ಲೈಂಗಿಕ ಅತ್ಯಾಚಾರದ ವಿರುದ್ಧ ಮಹಿಳೆಯರ ರಕ್ಷಣೆ..

ಲೈಂಗಿಕ ಅತ್ಯಾಚಾರದ ವಿರುದ್ಧ ಮಹಿಳೆಯರ ರಕ್ಷಣೆ..

ಮನೆಮನೆಯಲಿ ದೀಪ ಮೂಡಿಸಿ..
ಹೊತ್ತು-ಹೊತ್ತಿಗೆ ಅನ್ನವುಣಿಸಿ..
ತಂದೆ-ಮಗುವ ತಬ್ಬಿದಾಕೆ..
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
 
ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಈ ಸಾಲುಗಳು ಅದೆಷ್ಟು ಸತ್ತ್ವಪೂರ್ಣ ಮತ್ತು ಮಾರ್ಮಿಕ..!!
   ಹೆಣ್ಣು  ಸಂಸಾರದ ಕಣ್ಣು ಎಂಬ ಮಾತಿದೆ. ಆಕೆ ಆ ಮನೆಯ ಜೀವವೀಣೆಯಾಗಿ, ಮೌನವಾಗಿ ಮಿಡಿಯುತ್ತಾ, ಸಂಸಾರ ಶ್ರುತಿ ತಪ್ಪದಂತೆ ಕಾಪಾಡಿಕೊಂಡು ಬರುತ್ತಿರುತ್ತಾಳೆ. ಅಂಥಾ ಆಕೆಯ ಒಂದು ತಂತಿ ತುಂಡಾದರೆ ಜೀವನ ಅಪಸ್ವರದಲ್ಲಿ ಮಿಡಿಯುತ್ತದೆ. ಮತ್ತೆ ಶ್ರುತಿಗೆ ತರುವುದು ಕಷ್ಟಸಾಧ್ಯ!
ಪ್ರತೀ ಹೆಣ್ಣು ಪ್ರಬುದ್ಧಳಾದಂದಿನಿಂದ ಸಾಯುವವರೆಗೂ ಪ್ರಾಣಕ್ಕಿಂತ ಹೆಚ್ಚು ಮಹತ್ವ ಕೊಟ್ಟು ಕಾಪಾಡಿಕೊಂಡು ಬರುವುದು ತನ್ನ ಮಾನವನ್ನು.. “ಶೀಲಂ ಪರಂಭೂಷಣಂ” ಎಂಬುದು ಹೆಣ್ಣಿನ ದೃಢ ನಂಬಿಕೆ.
   ಆದರೆ ಆಕೆಯ ಮಾನ-ಮರ್ಯಾದೆಗೆ ಧಕ್ಕೆ ತರುವಂಥ ಶೋಷಣೆಗಳು ನಡೆದಾಗ ಅದು ಲೈಂಗಿಕ ಅತೈಚಾರವೆನಿಸಿಕೊಳ್ಳುತ್ತದೆ ಮತ್ತು ಅವಳ ಬಾಳನ್ನು ಛಿದ್ರಗೊಳಿಸುತ್ತದೆ!
   ಅನಾದಿ ಕಾಲದಿಂದಲೂ ಸ್ತ್ರೀಯರನ್ನು ಗೌರವದಿಂದ ಕಾಣುವ ಮನೋಭಾವ ಭಾರತೀಯರದು.. ಆದರೆ ಕಾಲ ಸರಿದಂತೆಲ್ಲಾ, ಈ ಪೂಜ್ಯ ಭಾವನೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಆಧುನಿಕತೆಯ ಗುಂಗಿನಲ್ಲಿ ಕುರುಡಾಗಿರುವ ಇಂದಿನ ಪೀಳಿಗೆ ಹೆಣ್ಣನ್ನು ಮಾರಾಟದ ಸರಕೆಂಬಂತೆ ಭಾವಿಸಿದೆ.
ಭಾರತದಲ್ಲಿಂದು ಹತ್ತರಲ್ಲಿ ಒಬ್ಬ ಮಹಿಳೆ ತನ್ನ ಜೀವನದ ಯಾವುದಾದರೂ ಘಟ್ಟದಲ್ಲಿ ಲೈಂಗಿಕ ಶೋಷಣೆಗೊಳಗಾಗಿರುತ್ತಾಳೆ! ಪುಟ್ಟ ಹಸುಗೂಸಿನಿಂದ ಹಿಡಿದು ಹಣ್ಣು ಹಣ್ಣು ಮುದುಕಿಯರವರೆಗೂ ಈ ಕಾಮತೃಷೆಗೆ ಬಲಿಯಾದವರಿದ್ದಾರೆ.
   ಅತ್ಯಾಚಾರವೆಂಬುದು ಕೇವಲ ದೈಹಿಕ ಹಿಂಸೆಗೆ ಕೊನೆಯಾಗದೆ, ಆಕೆಯ ಮನಸ್ಸಿನ ಮೇಲೆ ಅಳಿಸಲಾಗದ ಬರೆಯನ್ನೆಳೆದು ಬಿಡುತ್ತದೆ. ಆಕೆಯ ಭವಿಷ್ಯವನ್ನು ಕತ್ತಲಕೂಪಕ್ಕೆ ನೂಕಿ, ಆಕೆಯ ಸಂಸಾರಕ್ಕೆ ಕೊಳ್ಳಿ ಇಟ್ಟುಬಿಡುತ್ತದೆ. ಸಮಾಜದ ತಿರಸ್ಕಾರಕ್ಕೆ ಬೇಸತ್ತು ತಮ್ಮ ಬಾಳನ್ನೇ ಕೊನೆಯಾಗಿಸುವವರೂ ಅದೆಷ್ಟೋ ಮಂದಿ!
   ಇಂಥ ಕಟುವಾಸ್ತವವನ್ನು ಅರಗಿಸಿಕೊಳ್ಳಲೂ ಆಗದೆ, ಇದರಿಂದ ಮುಕ್ತಿ ಹೊಂದಲೂ ಆಗದೆ ಸ್ತ್ರೀ ಕುಲ ನಲುಗಿ ಹೋಗಿದೆ. ಈ ಪೆಡಂಭೂತ ತಮ್ಮ ಮೇಲೆ ಎಂದು ಎರಗೀತೋ ಎಂಬ ಆತಂಕದ ಕರಿನೆರಳಿನಲ್ಲೇ ಕಾಲ ದೂಡಬೇಕಿದೆ!
   ಅತ್ಯಾಚಾರದ ವಿರುದ್ಧ ಹೋರಾಡುವ ಅದೆಷ್ಟೋ ಸ್ತ್ರೀಪರ ಸಂಘಟನೆಗಳು ನಮ್ಮ ಸುತ್ತ ಇದ್ದರೂ ದೀಪದ ಕೆಳಗೇ ಕತ್ತಲು ಎಂಬಂತೆ ಅತ್ಯಾಚಾರಗಳು ಎಗ್ಗಿಲ್ಲದೆ ನಡೆಯುತ್ತಲೇ ಇವೆ. ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆ ವಿಧಿಸುವ ಪ್ರಯತ್ನಗಳಿಗೆ ಇತ್ತೀಚಿನ ಘಟನೆಗಳಿಂದ ಮತ್ತಷ್ಟು ಬೆಂಬಲ ಸಿಕ್ಕಿದೆಯಾದರೂ ಎಲ್ಲಾ ಜವಾಬ್ದಾರಿಗಳನ್ನು ಕಾನೂನು, ಸರ್ಕಾರಕ್ಕೆ ವಹಿಸಿ ಸುಮ್ಮನಾಗುವ ಬದಲು ಸ್ತ್ರೀಯರೇ ತಮ್ಮ ರಕ್ಷಣೆಗೆ ಒಂದಷ್ಟು ತಯಾರಿ ಮಾಡಿಕೊಂಡರೆ ಬಹುಶಃ ಉಪಯೋಗವಾದೀತು.
ಹೊರಗೆ ಹೋಗುವಾಗ ಆದಷ್ಟು ತಿಳಿದ, ಹೆಚ್ಚು ಜನಸಂಚಾರ ಇರುವ ರಸ್ತೆಗಳನ್ನು ಬಳಸಿ.
ಕತ್ತಲಾದ ಮೇಲೆ ನಿರ್ಜನ ಪ್ರದೇಶಗಳಲ್ಲಿ ಓಡಾಡುವುದಾದರೆ ಎಚ್ಚರ!
ಸಾಧ್ಯವಾದರೆ ಪರಿಚಿತರನ್ನು ಜತೆಯಲ್ಲಿ ಕರೆದುಕೊಂಡು ಹೋಗಿ.. ಒಂಟಿ ಮಹಿಳೆಯರೇ ಅತ್ಯಾಚಾರಿಗಳಿಗೆ ಬಲಿಪಶುಗಳು.
ಪೆಪ್ಪರ್ ಸ್ಪ್ರೇ/ಸಣ್ಣ ಬ್ಲೇಡ್ ಯಾವಾಗಲೂ ನಿಮ್ಮೊಂದಿಗಿರಲಿ.
ಆತ್ಮ ರಕ್ಷಣೆಗಾಗಿ ಕರಾಟೆಯಂಥ ಯಾವುದಾದರೂ ಕಲೆ ಕಲಿತಿದ್ದರೆ ಉತ್ತಮ.
ಕಾರು ಹತ್ತುವ ಮುನ್ನ, ಕಿಟಕಿಗಳಿಂದ ಒಮ್ಮೆ ಒಳಗೆ ಇಣುಕಿ ನೋಡಿ. ಹಿಂದಿನ ಸೀಟಿನಲ್ಲಿ ಬಚ್ಚಿಟ್ಟುಕೊಂಡು, ನಂತರ ಎದ್ದು ಬಂದು ಹೆದರಿಸುವ ಖದೀಮರಿದ್ದಾರೆ ಜೋಕೆ!
ಮನೆಯಲ್ಲಿ ಒಬ್ಬರೇ ಇರುವಾಗ ಎಲ್ಲಾ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ.
ಅಪರಿಚಿತರನ್ನು ಮನೆಯ ಒಳಗೆ ಬಿಟ್ಟುಕೊಳ್ಳಬೇಡಿ.
ಮೊಬೈಲ್ ದೂರವಾಣಿ ಯಾವಾಗಲೂ ಕೈಯಲ್ಲಿರಲಿ. ಅಪಾಯದ ಸಂದರ್ಭದಲ್ಲಿ ಕೂಡಲೇ ಕರೆ ಮಾಡುವಂತೆ ಪೋಲೀಸ್ ಮತ್ತು ಆಪ್ತರ ಸಂಖ್ಯೆಯನ್ನು ಸೇವ್ ಮಾಡಿಟ್ಟುಕೊಳ್ಳಿ.
ಪುಟ್ಟ ಮಕ್ಕಳಿಗೆ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬೇಕೆಂದು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡಿ.
   ಹೀಗೆ ನಮ್ಮ ಜಾಗ್ರತೆಯಲ್ಲಿ ನಾವಿದ್ದರೆ, ಅತ್ಯಾಚಾರವನ್ನು ಪೂರ್ತಿ ನಿಯಂತ್ರಿಸಲಾಗದಿದ್ದರೂ ಬಹುಶಃ ಸ್ವಲ್ಪವಾದರೂ ಕಡಿಮೆ ಮಾಡಬಹುದು.
ಪುರುಷರೂ ಪರಸ್ತ್ರೀಯರನ್ನು ತಮ್ಮ ತಾಯಿ, ಅಕ್ಕ, ತಂಗಿ ಎಂಬ ಭಾವನೆಯಿಂದ ನೋಡಿದರೆ ಮುಂದೊಂದು ದಿನ ಭಾರತ ಅತ್ಯಾಚಾರ ಮುಕ್ತ ರಾಷ್ಟ್ರವಾದೀತು..
-ಶ್ವೇತಾ ಸೂರ್ಯಕಾಂತ್