ಗಂಗಾಧರ?
ಚಿತ್ರ
ಈ ಕಳೆದ ವಾರದ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆಂದು ನಾನು ಬರೆದ ಮೂರು ವೃತ್ತಗಳು - ಹೆಚ್ಚುಕಡಿಮೆ ಒಂದೇ ಅರ್ಥದ್ದು :) .
ಅಂದು ಭಗೀರತನ ಬೇಡಿಕೆಗೆ ಗಂಗೆಯನ್ನು ತಲೆಯಲ್ಲಿ ಹಿಡಿದು, ಲೋಕವನ್ನು ಕಾಯ್ದ ಶಿವ ಈಗ ಉತ್ತರಖಂಡದಲ್ಲಿ ಅದ ನೆರೆ ಹಾವಳಿಯ ಸಮಯದಲ್ಲಿ ಜನರನ್ನು ಕಾಯದೇಹೋದನಲ್ಲಾ ಎಂಬ ಹಳಹಳಿಕೆಯೊಂದಿಗೆ:
ದಿಗಿಲೊಳ್ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದೋದ್ಭವೆ
ಭರದೊಳ್ ಬೀಳುವ ಸೊಕ್ಕಿನಾರ್ಭಟವನುಂ ಸಂತೋಷದಿಂ ನಿಲ್ಲಿಸಿ
ಹಿತದೊಳ್ ಗಂಗೆಯನಂದು ನೀನೆ ಶಿರದೊಳ್ ಕಾಪಿಟ್ಟು ಕಾಯ್ದೆಲ್ಲರಂ
ಅಕಟಾಯೇಕಿದು ಪೇಳುಯಿಂದು ಜನರಂ ಕೈಬಿಟ್ಟು ನೀ ಪೋದೆಯೋ?
ಕರುಣಾಪಾರನೆಂಬ ಶಿವನೇಕೆ ಇಂದು ತನ್ನ ಕಾರುಣ್ಯದ ನೋಟವನ್ನು ತೋರದೇಹೋದ?
ದಿಗಿಲೊಳ್ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ
ಭರದೊಳ್ ಬೀಳುವ ಗಂಗೆಯಾರ್ಭಟವನುಂ ನೀ ಜಟಾಜೂಟಂಗಳಿಂ -
ಹಿತದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಕಾಯ್ದೆಲ್ಲರಂ
ಅಕಟಾ! ನೋಡದೆ ಹೋದೆಯಿಂದು ಶಿವನೇ ಕಾರುಣ್ಯದಾಕಂಗಳಿಂ!
ಅಂದು ಗಂಗೆಯನ್ನು ಹಿಡಿದ ಶಿವ ಇಂದು ಅದೇ ಗಂಗೆಯಲ್ಲೇ ತೇಲಿ ಹೋದನೇಕೆ?
ದಿಗಿಲೊಳ್ ಬೇಡಿರಲಾ ಭಗೀರಥ ಮುದಲ್ ಶ್ರೀವಿಷ್ಣು ಪಾದಂಗಳಿಂ
ಭರದೊಳ್ ಬೀಳುವ ಗಂಗೆಯಾರ್ಭಟವನುಂ ಸಂತೈಸುತುಂ ತಾಳ್ಮೆಯಿಂ
ಹಿತದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ
ಶಿವನೇ ಭೋರ್ಗರೆದಿರ್ಪ ನೀರಹರಿವೊಳ್ ನೀನೆಂತು ತೇಲಾಡಿಹೆಯ್?
- ಹಂಸಾನಂದಿ
ಕೊ: ಎಲ್ಲವೂ ಮತ್ತೇಭವಿಕ್ರೀಡಿತ ವೃತ್ತದಲ್ಲಿವೆ. ಮೊದಲ ಎರಡರಲ್ಲಿ ಕೆಲವು ಛಂದಸ್ಸಿನ ತಪ್ಪುಗಳಿದ್ದರೂ ಹಾಕಿಬಿಟ್ಟಿದ್ದೇನೆ :)
Rating