ಪರಿವರ್ತನೆ

ಪರಿವರ್ತನೆ

ಇಂದು ಸಹನ ಸ್ವಲ್ಪ ಅವಸರದಲ್ಲಿಯೇ ಇದ್ದಳು. ದೈಹಿಕವಾಗಿಯೂ, ಮಾನಸಿಕವಾಗಿಯೂ! ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಅಪ್ಪ ಅಮ್ಮನಿಗೆ ಕಾಣದಿರಲೆಂದು ತನ್ನ ವೇಲ್‍ನಿಂದ ಕಣ್ಣನ್ನು ಮತ್ತೆ ಮತ್ತೆ ಒರೆಸಿಕೊಳ್ಳುತ್ತಿದ್ದಳು. ಅವಸರವಸರವಾಗಿ ಊಟದ ಬಾಕ್ಸ್, ಒಂದಷ್ಟು ಪುಸ್ತಕ, ಪೆನ್ನನ್ನು ಬ್ಯಾಗಿಗೆ ತುಂಬಿಕೊಂಡು ಹೊರಡಲು ಅನುವಾದಳು. ಆ ಅವಸರದಲ್ಲಿ ಒಮ್ಮೆ ಎಡವಿ ಬಿದ್ದಳು. ಹೊಸ್ತಿಲ ಬಳಿ ಬಂದವಳಿಗೆ ತನ್ನ ಮೊಬೈಲ್ ನೆನಪಾಯಿತು. ಮೊಬೈಲ್ ಇಟ್ಟಿರುವ ಜಾಗವನ್ನು ನೆನಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ, ಮೆದುಳಿನ ನಡುವೆ ಅದೇನೇನೋ ಅಡ್ಡ ಬಂದಂತಾಗಿ ನೆನಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಷ್ಟಕ್ಕೆ ಅಮ್ಮ ಮೊಬೈಲ್ ಹುಡುಕಿಕೊಟ್ಟರು. ಅದನ್ನೂ ಬ್ಯಾಗಿಗೆ ತುರುಕಿಕೊಂಡು ಹೊಸ್ತಿಲ ಬಳಿ ನಿಂತಾಗ ಮತ್ತೇನಾದರೂ ಮರೆತಿರಬಹುದೇ ಎಂದೆನಿಸಿತು. ಏನಿರಬಹುದೆಂದು ಯೋಚಿಸುವಷ್ಟು ತಾಳ್ಮೆ ಮತ್ತು ನೆಮ್ಮದಿ ಅವಳಲ್ಲಿರಲಿಲ್ಲ.

 

ಬಸ್‍ಸ್ಟ್ಯಾಂಡಿಗೆ ನಡೆದುಕೊಂಡೇ ಬಂದವಳಿಗೆ ಬಸ್ ಎಷ್ಟು ಹೊತ್ತಿಗಿದೆ ಎಂಬ ಪರಿಜ್ಞಾನ ಮತ್ತು ಮಾಹಿತಿಯೂ ಇಲ್ಲ. ಇಷ್ಟು ದಿನ ಆಕೆಯ ಪ್ರಿಯಕರನಾದ ಸಾಗರ್ ಡ್ರಾಪ್ ಮಾಡುತ್ತಿದ್ದ. ಸಹನ ತಡವಾಗಿ ಬಂದರೂ ತನ್ನ ಸ್ಕೂಟರನ್ನು ವೇಗವಾಗಿ ಓಡಿಸಿಕೊಂಡು ಹೋಗಿ ಸರಿಯಾದ ಸಮಯಕ್ಕೆ ಸಹನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಆಕೆಯನ್ನು ತಲುಪಿಸಿಬಿಡುತ್ತಿದ್ದ. ಆದರೆ, ಇಂದೇಕೋ ಆತ ಬರುವುದಿಲ್ಲವೆಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದ. ಬರಲಾಗುವುದಿಲ್ಲವೆಂದಿದ್ದರೆ ಆಕೆಗೆ ತುಸು ಸಮಾಧಾನವಾಗುತ್ತಿತ್ತೇನೋ, ಆದರೆ ಆತ ಬರುವುದಿಲ್ಲವೆಂದು ಕೆಂಡಾಮಂಡಲನಾಗಿ ಹೇಳಿದ್ದ. ಬಸ್ ಹತ್ತಿದೊಡನೆ ಕಿಟಕಿಯ ಪಕ್ಕದ ಸೀಟೇ ದೊರಕಿತು. ಕಿಟಕಿಯೆಡೆಗೆ ನೋಡುತ್ತಾ ಕುಳಿತ ಸಹನ ಆಗಾಗ ತನ್ನ ಕಣ್ಣೀರನ್ನೊರೆಸಿಕೊಂಡಳು. ಎದೆಯೊಳಗೇನೋ ಸುನಾಮಿ ಎದ್ದಂತೆ ಆಕೆಗೆ ದಿಗಿಲು. ದೇಹಕ್ಕೆ ನೆಮ್ಮದಿಯೇ ಇರಲಿಲ್ಲ. ತಾನು ಮಾಡದ ತಪ್ಪಿಗೆ ಅದು ಗಡಗಡನೆ ನಡುಗುತ್ತಿತ್ತು.

 

ಸರಿಯಾದ ಸಮಯಕ್ಕೆ ಶಾಲೆ ಸೇರಿಕೊಂಡವಳು ತನ್ನ ಸಹೋದ್ಯೋಗಿಗಳೊಂದಿಗೆ ಖಳ್ಳ ನಗು ಬೀರಿದಳು. ನಡು ನಡುವೆ ಬಾತ್‍ರೂಮಿಗೆಂದು ಹೋಗಿ ಅತ್ತು ಅತ್ತು ಸುಸ್ತಾಗಿ ಬರುತ್ತಿದ್ದಳು. ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಮಾಡುವಾಗಲೂ ಆಕೆಯ ಚಿತ್ತ ಮತ್ತೆಲ್ಲೋ ಇದ್ದು ತರಗತಿಗಳು ಗದ್ದಲದ ಸಂತೆಯಾಗುತ್ತಿದ್ದವು. ಕೋಪ ಹೆಚ್ಚಾಗಿ ಇದ್ದಕ್ಕಿದ್ದಂತೆ ಕೆಂಡದಂತೆ ಮಕ್ಕಳ ಮೇಲೆ ಸಿಡಿದುಬಿಡುತ್ತಿದ್ದಳು. ಒಂದಿಬ್ಬರು ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದಳು. ಕೆಲಸ ಮುಗಿದೊಡನೆಯೇ ತನ್ನ ಶಾಲೆಯ ಪಕ್ಕದಲ್ಲಿರುವ ನಿರ್ವಾತ ಪ್ರದೇಶದಲ್ಲಿ ಎಂದಿನಂತೆ ನಿಂತುಕೊಂಡಳು. ಅದಾಗಲೇ ಸಾಗರ್ ಬಂದುಬಿಡುತ್ತಿದ್ದ. ಆದರೆ ಇಂದು ಆತನ ಪತ್ತೆಯೇ ಇಲ್ಲ. ಫೋನಾಯಿಸಿದಳು, ಆದರೆ, ಮೊಬೈಲ್ ಸ್ವಿಚ್ ಆಫ್ ಆಗಿತ್ತು.

 

ಬಸ್ ಸ್ಟ್ಯಾಂಡಿಗೆ ಬಂದಳು. ಬಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುವುದು ಆಕೆಗೆ ಹೊಸ ಅನುಭವ. ರಸ್ಸಾಗಿದ್ದ ಒಂದೆರಡು ಬಸ್ಸುಗಳನ್ನು ಬಿಟ್ಟಳು. ಖಾಲಿ ಇರುವ ಬಸ್ಸುಗಳು ಬರುವ ಲಕ್ಷಣಗಳು ಕಾಣಲೇ ಇಲ್ಲ. ಒಂದರ್ಧ ಘಂಟೆಯ ನಂತರ ಸಾಗರನಿಗೆ ಮತ್ತೆ ಫೋನಾಯಿಸಿದಳು. ಈ ಬಾರಿ ಫೋನ್ ರಿಂಗಾದರೂ ಆತ ರಿಸೀವ್ ಮಾಡಲಿಲ್ಲ. ಸಹನಳಿಗೆ ಅಳುವಿನ ಕಟ್ಟೆಯೇ ಒಡೆಯಿತು. ವಿಧಿಯಿಲ್ಲದೇ ರಸ್ಸಾಗಿದ್ದ ಬಸ್ಸನ್ನೇ ಹತ್ತಿದಳು. ತಳ್ಳುವವರ, ಮೈ ಮೇಲೆ ಬೀಳುವವರ ನಡುವೆ ನಿಂತುಕೊಂಡವಳಿಗೆ ಏನೋ ಒಂದು ರೀತಿಯ ಅಶುದ್ಧತೆ ಕಾಡಿತು. ಅಷ್ಟಕ್ಕೇ ಸಾಗರ್ ಫೋನಾಯಿಸಿದ.

‘ಹಲೋ’ ಎಂದಳು ಸಹನ.

‘ಹೇಳು, ಏನು ಫೋನ್ ಮಾಡಿದ್ದು?’ – ಯಾರೋ ಅಪರಿಚಿತನಂತೆ ಆತ ಮಾತನಾಡಿದ್ದ. ಕಣ್ಣೀರೊರೆಸಿಕೊಂಡ ಸಹನ ‘ಯಾಕೆ ಅಂತ ಗೊತ್ತಾಗ್ಲಿಲ್ವಾ?’ ಎಂದು ಕೇಳಿದಳು.

‘ಗೊತ್ತಾಯ್ತು, ಆದರೆ, ನಿನ್ನನ್ನ ಡ್ರಾಪ್ ಮಾಡೋಕೆ ಅವನೇ ಬಂದಿರಬಹುದು ಅಂದ್ಕೊಂಡೆ, ಮತ್ತೆ ನಾನು...’ – ಕೋಪ ಮತ್ತು ಅಳು ಹೆಚ್ಚಾಗಿ, ಆತ ಮಾತು ಮುಂದುವರೆಸುವ ಮೊದಲೇ ಸಹನ ಫೋನ್ ಕಟ್ ಮಾಡಿಬಿಟ್ಟಳು.

 

ಪ್ರತಿ ಮುಂಜಾನೆ ಎದ್ದೊಡನೆ ಸಹನ ಮಾಡುತ್ತಿದ್ದ ಮೊದಲ ಕೆಲಸವೆಂದರೆ, ದೇವರ ಫೋಟೋ ನೋಡುವುದು, ನಂತರ ಸಾಗರನ ಫೋಟೋಗೆ ಮುತ್ತಿಕ್ಕಿ ಕೂಡಲೇ ಆತನಿಗೆ ಕರೆ ಮಾಡಿ ಮಾತನಾಡಿಸುವುದು. ಒಬ್ಬರಿಗೊಬ್ಬರು ‘ಚಿನ್ನು, ಪುಟ್ಟು’ ಎಂದು ಕರೆದುಕೊಳ್ಳುವುದು. ಈ ಪ್ರಕಾರವಾಗಿ ಪ್ರಾರಂಭವಾಗುತ್ತಿದ್ದ ಆಕೆಯ ದಿನವೆಲ್ಲಾ ಪ್ರಕಾಶಮಾನವಾಗಿ ಪ್ರಜ್ವಲಿಸಿಕೊಳ್ಳುತ್ತಿತ್ತು. ಆ ದಿನದ ಪ್ರತಿ ಕ್ಷಣವೂ ಹೂವಿನಂತೆ ಅರಳಿಕೊಳ್ಳುತ್ತಿದ್ದಳು. ಆದರೆ, ಇಂದು ಮುಂಜಾನೆಯೇ ಆಕೆಗೊಂದು ಆಘಾತ ಕಾದಿತ್ತು. ಎಷ್ಟೇ ಬಾರಿ ಫೋನ್ ಮಾಡಿದರೂ ಸಾಗರ್ ಯಾಕೋ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ತನ್ನವನ ಮಾತನ್ನು ಕೇಳದೇ ಹೋದರೆ ಕ್ಷಣ ಕ್ಷಣವೂ ಚಡಪಡಿಸುವ ಸಹನ ಮತ್ತೆ ಮತ್ತೆ ಕರೆ ಮಾಡಿದ್ದಳು. ಕೊನೆಗೂ ಕರೆ ಸ್ವೀಕರಿಸಿದಾತನ ಮಾತುಗಳು ವಿಚಿತ್ರವಾಗಿದ್ದವು. ನಡುವೆ ‘ನಿನ್ನೆ ಸಂಜೆ ನಿನ್ನನ್ನ ಡ್ರಾಪ್ ಮಾಡಿದ್ನಲ್ಲ, ನಿಮ್ಮ ಮಾವನ ಮಗ, ಅವನ ಜೊತೆಗೆ ನಿನ್ನೆ ಒಳ್ಳೆ ರಾತ್ರಿ ಆಯ್ತಾ? ಡ್ರಾಪ್ ಮಾಡುವಾಗ್ಲೇ ಅಲ್ಲಲ್ಲಿ ಮೈ ಕೈ ಸೋಕಿರಬಹುದಲ್ಲ’ ಎಂದುಬಿಟ್ಟ. ಸಹನಳಿಗೆ ತಲೆ ಸುತ್ತಿದಂತಾಗಿತ್ತು. ಸಾಗರ್ ಬದಲು ಬೇರೆ ಯಾರಿಗಾದರೂ ಫೋನ್ ಮಾಡಿಬಿಟ್ಟೆನೇನೋ ಎಂದು ಗಾಬರಿಗೊಂಡವಳು ತನ್ನ ಮೊಬೈಲಿಗೆ ಕಣ್ಣರಳಿಸಿ ದೃಷ್ಟಿ ಬೀರಿದ್ದಳು. ಆದರೆ, ಅದು ಸಾಗರನ ಸಂಖ್ಯೆಯೇ ಆಗಿತ್ತು. ಆಕೆಗೆ ಮಾತೇ ಹೊರಡಲಿಲ್ಲ. ನನ್ನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಸಾಗರ್ ಬಾಯಿಂದ ಈ ಮಾತೇ? ನನ್ನ ಮಾತನ್ನು ಕೇಳಿಯೇ ತನ್ನ ಕೆಲಸ ಪ್ರಾರಂಭಿಸುತ್ತಿದ್ದ ಹುಡುಗ ಇಂದು ಮಾತನಾಡಲು ಇಷ್ಟು ಸತಾಯಿಸಿಬಿಟ್ಟನೇ? ಆಕೆಗೆ ಆ ಮನೆಯೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ತನ್ನಿರುವಿಕೆಯೇ ಆಕೆಗೆ ಸಂಶಯವಾಗಿ ಕಾಡಿತು. ದೃಢಪಡಿಸಿಕೊಳ್ಳಲು ‘ಏನು?’ ಎಂದು ಕೇಳಿದಳು.

‘ಏನೂ ಇಲ್ಲ, ನೀನು ನನ್ನ ಜೊತೆ ಆವತ್ತು ರಾತ್ರಿಯೆಲ್ಲಾ ಕಳೆದಾಗಲೇ ನಿನಗೆ ಈ ಚಾಳಿ ಇರಬಹುದು ಅಂತ ಅನುಮಾನ ಬಂದಿತ್ತು. ಹೇಳೋದು ಹೇಗೆ ಅನ್ನೋದೆ ಗೊತ್ತಾಗದೇ ಈ ಸಂದರ್ಭದಲ್ಲಿ ಇರೋದನ್ನು ಹೇಳಿದ್ದೇನೆ ಅಷ್ಟೇ’ ಎಂದಿದ್ದ.

 

ಅಷ್ಟಕ್ಕೇ ತನ್ನ ಜಾಗ ಬಂದಿತ್ತು. ಬಸ್ಸಿನಿಂದ ಇಳುಗಿದವಳು ಅತ್ತುಕೊಂಡೇ ನೇರವಾಗಿ ಮನೆಗೆ ಬಂದಳು. ಮನೆಗೆ ಬರುವ ಹಾದಿಯಲ್ಲಿ ಸಿಗುವ ಪುಟಾಣಿಗಳನ್ನು ಪ್ರತಿದಿನ ಕೆಣಕುತ್ತಿದ್ದಳು. ಆದರೆ, ಇಂದು ಯಾವ ಪುಟಾಣಿ ಕಂದನೆಡೆಗೂ ಆಕೆ ತಿರುಗಲಿಲ್ಲ. ಈ ಘಟನೆಯಿಂದ ಆ ಪುಟಾಣಿಗಳಿಗೇ ಆಶ್ಚರ್ಯ. ಮಗಳ ಅಳುಮೊಗ ಕಂಡ ಅಮ್ಮ, ‘ಏನಾಯಿತಮ್ಮ?’ ಎಂದು ತಲೆ ಸವರಿ ಪ್ರೀತಿಯಿಂದ ಕೇಳಿದರು. ‘ಹೊಟ್ಟೆ ನೋವಮ್ಮ’ ಎಂಬ ಸುಳ್ಳನ್ನೊದರಿ ತನ್ನ ಕೋಣೆಗೆ ಸೇರಿಕೊಂಡಳು. ಕೋಣೆಗೆ ಬಂದವಳು ನಿಟ್ಟುಸಿರು ಬಿಡುತ್ತಾ ಕುಳಿತುಕೊಂಡು ತನ್ನ ಮನಸ್ಸನ್ನು ಹತೋಟಿಗೆ ತರಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದರೂ ಈ ವಿಚಾರ ಸೂಜಿಮೊನೆಯಾಗಿ ಆಕೆಯನ್ನು ಬಗೆಯುತ್ತಿತ್ತು.

 

ಒಮ್ಮೆ ಸಾಗರ್ ಹೇಳಿದ್ದ - ‘ಕೆಲವೊಮ್ಮೆ ಕೆಲಸದ ಒತ್ತಡದಿಂದ ಸಂಜೆ ಬರೋಕೆ ಸಾಧ್ಯವಾಗೋಲ್ಲ, ಆಗ ನಿಮ್ಮ ಮಾವನ ಮಗನ ಹತ್ರ ಗಾಡಿ ಇದೆಯಲ್ಲ, ಅವನಿಂದ ಡ್ರಾಪ್ ತೆಗೆದುಕೋ, ರಸ್ಸಿರೋ ಬಸ್ಸಿನಲ್ಲಿ ಹೋಗ್ಬೇಡ’ – ಈ ಮಾತನ್ನು ನೆನಪಿಸಿಕೊಂಡವಳು ಆತನ ಇಂದಿನ ವರ್ತನೆಗೆ ಆಶ್ಚರ್ಯಳಾದಳು ಮತ್ತು ಕಣ್ಣೀರಾದಳು. ಆತ ಎಂದೂ ತನ್ನ ಮೇಲೆ ಅನುಮಾನ ಪಟ್ಟವನಲ್ಲ, ತನ್ನ ಸಹೋದ್ಯೋಗಿ ಮಿತ್ರರೊಂದಿಗೆ ಪ್ರವಾಸ ಹೊರಟು ಒಂದು ತಿಂಗಳು ಒಂದೇ ಲಾಡ್ಜಿನಲ್ಲಿ ಇದ್ದಾಗಲೂ ಪ್ರಶ್ನೆ ಮಾಡಿದವನಲ್ಲ, ‘ಎಲ್ಲರ ಜೊತೆ ಮಾತನಾಡಿಕೊಂಡು ಖುಷಿಯಾಗಿರು, ನನ್ನ ಜೊತೆ ಮಾತನಾಡೋದು ಇದ್ದೇ ಇರುತ್ತದೆ’ ಎಂದು ಪದೆ ಪದೇ ಹೇಳುತ್ತಿದ್ದವ, ಆದರೆ ಇಂದು... ಎಂದು ತನಗೆ ತಾನೇ ಗೊಣಗಿಕೊಂಡಳು. ಮತ್ತೊಮ್ಮೆ ಕಂಪಿಸಿಹೋದಳು. ಆತ ಉಪಯೋಗಿಸಿದ್ದ ‘ಚಾಳಿ’ ಎಂಬ ಪದ ಆಕೆಯ ಸುತ್ತ ದುಂಬಿಯಂತೆ ಗುಯ್ಗುಡುತ್ತ ಆಕೆಯನ್ನು ಅಪರಿಮಿತವಾಗಿ ಚುಚ್ಚುತ್ತಿತ್ತು. ಆ ಪದ ನೆನಪಿಸಿಕೊಂಡರೆ ಒಂದು ರೀತಿಯ ಹಿಂಸೆಯಾಗಿ ಕುಳಿತಲ್ಲಿ ಕೂರಲಾಗದೇ, ನಿಂತಲ್ಲಿ ನಿಲ್ಲಲಾಗದೇ, ಮಲಗಲಾಗದೇ, ಏಳಲಾಗದೇ ಒದ್ದಾಡಿದಳು.

 

ಪ್ರತಿದಿನ ಕೆಲಸ ಮುಗಿಸಿಕೊಂಡು ಮನೆಗೆ ಬಂದೊಡನೆ ಸಾಗರ್‍ಗೆ ಫೋನ್ ಮಾಡುವ ಮತ್ತೊಂದು ಅಭ್ಯಾಸ ಸಹನಳಿಗಿತ್ತು. ಒಮ್ಮೊಮ್ಮೆ ಅಪ್ಪ ಅಮ್ಮನಿಗೆ ಹೆದರಿ ಫೋನ್ ಮಾಡುವುದು ತಡವಾದರೆ, ಸಹನ ರಿಸೀವ್ ಮಾಡುವವರೆವಿಗೂ ಬಿಡದೆ ನಿರಂತರವಾಗಿ ಸಾಗರ್ ಫೋನ್ ಮಾಡುತ್ತಿದ್ದ. ಒಮ್ಮೆ ಬರೋಬ್ಬರಿ ಇನ್ನೂರು ಬಾರಿ ಫೋನ್ ಮಾಡಿ ದಾಖಲೆ ಸ್ಥಾಪಿಸಿದ್ದ! ಆದರೆ ಇಂದು ಆಕೆ ಮನೆಗೆ ಬಂದು ಒಂದು ತಾಸಿನ ಮೇಲಾದರೂ ಮೊಬೈಲ್ ಹೊಡೆದುಕೊಂಡಿಲ್ಲ. ಇಷ್ಟೆಲ್ಲಾ ಆಗಿದ್ದರೂ, ಆತ ಇಷ್ಟೆಲ್ಲಾ ಒದರಿದ್ದರೂ, ತಡೆದುಕೊಳ್ಳಲಾಗದ ಹೆಣ್ಣು ಹೃದಯವೇ ಆತನಿಗೆ ಫೋನ್ ಮಾಡಿತು. ಆದರೆ, ಆತ ಬ್ಯುಸಿಯಾಗಿದ್ದ. ಮತ್ತೊಂದು ತಾಸಿನವರೆವಿಗೂ ಮಧ್ಯೆ ಮಧ್ಯೆ ಫೋನ್ ಮಾಡಿದ್ದಳು. ಆದರೆ, ಆತ ಯಾರೊಡನೆಯೋ ಹರಟುತ್ತಿದ್ದ. ಒಂದು ತಾಸಿನ ಬಳಿಕ ಆತನ ಫೋನ್ ಕೊನೆಗೂ ರಿಂಗ್ ಆಯಿತು. ಆತ ಕೂಡಲೇ ಕಟ್ ಮಾಡಿ, ‘ಸ್ವಲ್ಪ ಬ್ಯುಸಿಯಿದ್ದೇನೆ, ನಂತರ ಕರೆ ಮಾಡು’ ಎಂಬ ಸಂದೇಶ ರವಾನಿಸಿದ.

 

ಅಷ್ಟಕ್ಕೇ, ಅಮ್ಮ ಊಟಕ್ಕೆ ಕರೆದರು. ಸಾಗರನ ಜೊತೆ ಮಾತನಾಡಿ ದಿನ ಪ್ರಾರಂಭಿಸುತ್ತಿದ್ದವಳಿಗೆ, ಇಂದು ಸಾಗರ್ ನ ಮಾತಿಲ್ಲದೇ ತುತ್ತು ಇಳುಗುವಂತಿರಲಿಲ್ಲ. ಆದರೆ, ಆತನ ಮಾತಿಲ್ಲದೇ, ಅಪ್ಪ ಅಮ್ಮನ ಮಾತಿಗೆ ಹೆದರಿ ಹೊಟ್ಟೆನೋವಿನ ನೆಪದಲ್ಲಿ ಚೂರೇ ಚೂರು ಮೊಸರವಲಕ್ಕಿ ತಿಂದು ಮತ್ತೆ ಕೋಣೆ ಸೇರಿಕೊಂಡಳು.

 

ಚಡಪಡಿಸುವ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಆಕೆಗೆ ಸಾಧ್ಯವಾಗಲೇ ಇಲ್ಲ. ಮೇಲೆ ಸುತ್ತುತ್ತಿದ್ದ ಫ್ಯಾನನ್ನು ಕಂಡಳು. ಒಮ್ಮೆಲೇ ನೇಣುಹಾಕಿಕೊಳ್ಳುವ ಯೋಚನೆ ಬಂದುಬಿಟ್ಟಿತು. ಆದರೆ, ‘ನನ್ನ ಮುದಿ ತಂದೆ ತಾಯಿ?’ ಎಂದು ಕೊರಗಿದ ಮನಸ್ಸು ‘ನನ್ನ ಸಾಗರ್?’ ಎಂದು ಅವಳಿಗರಿವಿಲ್ಲದಂತೆ ಪೇಚಿಕೊಂಡಿತು. ಆಶ್ಚರ್ಯವೆಂಬಂತೆ ಸಾಗರ್ ಫೋನ್ ಮಾಡಿದ್ದ. ರಿಸೀವ್ ಮಾಡಿ ‘ಹಲೋ’ ಎಂದಳು.

‘ಏನು ಬೇಗ ಹೇಳು, ನಿದ್ದೆ ಬರ್ತಾ ಇದೆ’

‘ಸಾಗರ್’ – ಆಕೆಗೆ ಮಾತೇ ಹೊರಡಲಿಲ್ಲ, ಅಳಲು ಶುರುವಿಟ್ಟುಕೊಂಡಳು.

‘ಏನೂ ಇಲ್ಲಾಂದ್ರೆ ಓಕೆ, ಗುಡ್ ನೈಟ್’ ಎಂದು ಹೇಳಿದವನೇ ಫೋನ್ ಕಟ್ ಮಾಡಿಬಿಟ್ಟ.

 

ಹಚ್ಚಿಕೊಳ್ಳುವುದು ಎಂಬ ಪದವನ್ನು ವಿಸ್ತರಿಸಿ ಎಂದು ಕೇಳಿದರೆ ಈ ಪ್ರಪಂಚದಲ್ಲಿ ಅದನ್ನು ವಿಸ್ತರಿಸಲು ಯಾರಿಗೂ ಸಾಧ್ಯವಾಗುವುದಿಲ್ಲವೇನೋ? ಕೇವಲ ಅನುಭವಿಸಬಹುದಷ್ಟೇ. ಕೆಲವು ಅನುಭವಗಳನ್ನು ಮನಸ್ಸು ಹೇಳಲು ಪ್ರಯತ್ನಿಸಿದರೂ ಪದಗಳು ನಿಲುಕದೆ ಭಾಷೆ ಸೋಲುತ್ತದೆ. ಹಾಗೆಯೇ, ಸಹನ ಮತ್ತು ಸಾಗರ್ ಎಂಬ ಎರಡು ಹೃದಯಗಳು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದವು. ಕಾಲೇಜು ದಿನಗಳಿಂದಲೂ ಒಬ್ಬರನ್ನೊಬ್ಬರು ನೋಡುತ್ತ ಬೆಳೆದವರು, ನಿನ್ನೆಯವರೆವಿಗೂ ಎರಡು ದೇಹ ಒಂದೇ ಜೀವ ಎಂಬಂತೆ ಬದುಕಿದವರು. ಒಬ್ಬರನ್ನೊಬ್ಬರು ಕಂಡರೆ, ಮಾತನಾಡಿದರೆ ಇನ್ನಿಲ್ಲದಂತೆ ಅರಳಿಕೊಳ್ಳುತ್ತಿದ್ದರು. ಪ್ರತಿಸಂಜೆ ಸಹನಳನ್ನು ಡ್ರಾಪ್ ಮಾಡುವಾಗ ಕೆರೆಯ ಪಕ್ಕದಲ್ಲಿರುವ ಪಾರ್ಕ್‍ನಲ್ಲಿ ಕೂರಿಸಿಕೊಂಡು ತನ್ನ ನಿಷ್ಕಲ್ಮಶ ಪ್ರೇಮವನ್ನು ಧಾರೆ ಎರೆಯುತ್ತಿದ್ದ ಸಾಗರನ ತೋಳ ಮೇಲೆ ತಲೆ ಇಡುತ್ತಿದ್ದ ಸಹನಳಿಗೆ ಈ ಪ್ರಪಂಚದಲ್ಲಿ ಮತ್ತೇನೂ ಬೇಡವಾಗಿತ್ತು. ಆತನ ಸಾಮೀಪ್ಯದಲ್ಲಿ ಜಗತ್ತಿನ ಉಳಿದೆಲ್ಲಾ ವಿಚಾರ, ವಸ್ತುಗಳು ಶೂನ್ಯವಾಗಿ, ನಿರ್ವಾತದಲ್ಲಿ ತೇಲಿದಂತಾಗುತ್ತಿತ್ತು. ಆತನನ್ನು ಅಷ್ಟು ಹಚ್ಚಿಕೊಂಡಿದ್ದಳು. ಮುಂದೆ ಹುಟ್ಟುವ ತಮ್ಮ ಮಕ್ಕಳಿಗೆ ಅದಾಗಲೇ ನಾಮಕರಣ ಮಾಡಿಕೊಂಡಿದ್ದರು.

 

ಒಮ್ಮೆ ಆತ ಎಲ್ಲೋ ದುಡ್ಡು ಕಳೆದುಕೊಂಡು, ಬೇಸರವಾಗಿ ‘ನಾನು ಸೂಸೈಡ್ ಮಾಡ್ಕೋತೀನಿ ಕಣೇ’ ಎಂದಾಗ ಗಳಗಳನೇ ಅತ್ತುಬಿಟ್ಟಿದ್ದಳು. ಆಕೆಯ ಹೃದಯದ ಬಡಿತ ಹೆಚ್ಚಾಗಿ, ಉಸಿರಾಟ ಬಿಗಿಯಾಗಿ ಜ್ಞಾನ ತಪ್ಪಿ ಬಿದ್ದಿದ್ದಳು. ಗಾಬರಿಗೊಂಡ ಸಾಗರ್ ನೀರು ಚಿಮುಕಿಸಿ ಆಕೆಯನ್ನು ಎಚ್ಚರಿಸಿದಾಗ ಗಕ್ಕನೇ ತಬ್ಬಿಕೊಂಡು ‘ನಿಂಗೆ ಏನೂ ಆಗಿಲ್ಲ ಅಲ್ವಾ, ನೀನಿಲ್ಲ ಅಂದ್ರೆ ನಾನು ಒಂದು ಕ್ಷಣಾನೂ ಬದುಕೋಲ್ಲ’ ಎಂದು ಹೇಳಿದ್ದಳು. ಅಷ್ಟು ಹಚ್ಚಿಕೊಂಡಿದ್ದ ಆಕೆ, ತನ್ನ ದೇಹವನ್ನು ಯಾವುದೇ ಮುಲಾಜಿಲ್ಲದೇ ಆತನಿಗೆ ಸಮರ್ಪಿಸಿದ್ದಳು. ಶಾಲೆಯ ಕಡೆಯಿಂದ ಯಾವುದೋ ಪ್ರವಾಸಕ್ಕೆ ಹೋಗಿ ಬರುತ್ತೇನೆ ಎಂದು ಹೆತ್ತವರಿಗೆ ಸುಳ್ಳು ಹೇಳಿ ಸಾಗರನೊಂದಿಗೆ ಮೂರು ದಿನದ ಮಟ್ಟಿಗೆ ಊಟಿ, ಕೊಡೈಕೆನಲ್ ಸುತ್ತಿ ಬಂದಿದ್ದಳು.

 

ಆತ ಕೂಡ ಸಹನಳಿಗೆ ಚೂರು ಸಂದೇಹ ಬರದಂತೆ ಅವಳ ಜೊತೆ ವ್ಯವಹರಿಸಿ ಆಕೆಯ ದೇಹಸುಖವನ್ನನುಭವಿಸಿದ್ದ. ಯಾರಿಗೂ ತಿಳಿಯದಂತೆ ಮನೆಯೊಳಗೆ ನುಗ್ಗಿಕೊಳ್ಳುವ ಹಾವಿನಂತೆ ಆಕೆಯನ್ನು ಸಂಪೂರ್ಣವಾಗಿ ಆವಾಹಿಸಿಕೊಂಡಿದ್ದ. ಸಹನ ಒಂದು ಹಿಡಿ ಪ್ರೀತಿ ತೋರಿಸಿದರೆ, ಆತ ನೂರು ಹಿಡಿ ಪ್ರೀತಿ ತೋರಿಸುತ್ತಿದ್ದ. ‘ನೀನೊಬ್ಬಳೇ ಮಗಳು, ನೀನಲ್ಲದೇ ನಿಮ್ಮ ತಂದೆ ತಾಯಿಗೆ ಇನ್ಯಾರು ಗತಿ?, ಅವರನ್ನು ನಮ್ಮ ಜೊತೆ ಇರಿಸಿಕೊಳ್ಳೋಣ, ಇನ್ನ ಸ್ವಲ್ಪ ದಿನದಲ್ಲಿಯೇ ಅವರ ಕೂಡ ಮಾತನಾಡಿ ಒಪ್ಪಿಸುತ್ತೇನೆ’ ಎಂದು ಸಾಗರ್ ಹೇಳಿದ್ದ ಮಾತನ್ನು ನೆನಪಿಸಿಕೊಂಡ ಸಹನ ಮತ್ತೆ ಗಳಗಳನೆ ಅತ್ತುಬಿಟ್ಟಳು. ಆದರೂ ಆಕೆಯ ಹಾಳಾದ ಹೃದಯ ಸಾಗರನ ಹೆಸರನ್ನೇ ಬಡಿದುಕೊಳ್ಳುತ್ತಿತ್ತು. ಅದಾಗಲೇ ಸಮಯ ರಾತ್ರಿ ಒಂದಾಗಿತ್ತು. ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಸಾಗರನನ್ನು ಸ್ವಲ್ಪ ಗಟ್ಟಿಯಾಗಿಯೇ ಮಾತನಾಡಿಸೋಣವೆಂದು ನಿಶ್ಚಯಿಸಿಕೊಂಡಳು, ಆ ಹೊತ್ತಿನಲ್ಲಿಯೇ ಕರೆ ಮಾಡಿದಳು.

 

‘ನಿನಗೆ ಕರೆ ಮಾಡಲು ಹೊತ್ತು ಗೊತ್ತು ಇಲ್ವೇನೆ?’ ಎಂದು ಸಾಗರ್ ರೇಗಿಕೊಂಡ. ಸಹನಳ ದೇಹ ಬೆಚ್ಚಿತು.

‘ಅಲ್ಲಾ ಕಣೋ, ಒಂದು ಡ್ರಾಪ್ ಹಾಕಿಸಿಕೊಂಡದ್ದು ತಪ್ಪಾಯಿತೇ, ಅವನು ಇನ್ನೂ ಚಿಕ್ಕ ಹುಡುಗ, ಒಮ್ಮೆ ನೀನೇ...’

‘ಥೂ, ಇಷ್ಟು ಹೊತ್ತಲ್ಲಿ ಅದನ್ನ ನೆನಪಿಸಿ ನನ್ನ ಮೂಡ್ ಹಾಳು ಮಾಡಬೇಡ, ನೀನು ಅವನನ್ನ ತಬ್ಕೊಂಡು ಹೋಗ್ತಾ ಇದ್ದದ್ದು ನಾನು ನೋಡಿದ್ದೆ, ಚಿಕ್ಕವನಾದರೇನೂ ಆಸೆ ಇರೋಲ್ವೇ? ನನ್ನ ಜೊತೆ ನೀನು ಮಲಗಿದಾಗಲೇ ಈ ವಿಚಾರ ಹೇಳಬೇಕು ಅನ್ನಿಸಿತ್ತು, ಆದರೆ ಸಮಯಕ್ಕೋಸ್ಕರ ಕಾಯ್ತಾ ಇದ್ದೆ, ದಿಸ್ ಇಸ್ ಜಸ್ಟ್ ಲೈಕ್ ಪ್ರೋಸ್ಟಿಟ್ಯೂಷನ್’ ಎಂದುಬಿಟ್ಟ.

‘ಇಷ್ಟೆಲ್ಲಾ ಕೇಳ್ಕೊಂಡು ನಾನು ಬದುಕಬೇಕಾ?’ - ಸಹನಳ ಅಳು ಜೋರಾಯಿತು.

‘ಆಗಿರೋದಕ್ಕೆ ನಾನು ಸಾಯಬೇಕು, ನೀನಲ್ಲ, ನೀನು ಸತ್ತು ಆ ಮುದಿ ತಂದೆ ತಾಯಿಯಂದಿರನ್ನ ದಿಕ್ಕೆಡಿಸಬೇಡ’ – ಎಂದು ಹೇಳಿದವನೇ ಮಾತು ಮುಗಿಸಿದ್ದ.

 

ಪಕ್ಕಕ್ಕೆ ಫೋನು ಬಿಸಾಡಿ, ಹೆಣದಂತೆ ಮಲಗಿಕೊಂಡಳು. ಮುಂಜಾನೆ ಐದರವರೆವಿಗೂ ಬರದ ನಿದ್ದೆ, ಏನೋ ಮಾಯವೆಂಬಂತೆ ಅವಳಿಗರಿವಿಲ್ಲದಂತೆ ನಂತರ ಆವಾಹಿಸಿಕೊಂಡಿತ್ತು. ಎಂದಿನಂತೆ ಬೇಗ ಏಳದಿದ್ದ ಮಗಳನ್ನು ಎಬ್ಬಿಸಲು ಬಂದ ಸಹನಳ ಅಮ್ಮನಿಗೆ ನಿಜಕ್ಕೂ ಮಹದಾಶ್ಚರ್ಯವಾಯಿತು. ಸಹನ ನಿದ್ದೆಯಲ್ಲಿಯೂ ಅಳುತ್ತಿದ್ದಳು, ಕಣ್ಣೀರು ತೊಟ್ಟಿಕ್ಕುತ್ತಿತ್ತು. ತನ್ನ ಅನುಭವದಲ್ಲಿ, ನಿದ್ದೆಯಲ್ಲಿ ಅಳುವವರನ್ನು ಆ ಮುದಿ ಜೀವ ಕಂಡೇ ಇರಲಿಲ್ಲ. ಹೊಟ್ಟೆನೋವು ಅತಿಯಾಗಿದೆಯೇನೋ ಎಂದು ನೊಂದುಕೊಂಡ ತಾಯಿ ಅವಳನ್ನು ಎಬ್ಬಿಸಿ ಆಸ್ಪತ್ರೆಗೆ ಹೋಗಲು ಹೇಳಿತು. ಸರಿ ಎಂದವಳು, ಎಂದಿನಂತೆ ಅವಸರವಸರವಾಗಿ ಎಲ್ಲವನ್ನೂ ಸರಿಹೋಗಿಸಿಕೊಂಡು ಕೆಲಸಕ್ಕೆ ಹೊರಟುಬಿಟ್ಟಳು.

 

‘ದಿಸ್ ಇಸ್ ಜಸ್ಟ್ ಲೈಕ್ ಪ್ರೋಸ್ಟಿಟ್ಯೂಷನ್’ - ಈ ಮಾತನ್ನು ನೆನಪಿಸಿಕೊಂಡಾಕ್ಷಣ ಸಹನ ತೀವ್ರವಾಗಿ ಬೆಚ್ಚುತ್ತಿದ್ದಳು. ಆಕೆಗೆ ಸಾಗರ್‍ನನ್ನು ಮರೆಯಲು ಸಾಧ್ಯವಾಗದಿದ್ದರೂ ಮರೆಯಲು ಪ್ರಯತ್ನಿಸಿದಳು. ಆತನಂತೂ ಈಕೆಗೆ ಹೇಳದೇ ಕೇಳದೆ ತನ್ನ ಮೋಬೈಲ್ ನಂಬರ್ ಬದಲಿಸಿಕೊಂಡ. ಈಕೆಯೆಡೆಗೆ ತಲೆ ಹಾಕಿಯೂ ಮಲಗಲಿಲ್ಲ. ತನ್ನನ್ನು ನಂಬಿಸಿ, ಉಪಯೋಗಿಸಿಕೊಂಡು ಆತ ಹೇಳಿದ ‘ದಿಸ್ ಇಸ್ ಜಸ್ಟ್ ಲೈಕ್ ಪ್ರೋಸ್ಟಿಟ್ಯೂಷನ್’ ಎಂಬ ಮಾತಿನಿಂದ ಈಗ ಆಕೆಗೆ ಇನ್ನಿಲ್ಲದ ಕೋಪ ಉತ್ಪತ್ತಿಯಾಗುತ್ತಿತ್ತು. ನರನಾಡಿಗಳಲ್ಲಿ ಬೆಂಕಿಯ ಉರಿ ಹರಿದಾಡಿದಂತೆ. ಸಾಗರ್‍ಗೋಸ್ಕರ ಅಲ್ಲಲ್ಲಿ ತಡಕಾಡಿದಳು, ಸಿಕ್ಕಿದೊಳಡನೆ ಚಪ್ಪಲಿಯಲ್ಲಿ ಹೊಡೆದುಬಿಡಬೇಕೆಂಬ ಇರಾದೆ ಇಟ್ಟುಕೊಂಡಳು. ಆದರೆ, ಒಮ್ಮೊಮ್ಮೆ ತನಗರಿವಿಲ್ಲದಂತೆಯೇ ಆಕೆ ಸೋತುಹೋಗುತ್ತಿದ್ದಳು. ಆತನೊಂದಿಗೆ ಕಾಲ ಕಳೆದ ರೀತಿಯನ್ನು ನೆನಪಿಸಿಕೊಂಡಾಗ, ಆತನ ಮುಖಚಿತ್ರ ಮುಂದೆ ಮೂಡಿಬಂದಾಗ, ಹೃದಯ ಕಿತ್ತು ಬಂದಂತಾಗಿ ಸಾಕಷ್ಟು ಅತ್ತುಬಿಡುತ್ತಿದ್ದಳು. ಹೆಚ್ಚು ಮೌನಕ್ಕೆ ಮೊರೆ ಹೋದಳು, ಕೆಲಸ ಬಿಟ್ಟಳು. ತಾನಾಯಿತು ತನ್ನ ಕೋಣೆಯಾಯಿತು ಎಂದು ಬದುಕಲು ತೀರ್ಮಾನಿಸಿಬಿಟ್ಟಳು. ಏನೂ ತಿಳಿಯದ ಹೆತ್ತವರಿಗೆ ಈ ನಡವಳಿಕೆ ಒಗಟಾಗಿ ಕಂಡಿತು.

***

ಅಂದು ಶುಕ್ರವಾರ. ಇಂದು ಶುಭವಾಗಲಿ ಎಂದು ಎದ್ದ ಸಹನಳಿಗೆ ಒಂದು ಶುಭಸುದ್ದಿಯೇ ಕಾದಿತ್ತು. ಮನೆಗೆ ತನ್ನ ನೆಚ್ಚಿನ ಗೆಳತಿ ಮತ್ತು ಮನಶಾಸ್ತ್ರಜ್ಞೆ ಅಂಜಲಿ ಅಮೇರಿಕಾದಿಂದ ಬಂದಿದ್ದಳು. ತನ್ನ ಬಾಲ್ಯಗೆಳತಿಯಾದ ಅಂಜಲಿಯನ್ನು ಕಂಡೊಡನೆ ಸಹನ ಸ್ವಲ್ಪ ಅರಳಿದಳು. ಮುಖದಲ್ಲಿ ಚೂರು ನಗು ಮೂಡಿತು. ಸ್ವಲ್ಪ ಹೊತ್ತಿನ ಮಾತುಕತೆಯಾದ ಮೇಲೆ ‘ನಾನು ಇಂಡಿಯಾಗೆ ಬಂದಿದ್ದು, ನಮ್ಮ ಕಾಲೇಜ್‍ಮೇಟ್ ಸಾಗರ್ ಗೊತ್ತಲ್ಲ, ಅವನ ಮದ್ವೆಗೆ’ ಎಂದಳು ಅಂಜಲಿ.

 

ಸಹನಳ ಹೃದಯಬಂಡೆಗೆ ಸುನಾಮಿಯ ಅಲೆಗಳು ಇನ್ನಿಲ್ಲದಂತೆ ಬಡಿದವು. ಅರಳಿದ್ದ ಮುಖ ಹಾಗೇಯೇ ಬಾಡಿಹೋಯಿತು. ಸೋತು ಸುಣ್ಣವಾದವಳಂತೆ ಕಂಡ ಸಹನ ತಲೆ ಬಗ್ಗಿಸಿಕೊಂಡು ಅತ್ತುಬಿಟ್ಟಳು. ಸಾಗರ್‍ನನ್ನು ಹಿಡಿ ಹಿಡಿಯಾಗಿ ಚುಚ್ಚಿ ಚುಚ್ಚಿ ಕೊಂದುಬಿಡಬೇಕೆನಿಸಿತು.

‘ಏನಾಯ್ತು ಸಹನ, ಪ್ಲೀಸ್ ಟೆಲ್ ಮಿ, ನಾನು ಸಾಲ್ವ್ ಮಾಡ್ತೀನಿ’ – ಸಹನಳ ಕೈ ಹಿಡಿದುಕೊಂಡ ಅಂಜಲಿ ಪ್ರೀತಿಯಿಂದ ಕೇಳಿಕೊಂಡಳು.

 

ಅಂಜಲಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋದ ಸಹನ, ಈ ಯಾವತ್ತೂ ವಿಚಾರಗಳನ್ನು ಚೂರು ಮುಚ್ಚುಮರೆಯಿಲ್ಲದೇ ಹೇಳಿ, ಅವಳನ್ನು ತಬ್ಬಿಕೊಂಡು ಅತ್ತು ಹಗುರಾದಳು. ಈಯೆಲ್ಲಾ ವಿಚಾರಗಳನ್ನು ಕೇಳಿದ ಅಂಜಲಿಗೆ ಅಷ್ಟೇನೂ ಆಶ್ಚರ್ಯವಾಗಲಿಲ್ಲ. ಮನಶಾಸ್ತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದವಳು, ತನ್ನ ವೃತ್ತಿ ಜೀವನದಲ್ಲಿ ಇಂತಹ ಅನೇಕ ಘಟನೆಗಳನ್ನು ಕಂಡಿದ್ದಳು.

 

‘ಇಷ್ಟೇನಾ ಸಹನ, ನಾನೇನೋ ಅಂದ್ಕೊಂಡಿದ್ದೆ’ ಅಂದಳು.

ಸಹನಳಿಗೆ ಆಶ್ಚರ್ಯವಾಯಿತು. ‘ಅದು ದೊಡ್ಡ ವಿಚಾರವಲ್ಲವೇ?’ ಎಂದು ಹುಬ್ಬೇರಿಸಿ ಕೇಳಿದಳು.

ಅಂಜಲಿ ಸಾವಧಾನವಾಗಿ ಮಾತನಾಡಿದಳು – ‘ನೀನು ದೊಡ್ಡ ವಿಚಾರ ಮಾಡ್ಕೊಂಡಿದ್ದೀಯ ಅಷ್ಟೇ. ನೋಡು, ಈ ಜೀವನದಲ್ಲಿ ಯಾರೂ ಕೂಡ ಎಡವಬೇಕು ಅಂತ ಎಡವಲ್ಲ, ಎಲ್ಲವೂ ಸರಿಯಾಗಿರಲಿ ಅಂದ್ಕೊಂಡೇ ನಾವು ಕೆಲಸ ಪ್ರಾರಂಭ ಮಾಡ್ತೀವಿ, ಆದ್ರೆ ನಡೆಯೋದು ತನ್ನಿಂತಾನೇ ನಡೆಯುತ್ತೆ, ಅಲ್ಲೆಲ್ಲೋ ಸುನಾಮಿ ಬಂದು ಒಂದಷ್ಟು ಜನ ಸತ್ರು, ನಾನು ನೀನು ಅಥವಾ ಇನ್ನಾರಿಗೇ ಆಗಲಿ ಅದನ್ನ ತಡೆಯೋಕೆ ಆಯ್ತಾ? ನನ್ನ ಗಂಡ ಮೊನ್ನೆ ಮೊನ್ನೆ ಪ್ಲೇನ್ ಕ್ರಾಶ್‍ನಲ್ಲಿ ಹೋಗ್ಬಿಟ್ರು, ನನಗೆ ಅಥವಾ ನಮ್ಮ ಮನೆ ಜನಗಳಿಗೆ ತಡೆಯೋಕಾಯ್ತಾ? ಈಗ ಅವರನ್ನ ಕರಕೊಂಡು ಬರೋಕೆ ಆಗುತ್ತಾ? ಹಾಗೆನೇ, ನೀನು ಅವನನ್ನ ನಂಬಿ ಮೋಸ ಹೋದೆ, ಕೆಲವು ಹುಡುಗರು ಹಾಗೇ, ದೇಹಸುಖಕ್ಕೋಸ್ಕರ ಪ್ರೀತಿ ತೋರ್ಸೋ ನಾಟಕ ಆಡ್ಕೊಂಡು ಹತ್ರ ಆಗ್ತಾರೆ, ನಂತರ ಹಣ್ಣು ತಿಂದು ಸಿಪ್ಪೆ ಬಿಸಾಡಿದಂತೆ ಮಾಡಿ ಹೋಗ್ತಾರೆ, ಆ ಕ್ಷಣದಲ್ಲಿ ಇದಾವುದೂ ಗೊತ್ತಾಗ್ಲಿಲ್ಲ, ಏನೋ ನಡೀಬೇಕಾಗಿತ್ತು, ನಡೆದಾಯ್ತು, ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗೋದು ಎಷ್ಟು ಸರಿ? ನೀನು ಇಲ್ಲಿ ಕೊರಗ್ತಾ ಇದ್ರೆ ಅವನು ಮದ್ವೆ ಮಾಡ್ಕೊಂಡು ಖುಷಿಯಾಗಿರೋಕೆ ತಯಾರಾಗ್ತಾ ಇದ್ದಾನೆ ನೋಡು, ನಾನು ನಿನಗಿಂತ ಅವನನ್ನ ಈ ವಿಚಾರದಲ್ಲಿ ಅಪ್ರಿಸಿಯೇಟ್ ಮಾಡ್ತೇನೆ’

 

ಸಹನಳ ಮನಸ್ಸು ಬದಲಾಗುತ್ತಿರುವುದನ್ನು ಅರಿತ ಅಂಜಲಿ ಮಾತು ಮುಂದುವರೆಸಿದಳು ‘ನಾಳೆ ದಿನ, ಅವನು, ಅವನ ಹೆಂಡತಿ ಮಕ್ಕಳನ್ನ ಕರ್ಕೊಂಡು ನಿನ್ನ ಮುಂದೆ ಹೋದಾಗ, ನಿನಗೆ ಇನ್ನಿಲ್ಲದ ಅವಮಾನ ಆಗುತ್ತೆ, ಆಗ ಅವನು ನನಗೆ ಮೋಸ ಮಾಡಿದವಳಿಗೆ ಹೀಗೆ ಆಗಬೇಕು ಅಂತಾನೆ, ನೀನು ಸೋಲ್ತೀಯ, ಆದ್ರೆ ನೀನೇ ಅವನನ್ನ ಸೋಲಿಸ್ಬೇಕು, ನಿನ್ನ ಜೀವನ ಮುಗಿದುಹೋಗಿಲ್ಲ, ಇನ್ನೂ ತುಂಬಾ ದಿನಗಳಿವೆ, ಮೈ ಕೊಡವಿಕೊಂಡು ಎದ್ದೇಳು, ನಿನ್ನ ಜೀವನ ನೀನು ನೋಡ್ಕೋ, ಸಾಗರ್ ಅನ್ನೋನು ಒಂದು ಕೆಟ್ಟ ಕನಸ್ಸು ಅಂತ ಮರೆತುಬಿಡು, ನಿನ್ನ ಮುದಿ ಅಪ್ಪ ಅಮ್ಮನಿಗೆ ಆಸರೆ ಆಗು, ನಿನ್ನ ಖುಷಿ ನೋಡಿ ಮುಂದೆ ಅವನು ನಿನಗೆ ಸೋಲಬೇಕು, ನಿನ್ನಂತ ಒಳ್ಳೇ ಹುಡುಗಿ ಮೇಲೆ ಅನುಮಾನ ಪಟ್ಟನಲ್ಲ ಅಂತ ಕೊರಗ್ಬೇಕು, ಕೊರಗಿ ಸಾಯ್ಬೇಕು, ಕಮಾನ್’ ಎಂದಳು. ಸಹನಳ ಜೊತೆ ಒಂದು ವಾರ ತಂಗಿದ್ದ ಅಂಜಲಿ ನಿರಂತರವಾಗಿ, ಸಾವಧಾನವಾಗಿ ಕೌನ್ಸೆಲಿಂಗ್ ಮಾಡಿ, ಆ ಮನೆಗೆ ಮೊದಲಿನ ಸಹನ ಜನ್ಮವೆತ್ತಿ ಬರುವಂತೆ ಮಾಡುವಲ್ಲಿ ಸಫಲಳಾದಳು.

 

ಈ ನಡುವೆ ಸಹನ ಮೊದಲಿನಂತೆ ಚಟುವಟಿಕೆ ಪಡೆದುಕೊಂಡಳು. ಸಾಗರ್ ಎನ್ನುವ ಪದ ಆಕೆಯ ಹೃದಯಾಂತರಾಳದಿಂದ ಸಂಪೂರ್ಣವಾಗಿ ಅಳಿಸಿಹೋಯಿತು. ಆತನಿರಲಿ, ಆ ಪದವೆಲ್ಲಾದರೂ ಕಂಡರೆ ಆಕೆಗೆ ಇನ್ನಿಲ್ಲದ ಕೋಪ ಮತ್ತು ಛಲ ಉಕ್ಕಿಬರುತ್ತಿತ್ತು. ದೊಡ್ಡ ಹಠಗಾರ್ತಿಯಾಗಿ ಬೆಳೆದಾಕೆ ಕೆಲವು ಪರೀಕ್ಷೆಗಳನ್ನು ಪಾಸ್ ಮಾಡಿ ಉನ್ನತ ಹುದ್ದೆ ಗಿಟ್ಟಿಸಿದಳು. ಮನೆಯಲ್ಲಿ ಮದುವೆಯ ಪ್ರಸ್ತಾಪವೂ ಆಯಿತು. ಸ್ವಲ್ಪ ವಿಚಲಿತಳಾದಂತೆ ಕಂಡ ಸಹನ ತನ್ನನ್ನು ನೋಡಿ ಗೊತ್ತು ಮಾಡಿಕೊಂಡುಹೋಗಲು ಬಂದಿದ್ದ ಹುಡುಗನೊಂದಿಗೆ ಮುಕ್ತವಾಗಿ ಮಾತನಾಡಿದಳು. ನಡುವೆ ಕೇಳಿದಳು – ‘ಮದುವೆಗಿಂತ ಮುಂಚೆ ನಾನು ಅಥವಾ ನೀವು ಹೇಗಿದ್ದಿರಿ ಎನ್ನುವುದು ಮದುವೆಯ ನಂತರದ ಸಾಂಸಾರಿಕ ಬದುಕಿಗೆ ಅವಶ್ಯಕವೇ?’. ಹೆಚ್ಚು ಓದಿಕೊಂಡಿದ್ದ ಆತ ಹೇಳಿದ್ದ ‘ಹಿಂದಿನದ್ದು ನನಗೆ ಅಥವಾ ನಿಮಗೆ ಬೇಡ, ಇಲ್ಲಿವರೆವಿಗೂ ನಾವಿಬ್ಬರೂ ಅಪರಿಚಿತರು, ಮದುವೆಯ ನಂತರ ಇಬ್ಬರೂ ಒಬ್ಬರೇ, ಮದುವೆಯ ನಂತರದ ದಿನಗಳಲ್ಲಿ ಹೊಂದಾಣಿಕೆಯಿದ್ದರೆ ಬದುಕಿ ನೆಮ್ಮದಿಯಾಗಿ ಸಾಯಬಹುದು’ ಎಂದ. ಏನನ್ನಿಸಿತೋ ಏನೋ, ಕೂಡಲೇ ಸಹನ ಆ ವ್ಯಕ್ತಿಯನ್ನು ಅಪ್ಪಿಕೊಂಡುಬಿಟ್ಟಳು. ನಿಶ್ಚಿತಾರ್ಥ ಮದುವೆಯೆಲ್ಲಾ ಸರಾಗವಾಗಿಯೇ ಸಾಗಿತು.

***

ತನ್ನ ಮಗುವಿನೊಂದಿಗೆ ಆಟವಾಡಿಕೊಂಡಿದ್ದ ಸಹನಳಿಗೆ ಅಂದು ಇನ್ನಿಲ್ಲದ ಖುಷಿ. ಖುಷಿ ಹೆಚ್ಚಾಗಿ ಕೂರಲಾಗದೇ, ನಿಲ್ಲಲಾಗದೇ, ಮಲಗಲಾಗದೇ ಮನೆ ತುಂಬಾ ಅಡ್ಡಾಡಿದಳು. ಅವಳ ಈ ಖುಷಿಗೆ ಅಪಾರವಾದ ಕಾರಣವೊಂದಿತ್ತು. ಹೌದು, ಅಂದು ಸಾಗರ್ ಕರೆ ಮಾಡಿದ್ದ. ಮನಸ್ಸು ಸಮಾಧಾನವಾಗುವವರೆವಿಗೂ ಬೈದಿದ್ದಳು. ಎದುರಿಗಿದ್ದಿದ್ದರೆ ಚಪ್ಪಲಿ ಕಿತ್ತುಹೋಗುವವರೆವಿಗೂ ಭಾರಿಸುತ್ತಿದ್ದೆ ಎಂದಳು. ಆ ಖುಷಿಯಿಂದ ಮಗುವಿನ ಕೆನ್ನೆ ಚಿವುಟಿದಳು, ಅದು ಅಳಲು ಪ್ರಾರಂಭಿಸಿದಂತೆ ಸಾರಿ ಸಾರಿ ಎಂದು ಮುದ್ದು ಮಾಡಲು ಪ್ರಾರಂಭಿಸಿದಳು. ಅಷ್ಟಕ್ಕೇ, ತನ್ನ ತಂಟ ಗಂಡ ಬಂದೊಡನೆ ಅಪ್ಪಿಕೊಂಡಳು.

****

ಅಲ್ಲೆಲ್ಲಾ ನಿಶಬ್ದದ ಸವಿ ನೀರವತೆ ತುಂಬಿ ತುಳುಕುತ್ತಿತ್ತು. ಸುತ್ತಲಿನ ಮರಗಿಡಗಳೆಲ್ಲಾ ಧ್ಯಾನಕ್ಕೆ ಕುಳಿತಂತೆ ಕಂಡವು. ಜುಳು ಜುಳನೆ ರಾಗ ಮೂಡಿಸಿದ ನದಿ ತನ್ನ ಪಾಡಿಗೆ ನಾನು ಹರಿಯುತ್ತಿತ್ತು. ಸೂರ್ಯ ಮುಳುಗುವ ಹೊತ್ತಿನಲ್ಲಿ ಬೆಳಕು ನಿಧಾನವಾಗಿ ಮಾಯವಾಗಿ ಮೌನದ ಮಳೆಯಾಗುತ್ತಿತ್ತು. ಅಲ್ಲಿಯೇ ಇದ್ದ ಒಂದು ಹೂವನ್ನು ಕಿತ್ತುಕೊಂಡ ಸಾಗರ್ ಅದನ್ನು ದೀರ್ಘವಾಗಿ ದಿಟ್ಟಿಸಿದ. ಹೂ ಒಳಗೆ ಹೂ ಮನಸ್ಸಿನ ಸಹನ ಕಂಡಳು. ಮಗು ಮತ್ತು ಗಂಡನೊಂದಿಗೆ ಖುಷಿಯಿಂದ ಆಟವಾಡುತ್ತಿದ್ದಳು. ಆ ಮನೆಯಲ್ಲಿ ಕೇವಲ ನಗುವಷ್ಟೇ ತುಳುಕುತ್ತಿತ್ತು. ಅಷ್ಟಕ್ಕೇ, ಸಹನಳ ಗಂಡ ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡ. ಸಾಗರ್, ಆ ಹೂವನ್ನು ಅಲ್ಲಿಯೇ ನೆಟ್ಟು ಕುಳಿತ.

 

‘ಥೂ... ನೀನೊಬ್ಬ ಮನುಷ್ಯಾನಾ? ಮನುಷ್ಯ ಹೇಗಿರ್ಬೇಕು ಅನ್ನೋದನ್ನ ನನ್ನ ಗಂಡನನ್ನ ನೋಡಿ ಕಲಿ, ನೀನು ನನ್ನ ಪಾಲಿಗೆ ಯಾವತ್ತೋ ಸತ್ಹೋದೆ’ - ಸಹನ ಹೇಳಿದ್ದ ಈ ಮಾತು ಅವನ ಕಿವಿಯಲ್ಲಿ ಮತ್ತೆ ಮತ್ತೆ ಅನುರಣಿಸುತ್ತಿತ್ತು. ಆ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಖುಷಿ ಪಡುತ್ತಿದ್ದ. ಹಿಂದೊಮ್ಮೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಾಗ, ‘ನಿಂಗೆ ಏನೂ ಆಗಿಲ್ಲ ಅಲ್ವಾ, ನೀನಿಲ್ಲ ಅಂದ್ರೆ ನಾನು ಒಂದು ಕ್ಷಣಾನೂ ಬದುಕೋಲ್ಲ’ ಎಂದು ಹೇಳಿದ್ದನ್ನು ನೆನಪಿಸಿಕೊಂಡ. ಕಣ್ಣಂಚಲಿ ನೀರು ತೊಟ್ಟಿಕ್ಕಿತು. ಮಗುವಿನಂತೆ ಬಿಕ್ಕಳಿಸಲು ಪ್ರಾರಂಭಿಸಿದ.

‘ಕೊನೆಗೂ ನಾನು ಗೆದ್ದೆ, ಹೌದು ಗೆದ್ದೆ, ಹೌದೂ’ ಎಂದು ಜೋರಾಗಿ ಕೂಗಿದ. ಆತನ ಕೂಗು ಸುತ್ತಲೂ ಪ್ರತಿಧ್ವನಿಸಿದ್ದು ಕೇಳಿ ಪುಳಕಗೊಂಡ. ಅಷ್ಟಕ್ಕೇ, ಅಂಜಲಿಯಿಂದ ಕರೆ ಬಂದಿತ್ತು.

 

ಸಾಗರ್ – ‘ಥ್ಯಾಂಕ್ ಯೂ ವೆರಿಮಚ್ ಅಂಜಲಿ, ಯೂ ಮೇಡ್ ಇಟ್ ಫಾರ್ ಮಿ, ಈಗ ಅವಳು ಖುಷಿಯಾಗಿದ್ದಾಳೆ, ಈ ಪರೀಕ್ಷೆಯಲ್ಲಿ ನಾನು ಗೆದ್ದೆ'

ಅಂಜಲಿ - ‘ಇರಲಿ, ನಿನಗೆ ಬ್ಲಡ್ ಕ್ಯಾನ್ಸರ್ ಇದೆ, ಅದೂ ಫೈನಲ್ ಸ್ಟೇಜ್ ನಲ್ಲಿ ಅಂತ ಅವಳಿಗೆ ಹೇಳ್ಳಾ?’

‘ಪ್ಲೀಸ್ ಅಂಜಲಿ, ಯಾವುದೇ ಕಾರಣಕ್ಕೂ ಬೇಡ, ಅವಳ ಖುಷಿಯನ್ನ ಮತ್ತೆ ಹಾಳು ಮಾಡ್ಬೇಡ, ಈ ವಿಚಾರ ನಮ್ಮಿಬ್ಬರಲ್ಲೇ ಇರಲಿ, ದಯವಿಟ್ಟು’ ಎಂದು ಕೇಳಿಕೊಂಡ ಸಾಗರ್ ಮತ್ತೊಮ್ಮೆ ಅಂಜಲಿಗೆ ಧನ್ಯವಾದ ಸಮರ್ಪಿಸಿ ಮೊಬೈಲನ್ನು ನದಿಗೆ ಬಿಸಾಡಿ ಎಲ್ಲಿಗೆ ಎಂದು ತಿಳಿಯದೇ ಸುಮ್ಮನೆ ನಡೆದುಬಿಟ್ಟ.

Comments

Submitted by kavinagaraj Mon, 07/15/2013 - 15:40

ಒಳ್ಳೆಯ ತಿರುವು ಕೊಟ್ಟಿದ್ದೀರಿ. ಆದರೆ ಸತ್ಯ ಗೊತ್ತಾಗದೆ ಇದ್ದೀತೆ ಎಂಬ ಸಣ್ಣ ಸಂಶಯ ಕಾಡುತ್ತದೆ.