‘ಅನ್ನದೇವರ ಮುಂದೆ ಇನ್ನು ದೇವರುಂಟೆ?’

‘ಅನ್ನದೇವರ ಮುಂದೆ ಇನ್ನು ದೇವರುಂಟೆ?’

ಕೇಂದ್ರ ಸರ್ಕಾರವು ಕಡೆಗೂ ‘ಆಹಾರ ಭದ್ರತೆ ಯೋಜನೆಯನ್ನು’ ಜಾರಿಗೆ ತರುವ ನಿರ್ಧಾರ ಮಾಡಿದೆ. ಅದರಂತೆ ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುವ ಬದಲು ರಾಷ್ಟ್ರಪತಿಯವರಿಂದ ಒಪ್ಪಿಗೆ ಪಡೆದು ಸುಗ್ರೀವಾಜ್ಞೆಯ ಮೂಲಕ ಇದನ್ನು ಜಾರಿಗೆ ತರಲಿದೆ. ಸರ್ಕಾರದ ಈ ನಿಲುವನ್ನು ವಿರೋಧ ಪಕ್ಷಗಳವರು ವಿರೋಧಿಸಿದರೂ ಕೂಡ ಈ ಯೋಜನೆ ಜಾರಿಗೊಳಿಸಲು ಯಾರೂ ತೊಡಕುಂಟುಮಾಡಲಾರರು.

‘ಆಹಾರ ಭದ್ರತಾ ಯೋಜನೆ’ ಒಂದು ಮಹತ್ವಾಕಾಂಕ್ಷಿ ಯೋಜನೆ. ಇದು ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ಬಂದಲ್ಲಿ ದೇಶದ ಶೇ.75ರಷ್ಟು ಮಂದಿ ಆಹಾರವಿಲ್ಲದೆ ಸಾಯುವುದು ನರಳುವುದು ತಪ್ಪುತ್ತದೆ. ವಿಶ್ವಸಂಸ್ಥೆಯ ಪ್ರಕಾರ ಆಹಾರ ಭದ್ರತೆಯೆಂದರೆ ‘ಪ್ರತಿಯೊಬ್ಬ ಜೀವಿಗೂ ಬದುಕಲು ಅಗತ್ಯವಿರುವ ಕನಿಷ್ಠ ಆಹಾರ ಲಭ್ಯವಾಗುವಂತೆ ಮಾಡುವುದು. ಎಲ್ಲರಿಗೂ ಎಲ್ಲ ಕಾಲದಲ್ಲೂ ಪೌಷ್ಟಿಕ ಆಹಾರ ಲಭ್ಯವಿರುವಂತೆ ಮಾಡುವುದು.’

2011ರ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಭಾರತವು 66ನೇ ಸ್ಥಾನದಲ್ಲಿದೆ. ಅಂದರೆ ಇಲ್ಲಿ ಹಸಿವು ಅಪೌಷ್ಟಿಕತೆಯಿಂದ ನರಳುತ್ತಿರುವವರ ಸಂಖ್ಯೆ ಮತ್ತು ಶಿಶು ಮರಣಗಳು ಅಧಿಕ ಪ್ರಮಾಣದಲ್ಲಿವೆ. ಆರ್ಥಿಕವಾಗಿ ಒಂದೆಡೆ ಸಧೃಡವಾಗುತ್ತಿರುವ ರಾಷ್ಟ್ರವಾಗುತ್ತಿರುವ ಭಾರತ ಮಾನವ ಅಭಿವೃದ್ಧಿಯ ವಿಷಯಕ್ಕೆ ಬಂದಾಗ ಈ ಮಟ್ಟದಲ್ಲಿರುವುದು ಆತಂಕಕಾರಿಯಾದ ವಿಷಯ. ಹಾಗೇಯೇ ಇದು ನಮ್ಮ ದೇಶದ ವಸ್ತು ಸ್ಥಿತಿಯಲ್ಲಿನ ವ್ಯಂಗ್ಯ ಕೂಡ ಹೌದು.

‘ಆಹಾರ ಭದ್ರತೆ ಯೋಜನೆ’ಯು ಈಗಿರುವ ಪಡಿತರ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಕ್ರಮವಾಗಿ ರೂ,3, ರೂ.2, ಹಾಗೂ ರೂ.1ರದಲ್ಲಿ ದೊರೆಯಲಿರುವ ಆಹಾರ ಪದಾರ್ಥಗಳನ್ನು ಒಟ್ಟು ಜನಸಂಖ್ಯೆಯಲ್ಲಿನ ಶೇ.75ರಷ್ಟು ಮಂದಿ ಪಡೆಯಬಹುದು. ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪ್ರತ್ಯೇಕ ಪಡಿತರ ಚೀಟಿಗಳನ್ನು ನೀಡುವ ಕಾರ್ಯ ಯಾವುದೇ ರೀತಿಯ ಅಕ್ರಮಗಳಿಲ್ಲದಂತೆ ನಡೆಯಬೇಕಾಗಿದೆ. ಉಗ್ರಾಣಗಳಲ್ಲಿ ಕೂಡಿಟ್ಟು ಹಾಳಾಗುವ ಬದಲು ಆ ಧಾನ್ಯಗಳನ್ನು ಅವಶ್ಯವಿರುವವರಿಗೆ ತಲುಪಿಸುವ ಜವಾಬ್ದಾರಿಯನ್ನು ಸರ್ಕಾರ ಹೊಣೆಯರಿತು ಮಾಡಬೇಕಾಗಿದೆ.

ಯಾವುದೇ ದೇಶದಲ್ಲಾದರೂ ಸಮಾನವಾಗಿ ಎಲ್ಲ ಪ್ರಜೆಗಳಿಗೂ ಸಿಗಬೇಕಾದದ್ದು ಆಹಾರ, ವಸತಿ, ಶಿಕ್ಷಣ ಮತ್ತು ಆರೋಗ್ಯ. ನಮ್ಮ ರಾಜಕೀಯ ಪಕ್ಷಗಳು ಮತ್ತು ನಾಯಕರು ಮೊದಲಿಗೆ ಆದ್ಯತೆ ನೀಡಬೇಕಾದದ್ದು ಈ ವಿಷಯಗಳಿಗೆ. ಇವು ವೋಟ್‍ ಬ್ಯಾಂಕ್‍ ರಾಜಕೀಯದ ವಸ್ತುಗಳಲ್ಲ. ಇವು ಒಂದು ನಾಗರಿಕ ಸಮಾಜದಲ್ಲಿನ ಪ್ರತಿಯೊಬ್ಬನ ಹಕ್ಕು. ಮತ್ತು ಇದನ್ನು ಒದಗಿಸುವಲ್ಲಿ ಎಲ್ಲ ರಾಜಕೀಯ ಮುಖಂಡರು ಮತ್ತು ಜನರು ತಮ್ಮ ಇಚ್ಛಾಶಕ್ತಿಯನ್ನು ಒಗ್ಗೂಡಿಸಿ ಪ್ರಯತ್ನಿಸಬೇಕಾಗುತ್ತದೆ. 

Comments

Submitted by kavinagaraj Mon, 07/08/2013 - 12:12

"ಇವು ವೋಟ್‍ ಬ್ಯಾಂಕ್‍ ರಾಜಕೀಯದ ವಸ್ತುಗಳಲ್ಲ. ಇವು ಒಂದು ನಾಗರಿಕ ಸಮಾಜದಲ್ಲಿನ ಪ್ರತಿಯೊಬ್ಬನ ಹಕ್ಕು. ಮತ್ತು ಇದನ್ನು ಒದಗಿಸುವಲ್ಲಿ ಎಲ್ಲ ರಾಜಕೀಯ ಮುಖಂಡರು ಮತ್ತು ಜನರು ತಮ್ಮ ಇಚ್ಛಾಶಕ್ತಿಯನ್ನು ಒಗ್ಗೂಡಿಸಿ ಪ್ರಯತ್ನಿಸಬೇಕಾಗುತ್ತದೆ. " ನಿಮ್ಮ ಈ ಮಾತು ಸರಿ. ಆದರೆ ಈಗ ಮಾಡಿರುವುದು ಓಟಿನ ರಾಜಕಾರಣವೇ!! ಇದು ಪರಿಣಾಮಕಾರಿಯಾಗಿ ಜಾರಿಯಾಗುವುದು ಇಂದಿನ ವ್ಯವಸ್ಥೆಯಲ್ಲಿ ಅಸಂಭವವೆಂದೇ ಹೇಳಬೇಕು.