೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೧೪ - ೨೧೮
Mahāpātaka-naśinī महापातक-नशिनी (214)
೨೧೪. ಮಹಾಪಾತಕ-ನಾಶಿನೀ
ದೇವಿಯು ಮಹಾ ಪಾಪಗಳನ್ನು ನಾಶಪಡಿಸುತ್ತಾಳೆ. ಪಾಪಗಳನ್ನು ಪರಿಹರಿಸುಕೊಳ್ಳುವುದಕ್ಕಾಗಿ ಕೆಲವೊಂದು ನಿಭಂದನೆಗಳಿವೆ. ಪಾಪಗಳು ತಿಳಿದೋ ಅಥವಾ ತಿಳಿಯದೆಯೋ ಘಟಿಸುತ್ತವೆ. ತಿಳಿದೂ ತಿಳಿದೂ ಮಾಡುವ ಪಾಪಗಳಿಗೆ ಪರಿಹಾರವಿಲ್ಲ ಮತ್ತು ಅವುಗಳಲ್ಲಿ ಅತ್ಯಂತ ಘೋರವಾದದ್ದು ಬ್ರಹ್ಮಹತ್ಯಾ ಅಂದರೆ ವೇದಗಳ ಅಂತರಾರ್ಥವನ್ನು ತಿಳಿದವನನ್ನು ಕೊಲೆ ಮಾಡುವುದು. ಇಂತಹ ಪಾಪಕ್ಕೆ ಯಾವುದೇ ಪರಿಹಾರವಿಲ್ಲವೆಂದು ಹೇಳಲ್ಪಟ್ಟಿದೆ. ಇಂತಹ ಪಾಪಕೃತ್ಯಗಳಿಂದ ಒಬ್ಬನ ಪಾಪದ ಖಾತೆಯು ಹಿಗ್ಗುತ್ತದೆ ಮತ್ತು ಅದರ ಪ್ರಕಾರ ಒಬ್ಬನು ಈ ಜನ್ಮದಲ್ಲಾಗಲಿ ಅಥವಾ ಮುಂದಿನ ಜನ್ಮಗಳಲ್ಲಾಗಲಿ ಯಾತನೆಯನ್ನು ಅನುಭವಿಸುವುದು ತಪ್ಪದು. (ಒಬ್ಬನ ಜಾತಕವನ್ನು ಪರಿಶೀಲಿಸಿದಾಗ ಅಂತಹ ಮನುಷ್ಯನಿಗೆ ಅಂತಹ ಕರ್ಮಫಲ ದೋಷಗಳಿವೆಯೇ ಎನ್ನುವುದನ್ನು ತಿಳಿಯಬಹುದಾಗಿದೆ ಅದಕ್ಕಾಗಿ ಅವನ ಜನ್ಮಲಗ್ನದಿಂದ ೫ ಮತ್ತು ೯ನೇ ರಾಶಿಗಳಲ್ಲಿನ ಗ್ರಹಗತಿಗಳನ್ನು ವಿಶ್ಲೇಷಿಸಬೇಕು. ಹಲವಾರು ಪರಿಹಾರೋಪಾಯಗಳು ಸೂಚಿಸಲ್ಪಟ್ಟಿದ್ದರೂ ಕೂಡಾ ಇವೆಲ್ಲವುಗಳಲ್ಲಿ ಅತ್ಯುತ್ತಮವಾದದ್ದು ಯೋಗ್ಯರಾದ ಬಡವರಿಗೆ ಊಟೋಪಚಾರ ನೀಡುವುದು ಮತ್ತು ಉಪವಾಸವಿರುವ ಪ್ರಾಣಿಗಳಿಗೆ ಮೇವು-ನೀರುಗಳನ್ನುಣಿಸುವುದು. ಆದರೆ ಬ್ರಹ್ಮಹತ್ಯಾ ದೋಷಕ್ಕೆ ಪರಿಹಾರವೇ ಇಲ್ಲವೆಂದು ಹೇಳಲಾಗಿದೆ). ಬ್ರಹ್ಮಹತ್ಯೆಯಂತಹ ಪಾತಕಗಳನ್ನು ಮಾಡಿದವನು ಯಾವುದೇ ರೀತಿಯ ಪ್ರಾಯಶ್ಚಿತ್ತ ಕ್ರಿಯೆಗಳನ್ನು ಕೈಗೊಂಡರೂ ಸಹ ಮುಕ್ತಿ ಹೊಂದಲಿಕ್ಕಾಗುವುದಿಲ್ಲ ಅವನು ಆ ಪಾಪದ ಫಲವನ್ನು ಈ ಜನ್ಮದಲ್ಲಾಗಲಿ ಅಥವಾ ಬರುವ ಜನ್ಮಗಳಲ್ಲಾಗಲಿ ಅನುಭವಿಸಿಯೇ ತೀರಬೇಕು. ಈ ನಾಮವು ಈ ರೀತಿಯಾಗಿ ಪರಿಷ್ಕರಿಸಲಾಗದ ಪಾಪಫಲಗಳಿಂದಲೂ ಕೂಡಾ ದೇವಿಯು ತನ್ನ ಭಕ್ತರನ್ನು ಮುಕ್ತಳಾಗಿಸುತ್ತಾಳೆಂದು ತಿಳಿಸುತ್ತದೆ.
Mahā-māyā महा-माया (215)
೨೧೫. ಮಹಾ-ಮಾಯಾ
ಮಾಯೆಯೆಂದರೆ ಭ್ರಮೆ ಮತ್ತು ದೇವಿಯನ್ನು ಮಹಾ-ಮಾಯಾ-ಸ್ವರೂಪಿಣೀ ಎಂದು ಕರೆಯಲಾಗಿದೆ. ಈ ಸಮಸ್ತ ಬ್ರಹ್ಮಾಂಡವು ಮಾಯೆಯ ಆಧೀನಕ್ಕೊಳಪಟ್ಟು ಕಾರ್ಯನಿರ್ವಹಿಸುತ್ತದೆ. ದೇವಿಯು ತನ್ನ ಮಾಯಾ-ಜಾಲವನ್ನು ಈ ಪ್ರಪಂಚದ ಮೇಲೆ ಹರಡದಿದ್ದರೆ ಇಲ್ಲಿ ಯಾವುದೇ ರೀತಿಯಾದ ಚಟುವಟಿಕೆಯು ನಡೆಯುವುದಿಲ್ಲ. ಆಕೆಯ ಮಾಯೆಯು ನಮ್ಮನ್ನು ಬ್ರಹ್ಮವನ್ನು ಅಂದರೆ ಆಕೆಯ ‘ಪ್ರಕಾಶ-ವಿಮರ್ಶಾ-ಮಹಾ-ಮಾಯಾ- ಸ್ವರೂಪಿಣೀ’ ರೂಪವನ್ನು ಅರಸಲು ಪ್ರೇರೇಪಿಸುತ್ತದೆ. ಋಷಿ ಮುನಿಗಳೂ ಕೂಡಾ ಆಕೆಯ ಮಾಯೆಗೆ ಹೊರತಾಗಿಲ್ಲ. ಒಬ್ಬನ ಕರ್ಮಕ್ಕನುಸಾರವಾಗಿ ಮಾಯೆಯ ಪ್ರಭಾವವು ಇರುತ್ತದೆ. ಹ್ರೀಂ (ह्रीं)’ ಬೀಜಾಕ್ಷರವನ್ನು ಮಾಯಾ ಬೀಜವೆಂದು ಕರೆಯಲಾಗಿದೆ (ಹೆಚ್ಚಿನ ವಿವರಗಳಿಗಾಗಿ ಪಂಚದಶೀ ಮಂತ್ರದ ಚರ್ಚೆಯನ್ನು ನೋಡಿ).
ಮಾಯೆಯ ಕುರಿತಾಗಿ ಇನ್ನಷ್ಟು ವಿವರಗಳು:
ಅದ್ವೈತ ತತ್ವದ ಕೆಲವು ಪ್ರತಿಪಾದಕರಿಗೆ ಮಾಯೆ ಮತ್ತು ಅವಿದ್ಯಾ ಎರಡೂ ಒಂದೇ ಆಗಿದೆ. ಆದರೆ ಕೆಲವು ಅದ್ವೈತಿಗಳು ಮಾಯೆಯು ಈಶ್ವರನಿಗೆ ಸಹಾಯಕವಾಗಿದ್ದರೆ, ಅವಿದ್ಯೆಯು ಆತ್ಮನಿಗೆ ಸಹಾಯಕವಾಗಿದೆ ಎಂದು ವಿವರಿಸುತ್ತಾರೆ. ಮಾಯೆಯ ಮುಖ್ಯವಾದ ಕ್ರಿಯೆಯು ಬ್ರಹ್ಮವನ್ನು ವಿವರ್ತಗೊಳಿಸುವುದಾಗಿದೆ (ಹೊರಹೊಮ್ಮಿಸುವುದಾಗಿದೆ) ಮತ್ತದರ ಮೂಲಕ ಬ್ರಹ್ಮಕ್ಕೆ ವಿವಿಧ ಆಕಾರ ಮತ್ತು ರೂಪಗಳು ಉಂಟಾಗಿರುವಂತೆ ತೋರಿಸುವುದೇ ಆಗಿದೆ. ಆದರೆ ಅವಿದ್ಯೆಯು ಮರೆಮಾಚುವುದು ಅಥವಾ ಅಸ್ಪಷ್ಟಗೊಳಿಸುವುದು ಹಾಗೂ ಹೊರಹೊಮ್ಮಿಸುವುದು ಎರಡನ್ನೂ ಮಾಡಬಲ್ಲದು, ಆದರೆ ಮರೆಮಾಚುವುದು ಅದರ ಪ್ರಧಾನ ಕಾರ್ಯವಾಗಿದೆ. ಕೆಲವರ ಪ್ರಕಾರ ಅವಿದ್ಯೆಯು ಆತ್ಮವೆನ್ನುವ ಮೂಲ ವಸ್ತುವಿನ ಮೇಲೆ ಪ್ರತಿಕ್ರಿಯೆ ಉಂಟುಮಾಡುವ ವಸ್ತುವಾಗಿದ್ದರೆ ಮತ್ತೆ ಕೆಲವರ ಪ್ರಕಾರ ಅವಿದ್ಯೆಯು ಬ್ರಹ್ಮದಲ್ಲಿ ನಿವಸಿಸುತ್ತದೆ. ಮಾಯಾ ಶಬ್ದವನ್ನು ’ಮಾ’ ಅಂದರೆ ಮಾಪನ ಮಾಡು ಅಥವಾ ಅಳೆ ಎನ್ನುವ ಮೂಲದಿಂದ ನಿಷ್ಪತ್ತಿಗೊಳಿಸಬಹುದು. ಮಾಯೆಯ ಪರಿಣಾಮದಿಂದಾಗಿ ಅನಂತವಾಗಿರುವ ಬ್ರಹ್ಮವು ಅಳೆಯಬಹುದಾದದ್ದು ಎನ್ನುವಂತೆ ಕಾಣುತ್ತದೆ. ’ಮಾ’ ಎನ್ನುವ ಮೂಲವು ಸಂಪೂರ್ಣ ಭ್ರಾಮಕ ಸ್ಥಿತಿಯಡೆಗೆ ಕೊಂಡೊಯ್ಯುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಮಾಯಾ ಎನ್ನುವ ಶಬ್ದವನ್ನು ’ಮಾ’ ಮತ್ತು ’ಯಾ’ ಎನ್ನುವ ಎರಡು ಶಬ್ದಗಳಾಗಿ ವಿಭಜಿಸಿದರೆ ಅದು ’ಮಾ’ ಎಂದರೆ ಇಲ್ಲದಿರುವುದು ಮತ್ತು ’ಯಾ’ ಇದ್ದಂತಿರುವುದು ಎನ್ನುವ ಅರ್ಥವನ್ನು ಕೊಡುತ್ತದೆ.
ಮಾಯೆಯನ್ನು ಬ್ರಹ್ಮದ ಗುಣವಾದ ಶಕ್ತಿಯೆಂದೂ ಪರಿಗಣಿಸುತ್ತಾರೆ. ಬ್ರಹ್ಮವು ಖಚಿತವಾಗಿ ಗುಣರಹಿತವಾಗಿದ್ದು ಅದನ್ನು ನಿರ್ಗುಣ ಬ್ರಹ್ಮವೆಂದು ಕರೆಯಲಾಗಿದೆ, ಆದರೆ ಮಾಯೆಯ ಕೋನದಿಂದ ನೋಡಿದಾಗ ಅದು ಸಗುಣ ಬ್ರಹ್ಮ ಅಥವಾ ಗುಣಗಳಿಂದ ಕೂಡಿದ್ದಾಗಿದೆ. ಇಂದ್ರಜಾಲವನ್ನು ಪ್ರದರ್ಶಿಸುವವನು ತನ್ನ ಮಾಂತ್ರಿಕ ಶಕ್ತಿಯಿಂದ ಹಲವಾರು ವಸ್ತುಗಳು ಇಲ್ಲದಿದ್ದರೂ ಇರುವಂತೆ ತೋರ್ಪಡಿಸುತ್ತಾನೆ; ಅವನಿಗೆ ಅವನ್ನು ಸೃಷ್ಟಿ ಮಾಡುವ ಶಕ್ತಿಯಿಲ್ಲದಿದ್ದರೂ ಕೂಡಾ. ಅದೇ ರೀತಿ ಮಾಯೆಯನ್ನೊಳಗೊಂಡ ಬ್ರಹ್ಮವು ಈ ಪ್ರಪಂಚವು ಇದೆ ಎಂದು ಭ್ರಮಿಸುವಂತೆ ಮಾಡುತ್ತದೆ ಮತ್ತು ವಾಸ್ತವದಲ್ಲಿ ಈ ಜಗತ್ತು ಇಲ್ಲ. ಮನಸ್ಸಿನ ಹಿಂದಿರುವ ಆತ್ಮಕ್ಕೆ ಸಂಭಂದಿಸಿದ ಬಾಹ್ಯ ವಸ್ತುಗಳಿಂದಾಗಿ ಈ ಪ್ರಪಂಚವು ಇರುವಂತೆ ಕಾಣುತ್ತದೆ ಮತ್ತು ಇದು ಕೇವಲ ಆತ್ಮದ ಮಾಯೆಯ ಹೊರಹೊಮ್ಮುವಿಕೆ/ವಿವರ್ತವಾಗಿದೆ.
Mahā-sattvā महा-सत्त्वा (216)
೨೧೬. ಮಹಾ-ಸತ್ವಾ
ಸತ್ವವು ತ್ರಿಗುಣಗಳಲ್ಲಿ ಒಂದಾಗಿದೆ, ಉಳಿದೆರಡು ರಜೋ ಮತ್ತು ತಮೋ ಗುಣಗಳಾಗಿವೆ. ಈ ಮೂರರಲ್ಲಿ ಸತ್ವಗುಣವು ಶ್ರೇಷ್ಠವಾದದ್ದು. ಈ ಗುಣವು ಒಬ್ಬ ಮನುಷ್ಯನಲ್ಲಿ ಪ್ರಧಾನವಾಗಿದ್ದಾರೆ ಅವನು ತಿಳಿದೋ ಅಥವಾ ತಿಳಿಯದೆಯೋ ಪಾಪ ಕೃತ್ಯಗಳನ್ನು ಎಸಗುವುದು ಸಾಧ್ಯವಿಲ್ಲ. ಈ ರೀತಿಯಾದ ವ್ಯಕ್ತಿಗಳನ್ನು ದೇವಿಯು ತನ್ನ ವಿಶೇಷ ಕೃಪೆಯನ್ನು ಹರಿಸಲು ಆರಿಸಿಕೊಳ್ಳುತ್ತಾಳೆ. ದೇವಿಯನ್ನು ಸತ್ವಗುಣದ ಲಕ್ಷಣಗಳ ಮೂರ್ತರೂಪವೆಂದು ಕರೆಯಲಾಗಿದೆ ಅವೆಂದರೆ ವಾಸ್ತವತೆಯನ್ನು ಅರಿಯುವುದು, ಧನಾತ್ಮಕ ಶಕ್ತಿಯನ್ನು ಸ್ವಯಂ ತನ್ನಿಂದಲೇ ಹೊರಹೊಮ್ಮಿಸುವುದು, ಧನಾತ್ಮಕ ತರಂಗಗಳ ಮೂಲಕ ಮಾನಸಿಕ ಮತ್ತು ದೈಹಿಕ ಬಲಗಳನ್ನು ಹೆಚ್ಚಿಸುವುದು ಮೊದಲಾದವು.
Mahā-śaktiḥ महा-शक्तिः (217)
೨೧೭. ಮಹಾ-ಶಕ್ತಿಃ
ಶಕ್ತಿಯೆಂದರೆ ಬಲ ಮತ್ತು ತನ್ನ ಸಾತ್ವಿಕ ಗುಣದಿಂದಾಗಿ ದೇವಿಗೆ ಅತ್ಯುನ್ನತವಾದ ಶಕ್ತಿಯಿದ್ದು ಅದರಿಂದ ಆಕೆಯು ಈ ಜಗತ್ತನ್ನು ನಿಯಂತ್ರಿಸುತ್ತಾಳೆ. ಈ ಪ್ರಪಂಚವು ಕೇವಲ ಬ್ರಹ್ಮದ ಶಕ್ತಿಯಿಂದಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಗ್ರಹಗಳನ್ನು ಸ್ವಸ್ಥಾನದಲ್ಲಿರುಸುವ ಗುರುತ್ವಾಕರ್ಷಣ ಬಲ; ಇದರಿಂದಾಗಿ ಒಂದಕ್ಕೊಂದು ಡಿಕ್ಕಿಯಾಗಿ ಪ್ರಳಯವಾಗದಂತೆ ನಿವಾರಿಸುತ್ತದೆ. ಆದ್ದರಿಂದ ದೇವಿಯು ತನ್ನ ಪರಮೋನ್ನತ ಬಲದಿಂದ ಈ ಬ್ರಹ್ಮಾಂಡವನ್ನು ಚಲನೆಯಲ್ಲಿಟ್ಟಿದ್ದಾಳೆ.
Mahā-ratiḥ महा-रतिः (218)
೨೧೮. ಮಹಾ-ರತಿಃ
ದೇವಿಯು ತನ್ನ ಭಕ್ತರಿಗೆ ಅತ್ಯಂತ ಸಂತೋಷ ಮತ್ತು ಆನಂದವನ್ನುಂಟು ಮಾಡುತ್ತಾಳೆ. (ರತಿ ಎಂದರೆ ನಲಿವು, ಅನುಭವಿಸು, ಸಂತೋಷಿಸು, ಆನಂದಗೊಳ್ಳು, ಇಷ್ಟಪಡು, ಭೋಗಿಸು, ಅನುಭವಿಸು, ಮೊದಲಾದ ಅರ್ಥಗಳಿವೆ). ಇದು ಆಕೆಗೆ ಸಾಧ್ಯವಿದೆ ಏಕೆಂದರೆ ದೇವಿಗೆ ಈ ರೀತಿಯಾದ ನಿಗೂಢವಾದ ಶಕ್ತಿಗಳಿದ್ದು ಆಕೆಯು ಆನಂದ ಮತ್ತು ಸಂತೋಷಗಳನ್ನುಂಟು ಮಾಡಬಲ್ಲಳು. ದೇವಿಯು ಮಂಗಳಕರ ವಸ್ತುಗಳ ಸ್ವರೂಪವಾಗಿದ್ದು ಆಕೆಯ ರೂಪ, ತೇಜಸ್ಸು, ಗುಣಗಳು ಮತ್ತು ಆಕೆಯ ಮಮತೆ (ಏಕೆಂದರೆ ಆಕೆ ಜಗನ್ಮಾತೆಯಲ್ಲವೇ?) ಮೊದಲಾದವುಗಳೆಲ್ಲಾ ಆಕೆಯನ್ನು ಪ್ರಾಮಾಣಿಕವಾಗಿ ಆರಾಧಿಸುವವರ ಸಂತೋಷಕ್ಕೆ ದಾರಿಮಾಡಿ ಕೊಡುತ್ತವೆ. ಇದಕ್ಕೆ ಇನ್ನೊಂದು ಕಾರಣವೂ ಇದೆ ಅದೆಂದರೆ ಶಿವನು ತನ್ನ ಮಂಗಳವನ್ನುಂಟು ಮಾಡುವ ಗುಣಕ್ಕೆ ಹೆಸರು ವಾಸಿಯಾಗಿದ್ದಾನೆ. ಮತ್ತು ಆತನ ಹೆಂಡತಿಯ ಶುಭತನದಿಂದ ತುಂಬಿದ್ದು ಯಾವಾಗಲೂ ಅವನೊಂದಿಗೆ ಇರುತ್ತಾಳೆ. ಸಹಸ್ರನಾಮದ ೯೯೮ನೇ ನಾಮವು ಶ್ರೀ ಶಿವಾ ಅಂದರೆ ಮಂಗಳೆ ಅಥವಾ ಶುಭಪ್ರದಳೆಂದು ಅರ್ಥ ಮತ್ತು ೫೩ನೇ ನಾಮವು ಶಿವಾ ಆಗಿದೆ.
******
Comments
ಶ್ರೀಧರರೆ, ಲಲಿತಾ ಸಹಸ್ರನಾಮ ೨೧೪
ಶ್ರೀಧರರೆ, ಲಲಿತಾ ಸಹಸ್ರನಾಮ ೨೧೪ - ೨೧೮, ಅವಗಾಹನೆ / ಪರಿಷ್ಕರಣೆಗೆ ಸಿದ್ದ - ನಾಗೇಶ ಮೈಸೂರು :-)
೨೧೪. ಮಹಾಪಾತಕ-ನಾಶಿನೀ
ತಿಳಿದು ಮಾಡುವ ಪಾಪ ಬಿಡದ ಜನ್ಮ ಕ್ಲೇಷ
ಪರಿಹಾರವಿಲ್ಲದ ಪಾಪ ಬ್ರಹ್ಮಹತ್ಯಾ ದೋಷ
ಜನ್ಮಾಂತರ ಬೆನ್ನಟ್ಟಿ ಕಾಡುವ ಕರ್ಮಫಲದನಿ
ಭಕ್ತಗೆ ಮುಕ್ತಿ ನೀಡೊ ಮಹಾ ಪಾತಕ ನಾಶಿನಿ!
೨೧೫. ಮಹಾ-ಮಾಯಾ
ಮಾಯೆಯೆ ಭ್ರಮೆ ಅಧೀನದಲೆ ಜಗಕಾರ್ಯ ನಿರ್ವಹಣೆ
ದೇವಿ ಮಹಾ ಮಾಯಾ ಹರಡಿದ ಮಾಯಾಜಾಲ ತಾನೆ
ಕರ್ಮ ಲೆಕ್ಕಾಚಾರ ಬಿಡದೆ ಋಷಿ ಮುನಿಗಳನೂ ಮಾಯೆ
ಮಹಾ ಮಾಯ ಸ್ವರೂಪಿಣೀ ರೂಪವರಸುವಾ ಪ್ರೇರೇಪಣೆ!
ಮಾಯೆಯ ಕುರಿತಾಗಿ ಇನ್ನಷ್ಟು ವಿವರಗಳು :
ಈಶ್ವರ ಸಂಗಾತಿ ಮಾಯೆ ಆತ್ಮ ಸಹಾಯಕ ಅವಿದ್ಯಾ
ಮಾಯೆಯಕ್ರಿಯೆ ಬ್ರಹ್ಮ ನಾನಾಕಾರ ರೂಪದಿ ಪ್ರಕಟ
ಮರೆಮಾಚಿಸುವಾ ಅವಿದ್ಯ ಹೊಮ್ಮಿಸಲಿದ್ದರು ಸಾಧ್ಯತೆ
ಅನಂತವಳೆವ ಭ್ರಮೆ ಇದ್ದೂ ಇರದಾ ದಿಗ್ಬ್ರಮೆ ಮಾಯೆ!
ಗುಣರಹಿತ ನಿರ್ಗುಣ ಬ್ರಹ್ಮವ ಸಗುಣವಾಗಿಸಿ ಮಾಯೆ
ವಾಸ್ತವದಲಿರದ ಜಗವೂ ಇದ್ದಂತೆ ಭ್ರಮಿಸುವ ಛಾಯೆ
ಆತ್ಮದ ಮಾಯೆಯಷ್ಟೆ ಬ್ರಹ್ಮದ ಗುಣವಾದ ಸಗುಣ ಶಕ್ತಿ
ಇರದಿದ್ದೆಲ್ಲವು ಕಾಣೊ ಇಂದ್ರಾಜಾಲ ಪ್ರದರ್ಶನದ ರೀತಿ!
೨೧೬. ಮಹಾ-ಸತ್ವಾ
ತ್ರಿಗುಣಗಳಲೆ ಶ್ರೇಷ್ಠ ಸತ್ವ ಎಸಗಿಸದು ಪಾಪಕೃತ್ಯ
ಸತ್ವಗುಣ ಲಕ್ಷಣದ ಮೂರ್ತರೂಪವಾಗಿ ಶ್ರೀಲಲಿತ
ಇದ್ದವ ವಾಸ್ತವವರಿತ ಧನಾತ್ಮಕತೆ ಸ್ವಯಂನುರಿತ
ಶಕ್ತಿ ತರಂಗ ಹೆಚ್ಚಿಸೆ ಬಲ ಮಹಾ-ಸತ್ವಾ ಕೃಪಾನ್ವಿತ!
೨೧೭. ಮಹಾ-ಶಕ್ತಿಃ
ದೇವಿ ಪರಮೋನ್ನತ ಬಲ ಬ್ರಹ್ಮಾಂಡವೆ ಸುಸ್ಥಿತಿ
ಗುರುತ್ವಾಕರ್ಷಣೆ ಬಲ ಗ್ರಹ ಸ್ವಸ್ಥಾನದೆ ಪ್ರಸ್ತುತಿ
ಸಾತ್ವಿಕ ಬಲ ಅಪರಿಮಿತ ಶಕ್ತಿ ಜಗ ನಿಯಂತ್ರಿತ
ಬ್ರಹ್ಮಮಹಾಶಕ್ತಿಃ ದೇವಿ ಪ್ರಪಂಚ ಕಾರ್ಯನಿರತ!
೨೧೮. ಮಹಾ-ರತಿಃ
ನಿಗೂಢ ಶಕ್ತಿ ಅಗಣಿತ ಭಕ್ತರಿಗೆ ಆನಂದಾ ಸಂತಸ
ಮಾತೆ ಮಂಗಳಕರ ಸ್ವರೂಪ ಆರಾಧಕನಿಗೆ ಹರ್ಷ
ಮಂಗಳಕಾರಕ ಶಿವನಿಗೆ ಶುಭಕರೀ ಸತಿ ಲಲಿತಾ
ಪ್ರಾಮಾಣಿಕ ಆರಾಧಕರಿಗೆ ಮಹಾರತಿಃ ಹರಸುತ!
In reply to ಶ್ರೀಧರರೆ, ಲಲಿತಾ ಸಹಸ್ರನಾಮ ೨೧೪ by nageshamysore
೨೧೪ರಿಂದ ೨೧೮ ನಾಮಗಳ ಕಾವ್ಯಗಳ
೨೧೪ರಿಂದ ೨೧೮ ನಾಮಗಳ ಕಾವ್ಯಗಳ ಕುರಿತು
ನಾಗೇಶರೆ,
ಮಾಯೆಯ ಇನ್ನಷ್ಟು ವಿವರಗಳ ಕುರಿತಾದ ಕಾವ್ಯಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ. ಈ ಕಂತಿನಲ್ಲಿ ಯಾವುದೇ ವಿಧವಾದ ದೋಷಗಳು ಕಂಡುಬರಲಿಲ್ಲ. ಆದರೆ ಒಂದೇ ಒಂದು ಅನುಮಾನ ಅದು ಹೀಗಿದೆ:
೨೧೪. ಮಹಾಪಾತಕ-ನಾಶಿನೀ
;
;
ಜನ್ಮಾಂತರ ಬೆನ್ನಟ್ಟಿ ಕಾಡುವ ಕರ್ಮಫಲದನಿ
ಕರ್ಮಫಲದನಿ = ಪದವೇನೋ ಪ್ರಾಸಕ್ಕೆ ಸರಿಹೊಂದುತ್ತದೆ ಆದರೆ ಇದರ ಪ್ರಯೋಗ ಸಾಧುವೇ ಎನ್ನುವುದೇ ಆ ಅನುಮಾನ.
...................
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ೨೧೪ರಿಂದ ೨೧೮ ನಾಮಗಳ ಕಾವ್ಯಗಳ by makara
ಶ್ರೀಧರರೆ, ಕರ್ಮಫಲ ಒಂದು ರೀತಿಯ
ಶ್ರೀಧರರೆ, ಕರ್ಮಫಲ ಒಂದು ರೀತಿಯ ಅಂತರಾತ್ಮದ ದನಿಯಾಗಿ ಬಿಡದೆ ಕಾಡುತ್ತದೆ ಎನ್ನುವರ್ಥದಲ್ಲಿ 'ದನಿ' ಬಳಸಿದ್ದೆ. ಮತ್ತೊಂದು ಸಾಧ್ಯತೆಯಾಗಿ 'ನೀಗಿ' ಪದದ ಬಳಕೆ ಸೂಕ್ತವಾದೀತೆಂದು ಕಾಣುತ್ತದೆಯಲ್ಲವೆ? ಇದು ಸರಿ ಕಂಡರೆ ಈ ಕೆಳಗಿನ ಆವೃತ್ತಿಯನ್ನು ಉಳಿಸಿಕೊಳ್ಳೋಣ - ಮೈಸೂರು ನಾಗೇಶ
೨೧೪. ಮಹಾಪಾತಕ-ನಾಶಿನೀ
ತಿಳಿದು ಮಾಡುವ ಪಾಪ ಬಿಡದ ಜನ್ಮ ಕ್ಲೇಷ
ಪರಿಹಾರವಿಲ್ಲದ ಪಾಪ ಬ್ರಹ್ಮಹತ್ಯಾ ದೋಷ
ಜನ್ಮಾಂತರ ಬೆನ್ನಟ್ಟಿ ಕಾಡೊ ಕರ್ಮಫಲ ನೀಗಿ
ಭಕ್ತಗೆ ಮುಕ್ತಿ ನೀಡೊ ಮಹಾ ಪಾತಕ ನಾಶಿನಿ!
In reply to ಶ್ರೀಧರರೆ, ಕರ್ಮಫಲ ಒಂದು ರೀತಿಯ by nageshamysore
ಉ: ೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ
ಶ್ರೀಧರರೆ, 63ನೆ ಕಂತಿನಲ್ಲಿ ಒಂದು ಸಣ್ಣ ಪರಿಷ್ಕರಣೆ ಬಾಕಿಯಿದೆ, ನೀವು ಅದನ್ನು ನೋಡಿಬಿಟ್ಟರೆ ಅಂತಿಮ ಕೊಂಡಿಯನ್ನು ಕೊಟ್ಟುಬಿಡಬಹುದೆಂದು ಕಾಣುತ್ತದೆ - ನಾಗೇಶ ಮೈಸೂರು
In reply to ಉ: ೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ by nageshamysore
ಉ: ೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ
ನಾಗೇಶರೆ,
ಮೊನ್ನೆ ಓದಿದಾಗ ಸ್ವಲ್ಪ ಗೊಂದಲವೆನಿಸಿದ್ದರಿಂದ ಏನನ್ನೂ ಉತ್ತರಿಸದೆ ಬದಿಗಿಟ್ಟಿದ್ದೆ. ನೀವು ಈಗ ಪರಿಷ್ಕರಿಸಿರುವುದೇ ಅಂತಿಮವಾಗಲಿ ಮತ್ತು ಕೊಂಡಿಯನ್ನು ಕೊಡಿ.
In reply to ಉ: ೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ by makara
ಉ: ೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ
ಶ್ರೀಧರರೆ, ೨೧೪. ಮಹಾಪಾತಕ-ನಾಶಿನೀ ಪರಿಷ್ಕರಿಸಿದ ರೂಪ ಮತ್ತು ಅಂತಿಮ ಕೊಂಡಿ - ನಾಗೇಶ ಮೈಸೂರು
೨೧೪. ಮಹಾಪಾತಕ-ನಾಶಿನೀ
ತಿಳಿದು ಮಾಡುವ ಪಾಪ ಬಿಡದ ಜನ್ಮ ಕ್ಲೇಷ
ಪರಿಹಾರವಿಲ್ಲದ ಪಾಪ ಬ್ರಹ್ಮಹತ್ಯಾ ದೋಷ
ಜನ್ಮಾಂತರ ಬೆನ್ನಟ್ಟಿ ಕಾಡೊ ಕರ್ಮಫಲ ನೀಗಿ
ಭಕ್ತಗೆ ಮುಕ್ತಿ ನೀಡೊ ಮಹಾ ಪಾತಕ ನಾಶಿನಿ!
ಅಂತಿಮ ಕೊಂಡಿ:
aMtima koMDi:
https://ardharaatria...
In reply to ಉ: ೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ by nageshamysore
ಉ: ೬೩. ಶ್ರೀ ಲಲಿತಾ ಸಹಸ್ರನಾಮ ೨೧೪ರಿಂದ ೨೧೮ನೇ ನಾಮಗಳ ವಿವರಣೆ
ನಾಗೇಶರೆ, ಓಕೆ.