ಅಸಂಗತತೆ..!

ಅಸಂಗತತೆ..!

 

 
 
 
 
ಕರಿ ಬಯಲಾಗಿದೆ ಎಲ್ಲಾ
ಚಿಂಕರ ತಾತಾ
ಇರಬೇಕಿತ್ತಲ್ಲಾ ಹಸಿರು..
ಕಪ್ಪುಬಿಳಿ ಗಡ್ಡದ ತೊಗಲಡಿ
ಭಾವಗಳ ಬಸಿರು?
 
ನಕ್ಕು ಮಿಂಚಿದ ಹಲ್ಲಿಗು ಬೆಳಕು
ಏನೆಲ್ಲಾ ಥಳಕೂ ಬಳಕು
ಇಷ್ಟೆ ಅಗಲ ಇಷ್ಟೆ ಉದ್ದಕೆ
ತುಟಿ ಮುಚ್ಚೊ ಬಿಚ್ಚೊ ಲೆಕ್ಕಾಚಾರ
ತಾತಾ ಯಾಕೊ ಅಸಂಗತ!
 
ಜ್ವರ ಬೆಚ್ಚಿಸಿದ ಮೈಯನು ಮುಟ್ಟಿ
ಹೋರಾಡಿದ ಶರೀರದ ಜಟ್ಟಿಗೆ
ಯುದ್ಧ ಮಾಡಲು ಬಿಡದೆ ಮಂಜು
ಸುರಿದಾಗಿಸೊ ತಣ್ಣನೆ ಪಂಜಿಗೆ
ಅಸಂಕರ ತಾತಾ ಚಿಂಕರ..!
 
ಗುಡಿಸಲ ಹೊಟ್ಟೆ ಸೋಮಾರಿಯಾಗಿ
ಭವ್ಯ ಕಟ್ಟಡಗಳೆ ಬುಗುಬುಗುರಿ ಚಿಗುರಿ
ಕೊಳಚೆ ಕಮಲವೆಂದೆ ನಗುವ ಚಿತ್ರಕೆ
ಹೇಳಿಕೊಂಡು ನಗಲ್ಯಾರ ಹತ್ತಿರ?
ಹಸಿವಲೆಸೆದನ್ನವೆ ತಾತ ಭಯಂಕರ!
 
ಪ್ರಗತಿಯ ತಾಯತಿ ಹಿಡಿದು ಬಂದರು
ಬಗಲಲಿ ಖಾಲಿ ಜೋಳಿಗೆ ಭಾರ
ತಂದರೊ ತಿಂದರೊ ತಿನಿಸಿದರೊ ಒಗಟೆ;
ಸ್ವಂತ ಕಾಲಲೆ ನಿಲದೀ ಪ್ರಗತಿ ಬಟ್ಟೆ
ತುಂಬಿಸಲಿದೆಯೆ ಭವಿತದ ಹೊಟ್ಟೆ?
 
ಪ್ರಗತಿ ಹೆಸರನೆ ಪ್ರಗತಿಸುವ ಪ್ರಗತಿ
ಮುಚ್ಚಿಟ್ಟೀತೆ ಒಣಕೆಮ್ಮಿನಧೋಗತಿ ತಾತ
ಪ್ರಗತಿಸಿವೆ ಹೆಸರಲಿ ದರ ದರ ಬೆಲೆ
ಹಿಡಿಯನ್ನಾ ಮಣ್ಣು ಹೊನ್ನು ಮಿಂಚಿನ ಶೂಲೆ
ಏರಬೇಕಿತ್ತಲ್ಲವೆ ಮಟ್ಟ ಬೆಲೆಯಿಳಿಸುತ್ತ ಅಕಟಾ!
 
ಮುಳುಗುವ ಹಡಗಿಂದ ಓಡುವ ಇಲಿಗಳೆ ಹೆಚ್ಚು
ತಂದು ಹಾಕಿದ ದುಡ್ಡು ಧರ್ಮಕಲ್ಲ, ಲಾಭದ ಪಟ್ಟು
ತಂದು ತಿನ್ನುವ ಸುಖ ಬದಿಗಿಟ್ಟು ಇಲ್ಲೆ ಹುಡುಕುತ
ಸಾಲ ಸರ್ವಜ್ಞನ ನೆನೆದು ಸಾಲ ಕೊಡುವ ತವಕ
ಪ್ರಭುತ್ವಕೆ ಬಂದೀತೆ ಸಂಗತ, ಹೇಳು ಚಿಂಕರ ತಾತ!
 

- ನಾಗೇಶ ಮೈಸೂರು

Comments

Submitted by nageshamysore Fri, 07/12/2013 - 07:09

ಅಸಂಗತ ಕವನ ಓದಿದ ಗೆಳೆಯ ಸುರೇಶ ಭಟ್ಟರು, ಈ ಕವನದ ಹಿನ್ನಲೆ ವಿವರಿಸಲು ಕೇಳಿದರು. ನಾನು ವಿವರಿಸಿದ ನಂತರ ಆ ವಿವರಣೆ ಕವನದ ಜತೆಗೆ ಇದ್ದರೆ ಚೆನ್ನಿತ್ತೆಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಅದೆ ರೀತಿಯ ಅನುಮಾನವಿರುವ ಉಳಿದವರಿಗೂ ಸಹಾಯವಾದೀತೆಂಬ ಅನಿಸಿಕೆಯಿಂದ ಇಲ್ಲೆ ಪ್ರತಿಕ್ರಿಯೆಯ ರೂಪದಲ್ಲಿ ಆ ವಿವರಣೆಯನ್ನು ಸೇರಿಸುತ್ತಿದ್ದೇನೆ -ನಾಗೇಶ ಮೈಸೂರು ಸಾರಾಂಶ:ಏನನ್ನೊ, ಯಾವುದನ್ನೊ ಬೆನ್ನು ಹತ್ತಿದ ವಿವೇಚನಾರಹಿತ ಓಟದ ಹಲವು ತುಣುಕುಗಳ ಸಂಕ್ಷಿಪ್ತ ಚಿತ್ರಣ ಈ ಕವನ. ಅದೆ ಭ್ರಮೆಯ ಜಗದಲ್ಲಿ ಭಾವನಾತ್ಮಕತೆಯ ತುಡಿತಗಳೆಲ್ಲ ಯಾಂತ್ರಿಕತೆಯ ಮಾಯಾಜಾಲದಲ್ಲಿ ಕರಗಿ ಮಾಯವಾಗುತ್ತಿರುವ ಕುರಿತಾದ ಅಸಹಾಯಕತೆಯ ಹತಾಶೆ ಇಲ್ಲಿ ಅಂತರ್ಗತ ಭಾವ. ಚಿಂಕರ ತಾತ ಇಲ್ಲಿ ಪರಂಪರೆಯ ಜೀವಂತಿಕೆ ಮತ್ತು ಸಾಂಪ್ರದಾಯಿಕತೆ, ಬೌದ್ದಿಕ ಪ್ರಬುದ್ಧತೆಯ ಸಂಕೇತವಾಗಿ ಬದಲಾವಣೆಯ ಪರಿಣಾಮಗಳ ಮೂಕ ಸಾಕ್ಷಿ. ಅವನಿಗೆ ಈ ಜಗದ ಕಥೆಯನ್ನೆಲ್ಲ ಆತಂಕ, ಹತಾಶೆಯಲ್ಲಿ ಹೇಳುತ್ತಾ ಹೋಗುವ ಹತಾಶ ಆಧುನಿಕ ಪ್ರಜ್ಞೆಗೆ ಎಷ್ಟು ಗೊಂದಲವೆಂದರೆ - ಕಂಡ ಪ್ರತಿ ವಿಷಯವು ಅಸಂಗತವಾಗಿಯೆ ಕಾಣುತ್ತದೆ. ನಕ್ಕಾಗ ತುಟೀ ಎಷ್ಟು ತೆರೆದಿರಬೇಕು, ಎಷ್ಟು ಮುಚ್ಚಿರಬೇಕು ಎಂದು ನಿಯಮಾವಳಿಯಿಡುವ ಏರಲೈನ್ಗಳ ಕೃತಕತೆಯಿಂದ ಹಿಡಿದು, ಪ್ರಗತಿಯ , ಬೆಳವಣಿಗೆಯ ಕುರಿತ ಭ್ರಮನಿರಸನ; ವಿದೇಶಿ ನೇರ ಬಂಡವಾಳದ ಹತಾಶೆ - ಅವಕಾಶವಾದಿತನ; ಜಡ್ಡಾದಾಗ ಮೈ ಬಿಸಿಯೇರಿಸಿ ಸ್ವಾಭಾವಿಕವಾಗಿ ಹೋರಾಟ ನಡೆಸುವ ದೇಹದ ನಿಯಂತ್ರಣ ವ್ಯವಸ್ಥೆಯನ್ನು ಕೆಲಸ ಮಾಡಲು ಬಿಡದೆ, ಆ ಜ್ವರದ ಇಂಗಿಸುವಿಕೆಗೆ ವೈದ್ಯರತ್ತ ಓಡುವ ಹತಾಶೆ-ಅವಸರ; ಲಾಭಕ್ಕಷ್ಟೆ ಬಂಡವಾಳ ಹೂಡಿ ದೋಚಲೆಣಿಸುವ, ದೋಣಿ ತೂತೆಂದರೆ ಮೊದಲು ಕಾಲ್ತೆಗೆಯುವ ಬಂಡವಾಳಶಾಹಿ ಹೂಡಿಕೆದಾರ ಜಗ; ಕಾಂಕ್ರೀಟು ಕಾಡುಗಳಡಿ ಹಸಿರೆಲ್ಲಾ ಹೂತು, ಕೊಳೆಗೇರಿಯ ನಡುವೆಯೆದ್ದು ಕಾಣುವ ಕಟ್ಟಡಗಳೆ ಕೆಸರಿನ ಕಮಲದಂತೆ ಪರಿಭಾವಿಸಲ್ಪಡುವ ವಿಪರ್ಯಾಸ - ಹೀಗೆ ಹಲವು ವಿಭಿನ್ನ ದ್ವಂದ್ವಗಳ ಕಲಬೆರೆಕೆಯ ಗೊಂದಲ, ಅಳುಕುಗಳನ್ನು ಭೂತ ಮತ್ತು ವರ್ತಮಾನದ ಹೊದರಿನ ಜತೆಗೆ,ಅತಂತ್ರವೊ ಅಲ್ಲವೊ ಎಂದರಿವಾಗದ ಭವಿತದ ಅಳುಕಿನೊಂದಿಗೆ ಮಿಳಿತಗೊಳಿಸಿ ಬಿಚ್ಚಿಡುವ ತಾತ ಮೊಮ್ಮಕ್ಕಳ ಸಂಭಾಷಣೆ. ಮೌನದಲ್ಲೆ ಎಲ್ಲಾ ಕೇಳುತ್ತಿರುವ ಪರಂಪರೆಗೆ (ತಾತ) ಈಗಿನ ವಾಸ್ತವ (ಮೊಮ್ಮಗ) ಹಲುಬುತ್ತಾ, ಈಗ ಎದುರಿಸುತ್ತಿರುವ ಸಮಸ್ಯೆಗೂ, ಅಳವಡಿಸಿಕೊಳ್ಳುತ್ತ ನಡೆದಿರುವ ಪರಿಹಾರಕ್ಕೂ ಯಾವುದೆ ತಾಳಮೇಳವಾಗಲಿ, ಹೊಂದಾಣಿಕೆಯಾಗಲಿ ಕಾಣದೆ, ಬರಿ ಅಸಂಬದ್ದತೆ, ವಿರೂಪಗಳೆ ಎದ್ದು ಕಾಣಿಸುತ್ತಿದೆ , ಎಲ್ಲಾ ಅಸಂಗತವಾಗಿಯೆ ಕಾಣುತ್ತಿದೆ ಎಂದು ಗೋಳಿಡುವ ಚಿತ್ರಣ ಈ ಕವನದಲ್ಲಿದೆ. ಒಟ್ಟಾರೆ ಪರಂಪರೆಯ ಮೂಕಸಾಕ್ಷಿ ಮೌನ ಮತ್ತು ವಾಸ್ತವದ ನರಳಾಟದ ಪ್ರಲಾಪ ಭವಿಷ್ಯದ ದಿಗ್ಬ್ರಮೆಯ ನೆರಳಾಗಿ ಕಾಡುತ್ತವೆ. .