೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೩೯ - ೨೪೮
Candra-vidyā चन्द्र-विद्या (239)
೨೩೯. ಚಂದ್ರ-ವಿದ್ಯಾ
ಮನುವಿನ ನಂತರ ಈ ನಾಮದಲ್ಲಿ ಚಂದ್ರನು ಮಾಡಿದ ಆರಾಧನೆಯ ಕುರಿತಾಗಿ ಹೇಳಲಾಗಿದೆ.
ಲಲಿತಾಂಬಿಕೆಗೆ ಹದಿನೈದು ಪ್ರಮುಖ ಆರಾಧಕರಿದ್ದಾರೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಪಂಚದಶೀ ಮಂತ್ರದಿಂದ ಆಕೆಯನ್ನು ಆರಾಧಿಸಿದ್ದಾರೆ; ಆದರೆ ಅದರಲ್ಲಿರುವ ಬೀಜಾಕ್ಷರಗಳಲ್ಲಿ ಬದಲಾವಣೆಯನ್ನು ಮಾಡಿಲ್ಲ. ಆದ್ದರಿಂದ ಹದಿನೈದು ವಿವಿಧ ರೀತಿಯ ಪಂಚದಶೀ ಮಂತ್ರಗಳಿವೆ. (ಒಂದು ಗ್ರಂಥಲ್ಲಿರುವುದನ್ನು ಮತ್ತೊಂದು ಗ್ರಂಥದಲ್ಲಿರುವ ಪಂಚದಶೀ ಮಂತ್ರಕ್ಕೆ ಹೋಲಿಸಿದರೆ ಅವೆರಡರಲ್ಲಿ ವ್ಯತ್ಯಾಸಗಳಿವೆ).
ಉಲ್ಲೇಖಿಸಲಾಗಿರುವ ಸಂಸ್ಕೃತ ಅಕ್ಷರಗಳು ಈ ಕ್ರಮದಲ್ಲಿವೆ.
ಕ ಏ ಈ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸ ಕ ಲ ಹ್ರೀಂ
क ए ई ल ह्रीं ह स क ह ल ह्रीं स क ल ह्रीं
೧. ವಿಷ್ಣು: ಹ ಸ ಕ ಲ ಹ್ರೀಂ, ಹ ಸ, ಕ ಹ ಲ ಹ್ರೀಂ, ಸ ಕ ಲ ಹ್ರೀಂ, ಸ ಹ ಕ ಲ ಹ್ರೀಂ,
ಸ ಹ ಕ ಹ ಲ ಹ್ರೀಂ, ಸ ಹ ಸ ಕ ಲ ಹ್ರೀಂ |
೨. ಶಿವ: ಹ ಸ ಕ ಲ ಹ್ರೀಂ, ಹ ಸ ಕ ಹ ಲ ಹ್ರೀಂ, ಸ ಕ ಲ ಹ್ರೀಂ, ಹ ಸ ಕ ಲ ಹ ಸ ಕ ಹ ಲ ಸ ಕ ಲ ಹ್ರೀಂ |
೩. ಬ್ರಹ್ಮ: ಕ ಏ ಈ ಲ ಹ್ರೀಂ, ಹ ಕ ಹ ಲ ಹ್ರೀಂ, ಹ ಸ ಕ ಲ ಹ್ರೀಂ |
೪. ಮನು: ಕ ಹ ಏ ಈ ಲ ಹ್ರೀಂ, ಹ ಕ ಏ ಈ ಲ ಹ್ರೀಂ, ಸ ಕ ಏ ಈ ಲ ಹ್ರೀಂ |
೫. ಚಂದ್ರ: ಸ ಹ ಕ ಏ ಈ ಲ ಹ್ರೀಂ, ಹ ಸ ಕ ಹ ಏ ಈ ಲ ಹ್ರೀಂ, ಹ ಸ ಕ ಏ ಈ ಲ ಹ್ರೀಂ |
೬. ಕುಬೇರ: ಹ ಸ ಕ ಏ ಈ ಲ ಹ್ರೀಂ, ಹ ಸ ಕ ಹ ಏ ಈ ಲ ಹ್ರೀಂ, ಸ ಹ ಕ ಏ ಈ ಲ ಹ್ರೀಂ |
೭. ಲೋಪಾಮುದ್ರಾ: ಹ ಸ ಕ ಲ ಹ್ರೀಂ, ಹ ಸ ಕ ಹ ಲ ಹ್ರೀಂ, ಸ ಕ ಲ ಹ್ರೀಂ |
೮. ಅಗಸ್ತ್ಯ: ಕ ಏ ಈ ಲ ಹ್ರೀಂ, ಹ ಸ ಕ ಹ ಲ ಹ್ರೀಂ, ಸ ಹ ಸ ಕ ಲ ಹ್ರೀಂ |
೯. ನಂದಿಕೇಶ್ವರ: ಸ ಏ ಈ ಲ ಹ್ರೀಂ, ಸ ಹ ಕ ಹ ಲ ಹ್ರೀಂ, ಸ ಕ ಲ ಹ್ರೀಂ |
೧೦. ಸೂರ್ಯ: ಹ ಸ ಕ ಲ ಹ್ರೀಂ, ಸ ಹ ಕ ಲ ಹ್ರೀಂ, ಸ ಕ ಹ ಲ ಹ್ರೀಂ |
೧೧. ಸ್ಕಂದ: ಹ ಸ ಕ ಲ ಹ್ರೀಂ, ಹ ಸ ಕ ಸ ಕ ಲ ಹ್ರೀಂ, ಸ ಹ ಕ ಹ ಲ ಹ್ರೀಂ |
೧೨. ಮನ್ಮಥ: ಕ ಏ ಈ ಲ ಹ್ರೀಂ, ಹ ಸ ಕ ಹ ಲ ಹ್ರೀಂ, ಸ ಕ ಲ ಹ್ರೀಂ |
೧೩. ಶಕ್ರ: ಕ ಏ ಈ ಲ ಹ್ರೀಂ, ಹ ಕ ಹ ಲ ಹ್ರೀಂ, ಸ ಕ ಹ ಲ ಹ್ರೀಂ |
೧೪. ದೂರ್ವಾಸ: ಹ ಸ ಕ ಲ ಹ ಸ ಕ ಹ ಲ ಸ ಕ ಲ ಹ್ರೀಂ |
೧೫. ಯಮ: ಕ ಹ ಏ ಈ ಲ ಹ್ರೀಂ, ಹ ಲ ಏ ಈ ಲ ಹ್ರೀಂ, ಸ ಕ ಏ ಈ ಲ ಹ್ರೀಂ |
Candra-maṇḍala-madhyagā चन्द्र-मण्डल-मध्यगा (240)
೨೪೦. ಚಂದ್ರ-ಮಂಡಲ-ಮಧ್ಯಗಾ
ಚಂದ್ರ-ಮಂಡಲ ಎಂದರೆ ಇಲ್ಲಿ ಸಹಸ್ರಾರವಾಗಿದೆ; ದೇವಿಯು ಸಹಸ್ರಾರದ ಮಧ್ಯದಲ್ಲಿ ನಿವಸಿಸುತ್ತಾಳೆ. ಈ ಕಿರೀಟ ಚಕ್ರದ ಮಧ್ಯದಲ್ಲಿ ಒಂದು ರಂಧ್ರವಿದ್ದು ಅದನ್ನು ಬಿಂದುವೆಂದು ಕರೆಯುತ್ತಾರೆ. ದೇವಿಯು ಈ ಬಿಂದುವಿನ ರೂಪದಲ್ಲಿ ಇರುತ್ತಾಳೆ. ವಾಸ್ತವವಾಗಿ ಶ್ರೀ ಚಕ್ರದ ಪೂಜಾಚರಣೆಯು ಈ ಬಿಂದುವನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ಅದರಲ್ಲಿ ದೇವಿಯನ್ನು ಪೂಜಿಸುವುದಾಗಿದೆ. . ಚಂದ್ರಮಂಡಲವೇ ಶ್ರೀ ಚಕ್ರವಾಗಿದೆ. ಚಂದ್ರನಿಗೆ ಹದಿನಾರು ಕಲೆಗಳಿದ್ದು ಹುಣ್ಣಿಮೆಯ ದಿವಸ ದೇವಿಯು ಹದಿನಾರು ಕಲೆಗಳಿಂದ ಕೂಡಿದ ಪೂರ್ಣ ಚಂದ್ರನ ರೂಪದಲ್ಲಿರುತ್ತಾಳೆಂದು ಹೇಳಲಾಗಿದೆ. ಈ ಸಹಸ್ರನಾಮವನ್ನು ಹುಣ್ಣಿಮೆಯ ದಿವಸ ಹೇಳುವುದರಿಂದ ಎಲ್ಲಾ ರೀತಿಯ ಶುಭವುಂಟಾಗುತ್ತದೆ.
ಶಿವನು ಅಗ್ನಿಯ ಶಿರದಲ್ಲಿ ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ ಮತ್ತು ಶಕ್ತಿಯು ಚಂದ್ರನ ಶಿರದಲ್ಲಿ ನಿವಸಿಸುತ್ತಾಳೆಂದು ಹೇಳಲಾಗಿದೆ ಮತ್ತು ಅವರಿಬ್ಬರೂ ಸೇರಿ ಈ ಪ್ರಪಂಚವನ್ನು ಪರಿಪಾಲಿಸುತ್ತಾರೆ. (ಇದರ ಅರ್ಥ ಈ ಪ್ರಪಂಚವು ಅಗ್ನಿ* ಮತ್ತು ಚಂದ್ರರಿಂದ ಅಂದರೆ ಶಿವ ಮತ್ತು ಶಕ್ತಿಯರಿಂದ ಪರಿಪಾಲಿಸಲ್ಪಡುತ್ತದೆ). ಚಂದ್ರ-ಮಂಡಲವೇ ಶ್ರೀ ಚಕ್ರವೆಂದು ಇದರ ಮೂಲಕ ನಿರ್ಣಯಕ್ಕೆ ಬರಬಹುದು. (*ಇಲ್ಲಿ ಅಗ್ನಿ ಎಂದರೆ ಅದು ಸೂರ್ಯನನ್ನು ಉಲ್ಲೇಖಿಸಬಹುದೆನಿಸುತ್ತದೆ?).
Cāru-rūpā चारु-रूपा (241)
೨೪೧. ಚಾರು-ರೂಪಾ
ದೇವಿಯು ಸೌಂದರ್ಯವೇ ಅವತಾರವೆತ್ತಿದಂತವಳು. ಚಾರು ಎಂದರೆ ಸುಂದರ.
Cāru-hāsā चारु-हासा (242)
೨೪೨. ಚಾರು-ಹಾಸಾ
ದೇವಿಯ ನಗೆಯು ಆಕೆಯ ಸೌಂದರ್ಯಕ್ಕೆ ಪೂರಕವಾಗಿದೆ. ಆಕೆಯ ನಗೆಯನ್ನು ಚಂದ್ರನಿಗೆ ಹೋಲಿಸಲಾಗಿದೆ. ಮತ್ತು ಆಕೆಯ ನಗೆಯು ಅವಳ ಭಕ್ತರು ಶಾಂತಿಯನ್ನು ಅನುಭವಿಸುವುದರ ಕಾರಣವಾಗಿದೆ.
Cāru-candra-kalādharā चारु-चन्द्र-कलाधरा (243)
೨೪೩. ಚಾರು-ಚಂದ್ರ-ಕಲಾಧರಾ
ದೇವಿಯು ತನ್ನ ಶಿರದಲ್ಲಿ ಅರ್ಧ ಚಂದ್ರನನ್ನು ಧರಿಸಿದ್ದಾಳೆ; ಚಾರು ಎಂದರೆ ಚಂದ್ರಕಾಂತಿಯೆನ್ನುವ ಅರ್ಥವೂ ಇದೆ. ಮೇಲಿನ ಎಲ್ಲಾ ನಾಮಗಳು ಚಂದ್ರನನ್ನು ಕುರಿತಾಗಿ ಹೇಳುತ್ತವೆ ಮತ್ತು ಪೂರ್ಣ ಚಂದ್ರನು ಪರಮ ಚೈತನ್ಯವನ್ನು ಪ್ರತಿನಿಧಿಸುತ್ತದೆ. ಹುಣ್ಣಿಮೆಯ ದಿನದಂದು ದೇವಿಯನ್ನು ಕುರಿತು ಧ್ಯಾನ ಮಾಡಿದರೆ ಅವರಿಗೆ ಮಂತ್ರ ಸಿದ್ಧಿಯು ಶೀಘ್ರದಲ್ಲಿ ಪ್ರಾಪ್ತವಾಗುತ್ತದೆ; ಏಕೆಂದರೆ ಹುಣ್ಣಿಮೆಯ ದಿನಗಳಂದು ಸಾತ್ವಿಕ ಗುಣವು ಪ್ರಧಾನವಾಗಿ ವ್ಯಕ್ತವಾಗುತ್ತದೆ.
Cāracara-jagannāthā चारचर-जगन्नाथा (244)
೨೪೪. ಚರಾಚರ-ಜಗನ್ನಾಥಾ
ದೇವಿಯು ಈ ಜಗತ್ತಿನ ಸಮಸ್ತ ಚರ ಮತ್ತು ಅಚರ (ಸ್ಥಿರ) ವಸ್ತುಗಳನ್ನು ನಿಯಂತ್ರಿಸುತ್ತಾಳೆ ಮತ್ತು ಆಕೆಯು ಸ್ಥಿರ (ಜಡ) ಮತ್ತು ಕ್ರಿಯಾಶೀಲ (ಚಲನಶೀಲ) ಶಕ್ತಿಗಳ ಕಾರಣವಾಗಿದ್ದಾಳೆ. ಶುದ್ಧ ಜಡ ಶಕ್ತಿಯು ಶಿವನಾದರೆ ಚಲನಶೀಲ ಶಕ್ತಿಯು ಪ್ರಧಾನವಾಗಿ ದೇವಿಯಾಗಿದ್ದಾಳೆ; ಶಿವನದು ಜಡ ಶಕ್ತಿಯಾಗಿದ್ದರೂ ಸಹ ಅವರಿಬ್ಬರ ಕೂಡುವಿಕೆಯು ಈ ವಿಶ್ವದ ಸೃಷ್ಟಿಗೆ ಕಾರಣವಾಗಿದೆ. ಚರ ಮತ್ತು ಅಚರ ವಸ್ತುಗಳೆಂದರೆ ಇವೆರಡೂ ಶಕ್ತಿಗಳಾಗಿವೆ ಮತ್ತು ಆಕೆಯು ಈ ವಿಶ್ವವನ್ನು ಶಿವಶಕ್ತಿಯಾಗಿ ಪಾಲಿಸುತ್ತಾಳೆ.
Cakra-rāja-niketanā चक्र-राज-निकेतना (245)
೨೪೫. ಚಕ್ರ-ರಾಜ-ನಿಕೇತನಾ
ಶ್ರೀ ಚಕ್ರವನ್ನು ಚಕ್ರ-ರಾಜ ಎಂದರೆ ಎಲ್ಲಾ ಚಕ್ರಗಳಲ್ಲಿ ಶ್ರೇಷ್ಠವಾದದ್ದು. ದೇವಿಯು ಈ ಶ್ರೀ ಚಕ್ರದಲ್ಲಿ ತನ್ನ ಮಂತ್ರಿಣಿಯರು, ಯೋಧರು ಮೊದಲಾದವರೊಂದಿಗೆ ನಿವಸಿಸುತ್ತಾಳೆ.
ಸಹಸ್ರನಾಮವನ್ನೂ ಸಹ ಅನೇಕ ವೇಳೆ ಶ್ರೀ ಚಕ್ರವೆಂದು ಕರೆಯುತ್ತಾರೆ. ಸಹಸ್ರಾರವನ್ನು ಪ್ರೇರಣೆಗೊಳಿಸುವುದರ ಮೂಲಕ ಒಬ್ಬನು ತನ್ನ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದನ್ನೇ ಸಿದ್ಧಿಯೆಂದು ಕರೆಯುತ್ತಾರೆ ಮತ್ತು ಇದನ್ನೇ ಕೆಲವರು ದುರುಪಯೋಗ ಪಡಿಸಿಕೊಂಡಾಗ ಅದು ಅವರ ಆಧ್ಯಾತ್ಮಿಕ ಅವನತಿಗೆ ಕಾರಣವಾಗುತ್ತದೆ. ಯೋಗಿನಿಯರೆಂದು ಕರೆಯಲ್ಪಡುವ ದೇವಿಯ ಮಂತ್ರಿಣಿಯರು ಮತ್ತು ಸಹಾಯಕರು ಮನುಷ್ಯ ಪ್ರಜ್ಞೆಯ ವಿವಿಧ ಹಂತಗಳನ್ನು ಸೂಚಿಸುತ್ತವೆ. ಒಟ್ಟಾರೆ ಇದರ ಅರ್ಥವೇನೆಂದರೆ ಒಬ್ಬನು ಆಧ್ಯಾತ್ಮಿಕ ಸಾಧನೆಯಲ್ಲಿ ಉನ್ನತ ಹಂತಗಳನ್ನು ತಲುಪ ಬೇಕೆಂದರೆ ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಈ ಮನೋ ನಿಯಂತ್ರಣವು ಕುಂಡಲಿನಿಯು ಸಹಸ್ರಾರವನ್ನು ತಲುಪಿದಾಗ ತನ್ನಷ್ಟಕ್ಕೆ ತಾನೇ ಅಗುತ್ತದೆ. ಹುಣ್ಣಿಮೆಯ ದಿನದಂದು ಒಬ್ಬನು ಧ್ಯಾನವನ್ನು ಕೈಗೊಂಡರೆ ಕುಂಡಲಿನೀ ಶಕ್ತಿಯು ಸುಲಭವಾಗಿ ಸಹಸ್ರಾರಕ್ಕೆ ಏರುತ್ತದೆ. ಈ ಸಹಸ್ರನಾಮದಲ್ಲಿ ಪ್ರತಿಯೊಂದು ನಾಮಕ್ಕೂ ರಹಸ್ಯವಾದ ವ್ಯಾಖ್ಯಾನವಿಲ್ಲದೇ ಇಲ್ಲ. ಈ ರೀತಿಯಾದ ಅರ್ಥಗಳನ್ನು ಹಲವಾರು ಕಾರಣಗಳಿಗಾಗಿ ಬಹಿರಂಗವಾಗಿ ಚರ್ಚಿಸುವುದಿಲ್ಲ ಆದ್ದರಿಂದ ಅವು ಇಂದಿಗೂ ಗುಪ್ತನಿಧಿಗಳಾಗಿ ಉಳಿದುಕೊಂಡಿವೆ.
Pārvatī पार्वती (246)
೨೪೬. ಪಾರ್ವತೀ
ದೇವಿಯು ಪರ್ವತಗಳ ರಾಜನಾದ ಹಿಮವಂತನ ಪುತ್ರಿ ಮತ್ತು ಶಿವನ ಹೆಂಡತಿಯಾಗಿದ್ದಾಳೆ. ೬೩೪ನೇ ನಾಮ ಶೈಲೇಂದ್ರ ತನಯಾ ಕೂಡಾ ಇದೇ ಅರ್ಥವನ್ನು ಹೊಮ್ಮಿಸುತ್ತದೆ.
Padma-nayanā पद्म-नयना (247)
೨೪೭.ಪದ್ಮ-ನಯನಾ
ದೇವಿಯ ಕಣ್ಣುಗಳನ್ನು ಕಮಲದ ಕಣ್ಣುಗಳಿಗೆ ಹೋಲಿಸಲಾಗಿದೆ. ಕಮಲವು ಚಂದ್ರೋದಯದ ಸಮಯದಲ್ಲಿ ಅರಳುತ್ತದೆ. ಈ ನಾಮವು ಹುಣ್ಣಿಮೆಯ ದಿನದಂದು ಮಾಡುವ ಧ್ಯಾನದ ಪರಿಣಾಮದ ಕುರಿತಾಗಿ ಖಚಿತ ಪಡಿಸುತ್ತದೆ. ದೇವಿಯ ಕಣ್ಣುಗಳನ್ನು ಕಮಲಕ್ಕೆ ಹೋಲಿಸುವುದರ ಮೂಲಕ ಅವು ಹುಣ್ಣಿಮೆಯ ಸಮಯದಲ್ಲಿ ಕಮಲದಂತೆ ಅಗಲವಾಗಿ ಅರಳಿರುತ್ತವೆ ಎನ್ನುವುದನ್ನು ಸೂಚಿಸುವುದಕ್ಕಾಗಿದೆ. ೨೪೫ನೇ ನಾಮದ ಕಡೆಯಲ್ಲಿ ಕೊಟ್ಟಿರುವ ವಿಷಯಗಳನ್ನು ಇದರೊಂದಿಗೆ ಓದಿಕೊಳ್ಳಿ. ವಿಷ್ಣುವಿನ ಕಣ್ಣುಗಳನ್ನು ಸಹ ಕಮಲದ ಹೂವುಗಳೊಂದಿಗೆ ಹೋಲಿಸುತ್ತಾರೆ.
Padmarāga-sama-prabhā पद्मराग-सम-प्रभा (248)
೨೪೮. ಪದ್ಮರಾಗ-ಸಮ-ಪ್ರಭಾ
ದೇವಿಯನ್ನು ವಿಶೇಷವಾದ ಪದ್ಮರಾಗವೆಂಬ ಗಾಢ ಕೆಂಪು ವರ್ಣದ ಮಾಣಿಕ್ಯದೊಂದಿಗೆ ಹೋಲಿಸಲಾಗಿದೆ ಅಥವಾ ದೇವಿಯು ಕೆಂಪು ಕಮಲದಂತಿದ್ದಾಳೆಂದು ಇದು ಸೂಚಿಸುತ್ತದೆ. ಪದ್ಮ ಎಂದರೆ ಕಮಲ, ರಾಗವೆಂದರೆ ಕೆಂಪು ಮತ್ತು ಪ್ರಭಾ ಎಂದರೆ ಬೆಳಕು, ಕಿರಣಗಳು, ಪ್ರಭೆ, ಹೊಳಪು, ಸುಂದರವಾಗಿ ಕಾಣಿಸುವುದು; ವಿವಿಧ ರೀತಿಯಿಂದ ವ್ಯಕ್ತವಾಗುವ ಬೆಳಕು, ಕಂಗೊಳಿಸುವುದು, ಮುಂತಾದ ಅರ್ಥಗಳಿವೆ. ಈ ನಾಮದ ಗೂಡಾರ್ಥವೇನೆಂದರೆ ಇದು ದೇವಿಯ ಸೂಕ್ಷ್ಮಾತೀಸೂಕ್ಷ್ಮ ರೂಪವಾದ ಕುಂಡಲಿನೀ ರೂಪವನ್ನು ವಿವರಿಸುತ್ತದೆ. ಕುಂಡಲಿನಿಯು ಗಾಢ ಕೆಂಪು ಬಣ್ಣವನ್ನು ಹೊಂದಿದ್ದು ಅದು ಬೆನ್ನುಹುರಿಯ ಕೆಳ ಮೂಲೆಯಲ್ಲಿ ಇರುತ್ತದೆ. ಯಾವಾಗ ಕುಂಡಲಿನಿಯು ಆರೋಹಣವಾಗುತ್ತಾ ಹೋಗುತ್ತದೆಯೋ ಆಗ ಆಕೆಯ ಕೆಂಪು ಬಣ್ಣವು ತಿಳಿಯಾಗುತ್ತಾ ಸಹಸ್ರನಾಮವನ್ನು ಸೇರಿ ಅಲ್ಲಿ ಆಕೆಯು ಶಿವನೊಂದಿಗೆ ಸಮಾಗಮವನ್ನು ಹೊಂದುತ್ತಾಳೆ ಮತ್ತಾಗ ಆಕೆಯು ಅಲ್ಲಿ ಬಹುತೇಕ ವರ್ಣರಹಿತಳಾಗುತ್ತಾಳೆ. ಸಹಸ್ರಾರದಲ್ಲಿ ಸಾಧಕನು ಸಂಪೂರ್ಣ ಆನಂದದ (ಪರಮಾನಂದದ) ಸ್ಥಿತಿಯಲ್ಲಿರುತ್ತಾನೆ.
೨೪೮ನೇ ನಾಮದೊಂದಿಗೆ ದೇವಿಯ ಸಗುಣ ಬ್ರಹ್ಮ ರೂಪದ ವಿವರಣೆಯು ಮುಕ್ತಾಯಗೊಳ್ಳುತ್ತದೆ ಮತ್ತು ಆಕೆಯ ಐದು ಮಹಾನ್ ಕಾರ್ಯಗಳ ಚರ್ಚೆಯು ೨೪೯ನೇ ನಾಮದೊಂದಿಗೆ ಪ್ರಾರಂಭವಾಗುತ್ತದೆ. ಬ್ರಹ್ಮವು ಐದು ವಿಧವಾದ ಕ್ರಿಯೆಗಳನ್ನು ಮಾಡುತ್ತದೆ. ಅವುಗಳಲ್ಲಿ ಈ ಪ್ರಪಂಚದ ಸೃಷ್ಟಿ ಮಾಡುವುದು ಒಂದಾಗಿದ್ದರೆ, ಎರಡನೆಯದು ಪಾಲನಾ ಕ್ರಿಯೆ, ಮತ್ತು ಮೂರನೆಯದು ಲಯಮಾಡುವುದು ಅಥವಾ ಜೀವಿಗಳ ಮರಣವನ್ನು ಉಂಟು ಮಾಡುವುದು, ನಾಲ್ಕನೆಯದು ತಿರೋಧಾನ ಅಥವಾ ವಿನಾಶ ಅಥವಾ ಈ ಪ್ರಪಂಚದ ಸಂಪೂರ್ಣ ಇಲ್ಲವಾಗುವಿಕೆ ಮತ್ತು ಐದನೆಯದನ್ನು ಅನುಗ್ರಹವೆನ್ನುತ್ತಾರೆ ಮತ್ತು ಮರುಸೃಷ್ಟಿಗೆ ಅವತಾರಗಳು ಅನುಕೂಲವನ್ನು ಒದಗಿಸುತ್ತವೆ. ೨೪೯ ರಿಂದ ೩೪೦ನೇ ನಾಮಗಳು ಪಂಚ-ಬ್ರಹ್ಮ-ಸ್ವರೂಪ’ ಎಂದು ಕರೆಯಲ್ಪಡುವ ಬ್ರಹ್ಮದ ಐದು ವಿಧವಾದ ಕ್ರಿಯೆಗಳ ಕುರಿತಾಗಿ ಚರ್ಚಿಸುತ್ತವೆ.
******
Comments
ಮುಂದುವರೆಯಲಿ ದೇವಿ ಸ್ತುತಿ...
ಮುಂದುವರೆಯಲಿ ದೇವಿ ಸ್ತುತಿ...
In reply to ಮುಂದುವರೆಯಲಿ ದೇವಿ ಸ್ತುತಿ... by partha1059
ಪಾರ್ಥ ಸರ್,
ಪಾರ್ಥ ಸರ್,
ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು. ಒಳ್ಳೆಯದಾಗಲಿ, ಕೆಟ್ಟದಾಗಲಿ ಅದನ್ನು ಮಾಡಿದವರಿಗೂ, ಮಾಡಿಸಿದವರಿಗೂ, ನೋಡಿದವರಿಗೂ ಅದನ್ನು ಕೇಳಿ ಆನಂದಿಸಿದವರಿಗೂ ಸಮಾನ ಫಲವುಂಟೆಂದು ಗೀತೆಯಲ್ಲಿ ಪಾರ್ಥಸಾರಥಿಯಾದ ಶ್ರೀಕೃಷ್ಣನೇ ಹೇಳಿದ್ದಾನೆ. ಆದ್ದರಿಂದ ಈ ಸರಣಿಯನ್ನು ಮುಂದುವರೆಸಲು ನೀವು ಪ್ರೋತ್ಸಾಹ ಕೊಡುತ್ತಿರುವುದರಿಂದ ನೀವೂ ಆ ಜಗನ್ಮಾತೆಯ ಕೃಪೆಗೆ ಭಾಜನರಾಗಿದ್ದೀರಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಶ್ರೀಧರರೆ, ಲಲಿತಾ ಸಹಸ್ರನಾಮ ೨೩೯
ಶ್ರೀಧರರೆ, ಲಲಿತಾ ಸಹಸ್ರನಾಮ ೨೩೯ - ೨೪೮ ತಮ್ಮ ಅವಗಾಹನೆ, ಪರಿಷ್ಕರಣೆಗೆ ಸಿದ್ದ - ನಾಗೇಶ ಮೈಸೂರು :-)
ಲಲಿತಾ ಸಹಸ್ರನಾಮ ೨೩೯ - ೨೪೮
೨೩೯. ಚಂದ್ರ-ವಿದ್ಯಾ
ಪಂಚದಶೀ ಮಂತ್ರ ಲಲಿತಾಂಬಿಕೆ ಆರಾಧನೆಯ ಸೂತ್ರ
ಪಂಚದಶ ಆರಾಧಕ ಪ್ರಮುಖ ಪೂಜಿಸಲವರದೆ ಮಂತ್ರ
ಮೂಲ ಬೀಜಾಕ್ಷರ ಸಮಾನ ಆರಾಧನೆಗೆಲ್ಲ ಒಂದೆ ರೂಪ
ಮನು ವಿದ್ಯಾ ನಂತರ ಚಂದ್ರ ಆರಾಧಿಸಿದ ದೇವಿ ಸ್ವರೂಪ!
೨೪೦. ಚಂದ್ರ-ಮಂಡಲ-ಮಧ್ಯಗಾ
ಪೌರ್ಣಿಮೆ ಚಂದ್ರ ಮಂಡಲವಾಗಿ ಶ್ರೀ ಚಕ್ರ ಸಹಸ್ರಾರ
ಷೋಡಶ ಕಲಾಪೂರ್ಣೆದೇವಿ ಬಿಂದು ರೂಪದಿ ಶ್ರೀಚಕ್ರ
ಅಗ್ನಿಶಿರೇ ಶಿವ ಚಂದ್ರಶಿರೇ ಶಕ್ತಿ ಜಗವ ಪರಿಪಾಲಿಸುತ
ಚಂದ್ರಮಂಡಲ ಸಹಸ್ರಾರಮಧ್ಯೆ ನಿವಸಿತೆ ಶ್ರೀ ಲಲಿತೆ!
೨೪೧. ಚಾರು-ರೂಪಾ
ಲೋಕೈಕ ಸುಂದರಿ ಏಕಮೇವಾದ್ವಿತೀಯಾ ಲಲಿತೆ
ಸೌಂದರ್ಯವೆ ಅಪರಾವತಾರವಾಗಿ ಅವತರಿಸುತೆ
ಸೌಂದರ್ಯಕೆ ಸೌಂದರ್ಯವೆ ಸುಂದರ ಚಾರುರೂಪಾ
ಆಕರ್ಷಿಸುತ ಭಕ್ತರ ಸಮ್ಮೋಹಿತಗೊಳಿಸೊ ಸ್ವರೂಪ!
೨೪೨. ಚಾರು-ಹಾಸಾ
ಪೂರ್ಣ ಚಂದ್ರಮಗೆ ಚಂದ್ರಮನೆ ಸಾಟಿ ತಂಬೆಲರ ನಗೆ
ಮೀರಿಸಿ ತಿಂಗಳನ ಸುಹಾಸ ಚೆಲ್ಲೊ ದೇವಿಯ ಸೊಬಗೆ
ಮುಖಚಂದ್ರದಿ ನಗೆ ಚಂದಿರನಾಗಿ ಚಮತ್ಕಾರ ಸೊಗಸ
ಮಂದಸ್ಮಿತದೆ ಭಕ್ತಗೆ ಶಾಂತಿ ಕರುಣಿಸೊ ಚಾರುಹಾಸಾ!
೨೪೩. ಚಾರು-ಚಂದ್ರ-ಕಲಾಧರಾ
ಸಾತ್ವಿಕ ಗುಣ ಸಂಭ್ರಮ ಹುಣ್ಣಿಮೆಯಲಿ ಸಂಪೂರ್ಣ
ಶೀಘ್ರ ಮಂತ್ರಸಿದ್ದಿ ದೇವಿಗೆ ಧ್ಯಾನಿಸೆ ಪೌರ್ಣಿಮೆ ದಿನ
ಪರಮ ಚೈತನ್ಯ ಪ್ರತಿನಿಧಿ ಪರಿಪೂರ್ಣನಾಗೆ ಚಂದಿರ
ಅರ್ಧಚಂದ್ರಧಾರಿಣಿ ಕಾಂತಿ ಚಾರು ಚಂದ್ರ ಕಲಾಧರ!
೨೪೪. ಚರಾಚರ-ಜಗನ್ನಾಥಾ
ಶುದ್ಧ ಜಡಶಕ್ತಿ ಶಿವ ಚಲನಶೀಲತೆ ದೇವಿ ಶಕ್ತಿ
ಕೂಡೆ ಜಡತೆ ಚಲನಶಕ್ತಿ ಕಾರಣಾ ವಿಶ್ವ ಸೃಷ್ಟಿ
ಸ್ಥಿರಶಕ್ತಿ ಕ್ರಿಯಾಶೀಲಶಕ್ತಿ ಕಾರಣಕರ್ತೆ ಲಲಿತ
ಜಗತ್ತನೆ ನಿಯಂತ್ರಿಸುತ ಚರಾಚರ ಜಗನ್ನಾಥಾ!
೨೪೫. ಚಕ್ರ-ರಾಜ-ನಿಕೇತನಾ
ಶ್ರೀ ಚಕ್ರವೆ ಸಹಸ್ರಾರ ನಿಯಂತ್ರಿಸೆ ದೈಹಿಕ ಮಾನಸಿಕ
ಮಂತ್ರಿಣಿ ಯೋಗಿನಿ ಗಣ ಮನುಜ ಪ್ರಜ್ಞಾವಸ್ಥೆ ಸೂಚಕ
ಮನೋನಿಯಂತ್ರಣ ಸಿದ್ದಿ ಸದುಪಯೋಗಿಸೆ ಕುಂಡಲಿನಿ
ಹುಣ್ಣಿಮೆ ಸುಲಭ ಸಹಸ್ರಾರಕೇರಿಸೆ ಚಕ್ರರಾಜನ ಸನ್ನಿಧಿ!
೨೪೬. ಪಾರ್ವತೀ
ಪರ್ವತ ರಾಜ ಹಿಮವಂತನ ಪುತ್ರಿ ಶಕ್ತಿ
ತಪಜಪದಿಂದೊಲಿಸುತೆ ಆದಳೆ ಶಿವಸತಿ
ಗಿರಿಜೆ ರೂಪದಿ ದೇವಿಯಾಗೆ ಹಿಮವಂತಿ
ಸಹಸ್ರ ನಾಮಗಳಲೊಂದಾಗಿ ಪಾರ್ವತೀ!
೨೪೭. ಪದ್ಮ-ನಯನಾ
ತುಂಬು ಚಂದ್ರೋದಯಕರಳುವ ಕಮಲದ ಸಮಾನ
ಹುಣ್ಣಿಮೆ ಧ್ಯಾನ ಪ್ರಿಯವಾಗಿ ಅರಳೊ ದೇವಿ ನಯನ
ಶ್ರೀ ಚಕ್ರರಾಜದಲಿ ದೇವಿ ಮಂತ್ರಿಣಿ ಯೋಗಿನಿ ತಾಣ
ಸಹಸ್ರಾರಕೇರಿಸದಿಹಳೆ ಪ್ರಿಯಭಕ್ತರ ಪದ್ಮನಯನಾ!
೨೪೮. ಪದ್ಮರಾಗ-ಸಮ-ಪ್ರಭಾ
ಪದ್ಮರಾಗ ಸಮ ಪ್ರಭಾ ಸೂಕ್ಷ್ಮಾತೀಸೂಕ್ಷ್ಮರೂಪ ಕುಂಡಲಿನೀ
ಅಚ್ಚಗೆಂಪು ಆರೋಹಣದೆ ತಿಳಿಯಾಗುತಲಿ ಸಹಸ್ರಾರದೇಣಿ
ಸೇರುತ ಶಕ್ತಿ ಶಿವನ ಸಮಾಗಮವಾಗಿ ಲಲಿತೆ ವರ್ಣ ರಹಿತೆ
ಪರಮಾನಂದಾವಸ್ಥೆಗೆ ಸಾಧಕನ ಕೊಂಡೊಯ್ದೆ ತಲುಪಿಸುತೆ!
In reply to ಶ್ರೀಧರರೆ, ಲಲಿತಾ ಸಹಸ್ರನಾಮ ೨೩೯ by nageshamysore
<p>ಚೆನ್ನಾಗಿ ಮೂಡಿಬರುತ್ತಿವೆ.<br
ಚೆನ್ನಾಗಿ ಮೂಡಿಬರುತ್ತಿವೆ.
ಬರಿಯ ಭಕ್ತಿಯಿಂದ ಪಠಿಸುತ್ತಿದ್ದೆವು ನಾವು
ನಿತ್ಯ ದೊರೆಯುತಿದೆ ಮೆದುಳಿಗೆ ಭರ್ತಿಮೇವು
ನಿಮ್ಮ ಶ್ರಮ ಮತ್ತು ಸಾಮರ್ಥ್ಯಕ್ಕೆ ಅಭಿನಂದನೆಗಳು.
ನಾಗೇಶ್ ಅವರ ಕವನ ಹೊಸೆಯುವ ಪ್ರತಿಭೆಗೆ ನಮನ.
In reply to <p>ಚೆನ್ನಾಗಿ ಮೂಡಿಬರುತ್ತಿವೆ.<br by Premashri
ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
ನಿಮ್ಮ ಕವನ ರೂಪದ ಮೆಚ್ಚುಗೆಗೆ ನನ್ನ ಹಾಗೂ ನಾಗೇಶ್ ಇಬ್ಬರ ಪರವಾಗಿಯೂ ಧನ್ಯವಾದಗಳು, ಪ್ರೇಮಾ ಅವರೆ. ಬಹುಶಃ ನಾಗೇಶರು ಇದಕ್ಕೆ ಪ್ರತಿಯಾಗಿ ನಿಮಗೆ ಕವನ ರೂಪದಲ್ಲೇ ಉತ್ತರಿಸಬಹುದು :))
In reply to ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ by makara
ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
ನಮಸ್ಕಾರ ಪ್ರೇಮಾಶ್ರಿಯವರೆ, ಶ್ರೀಧರರು ಕವನದಲ್ಲೆ ಉತ್ತರಿಸಿ ಎಂದು ಇಂಗಿತ ನೀಡಿಬಿಟ್ಟಿದ್ದಾರಾದ ಕಾರಣ, ಒಂದು ಪುಟ್ಟ ಕವನದಲ್ಲೆ ನಿಮಗೂ ನಮನ :-)
ನಮಗೇಕೆ ಬಿಡಿ ನಮನ
ಕೊಡುವ ಲಲಿತೆಯತ್ತ ಗಮನ
ಭಕ್ತಿ ತೋಟದೀ ಉದ್ಯಾನ
ನಾವು ನೀವೆಲ್ಲ ಸೇರಿದ ಸಂಪದ!
-ನಾಗೇಶ ಮೈಸೂರು
In reply to ಶ್ರೀಧರರೆ, ಲಲಿತಾ ಸಹಸ್ರನಾಮ ೨೩೯ by nageshamysore
ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
೨೩೯ರಿಂದ-೨೪೮ನೇ ನಾಮಗಳ ಕವನಗಳು ಕುರಿತು.
ನಾಗೇಶರೆ, ಸುಮಾರು ಹತ್ತು ನಾಮಗಳಿವೆ ಈ ಕಂತಿನಲ್ಲಿ. ಇದರಲ್ಲಿ ಬಹಳಷ್ಟು ಸವರಣೆ ಮಾಡಬೇಕಾಗಬಹುದೇನೋ ಎನ್ನುವ ಅಳುಕಿನಿಂದಲೇ ಇವನ್ನು ಓದಲು ಪ್ರಾರಂಭಿಸಿದೆ. ಆದರೆ ಓದುತ್ತಾ ಓದುತ್ತಾ ಮನಸ್ಸು ಪ್ರಫುಲ್ಲವಾಯಿತು; ಒಂದಕ್ಕಿಂತ ಒಂದನ್ನು ಬಹಳ ಜತನದಿಂದ ಹೊಸೆದಿದ್ದೀರ. ಅಭಿನಂದನೆಗಳು ನಿಮಗೆ. ಇಷ್ಟು ಪದ್ಯಗಳಲ್ಲಿ ದೃಷ್ಟಿ ಚುಕ್ಕೆಯಂತೆ ಕೇವಲ ಎರಡೇ ಕಾಗುಣಿತ ತಪ್ಪುಗಳು ಕಂಡುಬಂದಿವೆ :))
೨೪೩. ಚಾರು-ಚಂದ್ರ-ಕಲಾಧರಾ
ಸಾತ್ವಿಕ ಗುಣ ಸಂಭ್ರಮ ಹುಣ್ಣಿಮೆಯಲಿ ಸಂಪೂರ್ಣ
ಶೀಘ್ರ ಮಂತ್ರಸಿದ್ದಿ ದೇವಿಗೆ ಧ್ಯಾನಿಸೆ ಪೌರ್ಣಿಮೆ ದಿನ
ದೇವಿಗೆ=ದೇವಿಯ
:
೨೪೮. ಪದ್ಮರಾಗ-ಸಮ-ಪ್ರಭಾ
:
:
ಪರಮಾನಂದಾವಸ್ಥೆಗೆ ಸಾಧಕನ ಕೊಂಡೊಯ್ದೆ ತಲುಪಿಸುತೆ!
ಕೊಂಡೊಯ್ದೆ=ಕೊಂಡೊಯ್ದು
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ by makara
ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
ಶ್ರೀಧರರೆ, 67 ರ ಪರಿಷ್ಕರಣೆಯು ಸುಲಭವಾಯ್ತು! ಜತೆಗೆ ಅಂತಿಮ ಕೊಂಡಿಯನ್ನು ಸೇರಿಸಿಯೆ ಕೊಟ್ಟುಬಿಟ್ಟಿದ್ದೇನೆ :-) ನಾಗೇಶ ಮೈಸೂರು
೨೪೩. ಚಾರು-ಚಂದ್ರ-ಕಲಾಧರಾ
ಸಾತ್ವಿಕ ಗುಣ ಸಂಭ್ರಮ ಹುಣ್ಣಿಮೆಯಲಿ ಸಂಪೂರ್ಣ
ಶೀಘ್ರ ಮಂತ್ರಸಿದ್ದಿ ದೇವಿಯ ಧ್ಯಾನಿಸೆ ಪೌರ್ಣಿಮೆ ದಿನ
ಪರಮ ಚೈತನ್ಯ ಪ್ರತಿನಿಧಿ ಪರಿಪೂರ್ಣನಾಗೆ ಚಂದಿರ
ಅರ್ಧಚಂದ್ರಧಾರಿಣಿ ಕಾಂತಿ ಚಾರು ಚಂದ್ರ ಕಲಾಧರ!
೨೪೮. ಪದ್ಮರಾಗ-ಸಮ-ಪ್ರಭಾ
ಪದ್ಮರಾಗ ಸಮ ಪ್ರಭಾ ಸೂಕ್ಷ್ಮಾತೀಸೂಕ್ಷ್ಮರೂಪ ಕುಂಡಲಿನೀ
ಅಚ್ಚಗೆಂಪು ಆರೋಹಣದೆ ತಿಳಿಯಾಗುತಲಿ ಸಹಸ್ರಾರದೇಣಿ
ಸೇರುತ ಶಕ್ತಿ ಶಿವನ ಸಮಾಗಮವಾಗಿ ಲಲಿತೆ ವರ್ಣ ರಹಿತೆ
ಪರಮಾನಂದಾವಸ್ಥೆಗೆ ಸಾಧಕನ ಕೊಂಡೊಯ್ದು ತಲುಪಿಸುತೆ!
ಅಂತಿಮ ಕೊಂಡಿ:
https://ardharaatria...
In reply to ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ by nageshamysore
ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
ನಾಗೇಶರೆ,
ಕೊಂಡಿಯ ಮೂಲಕ ಒಳಹೊಗಲು ಪ್ರಯತ್ನಿಸಿದಾಗ, Page not found ಎಂದು ಹೇಳುತ್ತಾ ನಿಮ್ಮ Websiteಗೆ ಕೊಂಡೊಯ್ದು ಈ ರೀತಿ ಬಿಂಬಿಸುತ್ತದೆ.
This is somewhat embarrassing, isn’t it?
It seems we can’t find what you’re looking for. Perhaps searching can help.
Search for:
ಆದರೆ ಒಂದು ಸಮಾಧಾನದ ಸಂಗತಿ ಏನೆಂದರೆ ಅದರ ಮೇಲೆಯೇ ಕಂತಿನ ಪ್ರಕಾರ ಶೀರ್ಷಿಕೆಗಳು ಕಂಡು ಬರುತ್ತವೆ. ಅವುಗಳನ್ನು ಒತ್ತುವುದರ ಮೂಲಕ ನಮಗೆ ಬೇಕಾದ ಲೇಖನಕ್ಕೆ ಹೋಗಬಹುದು.
In reply to ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ by makara
ಉ: ೬೭. ಶ್ರೀ ಲಲಿತಾ ಸಹಸ್ರನಾಮ ೨೩೯ರಿಂದ ೨೪೮ನೇ ನಾಮಗಳ ವಿವರಣೆ
ಶ್ರೀಧರರೆ 241ಕ್ಕೆ ನೀವು ಕಾಮೇಂಟಿಸಿದ ತಿದ್ದುಪಡಿಯನ್ನು (ಉಪಮೆಯಿಲ್ಲದ) ತುಸು ಮರು ತಿದ್ದುಪಡಿಸಿ (ಉಪಮಾತೀತ) ರೂಪಾಂತರಿಸಿದ್ದೇನೆ. ಸರಿಕಾಣುವುದೊ ನೋಡಿ - ನಾಗೇಶ ಮೈಸೂರು
೨೪೧. ಚಾರು-ರೂಪಾ
ಲೋಕೈಕ ಸುಂದರಿ ಏಕಮೇವಾದ್ವಿತೀಯಾ ಲಲಿತೆ
ಸೌಂದರ್ಯವೆ ಅಪರಾವತಾರವಾಗಿ ಅವತರಿಸುತೆ
ಉಪಮಾತೀತ ಸೌಂದರ್ಯದ ಸುಂದರ ಚಾರುರೂಪ
ಆಕರ್ಷಿಸುತ ಭಕ್ತರ ಸಮ್ಮೋಹಿತಗೊಳಿಸೊ ಸ್ವರೂಪ!
(ಅಂದಹಾಗೆ ಕೊಂಡಿ ಸೇರಿಸುವ ಯತ್ನ ಇನ್ನು ಅದೆ ಫಲಿತ ನೀಡುತ್ತಿದೆ. ಸದ್ಯಕ್ಕೆ ಕೊಂಡಿ ನೀಡುತ್ತಿಲ್ಲ)