೬೮. ಶ್ರೀ ಲಲಿತಾ ಸಹಸ್ರನಾಮ ೨೪೯ರಿಂದ ೨೫೦ನೇ ನಾಮಗಳ ವಿವರಣೆ

೬೮. ಶ್ರೀ ಲಲಿತಾ ಸಹಸ್ರನಾಮ ೨೪೯ರಿಂದ ೨೫೦ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೪೯- ೨೫೦

Pañca-pretāsanāsīnā पञ्च-प्रेतासनासीना (249)

೨೪೯. ಪಂಚ-ಪ್ರೇತಾಸನಾಸೀನಾ

                  ದೇವಿಯು ಪಂಚ ಪ್ರೇತಗಳಿಂದ ಆಧಾರಿತವಾದ ಆಸನದ ಮೇಲೆ ಕುಳಿತಿದ್ದಾಳೆ. ಆ ಐದು ಪ್ರೇತಗಳೆಂದರೆ ಬ್ರಹ್ಮ, ವಿಷ್ಣು, ರುದ್ರ, ಮಹಾದೇವ ಮತ್ತು ಸದಾಶಿವ. ಬ್ರಹ್ಮನು ಸೃಷ್ಟಿ ಕ್ರಿಯೆಯನ್ನು ನೋಡಿಕೊಂಡರೆ, ವಿಷ್ಣುವು ಪರಿಪಾಲನೆಯನ್ನು ಮಾಡುತ್ತಾನೆ, ರುದ್ರನು ಮರಣವನ್ನುಂಟು ಮಾಡುತ್ತಾನೆ, ಮಹಾದೇವನು ಲಯವಾದ ವಿಶ್ವವನ್ನು ಮರೆಮಾಡುತ್ತಾನೆ (ತಿರೋಧಾನ) ಮತ್ತು ಸದಾಶಿವನು ಈ ವಿಶ್ವವನ್ನು ಪುನಃ ಸೃಜಿಸುತ್ತಾನೆ (ಅನುಗ್ರಹ). ಈ ಐದು ದೇವರುಗಳು ತಮ್ಮ ಸಂಗಾತಿಗಳಿಲ್ಲದೆ ಅಥವಾ ತಮ್ಮ ಶಕ್ತಿಗಳಿಲ್ಲದೇ ಕಾರ್ಯ ಪ್ರವೃತ್ತಲಾಗಲಾರರೆಂದು ಹೇಳಲಾಗುತ್ತದೆ. ವ್ಯಾಖ್ಯಾನಕಾರರು ಈ ಐದು ದೇವರುಗಳ ಸಂಗಾತಿಗಳನ್ನು ಕುರಿತು ಹೇಳುತ್ತಾ ಈ ದೇವರುಗಳು ಅವರಿಲ್ಲದೆ ಕಾರ್ಯ ನಿರ್ವಹಿಸಲಾರರೆಂದು ಉಲ್ಲೇಖಿಸುತ್ತಾರೆ. ಯಾವಾಗ ಈ ದೇವರುಗಳು ಜಡ ರೂಪದಲ್ಲಿರುತ್ತಾರೆಯೋ ಆವಾಗ ಅವರನ್ನು ಪ್ರೇತಗಳೆಂದು ಕರೆಯಲಾಗಿದೆ. ಶಕ್ತಿಯರೆಂದರೆ ಇಲ್ಲಿ ಬಹುಶಃ ಅವು ಲಲಿತಾಂಬಿಕೆಯ ವಿವಿಧ ಅವತಾರಗಳನ್ನು ಕುರಿತು ಹೇಳುತ್ತವೆ. ವಾಕ್ ದೇವತೆಗಳು ಖಂಡಿತವಾಗಿಯೂ ಬೇರೆ ದೇವ-ದೇವಿಯರ ಪ್ರಸ್ತಾಪವನ್ನು ಸಹಸ್ರನಾಮದಲ್ಲಿ ಉಲ್ಲೇಖಿಸುವ ಉದ್ದೇಶವನ್ನು ಹೊಂದಿರಲಿಕ್ಕಿಲ್ಲ.

                ಸೌಂದರ್ಯ ಲಹರಿಯ ೧ನೇ ಶ್ಲೋಕವು ಈ ಕುರಿತಾಗಿ ಹೇಳುತ್ತದೆ, "ಶಿವನು ಈ ಪ್ರಪಂಚವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಅವನು ಶಕ್ತಿಯೊಂದಿಗೆ ಐಕ್ಯನಾಗಿದ್ದಾಗ ಮಾತ್ರ ಗಳಿಸಿಕೊಳ್ಳುತ್ತಾನೆ, ಇಲ್ಲದಿದ್ದರೆ ಅವನು ಕದಲಲೂ ಅಸಮರ್ಥನಾಗಿದ್ದಾನೆ. ಹೀಗಿರುವಾಗ, ವಿಷ್ಣು, ಶಿವ, ಬ್ರಹ್ಮ ಮೊದಲಾದವರಿಂದ ಗೌರವಿಸಲ್ಪಡುವ ನಿನ್ನನ್ನು ಪುಣ್ಯವನ್ನು ಸಂಪಾದಿಸದೆ ಒಬ್ಬನು ಅದು ಹೇಗೆ ಆರಾಧಿಸಲು ಶಕ್ಯನಾಗುತ್ತಾನೆ? ನಿನ್ನನ್ನು ಹೊಗಳಲೇ ಅಗದಿರುವಾಗ!".

               ಈ ನಾಮದ ಒಟ್ಟಾರೆ ಅರ್ಥವು ಈ ದೇವರುಗಳು ದೇವಿಯ ಆಜ್ಞೆಯಿಲ್ಲದೆ ತಮ್ಮ ಕಾರ್ಯಗಳನ್ನು ಕೈಗೊಳ್ಳಲಾರರೆಂದು ತಿಳಿಸುತ್ತದೆ. ಮುಂದಿನ ನಾಮದ ಟಪ್ಪಣಿಯನ್ನೂ ನೋಡಿ.

Pañca-brahma-svarūpiṇī पञ्च-ब्रह्म-स्वरूपिणी (250)

250. ಪಂಚ-ಬ್ರಹ್ಮ-ಸ್ವರೂಪಿಣೀ

               ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ. ಹಿಂದನ ನಾಮವು ಬ್ರಹ್ಮದ ಎಲ್ಲಾ ಕ್ರಿಯೆಗಳಲ್ಲಿ ಲಲಿತಾಂಬಿಕೆಯ ಮಹತ್ವವನ್ನು ಒತ್ತಿ ಹೇಳಿದರೆ ಈ ನಾಮವು ಆಕೆಯೇ ಪರಬ್ರಹ್ಮವಾಗಿದ್ದಾಳೆ ಎನ್ನುವುದನ್ನು ದೃಢಪಡಿಸುತ್ತದೆ. ಈ ನಾಮದೊಂದಿಗೆ ಹಿಂದಿನ ನಾಮವನ್ನು ಓದಿಕೊಳ್ಳದಿದ್ದರೆ ಅದರ ಮಹತ್ವದ ಅರಿವಾಗುವುದಿಲ್ಲ.

               ಈ ಎರಡು ನಾಮಗಳು ಬ್ರಹ್ಮಾಂಡದ ಸೃಷ್ಟಿಯನ್ನು ವಿವರಿಸುತ್ತವೆ. ಬ್ರಹ್ಮವು ನಿರ್ವಹಿಸಬೇಕಾದ ಐದು ವಿಧವಾದ ಕ್ರಿಯೆಗಳಿವೆ. ಅವೆಂದರೆ ಸೃಷ್ಟಿ, ಸ್ಥಿತಿ, ಲಯ, ಸರ್ವನಾಶ ಮತ್ತು ಮುಕ್ತಿ. ಇಲ್ಲಿ ಪ್ರಸ್ತಾಪಿಸಿರುವ ಪ್ರತಿಯೊಂದು ಕ್ರಿಯೆಗಳನ್ನು ನಿಯಂತ್ರಿಸಲು ವಿವಿಧ ದೇವರುಗಳಿದ್ದಾರೆ. ಬ್ರಹ್ಮನು ಸೃಷ್ಟಿಕರ್ತ, ಹೀಗೆ ಉಳಿದ ದೇವರುಗಳ ಬಗೆಗೆ ಹಿಂದಿನ ನಾಮದಲ್ಲಿ ವಿವರಿಸಲಾಗಿದೆ. ಈ ವಿವಿಧ ದೇವತೆಗಳು ಬ್ರಹ್ಮದ ರೂಪಾಂತರಗಳೇ ಆಗಿದ್ದಾರೆ. ಒಬ್ಬರು ದೇವರುಗಳ ಅನೇಕ ಅವತಾರಗಳ ಕುರಿತಾಗಿ ಹೇಳಿದರೂ ಸಹ ಇವೆಲ್ಲವೂ ನಾಮರೂಪಗಳಿಲ್ಲದ ಪರಬ್ರಹ್ಮವನ್ನೇ ಸೂಚಿಸುತ್ತವೆ; ಮತ್ತದು ಸರ್ವಾಂತರ್ಯಾಮಿಯಾಗಿದೆ. ವಾಸ್ತವವಾಗಿ ಇಲ್ಲಿ ಪ್ರಸ್ತಾಪಿಸಿರುವ ವಿವಿಧ ದೇವ-ದೇವಿಯರು, ಮಂತ್ರಿ(ಣಿ)ಗಳು, ಯೋಗಿನಿಯರು ಮೊದಲಾದವರೆಲ್ಲಾ ಪ್ರಕೃತಿ ಸಹಜವಾದ ವಿವಿಧ ಚಟುವಟಿಕೆಗಳ ಪ್ರತೀಕವಾಗಿದ್ದಾರೆ. ಆದ್ದರಿಂದ ಪ್ರಕೃತಿಯನ್ನು ಪ್ರಕೃತಿ ಮಾತೆ ಎಂದು ಸಂಭೋದಿಸಿ ಆಕೆಯನ್ನು ದೇವರಂತೆ ಪೂಜಿಸಲಾಗುತ್ತದೆ. ಪರಬ್ರಹ್ಮದ ಕ್ರಿಯೆಗಳು ಪ್ರಕೃತಿ ಮತ್ತು ಪ್ರಕೃತಿಯ ಪರಿಧಿಯೊಳಗೆ ಅನಾವರಣಗೊಳ್ಳುತ್ತವೆ ಎನ್ನುವುದನ್ನು ನೆನಪಿಡಿ.

                ಬ್ರಹ್ಮದ ಐದು ಕ್ರಿಯೆಗಳು ಚಕ್ರದಂತೆ ಪುನರಾವರ್ತನೆಯಾಗುವ ಕ್ರಿಯೆಗಳಾಗಿವೆ. ಇಲ್ಲಿ ಸೃಷ್ಟಿ ಎಂದರೆ ವಿಶಾಲ ಅರ್ಥದಲ್ಲಿ ಈ ಪ್ರಪಂಚದ ಸೃಷ್ಟಿ ಮತ್ತು ಅದು ಒಬ್ಬ ವ್ಯಕ್ತಿಯ ಹುಟ್ಟನ್ನು ಕುರಿತದ್ದಲ್ಲ. ಸ್ಥಿತಿ ಅಂದರೆ ಒಟ್ಟು ಪ್ರಪಂಚದ ಅಥವಾ ಬ್ರಹ್ಮಾಂಡದ ಪರಿಪಾಲನೆ. ಮನುಷ್ಯರ ಮತ್ತು ಇತರೇ ಕೋಟ್ಯಂತರ ಜೀವಿಗಳ ಹುಟ್ಟು ಸಾವುಗಳು ಈ ಜಗತ್ತಿನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಅತೀ ಚಿಕ್ಕವಾದವುಗಳು. ಸೃಷ್ಟಿಯಲ್ಲಿ ಉದ್ಭವಿಸುವ ಮೊದಲ ವಸ್ತುಗಳಲ್ಲಿ ಐದು ಮೂಲ ಧಾತುಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ (ಪಂಚಭೂತಗಳು) ಮೊದಲ ಸಾಲಿನಲ್ಲಿ ಬರುತ್ತವೆ. ತದನಂತರ ಈ ಧಾತುಗಳು ರೂಪಾಂತರ ಹೊಂದುತ್ತವೆ ಅದನ್ನೇ ವಿಕಾಸವೆನ್ನುತ್ತಾರೆ. ಈ ವಿಧವಾದ ವಿಕಾಸವು ಸ್ಥೂಲ ಮತ್ತು ಸೂಕ್ಷ್ಮ ಸ್ತರಗಳೆರಡರಲ್ಲಿಯೂ ನಡೆಯುತ್ತದೆ. ಅತ್ಯುನ್ನತ ಅಥವಾ ಶ್ರೇಷ್ಠವಾದ ಸ್ಥೂಲ ವಿಕಾಸ ರೂಪವೆಂದರೆ ಮಾನವ ಮತ್ತು ಅತ್ಯಂತ ಸೂಕ್ಷ್ಮವಾದ ವಿಕಾಸ ರೂಪವೆಂದರೆ ಅವನ ಮನಸ್ಸು. 

                ಈ ರೀತಿಯಾಗಿ ಸೃಜಿಸಲ್ಪಟ್ಟ ವಿಶ್ವವು ಬ್ರಹ್ಮದಿಂದಲೇ ನಿರ್ವಹಿಸಲ್ಪಡುತ್ತದೆ. ಸೂಕ್ತವಾದ ಸಮತುಲ್ಯ ಸ್ಥಿತಿಯನ್ನು ಕಾಪಾಡುವ ಉದ್ದೇಶದಿಂದ ಪ್ರಾಣಿಗಳು ತಮ್ಮ ಭೌತಿಕ ಕಾಯವನ್ನು ತ್ಯಜಿಸಲು ಈ ಸೃಷ್ಟಿಯಲ್ಲಿ ಅನುವು ಮಾಡಿಕೊಡಲಾಗಿದೆ. ಆತ್ಮಗಳು ಭೌತಿಕ ಶರೀರವನ್ನು ಕ್ರಿಯಾಶೀಲಗೊಳ್ಳುವಂತೆ ಮಾಡುತ್ತವೆ ಆದ್ದರಿಂದ ಆತ್ಮವನ್ನು ಕ್ರಿಯಾಶಕ್ತಿ ಎಂದು ಕರೆಯಲಾಗಿದೆ. ಆತ್ಮಗಳು ಮೂಲತಃ ಹಿರಣ್ಯಗರ್ಭ ಎಂದು ಕರೆಯಲಾಗುವ ಬಂಗಾರದ ಮೊಟ್ಟೆಯಿಂದ ಆವಿರ್ಭವಿಸುತ್ತವೆ. ಸ್ವಯಂಭುವುವು ಪ್ರಥಮ ಸೃಷ್ಟಿಯ ಬೀಜವನ್ನು ನೀರನಲ್ಲಿರಿಸಿದಾಗ ಅದು ಹಿರಣ್ಯಗರ್ಭವಾಗಿ (ಬಂಗಾರದ ಮೊಟ್ಟೆಯಾಗಿ) ಮಾರ್ಪಾಡಾಗುತ್ತದೆ. ಈ ಹಿರಣ್ಯಗರ್ಭವು ಬಂಗಾರದ ಬಣ್ಣವನ್ನು ಹೊಂದಿದೆಯೆಂದರೆ ಅದು ಸೂರ್ಯನಂಥ ಪ್ರಕಾಶವನ್ನು ಹೊಂದಿರುತ್ತದೆ ಎಂದರ್ಥ, ಇದರೊಳಗೆ ಸೃಷ್ಟಿಕರ್ತನಾದ ಬ್ರಹ್ಮನು ಹುಟ್ಟಿದ್ದರಿಂದ ಅವನನ್ನು ಸ್ವಯಂಭುವಿನ ಅವತಾರವೆಂದು ಪರಿಗಣಿಸಲಾಗಿದೆ. ಪ್ರಳಯವನ್ನು ಬ್ರಹ್ಮದ ನಾಲ್ಕನೆಯ ಹಂತ ಅಥವಾ ಸ್ಥಿತಿಯೆಂದು ಕರೆಯಲಾಗುತ್ತದೆ; ಇದನ್ನೇ ತಿರೋಧನ ಅಥವಾ ಮಹಾಪ್ರಳಯ ಅಥವಾ ಲೀನವಾಗುವಿಕೆ ಎಂದೂ ಕರೆಯುತ್ತಾರೆ. ಲಯಕ್ಕೂ ಮತ್ತು ಪ್ರಳಯಕ್ಕೂ ಮಹತ್ತರವಾದ ವ್ಯತ್ಯಾಸವಿದೆ; ಲಯವಾಗುವಿಕೆ ಅಥವಾ ವಿನಾಶವಾಗುವಿಕೆ ಎಂದರೆ ಕೇವಲ ವ್ಯಕ್ತಿಗತ ಜೀವಿಯೊಂದರ ಸಾವು ಆದರೆ ಮಹಾಪ್ರಳಯವೆಂದರೆ ಇದು ಪರಬ್ರಹ್ಮದ ಮಹತ್ವದ ಕ್ರಿಯೆಯಾಗಿದ್ದು ಇದರಲ್ಲಿ ಈ ಸಮಸ್ತ ಪ್ರಪಂಚವನ್ನು ಕರಗಿಸಿ (ಲಯವಾಗಿಸಿ) ಅದನ್ನು ತನ್ನೊಳಗೆ ಇಮುಡುವಂತೆ (ಲೀನವಾಗುವಂತೆ) ಮಾಡುವುದಾಗಿದೆ. ಈ ಹಂತದಲ್ಲಿ ಪ್ರಪಂಚದ ಅಸ್ತಿತ್ವವು ಇರುವುದಿಲ್ಲ. ಈ ಹಂತದಲ್ಲಿ ಭೂಖಂಡಗಳಾಗಲಿ, ಪರ್ವತಗಳಾಗಲಿ, ಸಾಗರಗಳಾಗಲಿ, ಪಂಚಭೂತಗಳಾಲಿ ಅಸ್ತಿತ್ವದಲ್ಲಿರುವುದಿಲ್ಲ. ಬ್ರಹ್ಮದ ಕ್ರಿಯೆಯಾದ ಈ ಮಹಾಪ್ರಳಯವು ಶಿವನು ತನ್ನ ಮಹಾ-ಪ್ರಳಯ-ತಾಂಡವ ಅಥವಾ ಬ್ರಹ್ಮಾಂಡ ನೃತ್ಯವನ್ನು ಪ್ರಾರಂಭಿಸಿದಾಗ ಉಂಟಾಗುತ್ತದೆ. ಯಾವಾಗ ಶಿವನು ಈ ಸರ್ವನಾಶದ ನಾಟ್ಯವನ್ನು ಪ್ರಾರಂಭಿಸುತ್ತಾನೆಯೋ ಆಗ ಅವನು ಅತ್ಯಂತ ಉಗ್ರನಾಗಿರುತ್ತಾನೆ ಅಥವಾ ತನ್ನ ರುದ್ರ ರೂಪವನ್ನು ತೆಳೆದಿರುತ್ತಾನೆ. ಯಾವಾಗ ಶಿವನು ತನ್ನ ನೃತ್ಯವನ್ನು ಮುಂದುವರೆಸುತ್ತಾನೆಯೋ ಆಗ ನಿಧಾನವಾಗಿ ಈ ಪ್ರಪಂಚವು ಅವನೊಳಗೆ ಲೀನವಾಗುತ್ತಾ ಹೋಗುತ್ತದೆ. ಸೃಷ್ಟಿಗೆ ವಿರುದ್ಧವಾದ ರೂಪಾಂತರಗಳು ಉಂಟಾದಾಗ ಕಡೆಯ ಹಂತಕ್ಕಿಂತ ಮುಂಚಿನದರಲ್ಲಿ ಕೇವಲ ಪಂಚಭೂತಗಳಷ್ಟೇ ಇರುತ್ತವೆ ಮತ್ತು ಅಂತಿಮವಾಗಿ ಈ ಮೂಲಧಾತುಗಳೂ ಕೂಡಾ ಶಿವನಲ್ಲಿ ಲೀನವಾಗುತ್ತವೆ. ಈ ಹಂತದಲ್ಲಿ ಕೇವಲ ಶಿವ ಮತ್ತು ಶಕ್ತಿಯರನ್ನು ಹೊರತುಪಡಿಸಿ ಮತ್ತ್ಯಾರೂ ಇರುವುದಿಲ್ಲ. ಶಿವನ ಪ್ರಳಯ ತಾಂಡವಕ್ಕೆ ಕೇವಲ ಶಕ್ತಿ ಮಾತ್ರಳೇ ಸಾಕ್ಷೀಭೂತಳಾಗಿರುತ್ತಾಳೆ (ನಾಮ ೨೩೨ ‘ಮಹೇಶ್ವರ-ಮಹಾಕಲ್ಪ-ಮಹಾತಾಂಡವ-ಸಾಕ್ಷಿಣೀ’ ಮತ್ತು ನಾಮ ೫೭೧ ‘ಮಹಾ-ಪ್ರಳಯ-ಸಾಕ್ಷಿಣೀ’)

                 ಶಕ್ತಿಯು ಬಹಳ ಕರುಣಾಮಯಿ; ಎಷ್ಟೇ ಆದರೂ ಆಕೆ ಜಗದ ತಾಯಿಯಲ್ಲವೇ? ಆಕೆಯು ಈ ವಿಶ್ವವನ್ನು ಪುನಃ ಸೃಷ್ಟಿಸಬೇಕೆಂಬ ಉದ್ದೇಶವನ್ನು ಹೊಂದಿದ್ದಾಳೆ. ಶಿವನು ಉಗ್ರಸ್ವರೂಪವನ್ನು ಮುಂದುವರಿಸಿರುವುದರಿಂದ, ಆಕೆಯು ಅವನನ್ನು ನೋಡಲೂ ಸಹ ಅಶಕ್ಯಳಾಗಿದ್ದಾಳೆ. ಆಗ ಶಿವ ಮತ್ತು ಶಕ್ತಿಯರು ಒಂದಾಗಿರುವುದಿಲ್ಲ; ಮಹಾಪ್ರಳಯವು ಶಿವ ಮತ್ತು ಶಕ್ತಿಯರು ಬೇರೆ ಬೇರೆಯಾಗಿದ್ದಾಗ ಮಾತ್ರವೇ ಉಂಟಾಗುತ್ತದೆ. ಯಾವಾಗ ಅವರಿಬ್ಬರೂ ಒಂದು ಗೂಡುತ್ತಾರೆಯೋ, ಆಗ ಶಕ್ತಿಯು ಶಿವನು ತನ್ನ ಸಂಹಾರ ಕಾರ್ಯವನ್ನು ಕೈಗೊಳ್ಳಲು ಬಿಡುವುದಿಲ್ಲ. ಯಾವಾಗ ಮಹಾಪ್ರಳಯ ಉಂಟಾಗುತ್ತದೆಯೋ ಆಗ ಶಕ್ತಿಯು ಕೇವಲ ಅದನ್ನು ನೋಡಲು ಮಾತ್ರವೇ ಶಕ್ಯಳಾಗಿರುತ್ತಾಳೆ; ಇದನ್ನೇ ೨೩೨ನಾಮದ ಚರ್ಚೆಯಲ್ಲಿ ನೋಡಿದ್ದೇವೆ. ಇನ್ನೊಂದು ನಾಮವಾದ ಮಹಾ-ಪ್ರಳಯ-ಸಾಕ್ಷಿಣೀ (೫೭೧ನೇ ನಾಮ) ಅದನ್ನು ದೃಢಗೊಳಿಸುತ್ತದೆ. ಹೇಗಾದರಾಗಲೀ ತನ್ನ ಮಕ್ಕಳು ಬದುಕಿರಬೇಕೆಂದು ದೇವಿಯು ಬಯಸಿದಳು, ಆದ್ದರಿಂದ ಶಿವ ತಾಂಡವದ ಕೊನೆಯಲ್ಲಿ, ದೇವಿಯು ಶಿವನೊಂದಿಗೆ ನಾಟ್ಯ ಮಾಡಲು ಪ್ರಾರಂಭಿಸಿದಳು; ಆದರೆ ಅವಳ ನೃತ್ಯದಲ್ಲಿ ಉಗ್ರತೆ ಇರಲಿಲ್ಲ. ಇವಳ ನೃತ್ಯವನ್ನು ಕಂಡ ಶಿವನು ತನ್ನ ಉಗ್ರ ಸ್ವರೂಪದಿಂದ ವಿಮುಖನಾಗಿ ತನ್ನ ಮಂಗಳಕರ ರೂಪದೆಡೆಗೆ ಮರಳಲು ಪ್ರಾರಂಭಿಸುತ್ತಾನೆ. ಶಿವನು ಲಯವಾದ ಈ ಸಮಸ್ತ ಪ್ರಪಂಚವನ್ನು ಮರೆಮಾಚಿದ್ದ ಹಿರಣ್ಯಗರ್ಭ ಅಥವಾ ಬಂಗಾರದ ಮೊಟ್ಟೆಯನ್ನು ಹಿಡಿದಿದ್ದ; ಅವನು ದೇವಿಯ ಆಶಯದ ಮೇರೆಗೆ ಈ ಬಂಗಾರದ ಮೊಟ್ಟೆಯನ್ನು ಅವಳಿಗೆ ಹಿಂದಿರುಗಿಸುತ್ತಾನೆ ಇದನ್ನೇ ಅನುಗ್ರಹ ಅಥವಾ ಪರಮಪದ ಎನ್ನುತ್ತಾರೆ. ಪರಮಪದ (Salvation) ಎಂದರೆ ಮುಂದಿನ ಸೃಷ್ಟಿ ಚಕ್ರವು ಪ್ರಾರಂಭವಾಗುವುದಕ್ಕಿಂತ ಮೊದಲಿನ ಹಂತವಾಗಿದೆ. ಈಗ ಶಕ್ತಿಯು ಶಿವನಿಂದ ಅವನ ಸ್ವಾಯತ್ತತೆಯ ಅಧಿಕಾರವನ್ನು (ಸ್ವಾತಂತ್ರ‍್ಯ ಶಕ್ತಿಯನ್ನು) ಪಡೆದು ಈ ಪ್ರಪಂಚದ ಪರಿಪಾಲನೆಯನ್ನು (ಆಡಳಿತವನ್ನು) ಕೈಗೆತ್ತಿಕೊಳ್ಳುತ್ತಾಳೆ. 

               ಬ್ರಹ್ಮದ  ಕಾರ್ಯವು ಶಕ್ತಿಯಿಲ್ಲದೇ ಸಾಧ್ಯವಿಲ್ಲವೆನ್ನುವುದು ಇದರಿಂದ ವ್ಯಕ್ತವಾಗುತ್ತದೆ. ಆದ್ದರಿಂದ, ದೇವಿಯ ಭಾಗವಹಿಸುವಿಕೆಯಿಲ್ಲದಿದ್ದರೆ ಬ್ರಹ್ಮ, ವಿಷ್ಣು, ರುದ್ರ, ಮಹಾದೇವ ಮತ್ತು ಸದಾಶಿವ ಇವರಾರೇ ಆಗಲಿ ಕಾರ್ಯಪ್ರವೃತ್ತರಾಗಲಾರರು. ಅವರನ್ನು ಪಂಚ-ಬ್ರಹ್ಮರೆಂದು ಕರೆದಿದ್ದಾರೆ ಇದು ಬ್ರಹ್ಮದ ಐದು ವಿಧವಾದ ಕ್ರಿಯೆಗಳನ್ನು ಸೂಚಿಸುತ್ತದೆ. ದೇವಿಯು ಈ ಐದು ವಿಧವಾದ ಕಾರ್ಯಗಳಿಗೆ ಕಾರಣೀಭೂತಳಾಗಿರುವುದರಿಂದ ಆಕೆಯನ್ನು ಪಂಚ-ಬ್ರಹ್ಮ-ಸ್ವರೂಪಿಣೀ ಎಂದು ಕರೆಯಲಾಗಿದೆ.

ಹಿರಣ್ಯ ಗರ್ಭದ ಕುರಿತಾಗಿ ಹೆಚ್ಚಿನ ವಿವರಣೆಗಳು:

             ಬ್ರಹ್ಮನಿಗೆ ನಾಲ್ಕು ವಿಭಿನ್ನ ಸ್ಥರಗಳಿವೆ. ಅವೆಂದರೆ, ಅವ್ಯಕ್ತ, ಈಶ್ವರಾ, ಹಿರಣ್ಯಗರ್ಭ ಅಥವಾ ಸೂತ್ರಾತ್ಮಾ ಮತ್ತು ವಿರಾಟ್. ಮೊದಲನೆಯ ಸ್ಥಿತಿಯು ಅವ್ಯಕ್ತಾ (ನಾಮ ೩೯೮) ಅಂದರೆ ರೂಪಾಂತರವಿಲ್ಲದ ಸ್ಥಿತಿ. ಇದನ್ನೇ ತುರ್ಯಾವಸ್ಥೆ ಎನ್ನುತ್ತಾರೆ; ಇದು ಎಚ್ಚರದ ಮೂರು ಸ್ಥಿತಿಗಳಿಗೆ ಮೀರಿದ್ದು. ನಂತರದ ಹಂತವೇ ಈಶ್ವರಾ (ನಾಮ ೨೭೧). ಈ ಹಂತವು ಪ್ರಪಂಚದ ಸೃಷ್ಟಿಗೆ ಕಾರಣವಾಗಿದೆ ಮತ್ತು ಇದು ಮಾಯೆಯೊಂದಿಗೆ ಸಹಯೋಗ ಹೊಂದಿದೆ. ಮೂರನೆಯ ಸ್ಥಿತಿಯೇ ಹಿರಣ್ಯಗರ್ಭಾ, ಇದು ಪ್ರಪಂಚವನ್ನು ಒಟ್ಟಾಗಿ ಬೆಸೆಯುತ್ತದೆ. ಅಂತಿಮ ಹಂತವೇ ವಿರಾಟ್, ಇಲ್ಲಿ ದೈವಿಕತೆಯ ಅನಾವರಣವಾಗುತ್ತದೆ ಮತ್ತು ಅದು ನಮ್ಮ ಕಣ್ಣುಗಳಿಗೆ ದೃಷ್ಟಶಕ್ಯವಾಗಿದೆ. ಈ ವಿರಾಟ್ ಅನ್ನು ವೈಶ್ವಾನರವೆಂದೂ ಕರೆಯುತ್ತಾರೆ, ಹೀಗೆಂದರೆ ಎಲ್ಲಾ ಮನುಷ್ಯರಿಗೆ ಸಂಭಂದಿಸಿದ ಅಥವಾ ಸೇರಿದ, ಸರ್ವವ್ಯಾಪಿಯಾಗಿರುವ, ಪ್ರಸಿದ್ಧನಾದ ಅಥವಾ ಪೂಜಿಸಲ್ಪಡುವ, ಎಲ್ಲೆಡೆ ಇರುವವನು, ಸಾರ್ವತ್ರಿಕ, ಸಾಮಾನ್ಯ, ಮೊದಲಾದ ಅರ್ಥಗಳಿವೆ.

******

              ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 249-250 http://www.manblunde...  ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.  

 

 

Rating
Average: 4 (1 vote)

Comments

Submitted by nageshamysore Mon, 07/15/2013 - 20:42

ಶ್ರೀಧರರೆ ಅರವತ್ತೆಂಟರ ಕಾವ್ಯ ಸಾರ ತಮ್ಮ ಅವಗಾಹನೆಗೆ ಮತ್ತು ಪರಿಷ್ಕರಣೆಗೆ :-) - ನಾಗೇಶ ಮೈಸೂರು
ಲಲಿತಾ ಸಹಸ್ರನಾಮ ೨೪೯- ೨೫೦
೨೪೯. ಪಂಚ ಪ್ರೇತಾಸನಾಸೀನ
ಬ್ರಹ್ಮ ವಿಷ್ಣು ರುದ್ರ ಮಹಾದೇವ ಸದಾಶಿವ ಪ್ರೇತ ರೂಪ
ಸೃಷ್ಟಿ ಸ್ಥಿತಿ ಲಯ ತಿರೋಧಾನ ಅನುಗ್ರಹಗಳ ಕಾಯಕ
ಕಾರ್ಯಪ್ರವೃತ್ತರೆ ಶಕ್ತಿರೂಪದಲಿ ಸಂಗಾತಿಯಿರಲೆ ಜತೆ
ಜಡರೂಪೆ ಪೀಠಾಧಾರ ಪಂಚಪ್ರೇತಾಸನಾಸೀನ ಲಲಿತೆ!
೨೫೦. ಪಂಚ-ಬ್ರಹ್ಮ-ಸ್ವರೂಪಿಣೀ
ಜಡಶಕ್ತಿಗೆ ಚೇತನವಾಗೆ ಲಲಿತ ಪ್ರೇತರೂಪಿಗಳಾಗುತೆ ಪಂಚಬ್ರಹ್ಮ
ತಾನೆ ಬ್ರಹ್ಮವಾಗಿ ಸೃಷ್ಟಿ ಸ್ಥಿತಿ ಲಯ ಸರ್ವನಾಶ ಮುಕ್ತಿ ಆಯಾಮ
ದೇವ ದೇವಿನಿ ಮಂತ್ರಿಣಿ ಯೋಗಿಣಿ ಪ್ರಕೃತಿ ಸಹಜ ಜಗದ ಪ್ರತೀಕ
ಪಂಚಬ್ರಹ್ಮಕ್ರಿಯ ಕಾರಣೀಭೂತಳು ದೇವಿ ನಡೆಸುವಳೆಲ್ಲಾ ಲೋಕ!
ಸೃಷ್ಟಿ
-------
ಬ್ರಹ್ಮಕ್ರಿಯೆ ಪುನರಾವರ್ತನಚಕ್ರ ಬ್ರಹ್ಮಾಂಡ ಸೃಷ್ಟಿಯಾಗುತ್ತ
ಆಕಾಶ ವಾಯು ಅಗ್ನಿ ಜಲ ಭೂಮಿ ಪಂಚಭೂತ ಉದ್ಭವಿಸುತ್ತ
ಆ ಮೂಲ ಧಾತು ರೂಪಾಂತರಿಸೆ ವಿಕಾಸ ಸ್ಥೂಲ ಸೂಕ್ಷ್ಮ ಕಕ್ಷೆ
ಅತ್ಯುನ್ನತ ಸ್ಥೂಲ ಮಾನವದೀಕ್ಷೆ ಅತ್ಯಂತಸೂಕ್ಷ್ಮ ಮನಸ ನಕ್ಷೆ!
ನಿರ್ವಹಣೆ ( ಸ್ಥಿತಿ)
--------------------
ಸೃಜಿಸಾಯಿತು ವಿಶ್ವ ನಿರ್ವಹಣೆಗಿಳಿಯೆ ಬ್ರಹ್ಮ
ಸಮತುಲ್ಯಕೆ ಭೌತಿಕ ಕಾಯ ತ್ಯಜಿಸೊ ಮರ್ಮ
ಆತ್ಮವೆ ಕ್ರಿಯಾಶಕ್ತಿ ಭೌತಿಕ ದೇಹಕಿರಿಸುತ ಶಕ್ತಿ
ಕ್ರಿಯಾಶೀಲವಾಗಿಸುತೆ ಶರೀರ ಆತ್ಮದ ಪ್ರವೃತ್ತಿ!

ಶ್ರೀಧರರೆ, 250. ಪಂಚ-ಬ್ರಹ್ಮ-ಸ್ವರೂಪಿಣೀಯ ವಿವರಣೆಯಲ್ಲಿರುವ ಹಿರಣ್ಯಗರ್ಭದ ಕುರಿತು ಬೇರೆಯೆ ಕವನ ಬರೆದು ಹಾಕಿದ್ದೇನೆ, ಸಾರಾಂಶದ ರೂಪದಲ್ಲಿ :-)- ನಾಗೇಶ ಮೈಸೂರು
ಹಿರಣ್ಯಗರ್ಭದ ಕಥಾನಕ!
-----------------------------------------------
(250. ಪಂಚ-ಬ್ರಹ್ಮ-ಸ್ವರೂಪಿಣೀ)
ಸ್ವಯಂಭು ನೀರಿನಲಿಟ್ಟ ಪ್ರಥಮ ಸೃಷ್ಟಿಯ ಬೀಜ
ಅಗ್ನಿಪ್ರಕಾಶದಿ ಹೊಳೆವ ಬಂಗಾರದ ಮೊಟ್ಟೆ ನಿಜ
ಸೂರ್ಯಪ್ರಖರ ಹಿರಣ್ಯಗರ್ಭ ಸೃಷ್ಟಿಕರ್ತಬ್ರಹ್ಮನ
ಹುಟ್ಟಿಸಿದಕಾರಣ ಸ್ವಯಂಭುವವತಾರವೆ ಅವನ!
ಲಯ ವೈಯಕ್ತಿಕ ಪ್ರಳಯ ಜಾಗತಿಕ ಅತಿಕಾಯ
ಬ್ರಹ್ಮಕೆ ನಾಲ್ಕನೆಸ್ಥಿತಿ ತಿರೋಧನ ಮಹಾಪ್ರಳಯ
ಲೌಕಿಕ ಅಸ್ಥಿತ್ವವೆ ಕರಗಿ ಲೀನವಾಗುತಲಿ ಪ್ರಪಂಚ
ಪ್ರಳಯತಾಂಡವ ನೃತ್ಯವನಾಡಿ ಉಗ್ರತೆ ಶಿವನಿಚ್ಚ!
ಶಿವನುಗ್ರ ರುದ್ರ ರೂಪದಲೆಲ್ಲ ಲೀನವಾಗಿ ಜಗವೆ
ತಿರುವು ಮುರುವಾಗಿ ಸೃಷ್ಟಿಚಕ್ರ ಮೂಲ ರೂಪವೆ
ರೂಪಾಂತರ ಪಂಚಭೂತ ಮೂಲಧಾತುವು ಲೀನ
ಶಿವಶಕ್ತಿ ಬಿಟ್ಟೆಲ್ಲ ನಿಶ್ಯಬ್ದ ಸಾಕ್ಷಿಭೂತ ಲಲಿತೆಮನ!
ಜಗದ ತಾಯಿ ಕರುಣಾಮಯಿ ಪುನರ್ಸೃಷ್ಟಿಗಾಸೆ
ವಿಭಜಿತರೂಪದಿ ಶಿವನ ತಡೆಯಲಾಗದ ಪರೀಕ್ಷೆ
ಪಣತೊಟ್ಟು ಕಾಯ್ದು ತಾಂಡವ ನೃತ್ಯದ ಅಂತಿಮ
ಶಿವನ ಜತೆ ದೇವಿ ನಾಟ್ಯ ಉಗ್ರತೆ ತಿರುಗಿಸೆ ಕ್ರಮ!
ಶಾಂತಿ ಲಾಲಿತ್ಯದ ನೃತ್ಯದಲಿ ಉಗ್ರತೆಗೆಡೆಯೆಲ್ಲಿ
ವಿಮುಖನಾಗುತೆ ಶಿವನು ಮಂಗಳಕರರೂಪದಲಿ
ಪ್ರಳಯಾಪೋಷಿತ ಪ್ರಪಂಚ ಹಿರಣ್ಯಗರ್ಭ ಕರದಿ
ಅನುಗ್ರಹ ಪರಮಪದವೆ ನೃತ್ಯ ಮೆಚ್ಚುವ ಸರದಿ!
ಹಿಂತಿರುಗಿ ಪಡೆದ ಹಿರಣ್ಯಗರ್ಭದಿಂದೆ ಆರಂಭ
ಸೃಷ್ಟಿಚಕ್ರ ಪುನರಾವರ್ತನೆ ಮೊದಲನೆ ಹಂತ
ಸ್ವಾಯತ್ತತೆಯ ಪರಮಾಧಿಕಾರ ಪರಿಪಾಲನೆಗೆ
ತೊಡಗುವಳೆ ಲಲಿತೆ ಬ್ರಹ್ಮ ಸ್ವರೂಪಿಣಿ ಬೆರಗೆ!
ಅವ್ಯಕ್ತ ಬ್ರಹ್ಮ ರೂಪಾಂತರವಿಲ್ಲ ತುರ್ಯಾವಸ್ಥ
ಈಶ್ವರಾ ಹಂತ ಸೃಷ್ಟಿ ಕಾರಣ ಮಾಯ ಸಹಿತ
ಬೆಸೆಯುತ ಪ್ರಪಂಚವ ಹಿರಣ್ಯಗರ್ಭ ಸೂತ್ರಾತ್ಮ
ದೈವಿಕತೆ ತೆರೆವ ವಿರಾಟ್ ವೈಶ್ವಾನರ ದೃಶ್ಯಮ!

Submitted by makara Tue, 07/23/2013 - 11:22

ನಾಗೇಶರೆ,
ಈ ಕವನವನ್ನು ಪರಿಷ್ಕರಿಸಲು ಸ್ವಲ್ಪ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡದ್ದಕ್ಕೆ ಕ್ಷಮೆಯಿರಲಿ. ಮೊದಲು ಓದಿದಾಗ ಕೆಲವೊಂದು ಕಡೆ ಸ್ವಲ್ಪ ಗೊಂದಲವುಂಟಾಯಿತು. ಆದರೆ ಅದು ಎಲ್ಲಿ ಮತ್ತು ಅದನ್ನು ಹೇಗೆ ಸರಿಪಡಿಸಬೇಕು ಎನ್ನುವುದು ಸ್ಪಷ್ಟವಾಗಿರಲಿಲ್ಲ. ಹಾಗಾಗಿ ಇದನ್ನು ಹಾಗೆಯೇ ಬಿಟ್ಟಿದ್ದೆ. ಈಗ ನನಗೆ ತಿಳಿದಂತೆ ಸ್ವಲ್ಪ ಮಾರ್ಪಾಡಿಸುವ ಪ್ರಯತ್ನ ಮಾಡಿದ್ದೇನೆ. ಉಳಿದ್ದದ್ದನ್ನು ನಿಮ್ಮ ಪರಿಷ್ಕರಣೆಗೆ ಬಿಡುತ್ತೇನೆ.
೨೪೯. ಪಂಚ ಪ್ರೇತಾಸನಾಸೀನ
:
:
ಕಾರ್ಯಪ್ರವೃತ್ತರೆ ಶಕ್ತಿರೂಪದಲಿ ಸಂಗಾತಿಯಿರಲೆ ಜತೆ
=ಕಾರ್ಯಪ್ರವೃತ್ತರು ಶಕ್ತಿರೂಪದಲಿ ಸಂಗಾತಿಯಿರೆ ಜತೆ
:
೨೫೦. ಪಂಚ-ಬ್ರಹ್ಮ-ಸ್ವರೂಪಿಣೀ
ಜಡಶಕ್ತಿಗೆ ಚೇತನವಾಗೆ ಲಲಿತ ಪ್ರೇತರೂಪಿಗಳಾಗುತೆ ಪಂಚಬ್ರಹ್ಮ
ತಾನೆ ಬ್ರಹ್ಮವಾಗಿ ಸೃಷ್ಟಿ ಸ್ಥಿತಿ ಲಯ ಸರ್ವನಾಶ ಮುಕ್ತಿ ಆಯಾಮ
ದೇವ ದೇವಿನಿ ಮಂತ್ರಿಣಿ ಯೋಗಿಣಿ ಪ್ರಕೃತಿ ಸಹಜ ಜಗದ ಪ್ರತೀಕ
ಪಂಚಬ್ರಹ್ಮಕ್ರಿಯ ಕಾರಣೀಭೂತಳು ದೇವಿ ನಡೆಸುವಳೆಲ್ಲಾ ಲೋಕ!

ಜಡಶಕ್ತಿಯಿಂ ಪ್ರೇತರೂಪಿಗಳಿಂತಿಹ ಪಂಚಬ್ರಹ್ಮಕೆ ಚೇತನವಾಗಿಹ ಲಲಿತ
ತಾನೆ ಬ್ರಹ್ಮವಾಗಿ ಸೃಷ್ಟಿ ಸ್ಥಿತಿ ಲಯ ಪ್ರಳಯದಾಯಾಮಗಳ ತೋರುತ!
ದೇವ-ದೇವಿ ಮಂತ್ರಿಣಿ-ಯೋಗಿನಿಯರಾಗಿಹೆ ಸಹಜ ಜಗದ ಪ್ರತೀಕ
ಪಂಚಬ್ರಹ್ಮಕ್ರಿಯಾ ಕಾರಣೀಭೂತ ದೇವಿ ನಿಯಂತ್ರಿಪಳೆಲ್ಲಾ ಲೋಕ!

ನಾಗೇಶರೆ, ನೀವು ರಚಿಸಿದ ಕವನ ಮೂಲ ಆಶಯವನ್ನು ಸರಿಯಾಗಿ ವ್ಯಕ್ತಪಡಿಸದು ಎನ್ನುವ ಭಾವನೆಯುಂಟಾದ್ದರಿಂದ ಅದನ್ನು ನನ್ನದೇ ಆದ ರೀತಿಯಲ್ಲಿ ಮಾರ್ಪಡಿಸಿದ್ದೇನೆ. ಅದನ್ನು ಇನ್ನಷ್ಟು ಉತ್ತಮಗೊಳಿಸುವುದನ್ನು ನಿಮ್ಮ ಪಾಲಿಗೆ ಬಿಟ್ಟಿದ್ದೇನೆ.

ಸೃಷ್ಟಿ
ಬ್ರಹ್ಮಕ್ರಿಯೆ ಪುನರಾವರ್ತನಚಕ್ರ ಬ್ರಹ್ಮಾಂಡ ಸೃಷ್ಟಿಯಾಗುತ್ತ
ಆಕಾಶ ವಾಯು ಅಗ್ನಿ ಜಲ ಭೂಮಿ ಪಂಚಭೂತ ಉದ್ಭವಿಸುತ್ತ
ಆ ಮೂಲ ಧಾತು ರೂಪಾಂತರಿಸೆ ವಿಕಾಸ ಸ್ಥೂಲ ಸೂಕ್ಷ್ಮ ಕಕ್ಷೆ
ಅತ್ಯುನ್ನತ ಸ್ಥೂಲ ಮಾನವ ದೀಕ್ಷೆ ಅತ್ಯಂತಸೂಕ್ಷ್ಮ ಮನಸ ನಕ್ಷೆ!
ಈ ಸಾಲುಗಳು ಅದ್ಭುತವಾಗಿ ಮೂಢಿ ಬಂದಿವೆ ನಾಗೇಶರೆ, ಇದರಲ್ಲಿ ಎಲ್ಲಾ ಸರಿಯಾಗಿವೆ, ಕಡೆಯ ಸಾಲಿನಲ್ಲಿ ಮಾನವದೀಕ್ಷೆ=ಮಾನವ ದೀಕ್ಷೆ ಮಾಡಿದರೆ ಸರಿಹೋಗುತ್ತದೆ.

>ನಿರ್ವಹಣೆ ( ಸ್ಥಿತಿ)

ಸೃಜಿಸಿಹ ವಿಶ್ವದಾ ನಿರ್ವಹಣೆಯೇ ಬ್ರಹ್ಮದ ಮೊದಲ ಕರ್ಮ,
ಸಮತುಲ್ಯಕೆ ಭೌತಿಕ ಕಾಯ ತ್ಯಜಿಪುದೇ ಅಡಗಿಹ ಮರ್ಮ,
ಆತ್ಮ ಶಕುತಿಯೇ ಭೌತಿಕ ಕಾಯವ ಕ್ರಿಯಾಶೀಲಗೊಳಿಪ ಶಕ್ತಿ
ಈ ಕ್ರಿಯಾಶಕುತಿಯರಿಯೇ ದೊರೆಯುವುದು ನಿಜ ಮುಕುತಿ

ನಾಗೇಶರೆ, ನನ್ನ ಕವನ ಖಂಡಿತಾ ಬಾಲಿಶವಾಗಿದೆ. ಆದರೆ ಇದನ್ನು ಇಲ್ಲಿ ಕೊಟ್ಟ ಉದ್ದೇಶ ಈ ಅರ್ಥ ಬರುವಂತೆ ನಿಮ್ಮ ಕವನ ಹೊರಹೊಮ್ಮಲಿ ಎನ್ನುವುದೇ ಆಗಿದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, 

ಈ ಕವನಗಳನ್ನು ಬರೆಯುವಾಗ ನಾನು ಕೊಂಚ ಅನ್ಯಮನಸ್ಕನಾಗಿದ್ದೆ - ಕೆಲವು ಸಾಲುಗಳು ಸುಲಲಿತವಾಗಿ ಬರಲಿಲ್ಲ. ಆ ಗಳಿಗೆಯಲ್ಲಿ ತೋಚಿದ್ದನ್ನು ಹಾಕಿಟ್ಟಿದ್ದೆ. ಅದೆ ನಿಮ್ಮನ್ನೂ ಗೊಂದಲದಲಿ ಕೆಡವಿದ್ದಿರಬೇಕು. ಲಲಿತೆಯ ಒಂದು ಉದ್ದೇಶವಂತೂ ಅರ್ಥವಾಯ್ತು - ಈ ಸರಣಿಯ ಬರಹದಿಂದ ನೀವು ಎಲ್ಲರನ್ನು  ದೇವಿಯ ಭಕ್ತರಾಗಿಸುವ ಪಣ ತೊಟ್ಟಿದ್ದರೆ, ದೇವಿಯು ಅದೆ ಸಮಯದಲ್ಲಿ ನಿಮ್ಮನ್ನು ಕವಿಯಾಗಿಸಿಬಿಡುವ ಪಣ ತೊಟ್ಟಿದ್ದಾಳೆ - ಬಹುಶಃ ನಾನು ಹೆಚ್ಚು ಹೆಚ್ಚು ತಪ್ಪು ಮಾಡುವುದೆ ಸೂಕ್ತವೆಂದು ಕಾಣುತ್ತದೆ!

ಪರಿಷ್ಕರಿಸಿದ ರೂಪ ಇಲ್ಲಿವೆ - ಮತ್ತಷ್ಟು ತಿದ್ದುಪಡಿ ಬೇಕಿದೆಯೆ ನೋಡಿ!

೨೪೯. ಪಂಚ ಪ್ರೇತಾಸನಾಸೀನ
ಬ್ರಹ್ಮ ವಿಷ್ಣು ರುದ್ರ ಮಹಾದೇವ ಸದಾಶಿವ ಪ್ರೇತ ರೂಪ
ಸೃಷ್ಟಿ ಸ್ಥಿತಿ ಲಯ ತಿರೋಧಾನ ಅನುಗ್ರಹಗಳ ಕಾಯಕ
ಕಾರ್ಯಪ್ರವೃತ್ತರು ಶಕ್ತಿ ರೂಪದಲಿ ಸಂಗಾತಿಯಿರೆ ಜತೆ
ಜಡರೂಪೆ ಪೀಠಾಧಾರ ಪಂಚಪ್ರೇತಾಸನಾಸೀನ ಲಲಿತೆ!

೨೫೦. ಪಂಚ-ಬ್ರಹ್ಮ-ಸ್ವರೂಪಿಣೀ
 ಜಡಶಕ್ತಿಯಿಂ ಪ್ರೇತರೂಪಿಗಳಿಂತಿಹ ಪಂಚಬ್ರಹ್ಮಕೆ ಚೇತನವಾಗಿಹ ಲಲಿತ
ತಾನೆ ಬ್ರಹ್ಮವಾಗಿ ಸೃಷ್ಟಿ ಸ್ಥಿತಿ ಲಯ ಪ್ರಳಯದಾಯಾಮಗಳ ತೋರುತ
ದೇವ-ದೇವಿ ಮಂತ್ರಿಣಿ-ಯೋಗಿನಿಯರಾಗಿಹೆ ಪ್ರಕೃತಿಯೆಲ್ಲಾ ಚಟುವಟಿಕೆ
ಪಂಚಬ್ರಹ್ಮಕ್ರಿಯಾ ಕಾರಣೀಭೂತ ನಿಯಂತ್ರಿಸುತ ಸಹಜದೆ ಜಗನ್ಮಾತೃಕೆ!

(ಶ್ರೀಧರರೆ, ನೀವು ಸುಂದರಗೊಳಿಸಿದ ಮೊದಲೆರಡು ಸಾಲಿಗೆ ಹೊಂದುವಂತೆ ಕೊನೆಯೆರಡು ಸಾಲನ್ನು ಬದಲಿಸಿದ್ದೇನೆ. ಈಗ ಒಟ್ಟಾರೆ ಅರ್ಥ ಸೂಕ್ತವಾಗಿ ಬಿಂಬಿತವಾಗಿದೆಯೆನಿಸುತ್ತಿದೆಯೆ?)

ಸೃಷ್ಟಿ
ಬ್ರಹ್ಮಕ್ರಿಯೆ ಪುನರಾವರ್ತನಚಕ್ರ ಬ್ರಹ್ಮಾಂಡ ಸೃಷ್ಟಿಯಾಗುತ್ತ
ಆಕಾಶ ವಾಯು ಅಗ್ನಿ ಜಲ ಭೂಮಿ ಪಂಚಭೂತ ಉದ್ಭವಿಸುತ್ತ
ಆ ಮೂಲ ಧಾತು ರೂಪಾಂತರಿಸೆ ವಿಕಾಸ ಸ್ಥೂಲ ಸೂಕ್ಷ್ಮ ಕಕ್ಷೆ
ಅತ್ಯುನ್ನತ ಸ್ಥೂಲ ಮಾನವ ದೀಕ್ಷೆ ಅತ್ಯಂತಸೂಕ್ಷ್ಮ ಮನಸ ನಕ್ಷೆ!

ನಿರ್ವಹಣೆ ( ಸ್ಥಿತಿ)
ಸೃಜಿಸಿಹ ವಿಶ್ವದಾ ನಿರ್ವಹಣೆಯೇ ಬ್ರಹ್ಮದ ಮೊದಲ ಕರ್ಮ,
ಸಮತುಲ್ಯಕೆ ಭೌತಿಕ ಕಾಯ ತ್ಯಜಿಪುದೇ ಅಡಗಿಹ ಮರ್ಮ,
ಆತ್ಮ ಶಕುತಿಯೇ ಭೌತಿಕ ಕಾಯವ ಕ್ರಿಯಾಶೀಲಗೊಳಿಪ ಶಕ್ತಿ
ಈ ಕ್ರಿಯಾಶಕುತಿಯರಿಯೇ ದೊರೆಯುವುದು ನಿಜ ಮುಕುತಿ

 (ಶ್ರೀಧರರೆ, ಇದು ಖಂಡಿತ ಬಾಲಿಶವಲ್ಲ - ಪರುಷ! (=ಸ್ಪರ್ಶ ಶಿಲೆ) - ತಿದ್ದುಪಡಿಯೆ ಇಲ್ಲದೆ ಇದನ್ನು ಹಾಗೆ ಉಳಿಸಿಕೊಳ್ಳುವಷ್ಟು ಸೊಗಸಾಗಿದೆ!)