುದೆನ್ನುವುದನ್ನು ಗಣನೆಗೆ ತೆಗೆದುಕೊಂಡರೆ ದೇವಿಯು ಈ ವಿಧವಾದ ಎಲ್ಲಾ ದೇವಿಯರ ರೂಪಗಳಲ್ಲಿರುತ್ತಾಳೆ. ದೇವಿಯು ಎಲ್ಲಾ ಶಕ್ತಿಗಳ ಮೂರ್ತರೂಪವಾಗಿರುವುದರಿಂದ ಆಕೆಯನ್ನು ಶಕ್ತಿಯೆಂದು ಕರೆಯಲಾಗಿದೆ ಮತ್ತು ಆಕೆಯನ್ನು ಸರ್ವಶಕ್ತಿ-ಮಯೀ ಎಂದು ಸಂಭೋದಿಸುವುದಕ್ಕೆ ಇದು ಕಾರಣವಾಗಿದೆ.

Sarva-maṅgalā सर्व-मङ्गला (200)

೨೦೦. ಸರ್ವ-ಮಂಗಲಾ

          ದೇವಿಯು ಎಲ್ಲಾ ವಿಧವಾದ ಶುಭಗಳಿಗೆ ಮೂರ್ತರೂಪಳಾಗಿದ್ದಾಳೆ. ಆಕೆಯನ್ನು ೯೯೮ನೇ ನಾಮದಲ್ಲಿ ಶ್ರೀ ಶಿವಾ ಅಂದರೆ ಮಂಗಳಕರೆಯೆಂದು ಸಂಭೋದಿಸಲಾಗಿದೆ. ದೇವಿಯು ಶುಭಗಳಿಗೆ ಮೂಲವಾಗಿರುವುದರಿಂದ ಆಕೆಯು ತನ್ನ ಭಕ್ತರಿಗೆ ಮಂಗಳವನ್ನುಂಟು ಮಾಡಲು ಸಮರ್ಥಳಾಗಿದ್ದಾಳೆ. ಇದೇ ನಾಮವು ಲಲಿತಾ ತ್ರಿಶತಿಯಲ್ಲಿ ೧೨೪ನೇ ನಾಮವಾಗಿದೆ. ಒಂದು ಪ್ರಸಿದ್ಧವಾದ ಶ್ಲೋಕವಿದೆ, ಅದು ಹೀಗಿದೆ - "ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ l ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ ll (ದುರ್ಗಾ ಸಪ್ತಶತಿ ೧೧.೧೦, ಮಾರ್ಕಂಡೇಯ ಪುರಾಣ ಅಧ್ಯಾಯ ೮೮, ಶ್ಲೋಕ ೯). ಈ ಶ್ಲೋಕದ ಅರ್ಥವೇನೆಂದರೆ, ಓಹ್ಞ್! ನಾರಾಯಣೀ! ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣಕರ್ತಳಾದವಳೇ; ನಿತ್ಯ ನಿರಂತರವಾಗಿರುವವಳೇ; ಎಲ್ಲಾ ವಿಧವಾದ ಸದ್ಗುಣಗಳ ಗಣಿಯೇ; ನಿನ್ನ ರೂಪವೇ ಇವೆಲ್ಲಾ ಸದ್ಗುಣಗಳ ಮೂರ್ತಿಯಾಗಿದೆ; ನಾನು ನಿನ್ನನ್ನು ಪೂಜಿಸುತ್ತೇನೆ."

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 193-200 http://www.manblunder.com/2009/09/lalitha-sahasranamam-193-200.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by nageshamysore Sat, 07/06/2013 - 05:59

ಶ್ರೀಧರರೆ, ೧೯೩ - ೨೦೦ ನಾಮಗಳ ಕಾವ್ಯರೂಪ ತಮ್ಮ ಅವಗಾಹನೆ / ಪರಿಷ್ಕರಣೆಗೆ ಸಿದ್ದ. ಈ ಬಾರಿ ಕೆಲವೆಡೆ ತುಸು ಹೆಚ್ಚು ಕವಿ ಸ್ವಾತಂತ್ರ ಬಳಸಿದ ಪದ / ಅರ್ಥಗಳು ನುಸುಳಿವೆಯೆಂದು ಅನುಮಾನ. ಅಸಂಗತವಾಗಿ ಕಂಡರೆ ಎಂದಿನಂತೆ ಪರಿಷ್ಕರಿಸೋಣ - ನಾಗೇಶ ಮೈಸೂರು :-)

ಲಲಿತಾ ಸಹಸ್ರನಾಮ ೧೯೩ - ೨೦೦
----------------------------------------

೧೯೩. ದುಷ್ಟದೂರಾ  
ಲಭ್ಯವಾದೀತೆ ಮುಕ್ತಿ ದುಷ್ಟರಿಗೆಲ್ಲಿದೆ ದೃಢ ಭಕ್ತಿ
ದೇವಿಯ ಚಿಂತನೆಗು ಬಿಡುವಿರದಷ್ಟು ಕುಯುಕ್ತಿ
ಅರಿತೆ ಚತುರತೆ ಜಗನ್ಮಾತೆಯೂ ದುಷ್ಟ ದೂರಾ
ಲೋಕವ್ಯಾಪಾರ ಕಳೆದುಕೊಳ್ಳುವರೆಷ್ಟು ಅಪಾರ!

೧೯೪. ದುರಾಚಾರ-ಶಮನೀ  
ಸಂಪ್ರದಾಯ ಪದ್ದತಿಯ ಸರಿಯಾಚರಣೆ ಆಚಾರ
ಶಾಸ್ತ್ರ ನಿಷೇಧಿತ ದುರಾಚಾರ ಶಮನ ಲಲಿತೆ ವರ
ವೇದಭೋಧನೆ ಗಹನ ಆಧ್ಯಾತ್ಮಿಕ ಮಹತ್ವ ಶಾಸ್ತ್ರ
ಘನ ಯಾಗ ಯಜ್ಞಕು ಮಿಗಿಲು ಕ್ಷಣಿಕ ಭಕ್ತಿಯಾಳ!

೧೯೫. ದೋಷ-ವರ್ಜಿತಾ  
ಕಳೆ ಕಳಂಕರಹಿತೆ ಲಲಿತೆ ಬ್ರಹ್ಮ ಲಕ್ಷಣದ ಮಹತ್ತೆ
ದ್ವೇಷ ಕಾಮನೆ ಕಾಡಿದವರಿಗಷ್ಟೆ ಕಳಂಕದ ತೊಗಟೆ
ಮನ ಚಿಂತನೆ ಸೂತಕ ಸ್ಥೂಲ ಕಾಯದಾ ಮಾತಲ್ಲ
ದೋಷವರ್ಜಿತೆ ಲಲಿತ ಯಾವ ರೂಪಕು ಕಲೆಯಿಲ್ಲ!
      
೧೯೬. ಸರ್ವಜ್ಞಾ
ಯಾರಿಲ್ಲಿ ಸರ್ವಜ್ಞ ಪರಬ್ರಹ್ಮದಾ ಹೊರತು
ಸಕಲ ಕೂಲಂಕುಷ ಜ್ಞಾನ ಪವಿತ್ರತೆ ಸ್ವತ್ತು
ಜ್ಞಾನಜನ್ಯ ನಿರ್ಗುಣ ಪರಾ ಸಗುಣ ಅಪರಾ 
ನಾಮರೂಪಾಹಾರ ಭೇದ ತಪಧ್ಯಾನಸಾರ!

೧೯೭. ಸಾಂದ್ರಕರುಣಾ  
ಕರುಣಾಮಯಿ ಜಗದ ಮಾಯಿ ದೇವಿ ಸಾಂದ್ರಕರುಣ
ಅನಂತ ಅಭಾಧಿತ ಅಪರಿಮಿತ ಬ್ರಹ್ಮಾಂಡದ ತ್ರಾಣ
ಸರ್ವ ಜನನಿ ಸಮದೃಷ್ಟಿ ಕರುಣೆಯಷ್ಟೆ ಶಿಕ್ಷೆಯು ಕೃಪೆ
ಮಕ್ಕಳೆಲ್ಲ ಪರಬ್ರಹ್ಮಾಂಶ ಲಲಿತೆ ಪರಬ್ರಹ್ಮ ಸ್ವರೂಪೆ!

೧೯೮. ಸಮಾನಾಧಿಕ-ವರ್ಜಿತಾ  
ಬ್ರಹ್ಮಕೆಲ್ಲಿದೆ ದೇಹ ಅವಯವ ಮದ ಮೋಹ
ಸಮಾನರಾರಿಲ್ಲದ ಶ್ರೇಷ್ಠ ಜೇಷ್ಠತೆ ನಿರ್ಮೋಹ
ಜ್ಞಾನ ಶಕ್ತಿ ಸರ್ವೋತ್ತಮ ಕ್ರಿಯಾಶಕ್ತಿ ಸಮೇತ
ಏಕಮೇವಾದ್ವಿತೀಯವೆ ಸಮಾನಾಧಿಕ ವರ್ಜಿತ!

೧೯೯. ಸರ್ವಶಕ್ತಿ-ಮಯೀ  
ವಾರಾಹೀ ಶ್ಯಾಮಲಾದಿ ದಶರೂಪ ಶಕ್ತಿ ಮೂರ್ತರೂಪಿಣಿ
ಸರ್ವಾಂತರ್ಯಾಮಿ ಪರಬ್ರಹ್ಮ ಸರ್ವಶಕ್ತಿ ಮಯೀ ತ್ರಾಣಿ
ಸೃಷ್ಟಿ ಸ್ಥಿತಿ ಲಯ ಕಾರ್ಯಕೆಲ್ಲ ಶಕ್ತಿ ದೇವಿರೂಪ ನಿಯುಕ್ತಿ
ನಿಯಂತ್ರಣ ಕಾರ್ಯನಿರ್ವಹಣೆಗೆಲ್ಲ ತಾನೆ ಎಲ್ಲವಾಗಿ ಶಕ್ತಿ!

೨೦೦. ಸರ್ವ-ಮಂಗಲಾ 
ಶುಭಗಳಿಗೆಲ್ಲ ಮೂರ್ತರೂಪ ದೇವಿ ಸರ್ವ ಮಂಗಲ
ನಂಬಿದ ನಿಜ ಭಕ್ತರಿಗೆಲ್ಲ ಮಾಡಬಲ್ಲಳು ಸನ್ಮಂಗಳ
ನಿತ್ಯ ನಿರಂತರೆ ಸದ್ಗುಣ ಗಣಿ ರೂಪವಾಗೆಲ್ಲ ಮೂರ್ತ
ಶುಭಸರ್ವದಾ ಶಿವೇ ಸೃಷ್ಟಿ ಸ್ಥಿತಿ ಲಯ ಕಾರಣಕರ್ತ!

Submitted by makara Sat, 07/06/2013 - 15:01

In reply to by nageshamysore

ನಾಗೇಶರೇ,
ನಿಮ್ಮ ರೇಸ್ ಕುದುರೆಯ ಓಟದ ಮುಂದೆ ನನ್ನ ಕುದುರೆಯ ಓಟ ಬಹಳ ನಿಧಾನ. ನಿಮ್ಮ ಕವನಗಳನ್ನು ಸಾಯಂಕಾಲದ ಹೊತ್ತಿಗೆ ನೋಡಿ ಪರಿಷ್ಕರಿಸುತ್ತೇನೆ. ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sat, 07/06/2013 - 15:40

In reply to by makara

ಶ್ರೀಧರರೆ, ಅಡ್ವಾನ್ಸು ಫೀಸಾಗಿ 'ಇಡ್ಲಿ, ಸಾಂಬರ, ಚಟ್ನಿ, ವಡೆ'ಯಲ್ಲಿ ಶಿವ ಸ್ತುತಿಯೊಂದನ್ನು ಸೇರಿಸುತ್ತಿದ್ದೇನೆ, ಪರಿಷ್ಕರಣೆ ಬೋರು ಹಿಡಿಸದಿರಲೆಂದು :-) - ನಾಗೇಶ ಮೈಸೂರು

ಇಡ್ಲಿ, ಸಾಂಬಾರು, ವಡೆ, ಚಟ್ನಿ, ಶಿವ
-----------------------------------------------
ದುರ್ಗುಣ ಹಬೆಯಾಗಿಸಿ 'ಇಡ್ಲಿ'ಯಾದಂತೆ ಹಿಟ್ಟು
ಸದ್ಗುಣ 'ಸಾಂಬಾರಿ'ಗದ್ದಿ ಮಾಡುವಂತೆ ರುಚಿಗಟ್ಟು
ಕ'ವಡೆ'ಯಷ್ಟಿದ್ದರು ಶಕ್ತಿ ಮುಳುಗೇಳಿಸು ಶಿವ ಭಕ್ತಿ
ಆರಾಧಿಸಿ ಗಳಿಸೇ ಪ್ರೀತಿ 'ಚಟ್-ನೀ' ಪಡೆವೆ ಮುಕ್ತಿ!

Submitted by partha1059 Sat, 07/06/2013 - 20:26

In reply to by nageshamysore

ನಾಗೇಶರೆ
ಲಲಿತ ಸಹಸ್ರನಾಮವನ್ನು ಪ್ರತಿ ಹೆಸರನ್ನು ನೀವು ಕವನ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದ್ದೀರಿ.
ನಿಜಕ್ಕು ನಿಮ್ಮಲ್ಲಿರುವ ಶಕ್ತಿ ಅಮೋಘ , ಲಲಿತಾಸಹಸ್ರದ ಈ ಪದ್ಯರೂಪವನ್ನು ಪುಸ್ತಕವಾಗಿಸುವ ಬಗ್ಗೆ ಯೋಚಿಸಿ.
ಶ್ರೀಧರರೆ ನಿಮ್ಮ ಲಲಿತಾ ಸಹಸ್ರಪಾರಾಯಣ ಚೆನ್ನಾಗಿ ಮುಂದುವರೆದಿದಿ, ಹಾಗೆ ನಿಮಗೆ ಹಿಮ್ಮೇಳವಾಗಿ ನಾಗೇಶರ ಕವನ
ಖುಷಿ ಕೊಡುತ್ತಿದೆ .

Submitted by nageshamysore Sat, 07/06/2013 - 21:13

In reply to by partha1059

ಪಾರ್ಥ ಸಾರ್, ಎಲ್ಲ ಶ್ರೀಧರರ ಕೃಪೆ. ಹೂರಣವೆಲ್ಲ ಅವರದೆ ಬರಿ ತೋರಣವಷ್ಟೆ ನನ್ನ ಪಾಲಿಗೆ. ಅವರು ದಡ ತಲುಪಿಸಿದ ಮೇಲೆ ಪುಸ್ತಕವಾಗುವ ಅರ್ಹತೆಯಿದ್ದರೆ, ಒಳ್ಳೆಯದೆ - ಇನ್ನು ಹೆಚ್ಚು ಜನರನ್ನು ತಲುಪಬಲ್ಲದು. ಆದರೆ ಜತೆಗೆ ಶ್ರೀಧರರ ವಿವರಣೆಯು ಪುಸ್ತಕವಾದರಷ್ಟೆ ಅದು ಅರ್ಥಪೂರ್ಣ. ಏಕೆಂದರೆ, ಪ್ರತಿ ಕವನದ ವಿವರದ ಹಿನ್ನೋಟ ಸಿಕ್ಕುವುದು ಅವರ ವಿವರದಲ್ಲಿ ಮಾತ್ರ! ನೋಡುವ ಅಂತಿಮದವರೆಗೆ ಎಲ್ಲ ಹೇಗೆ ನಡೆಯಲಿದೆಯೊ ಎಂದು. ಆ ನಂತರ ಈ ಕುರಿತು ಆಲೋಚಿಸಬಹುದು - ಯಾರಾದರೂ ಪ್ರಕಾಶಕರು ಸಿಕ್ಕರೆ - :-) - ನಾಗೇಶ ಮೈಸೂರು

Submitted by makara Sun, 07/07/2013 - 12:34

In reply to by nageshamysore

ಪುಸ್ತಕ ರೂಪದಲ್ಲಿ ಪದ್ಯಗಳನ್ನು ಮತ್ತು ವಿವರಣೆಯನ್ನು ಅಚ್ಚು ಹಾಕಿಸುವ ಕುರಿತು ಆಮೇಲೆ ಯೋಚಿಸಬಹುದು ಬಿಡಿ ನಾಗೇಶ್ ಅವರೆ. ಲಲಿತಾ ಸಹಸ್ರನಾಮದ ವಿವರಣೆಯ ವಿ.ರವಿಯವರ ಬ್ಲಾಗ್ ಆಕಸ್ಮಿಕವಾಗಿ ನನ್ನ ಕಣ್ಣಿಗೆ ಬಿತ್ತು; ಅದನ್ನು ಓದುತ್ತಿದ್ದಂತೆ ಅದನ್ನು ಕನ್ನಡೀಕರಣಗೊಳಿಸಬೇಕೆಂದು ಅನ್ನಿಸಿತು. ಅದೇ ರೀತಿ ನಾನು ಕಾರ್ಯಪ್ರವೃತ್ತನಾದೆ. ನನ್ನ ಅನುವಾದವನ್ನು ನೋಡಿ ನಿಮಗೂ ಕವನ ಹೊಸೆಯುವಂತೆ ಜಗನ್ಮಾತೆಯು ಪ್ರೇರೇಪಿಸಿದ್ದಾಳೆ. ಆದ್ದರಿಂದ ಕಾಲ ಕೂಡಿ ಬಂದರೆ ಪುಸ್ತಕವನ್ನು ಅಚ್ಚು ಹಾಕಿಸುವುದು ತನ್ನಷ್ಟಕ್ಕೇ ತಾನೇ ಆಗಿ ಬರುತ್ತದೆ. ಮೊದಲು ಈ ಮಹತ್ಕಾರ್ಯವನ್ನು ಪೂರೈಸುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗೋಣ. ಆಗ ಪಾರ್ಥಸಾರಥಿಗಳಂತಹ ಸಹೃದಯರ ಆಶಯವೂ ಈಡೇರಿದಂತಾಗುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Sun, 07/07/2013 - 12:29

೧೯೩-೨೦೦ರ ಪರಿಪ್ಕರಣೆಯ ಕುರಿತು,
ನಾಗೇಶರೆ,
ಪಾರ್ಥರೆಂದಂತೆ ನಿಮ್ಮ ಕವನಗಳು ನಿಜಕ್ಕೂ ಖುಷಿ ಕೊಡುತ್ತಿವೆ. ಏಕೆಂದರೆ ಅವುಗಳಲ್ಲಿ ವಿವರಣೆಯ ಸಾರವನ್ನು ಸರಳವಾಗಿ ಹಿಡಿದಿಡುತ್ತಿದ್ದೀರ. ಇರಲಿ ಬಿಡಿ ಕೆಲವೊಂದು ಅನುಮಾನಗಳು ನಿಮ್ಮ ಅವಗಾಹನೆಗೆ ಕೆಳಗೆ ಕೊಟ್ಟಿದ್ದೇನೆ.
೧೯೩. ದುಷ್ಟದೂರಾ
ಲಭ್ಯವಾದೀತೆ ಮುಕ್ತಿ ದುಷ್ಟರಿಗೆಲ್ಲಿದೆ ದೃಢ ಭಕ್ತಿ
............................................................
ಅರಿತೆ ಚತುರತೆ ಜಗನ್ಮಾತೆಯೂ ದುಷ್ಟ ದೂರಾ
ಚತುರತೆ=ಚತುರ
ಲೋಕವ್ಯಾಪಾರ ಕಳೆದುಕೊಳ್ಳುವರೆಷ್ಟು ಅಪಾರ!
ಈ ಸಾಲು ಮೂಲ ಆಶಯಕ್ಕೆ ಸ್ವಲ್ಪ ಭಂಗ ತರಬಹುದೆಂದುಕೊಳ್ಳುತ್ತೇನೆ. ಅಲ್ಪ ಸ್ವಲ್ಪ ಬದಲಿಸಲು ಸಾಧ್ಯವೇ ನೋಡಿ. ಬಹುಶಃ ಅದು
ಲೋಕವ್ಯಾಪರದಿ ಕಳೆದುಕೊಳ್ಳುವವೆಷ್ಟೋ ಅಪಾರ ...ಎಂದರೆ ಸರಿಹೋಗಬಹುದೇನೋ ನೋಡಿ.

೧೯೫. ದೋಷ-ವರ್ಜಿತಾ
ಕಳೆ ಕಳಂಕರಹಿತೆ ಲಲಿತೆ ಬ್ರಹ್ಮ ಲಕ್ಷಣದ ಮಹತ್ತೆ
ಕಳೆ=ಕಲೆ; ಮಹತ್ತೆ=ಮಹತೆ ಸರಿಯೇ?
ದ್ವೇಷ ಕಾಮನೆ ಕಾಡಿದವರಿಗಷ್ಟೆ ಕಳಂಕದ ತೊಗಟೆ

೧೯೭. ಸಾಂದ್ರಕರುಣಾ
ಕರುಣಾಮಯಿ ಜಗದ ಮಾಯಿ ದೇವಿ ಸಾಂದ್ರಕರುಣ
ಮಾಯಿ=ಮಾಯೆ
ಅನಂತ ಅಭಾಧಿತ ಅಪರಿಮಿತ ಬ್ರಹ್ಮಾಂಡದ ತ್ರಾಣ
ಅಭಾಧಿತ=ಅಬಾಧಿತ
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
(೨೦೧ರಿಂದ ೨೦೭ರ ನಾಮಗಳ ಕುರಿತು ಬಹುಶಃ ಸಾಯಂಕಾಲ ಕೂಲಂಕುಷವಾಗಿ ನೋಡಿ ಪ್ರತಿಕ್ರಿಯಿಸುತ್ತೇನೆ. )

ನಾಗೇಶರೆ,
ನೀಳಾ ಅವರ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ಒಂದು ವಿಷಯ ಅರ್ಥವಾಯಿತು. ಅದೇನೆಂದರೆ ಇಲ್ಲಿ ಪರಿಷ್ಕರಣೆಯಾದ ನಂತರ ಅಂತಿಮ ರೂಪವನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿ ಅದರ ಕೊಂಡಿಯನ್ನು ಕೊಡಿ. ಆಗ ಆಸಕ್ತಿಯುಳ್ಳವರಿಗೆ ಹಿಂದಿನ ನಾಮಗಳ ವಿವರಣೆಯ ಪದ್ಯಗಳನ್ನು ಒಂದೇ ಕಡೆ ಓದುವ ಅವಕಾಶ ದೊರೆಯುತ್ತದೆ.

Submitted by nageshamysore Sun, 07/07/2013 - 14:15

In reply to by makara

ಶ್ರೀಧರರೆ, ೧೯೩-೨೦೦ರ ಪರಿಪ್ಕರಣೆಯ ಕುರಿತು, ಸರಿಪಡಿಸಿದ ಸಾಲುಗಳು ಕೆಳಕಂಡಂತಿವೆ - ಸೂಕ್ತವಿದೆಯೆ ಪರಿಶೀಲಿಸಿ

೧೯೩. ದುಷ್ಟದೂರಾ  
ಲಭ್ಯವಾದೀತೆ ಮುಕ್ತಿ ದುಷ್ಟರಿಗೆಲ್ಲಿದೆ ದೃಢ ಭಕ್ತಿ
ದೇವಿಯ ಚಿಂತನೆಗು ಬಿಡುವಿರದಷ್ಟು ಕುಯುಕ್ತಿ
ಅರಿತೆ ಚತುರ ಜಗನ್ಮಾತೆಯೂ ದುಷ್ಟ ದೂರಾ
ಲೋಕವ್ಯಾಪರದಿ ಕಳೆದುಕೊಳ್ಳುವವೆಷ್ಟೋ ಅಪಾರ !

೧೯೫. ದೋಷ-ವರ್ಜಿತಾ  
ಕಲೆ ಕಳಂಕರಹಿತೆ ಲಲಿತೆ ಬ್ರಹ್ಮ ಲಕ್ಷಣದ ಘನತೆ
ದ್ವೇಷ ಕಾಮನೆ ಕಾಡಿದವರಿಗಷ್ಟೆ ಕಳಂಕದ ತೊಗಟೆ
ಮನ ಚಿಂತನೆ ಸೂತಕ ಸ್ಥೂಲ ಕಾಯದಾ ಮಾತಲ್ಲ
ದೋಷವರ್ಜಿತೆ ಲಲಿತ ಯಾವ ರೂಪಕು ಕಲೆಯಿಲ್ಲ!

೧೯೭. ಸಾಂದ್ರಕರುಣಾ  
ಕರುಣಾಮಯಿ ಜಗದ ತಾಯಿ ದೇವಿ ಸಾಂದ್ರಕರುಣ
ಅನಂತ ಅಬಾಧಿತ ಅಪರಿಮಿತ ಬ್ರಹ್ಮಾಂಡದ ತ್ರಾಣ
ಸರ್ವ ಜನನಿ ಸಮದೃಷ್ಟಿ ಕರುಣೆಯಷ್ಟೆ ಶಿಕ್ಷೆಯು ಕೃಪೆ
ಮಕ್ಕಳೆಲ್ಲ ಪರಬ್ರಹ್ಮಾಂಶ ಲಲಿತೆ ಪರಬ್ರಹ್ಮ ಸ್ವರೂಪೆ!

>>>>>ಪಾರ್ಥರೆಂದಂತೆ ನಿಮ್ಮ ಕವನಗಳು ನಿಜಕ್ಕೂ ಖುಷಿ ಕೊಡುತ್ತಿವೆ. ಏಕೆಂದರೆ ಅವುಗಳಲ್ಲಿ ವಿವರಣೆಯ ಸಾರವನ್ನು ಸರಳವಾಗಿ ಹಿಡಿದಿಡುತ್ತಿದ್ದೀರ>>>>> 

# ಸರಳವಿದ್ದಷ್ಟು ಮತ್ತಷ್ಟು ಹೆಚ್ಚು ಜನ ಓದಲು ಸಾಧ್ಯವಾದೀತೆಂಬ ಆಶಯದಿಂದಲೆ ಆ ರೀತಿಯ ಪ್ರಯತ್ನ. ಸಂಕೀರ್ಣ ಅವೃತ್ತಿಗಳು ಈಗಾಗಲೆ ಇರಬಹುದಾದ ಕಾರಣ ಆ ಗುಂಪಿಗೆ ಮತ್ತೊಂದು ಸೇರಿಸುವ ಬದಲು ಈ ಮಾರ್ಗವೆ ಸೂಕ್ತವೆಂದು ಕಾಣುತ್ತದೆ.

>>>>>>>ನೀಳಾ ಅವರ ಪ್ರತಿಕ್ರಿಯೆಯನ್ನು ನೋಡಿದ ಮೇಲೆ ಒಂದು ವಿಷಯ ಅರ್ಥವಾಯಿತು. ಅದೇನೆಂದರೆ ಇಲ್ಲಿ ಪರಿಷ್ಕರಣೆಯಾದ ನಂತರ ಅಂತಿಮ ರೂಪವನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿ ಅದರ ಕೊಂಡಿಯನ್ನು ಕೊಡಿ. ಆಗ ಆಸಕ್ತಿಯುಳ್ಳವರಿಗೆ ಹಿಂದಿನ ನಾಮಗಳ ವಿವರಣೆಯ ಪದ್ಯಗಳನ್ನು ಒಂದೇ ಕಡೆ ಓದುವ ಅವಕಾಶ ದೊರೆಯುತ್ತದೆ.>>>>>

# ನೀಳಾದೇವಿಯವರ ಪ್ರತಿಕ್ರಿಯೆಯ ನಂತರ ನಾನು ಬೇರೆ ಕಡೆ ಪರಿಷ್ಕರಿಸುವ ಆಲೋಚನೆ ಕೈಬಿಟ್ಟೆ. ಆದರೆ ನಿಮ್ಮ ಈ ಸಲಹೆ ಚೆನ್ನಾಗಿದೆ. ಸಮಗ್ರ ಸಂಗ್ರಹದ ಕೊಂಡಿಯನ್ನು ಇಲ್ಲಿ ಹಾಕಿದರೆ, ಬೇಕಿದ್ದವರು ಉಪಯೋಗಿಸಬಹುದು.
 

Submitted by nageshamysore Sun, 07/07/2013 - 18:59

In reply to by makara

ಶ್ರೀಧರರೆ, ಕೊಂಡಿ ಮರೆತಿರಲಿಲ್ಲ - ಪರಿಷ್ಕರಣೆಯ ಅಂತಿಮ ಅವೃತ್ತಿಗೆ ಕಾಯುತ್ತಿದ್ದೆ. ಈಗ ನಿಮ್ಮ ಸಮ್ಮತಿ ಸಿಕ್ಕಿರುವುದರಿಂದ ಇದೋ ಕೊಂಡಿಯೂ ಸಿದ್ದ! ಒಮ್ಮೆ ಗಿಂಡಿ ನೋಡಿಬಿಡಿ ಸರಿಯಾಗಿ ಕೆಲಸ ಮಾಡಿತೊ ಇಲ್ಲವೊ ಎಂದು :-) - ನಾಗೇಶ ಮೈಸೂರು
https://ardharaatriaalaapagalu.wordpress.com/%e0%b3%ac%e0%b3%a6-%e0%b2%…

Submitted by ಗಣೇಶ Mon, 07/08/2013 - 00:06

In reply to by nageshamysore

ಅರ್ಧರಾತ್ರಿಆಲಾಪಗಳು!:)
ಇನ್ನೂ ನಿರ್ಮಾಣ ಹಂತದಲ್ಲಿರುವುದರಿಂದ ...ಒಂದೆರಡು ಸಲಹೆ ಅಷ್ಟೆ.
>>>ಲಲಿತಾ ಸಹಸ್ರನಾಮ ೧ ಮತ್ತು ೨ರ ವಿವರಣೆ --
ಬದಲಿಗೆ
- ಶ್ರೀ ಮಾತಾ ಶ್ರೀ ಮಹಾರಾಜ್ಞೀ -ಎಂದೇ ಬರೆದರೆ ಉತ್ತಮವಲ್ಲವಾ?( "ನಿರ್ವಿಕಲ್ಪಾ ನಿರಾಬಾಧಾ"ಕ್ಕೆ ಸಂಬಂಧಿಸಿದ ನಿಮ್ಮ ಕವನ ನೋಡಬೇಕು ನನಗೆ. ಹೇಗೆ ಹುಡುಕಲಿ?)
-ಶ್ರೀಧರ್‌ಜಿ ಒಪ್ಪಿಗೆ ನೀಡಿದರೆ ಅವರ ವಿವರಣೆಯನ್ನೂ ಅಲ್ಲೇ ಸೇರಿಸಬಹುದು.
-ಕೊನೆಯಲ್ಲಿ ಶ್ರೀಧರ್‌ಜಿ ಜತೆ ಶ್ರೀಯುತ ರವಿಯವರ ಆಂಗ್ಲ ಲೇಖನಕ್ಕೂ ಕೊಂಡಿ ಕೊಡಿ.
ನಿಮ್ಮ ಆಸಕ್ತಿ, ಪ್ರಯತ್ನಗಳಿಗೆ ಜೈ.
-ಗಣೇಶ.

Submitted by nageshamysore Mon, 07/08/2013 - 03:50

In reply to by ಗಣೇಶ

ಗಣೇಶ್ ಜಿ,

1. ಅರ್ಧರಾತ್ರಿ ಅಲಾಪಗಳು ಹೆಸರಿನಲ್ಲಿ ನನ್ನ ಬಳಿಯಿದ್ದ ಹಳೆ ವೆಬ್ಸೈಟನ್ನೆ ಬಳಸುತ್ತಿದ್ದೇನೆ - ಈಗ ಹೆಸರು ಬದಲಿಸಲು ತಾಂತ್ರಿಕವಾಗಿ ಸಾಧ್ಯವಿಲ್ಲ (ಶ್ರೀ ಲಲಿತಾ ಸಹಸ್ರ ನಾಮಾವಳಿ ಎಂದಿಡಬೇಕಿತ್ತು!). ಆದರೆ ಶ್ರೀಧರರೆ ದೇವಿಯ ಪೂಜೆಗೆ (ನೀವು ಮಾಡುವ ಹಾಗೆ) , ರಾತ್ರಿ ಪೂಜೆಯೆ ಉತ್ತಮ ಎಂದ ಕಾರಣ ಆ ಹೆಸರನ್ನೆ ಉಳಿಸಿಕೊಂಡೆ!
2. ನಾನು ನಾಮಾವಳಿಗೆ ಕವನ ಬರೆಯುವ ಸರಿಯಾದ ಯತ್ನ ಆರಂಭವಾದದ್ದು ಸುಮಾರು ತೊಂಭತ್ತರ ಆಚೀಚೆಯಿಂದ (ನಡುವೆ ಒಂದೆರಡು ನಾಮಾವಳಿ ಬಿಟ್ಟರೆ). ಹೀಗಾಗಿ ಒಂದರಿಂದ ತೊಂಭತ್ತರವರೆಗಿನದಿನ್ನು ಬರೆದು ಮುಗಿಸಿಲ್ಲ. ಇದುವರೆಗೆ 70ರ ತನಕ ಮುಗಿದಿದೆ, ಉಳಿದದ್ದು ಮುಗಿಸಿ, ಒಮ್ಮೆ ಪರಿಶೀಲಿಸಿ ನಂತರ ಶ್ರೀಧರರ ಪರಿಷ್ಕರಣೆಗೆ ನೀಡಬೇಕು (ಈಗಿನ ವಿಧಾನದಲ್ಲೆ - ಬಹುಶಃ ದಿನಾ ಹೊಸದರ ಜತೆಗೆ ಹಳೆಯದೊಂದೊಂದನ್ನು ಸೇರಿಸುತ್ತ ಹೋದರೆ ಕೆಲವು ದಿನದಲ್ಲೆ ಹಳೆಯದನೆಲ್ಲಾ ಕವರ್ ಮಾಡಬಹುದು - ಆಗ ಆ ಹೆಸರಿನ ಚರ್ಚೆಗಳು (ಮತ್ತು ನೀವು ನೋಡಬೇಕೆನ್ನೊ ನನ್ನ ತಪ್ಪುಗಳು!) ಸಂಪದದಲ್ಲಿ ಸೇರಿಸಿದಂತಾಗುತ್ತದೆ ).
3. ನಿಮ್ಮ ಸಲಹೆಯಂತೆ ನೇರ ಹೆಸರನ್ನೆ ಹಾಕುತ್ತೇನೆ - ಕೆಲವು ಕಡೆ ಆರು, ಏಳು ಹೆಸರುಗಳು ಸಾಧ್ಯವಿರುವುದರಿಂದ ತಾಂತ್ರಿಕವಾಗಿ ತೊಂದರೆಯಿರದು ಅಂದುಕೊಂಡಿದ್ದೇನೆ - ನೋಡೋಣ. ಮತ್ತೊಂದು ಆಲೋಚನೆಯೂ ಇದೆ, ಜತೆಯಲ್ಲೆ ಒಂದೆ ಪುಟದಲ್ಲಿ ಎಲ್ಲಾ ಹೆಸರಿನ ಕವನ ಸೇರಿಸುತ್ತಾ ಹೋಗುವುದು (ಒಂದೆ ಲಿಂಕಿನಲ್ಲಿ ಸಿಗುವಂತೆ). ಸದ್ಯಕ್ಕೆ ಯಾವುದೆ ನಾಮಾವಳಿಯ ಗುಂಪಿನ ಸಂಖ್ಯೆಯ ಲಿಂಕಿನ ಮೇಲೆ ಕ್ಲಿಕ್ ಮಾಡಿದರೆ ಕೆಳಗೆ ಆ ಪುಟ ತೆರೆದುಕೊಳ್ಳುತ್ತದೆ (ಸ್ವಲ್ಪ ಕೆಳಕ್ಕೆ ಸ್ಕ್ರಾಲ್ ಮಾಡಬೇಕು). ಒಂದು ಮತ್ತು ಎರಡನೆ ಹೆಸರಿನ ಲಿಂಕಿಗು ಕ್ಲಿಕ್ಕು ಮಾಡಿದರೆ ಕೆಳಗೆ ತೆರೆದುಕೊಳ್ಳುತ್ತದೆ - ಹೆಸರು ಬದಲಿಸಿದ ನಂತರ ಇನ್ನೂ ಹೆಚ್ಚು ಸುಲಭವಾದೀತು. ಸದ್ಯಕ್ಕೆ ಅಪರಿಷ್ಕೃತ ಆವೃತ್ತಿ ಎಂದು ಗಮನದಲ್ಲಿದ್ದರೆ ಸರಿ :-) ಸದ್ಯಕ್ಕೆ ಹೋಂ ಪೇಜಿನಲ್ಲಿ ಕೆಳಗೆ ಸರ್ಚ್ ಗುಂಡಿ ಇದೆ. ಅಲ್ಲಿ ಕನ್ನಡದಲ್ಲಿಯೆ 'ನಿರ್ವಿಕಲ್ಪ' ಎಂದು ಪೇಸ್ಟು ಮಾಡಿ ಎಂಟರ್ ಒತ್ತಿದರೆ, ಆ ನಾಮಾವಳಿಯ ಲಿಂಕನ್ನು ಹುಡುಕಿ ತರುತ್ತದೆ. ಹಾಗೆಯೆ ಹುಡುಕುವ ಅನುಕೂಲ ಹೆಚ್ಚಿಸಲು ಮೂಲ ಇಂಗ್ಲಿಷ್ / ಸಂಸ್ಕೃತ ಹೆಸರನ್ನು ಸೇರಿಸಬಹುದು.
4. ರವಿಯವರ ಲಿಂಕು ಸೇರಿಸುವುದು ಅತ್ಯುತ್ತಮ ಸಲಹೆ - ಸೇರಿಸುತ್ತೇನೆ.
5. ಸದ್ಯಕ್ಕೆ ವೆಬ್ ಸೈಟು ತುಂಬ ಸರಳ ಮೂಲ ರೂಪದಲ್ಲಿದೆ. ಸಮಯ ಸಿಕ್ಕಾಗ ಏನಾದರೂ ಉಪಯೋಗಕರ ಬದಲಾವಣೆ ಮಾಡಲು ಸಾಧ್ಯವೆ ನೋಡಿ ಯತ್ನಿಸುತ್ತೇನೆ. ಈಗಿನ ಗಮನ ಮೊದಲು ನಾಮಾವಳಿಗಳ ಕವನ ಮುಗಿಸಿ ಅಲ್ಲಿ ಹಾಕುವುದರತ್ತ!

@ಶ್ರೀಧರ್ : ಮೇಲಿನ ಎರಡನೆ ಅಂಶದ ಸಲಹೆ ( ಇನ್ನು ಪರಿಷ್ಕರಿಸದ ಹಿಂದಿನ ಹೆಸರುಗಳಿಗೆ) ಸೂಕ್ತವಾಗಿ ಕಾಣುವುದೆ?
- ನಾಗೇಶ ಮೈಸೂರು

Submitted by makara Tue, 07/16/2013 - 06:21

In reply to by nageshamysore

ಸರಿ ನಾಗೇಶರೆ,
ಮೊದಲಿನ ಕಂತುಗಳಿಗೂ ಪದ್ಯಗಳನ್ನು ನಿಮಗೆ ಸಮಯ ಸಿಕ್ಕಾಗಲೆಲ್ಲ ಬರೆಯುತ್ತಾ ಹೋಗಿ. ಅವನ್ನು ಈಗ ಮಾಡುತ್ತಿರುವ ರೀತಿಯಲ್ಲೇ ಪರಿಷ್ಕರಣೆ ಮಾಡುತ್ತಾ, ಅಂತಿಮವಾಗಿ ಕೊಂಡಿಯನ್ನು ಕೊಡೋಣ. ಶ್ರೀಯುತ ರವಿಯವರ ಕೊಂಡಿಯನ್ನು ಬಳಸಿರುವುದು ಸಹ ಒಳ್ಳೆಯ ಕೆಲಸ; ಆಸಕ್ತರು ಕೆಲವೊಂದು ಪ್ರಶ್ನೆಗಳನ್ನು ಅವರಿಗೇ ನೇರವಾಗಿ ಕೇಳುವ ಅವಕಾಶವಿರುತ್ತದೆ. ಈ ಕಂತನ್ನು ಅಂತಿಮಗೊಳಿಸಿ.

ಶ್ರೀಧರರೆ, ಅಂತಿಮ ಕೊಂಡಿ ಮತ್ತೆ ಸೇರಿಸುತ್ತಿದ್ದೇನೆ. ಈಗ ಗಣೇಶರ ಸಲಹೆಯ ಪ್ರಮುಖ ಅಂಶಗಳೆಲ್ಲ ಅನುಷ್ಟಾನಗೊಂಡಿದೆ - ನಾಗೇಶ ಮೈಸೂರು
https://ardharaatria...

ಕೊಂಡಿಯನ್ನು ನಾನು ಗಮನಿಸಿದ್ದೇನೆ; ನಾಗೇಶರೆ, ಓಕೆ.