ಆಧ್ಯಾತ್ಮಿಕ ಕರ ಬಾಡಿಗೆ ತರ..!

ಆಧ್ಯಾತ್ಮಿಕ ಕರ ಬಾಡಿಗೆ ತರ..!

ಬೆಳಗಿನ ಮೋಡ ಮುಸುಕಿದ, ಹನಿಹನಿ ಮಳೆಯಾಗುತ್ತಿರುವ ನೀರವ ಗಾನದಲ್ಲಿ ಯಾಕೊ ಮನಸಿನ ಧ್ಯಾನ ಆಧ್ಯಾತ್ಮಕೆಣೆಸಿದಾಗ ಬಂದ ಸಾಲುಗಳಿವು. ಸರಸರನೆ ಸುಲಲಿತವಾಗಿ ಹರಿದುಬಂದ ಸರಳ ಪದಗಳು ಸಾಲಾಗಿ ಕಟ್ಟಿಕೊಂಡ ವೇಗದಿಂದಾಗಿ, ಮನವರಿಕೆಯೊ ಬರಿಯ ಕನವರಿಕೆಯೊ ತಿಳಿಯದ ಅಯೋಮಯ ಸ್ಥಿತಿ. ತಿದ್ದುವ, ವ್ಯಾಖ್ಯಾನ ನೀಡುವ ಗೋಜಿಗೆ ಹೋಗದೆ ಬಂದ ಹಾಗೆ, ಇಲ್ಲಿ ದಾಖಲಿಸಿದ್ದೇನೆ. ಬರೆಯುವಾಗ ಹೊಳೆವ ಏನೆಲ್ಲ ಅರ್ಥಪೂರ್ಣತೆಗಳು, ಹೊಳಹುಗಳು, ನಿಗೂಢತೆಗಳು  ಸರಳ ಪದಗಳಾಗಿ ಹೊರಬರಲು ಪಡುವ ಪ್ರಸವ ವೇದನೆಯನ್ನು ಪರಿಗಣಿಸಿದರೆ , ಇದೊಂದು ಸುಖ ಪ್ರಸವವೆಂದೆ ಹೇಳಬಹುದು. ಅರ್ಥಪೂರ್ಣವೆನಿಸಿದರೆ ಕರ ಬಾಡಿಗೆ ಕಟ್ಟಿ, ಸ್ವಂತ ಮನೆಗೆ ಹುಡುಕಾಟ, ಇಲ್ಲದಿದ್ದರೆ ನಿರಂತರ ಜನ್ಮಾಂತರ ಹುಡುಗಾಟ.. :-) 

- ನಾಗೇಶ ಮೈಸೂರು


ಆಧ್ಯಾತ್ಮಿಕ ಕರ ಬಾಡಿಗೆ ತರ
----------------------------

ಇಳಿಸಲೆಂದೆ ಭೂಭಾರ
ಎತ್ತಿದಂತೆ ಅವತಾರ
ಹಗುರಿಸೆ ಈ ತನು ಭಾರ
ತುಂಬಿಸೆ ಆಧ್ಯಾತ್ಮಿಕ ಕರ
ಆತ್ಮಕೆ ಕಟ್ಟುವ ಬಾಡಿಗೆ ತರ!

ಬಂಗಾರ ಅಡವಿಡೆ ಕಾಡಿ
ನಾವೇ ಕಟ್ಟುವಂತೆ ಬಡ್ಡಿ
ದೇಹಾತ್ಮದ ಉಚಿತ ಸೇವೆ
ಈ ದೇಹ ಬಿಟ್ಟರೆ ಸಾವೆ
ಹೋಗೊ ಮುನ್ನ ಕರ ಸೇವೆ!

ಸೂಕ್ಷ್ಮರೂಪದ ಗಣಕ
ಇದ್ದೂ ಇಲ್ಲದ ವೈಣಿಕ
ಎಲ್ಲಿದ್ದಾನೊ ಕಾಣೊತನಕ
ಎಲ್ಲೆಲ್ಲೊ ಹುಡುಕೊ ಜಾತಕ
ಮುಂಗಡ ಕಟ್ಟೊ ತವಕ!

ಹಿಡಿಯದಲೆ ಜುಟ್ಟಿಡಿದು
ಹಿಡಿದರೂ ಕೈಗೇ ಸಿಗದು
ಅಂಗೈಲೆ ಕೂತಂತೆ ಭಾಸ
ಬರಿ ಬಿರುಕು ಗೆರೆ ಅಭಾಸ
ಅರಿವಾಗದವನ ವಿಳಾಸ!

ಬಾಯ್ಬಿಟ್ಟು ಕೇಳದವನು
ಮುನ್ನಲೆಯ ಹೇಳದವನು
ಹಿನ್ನಲೆ ತೋರದೆ ತೋರುವ
ಮೌನದೆ ಸನ್ನಿಧಿಯಲಿರುವ
ಮೂಕಪ್ರೇಕ್ಷಕ ಸಂಸಾರದವ!

ಬರೆದು ಹುಡುಕುವರುಂಟು
ತಿರಿದು ಅಲೆದವರುಂಟು
ಅರಿತವರ ಕಾಣುವುದೆಂತು
ಅರಿವೆ ಕಟ್ಟುತ ನಿಸ್ತಂತು
ಬರಿಗಣ್ಣಿಗೆ ಕಾಣದ ವಸ್ತು!

ಪುರಾಣ ಪರಂಪರೆ ನೀತಿ
ನಮ್ಮೊಳಗಿಹನೆಂದೆ ಪ್ರತೀತಿ
ಅವ ಕಾಣದಿದ್ದರೆ ಸುಳ್ಳೆ
ಕಾಣೊ ಮಸೂರ ಹುಡುಕಲೆ
ಈ ದೇಹದ ಮನೆ ಕಟ್ಟಲೆ!

ಹುಡುಕಾಟ ಮುಗಿಸೆ ತವಕ
ಸ್ವಂತ ಮನೆ ಸೇರುವ ಲೆಕ್ಕ
ಬದಲಿಸಿ ಬಾಡಿಗೆ ಮನೆಗಳ
ಹುಡುಗಾಟವಾಡೊ ದೇಹಗಳ
ಬಾಡಿಗೆ ಕರ ಕಟ್ಟುವ ದಾಳ!

ಕೇಳಲಿ ಬಿಡಲಿ ಜೀಯಾ
ಕಟ್ಟುತಲಿರು ಬಾಡಿಗೆಯ
ಸಾಕಿದ್ದರೆ ನಿನ ಶಕ್ತಾನುಸಾರ
ಮಿಕ್ಕಿದರಿಳಿಸುವ ಇಹಭಾರ
ಕೊರೆಗಾದಷ್ಟಾಗಲಿ ಹಗುರ!

- ನಾಗೇಶ ಮೈಸೂರು

 

Comments

Submitted by partha1059 Sun, 07/14/2013 - 17:40

ನಾಗೇಶರೆ ಕವನ ಚೆನ್ನಾಗಿ ಬಂದಿದೆ ಬರೆದು ಹುಡುಕುವರುಂಟು ತಿರಿದು ಅಲೆದವರುಂಟು ಅರಿತವರ ಕಾಣುವುದೆಂತು....... .. ಪ್ರಾಸವೆಂಬುದು ನಿಮ್ಮ ಬೆರಳ ತುದಿಯಲ್ಲಿದೆ .... :-) ಶುಭ ಸಂಜೆ...
Submitted by nageshamysore Sun, 07/14/2013 - 17:57

In reply to by partha1059

ಪಾರ್ಥಾ ಸಾರ್, ಎಲ್ಲ ಕಡೆ "ಶ್ರೀಧರರು" ಸಿಕ್ಕುವುದು ಸುಲಭವಲ್ಲವಲ್ಲಾ? ದಾರಿ ತೋರುವವರು, ಅರಿಸುವವರು, ಆರಿಸುವವರು... - ಹೀಗೆ ಎಲ್ಲವೂ ತಾನಾಗೆ ಸಿಗದ, ಸಿಗುವತನಕ ಕಾಯಬೇಕಾದ ಅನಿವಾರ್ಯವೆಂದು ಕಾಣುತ್ತದೆ. ಪ್ರಾಸ ನನ್ನ ಕವನಗಳ ಲ.ಸಾ.ಅ (ಲಘುತ್ತಮ ಸಾಮಾನ್ಯ ಅಪವರ್ತನ) ವೆಂದು ಕಾಣುತ್ತದೆ - ಶುಭ ಸಂಜೆ :-)
Submitted by Vasant Kulkarni Sun, 07/14/2013 - 19:08

ಬಹಳ ಸುಂದರ ಕವನ ನಾಗೇಶ್, ತುಂಬಾ ಹಿಡಿಸಿತು. ಗಹನ ವಿಚಾರವನ್ನು ಸರಳ ಸುಂದರ ಶಬ್ದಗಳಲ್ಲಿ ಸುಲಲಿತವಾಗಿ ಹೇಳಿದ್ದೀರಿ. ಓದಿ ಖುಷಿಯಾಯಿತು.
Submitted by nageshamysore Tue, 07/16/2013 - 00:57

In reply to by Vasant Kulkarni

ಮೆಚ್ಚುಗೆಗೆ ತುಂಬಾ ಧನ್ಯವಾದಗಳು ವಸಂತ್, ವಿಷಯದ ಗಹನತೆಗೆ ಜುಗಲ್ಬಂದಿಯಾಗೆ ಕವನದ ಸರಳತೆ ಮೂಡಿದ್ದರೆ, ನಿಜಕ್ಕು ಖುಷಿ :-) - ನಾಗೇಶ ಮೈಸೂರು

Submitted by makara Sun, 07/14/2013 - 19:09

ಅಲ್ಲಿದೆ ನಮ್ಮನೆ, ಬಂದೆ ಇಲ್ಲಿ ಸುಮ್ಮನೆ ಎನ್ನುವ ದಾಸರ ಪದ ಕೇಳಿಲ್ಲವೇ? ಇಲ್ಲಿಗೆ ಬಂದಿರುವುದರಿಂದ ಆಧ್ಯಾತ್ಮಿಕ ಕರ ಕಟ್ಟಿ ಬೇಗನೇ ನಮ್ಮ ಸ್ವಂತ ಮನೆಗೆ ಹಿಂದಿರುಗಬಹುದು :) ಅದನ್ನು ಕಟ್ಟದೇ ಇದ್ದರೇ ಇಲ್ಲೇ ನಿರಂತರವಾಗಿ ಉಳಿಯಬೇಕಾಗುತ್ತದೆ :( ಒಳ್ಳೆಯ ಕವನಕ್ಕೆ ಅಭಿನಂದನೆಗಳು ನಾಗೇಶರೆ. ಮಾನವ ಜನ್ಮ ದೊಡ್ಡದು, ಅದರಲ್ಲೂ ಕವಿಯಾಗುವುದು ಶ್ರೇಷ್ಠ, ಅದರಲ್ಲೂ ಪಾಂಡಿತ್ಯಪೂರ್ಣ ಕವಿತೆ ಬರೆಯುವುದು ಇನ್ನೂ ಶ್ರೇಷ್ಠ ಎಂದು ಸಂಸ್ಕೃತದ ಸುಭಾಷಿತವೊಂದರಲ್ಲಿ ಓದಿದ ನೆನಪು. ಹೀಗೆ ನಿಮಗೆ ಹಲವು ವಿಧವಾದ ಪುಣ್ಯವಿಶೇಷಗಳಿವೆ. ಪ್ರತಿಕ್ರಿಯೆಯೊಂದರಲ್ಲಿ ಹೇಳಿದಂತೆ, ಜಗನ್ಮಾತೆಯ ಕೃಪೆ ಖಂಡಿತಾ ನಿಮ್ಮ ಮೇಲಿದೆ.
Submitted by nageshamysore Tue, 07/16/2013 - 01:06

In reply to by Premashri

ಹೌದು ಪ್ರೇಮಾಶ್ರಿಯವರೆ, ಆ ಪ್ರಖರ ಪ್ರಕಾಶದ ಹುಡುಕಾಟವೆ ಭಕ್ತಿಯ ಪಯಣ, ಮೆಚ್ಚುಗೆಗೆ ಧನ್ಯವಾದಗಳು :-) - ನಾಗೇಶ ಮೈಸೂರು

Submitted by nageshamysore Tue, 07/16/2013 - 01:03

In reply to by makara

ಶ್ರೀಧರರೆ, ಇದರಲ್ಲಿ ನಿಮ್ಮ ಪ್ರತಿದಿನದ ಪಾಠದ ಪ್ರಭಾವವೂ ಲಲಿತಾ ಕೈಂಕರ್ಯದ ರೂಪದಲ್ಲಿ ಸೇರಿಕೊಂಡು ಸಾಕಷ್ಟು ಪ್ರಭಾವ ಬೀರಿದೆ - ಎಲ್ಲಾ ದೇವಿಯ ಕೃಪೆಯೆಂಬ ಮಾತು ಪ್ರತಿಶತಃ ಸತ್ಯ :-) - ನಾಗೇಶ ಮೈಸೂರು

Submitted by kavinagaraj Mon, 07/15/2013 - 15:45

ಧನ್ಯವಾದ, ನಾಗೇಶರೆ. ಪಂಚತತ್ವದ ದೇಹಕ್ಕೆ ಬಣ್ಣ ಬಣ್ಣದ ಬಟ್ಟೆ ತೊಟ್ಟು ಮೂಲ ಚೈತನ್ಯ ಮರೆತು ಬಿಡುವವರ ನಡುವೆ ಬಾಡಿಗೆ ಕಟ್ಟುವ ವಿಚಾರ ಇರುವವರೂ ಇರುವುದು ಖುಷಿ ಕೊಡುವ ವಿಷಯ.

Submitted by nageshamysore Tue, 07/16/2013 - 01:15

In reply to by kavinagaraj

ಈ 'body'ಗೆ ಸಿಂಗರಿಸಲಿರುವಷ್ಟು ಜತನ, ಆ ಬಾಡಿಗೆಯನ್ನೊ ಕರವನ್ನೊ ತೆರುವ ಪರಿಜ್ಞಾನಕ್ಕೆಲ್ಲಿ ಬರಬೇಕು?  ಜಂಜಾಟಗಳ ಬಡಿತ ಲೌಕಿಕದಲ್ಲಿ ಕುತ್ತಿಗೆತನಕ ಮುಳುಗಿಸಿದ್ದೆ ಹೆಚ್ಚು. ಹಾಗಾಗಿ ನಿಮ್ಮ ಮಾತಲ್ಲಿ ತುಂಬ ತಥ್ಯವುದೆ, ಧನ್ಯವಾದಗಳು ಕವಿ ನಾಗರಾಜರೆ! - ನಾಗೇಶ ಮೈಸೂರು