ನನಗೆ ಸ್ವಲ್ಪ ಹಾಗೇ ಕಣ್ರೀ !!!

ನನಗೆ ಸ್ವಲ್ಪ ಹಾಗೇ ಕಣ್ರೀ !!!

 

ಕಾಫಿ ಫಿಲ್ಟರ್ ಮೇಲಿನ ಪಾತ್ರೆಯಿಂದ, ಕೆಳಗಿನ

ಪಾತ್ರೆಗೆ ತೊಟ್ಟಿಕ್ಕುವ ಡಿಕಾಕ್ಷನ್ ಕಂಡಾಗ

ಗುಡಿಯಲ್ಲಿ ಲಿಂಗದ ಮೇಲ್ ಕಟ್ಟಿರೋ

ದೇವಗಂಗೆಯ ನೆನಪಾಗ್ತದೆ ...

ನನಗೆ ಸ್ವಲ್ಪ ಹಾಗೇ ಕಣ್ರೀ !

 

ಗೋಡೆಗೆ ಚುಚ್ಚಿರೋ ಬಿಳೀ ಚಾರ್ಜರ್, ಅದರ

ಕೊನೆಗೆ ಚುಚ್ಚಿರೋ ಐ-ಪ್ಯಾಡ್ ಕಂಡಾಗ

ಬಿಳೀ ಹಗ್ಗದ ಹುರಿಗೆ ಕಟ್ಟಿರೋ

ಬಿಳೀ ಹಸು ನೆನಪಾಗ್ತದೆ ...

ನನಗೆ ಸ್ವಲ್ಪ ಹಾಗೇ ಕಣ್ರೀ !

 

ಬಂಗಾರದ ಬಣ್ಣದ ಬಟ್ಟೆಯಲ್ಲಿ ಬೆಚ್ಚಗೆ ಸುತ್ತಿದ

ಮುದ್ದಾದ ಹಸುಕಂದನ್ನ ಕಂಡಾಗ

ಬಂಗಾರದ ಬಣ್ಣದ ಮಸಾಲ ದೋಸೆಯಲ್ಲಿರೋ

ಅಲೂಗಡ್ಡೆ ಪಲ್ಯ ನೆನಪಾಗ್ತದೆ ...

ನನಗೆ ಸ್ವಲ್ಪ ಹಾಗೇ ಕಣ್ರೀ

 

ನಮ್ಮೂರ್ನಾಗೆ ಯಾರಿಗಾದ್ರೂ ಮೈ'ಯೋ ಕೈ'ಯೋ ತಾಕಿದಾಗ

ಹೌಹಾರಿ ಬಿದ್ದು 'ಎಕ್ಯೂಸ್ ಮಿ' ಎಂಬೋದು ಕಂಡಾಗ

ಮಡಿ ಮಡಿ ಎ೦ದು ಹೌಹಾರ್ತಿದ್ದ

ನಮ್ಮಜ್ಜಿ ನೆನಪಾಗ್ತದೆ ...

ನನಗೆ ಸ್ವಲ್ಪ ಹಾಗೇ ಕಣ್ರೀ

 

Comments

Submitted by makara Fri, 07/12/2013 - 17:21

ಭಲ್ಲೇಯವರೆ, ಚೆನ್ನಾಗಿರುವುದನ್ನು ಹೊಗಳಿಯೇ ಬಿಡಬೇಕೆನಿಸುತ್ತದೆ, ಯಾವುದಾದರೂ ಹಾಸ್ಯಭರಿತ ಲೇಖನ ಕಂಡ ಕೂಡಲೇ, ನಿಮ್ಮ ಎಡವಟ್ಟು ಸುಬ್ಬ ನೆನಪಾಗಿಯೇ ಬಿಡುತ್ತಾನೆ! ...ನನಗೆ ಸ್ವಲ್ಪ ಹಾಗೇ ಕಣ್ರೀ
Submitted by partha1059 Sun, 07/14/2013 - 17:49

ನಮ್ಮೂರ್ನಾಗೆ ಯಾರಿಗಾದ್ರೂ ಮೈ'ಯೋ ಕೈ'ಯೋ ತಾಕಿದಾಗ ಹೌಹಾರಿ ಬಿದ್ದು 'ಎಕ್ಯೂಸ್ ಮಿ' ಎಂಬೋದು ಕಂಡಾಗ ಮಡಿ ಮಡಿ ಎ೦ದು ಹೌಹಾರ್ತಿದ್ದ ನಮ್ಮಜ್ಜಿ ನೆನಪಾಗ್ತದೆ ... .... ಸಕ್ಕತ್ ಸಾಲುಗಲು ಎಲ್ಲಿಂದ ಎಲ್ಲಿಗೆ ಹೋಲಿಕೆ .... ಹಾರಿಕೆ.... 'how' ಹಾರ್ತಿದ್ದ ??
Submitted by bhalle Sun, 07/14/2013 - 18:01

In reply to by partha1059

"ಎತ್ತಣದ ಮಾಮರೋ ಎತ್ತಣದ ಕೋಗಿಲೆಯೋ " ಎಂದರೆ ಎತ್ತಿದ್ಯೇನಣ್ಣಾ ನಿನ್ ಕ್ಯಾತೆ ಎಂದಂತೆ :-) ನಮ್ಮ ಅಜ್ಜಿಯನ್ನು ದಿನವೂ ನೆನಪಿಗೆ ತರಿಸ್ತಾರೆ ಅಮೇರಿಕದವರು ... ತುಂಬಾ ಮಡಿವಂತರು !! ಧನ್ಯವಾದಗಳು ಪಾರ್ಥರೇ ...
Submitted by ಗಣೇಶ Mon, 07/15/2013 - 23:28

ಭಕ್ತಿ ಎಕ್ಕುಟ್ಟು ಹೋಯ್ತು ಭಲ್ಲೇಜಿ ಕವನದಿಂದ :(
ಗುಡಿಯ ಲಿಂಗದೆದುರು ಭಕ್ತಿಯಿಂದ
ಮೈಮರೆತಿದ್ದೆ.........
ಕಣ್ತೆರೆದು ದೇವಗಂಗೆ ನೋಡಿದೆ
ಫಿಲ್ಟರ್ ಕಾಫಿ ನೆನಪಾಯಿತು...

Submitted by bhalle Tue, 07/16/2013 - 06:05

In reply to by ಗಣೇಶ

:-)))))
ದೇವರ ಮುಂದೆ ನಿಂತು ಕಣ್ಮುಚ್ಚಿ ಕಾಫಿ ಧ್ಯಾನ ಮಾಡುವ ಬದಲಿಗೆ ಕಣ್ತೆರೆದೇ ಕಾಫಿ ಕಲ್ಪಿಸಿಕೊಳ್ಳಲಿ ಎಂಬ ಉದ್ದೇಶ !
ಅದೇನೋ ಗೊತ್ತಿಲ್ಲ,ದೇವರ ಮುಂದೆ ನಿಂತು ಕಣ್ಣು ಮುಚ್ಚೋದು ಯಾಕೆ ಅಂತ?

Submitted by makara Tue, 07/16/2013 - 06:13

In reply to by bhalle

ಭಲ್ಲೇಜಿ!
ಒಂದು ಚಿತ್ರವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯ ಬೇಕಾದರೆ ಅದರ ಲೆನ್ಸ್‌ಅನ್ನು ಒಂದು ಬಾರಿ ಕ್ಲಿಕ್ ಮಾಡುವುದಿಲ್ಲವೇ? ಮಾಡದಿದ್ದರೆ ಅದರ ಬಿಂಬ ಮೂಡುವುದಾದರೂ ಹೇಗೆ? ಅದೇ ರೀತಿ ಮನಸ್ಸಿನ ಫಿಲ್ಮಿನ ಮೇಲೆ ಒಂದು ಕ್ಷಣ ಕಣ್ಮುಚ್ಚಿ ದೇವನ ಚಿತ್ರವನ್ನು ಮೂಡಿಸಿಕೊಳ್ಳುತ್ತೇವೆ.
@ಗಣೇಶ್
ನಿಮ್ಮ ಕವನವೂ ಸೂಪರ್.

Submitted by bhalle Wed, 07/17/2013 - 00:04

In reply to by makara

ಮನವೆಂಬ ಮರ್ಕಟ ದೇವನ ಮುಂದೆ ಕಣ್ತೆರೆದು ನಿಂತಿದ್ದರೂ ಬೇರೆಲ್ಲೋ ಧ್ಯಾನವಿರಿಸಿ ನಾಗಾಲೋಟದಲ್ಲಿ ತಿರುಗುತ್ತಿರುತ್ತದೆ. ಹುಚ್ಚುಕ್ಕೋಡಿ ಮನಸ್ಸಿಗೆ ಕಡಿವಾಣ ಹಾಕಲು ಒಂದು ಮಾರ್ಗ ಕಣ್ ಮುಚ್ಚಿ ಧ್ಯಾನಿಸುವುದು. ಧ್ಯಾನಿಸುವ ಸಮಯದಲ್ಲಾಗಲಿ, ತಪಸ್ಸನ್ನುಗೈವ ಸಮಯದಲ್ಲಾಗಲಿ ಕಣ್ ಮುಚ್ಚುವುದು ಇದೇ ಉದ್ದೇಶಕ್ಕೆ ಎಂಬುದೂ ಒಂದು ವಿಚಾರ ಎಂದುಕೊಂಡಿದ್ದೇನೆ. ಬಹಳ ಸರಳವಾಗಿ ವಿಷಯವನ್ನು ಅರುಹಿದ್ದಕ್ಕೆ ವಂದನೆಗಳು ಶ್ರೀಧರರೇ

Submitted by ಗಣೇಶ Tue, 07/16/2013 - 23:54

In reply to by bhalle

>>>ಅದೇನೋ ಗೊತ್ತಿಲ್ಲ,ದೇವರ ಮುಂದೆ ನಿಂತು ಕಣ್ಣು ಮುಚ್ಚೋದು ಯಾಕೆ ಅಂತ?--->"...ಸಾಮಾನ್ಯವಾಗಿ ಎಲ್ಲರಿಗೂ ಮೊದಲೆರಡು ಹಂತಗಳಾದ ಜಾಗ್ರತ್ (ಎಚ್ಚರ) ಮತ್ತು ಸ್ವಪ್ನ (ಕನಸಿನ) ಇವುಗಳ ಕುರಿತಾಗಿ ತಿಳಿದಿರುತ್ತದೆ. ಮೂರನೆಯ ಹಂತವಾದ ಸುಷುಪ್ತಿಯಲ್ಲಿ ಅಥವಾ ಎಚ್ಚರವಿರದ/ಪ್ರಜ್ಞೆಯಿರದ ದೀರ್ಘನಿದ್ರಾವಸ್ಥೆಯಲ್ಲಿ ತನ್ನ ಸುತ್ತಲೂ ಏನಾಗುತ್ತದೆ ಎಂದು ಒಬ್ಬನಿಗೆ ಅರಿವಾಗುವುದಿಲ್ಲ. ಆದರೆ ಯೋಗಿಯೊಬ್ಬನು ಉಳಿದೆರಡೂ ಹಂತಗಳನ್ನು ತಲುಪಬಲ್ಲ, ಏಕೆಂದರೆ ಅವನಿಗೆ ತಾನೇ ಶಿವನೆಂಬ ಸಂಪೂರ್ಣ ಅರಿವಿರುವುದರಿಂದಾಗಿ. ಯಾವಾಗ ಅವನ ಚೇತನವು ಪರಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆಯೋ ಆಗ ಅವನ ಕರ್ಮಗಳು ನಶಿಸಿಹೋಗಿ ಅವನು ಒಂದು ಹಂತವನ್ನು ಸೇರುತ್ತಾನೆ ಈ ಸ್ಥಿತಿಯಲ್ಲಿ ಸಂತೋಷ ಅಥವಾ ದುಃಖಗಳಿರುವುದಿಲ್ಲ. ಯಾವಾಗ ಮನಸ್ಸು ಆಲೋಚಿಸುವುದನ್ನು ನಿಲ್ಲುಸುತ್ತದೆಯೋ ಅಥವಾ ಮನಸ್ಸು ಇಂದ್ರಿಯಗಳಿಂದ ಸಂಪೂರ್ಣವಾಗಿ ಪ್ರತ್ಯೇಕಗೊಳ್ಳುತ್ತದೆಯೋ ಆಗ ಇಂತಹ ಸ್ಥಿತಿಯು ಹೊಂದಲ್ಪಡುತ್ತದೆ. ಈ ಹಂತದಲ್ಲಿ ಮಾತ್ರವೇ ವಿಶ್ವರೂಪದ ಸಾಕ್ಷಾತ್ಕಾರವಾಗುತ್ತದೆ..."(ಇದು ಶ್ರೀಧರ್‌ಜಿ ಯವರ ’ http://sampada.net/b... ’ ಲೇಖನದಿಂದ ತೆಗೆದುಕೊಂಡದ್ದು.)
ಯೋಗಿ ಧ್ಯಾನದಲ್ಲಿದ್ದೆ. ತಮ್ಮ ಕವನ ಧ್ಯಾನ ಭಂಗ ಮಾಡಿತು. ಇನ್ನಷ್ಟು ಹಾಸ್ಯ ಕವಿತೆಗಳನ್ನು ಬರೆಯಿರಿ ಎಂದು ಶಪಿಸಲೇ?:)

Submitted by bhalle Wed, 07/17/2013 - 00:08

In reply to by ಗಣೇಶ

ಶ್ರೀಧರ ಅವರ ವಿಚಾರವನ್ನು ಇಲ್ಲಿ ಪ್ರಸ್ತಾಪ ಮಾಡಿದುದಕೆ ಧನ್ಯವಾದಗಳು ಗಣೇಶ್'ಜಿ
ನಿಮ್ಮ ಯೋಗನಿದ್ರೆಯನ್ನು ಭಂಗ ಮಾಡಿದ ತಪ್ಪಿಗೆ, ನಿಮ್ಮ ಶಾಪವನ್ನು ಸ್ವೀಕರಿಸಿ ಕೃತಾರ್ಥನಾಗಿದ್ದೇನೆ ... ಅರಿಯದ ಮೂಢ ಮನಸ್ಸಿಗೆ ತಿಳುವಳಿಕೆಯ ಜ್ನಾನತೀರ್ಥವನ್ನು ಸದಾ ಎರೆಯುತ್ತಿರಿ ಎಂದು ಮರುಶಾಪ ನೀಡಲೇ? :-)))

Submitted by makara Fri, 07/19/2013 - 09:07

In reply to by bhalle

 @ಗಣೇಶ್ ಮತ್ತು @ಭಲ್ಲೇಜಿ ನನ್ನ ವಿವರಣೆಯನ್ನು ಇನ್ನಷ್ಟು ವಿಶದಗೊಳಿಸಿ ದೇವರ ಮುಂದೆ ಕಣ್ಮುಚ್ಚಿ ಧ್ಯಾನಿಸುವುದರ ಉದ್ದೇಶವನ್ನು ಹೆಚ್ಚು ತಿಳಿಗೊಳಿಸಿದ್ದಕ್ಕೆ ಇಬ್ಬರಿಗೂ ಧನ್ಯವಾದಗಳು. 
Submitted by ಶ್ರೀನಿವಾಸ ವೀ. ಬ೦ಗೋಡಿ Thu, 07/18/2013 - 12:46

In reply to by ಗಣೇಶ

@ಗಣೇಶ,

 ಮೊದಲಿನೆ ವಾಕ್ಯಗಳನ್ನು ನೋಡಿ, ಗಣೇಶರಿಗೆ ಏನಾಯಿತು ಎಂದು ಗಾಬರಿ ಬಿದ್ದೆ. ಕಡೆಗೆ ಇದು ಶ್ರೀಧರ್‌ಜಿಯವರ ಬರಹದಿಂದ ಎಂದು ಸಮಾಧಾನವಾಯಿತು.

 

@ಶ್ರೀನಾಥ್,

 ಕವನ ವಿಭಿನ್ನವಾಗಿದ್ದು, ಚೆನ್ನಾಗಿದೆ.

 

Submitted by venkatb83 Wed, 07/17/2013 - 20:11

 

 

ಹೌದಾ? 

ನಮಗೂ ಹಾಗೆ  ......  

ಆಗೊಲ್ಲ  ಕಣ್ರೀ ..!!

ಹೌದು ನೋಡುಗರ ದೃಷ್ಟಿಯಲ್ಲಿ  ಒಂದು ವಸ್ತು ಒಂದು ಸನ್ನಿವೇಶ - ಬೇರೆಯದೇ ಆಗಿ ತೋರಬಹ್ದು .. 

 

ಸಖತ್ ಮಜಾ ಕೊಟ್ಟಿತು .. 

ಶುಭವಾಗಲಿ 

 

\। /

 

Submitted by bhalle Thu, 07/18/2013 - 21:00

In reply to by venkatb83

ಸಪ್ತಗಿರಿವಾಸಿಗಳಿಗೆ ನಮಸ್ಕಾರ

ಒಬ್ಬರಿಗೆ ಒಂದು ವಸ್ತು / ಸನ್ನಿವೇಶ ಒಂದು ರೀತಿ ಕಂಡರೆ ಮತ್ತೊಬ್ಬರಿಗೆ ಇನ್ನೊಂದು ರೀತಿಯೇ ಕಾಣುತ್ತೆ ... ಏನ್ ಮಾಡಲಿ, ಸುಮಾರು ಜನ ಮೊದಲಿಗೆ ನನ್ನನ್ನು ತಮಿಳಿನಲ್ಲಿ ಮಾತನಾಡಿಸುತ್ತಿದ್ದರು ... ಈಗ ತೆಲುಗು ಶುರು ಮಾಡಿದ್ದಾರೆ ... ಒಟ್ಟಿನಲ್ಲಿ ಕನ್ನಡ ಛಾಪು ಜನಕ್ಕೆ ಗೋಚರಿಸುತ್ತಲೇ ಇಲ್ಲ ... ನನಗೆ ಸ್ವಲ್ಪ ಹಾಗೇ ಕಣ್ರೀ !!

Submitted by partha1059 Fri, 07/19/2013 - 21:39

In reply to by bhalle

ಏನ್ ಮಾಡಲಿ, ಸುಮಾರು ಜನ ಮೊದಲಿಗೆ ನನ್ನನ್ನು ತಮಿಳಿನಲ್ಲಿ ಮಾತನಾಡಿಸುತ್ತಿದ್ದರು ... ಈಗ ತೆಲುಗು ಶುರು ಮಾಡಿದ್ದಾರೆ ... ಒಟ್ಟಿನಲ್ಲಿ ಕನ್ನಡ ಛಾಪು ಜನಕ್ಕೆ ಗೋಚರಿಸುತ್ತಲೇ ಇಲ್ಲ ...... ಎಲ್ಲಾದರು ಹೋಗಲಿ ಬಿಡಿ ಕಡೆಗೆ ಮಾತನ್ನು ಆಡಿಸುತ್ತ ಇದ್ದಾರಲ್ಲ.......ನಮ್ಮನ್ನು ಎಲ್ಲರು ಮಾತನಾಡುವ‌ ಪ್ರಾಣಿ ಎಂದು ತಿಳಿದರೆ ಸಾಕು , ನನಗೆಷ್ಟೋ ಸಂತಸ‌... ಕೆಲವರು ಹಾಯ್, ಹೋಯ್, ಉಶ್ ಎಂದೆಲ್ಲ ಕರೆಯುತ್ತಾರಲ್ಲ ಹಾಗೆಲ್ಲ ಆಗದಿದ್ದರೆ ಸರಿ
Submitted by bhalle Sat, 07/20/2013 - 21:07

In reply to by partha1059

ಇದು ಉಪೇಂದ್ರ ಯುಗ ... "ಥ್ಯಾಂಕ್ ಯೂ" ಎಂಬೋದನ್ನ TY ಅನ್ನೋ ಹಾಗೆ ... ಕ್ಷಿಪ್ರ, ಕ್ಲಿಪ್ತ ... ಬೇಗ ಕೆಲಸ ಆಗಬೇಕು ... ಅರ್ಥ ಅರ್ಧವಾದರೂ ಚಿಂತಿಲ್ಲ ... ಹಾಗಾಗಿ 'ಯೋ, ಟುರ್ರ್' ಎಂದಾಗಲೂ ತಿರುಗಿ ನೋಡಬೇಕು !!
Submitted by Indushree Wed, 07/17/2013 - 22:00

ನಿಜವಾಗಲೂ ಉಪಮೆ ರೂಪಕಗಳ ಪಾಠ ಮಾಡುವವರು ಒಮ್ಮೆ ಈ ಪದ್ಯ ನೋಡಬೇಕು.... ಯಾವಾಗಲೂ ಅದೇ ಉದಾಹರಣೆ ಕೇಳಿ ಕೇಳಿ ಪಾಠ ಕಲಿಯುವವರಿಗೆ ಬೇಜಾರಾಗಿಬಿಟ್ಟಿರುತ್ತೆ... ಇದನ್ನು ಅವರು ಉಪಯೋಗಿಸಿಕೊಳ್ಳಬಹುದು
ಮಗೂನ ಆಲೂಗಡ್ಡೆ ಪಲ್ಯಕ್ಕೆ ಹೋಲಿಸಿರೋದಂತೂ ಸಖತ್!!!

Submitted by bhalle Thu, 07/18/2013 - 21:02

In reply to by Indushree

ಅನಂತ ಧನ್ಯವಾದಗಳು ಇಂದುಶ್ರೀ

ನೀವು ಉಪಮೆ ಎಂದು ಹೇಳಿದ್ದಕ್ಕೆ ನೆನಪಾಯ್ತು ನೋಡಿ ... "ಉಪಮಾ ಕಾಳೀದಾಸಸ್ಯ" ಅಂತ ಯಾರಿಗೋ ಹೇಳಿದ್ದಕ್ಕೆ "ಕೇಸರೀಬಾತ್ ಯಾವ ಕವಿ" ಅನ್ನೋದೇ?

 

Submitted by Indushree Fri, 07/19/2013 - 20:34

In reply to by bhalle

>> "ಉಪಮಾ ಕಾಳೀದಾಸಸ್ಯ" ಅಂತ ಯಾರಿಗೋ ಹೇಳಿದ್ದಕ್ಕೆ "ಕೇಸರೀಬಾತ್ ಯಾವ ಕವಿ" ಅನ್ನೋದೇ? ಪ್ರಶ್ನೆ ಕೇಳಿದ್ದು ಹಾಸ್ಯಕ್ಕೋ, ಅಥವಾ ಅಜ್ಞಾನದಿಂದಲೋ ಗೊತ್ತಿಲ್ಲ... ಆದ್ರೆ ನನಗೆ ಮಾತ್ರ ನಗು ತಡೆಯೋಕೆ ಆಗ್ತಿಲ್ಲ.... ‌:)‌ :) :)