೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೨೯ - ೨೩೪
Mahāsanā महासना (229)
೨೨೯. ಮಹಾಸನಾ
ದೇವಿಗೆ ಮಹತ್ತರವಾದ ಆಸನವಿದೆ ಎನ್ನುವುದು ಈ ನಾಮದ ಶಬ್ದಶಃ ಅರ್ಥ, ಆದರೆ ಆಕೆಯ ಆಸನವು ಮೂವತ್ತಾರು ತತ್ವಗಳನ್ನು ಒಳಗೊಂಡಿದೆ. ದೇವಿಯ ಭೌತಿಕ ಆಸನದ ಬಗ್ಗೆ ಮೂರನೇ ನಾಮದಲ್ಲಿ ಚರ್ಚಿಸಲಾಗಿದೆ.
೩೬ ತತ್ವಗಳ ಕುರಿತು ಹೆಚ್ಚಿನ ವಿವರಣೆ:
೧,೨,೩,೪ ಇವುಗಳು ಕ್ರಮವಾಗಿ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಇವನ್ನು ಒಟ್ಟಾಗಿ ‘ಅಂತಃಕರಣ’ ಎಂದು ಕರೆಯುತ್ತಾರೆ. ೫,೬,೭,೮,೯ -ಇವು ನಾವು ಸಾಮಾನ್ಯವಾಗಿ ಪಂಚೇಂದ್ರಿಯಗಳೆಂದು ಕರೆಯುವ ಗ್ರಹಣೇಂದ್ರಿಯ/ಜ್ಞಾನೇಂದ್ರಿಯಗಳು - ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು. ೧೦,೧೧,೧೨,೧೩,೧೪, ಇವುಗಳು ತನ್ಮಾತ್ರೆಗಳು ಅಥವಾ ಪಂಚೇಂದ್ರಿಯಗಳಿಂದ ಗುರುತಿಸಲ್ಪಡುವ ವಿಷಯಗಳು - ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧ. ೧೫,೧೬,೧೭,೧೮,೧೯ ಇವು ಕ್ರಮವಾಗಿ ಐದು ಕರ್ಮೇಂದ್ರಿಯಗಳು - ಬಾಯಿ, ಕಾಲುಗಳು, ಕೈಗಳು, ವಿಸರ್ಜನಾಂಗ ಮತ್ತು ಜನನಾಂಗ. ಕರ್ಮೇಂದ್ರಿಯಗಳಿಂದ ಉಂಟಾಗುವ ಕರ್ಮಗಳು ಅಥವಾ ಕ್ರಿಯೆಗಳು ೨೦,೨೧,೨೨,೨೩,೨೪ಗಳು ಕ್ರಮವಾಗಿ - ವಾಕ್ (ಮಾತು), ಚಲನೆ, ಹಿಡಿತ, ವಿಸರ್ಜನೆ ಮತ್ತು ಸಂತಾನೋತ್ಪತ್ತಿ. ೧ ರಿಂದ ೨೪ನೇ ತತ್ವಗಳನ್ನು ಆತ್ಮ ತತ್ವಗಳೆಂದು ಕರೆಯುತ್ತಾರೆ. ೨೫, ೨೬, ೨೭, ೨೮, ೨೯, ೩೦, ೩೧ ಇವು ಕ್ರಮವಾಗಿ ಕಾಲ (ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳು), ನಿಯತಿ (ಅನುಕ್ರಮಣಿಕೆ - ನಿಯಮಾನುಸಾರ ನೆಡೆಯುವ ಕ್ರಿಯೆ), ಕಲಾ (ಕ್ರಿಯೆಯನ್ನು ಪ್ರೇರೇಪಿಸುವುದು), ವಿದ್ಯಾ (ಬುದ್ಧಿಯನ್ನು ಪ್ರಚೋದಿಸುವುದು), ರಾಗ (ಕಾಮನೆ), ಪುರುಷ (ಆತ್ಮ), ಮಾಯಾ (ಭ್ರಮೆ, ಅವಿದ್ಯೆಯನ್ನುಂಟು ಮಾಡುತ್ತದೆ). ೨೫ರಿಂದ ೩೧ನೇ ತತ್ವಗಳನ್ನು ವಿದ್ಯಾ ತತ್ವಗಳೆಂದು ಕರೆಯುತ್ತಾರೆ. ೩೨,೩೩,೩೪,೩೫,೩೬ ಇವುಗಳು ಕ್ರಮವಾಗಿ ಶುದ್ಧವಿದ್ಯಾ (ಇದು ಬುದ್ಧಿಗಿಂತ ಹೆಚ್ಚು ಕ್ರಿಯೆಯನ್ನು ಪ್ರೇರೇಪಿಸುತ್ತದೆ), ಈಶ್ವರ (ಇದು ಕ್ರಿಯೆಗಿಂತ ಹೆಚ್ಚು ಬುದ್ಧಿಯನ್ನು ಪ್ರಚೋದಿಸುತ್ತದೆ), ಸದಾಶಿವ (ಇದು ಬುದ್ಧಿ ಮತ್ತು ಕ್ರಿಯೆಗಳನ್ನು ಸಮಾನ ಪ್ರಮಾಣಗಳಲ್ಲಿ ಪ್ರಚೋದಿಸುತ್ತದೆ), ಶಕ್ತೀ (ಕ್ರಿಯೆಯನ್ನು ಪ್ರಚೋದಿಸುತ್ತದೆ), ಶಿವ (ಶುದ್ಧ ಜ್ಞಾನವನ್ನು ಪ್ರೇರೇಪಿಸುತ್ತದೆ ಅಥವಾ ಉಂಟು ಮಾಡುತ್ತದೆ).
Mahā- yāga-kramārādhyā महा-याग-क्रमाराध्या (230)
೨೩೦. ಮಹಾ-ಯಾಗ-ಕ್ರಮಾರಾಧ್ಯಾ
ಅರವತ್ನಾಲ್ಕು ಯೋಗಿನಿಯರನ್ನು (ದೇವಿಗೆ ಸಹಾಯಕರಾಗಿರುವ ಉಪದೇವತೆಗಳನ್ನು) ಪೂಜಿಸುವುದನ್ನು ಮಾಹಾ-ಯಾಗವೆನ್ನುತ್ತಾರೆ ಮತ್ತು ಇದನ್ನು ಕ್ರಮಬದ್ಧವಾಗಿ ಕೈಗೊಂಡರೆ ಶೀಘ್ರ ಫಲಗಳು ದೊರೆಯುತ್ತವೆ. ಈ ವಿಧವಾದ ಪೂಜೆಯು ತಂತ್ರ ಶಾಸ್ತ್ರದ ನವಾವರಣ ಪೂಜೆಯ ಅಡಿಯಲ್ಲಿ ಬರುತ್ತದೆ.
ಶ್ರೀ ಚಕ್ರದಲ್ಲಿ ಎಂಟು ಆವರಣಗಳಿದ್ದು ಒಂದೊಂದು ಆವರಣದಲ್ಲಿಯೂ ಒಬ್ಬೊಬ್ಬ ಯೋಗಿನಿಯು ಉಪಸ್ಥಿತಳಿರುತ್ತಾಳೆ ಮತ್ತು ಪ್ರತಿಯೊಂದು ಯೋಗಿನಿಗೂ ಏಳು ಜನ ಸಹಾಯಕರಿರುತ್ತಾರೆ, ಹಾಗಾಗಿ ಒಟ್ಟಿನಲ್ಲಿ ಎಂಟು ಆವರಣಗಳಿಂದ ೬೪ ಯೋಗಿನಿಯರಿರುತ್ತಾರೆ. ಯೋಗಿನಿಯರೆಂದರೆ ಶಿವ ಮತ್ತು ಶಕ್ತಿಯರಿಗೆ ಪರಿಚಾರಿಕಿಯರಾಗಿರುವ ಉಪದೇವತೆಗಳು. ಇದಕ್ಕೆ ಇನ್ನೊಂದು ರೀತಿಯಾದ ವ್ಯಾಖ್ಯಾನವೂ ಇದೆ ಅದರ ಪ್ರಕಾರ ಭೈರವನಿಗೆ ಎಂಟು ವಿಧವಾದ ರೂಪಗಳಿವೆ ಅವನ್ನು ಅಷ್ಟ ಭೈರವರೆನ್ನುತ್ತಾರೆ ಮತ್ತು ಅವರ ಸಂಗಾತಿಗಳನ್ನು ಅಷ್ಟ ಮಾತೆಯರೆನ್ನುತ್ತಾರೆ ಮತ್ತು ಇವರಿಬ್ಬರಿಂದ ೬೪ ಭೈರವರು ಮತ್ತು ೬೪ಯೋಗಿನಿಯರು ಜನ್ಮ ತಳೆಯುತ್ತಾರೆ.
ಭಾವನೋಪನಿಷತ್ತು ದೇವಿಯ ಮಾನಸಿಕ ಪೂಜೆಯ ಕ್ರಮವನ್ನು ಅನುಮೋದಿಸುತ್ತದೆ ಮತ್ತು ಅದನ್ನೂ ಕೂಡಾ ಮಹಾ-ಯಾಗ ಎಂದು ಕರೆಯುತ್ತಾರೆ. ಯಾಗವೆಂದರೆ ಸಾಮಾನ್ಯವಾಗಿ ಅಗ್ನಿಯಿಂದ ಕೂಡಿದ ಆಚರಣೆಗಳು ಅಥವಾ ನವಾವರಣ ಪೂಜೆ; ಎಲ್ಲಾ ಅಗ್ನಿ ಸಂಭಂದಿತ ಆಚರಣೆಗಳನ್ನು ಯಾಗವೆಂದು ಕರೆಯುವುದಿಲ್ಲ ಎನ್ನುವುದನ್ನೂ ಗಮನಿಸಿ. ಕ್ರಮವೆಂದರೆ ಚಲನೆ, ಗತಿ, ಅಥವಾ ಪಥ; ಆದ್ದರಿಂದ ಈ ನಾಮವು ದೇವಿಯು ಕ್ರಮಬದ್ಧವಾಗಿ ನವಾವರಣ ಪೂಜೆಯಿಂದ ಆರಾಧಿಸಲ್ಪಡುತ್ತಾಳೆ ಎಂದು ತಿಳಿಸುತ್ತದೆ. ಆದರೆ ಈ ನಾಮದ ಗೂಡಾರ್ಥವೇನೆಂದರೆ ದೇವಿಯು ಭಾವನೋಪನಿಷತ್ತಿನಲ್ಲಿ ಪ್ರಚುರಪಡಿಸಿರುವಂತೆ ಮಾನಸಿಕವಾಗಿ ಪೂಜಿಸಲ್ಪಡುತ್ತಾಳೆ.
ಅರವತ್ನಾಲ್ಕು ಯೋಗಿನಿಯರ ಹೆಸರುಗಳು ಈ ರೀತಿಯಾಗಿ ಇವೆ (ಇವು ಗ್ರಂಥದಿಂದ ಗ್ರಂಥಕ್ಕೆ ಭಿನ್ನವಾಗಿವೆ):
೧. ಬ್ರಹ್ಮಾಣಿ, ೨. ಚಂಡಿಕಾ, ೩. ರೌದ್ರೀ, ೪. ಗೌರಿ, ೫. ಇಂದ್ರಾಣೀ, ೬. ಕೌಮಾರೀ, ೭.ಭೈರವೀ, ೮. ದುಸ್ಗಾ (ದುರ್ಗಾ?), ೯. ನಾರಸಿಂಹೀ, ೧೦. ಕಾಳಿಕಾ, ೧೧. ಚಾಮುಂಡಾ, ೧೨. ಶಿವ-ದೂತೀ, ೧೩. ವಾರಾಹೀ, ೧೪. ಕೌಶಿಕೀ, ೧೫. ಮಹಾ-ಈಶ್ವರೀ, ೧೬. ಶಂಕರೀ, ೧೭. ಜಯಂತಿ, ೧೮. ಸರ್ವ-ಮಂಗಲಾ, ೧೯. ಕಾಳಿ, ೨೦. ಕರಾಲಿನಿ, ೨೧. ಮೇಧಾ, ೨೨.ಶಿವಾ, ೨೩.ಶಾಕಂಬರೀ, ೨೪. ಭೀಮಾ, ೨೫. ಶಾಂತಾ, ೨೬. ಭ್ರಮರೀ, ೨೭. ರುದ್ರಾಣಿ, ೨೮. ಅಂಬಿಕಾ, ೨೯. ಕ್ಷಮಾ, ೩೦.ಧಾತ್ರಿ, ೩೧. ಸ್ವಾಹಾ, ೩೨.ಸ್ವಾಧಾ, ೩೩.ಪರ್ಣಾ, ೩೪. ಮಹೋದರೀ ೩೫.ಘೋರ-ರೂಪಾ, ೩೬.ಮಹಾ-ಕಾಳಿ, ೩೭. ಭದ್ರಕಾಳಿ, ೩೮. ಕಪಾಲಿನಿ, ೩೯. ಕ್ಷೇಮಕರಿ, ೪೦.? ೪೧. ಚಂದ್ರಾ ೪೨. ಚಂದ್ರಾವಳಿ, ೪೩.ಪ್ರಪಂಚಾ, ೪೪.ಪ್ರಳಯಾಂತಿಕಾ ೪೫. ಪಿಚುವಕ್ತ್ರಾ ೪೬. ಪಿಶಾಚಿ ೪೭. ಪ್ರಿಯಂಕರಿ, ೪೮. ಬಾಲ-ವಿಕ್ರಮೀ, ೪೯. ಬಾಲ-ಪ್ರಮಂಥನಿ, ೫೦.ಮದನ-ಉನ್ಮಂಥನಿ ೫೧.ಸರ್ವ-ಭೂತ-ದಮನಿ, ೫೨.ಉಮಾ, ೫೩.ತಾರಾ, ೫೪.ಮಹಾ-ನಿದ್ರಾ, ೫೫.ವಿಜಯಾ, ೫೬.ಶೈಲ-ಪುತ್ರೀ, ೫೭. ಜಯಂತಿ, ೫೯. ದುಸ್ಜಯಾ, ೬೦. ಜಯಂತಿಕಾ, ೬೧. ಬಿದಾಳಿ, ೬೨.ಕೂಷ್ಮಾಂಡೀ, ೬೩. ಕಾತ್ಯಾಯನಿ, ೬೪. ಮಹಾಗೌರಿ.
Mahā-bhairava-pūjitā महा-भैरव-पूजिता (231)
೨೩೧. ಮಹಾ-ಭೈರವ-ಪೂಜಿತಾ
ದೇವಿಯು ಮಹಾ ಭೈರವನಿಂದ ಪೂಜಿಸಲ್ಪಡುತ್ತಾಳೆ; ಭೈರವ ಎಂದರೆ ಪರಮೋನ್ನತ ಸತ್ಯ. ಭೈರವ ಶಬ್ದವು ಮೂರು ಅಕ್ಷರಗಳಾದ, ಭ+ರ+ವ ಗಳನ್ನು ಒಳಗೊಂಡಿದೆ. ಭ ಎಂದರೆ ಭರಣ; ಭರಿಸುವುದು ಅಥವಾ ಪರಿಪಾಲಿನೆಯ ಕ್ರಿಯೆ; ರ ಎಂದರೆ ರವಣ; ಹಿಂದೆಗುದುಕೊಳ್ಳುವಿಕೆ ಅಥವಾ ಲಯವಾಗಿಸುವಿಕೆ; ಮತ್ತು ವ ಎಂದರೆ ವರಣ; ಅನಾವರಣ ಅಥವಾ ಸೃಷ್ಟಿ ಕ್ರಿಯೆ. ಈ ಮೂರೂ ಕ್ರಿಯೆಗಳು ಬ್ರಹ್ಮಕ್ಕೆ ಸಂಬಂಧಿಸಿದ್ದಾಗಿವೆ ಎನ್ನುವುದನ್ನು ನೆನಪಿನಲ್ಲಿಡಿ. ಭೈರವವು ಶಿವನ ಒಂದು ರೂಪವಾಗಿದ್ದು ಇದನ್ನು ಪರಮೋನ್ನತ ರೂಪವೆಂದು ಪರಿಗಣಿಸಲಾಗಿದೆ ಏಕೆಂದರೆ ಈ ರೂಪವು ಅವನ ‘ಪ್ರಕಾಶ’ ಮತ್ತು ‘ವಿಮರ್ಶ’ ರೂಪಗಳ ಸಮ್ಮಿಲನವಾಗಿದೆ (ಪ್ರಕಾಶವು ಸ್ವಯಂ ಆಗಿ ಹೊಳೆಯುವುದು ಮತ್ತು ವಿಮರ್ಶವು ಆ ಬೆಳಕಿನಿಂದ ಇಡೀ ಬ್ರಹ್ಮಾಂಡವನ್ನು ಅನಾವರಣಗೊಳಿಸುತ್ತದೆ). ಇದನ್ನೇ ಇನ್ನೊಂದು ವಿಧವಾಗಿ ಹೇಳಬೇಕೆಂದರೆ, ಭೈರವ ರೂಪವು ಶಿವ ಮತ್ತು ಶಕ್ತಿಯರ ಅಥವಾ ಭೈರವ-ಭೈರವಿಯರ ಐಕ್ಯರೂಪವಾಗಿದೆ ಮತ್ತು ಈ ಬ್ರಹ್ಮಾಂಡದ ಸಮಸ್ತ ವಿಷಯಗಳು ಮತ್ತು ವಸ್ತುಗಳು ಭೈರವ ಮತ್ತು ಭೈರವಿಯರ ಐಕ್ಯರೂಪ ಮಾತ್ರವೊಂದರಿಂದಲೇ ಉದ್ಭವಿಸುತ್ತವೆ; ಇದನ್ನೇ ಶಿವ-ಶಕ್ತಿಯರ ಐಕ್ಯ ರೂಪವೆನ್ನುತ್ತಾರೆ (೯೯೯ನೇ ನಾಮವು ಶಿವ-ಶಕ್ತ್ಯೈಕ್ಯ-ರೂಪಿಣೀ ಆಗಿದೆ).
Maheśvara-mahākalpa-mahātāṇḍava-sakṣiṇī महेश्वर-महाकल्प-महाताण्डव-साक्षिणी (232)
೨೩೨. ಮಹೇಶ್ವರ-ಮಹಾಕಲ್ಪ-ಮಹಾತಾಂಡವ-ಸಾಕ್ಷಿಣೀ
ಶಿವನು ಮಹಾಕಲ್ಪದ (ಮಹಾಪ್ರಳಯದ) ಸಮಯದಲ್ಲಿ ಉಘ್ರವಾಗಿ ನಾಟ್ಯ ಮಾಡುತ್ತಾನೆ ಮತ್ತು ಶಿವನ ಈ ಭೀಕರ ಕ್ರಿಯೆಗೆ ಸಾಕ್ಷಿಯಾಗಿ ದೇವಿಯ ಹೊರತಾಗಿ ಮತ್ತ್ಯಾರಿಗೂ ಅವನ ಸುತ್ತಮುತ್ತಲೂ ಇರಲು ಸಾಧ್ಯವಿಲ್ಲ. ಮಹಾಪ್ರಳಯವೆಂದರೆ ಇಡೀ ಬ್ರಹ್ಮಾಂಡವು ತನ್ನ ಅಸ್ತಿತ್ವವನ್ನು (ಇರುವಿಕೆಯನ್ನು) ಕಳೆದುಕೊಳ್ಳುತ್ತದೆ ಮತ್ತು ಆಗ ಶಿವ ಮತ್ತು ಶಕ್ತಿಯರ ಹೊರತಾಗಿ ಮತ್ತೇನೂ ಉಳಿಯದು. ಇದನ್ನೇ ಬ್ರಹ್ಮನ ನಾಲ್ಕನೇ ಕ್ರಿಯೆಯೆಂದು ಕರೆಯುತ್ತಾರೆ; ಉಳಿದ ಮೂರು ಸೃಷ್ಟಿ, ಸ್ಥಿತಿ ಮತ್ತು ಲಯಗಳಾಗಿವೆ. ಲಯ ಮತ್ತು ಪ್ರಳಯಗಳಿಗಿರುವ ವ್ಯತ್ಯಾಸವು ಗಮನಿಸ ತಕ್ಕದ್ದಾಗಿದೆ; ಲಯವೆಂದರೆ ಆತ್ಮದ ರೂಪಾಂತರ ಅಂದರೆ ಆತ್ಮವು ಒಂದು ದೇಹವನ್ನು ತ್ಯಜಿಸಿ ಇನ್ನೊಂದು ದೇಹವನ್ನು ಸೇರುತ್ತದೆ. ಆದರೆ ಪ್ರಳಯವಾದಾಗ ಏನೂ ಉಳಿದಿರುವುದಿಲ್ಲ. ಶಕ್ತಿಯ ಉಪಸ್ಥಿತಿಯಲ್ಲಿ ಎಲ್ಲವೂ ಶಿವನೊಳಗೆ ಲೀನವಾಗಿ ಹೋಗುತ್ತದೆ ಮತ್ತವಳು ಈ ಮಹಾಪ್ರಳಯಕ್ಕೆ ಅಥವಾ ಮಹಾಕಲ್ಪಕ್ಕೆ ಸಾಕ್ಷಿಯಾಗುತ್ತಾಳೆ.
ಕೆಲವೊಂದು ಗ್ರಂಥಗಳಲ್ಲಿ ಕಾಳರಾತ್ರಿಯನ್ನು ಶಿವನ ಹೆಂಡತಿಯಗಿ ಉಲ್ಲೇಖಿಸಲಾಗಿದೆ. ಕಾಳರಾತ್ರೀ ದೇವಿಯು ವಿನಾಶಕಳೂ ಹಾಗೂ ರಕ್ಷಕಳು ಎರಡೂ ಆಗಿದ್ದಾಳೆ. ಆಕೆಯ ಮಂತ್ರವು ಅತ್ಯಂತ ಶಕ್ತಿಯುತವಾದದ್ದೆಂದು ಪರಿಗಣಿಸಲ್ಪಟ್ಟಿದ್ದು ಅದು ಕ್ಷಿಪ್ರವಾಗಿ ಫಲಗಳನ್ನು ಕೊಡುತ್ತದೆ.(ಕಾಳರಾತ್ರಿಯ ಹೆಚ್ಚಿನ ವಿವರಗಳನ್ನು ೪೯೧ನೇ ನಾಮದಲ್ಲಿ ನೋಡೋಣ).
Mahā-kāmeśa-mahiṣī महा-कामेश-महिषी (233)
೨೩೩. ಮಹಾ-ಕಾಮೇಶ-ಮಹಿಷೀ
ಮಹಾ ಕಾಮೇಶ್ವರನ ಸಂಗಾತಿಯು ಮಹಾ ಕಾಮೇಶ್ವರೀ ಆಗಿದ್ದಾಳೆ. ಮಹಿಷಿ ಎಂದರೆ ರಾಣಿ; ಇಲ್ಲಿ ದೇವಿಯು ಶಿವನ ರಾಣಿಯಾಗಿದ್ದಾಳೆ. ವಾಕ್ ದೇವಿಗಳು ಘೋರವಾದ ಪ್ರಳಯವನ್ನು ವಿವರಿಸಿದ ನಂತರ ತಕ್ಷಣವೇ ಮಂಗಳಕರವಾದ ವಿಷಯವೊಂದನ್ನು ಹೆಸರಿಸುತ್ತಾರೆ ಅದುವೇ ಲಲಿತಾಂಬಿಕೆಯ ಕಾಮೇಶ್ವರೀ ರೂಪವಾಗಿದೆ. ಆದರೆ ಈ ‘ಕಾಮೇಶ್ವರೀ’ ಯಾರು ಎನ್ನುವುದನ್ನು ಮುಂದಿನ ನಾಮವು ಉತ್ತರಿಸುತ್ತದೆ.
Mahā-tripura-sundarī महा-त्रिपुर-सुन्दरी (234)
೨೩೪. ಮಹಾ-ತ್ರಿಪುರ-ಸುಂದರೀ
ದೇವಿಯನ್ನು ಮೂರು ಲೋಕಗಳಲ್ಲಿಯೇ ಬಹು ಸುಂದರವಾದ ಸ್ತ್ರೀ ಎಂದು ವರ್ಣಿಸಲಾಗಿದೆ. ಈ ಮೂರು ಲೋಕಗಳೇ ಗಾಯತ್ರೀ ಮಂತ್ರದ ವ್ಯಾಹೃತಿಗಳು (ಭೂಃ, ಭುವಃ, ಸುವಃ). ಸಾಧಕನಿಗೆ, ತ್ರಿಪುರ ಸುಂದರೀ ಹಂತದ ಪ್ರಾಮುಖ್ಯತೆ ಏನೆಂದರೆ ಇಲ್ಲಿ ಜ್ಞಾತೃ, ಜ್ಞಾನ, ಜ್ಞೇಯ; ಮೂರೂ ಐಕ್ಯವಾಗಿ ಒಂದೇ ವಸ್ತುವಾಗುತ್ತದೆ ಅದುವೇ ಬ್ರಹ್ಮವಾಗಿದೆ, ಅದನ್ನೇ ಆತ್ಮ ಸಾಕ್ಷಾತ್ಕಾರವೆನ್ನುವುದು. ದೇವಿಯು ಎಲ್ಲಾ ವಸ್ತುಗಳನ್ನು ‘ತ್ರಿದಶ’ ಅಥವಾ ಮೂರು ಆಯಾಮಗಳಿರುವಂತೆ ಸೃಷ್ಟಿಸುತ್ತಾಳೆ ಎನ್ನುವುದನ್ನು ನೆನಪಿಡಿ.
******
Comments
ಶ್ರೀಧರರೆ, ಲಲಿತಾ ಸಹಸ್ರನಾಮ ೨೨೯
ಶ್ರೀಧರರೆ, ಲಲಿತಾ ಸಹಸ್ರನಾಮ ೨೨೯ - ೨೩೪ ಪರಿಷ್ಕರಣೆ / ಅವಗಾಹನೆಗೆ ಸಿದ್ದ :-) - ನಾಗೇಶ ಮೈಸೂರು
ಲಲಿತಾ ಸಹಸ್ರನಾಮ ೨೨೯ - ೨೩೪
೨೨೯. ಮಹಾಸನಾ
ಜಗಕೊಡತಿಯಾದವಳು ಏರಿದ ಸಿಂಹಾಸನ
ಮಹತ್ತರವದೆ ಸಹಜ ಬ್ರಹ್ಮಾಂಡ ಮಹಾಸನ
ಭೌತಿಕತೆ ಮೀರಿದ ಮಹತ್ವ ಮುವ್ವತ್ತಾರು ತತ್ವ
ದೇವಿ ಮಹಾಸನಾಂತರ್ಗತ ಆಸನರೂಪೆ ಸತ್ವ!
೨೩೦. ಮಹಾ-ಯಾಗ-ಕ್ರಮಾರಾಧ್ಯಾ
ಯೋಗಿನಿಯರರವತ್ನಾಲ್ಕು ಲಲಿತೆಗೆ ಉಪದೇವತೆಗಳು
ಮಾಹಾ ಯಾಗ ಕ್ರಮಬದ್ದಪೂಜೆ ಶೀಘ್ರ ಫಲದಾಯಿಗಳು
ಶ್ರೀಚಕ್ರ ಅಷ್ಟಾವರಣದೆ ಯೋಗಿನಿ ಸಪ್ತ ಉಪ-ಯೋಗಿನಿ
ಮಾನಸಿಕದಲೆ ಮಹಾಯಾಗ ದೇವಿ ನವಾವರಣವಾಸಿನಿ!
೨೩೧. ಮಹಾ-ಭೈರವ-ಪೂಜಿತಾ
ಶಿವ ಪರಮೋನ್ನತ ರೂಪ ಭೈರವ ಪ್ರಕಾಶ ವಿಮರ್ಶ ಸಮ್ಮಿಲನ
ಪರಮೋನ್ನತ ಸತ್ಯ ಅಡಕಾ ಭರಣ ರವಣ ವರಣ ಕ್ರಿಯಾಮನ
ಸ್ಥಿತಿ ಲಯ ಸೃಷ್ಟಿ ಬ್ರಹ್ಮಕ್ರಿಯಾಭೈರವನೆ ಶಿವಶಕ್ತಿ ಸಮಾರೋಪ
ಬ್ರಹ್ಮಾಂಡದೆಲ್ಲ ಉಧ್ಭವ ದೇವಿ ಮಹಾಭೈರವ ಪೂಜಿತೈಕ್ಯರೂಪ!
೨೩೨. ಮಹೇಶ್ವರ-ಮಹಾಕಲ್ಪ-ಮಹಾತಾಂಡವ-ಸಾಕ್ಷಿಣೀ
ಮಹಾಕಲ್ಪ ಮಹಾಪ್ರಳಯ ಬ್ರಹ್ಮಾಂಡ ಕಳುವಾಗುವ ಸಮಯ
ಬ್ರಹ್ಮದ ನಾಲ್ಕನೆ ಕ್ರಿಯಾವಿಸ್ಮಯ ಉಳಿಕೆ ಬರಿ ಶಿವಶಕ್ತಿ ಮಯ
ಶಿವನಲೆಲ್ಲಾ ಲೀನ ಶಕ್ತಿಯ ಹೊರತಾರೂ ಕಾಣದ ಬ್ರಹ್ಮ ಸ್ವಗತ
ಮಹೇಶ್ವರ ಮಹಾಕಲ್ಪ ಮಹಾತಾಂಡವ ಸಾಕ್ಷಿಣೀ ಬರಿ ಲಲಿತಾ!
೨೩೩. ಮಹಾ-ಕಾಮೇಶ-ಮಹಿಷೀ
ಮಹೇಶ್ವರ ಶಿವನಲ್ಲವೆ ಮಹಾ ಕಾಮೇಶ್ವರ ರೂಪ
ದೇವಿ ಶಿವನರಾಣಿ ಮಹಾಕಾಮೇಶ್ವರೀ ಸಹರೂಪ
ಘೋರಪ್ರಳಯಾಂತರದೆ ಮಂಗಳಕರ ವಾಗ್ವೈಖರಿ
ವಾಕ್ದೇವಿ ಪಠಿಸುತೆ ಲಲಿತಾಂಬಿಕೆಯೆ ಕಾಮೇಶ್ವರೀ!
೨೩೪. ಮಹಾ-ತ್ರಿಪುರ-ಸುಂದರೀ
ಅಖಿಲಾಂಡ ತ್ರೈಲೋಕ್ಯ ಸುಂದರಿ ದೇವಿ ಏಕಮೇವಾದ್ವಿತೀಯ
ಭೂಃ ಭುವಃ ಸುವಃ ವಾಹೃತಿ ಮೂಲೋಕಕೂ ಸುಂದರಸ್ತ್ರೀಯ
ಅಂತರ್ಗತ ಜ್ಞಾತೃ ಜ್ಞಾನ ಜ್ಞೇಯ ಏಕ ವಸ್ತುವಾಗಿ ಬ್ರಹ್ಮದೈಕ್ಯ
ತ್ರಿದಶಾಯಾಮಸೃಷ್ಟಿ ಆತ್ಮಸಾಕ್ಷಾತ್ಕಾರಸಂಭ್ರಮ ಸೌಂದರ್ಯ!
೩೬ ತತ್ವಗಳ ಕುರಿತು ಹೆಚ್ಚಿನ ವಿವರಣೆ: (೨೨೯. ಮಹಾಸನಾ )
ಅಂತಃಕರಣಗಳೆ ಮೊದಲಾ ನಾಲ್ವರ
ಮನಸು ಬುದ್ಧಿ ಚಿತ್ತ ಸೇರೆ ಅಹಂಕಾರ
ಮುಂದಿನೈವರದೆ ಜ್ಞಾನೇಂದ್ರಿಯಗಳು
ಕಿವಿ ಕಣ್ಣು ಚರ್ಮ ನಾಲಿಗೆ ಮೂಗುಗಳು
ಪಂಚೇಂದ್ರಿಯಾ ಗ್ರಹಿಸಲೈದು ತನ್ಮಾತ್ರೆ
ಶಬ್ದ ಸ್ಪರ್ಷ ರೂಪ ರಸ ಗಂಧದ ಪಾತ್ರೆ!
ಹದಿನಾಲ್ಕೆಆಗ್ಹತ್ತೊಂಬತ್ತೆ ಕರ್ಮೇಂದ್ರಿಯ
ಜನನ ವಿಸರ್ಜನ ಕಾಲ್ಬಾಯಿ ಜತೆ ಕೈಯ
ಜೋಡಿಸೆ ಮತ್ತೈದು ಕರ್ಮ ಕ್ರಿಯಾ ಫಲಿತ
ಸಂತಾನ ವಿಸರ್ಜನೆ ಚಲನೆ ಮಾತ ಹಿಡಿತ
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದಾಗಿಸುವ ವಿದ್ಯ!
ಇಪ್ಪತ್ತೈದೂ ಕಾಲ ಭೂತ ಭವಿತ ವರ್ತಮಾನ
ಇಪ್ಪತ್ತಾರೆ ನಿಯತಿ ನಿಯಮಾನುಸಾರಗಮನ
ಕ್ರಿಯೆಯ ಪ್ರೇರೇಪಿಸಿ ಕಲಾ ಇಪ್ಪತ್ತೇಳನೆ ತತ್ವ
ಬುದ್ಧಿಯ ಪ್ರಚೋದನೆ ವಿದ್ಯಾ ಇಪ್ಪತ್ತೆಂಟೆ ಸತ್ವ
ರಾಗದಕಾಮನೆ ಮೂವ್ವತ್ತನೇ ಪುರುಷದ ಆತ್ಮ
ಅವಿದ್ಯೆ ಭ್ರಮೆ ಮಾಯಾ ಮುವ್ವತ್ತೊಂದನೆತತ್ವ!
ಬುದ್ಧಿಗು ಹೆಚ್ಚು ಕ್ರಿಯೆ ಪ್ರೇರೇಪಿತಾ ಶುದ್ಧ ವಿದ್ಯಾ
ಕ್ರಿಯೆಗೂ ಹೆಚ್ಚು ಬುದ್ಧಿ ಪ್ರಚೋದಾ ಈಶ್ವರ ತತ್ವ
ಬುದ್ದಿ ಕ್ರಿಯೆ ಸಮಾನ ಪ್ರಮಾಣವೇ ಸದಾಶಿವತ್ವ
ಮೂವ್ವತ್ತೆರಡರಿಂದ ಮುವ್ವತ್ನಾಲ್ಕು ತತ್ವದಮಹತ್ವ
ಕ್ರಿಯೆ ಪ್ರಚೋದಿಸಿ ಶಕ್ತೀ ಶುದ್ಧ ಜ್ಞಾನವಾಗಿ ಶಿವತ್ವ
ಮುವ್ವತೈದು ಮುವ್ವತ್ತಾರನೆ ತತ್ವಗಳಾಗಿ ಸಾಂಗತ್ಯ!
In reply to ಶ್ರೀಧರರೆ, ಲಲಿತಾ ಸಹಸ್ರನಾಮ ೨೨೯ by nageshamysore
೨೨೯ರಿಂದ ೨೩೪ನೇ ನಾಮಗಳ
೨೨೯ರಿಂದ ೨೩೪ನೇ ನಾಮಗಳ ಪರಿಷ್ಕರಣೆಗಳ ಕುರಿತು. ಕೆಳಗಿನವುಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ನಾಗೇಶರೆ.
೨೩೨. ಮಹೇಶ್ವರ-ಮಹಾಕಲ್ಪ-ಮಹಾತಾಂಡವ-ಸಾಕ್ಷಿಣೀ
ಮಹಾಕಲ್ಪ ಮಹಾಪ್ರಳಯ ಬ್ರಹ್ಮಾಂಡ ಕಳುವಾಗುವ ಸಮಯ
ಕಳುವಾಗುವ=ಲಯವಾಗುವ ಸೂಕ್ತ ಶಬ್ದ ಎನಿಸುತ್ತದೆ. ನಾಗೇಶರೆ, ನಿಮ್ಮ ಉದ್ದೇಶ ಅರ್ಥವಾಯಿತು, ಕಳೆದುಹೋಗುವ ಎನ್ನುವುದನ್ನು ಕಾವ್ಯಾತ್ಮಕವಾಗಿ ಹಿಡಿದಿಡಲು ಕಳುವಾಗುವ ಎಂದು ಬರೆದಿದ್ದೀರ; ಆದರೆ ನಿಮ್ಮ ಮೂಲ ಆಶಯಕ್ಕೆ ಇದರಿಂದ ದಕ್ಕೆ ಬರುತ್ತಾದ್ದರಿಂದ ಲಯವಾಗುವ/ಮುಳುಗುವ ರೀತಿಯ ಶಬ್ದಗಳನ್ನು ಬಳಸಿದರೆ ಒಳ್ಳೆಯದೇನೋ?
ಉಳಿದಂತೆ ಕೆಳಗಿನ ಮೂರು ಸಾಲುಗಳು ಬಹಳ ಚೆನ್ನಾಗಿ ವಿಶ್ಲೇಷಣೆಯ ಸಾರವನ್ನು ಕೊಡುತ್ತವೆ.
ಬ್ರಹ್ಮದ ನಾಲ್ಕನೆ ಕ್ರಿಯಾವಿಸ್ಮಯ ಉಳಿಕೆ ಬರಿ ಶಿವಶಕ್ತಿ ಮಯ
ಶಿವನಲೆಲ್ಲಾ ಲೀನ ಶಕ್ತಿಯ ಹೊರತಾರೂ ಕಾಣದ ಬ್ರಹ್ಮ ಸ್ವಗತ
ಮಹೇಶ್ವರ ಮಹಾಕಲ್ಪ ಮಹಾತಾಂಡವ ಸಾಕ್ಷಿಣೀ ಬರಿ ಲಲಿತಾ!
೩೬ ತತ್ವಗಳ ಕುರಿತು ಹೆಚ್ಚಿನ ವಿವರಣೆ: (೨೨೯. ಮಹಾಸನಾ )
ಮೊದಲನೇ ಪಂಕ್ತಿ
ಅಂತಃಕರಣಗಳೆ ಮೊದಲಾ ನಾಲ್ವರ
ಮನಸು ಬುದ್ಧಿ ಚಿತ್ತ ಸೇರೆ ಅಹಂಕಾರ
ಈ ಮೇಲಿನ ಸಾಲುಗಳು ಸ್ವಲ್ಪ ವಿರುದ್ಧಾರ್ಥ ಕೊಡುತ್ತವೇನೋ ಎನಿಸುತ್ತಿದೆ. ಏಕೆಂದರೆ ಮನೋ,ಬುದ್ಧಿ, ಚಿತ್ತಹಂಕಾರಗಳು ಸೇರಿ ಅಂತಃಕರಣವಾಗುತ್ತವೆ. ಮುಂದಿನ ಸಾಲುಗಳಲ್ಲಿ ಯಾವುದೇ ಬದಲಾವಣೆ ಬೇಕಿಲ್ಲವೆನಿಸುತ್ತದೆ. ಇಲ್ಲಿ ಈ ತತ್ವಗಳನ್ನು ವ್ಯಕ್ತಿಗಳಾಗಿ ಬಿಂಬಿಸಿದ್ದೀರ; ಅದರಲ್ಲಿ ತಪ್ಪೇನೂ ಇಲ್ಲಾ ಆದರೆ ಅವನ್ನು ವಸ್ತುಗಳು ಎನ್ನುವಂತೆ ಬಿಂಬಿಸಿದರೆ ಚೆನ್ನಾಗಿರುತ್ತದೇನೋ?
ಮುಂದಿನೈವರದೆ ಜ್ಞಾನೇಂದ್ರಿಯಗಳು
ಕಿವಿ ಕಣ್ಣು ಚರ್ಮ ನಾಲಿಗೆ ಮೂಗುಗಳು
ಪಂಚೇಂದ್ರಿಯಾ ಗ್ರಹಿಸಲೈದು ತನ್ಮಾತ್ರೆ
ಶಬ್ದ ಸ್ಪರ್ಷ ರೂಪ ರಸ ಗಂಧದ ಪಾತ್ರೆ!
೨ನೇ ಪಂಕ್ತಿ
ಹದಿನಾಲ್ಕೆಆಗ್ಹತ್ತೊಂಬತ್ತೆ ಕರ್ಮೇಂದ್ರಿಯ
ಹದಿನೈದರಿಂದ ಹತ್ತೊಂಬತ್ತಕ್ಕೆ ಇರುವುದು ಕರ್ಮೇಂದ್ರಿಯಗಳು. ಹಾಗಾಗಿ ಮೇಲಿನ ಸಾಲಿನ ಹದಿನಾಲ್ಕನ್ನು ಬದಲಾಯಿಸಿ.
ಜನನ ವಿಸರ್ಜನ ಕಾಲ್ಬಾಯಿ ಜತೆ ಕೈಯ
ಜೋಡಿಸೆ ಮತ್ತೈದು ಕರ್ಮ ಕ್ರಿಯಾ ಫಲಿತ
ಸಂತಾನ ವಿಸರ್ಜನೆ ಚಲನೆ ಮಾತ ಹಿಡಿತ
ಮಾತ ಹಿಡಿತ= ಮಾತು ಹಿಡಿತ ಎಂದು ಮಾಡಿದರೆ ಸೂಕ್ತ; ಇಲ್ಲದಿದ್ದರೆ ಎರಡನ್ನೂ ಒಂದೇ ಶಬ್ದವಾಗಿ ಓದುವ ತೊಡಕಿದೆ.
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದಾಗಿಸುವ ವಿದ್ಯ!
ಇಪ್ಪತ್ತೈದರಿಂದ ಮುವ್ವತ್ತೊಂದರವರೆಗೆ ಇರುವ ತತ್ವಗಳನ್ನು ವಿದ್ಯಾ ತತ್ವಗಳೆನ್ನುತ್ತಾರೆ. ಕವನದ ಈ ಕಡೆಯ ಸಾಲು ಅದನ್ನು ಸೂಕ್ತವಾಗಿ ಬಿಂಬಿಸುತ್ತಿಲ್ಲವೆಂದು ನನ್ನ ಅಂಬೋಣ, ಅದನ್ನು ಸ್ವಲ್ಪ ಮಾರ್ಪಡಿಸಬಹುದೇ ನೋಡಿ.
೩ನೇ ಪಂಕ್ತಿ
ಇಪ್ಪತ್ತೈದೂ ಕಾಲ ಭೂತ ಭವಿತ ವರ್ತಮಾನ
ಇಪ್ಪತ್ತೈದೂ=ಇಪ್ಪತ್ತೈದು ಅಥವಾ ಇಪ್ಪತ್ತೈದನೆಯದೇ/ಇಪ್ಪತ್ತೈದನೆ ತತ್ವ ಎಂದು ಮುಂದಿನ ಸಾಲುಗಳಲ್ಲಿ ಹೇಳಿರುವಂತೆ ಹೇಳಬಹುದೇನೋ ನೋಡಿ.
ಇಪ್ಪತ್ತಾರೆ ನಿಯತಿ ನಿಯಮಾನುಸಾರಗಮನ
ಕ್ರಿಯೆಯ ಪ್ರೇರೇಪಿಸಿ ಕಲಾ ಇಪ್ಪತ್ತೇಳನೆ ತತ್ವ
ಬುದ್ಧಿಯ ಪ್ರಚೋದನೆ ವಿದ್ಯಾ ಇಪ್ಪತ್ತೆಂಟೆ ಸತ್ವ
ಇಪ್ಪತ್ತೆಂಟೆ=ಇಪ್ಪತ್ತೆಂಟನೆ ತತ್ವ (ಸತ್ವ?)
ರಾಗದಕಾಮನೆ ಮೂವ್ವತ್ತನೇ ಪುರುಷದ ಆತ್ಮ
ರಾಗ ಪುರುಷಗಳು ಆಗೆ ಇಪ್ಪತ್ತೊಂಬತ್ತು ಮೂವ್ವತ್ತು ಈ ರೀತಿ ಅರ್ಥ ಬರುವಂತೆ ಬದಲಾಯಿಸಿದರೆ ಇಲ್ಲಿ ತಪ್ಪಿರುವ ಇಪ್ಪತ್ತೊಂಬತ್ತನೇ ತತ್ವವನ್ನೂ ಸಹ ಸೂಚಿಸಬಹುದು ಅಂದುಕೊಳ್ಳುತ್ತೇನೆ. ಮೇಲಿನ ಸಾಲಿನ ಪ್ರಾಸಕ್ಕನುಗುಣವಾಗಿ ಕೆಳಗಿನ ಸಾಲನ್ನೂ ಸಹ ಸ್ವಲ್ಪ ಬದಲಾಯಿಸಬೇಕಾಗಬಹುದು.
ಅವಿದ್ಯೆ ಭ್ರಮೆ ಮಾಯಾ ಮುವ್ವತ್ತೊಂದನೆತತ್ವ!
ನಾಲ್ಕನೇ ಪಂಕ್ತಿ
ಮೊದಲು ಸ್ವಲ್ಪ ಗೊಂದಲವೆನಿಸಿದರೂ ಸಹ ಆಮೇಲೆ ನಿಧಾನವಾಗಿ ಓದಿಕೊಂಡ ನಂತರ ಕವಿತೆ ಬಹಳ ಸುಂದರವಾಗಿ ಮೂಡಿ ಬಂದಿದೆ ಎನ್ನುವುದು ಮನದಟ್ಟಾಯಿತು. ನೀವು ಸಾರಗ್ರಾಹಿಗಳು ಎನ್ನುವುದನ್ನು ಈ ಪಂಕ್ತಿಯನ್ನು ಓದಿದ ಮೇಲೆ ಮತ್ತೊಮ್ಮೆ ನಿಮ್ಮನ್ನು ಈ ವಿಧವಾಗಿ ನೆನಪಿಸಿಕೊಳ್ಳುವಂತಾಯಿತು.
ಈ ಕಂತಿನ ಪದ್ಯಗಳನ್ನು ಸ್ವಲ್ಪ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳವುದು ಅವಶ್ಯವೆನಿಸಿದ್ದರಿಂದ ಅವನ್ನು ಓದಿದ ತಕ್ಷಣ ಪ್ರತಿಕ್ರಿಯೆ ನೀಡಲಾಗಲಿಲ್ಲ. ಇನ್ನೂ ನಿಮ್ಮ ಬ್ಲಾಗನ್ನು ಸಂಪೂರ್ಣವಾಗಿ ಯಾವಾಗ ನೋಡಲಾಗುತ್ತದೋ ಅರ್ಥವಾಗುತ್ತಿಲ್ಲ :(
ಈ ಸರಣಿಯ ಮೂಲ ಲೇಖಕರಾದ ರವಿಯವರ ಬ್ಲಾಗಿನ ಕೊಂಡಿಯನ್ನೂ ಅದರಲ್ಲಿ ಸೇರಿಸಿರುವುದು ಬಹಳ ಒಳ್ಳೆಯ ಕೆಲಸ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ೨೨೯ರಿಂದ ೨೩೪ನೇ ನಾಮಗಳ by makara
ಶ್ರೀಧರರೆ, ನಿಮ್ಮ ಊಹೆ ನಿಜ -
ಶ್ರೀಧರರೆ, ನಿಮ್ಮ ಊಹೆ ನಿಜ - ನನಗು 'ಕಳುವಾಗುವ' ಪದದ ಬಗ್ಗೆ ನಿಮಗಿದ್ದ ಅನಿಸಿಕೆ ಇತ್ತಾದರೂ ಕಾವ್ಯಾತ್ಮಕ ಕೋನದಿಂದ ಸೇರಿಸಿದ್ದೆ . ನೀವು ನೋಡಿ ಅದೆ ಅಭಿಪ್ರಾಯ ವ್ಯಕ್ತಪಡಿಸಿದ್ದೀರಾ. 'ಲಯ'ವನ್ನೆ ಉಳಿಸಿಕೊಳ್ಳುವ, ಮುಳುಗಿಗಿಂತ ಹೆಚ್ಚು ಸೂಕ್ತವಾಗಿದೆಯೆನಿಸುತ್ತದಲ್ಲವೆ?.
೨೩೨. ಮಹೇಶ್ವರ-ಮಹಾಕಲ್ಪ-ಮಹಾತಾಂಡವ-ಸಾಕ್ಷಿಣೀ
ಮಹಾಕಲ್ಪ ಮಹಾಪ್ರಳಯ ಬ್ರಹ್ಮಾಂಡ ಲಯವಾಗೊ ಸಮಯ
ಬ್ರಹ್ಮದ ನಾಲ್ಕನೆ ಕ್ರಿಯಾವಿಸ್ಮಯ ಉಳಿಕೆ ಬರಿ ಶಿವಶಕ್ತಿ ಮಯ
ಶಿವನಲೆಲ್ಲಾ ಲೀನ ಶಕ್ತಿಯ ಹೊರತಾರೂ ಕಾಣದ ಬ್ರಹ್ಮ ಸ್ವಗತ
ಮಹೇಶ್ವರ ಮಹಾಕಲ್ಪ ಮಹಾತಾಂಡವ ಸಾಕ್ಷಿಣೀ ಬರಿ ಲಲಿತಾ!
ಮೊದಲನೇ ಪಂಕ್ತಿ
----------
ನಾಲ್ಕಂತಃಕರಣದೆ ಆರಂಭ ತತ್ವಗಳು
ಮನಸು ಬುದ್ಧಿ ಚಿತ್ತಾ ಅಹಂಕಾರಗಳು
ಐದರಿಂದೊಂಭತ್ತು ಜ್ಞಾನೇಂದ್ರಿಯಗಳು
ಕಿವಿ ಕಣ್ಣು ಚರ್ಮ ನಾಲಿಗೆ ಮೂಗುಗಳು
ಪಂಚೇಂದ್ರಿಯಾ ಗ್ರಹಿಸಲೈದು ತನ್ಮಾತ್ರೆ
ಶಬ್ದ ಸ್ಪರ್ಷ ರೂಪ ರಸ ಗಂಧದ ಪಾತ್ರೆ!
ಮೊದಲೆರಡು ಸಾಲಿನ ಮತ್ತೊಂದು ಅವತರಣಿಕೆ :
ಮನಸು ಬುದ್ಧಿ ಚಿತ್ತ ಅಹಂಕಾರ ತತ್ವ
ಅಂತಃಕರಣ ಮೊದಲ್ನಾಕಾಗಿ ಮಹತ್ವ
ಎರಡರಲ್ಲಿ ಯಾವುದು ಸೂಕ್ತವಾಗಿ ಹೊಂದಿಕೆಯಾಗುತ್ತದೆ?
----------
೨ನೇ ಪಂಕ್ತಿ
----------
ಹದಿನೈದರಿಂದ್ಹತ್ತೊಂಬತ್ತೆ ಕರ್ಮೇಂದ್ರಿಯ
ಜನನ ವಿಸರ್ಜನ ಕಾಲ್ಬಾಯಿ ಜತೆ ಕೈಯ
ಜೋಡಿಸೆ ಮತ್ತೈದು ಕರ್ಮ ಕ್ರಿಯಾ ಫಲಿತ
ಸಂತಾನ ವಿಸರ್ಜನೆ ಚಲನೆ ಮಾತು ಹಿಡಿತ
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದಾಗಿ ವಿದ್ಯಾತತ್ವ!
----------
೩ನೇ ಪಂಕ್ತಿ
----------
ಇಪ್ಪತ್ತೈದನೆ ಕಾಲ ಭೂತ ಭವಿತ ವರ್ತಮಾನ
ಇಪ್ಪತ್ತಾರೆ ನಿಯತಿ ನಿಯಮಾನುಸಾರಗಮನ
ಕ್ರಿಯೆಯ ಪ್ರೇರೇಪಿಸಿ ಕಲಾ ಇಪ್ಪತ್ತೇಳನೆ ತತ್ವ
ಬುದ್ಧಿಗೆ ಪ್ರಚೋದನೆ ವಿದ್ಯಾ ಇಪ್ಪತ್ತೆಂಟನೆ ತತ್ವ
ರಾಗ ಪುರುಷಗಳಾಗೆ ಇಪ್ಪತ್ತೊಂಬತ್ತು ಮೂವ್ವತ್ತು
ಮಾಯೆ ಮೂವ್ವತ್ತೊಂದು ಅವಿದ್ಯೆ ಭ್ರಮೆ ಕೊಟ್ಟಿತು!
----------
>>>>>> ಇನ್ನೂ ನಿಮ್ಮ ಬ್ಲಾಗನ್ನು ಸಂಪೂರ್ಣವಾಗಿ ಯಾವಾಗ ನೋಡಲಾಗುತ್ತದೋ ಅರ್ಥವಾಗುತ್ತಿಲ್ಲ >>>>>>
ಬ್ಲಾಗಿನ ವೇಗದ ಕುರಿತು ಚಿಂತೆ ಬೇಡ - ಅದು ಎಷ್ಟೆ ಆದರೂ ಇಲ್ಲಿನ ಸಂಕ್ಷಿಪ್ತ ಪ್ರತಿಬಿಂಬವಷ್ಟೆ (ಕೇವಲ ಅಂತ್ಯ ಫಲಶೃತಿಯ ಸಮಗ್ರ ದರ್ಶನದ ದೃಷ್ಟಿಯಿಂದ). ನಾವೀಗ ಹಿಂದೆ ಬಿದ್ದಿರುವ ವಿಷಯಗಳೆಂದರೆ : 1. ಈಗ 60 ನೆ ಕಂತಿನ ಆಚೀಚೆ ಅನುಸರಿಸುತ್ತಿರುವ ವಿಧಾನವನ್ನು ಹಳೆಯ ಕಂತುಗಳಿಗೂ ವಿಸ್ತರಿಸುವುದು - ಇಲ್ಲಿ ಕೆಲವು ಪರಿಷ್ಕರಣೆಗೆ ಕಾಯುತ್ತಿದ್ದಲ್ಲಿ ಅದನ್ನು ಮುಗಿಸಬೇಕಾಗುತ್ತದೆ 2. ಮೊದಲ ನೂರು ನಾಮಗಳಲ್ಲಿ ಎಲ್ಲಕ್ಕೂ ಕವನ ಸೇರಿಸಿ , ಸಂಪದದಲ್ಲಿ ಪರಿಷ್ಕರಿಸಿ ನಂತರ ಅಂತಿಮ ಕೊಂಡಿ ಸೇರಿಸುವುದು (ಸುಮಾರು 70ರವರೆಗೆ ಕರಡು ಕವನ ಸಿದ್ದವಾಗಿದೆ 71-90ರ ಅಂತರ ಇನ್ನು ಬಾಕಿಯಿದೆ). ಇಲ್ಲಿಯೆ ನಿಜವಾದ ಸಮಸ್ಯೆಯಿರುವುದು - ಒಂದೆ ಬಾರಿ ಪರಿಷ್ಕರಣೆ ಮಾಡಲಾಗುವುದಿಲ್ಲ; ನನ್ನ ಸಲಹೆ - ಸಮಾನಾಂತರವಾಗಿ ಒಂದರಿಂದ ಆರಂಭಿಸಿ ಒಂದೊಂದಾಗಿ ಒತ್ತಡವಿಲ್ಲದೆ ಮಾಡುತ್ತಾ ಹೋಗೋಣ (ಎರಡು ಟ್ರಾಕಿನಲ್ಲಿ). ಆಗ ಒಂದು ಹಂತದಲ್ಲಿ ಬರಿಯ ಹೊಸದು ಮಾತ್ರ ಬಾಕಿಯಾಗುತ್ತದೆ. ಈ ಸಲಹೆ ಸರಿಯೆಂದರೆ, ನಾನು ಒಂದರಿಂದ ಅರಂಭಿಸುತ್ತೇನೆ - ಪ್ರತಿಕ್ರಿಯೆಯಡಿ. ನೀವು ಅದನ್ನು ಪರಿಷ್ಕರಿಸುವತನಕ ಮುಂದಿನದನ್ನು ತರುವುದು ಬೇಡ. ಈ ವಿಧಾನ ಸಾಧ್ಯವೆ ಆಲೋಚಿಸಿ ನೋಡಿ.
>>>>>>ಈ ಸರಣಿಯ ಮೂಲ ಲೇಖಕರಾದ ರವಿಯವರ ಬ್ಲಾಗಿನ ಕೊಂಡಿಯನ್ನೂ ಅದರಲ್ಲಿ ಸೇರಿಸಿರುವುದು ಬಹಳ ಒಳ್ಳೆಯ ಕೆಲಸ.>>>>>>
- ಈ ಲೋಪವನ್ನು ಗಣೇಶರು ತೋರಿಸಿದ್ದರಾಗಿ, ಆಗಲೆ ಕಾರ್ಯರೂಪಕ್ಕೆ ತಂದೆ. ಆದರೆ ಹಳೆಯ ಕಂತುಗಳಿಗೆ ಲಿಂಕು ಸೇರಿಸುವುದು ಇನ್ನೂ ಆಗಿಲ್ಲ. ಸದ್ಯಕ್ಕೆ ಅದನ್ನೆಲ್ಲ ವೆಬ್ ಸೈಟಿನಿಂದ ಮರೆಮಾಚಿದ್ದೇನೆ. ಪೂರ್ಣರೂಪದಲ್ಲಿ ಖಚಿತವಾಗಿ ಪರಿಷ್ಕರಣೆಯಾದವನ್ನಷ್ಟೆ ಅಲ್ಲಿ ಉಳಿಸಿಕೊಂಡಿದ್ದೇನೆ. ಇದರಿಂದ ನಮಗೆ ಯಾವುದು ಪರಿಷ್ಕರಣೆಗೆ ಬಾಕಿಯಿದೆ ಅನ್ನುವುದು ಸುಲಭವಾಗಿ ತಿಳಿಯುತ್ತದೆ.
ಬರಿ ಕೊಂಡಿ ಮಾತ್ರವಲ್ಲ - ಶ್ರೀಯುತ ರವಿಯವರ ಕುರಿತಾದ ಒಂದು ಪುಟ್ಟ ವಿವರಣಾ ಟಿಪ್ಪಣಿಯನ್ನು ಅಂತಿಮವಾಗಿ ಹೋಂ ಪೇಜಿನಲ್ಲಿ ಸೇರಿಸುವುದು ಒಳಿತು. ನೀವು ಹಲವು ಬಾರಿ ಹೇಳಿರುವಂತೆ ಇದು ಅವರ ಮೂಲ ವಿವರಣೆ, ಬರಿಯ ಸಂವಹನಾ ಕ್ರಿಯೆಯಷ್ಟೆ ನಮ್ಮಿಂದ ಆಗುತ್ತಿರುವುದು.
In reply to ಶ್ರೀಧರರೆ, ನಿಮ್ಮ ಊಹೆ ನಿಜ - by nageshamysore
೨೨೯ರಿಂದ ೨೩೪ ಅಂತಿಮ ಪರಿಷ್ಕರಣೆ
೨೨೯ರಿಂದ ೨೩೪ ಅಂತಿಮ ಪರಿಷ್ಕರಣೆ
ನಾಗೇಶರೆ,
ಮರು ಪರಿಷ್ಕರಣೆಗೊಂಡ ನಂತರ ಕವನಗಳು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಬಂದಿವೆ. ೨೩೨ನ್ನು ಸೂಕ್ತವಾಗಿಯೇ ಸರಿಪಡಿಸಿದ್ದೀರ.
೩೬ ತತ್ವಗಳ ಕುರಿತು ಹೆಚ್ಚಿನ ವಿವರಣೆ: (೨೨೯. ಮಹಾಸನಾ )
ಮೊದಲನೇ ಪಂಕ್ತಿ
ನಾಲ್ಕಂತಃಕರಣದೆ ಆರಂಭ ತತ್ವಗಳು
ಮನಸು ಬುದ್ಧಿ ಚಿತ್ತಾ ಅಹಂಕಾರಗಳು
ಇವೇ ಸಾಲುಗಳನ್ನು ಉಳಿಸಿಕೊಳ್ಳಿ. ಇಲ್ಲಿ ನಾಲ್ಕಂತಃಕರಣದೆ=ನಾಲ್ಕಂತಃಕರಣದ ಮಾಡಿದರೆ ಸರಿ ಎನಿಸುತ್ತದೆ.
೨ನೇ ಪಂಕ್ತಿ
----------
:
:
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದಾಗಿ ವಿದ್ಯಾತತ್ವ!
ಇಪ್ಪತ್ತೈದರಿಂ ಮುವ್ವತ್ತೊಂದುಗಳೇ ವಿದ್ಯಾತತ್ವ ಎಂದು ಮಾರ್ಪಡಿಸಬಹುದೇನೋ ನೋಡಿ.
೩ನೇ ಪಂಕ್ತಿ
----------
:
:
ರಾಗ ಪುರುಷಗಳಾಗೆ ಇಪ್ಪತ್ತೊಂಬತ್ತು ಮೂವ್ವತ್ತು
ಮಾಯೆ ಮೂವ್ವತ್ತೊಂದು ಅವಿದ್ಯೆ ಭ್ರಮೆ ಕೊಟ್ಟಿತು!
ಇದರಲ್ಲಿ ಕಡೆಯ ಸಾಲು ಸ್ವಲ್ಪ ಕಾವ್ಯಾತ್ಮಕವೆನಿಸದು. ಅದನ್ನು ಸ್ವಲ್ಪ ಸೂಕ್ತ ಪದದಿಂದ ಬದಲಿಸಲಾಗುತ್ತದೆಯೋ ನೋಡಿ. ಅವಿದ್ಯೆ ಎಂದರೆ ಅಜ್ಞಾನ ಆದ್ದರಿಂದ ಈ ಪದವನ್ನು ಬಳಸಿಕೊಂಡು ಏನಾದರೂ ಬದಲಾಯಿಸಬಹುದೋ ನೋಡಿ.
>>>ನಾನು ಒಂದರಿಂದ ಅರಂಭಿಸುತ್ತೇನೆ - ಪ್ರತಿಕ್ರಿಯೆಯಡಿ. ನೀವು ಅದನ್ನು ಪರಿಷ್ಕರಿಸುವತನಕ ಮುಂದಿನದನ್ನು ತರುವುದು ಬೇಡ. ಈ ವಿಧಾನ ಸಾಧ್ಯವೆ ಆಲೋಚಿಸಿ ನೋಡಿ.....ಈ ವಿಧಾನವೇ ಹಳೆಯ ನಾಮಗಳ ವಿವರಣೆಗಳಿಗೆ ಸೂಕ್ತ ಎನಿಸುತ್ತದೆ.
>>>ರವಿಯವರಿಗೆ ನೀವು ವಿವರಣೆಗಳಿಗೆ ಕವನಗಳನ್ನು ಹೆಣೆಯುತ್ತಿರುವುದನ್ನು ಸೂಚ್ಯವಾಗಿ ತಿಳಿಸಿದ್ದೆ. ಇದೂ ಸಹ ಒಂದು ಹಂತಕ್ಕೆ (ಅಪ್-ಡೇಟ್) ಆದ ಮೇಲೆ ಅವರ ಗಮನಕ್ಕೆ ನಿಮ್ಮ ಕಾವ್ಯದ ಕೊಂಡಿಯನ್ನು ತರೋಣವೆಂದುಕೊಂಡಿದ್ದೇನೆ. ಖಂಡಿತಾ ಅವರು ಇದರ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ೨೨೯ರಿಂದ ೨೩೪ ಅಂತಿಮ ಪರಿಷ್ಕರಣೆ by makara
<p>ಶ್ರೀಧರರೆ ಮೂವ್ವತ್ತಾರು ತತ್ವದ
ಶ್ರೀಧರರೆ ಮೂವ್ವತ್ತಾರು ತತ್ವದ ಮರು ಪರಿಷ್ಕರಣಾ ರೂಪ ಈ ಕೆಳಕಂಡಂತಿದೆ. ಮೂರನೆ ಪಂಕ್ತಿ ತಿದ್ದಲು ಕೊನೆಯೆರಡು ಸಾಲನ್ನು ಬದಲಿಸಿದ್ದೇನೆ. ಈಗ ಸೂಕ್ತ ರೂಪಕ್ಕೆ ಹತ್ತಿರವಾಗುತ್ತಿದೆಯೆ? - ನಾಗೇಶ ಮೈಸೂರು :-)
ಮೊದಲನೇ ಪಂಕ್ತಿ
----------
ನಾಲ್ಕಂತಃಕರಣದ ಆರಂಭ ತತ್ವಗಳು
ಮನಸು ಬುದ್ಧಿ ಚಿತ್ತಾ ಅಹಂಕಾರಗಳು
ಐದರಿಂದೊಂಭತ್ತು ಜ್ಞಾನೇಂದ್ರಿಯಗಳು
ಕಿವಿ ಕಣ್ಣು ಚರ್ಮ ನಾಲಿಗೆ ಮೂಗುಗಳು
ಪಂಚೇಂದ್ರಿಯಾ ಗ್ರಹಿಸಲೈದು ತನ್ಮಾತ್ರೆ
ಶಬ್ದ ಸ್ಪರ್ಷ ರೂಪ ರಸ ಗಂಧದ ಪಾತ್ರೆ!
ಎರಡನೇ ಪಂಕ್ತಿ
----------
ಹದಿನೈದರಿಂದ್ಹತ್ತೊಂಬತ್ತೆ ಕರ್ಮೇಂದ್ರಿಯ
ಜನನ ವಿಸರ್ಜನ ಕಾಲ್ಬಾಯಿ ಜತೆ ಕೈಯ
ಜೋಡಿಸೆ ಮತ್ತೈದು ಕರ್ಮ ಕ್ರಿಯಾ ಫಲಿತ
ಸಂತಾನ ವಿಸರ್ಜನೆ ಚಲನೆ ಮಾತು ಹಿಡಿತ
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದುಗಳೇ ವಿದ್ಯಾತತ್ವ!
----------
ಮೂರನೇ ಪಂಕ್ತಿ
----------
ಇಪ್ಪತ್ತೈದನೆ ಕಾಲ ಭೂತ ಭವಿತ ವರ್ತಮಾನ
ಇಪ್ಪತ್ತಾರೆ ನಿಯತಿ ನಿಯಮಾನುಸಾರಗಮನ
ಕ್ರಿಯೆಯ ಪ್ರೇರೇಪಿಸಿ ಕಲಾ ಇಪ್ಪತ್ತೇಳನೆ ತತ್ವ
ಬುದ್ಧಿಗೆ ಪ್ರಚೋದನೆ ವಿದ್ಯಾ ಇಪ್ಪತ್ತೆಂಟನೆ ತತ್ವ
ಇಪ್ಪತ್ತೊಂಬತ್ತು ಮೂವ್ವತ್ತು ರಾಗ ಪುರುಷಗಳಾಗೆ
ಅಜ್ಞಾನ ಭ್ರಮೆ ತಹ ಮಾಯೆ ಮೂವ್ವತ್ತೊಂದಾಗೆ!
----------
In reply to ೨೨೯ರಿಂದ ೨೩೪ ಅಂತಿಮ ಪರಿಷ್ಕರಣೆ by makara
<p>ಶ್ರೀಧರರೆ ಮೂವ್ವತ್ತಾರು ತತ್ವದ
ಶ್ರೀಧರರೆ ಮೂವ್ವತ್ತಾರು ತತ್ವದ ಮರು ಪರಿಷ್ಕರಣಾ ರೂಪ ಈ ಕೆಳಕಂಡಂತಿದೆ. ಮೂರನೆ ಪಂಕ್ತಿ ತಿದ್ದಲು ಕೊನೆಯೆರಡು ಸಾಲನ್ನು ಬದಲಿಸಿದ್ದೇನೆ. ಈಗ ಸೂಕ್ತ ರೂಪಕ್ಕೆ ಹತ್ತಿರವಾಗುತ್ತಿದೆಯೆ? - ನಾಗೇಶ ಮೈಸೂರು :-)
ಮೊದಲನೇ ಪಂಕ್ತಿ
----------
ನಾಲ್ಕಂತಃಕರಣದ ಆರಂಭ ತತ್ವಗಳು
ಮನಸು ಬುದ್ಧಿ ಚಿತ್ತಾ ಅಹಂಕಾರಗಳು
ಐದರಿಂದೊಂಭತ್ತು ಜ್ಞಾನೇಂದ್ರಿಯಗಳು
ಕಿವಿ ಕಣ್ಣು ಚರ್ಮ ನಾಲಿಗೆ ಮೂಗುಗಳು
ಪಂಚೇಂದ್ರಿಯಾ ಗ್ರಹಿಸಲೈದು ತನ್ಮಾತ್ರೆ
ಶಬ್ದ ಸ್ಪರ್ಷ ರೂಪ ರಸ ಗಂಧದ ಪಾತ್ರೆ!
ಎರಡನೇ ಪಂಕ್ತಿ
----------
ಹದಿನೈದರಿಂದ್ಹತ್ತೊಂಬತ್ತೆ ಕರ್ಮೇಂದ್ರಿಯ
ಜನನ ವಿಸರ್ಜನ ಕಾಲ್ಬಾಯಿ ಜತೆ ಕೈಯ
ಜೋಡಿಸೆ ಮತ್ತೈದು ಕರ್ಮ ಕ್ರಿಯಾ ಫಲಿತ
ಸಂತಾನ ವಿಸರ್ಜನೆ ಚಲನೆ ಮಾತು ಹಿಡಿತ
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದುಗಳೇ ವಿದ್ಯಾತತ್ವ!
----------
ಮೂರನೇ ಪಂಕ್ತಿ
----------
ಇಪ್ಪತ್ತೈದನೆ ಕಾಲ ಭೂತ ಭವಿತ ವರ್ತಮಾನ
ಇಪ್ಪತ್ತಾರೆ ನಿಯತಿ ನಿಯಮಾನುಸಾರಗಮನ
ಕ್ರಿಯೆಯ ಪ್ರೇರೇಪಿಸಿ ಕಲಾ ಇಪ್ಪತ್ತೇಳನೆ ತತ್ವ
ಬುದ್ಧಿಗೆ ಪ್ರಚೋದನೆ ವಿದ್ಯಾ ಇಪ್ಪತ್ತೆಂಟನೆ ತತ್ವ
ಇಪ್ಪತ್ತೊಂಬತ್ತು ಮೂವ್ವತ್ತು ರಾಗ ಪುರುಷಗಳಾಗೆ
ಅಜ್ಞಾನ ಭ್ರಮೆ ತಹ ಮಾಯೆ ಮೂವ್ವತ್ತೊಂದಾಗೆ!
----------
In reply to <p>ಶ್ರೀಧರರೆ ಮೂವ್ವತ್ತಾರು ತತ್ವದ by nageshamysore
<p>ಎರಡನೇ ಪಂಕ್ತಿ<br />
ಎರಡನೇ ಪಂಕ್ತಿ
ಇಪ್ಪತ್ತೈದರಿಂ ಮುವ್ವತ್ತೊಂದುಗಳೇ ವಿದ್ಯಾತತ್ವ=ಇಪ್ಪತ್ತೈದರಿಂ ಮುವ್ವತ್ತೊಂದು ವಿದ್ಯಾತತ್ವ! ಸರಿಹೋಗುತ್ತದೆ ಮತ್ತು ಪ್ರಾಸವೂ ಉಳಿಯುತ್ತದೆ. ಯಾವುದೋ ಆಲೋಚನೆಯಲ್ಲಿ ’ಗಳು’ ಸೇರಿಸಿದ್ದೆ :(
ಮೂರನೇ ಪಂಕ್ತಿ
ಅಜ್ಞಾನ ಭ್ರಮೆಗೆ ಕಾರಣವಾಗಿಹ ಮಾಯೆ ಮೂವ್ವತ್ತೊಂದಾಗೆ ಎಂದು ಸವರಣೆ ಮಾಡಿದರೆ ಚೆನ್ನಾಗಿರುತ್ತದೆ ಎನಿಸುತ್ತಿದೆ ನಾಗೇಶರೆ, ಆಗ ಅರ್ಥ ಪಲ್ಲಟವಾಗದು.
In reply to <p>ಎರಡನೇ ಪಂಕ್ತಿ<br /> by makara
<p>ಶ್ರೀಧರರೆ, ಬದಲಾದ ಪಂಕ್ತಿಗಳು
ಶ್ರೀಧರರೆ, ಬದಲಾದ ಪಂಕ್ತಿಗಳು ಹೀಗೆ ಕಾಣುತ್ತವೆ :
೨ನೇ ಪಂಕ್ತಿ
----------
ಹದಿನೈದರಿಂದ್ಹತ್ತೊಂಬತ್ತೆ ಕರ್ಮೇಂದ್ರಿಯ
ಜನನ ವಿಸರ್ಜನ ಕಾಲ್ಬಾಯಿ ಜತೆ ಕೈಯ
ಜೋಡಿಸೆ ಮತ್ತೈದು ಕರ್ಮ ಕ್ರಿಯಾ ಫಲಿತ
ಸಂತಾನ ವಿಸರ್ಜನೆ ಚಲನೆ ಮಾತು ಹಿಡಿತ
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದು ವಿದ್ಯಾತತ್ವ!
----------
೩ನೇ ಪಂಕ್ತಿ
----------
ಇಪ್ಪತ್ತೈದನೆ ಕಾಲ ಭೂತ ಭವಿತ ವರ್ತಮಾನ
ಇಪ್ಪತ್ತಾರೆ ನಿಯತಿ ನಿಯಮಾನುಸಾರಗಮನ
ಕ್ರಿಯೆಯ ಪ್ರೇರೇಪಿಸಿ ಕಲಾ ಇಪ್ಪತ್ತೇಳನೆ ತತ್ವ
ಬುದ್ಧಿಗೆ ಪ್ರಚೋದನೆ ವಿದ್ಯಾ ಇಪ್ಪತ್ತೆಂಟನೆ ತತ್ವ
ಇಪ್ಪತ್ತೊಂಬತ್ತು ಮೂವ್ವತ್ತು ರಾಗ ಪುರುಷಗಳಾಗೆ
ಅಜ್ಞಾನ ಭ್ರಮೆಗೆ ಕಾರಣವಾಗಿಹ ಮಾಯೆ ಮೂವ್ವತ್ತೊಂದಾಗೆ!
>>> ಅಜ್ಞಾನ ಭ್ರಮೆಗೆ ಕಾರಣ ಮಾಯೆ ಮೂವ್ವತ್ತೊಂದಾಗೆ! - ಎಂದರೂ ಸೂಕ್ತವಾಗುತ್ತದೆ ಅನಿಸುತ್ತದೆ?
-ವಂದನೆಗಳು, ನಾಗೇಶ ಮೈಸೂರು
In reply to <p>ಶ್ರೀಧರರೆ, ಬದಲಾದ ಪಂಕ್ತಿಗಳು by nageshamysore
<p>ಅಜ್ಞಾನ ಭ್ರಮೆಗೆ ಕಾರಣ ಮಾಯೆ
ಅಜ್ಞಾನ ಭ್ರಮೆಗೆ ಕಾರಣ ಮಾಯೆ ಮೂವ್ವತ್ತೊಂದಾಗೆ - ಚೆನ್ನಾಗಿದೆ, ಈ ರೂಪವನ್ನೇ ಅಂತಿಮವಾಗಿ ಪರಿಷ್ಕರಣೆಯಲ್ಲಿ ಉಳಿಸಿಕೊಳ್ಳಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to <p>ಅಜ್ಞಾನ ಭ್ರಮೆಗೆ ಕಾರಣ ಮಾಯೆ by makara
ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ಶ್ರೀಧರರೆ, ಪರಿಷ್ಕರಣಾನಂತರದ ಒಟ್ಟಾರೆ ರೂಪದಲ್ಲಿ ಹಾಕಿದ್ದೇನೆ, ಅಂತಿಮ ಕೊಂಡಿಯ ಸಮೇತ :-)
೩೬ ತತ್ವಗಳ ಕುರಿತು ಹೆಚ್ಚಿನ ವಿವರಣೆ: (೨೨೯. ಮಹಾಸನಾ )
ನಾಲ್ಕಂತಃಕರಣದ ಆರಂಭ ತತ್ವಗಳು
ಮನಸು ಬುದ್ಧಿ ಚಿತ್ತಾ ಅಹಂಕಾರಗಳು
ಐದರಿಂದೊಂಭತ್ತು ಜ್ಞಾನೇಂದ್ರಿಯಗಳು
ಕಿವಿ ಕಣ್ಣು ಚರ್ಮ ನಾಲಿಗೆ ಮೂಗುಗಳು
ಪಂಚೇಂದ್ರಿಯಾ ಗ್ರಹಿಸಲೈದು ತನ್ಮಾತ್ರೆ
ಶಬ್ದ ಸ್ಪರ್ಷ ರೂಪ ರಸ ಗಂಧದ ಪಾತ್ರೆ!
ಹದಿನೈದರಿಂದ್ಹತ್ತೊಂಬತ್ತೆ ಕರ್ಮೇಂದ್ರಿಯ
ಜನನ ವಿಸರ್ಜನ ಕಾಲ್ಬಾಯಿ ಜತೆ ಕೈಯ
ಜೋಡಿಸೆ ಮತ್ತೈದು ಕರ್ಮ ಕ್ರಿಯಾ ಫಲಿತ
ಸಂತಾನ ವಿಸರ್ಜನೆ ಚಲನೆ ಮಾತು ಹಿಡಿತ
ಒಂದರಿಂದ ಇಪ್ಪತ್ನಾಲ್ಕು ಸೇರಿಸೆ ಆತ್ಮತತ್ವ
ಇಪ್ಪತ್ತೈದರಿಂ ಮುವ್ವತ್ತೊಂದು ವಿದ್ಯಾತತ್ವ!
ಇಪ್ಪತ್ತೈದನೆ ಕಾಲ ಭೂತ ಭವಿತ ವರ್ತಮಾನ
ಇಪ್ಪತ್ತಾರೆ ನಿಯತಿ ನಿಯಮಾನುಸಾರಗಮನ
ಕ್ರಿಯೆಯ ಪ್ರೇರೇಪಿಸಿ ಕಲಾ ಇಪ್ಪತ್ತೇಳನೆ ತತ್ವ
ಬುದ್ಧಿಗೆ ಪ್ರಚೋದನೆ ವಿದ್ಯಾ ಇಪ್ಪತ್ತೆಂಟನೆ ತತ್ವ
ಇಪ್ಪತ್ತೊಂಬತ್ತು ಮೂವ್ವತ್ತು ರಾಗ ಪುರುಷಗಳಾಗೆ
ಅಜ್ಞಾನ ಭ್ರಮೆಗೆ ಕಾರಣ ಮಾಯೆ ಮೂವ್ವತ್ತೊಂದಾಗೆ!
ಬುದ್ಧಿಗು ಹೆಚ್ಚು ಕ್ರಿಯೆ ಪ್ರೇರೇಪಿತಾ ಶುದ್ಧ ವಿದ್ಯಾ
ಕ್ರಿಯೆಗೂ ಹೆಚ್ಚು ಬುದ್ಧಿ ಪ್ರಚೋದಾ ಈಶ್ವರ ತತ್ವ
ಬುದ್ದಿ ಕ್ರಿಯೆ ಸಮಾನ ಪ್ರಮಾಣವೇ ಸದಾಶಿವತ್ವ
ಮೂವ್ವತ್ತೆರಡರಿಂದ ಮುವ್ವತ್ನಾಲ್ಕು ತತ್ವದಮಹತ್ವ
ಕ್ರಿಯೆ ಪ್ರಚೋದಿಸಿ ಶಕ್ತೀ ಶುದ್ಧ ಜ್ಞಾನವಾಗಿ ಶಿವತ್ವ
ಮುವ್ವತೈದು ಮುವ್ವತ್ತಾರನೆ ತತ್ವಗಳಾಗಿ ಸಾಂಗತ್ಯ!
ಅಂತಿಮ ಕೊಂಡಿ:
https://ardharaatria...
In reply to ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ by nageshamysore
ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ಇದನ್ನೇ ಅಂತಿಮವಾಗಿ ಪರಿಷ್ಕರಿಸಿ. ಆದರೂ ಒಂದು ಅತೀ ಸಣ್ಣ ಬದಲಾವಣೆ. ಕಡೆಯಿಂದ ಎರಡನೇ ಸಾಲಿನಲ್ಲಿ ಅದು ಶಕ್ತೀ ಬದಲು ಶಕ್ತಿ ಆಗಬೇಕು.
>>ಕ್ರಿಯೆ ಪ್ರಚೋದಿಸಿ ಶಕ್ತೀ ಶುದ್ಧ ಜ್ಞಾನವಾಗಿ ಶಿವತ್ವ<<<<
In reply to ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ by makara
ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ಶ್ರೀಧರರೆ, ಪರಿಷ್ಕರಿಸಿದ ಅವೃತ್ತಿ ಮತ್ತು ಅಂತಿಮ ಕೊಂಡಿ - ನಾಗೇಶ ಮೈಸೂರು
೩೬ ತತ್ವಗಳ ಕುರಿತು ಹೆಚ್ಚಿನ ವಿವರಣೆ: (೨೨೯. ಮಹಾಸನಾ )
ಬುದ್ಧಿಗು ಹೆಚ್ಚು ಕ್ರಿಯೆ ಪ್ರೇರೇಪಿತಾ ಶುದ್ಧ ವಿದ್ಯಾ
ಕ್ರಿಯೆಗೂ ಹೆಚ್ಚು ಬುದ್ಧಿ ಪ್ರಚೋದಾ ಈಶ್ವರ ತತ್ವ
ಬುದ್ದಿ ಕ್ರಿಯೆ ಸಮಾನ ಪ್ರಮಾಣವೇ ಸದಾಶಿವತ್ವ
ಮೂವ್ವತ್ತೆರಡರಿಂದ ಮುವ್ವತ್ನಾಲ್ಕು ತತ್ವದಮಹತ್ವ
ಕ್ರಿಯೆ ಪ್ರಚೋದಿಸಿ ಶಕ್ತಿ ಶುದ್ಧ ಜ್ಞಾನವಾಗಿ ಶಿವತ್ವ
ಮುವ್ವತೈದು ಮುವ್ವತ್ತಾರನೆ ತತ್ವಗಳಾಗಿ ಸಾಂಗತ್ಯ!
ಅಂತಿಮ ಕೊಂಡಿ:
https://ardharaatria...
In reply to ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ by nageshamysore
ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ನಾಗೇಶರೆ,
ಅದು ಹೇಗೋ ಮತ್ತೆರಡು ತಪ್ಪುಗಳನ್ನು ನಾನು ಗಮನಿಸಿರಲಿಲ್ಲ. ಅದಕ್ಕಾಗಿ ಕ್ಷಮೆಯಿರಲಿ. ಅವನ್ನು ಮಾರ್ಪಡಿಸಿ ಅಂತಿಮವಾಗಿಸಿ.
ಬುದ್ಧಿಗು ಹೆಚ್ಚು ಕ್ರಿಯೆ ಪ್ರೇರೇಪಿತಾ ಶುದ್ಧ ವಿದ್ಯಾ
ಬುದ್ಧಿಗು=ಬುದ್ಧಿಗೂ
ಕ್ರಿಯೆಗೂ ಹೆಚ್ಚು ಬುದ್ಧಿ ಪ್ರಚೋದಾ ಈಶ್ವರ ತತ್ವ
ಪ್ರಚೋದಾ=ಪ್ರಚೋದಿತಾ
ಬುದ್ದಿ ಕ್ರಿಯೆ ಸಮಾನ ಪ್ರಮಾಣವೇ ಸದಾಶಿವತ್ವ
ಮೂವ್ವತ್ತೆರಡರಿಂದ ಮುವ್ವತ್ನಾಲ್ಕು ತತ್ವದಮಹತ್ವ
ಕ್ರಿಯೆ ಪ್ರಚೋದಿಸಿ ಶಕ್ತಿ ಶುದ್ಧ ಜ್ಞಾನವಾಗಿ ಶಿವತ್ವ
ಮುವ್ವತೈದು ಮುವ್ವತ್ತಾರನೆ ತತ್ವಗಳಾಗಿ ಸಾಂಗತ್ಯ!
In reply to ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ by makara
ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ಶ್ರೀಧರರೆ, 65ರ ಸರಿಪಡಿಸಿದ ಅವರ್ತ್ತಿ ಮತ್ತು ಅಂತಿಮ ಕೊಂಡಿ :-) - ನಾಗೇಶ ಮೈಸೂರು
ಬುದ್ಧಿಗೂ ಹೆಚ್ಚು ಕ್ರಿಯೆ ಪ್ರೇರೇಪಿತಾ ಶುದ್ಧ ವಿದ್ಯಾ
ಕ್ರಿಯೆಗೂ ಹೆಚ್ಚು ಬುದ್ಧಿ ಪ್ರಚೋದಿತಾ ಈಶ್ವರ ತತ್ವ
ಬುದ್ದಿ ಕ್ರಿಯೆ ಸಮಾನ ಪ್ರಮಾಣವೇ ಸದಾಶಿವತ್ವ
ಮೂವ್ವತ್ತೆರಡರಿಂದ ಮುವ್ವತ್ನಾಲ್ಕು ತತ್ವದಮಹತ್ವ
ಕ್ರಿಯೆ ಪ್ರಚೋದಿಸಿ ಶಕ್ತಿ ಶುದ್ಧ ಜ್ಞಾನವಾಗಿ ಶಿವತ್ವ
ಮುವ್ವತೈದು ಮುವ್ವತ್ತಾರನೆ ತತ್ವಗಳಾಗಿ ಸಾಂಗತ್ಯ!
ಅಂತಿಮ ಕೊಂಡಿ: https://ardharaatria...
In reply to ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ by nageshamysore
ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ಯಾಕೊ ಕೊಂಡಿ ಕೆಲಸ ಮಾಡುತ್ತಿಲ್ಲ, ಅದಕ್ಕೆ ಮತ್ತೆ ಸೇರಿಸುತ್ತಿದ್ದೇನೆ - ನಾಗೇಶ ಮೈಸೂರು
https://ardharaatria...
In reply to ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ by nageshamysore
ಉ: ೬೫. ಶ್ರೀ ಲಲಿತಾ ಸಹಸ್ರನಾಮ ೨೨೯ರಿಂದ ೨೩೪ನೇ ನಾಮಗಳ ವಿವರಣೆ
ನಾಗೇಶರೆ,
ನೀವು ಪರಿಷ್ಕರಿಸಿದ ನಂತರ ಕೊಂಡಿ ಕೆಲಸ ಮಾಡುತ್ತಿದೆ ಎಂದು ಕೊಂಡಿದ್ದೆ. ಆದರೆ Page not Found ಎಂದೇ ಬರುತ್ತಿದೆ. ಕೊಂಡಿಯನ್ನು ಸರಿಪಡಿಸಲು ಸಾಧ್ಯವೇ ನೋಡಿ.