೬೬. ಶ್ರೀ ಲಲಿತಾ ಸಹಸ್ರನಾಮ ೨೩೫ರಿಂದ ೨೩೮ನೇ ನಾಮಗಳ ವಿವರಣೆ

೬೬. ಶ್ರೀ ಲಲಿತಾ ಸಹಸ್ರನಾಮ ೨೩೫ರಿಂದ ೨೩೮ನೇ ನಾಮಗಳ ವಿವರಣೆ

  ಲಲಿತಾ ಸಹಸ್ರನಾಮ ೨೩೫ - ೨೩೮

Chatuḥ-ṣaṣṭyupacārāḍhyā चतुः-षष्ट्युपचाराढ्या (235)

೨೩೫. ಚತುಃ-ಷಷ್ಟ್ಯುಪಚಾರಾಢ್ಯಾ

              ದೇವಿಯು ೬೪ ವಿಧವಾದ ಸಾಂಕೇತಿಕ ಪೂಜೆಗಳಿಂದ ಆರಾಧಿಸಲ್ಪಡುತ್ತಾಳೆ ಅವನ್ನೇ ಉಪಚಾರಗಳೆಂದು ಕರೆಯುತ್ತಾರೆ. ಉದಾಹರಣೆಗೆ ದೇವಿಗೆ ಗಂಧ, ಪುಷ್ಪ, ಬಳೆ, ಚಾಮರ ಸೇವೆ ಮಾಡುವುದು, ಮೊದಲಾದವು ಇವುಗಳಲ್ಲಿ ಬರುತ್ತವೆ. ಒಟ್ಟನಲ್ಲಿ ೬೪ ವಿಧವಾದ ಸೇವೆಗಳು ದೇವಿಗೆ ನಮೂದಿಸಲ್ಪಟ್ಟಿವೆ. ಈ ನಾಮವು ದೇವಿಯ ಪೂಜಾಚರಣೆಯ ಕುರಿತಾಗಿ ಹೇಳುತ್ತದೆ. 

Catuḥṣaṣṭi-kalāmayī चतुःषष्टि-कलामयी (236)

೨೩೬. ಚತುಃಷಷ್ಟಿ-ಕಲಾಮಯೀ

             ದೇವಿಯು ೬೪ ವಿಧವಾದ ಕಲೆಗಳ ರೂಪದಲ್ಲಿ ಇರುತ್ತಾಳೆ. ಕಲೆಗಳೆಂದರೆ ವಿದ್ಯೆ ಮತ್ತು ತಂತ್ರ ಶಾಸ್ತ್ರದಲ್ಲಿ ೬೪ ವಿಧವಾದ ಕಲೆಗಳಿವೆ. ಈ ರೀತಿಯಾದ ೬೪ ಕಲೆಗಳಿರುವುದನ್ನು ಪುರಸ್ಕರಿಸಲಾಗಲಿ ಅಥವಾ ತಿರಸ್ಕರಿಸಲಾಗಲಿ ಸೂಕ್ತವಾದ ಪುರಾವೆಯಿಲ್ಲ. ಈ ಎಲ್ಲಾ ವಿದ್ಯೆಗಳು ಅಷ್ಟ ಸಿದ್ಧಿ (ಎಂಟು ಅತಿಮಾನುಷ ಅಥವಾ ಅತೀಂದ್ರಿಯ  ಶಕ್ತಿಗಳಿಂದ) ಉದ್ಭವಿಸುತ್ತವೆ. ಸ್ವಯಂ ಶಿವನೇ ಇವನ್ನು ಪಾರ್ವತಿಗೆ ಹೇಳಿಕೊಟ್ಟನೆಂದು ಪ್ರತೀತಿ. ಸೌಂದರ್ಯ ಲಹರಿಯ ೩೧ನೇ ಶ್ಲೋಕವು, "ಚತುಃ‍ಷಷ್ಟ್ಯಾ- ತಂತ್ರೈಃ - ಸಕಲಮ್" ಅಂದರೆ ಈ ಅರವತ್ನಾಲ್ಕು ತಂತ್ರಗಳು ಎಲ್ಲವನ್ನೂ ಒಳಗೊಂಡಿವೆ ಎಂದು ಹೇಳುತ್ತದೆ. ಇದೇ ಶ್ಲೋಕವು ಮುಂದುವರಿಯುತ್ತಾ, ಅರವತ್ನಾಲ್ಕು ತಂತ್ರಗಳು ಒಂದಕ್ಕೊಂದು ಪೂರಕವಾಗಿರುವ ಪ್ರತ್ಯೇಕವಾದ ವಿವಿಧ ರೀತಿಯ ಸಿದ್ಧಿಗಳನ್ನುಂಟು ಮಾಡಲಿಕ್ಕೆ ಮೀಸಲಾಗಿವೆ; ಮತ್ತು ಈ ತಂತ್ರಗಳು ಸಂಪೂರ್ಣ ಬ್ರಹ್ಮಾಂಡವನ್ನು ಭ್ರಮೆಗೊಳಗಾಗುವಂತೆ ಮಾಡಿವೆ;  ನಂತರ ನಿನ್ನ ಒತ್ತಡದ ಮೇರೆಗೆ, ಜೀವಿಗಳ ಒಡಯನಿಂದಲೇ ಈ ಪ್ರಪಂಚಕ್ಕೆ ತರಲ್ಪಟ್ಟ ನಿನ್ನ ಮಂತ್ರವು (ಪಂಚದಶೀ), ಮಾನವನ ಆಸೆಗಳ ಎಲ್ಲಾ ಲಕ್ಷ್ಯಗಳನ್ನು ಪೂರೈಸುವ ಏಕೈಕ ಮಾರ್ಗವಾಗಿದೆ" ಎಂದು ಹೇಳುತ್ತದೆ. (ಅರವತ್ನಾಲ್ಕು ತಂತ್ರ ವಿದ್ಯೆಗಳು ಭ್ರಮಾತ್ಮಕವಾದ ಈ ಪ್ರಪಂಚವನ್ನು ಉಂಟು ಮಾಡಿವೆ ಮತ್ತು ಇವೇ ತಂತ್ರಗಳು ವಿವಿಧ ರೀತಿಯ ಸಿದ್ಧಿಗಳನ್ನು ಉಂಟುಮಾಡುತ್ತವೆ. ಆದರೆ ಈ ಸಿದ್ಧಿಗಳು ಕೇವಲ ಮೂರು ಪುರುಷಾರ್ಥಗಳನ್ನು (ಧರ್ಮ, ಅರ್ಥ ಮತ್ತು ಕಾಮಗಳನ್ನು) ಮಾತ್ರವೇ ಹೊಂದಲು ಅವಕಾಶ ಮಾಡಿಕೊಡುತ್ತವೆ. ಆದರೆ ಪಂಚದಶೀ ಮಂತ್ರವು ನಾಲ್ಕನೆಯ ಪುರುಷಾರ್ಥವಾದ ಮುಕ್ತಿಯನ್ನು ಕರುಣಿಸುತ್ತದೆ, ಎನ್ನುವುದು ಸ್ತೋತ್ರ ೩೧ರ ತಾತ್ಪರ್ಯ. ಸ್ವಯಂ ದೇವಿಯ ಒತ್ತಡದ ಮೇರೆಗೆ ಪುನಃ ಈ ಪ್ರಪಂಚಕ್ಕೆ ತರಲ್ಪಟ್ಟ ಪಂಚದಶೀ ಮಂತ್ರವೊಂದೇ ಮಾನವನ ಎಲ್ಲಾ ವಿಧವಾದ ಆಸೆಗಳನ್ನು/ಪುರುಷಾರ್ಥಗಳನ್ನು ಪೂರೈಸಲು ಸಾಕು). ಈ ತಂತ್ರಗಳು ಪಂಚದಶೀ ಮಂತ್ರದಿಂದ ಉದ್ಭವಿಸಿ ಅದೇ ಪಂಚದಶೀ ಮಂತ್ರದಲ್ಲಿ ಕೊನೆಗೊಳ್ಳುತ್ತವೆ, ಇದು ಸೌಂದರ್ಯಲಹರಿಯ ಅದೇ ಶ್ಲೋಕದ "ಇದಮ್ ತೇ ತಂತ್ರಮ್" ಅಂದರೆ ಇದುವೇ ಆ ತಂತ್ರ ಎಂದು ಬಹುಶಃ ಪಂಚದಶೀ ಮಂತ್ರವನ್ನು ಕುರಿತಾಗಿ ಹೇಳಿರಬಹುದು ಎನ್ನುವ ಸಂಗತಿಯು ಸೌಂದರ್ಯ ಲಹರಿಯ ಮುಂದಿನ ಶ್ಲೋಕದ ಹೇಳಿಕೆಯಿಂದ ವಿಶದವಾಗುತ್ತದೆ. ದೇವಿ ಮತ್ತು ಅವಳ ಪಂಚದಶೀ ಮಂತ್ರಕ್ಕೆ ಯಾವುದೇ ಭೇದವಿಲ್ಲದೇ ಇರುವುದರಿಂದ ದೇವಿಯು ತಂತ್ರ ವಿದ್ಯೆಯ ಎಲ್ಲಾ ಅರವತ್ನಾಲ್ಕು ಕಲೆಗಳ ರೂಪದಲ್ಲಿ ಇರುತ್ತಾಳೆಂದು ಹೇಳಲಾಗಿದೆ.

ಈ ಅರವತ್ನಾಲ್ಕು ಕಲೆಗಳು ಯಾವುವೆಂದರೆ:  

           ೧. ಗೀತಮ್, ೨.ವಾದ್ಯಮ್, ೩.ನೃತ್ಯಮ್, ೪.ನಾಟ್ಯಮ್, ೫.ಆಲೇಖ್ಯಮ್, ೬.ವಿಶೇಷಕ-ಚ್ಛೇದ್ಯಮ್, ೭.ತಂಡುಲ-ಕುಸುಮ-ಬಲಿವಿಕಾರಾಃ, ೮.ಪುಷ್ಪಾಸ್ಟರಣಮ್, ೯.ದಶನ-ವಸನಾಙ್ಗರಾಗಾಃ, ೧೦.ಮಣಿ-ಭೂಮಿಕಾ-ಕರ್ಮ,೧೧.ಶಯನ-ರಚನಮ್, ೧೨.ಉದಕ-ವಾದ್ಯಮ್, ೧೩.ಉದಕ-ಘಟಃ, ೧೪.ಚಿತ್ರಾ-ಯೋಗಃ, ೧೫.ಮಾಲ್ಯ-ಗ್ರಥನ-ವಿಕಲ್ಪಃ, ೧೬.ಕೇಶ-ಶೇಖರಾಪೀಡಯೊಜನಮ್, ೧೭.ನೇಪಥ್ಯ-ಯೋಗಃ, ೧೮.ಕರ್ಣ-ಪತ್ರ-ಭಂಗಃ, ೧೯.ಗಂಧ-ಯುಕ್ತಿಃ, ೨೦.ಭೂಷಣ-ಯೊಜನಮ್, ೨೧.ಇಂದ್ರಜಾಲಮ್, ೨೨.ಕೌಚುಮಾರ-ಯೋಗಃ, ೨೩.ಹಸ್ತ-ಲಾಘವಮ್, ೨೪.ಚಿತ್ರಶಾಕಾಪೂಪ-ವಿಕಾರ-ಕ್ರಿಯಾ, ೨೫.ಪಾನಕ-ರಸರಾಗಾಸವ-ಯೊಜನಮ್, ೨೬.ಸೂಚೀವಾಪ-ಕರ್ಮ, ೨೭.ವೀಣಾ-ಡಮರುಕ-ಸೂತ್ರ-ಕ್ರೀಡಾ, ೨೮.ಪ್ರಹೇಲಿಕಾ, ೨೯.ಪ್ರತಿಮಾ, ೩೦.ದುರ್ವಾಚಕಯೋಗಃ, ೩೧.ಪುಸ್ತಕ-ವಾಚನಮ್, ೩೨.ನಾಟಕಾಖ್ಯಾಯಿಕಾ-ದರ್ಶನಮ್, ೩೩.ಕಾವ್ಯ-ಸಮಸ್ಯಾ-ಪೂರಣಂ, ೩೪.ಪಟ್ಟಿಕಾ-ವೇತ್ರಬಾಣ-ವಿಕಲ್ಪಃ, ೩೫.ತರ್ಕೂ-ಕರ್ಮಾಣಿ, ೩೬.ತಕ್ಷಣಮ್, ೩೭.ವಾಸ್ತು-ವಿದ್ಯಾ, ೩೮.ರೂಪ್ಯಾ-ರತ್ನ-ಪರೀಕ್ಷಾ, ೩೯.ಧಾತು-ವಾದಃ, ೪೦.ಮಣಿ-ರಾಗ-ಜ್ಞಾನಮ್, ೪೧.ಆಕರ-ಜ್ಞಾನಮ್, ೪೨.ವೃಕ್ಷಾಯುರ್ವೇದ ಯೋಗಃ, ೪೩.ಮೇಷ-ಕುಕ್ಕುಟ-ಲಾವಕ-ಯುದ್ಧ-ವಿಧಿಃ, ೪೪.ಶುಕ-ಸಾರಿಕಾ-ಪ್ರಲಾಪನಮ್, ೪೫.ಉತ್ಸಾದನಮ್, ೪೬.ಕೇಶ-ಮಾರ್ಜನ-ಕೌಶಲಂ, ೪೭.ಅಕ್ಷರ-ಮುಷ್ಟಿಕ-ಕಥನಂ, ೪೮.ಮ್ಲೇಚ್ಛಿಟಕಾ-ವಿಕಲ್ಪಃ, ೪೯.ದೇಶ-ಭಾಷಾ-ಜ್ಞಾನಮ್, ೫೦.ಪುಷ್ಪ-ಶಕಟಿಕ-ನಿರ್ಮಿತಿ-ಜ್ಞಾನಮ್, ೫೧.ಯಂತ್ರ-ಮಾತೃಕಾ, ೫೨.ಧಾರಣ-ಮಾತೃಕಾ, ೫೩.ಸಂವಾಚ್ಯಮ್, ೫೪.ಮಾನಸೀ-ಕಾವ್ಯ-ಕ್ರಿಯಾ, ೫೫.ಕ್ರಿಯಾ-ವಿಕಲ್ಪಃ, ೫೬.ಚಲಿತಯೋಗಃ, ೫೭.ಅಭಿಧಾನ-ಕೋಶ-ಚ್ಛಂದೋ-ಜ್ಞಾನಮ್, ೫೮.ವಸ್ತ್ರ-ಗೋಪನಾನಿ, ೫೯.ದ್ಯೂತ-ವಿಶೇಷಃ, ೬೦.ಆಕರ್ಷಣ-ಕ್ರೀಡಾ, ೬೧.ಬಾಲಕ-ಕ್ರೀಡಾನಕಾನಿ, ೬೨.ವೈನಾಯಕೀನಾಮ್-ವಿದ್ಯಾನಾಮ್-ಜ್ಞಾನಮ್, ೬೩.ವೈಜಯಿಕೀನಾಮ್-ವಿದ್ಯಾನಾಮ್-ಜ್ಞಾನಮ್. ೬೪. ವೈತಾಳಕೀ ವಿದ್ಯಾ.

               गीतम्, वाद्यम्, नृत्यम्, नात्यम्, आलेख्यम्, विशेषक‍च्छेद्यम्, तण्डुल‍कुसुम‍बलिविकाराः, पुष्पास्तरनम्, दशन‍वसनाङ्गरागाः, मणि‍भूमिका‍कर्म, शयन‍रचनम्, उदक‍वाद्यम्, उदक‍घातः, चित्रा_योगाः, माल्य‍ग्रन्थन‍विकल्पाः, केश‍शेखरापीडयोजनम्, नेपथ्य‍योगाः, कर्ण‍पत्त्र‍भङ्गाः, गन्ध‍युक्तिः, भूषण‍योजनम्, इन्द्रजालम्, कौचुमार‍योगाः, हस्त‍लाघवम्, चित्रशाकापूप‍भक्ष्य‍विकार‍क्रिया, पानक‍रसरागासव‍योजनम्, सूचीवाप‍कर्म, वीणा‍डम‍रुक‍सूत्र‍क्रीडा, प्रहेलिका, प्रतिमा, दुर्वचकयोगाः, पुस्तक‍वाचनम्, नाटकाख्यायिका‍दर्शनम्, काव्य‍समस्या‍पूरणम्, पट्टिका‍वेत्रबाण‍विकल्पाः, तर्कू‍कर्माणि, तक्षणम्, वास्तु‍विद्या, रूप्य‍रत्न‍परीक्षा, धातु‍वादः, मणि‍राग‍ज्ञानम्, आकर‍ज्ञानम्, वृक्षायुर्‍वेद‍योगाः, मेष‍कुक्कुट‍लावक‍युद्ध‍विधिः, शुक‍सारिका‍प्रलापनम्, उत्सादनम्, केश‍मार्जन‍कौशलम्, अक्षर‍मुष्टिका‍कथनम्, म्लेछितक‍विकल्पाः, देश‍भाषा‍ज्ञानम्, पुष्प‍शकटिका‍निमित्त‍ज्ञानम्, यन्त्र‍मातृका, धारण‍मातृका, संपाट्यम्, मानसी_काव्य‍क्रिया, क्रिया‍विकल्पाः, छलितकयोगाः, अभिधान‍कोष‍च्छन्दो‍ज्ञानम्, वस्त्र‍गोपनानि, द्यूत‍विशेषः, आकर्षण‍क्रीडा, बालक‍क्रीडनकानि, वैनायिकीनां‍विद्याणां‍ञानम्, वैजयिकीनां‍विद्यानां‍ज्ञानम्. वैताळकी विद्या 

               ಈ ಪಟ್ಟಿಯು ಗ್ರಂಥದಿಂದ ಗ್ರಂಥಕ್ಕೆ ಭಿನ್ನವಾಗಿದೆ.

Mahā-catuḥ-ṣaṣti-koṭi-yoginī-gana-sevithā महा-चतुः-षष्ति-कोटि-योगिनी-गन-सेविथा (237)

೨೩೭. ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ

               ಯೋಗಿನೀ ಗಣಗಳು ಉಪದೇವತೆಗಳಾಗಿದ್ದು, ದೇವಿಯು ಇಂತಹ ಅರವತ್ತುನಾಲ್ಕು ಕೋಟಿ ಯೋಗಿನಿಯರಿಂದ ಸೇವಿಸಲ್ಪಡುತ್ತಾಳೆ. ಶ್ರೀ ಚಕ್ರದಲ್ಲಿ ಎಂಟು ಮಾತೃಕಾ ದೇವಿಯರು ಅಥವಾ ಅಷ್ಟ ಮಾತೆಯರೆಂದು ಕರೆಯಲ್ಪಡುವ ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡಾ, ಮಹಾಲಕ್ಷ್ಮೀ ಇವರುಗಳಿದ್ದಾರೆ. ಈ ಅಷ್ಟ ಮಾತೆಯರಿಗೆ ಎಂಟೆಂಟು ಸಹಾಯಕರಿದ್ದು ಅವರನ್ನು ಯೋಗಿನಿಯರೆನ್ನುತ್ತಾರೆ ಹಾಗಾಗಿ ಇವರ ಸಂಖ್ಯೆಯು ೬೪ ಆಗುತ್ತದೆ. ಈ ಅರವತ್ತುನಾಲ್ಕು ಯೋಗಿನಿಯರೊಬ್ಬೊಬ್ಬರಿಗೂ ಒಂದು ಕೋಟಿ ಪರಿಚಾರಿಕೆಯರಿದ್ದಾರೆ; ಹಾಗಾಗಿ ಅವರ ಸಂಖ್ಯೆಯು ೬೪ ಕೋಟಿಯಾಗುತ್ತದೆ ಮತ್ತು ಇವರುಗಳು ವಿಶ್ವದ ವಿವಿಧ ಆಗು-ಹೋಗುಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ.

              ‘ಶ್ರೀ ಚಕ್ರ’ದಲ್ಲಿ ಒಂಭತ್ತು ಆವರಣಗಳಿದ್ದು (ಸುತ್ತುಗಳಿದ್ದು), ಪ್ರತಿಯೊಂದು ಆವರಣವೂ ಒಬ್ಬೊಬ್ಬ ಯೋಗಿನಿಯಿಂದ ನಿಯಂತ್ರಿಸಲ್ಪಡುತ್ತದೆ. ಒಂಭತ್ತನೆಯ ಆವರಣವನ್ನು ಸ್ವಯಂ ದೇವಿ ಲಲಿತಾಂಬಿಕೆಯೇ ನಿಯಂತ್ರಿಸುತ್ತಾಳೆ. ಉಳಿದ ಆವರಣಗಳನ್ನು ಗಣನೆಗೆ ತೆಗೆದುಕೊಂಡರೆ ಒಂದೊಂದು ಆವರಣದಲ್ಲಿಯೂ ಒಂದು ಕೋಟಿ ಯೋಗಿನಿರಿರುತ್ತಾರೆ. ಅರವತ್ತನಾಲ್ಕು ಸಂಖ್ಯೆಗೆ ಯಾವುದೋ ಮಹತ್ವವಿರಬೇಕು ಆದ್ದರಿಂದ ಈ ಸಂಖ್ಯೆಯು ೨೩೫, ೨೩೬ ಹಾಗೂ ಈ ನಾಮದಲ್ಲಿ ಅನುಕ್ರಮವಾಗಿ ಬಂದಿದೆ. ಬಹುಶಃ ಈ ಅರವತ್ತನಾಲ್ಕು ಸಂಖ್ಯೆಯು ೬೪ ತತ್ವಗಳನ್ನು ಸೂಚಿಸಬಹುದೆನಿಸುತ್ತದೆ. ಪಂಚಭೂತಗಳಾದ ಆಕಾಶ ಮೊದಲಾದವುಗಳು, ಅಂತಃಕರಣವೆಂದು ಕರೆಯಲ್ಪಡುವ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳೊಂದಿಗೆ ಸಮ್ಮಿಳಿತಗೊಂಡು ೬೪ ವಿಧವಾದ ತತ್ವಗಳಾಗುತ್ತವೆ ಮತ್ತು ಈ ತತ್ವಗಳು ಮನುಷ್ಯನ ಎಲ್ಲಾ ವಿಧವಾದ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ. ೨೩೦ನೇ ನಾಮವನ್ನೂ ನೋಡಿ.

Manu-vidyā मनु-विद्या (238)

೨೩೮. ಮನು-ವಿದ್ಯಾ

            ವಿದ್ಯಾ ಎಂದರೆ ಈ ಸಂದರ್ಭದಲ್ಲಿ ಶ್ರೀ ವಿದ್ಯಾ ಮತ್ತದು ಶ್ರೀ ಚಕ್ರದ ಆರಾಧನೆಯನ್ನು ಸೂಚಿಸುತ್ತದೆ. ’ಶ್ರೀ ವಿದ್ಯಾ’ ಆರಾಧನೆಯ ಮೂಲವು ಪಂಚದಶೀ ಮಂತ್ರವಾಗಿದೆ. ಹನ್ನೆರಡು ವಿಧವಾದ ಪಂಚದಶೀ ಮಂತ್ರಗಳಿದ್ದು ಅವುಗಳನ್ನು ಕ್ರಮವಾಗಿ ಮನು, ಕುಬೇರ (ಸಂಪತ್ತಿನ ಅಧಿದೇವತೆ), ಚಂದ್ರ, ಲೋಪಾಮುದ್ರಾ (ಮಹರ್ಷಿ ಅಗಸ್ತ್ಯರ ಪತ್ನಿ), ಅಗಸ್ತ್ಯ, ಮನ್ಮಥ    (ಕಾಮದ ಅಧಿದೇವತೆ), ಅಗ್ನಿ, ಸೂರ್ಯ, ಇಂದ್ರ, ಸ್ಕಂದ (ಶಿವ ಪಾರ್ವತಿಯರ ಮಗನಾದ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ), ಶಿವ (ದೇವಿಯ ಸಂಗಾತಿ) ಮತ್ತು ದೂರ್ವಾಸ. ಮೂಲ ಮಂತ್ರವು ಎಲ್ಲದರಲ್ಲೂ ಒಂದೇ ಆಗಿದೆ. ಈ ಸಹಸ್ರನಾಮವು ಈ ಎಲ್ಲಾ ವಿಧವಾದ ಪಂಚದಶೀ ಮಂತ್ರಗಳನ್ನು ಹೆಸರಿಸುತ್ತಾ ಅವುಗಳಲ್ಲಿ ಮೊದಲನೆಯದನ್ನು ಇಲ್ಲಿ ಹೇಳುತ್ತಿದೆ. ಈ ನಾಮವು ಮನುವಿನಿಂದ ಪೂಜಿಸಲ್ಪಟ್ಟದ್ದನ್ನು ತಿಳಿಸುತ್ತಿದೆ.

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 235-238 http://www.manblunder.com/2009/09/lalitha-sahasranamam-235-238.html  ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by nageshamysore Sat, 07/13/2013 - 16:32

ಶ್ರೀಧರರೆ, ಲಲಿತಾ ಸಹಸ್ರನಾಮ ೨೩೫ - ೨೩೮ ತಮ್ಮ ಅವಗಾಹನೆ ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು

ಲಲಿತಾ ಸಹಸ್ರನಾಮ ೨೩೫ - ೨೩೮
-------------------------------------------

೨೩೫. ಚತುಃ-ಷಷ್ಟ್ಯುಪಚಾರಾಢ್ಯಾ 
ಪೂಜೆ ಆರಾಧನೆಗಳ ಹೆಸರೆ ಉಪಚಾರ
ಅರವತ್ನಾಲ್ಕು ವಿಧದ ಸಾಂಕೇತಿಕ ಸಾರ
ಗಂಧ ಪುಷ್ಪ ಬಳೆ ಚಾಮರ ತರ ಸೇವಿತ
ಚತುಃ ಷಷ್ಟ್ಯುಪಚಾರಾಢ್ಯಾ ದೇವಿ ಲಲಿತ!

೨೩೬. ಚತುಃಷಷ್ಟಿ-ಕಲಾಮಯೀ
ಅತೀಂದ್ರಿಯಾಷ್ಟಸಿದ್ದಿ ಶಕ್ತಿಯಿಂದುದ್ಭವಾ ವಿದ್ಯೆ ತಂತ್ರ ಕಲೆ
ಧರ್ಮಾರ್ಥಾಕಾಮ ಪುರುಷಾರ್ಥ ಸಾಧನೆ ಅರವತ್ನಾಲ್ಕಲೆ
ಬ್ರಹ್ಮಾಂಡವೆ ಭ್ರಮಾಧೀನ ಐಹಿಕ ಸಿದ್ದಿಗಷ್ಟೇ ಸೀಮಿತ ಕಲೆ
ನಾಲ್ಕನೆ ಪುರುಷಾರ್ಥ ಮುಕ್ತಿಸಹಿತ ಎಲ್ಲ ಪಂಚದಶಿಯಲೆ!

೨೩೭. ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ 
ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ
ಚಾಮುಂಡಾ ಮಹಾಲಕ್ಷ್ಮೀ ಚತುಃಷಷ್ಠಿ ಯೋಗಿನಿ ಸೇವಾ ಸಂದಣಿ
ಅಷ್ಟಮಾತೃಕೆ ಜತೆಗೆ ಲಲಿತೆಗೆ ಅರವತ್ನಾಲ್ಕು ಪರಿಚಾರಿಕೆ ಕೋಟಿ
ವಿಶ್ವದಾ ಅಗುಹೋಗು ಮೇಲ್ವಿಚಾರಿಸುತ ದೇವಿಯ ಸೇವೆಗೆ ಸಾಟಿ!

೨೩೮. ಮನು-ವಿದ್ಯಾ 
ದ್ವಾದಶಾ ತರ ಪಂಚದಶೀ ಮಂತ್ರ ಮನು ಕುಬೇರ ಚಂದ್ರ ಲೋಪಾಮುದ್ರಾ
ಅಗಸ್ತ್ಯ ಮನ್ಮಥ ಅಗ್ನಿ ಸೂರ್ಯ ಇಂದ್ರ ಸ್ಕಂದ ಶಿವ ದೂರ್ವಾಸ ಏಕಾಧಾರ
ಶ್ರೀ ವಿದ್ಯಾರಾಧನೆಗೆ ಮೂಲ ಪಂಚದಶೀ ಮಂತ್ರ ಶ್ರೀ ಚಕ್ರದೆ ಮನು ಪೂಜಿತ
ದ್ವಾದಶದಲಿ ಮೊದಲಾಗಿ ಮನು-ವಿದ್ಯಾ ಲಲಿತೆಯ ಓಲೈಸೊ ಮನೋಗತ!

Submitted by makara Sat, 07/13/2013 - 18:11

In reply to by nageshamysore

೨೩೫ರಿಂದ ೨೩೮ನೇ ನಾಮಗಳ ಸವರಣೆ ಕುರಿತು.
ನಾಗೇಶರೆ ಎಂದಿನಂತೆ ಎಲ್ಲಾ ಕಾವ್ಯಗಳು ಸುಂದರವಾಗಿ ಮೂಡಿ ಬಂದಿವೆ. ಅದರಲ್ಲೂ ನನಗೆ ಅತ್ಯಂತ ಖುಷಿ ಕೊಟ್ಟದ್ದು ೨೩೬. ಚತುಷಷ್ಠಿ ಕಲಾಮಯೀ; ಏಕೆಂದರೆ ಅದನ್ನು ಅರ್ಥಮಾಡಿಕೊಳ್ಳಲಿಕ್ಕೆ ತುಸು ಕಷ್ಟಕರವಾದದ್ದು. ಆದರೂ ಸಹ ಅದರ ಸಾರವನ್ನು ಸರಿಯಾಗಿ ಗ್ರಹಿಸಿ ಈ ಕಾವ್ಯದಲ್ಲಿ ಬಂಧಿಸಿದ್ದೀರ, ಹಾಗಾಗಿ ಇದರ ಕುರಿತು ಹೆಚ್ಚಿನ ಸಂತೋಷವಾದದ್ದು. ಇನ್ನು ಒಂದೆರಡು ಸಣ್ಣ ಸಲಹೆಗಳಿವೆ ಅವನ್ನು ಕೆಳಗೆ ಪಟ್ಟಿ ಮಾಡಿದ್ದೇನೆ; ಅವನ್ನು ಸೂಕ್ತವಾಗಿ ಪರಿಷ್ಕರಿಸಿ.
೨೩೫. ಚತುಃ-ಷಷ್ಟ್ಯುಪಚಾರಾಢ್ಯಾ
.
.
ಗಂಧ ಪುಷ್ಪ ಬಳೆ ಚಾಮರ ತರ ಸೇವಿತ
ಚಾಮರ ತರ ಸೇವಿತ = ಚಾಮರಾದಿ ಸೇವಿತ ಒಪ್ಪುತ್ತದೆಯೋ ನೋಡಿ.
ಚತುಃ ಷಷ್ಟ್ಯುಪಚಾರಾಢ್ಯಾ ದೇವಿ ಲಲಿತ!

೨೩೭. ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ
ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ
ಚಾಮುಂಡಾ ಮಹಾಲಕ್ಷ್ಮೀ ಚತುಃಷಷ್ಠಿ ಯೋಗಿನಿ ಸೇವಾ ಸಂದಣಿ
ಅಷ್ಟಮಾತೃಕೆ ಜತೆಗೆ ಲಲಿತೆಗೆ ಅರವತ್ನಾಲ್ಕು ಪರಿಚಾರಿಕೆ ಕೋಟಿ
ವಿಶ್ವದಾ ಅಗುಹೋಗು ಮೇಲ್ವಿಚಾರಿಸುತ ದೇವಿಯ ಸೇವೆಗೆ ಸಾಟಿ!

ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ ಚಾಮುಂಡಾ ಮಹಾಲಕ್ಷ್ಮೀ - ಈ ಅಷ್ಟಮಾತೃಕೆಯರೂ ಸಹ ದೇವಿಯ ವಿವಿಧ ರೂಪಗಳೇ, ಆದ್ದರಿಂದ ಎರಡನೇ ಸಾಲನ್ನು ಬೇಕಾದರೆ ಹೀಗೆ ಸವರಣೆ ಮಾಡಬಹುದು.
ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ
ಚಾಮುಂಡಾ ಮಹಾಲಕ್ಷ್ಮೀ ಅಷ್ಟಮಾತೃಕಾ ಬಹು ರೂಪಿಣೀ !

ಅಷ್ಟಮಾತೃಕೆಯರಿಗೆ ಒಬ್ಬೊಬ್ಬರಿಗೆ ಎಂಟು ಯೋಗಿನಿಯರು ಸಹಾಯಕರು; ಹಾಗಾಗಿ ಈ ಯೋಗಿನಿಯರ ಸಂಖ್ಯೆ ೬೪ ಆಗುತ್ತದೆ. ಮತ್ತು ಒಬ್ಬೊಬ್ಬ ಯೋಗಿನಿಗೂ ಸಹ ಒಂದೊಂದು ಕೋಟಿ ಪರಿಚಾರಿಕೆಯರಿದ್ದಾರೆ. ಹಾಗಾಗಿ ಒಟ್ಟಿನಲ್ಲಿ ಲಲಿತಾಂಬಿಕೆಯು ಚತುಃ ಷಷ್ಠಿ ಕೋಟಿ ಯೋಗಿನೀ ಗಣ ಸೇವಿತಾ. ಹಾಗಾಗಿ ಕಡೆಯ ಎರಡು ಸಾಲುಗಳಲ್ಲಿ ಸ್ವಲ್ಪ ಅರ್ಥವ್ಯತ್ಯಯ ಉಂಟಾಗುತ್ತದೆ. ಈ ಅರ್ಥ ಬರುವಂತೆ ಸೂಕ್ತವಾಗಿ ಸವರಣೆ ಮಾಡಿ. ನಿಮ್ಮ ಕಾವ್ಯವನ್ನು ಹೇಗೆ ತಿದ್ದಬಹುದೆಂಬ ಕಲ್ಪನೆ ನನಗೆ ಬರುತ್ತಿಲ್ಲ.
ಸ್ವಲ್ಪ ಸವರಣೆ ಮಾಡಬೇಕಾಗಿರುವುದು ಈ ಕೆಳಗಿನ ಸಾಲುಗಳು

ಅಷ್ಟಮಾತೃಕೆ ಜತೆಗೆ ಲಲಿತೆಗೆ ಅರವತ್ನಾಲ್ಕು ಪರಿಚಾರಿಕೆ ಕೋಟಿ
ವಿಶ್ವದಾ ಅಗುಹೋಗು ಮೇಲ್ವಿಚಾರಿಸುತ ದೇವಿಯ ಸೇವೆಗೆ ಸಾಟಿ!
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by nageshamysore Sat, 07/13/2013 - 20:06

In reply to by makara

ಶ್ರೀಧರರೆ, ಈಗ ೨೩೭ ಅರ್ಥ ಸಾರ ಸೂಕ್ತ ಕಾಣುವುದೆ ಪರಿಶೀಲಿಸಿ. ೨೩೫ರಲ್ಲಿ 'ಚಾಮರಾದಿ' ಬದಲಿಗೆ  - 'ಚಾಮರಾದೀ' ಬಳಸಿದ್ದೇನೆ - ನಾಗೇಶ ಮೈಸೂರು

೨೩೫. ಚತುಃ-ಷಷ್ಟ್ಯುಪಚಾರಾಢ್ಯಾ 
ಪೂಜೆ ಆರಾಧನೆಗಳ ಹೆಸರೆ ಉಪಚಾರ
ಅರವತ್ನಾಲ್ಕು ವಿಧದ ಸಾಂಕೇತಿಕ ಸಾರ
ಗಂಧ ಪುಷ್ಪ ಬಳೆ ಚಾಮರಾದೀ ಸೇವಿತ
ಚತುಃ ಷಷ್ಟ್ಯುಪಚಾರಾಢ್ಯಾ ದೇವಿ ಲಲಿತ!

೨೩೭. ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ 
ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ
ಚಾಮುಂಡಾ ಮಹಾಲಕ್ಷ್ಮೀ ಅಷ್ಟಮಾತೃಕಾ ಬಹು ರೂಪಿಣೀ !
ಪ್ರತಿ ಮಾತೃಕೆ ನೆರವಿಗೆ ಅಷ್ಟಯೋಗಿನಿ ಕೋಟಿ ಪರಿಚಾರಿಕೆ ಸಹಿತ
ದೇವಿ ಲಲಿತಾಂಬಿಕೆ ಚತುಃ ಷಷ್ಠಿ ಕೋಟಿ ಯೋಗಿನೀ ಗಣ ಸೇವಿತಾ!

Submitted by makara Sun, 07/14/2013 - 00:15

In reply to by nageshamysore

೨೩೫ & ೨೩೭ ಎರಡೂ ಈಗ ಚೆನ್ನಾಗಿ ಮೂಲ ವ್ಯಾಖ್ಯಾನಕ್ಕೆ ಸರಿ ಹೊಂದುತ್ತವೆ, ನಾಗೇಶರೆ.

೨೩೫. - ಚತುಃ-ಷಷ್ಟ್ಯುಪಚಾರಾಢ್ಯಾ
ಈ ಪಂಕ್ತಿಯಲ್ಲಿ ಚಾಮರಾದಿ ಬಳಕೆಯೇ ಸಾಧುವೇನೋ ನೋಡಿ, ಪರಿಷ್ಕರಿಸಿಕೊಳ್ಳಿ.

೨೩೭. ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ
ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ
ಚಾಮುಂಡಾ ಮಹಾಲಕ್ಷ್ಮೀ ಅಷ್ಟಮಾತೃಕಾ ಬಹು ರೂಪಿಣೀ !
=ಚಾಮುಂಡಾ ಮಹಾಲಕ್ಷ್ಮೀ ಅಷ್ಟಮಾತೃಕಾ ಲಲಿತಾ ಬಹು ರೂಪಿಣೀ, ಎಂದು ಮಾರ್ಪಡಿಸಬಹುದೇನೋ ನೋಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 07/14/2013 - 04:00

In reply to by makara

ಶ್ರೀಧರರೆ, ನಿಮ್ಮ ಸಲಹೆಯನ್ನು ಮರು ತಿದ್ದುಪಡಿಯಲ್ಲಿ ಸೇರಿಸಿ ಅಂತಿಮ ಕೊಂಡಿಯನ್ನು ಹಾಕಿದ್ದೇನೆ - ನಾಗೇಶ ಮೈಸೂರು

೨೩೫. ಚತುಃ-ಷಷ್ಟ್ಯುಪಚಾರಾಢ್ಯಾ
ಪೂಜೆ ಆರಾಧನೆಗಳ ಹೆಸರೆ ಉಪಚಾರ
ಅರವತ್ನಾಲ್ಕು ವಿಧದ ಸಾಂಕೇತಿಕ ಸಾರ
ಗಂಧ ಪುಷ್ಪ ಬಳೆ ಚಾಮರಾದಿ ಸೇವಿತ
ಚತುಃ ಷಷ್ಟ್ಯುಪಚಾರಾಢ್ಯಾ ದೇವಿ ಲಲಿತ!

೨೩೭. ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ
ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ
ಚಾಮುಂಡಾ ಮಹಾಲಕ್ಷ್ಮೀ ಅಷ್ಟಮಾತೃಕಾ ಲಲಿತಾ ಬಹುರೂಪಿಣೀ
ಪ್ರತಿ ಮಾತೃಕೆ ನೆರವಿಗೆ ಅಷ್ಟಯೋಗಿನಿ ಕೋಟಿ ಪರಿಚಾರಿಕೆ ಸಹಿತ
ದೇವಿ ಲಲಿತಾಂಬಿಕೆ ಚತುಃ ಷಷ್ಠಿ ಕೋಟಿ ಯೋಗಿನೀ ಗಣ ಸೇವಿತಾ!

ಅಂತಿಮ ಕೊಂಡಿ:
https://ardharaatriaalaapagalu.wordpress.com/66-2/

Submitted by makara Sun, 07/14/2013 - 09:13

In reply to by nageshamysore

ನಾಮ ೨೩೫ & ೨೩೭ರ ಕುರಿತು.
ನಾಗೇಶರೆ ಈಗ ಅಂತಿಮ ರೂಪ ಬಂದಿದೆ. ಆದರೂ ಸಹ ನಾಮ ೨೩೫ರ ಮೂರನೇ ಸಾಲಿನಲ್ಲಿ ಬಳೆ ಎನ್ನುವ ಬದಲು ಕಂಕಣ ಎನ್ನುವ ಶಬ್ದ ಉಪಯೋಗಿಸಬಹುದೇನೋ ನೋಡಿ. ಈ ಶಬ್ದ ಈಗ ತಾನೇ ಹೊಳೆಯಿತು, ಅದಕ್ಕೆ ಕ್ಷಮೆಯಿರಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 07/14/2013 - 14:31

In reply to by makara

ಶ್ರೀಧರರೆ, ಕಂಕಣ ತುಂಬಾ ಸೂಕ್ತ ಪದ - ಈಗ ಕವನದ ತೂಕವೆ ಹೆಚ್ಚಿದಂತಾಯ್ತು! ಯಾವಾಗಲಾದರೂ ಸರಿ ಒಳ್ಳೆಯ ಅಂಶ ಹೊಳೆದರೆ ಸೇರಿಸುತ್ತಿರೋಣ - ಕೊನೆಗೆ ಗುಣಮಟ್ಟ ಹೆಚ್ಚುವುದು ಈ ಹನಿಹನಿಗಳೆಲ್ಲ ಒಟ್ಟಾದ ಮೇಲೆ ತಾನೆ ? :-) - ನಾಗೇಶ ಮೈಸೂರು

೨೩೫. ಚತುಃ-ಷಷ್ಟ್ಯುಪಚಾರಾಢ್ಯಾ
ಪೂಜೆ ಆರಾಧನೆಗಳ ಹೆಸರೆ ಉಪಚಾರ
ಅರವತ್ನಾಲ್ಕು ವಿಧದ ಸಾಂಕೇತಿಕ ಸಾರ
ಗಂಧ ಪುಷ್ಪ ಕಂಕಣ ಚಾಮರಾದಿ ಸೇವಿತ
ಚತುಃ ಷಷ್ಟ್ಯುಪಚಾರಾಢ್ಯಾ ದೇವಿ ಲಲಿತ!

ಮತ್ತೆ ಕೊನೆಯ ಕೊಂಡಿ:-
https://ardharaatriaalaapagalu.wordpress.com/66-2/
 

Submitted by makara Tue, 07/23/2013 - 09:48

In reply to by nageshamysore

ನಾಗೇಶರೆ,
ಇಲ್ಲಿ ಕೊಟ್ಟಿರುವ ಕೊಂಡಿ ಸರಿಯಾಗಿದೆ; ಅದನ್ನು ಹೊಕ್ಕು ಅದರಲ್ಲೂ ಸ್ವಲ್ಪ ಕಮೆಂಟಿಸಿ ಬಂದಿದ್ದೇನೆ; ಬಂದದ್ದಕ್ಕೆ ಕುರುಹಾಗಿ :))