ಮಾಹಿತಿ ಹಕ್ಕು ಕಾಯಿದೆಯಿಂದ ರಾಜಕೀಯ ಪಕ್ಷಗಳಿಗೆ ವಿನಾಯ್ತಿ?

ಮಾಹಿತಿ ಹಕ್ಕು ಕಾಯಿದೆಯಿಂದ ರಾಜಕೀಯ ಪಕ್ಷಗಳಿಗೆ ವಿನಾಯ್ತಿ?

ಮಾಹಿತಿ ಹಕ್ಕು ಕಾಯಿದೆ ಆರು ರಾಜಕೀಯ ಪಕ್ಷಗಳಿಗೂ ಅನ್ವಯ ಎಂದು ಇತ್ತೀಚೆಗೆ ಆದೇಶಿಸಿದೆ, ಕೇಂದ್ರ ಮಾಹಿತಿ ಆಯೋಗ. ತಕ್ಷಣವೇ ಇದರಿಂದ ನುಣುಚಿಕೊಳ್ಳಲು ಹವಣಿಸುತ್ತಿರುವ ಹಲವು ರಾಜಕೀಯ ಪಕ್ಷಗಳು “ಅದು ನಮಗಲ್ಲ, ಇತರರಿಗೆ ಮಾತ್ರ” ಎಂದು ವಿರೋಧಿಸುತ್ತಿವೆ!

ಎಂತಹ ತರ್ಕರಹಿತ ನಿಲುವು! ಸಂಸತ್ತಿನಲ್ಲಿ ಅನುಮೋದಿಸಲ್ಪಡುವ ಎಲ್ಲ ಕಾನೂನುಗಳು ಪ್ರತಿಯೊಬ್ಬ ಪ್ರಜೆಗೂ ಸಂಸ್ಥೆಗೂ ಅನ್ವಯ. “ಯಾಕೆ ಈ ಕಾಯಿದೆ ಅಗತ್ಯ” ಎಂಬುದನ್ನು ಆಯಾ ಕಾಯಿದೆಯ ಪೀಠಿಕೆ ಪ್ರತಿಪಾದಿಸುತ್ತದೆ. ಅದನ್ನು ಸಂಸತ್ತಿನಲ್ಲಿ ಒಪ್ಪಿಕೊಂಡು, ಕಾಯಿದೆಯನ್ನು ಅನುಮೋದಿಸುವ ರಾಜಕೀಯ ಪಕ್ಷಗಳು, ಅದೇ ಕಾಯಿದೆ ಜ್ಯಾರಿಯಾಗುವಾಗ “ಈ ಕಾಯಿದೆ ಬೇಕೇ ಬೇಕು, ಆದರೆ ನಮಗೆ ಇದರಿಂದ ವಿನಾಯ್ತಿ ಬೇಕು” ಎಂಬ ನಿಲುವು ತಳೆದರೆ ಅದು ಅಸಂಬದ್ಧ, ಅಲ್ಲವೇ?

ಈಗ ಕೇಂದ್ರ ಸರಕಾರವು, ನವದೆಹಲಿಯ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನೇ ನಿಷ್ಕ್ರಿಯಗೊಳಿಸಲಿಕ್ಕಾಗಿ ಸುಗ್ರೀವಾಜ್ನೆ ಹೊರಡಿಸಲು ತಯಾರಿ ನಡೆಸುತ್ತಿದೆ! ಸುಗ್ರೀವಾಜ್ನೆಯನ್ನು ಯಾವ ಸಂದರ್ಭಗಳಲ್ಲಿ ಹೊರಡಿಸ ಬಹುದು? ಈ ಪ್ರಶ್ನೆಗೆ ನಮ್ಮ ಸಂವಿಧಾನದಲ್ಲಿ ಸ್ಪಷ್ಟ ಉತ್ತರವಿದೆ: “ತಕ್ಷಣವೇ ಕ್ರಮ ಕೈಗೊಳ್ಳುವುದು ಅವಶ್ಯವೆನಿಸಿದ ಸಂದರ್ಭದಲ್ಲಿ ಮಾತ್ರ”. ಆರು ರಾಷ್ಟ್ರೀಯ ರಾಜಕೀಯ ಪಕ್ಷಗಳೂ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಕೇಂದ್ರ ಮಾಹಿತಿ ಆಯೋಗ ಆದೇಶ ನೀಡಿದ್ದು “ಅಂತಹ ಸಂದರ್ಭಗಳಲ್ಲಿ ಒಂದು” ಎಂದು ಭಾವಿಸುವ ಕೇಂದ್ರ ಸರಕಾರದ ನಿಲುವಿಗೆ ಏನೆನ್ನಬೇಕು?

ಮಾಹಿತಿ ಹಕ್ಕು ಕಾಯಿದೆ, ೨೦೦೫ರ ಪೀಠಿಕೆಯಲ್ಲಿರುವ ಒಂದು ಮುಖ್ಯ ಅಂಶ: “ಪ್ರಜಾಪ್ರಭುತ್ವ(ಪರಿಣಾಮಕಾರಿ ಆಗಬೇಕಾದರೆ) ದಲ್ಲಿ ಮಾಹಿತಿ ತಿಳಿದಿರುವ ಪ್ರಜಾವರ್ಗ ಇರಬೇಕು.” ಇದರ ಅರ್ಥವನ್ನು, ಏಳು ವರುಷಗಳ ನಂತರ, ಈಗ ತಿರುಚುವುದು ಯಾಕೆ? ಪ್ರಜಾವರ್ಗಕ್ಕೆ ಸರಕಾರದ ಮತ್ತು ಸರಕಾರಿ ಅಂಗಸಂಸ್ಥೆ ಇತ್ಯಾದಿಗಳ (ಮಾಹ ಕಾಯಿದೆಯ ಪ್ರಕಾರ ಮಾಹಿತಿ ಅರ್ಜಿಗಳಿಗೆ ಉತ್ತರಿಸಬೇಕಾದ ಸಾರ್ವಜನಿಕ ಪ್ರಾಧಿಕಾರಗಳು) ಬಗ್ಗೆ ಮಾಹಿತಿ ತಿಳಿದರೆ ಸಾಕು, ರಾಷ್ಟ್ರೀಯ ರಾಜಕೀಯ ಪಕ್ಷಗಳ ಮಾಹಿತಿ ತಿಳಿದಿರಬೇಕಾಗಿಲ್ಲ ಎನ್ನುವುದು ಸರಿಯೇ? ಸರಕಾರಗಳನ್ನು ರಚಿಸುವುದು ಇವೇ ರಾಜಕೀಯ ಪಕ್ಷಗಳು ಎಂಬುದನ್ನು ಗಮನಿಸಿ.

ರಾಜಕೀಯ ಪಕ್ಷಗಳು ಹೀಗೆ ವಾದ ಮಾಡಬಹುದು: “ಸಾರ್ವಜನಿಕ ಹಣವನ್ನು ವೆಚ್ಚ ಮಾಡುವುದು ಸರಕಾರವೇ ಹೊರತು ನಾವಲ್ಲ; ನಮಗೆ ಸರಕಾರದಿಂದ ಸಿಗುವುದು ಸಣ್ಣಪುಟ್ಟ ಆರ್ಥಿಕ ನೆರವು ಮಾತ್ರ. ಹಾಗಾಗಿ ನಾವು ಮಾಹಿತಿ ನೀಡಬೇಕಾಗಿಲ್ಲ.” ಈ ವಾದದಲ್ಲಿ ಹುರುಳಿಲ್ಲ. ಯಾಕೆಂದರೆ, ಸರಕಾರದಿಂದ ಸಣ್ಣಪುಟ್ಟ ಆರ್ಥಿಕ ನೆರವು (ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ) ಪಡೆಯುವ ಸಂಸ್ಥೆಗಳೂ ಮಾಹ ಕಾಯಿದೆ ಪ್ರಕಾರ ಸಾರ್ವಜನಿಕ ಪ್ರಾಧಿಕಾರ ಎನಿಸಿಕೊಂಡು, ಕಡ್ಡಾಯವಾಗಿ ಮಾಹಿತಿ ನೀಡಬೇಕಾಗುತ್ತದೆ. ಹಾಗಿರುವಾಗ, ಸರಕಾರದಿಂದ ಹಲವು ನಗರಗಳಲ್ಲಿ ಕಚೇರಿಗಾಗಿ ಪುಕ್ಕಟೆಯಾಗಿ ಜಮೀನನ್ನು ಪಡೆದಿರುವ ರಾಜಕೀಯ ಪಕ್ಷಗಳು ಆ ಕಾಯಿದೆ ಪ್ರಕಾರ ಮಾಹಿತಿ ನೀಡಲೇ ಬೇಕಾಗುತ್ತದೆ.

ಚುನಾವಣೆ ಹಾಗೂ ಇತರ ಬಾಬುಗಳಿಗಾಗಿ ರಾಜಕೀಯ ಪಕ್ಷಗಳು ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡುತ್ತವೆ ತಾನೇ? ಈ ಹಣ ಎಲ್ಲಿಂದ ಬರುತ್ತದೆ? ಕೆಲವು ದೊಡ್ಡ ದಾನಿಗಳಿಂದ ಮತ್ತು ಬಹುಪಾಲು ದಾನವು ಸಣ್ಣಪುಟ್ಟ ದಾನ ನೀಡುವ ಗುರುತಿಸಲಾಗದ ವ್ಯಕ್ತಿಗಳಿಂದ ಬರುತ್ತದೆ ಎನ್ನುತ್ತವೆ ರಾಜಕೀಯ ಪಕ್ಷಗಳು. ಇದೂ ಸಾರ್ವಜನಿಕ ಹಣ ತಾನೇ?

ಆದ್ದರಿಂದ, ಸ್ವೀಕರಿಸಿದ ದಾನವನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬುದನ್ನು ಆ ಗುರುತಿಸಲಾಗದ ದಾನಿಗಳ ಮಾಹಿತಿಗಾಗಿ ಸಾರ್ವಜನಿಕವಾಗಿ ಪ್ರಕಟಿಸುವುದು ಅಗತ್ಯ ತಾನೇ? ಈ ಮಾಹಿತಿ ಅವರಿಗೆ ತಿಳಿಸಲು, ಇದರ ಹೊರತಾಗಿ, ಬೇರೆ ಯಾವ ವಿಧಾನವಿದೆ?

ಮಾಹಿತಿ ಹಕ್ಕು ಕಾಯಿದೆ ಏನನ್ನು ಕಡ್ಡಾಯ ಮಾಡಿದೆ? ಯಾವುದೇ ಕಾಯಿದೆ ಅಥವಾ ನಿಯಮದ ಪ್ರಕಾರ ಕಡ್ಡಾಯವಾಗಿ ದಾಖಲಿಸಿರುವ ಮಾಹಿತಿಯನ್ನು ಬಹಿರಂಗ ಪಡಿಸುವುದನ್ನು. ಹಾಗಿರುವಾಗ, ತಾವು ದಾಖಲಿಸಿರುವ ಆ ಎಲ್ಲ ಮಾಹಿತಿಯನ್ನು ರಾಜಕೀಯ ಪಕ್ಷಗಳು ತಾವಾಗಿಯೇ ಮಾಧ್ಯಮ ಅಥವಾ ವೆಬ್ಸೈಟಿನಲ್ಲಿ ಪ್ರಕಟಿಸಬಹುದು ತಾನೇ? ಅದನ್ನು ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಯಾರಾದರೂ ಅರ್ಜಿ ಕೊಟ್ಟು ಕೇಳಲಿ, ಆಗ ಅವರಿಗಷ್ಟೇ ತಿಳಿಸೋಣ ಎಂಬುದು ಜನವಿರೋಧಿ ನಿಲುವು ತಾನೇ?

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ, “ಆಳ್ವಿಕೆ” ಎಂಬುದು ಪಾರದರ್ಶಕವಾಗಿರಲೇ ಬೇಕು. ಅದಕ್ಕಾಗಿ ಪ್ರಜೆಗಳಿಗೆ ಸಂಪೂರ್ಣ ಮಾಹಿತಿ, ಪ್ರಜೆಗಳ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರಗಳನ್ನು ಸರಕಾರ ನೀಡಲೇ ಬೇಕು. (ದೇಶದ ಹಿತಕ್ಕಾಗಿ ರಹಸ್ಯವಾಗಿ ಇಡಬೇಕಾದ ಮಾಹಿತಿಗೆ ಮಾಹ ಕಾಯಿದೆಯಲ್ಲಿಯೇ ವಿನಾಯ್ತಿ ಇದೆ.) ಆದ್ದರಿಂದ, ಸರಕಾರದ ಮೂಲದಲ್ಲಿರುವ ರಾಜಕೀಯ ಪಕ್ಷಗಳೂ ಇದಕ್ಕೆ ಬದ್ಧವಾಗಿರಬೇಕು, ಅಲ್ಲವೇ?

ಇನ್ನಾದರೂ ಮಾಹಿತಿ ಹಕ್ಕು ಕಾಯಿದೆಯಿಂದ ನುಣುಚಿಕೊಳ್ಳುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ಕೈಬಿಡಲಿ.

Comments

Submitted by partha1059 Mon, 07/15/2013 - 08:33

ನೀವು ಹೇಳಿರುವದೆಲ್ಲ ಸರಿ, ಆದರೆ ಇಂತಹ ಕಾನೂನುಗಳೆಲ್ಲ ತರುವುದು ಸಂಸದರು ಹಾಗು ಅದನ್ನು ಮುರಿಯುವುದು ಸಹ ಅದೆ ರಾಜಕೀಯದವರೆ, ಅವರ ಕಾಲಿಗೆ ಹಗ್ಗ ಕಟ್ಟಿ ಕೊಳ್ಲಲು ಅವರು ಖಂಡಿತ ಇಚ್ಚಿಸುವದಿಲ್ಲ. ಹಾಗಿರುವಾಗ ಅವರು ಹೋಗುತ್ತಿರುವುದು ತಪ್ಪೆಂದು ತೋರಿಸುವಿದು ದೇಶದ ಪ್ರಜೆಗಳ ಸಂಘಸಂಸ್ಥೆಗಳ ಮಾಧ್ಯಮಗಳ ಹೊಣೆ ಭಾರತದಲ್ಲಿ ಆ ಕೆಲಸವಾಗುವುದೆ ಎನ್ನುವುದು ಯಾವಾಗಲು ಪ್ರಶ್ನೆಯೆ? . ಯಾರದೊ ಮನೆ ಹುಡುಗ ಯಾರದೊ ಹುಡುಗಿ ಜೊತೆ ಹೋದಳು ಎಂದು , ಬ್ರೆಕಿಂಗ್ ನ್ಯೂಸ್ ತೋರಿಸುವ ಮಾಧ್ಯಮಗಳಿಂದ ಇಂತಹ ಗಂಭೀರವಾದ ವಿಷ್ಯಗಳ ನಿರ್ವಹಣೆ ಖಂಡಿತ ಸಾದ್ಯವಿಲ್ಲ

Submitted by hpn Mon, 07/15/2013 - 12:00

In reply to by partha1059

ಮಾಧ್ಯಮಗಳು ಯಾವುದನ್ನು ಪ್ರಸಾರ ಮಾಡುತ್ತವೆ? ಜನರು ಹೆಚ್ಚು ಹೆಚ್ಚು ಓದಲು, ಕೇಳಲು, ನೋಡಲು ಬಯಸುವುದನ್ನು ತಾನೆ?

Submitted by partha1059 Mon, 07/15/2013 - 13:02

In reply to by hpn

ನಾಡಿಗರೆ,
ಮಾಧ್ಯಮಗಳು ಯಾವುದನ್ನು ಪ್ರಸಾರ ಮಾಡುತ್ತವೆ? ಜನರು ಹೆಚ್ಚು ಹೆಚ್ಚು ಓದಲು, ಕೇಳಲು, ನೋಡಲು ಬಯಸುವುದನ್ನು ತಾನೆ?....
ನಾಡಿಗರೆ, ವಾಕ್ಯದಲ್ಲಿ ಅರ್ದ ಮಾತ್ರ ಸತ್ಯ , ಮಾಧ್ಯಮದಲ್ಲಿ ಯಾವುದನ್ನು ಪ್ರಸಾರ ಮಾಡಲಾಗುತ್ತೆ, ಅದನ್ನು ಜನ ಇಷ್ಟವೊ ಕಷ್ಟವೊ ನೋಡುತ್ತಾರೆ ಅಷ್ಟೆ, ಬೇರೆ ದಾರಿ ಇಲ್ಲ, ಕ್ರಮೇಣ ಅಂತಹುದಕ್ಕೆ ಅವರ ಮನಸ್ಸು ಸ್ಥಿರ ಗೊಳ್ಳುತ್ತೆ ಅನ್ನಿಸುತ್ತೆ, ಇಂತಹ ಕಾರ್ಯಕ್ರಮ ಜನರಿಗೆ ಇಷ್ಟೆ ಅನ್ನುವ ಅಂಕಿ ಅಂಶಗಳು ಎಲ್ಲಿಯು ಇಲ್ಲ.
ಪ್ರಸ್ತುತ ಬರಹದ ಬಗ್ಗೆಯು ಅಷ್ಟೆ , ಜನರಿಗೆ ಆಸಕ್ತಿ ಇದ್ದರು ಸಹ, ಮಾಧ್ಯಮಗಳು (ಟೀವಿ) ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡದಿದ್ದರೆ ಜನ ಏನು ಮಾಡಲಾಗುವದಿಲ್ಲ, ಹಾಗಾಗಿ ಎಲ್ಲರು ಸಂಘ ಸಂಸ್ಥೆಗಳ ಮೂಲಕ ಹೂರಾಡುವುದು ಅನಿವಾರ್ಯ. ಆದರೆ ಅಂತಹ ಸಂಘಸಂಸ್ಥೆಗಳನ್ನು ದಮನಮಾಡಲು ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಪ್ರಯತ್ನಿಸುತ್ತವೆ. ಪ್ರಜಾಪ್ರಭುತ್ವದಲ್ಲಿ ದುರಂತ.
ಉದಾಹರಣೆಗೆ: ಭ್ರಷ್ಟಾಚಾರದ ವಿರುದ್ದ ಹೋರಾಟವನ್ನು ಸಂಪೂರ್ಣ ದಾರಿತಪ್ಪಿಸಿ, ಕಡೆಗೆ ಅದನ್ನು ತುಳಿಯಲಾಯಿತು. ಇದರಲ್ಲಿ ಸರ್ಕಾರದ ಜೊತೆ ಮಾದ್ಯಮಗಳು ಜೊತೆಯಾದವು ಅಂದರೆ ತಪ್ಪಿಲ್ಲ .

Submitted by makara Mon, 07/15/2013 - 18:38

ಅಡ್ಡೂರ್ ಸರ್,
ಯಾವುದೇ ಕಾನೂನು ಕಾಯಿದೆಗಳು ಬಂದರೂ ಸರಿ ಅವೇನಿದ್ದರೂ ಸಣ್ಣ ಸಣ್ಣ ಮೀನುಗಳನ್ನು ಬಲೆಯಲ್ಲಿ ಕೆಡುವುದಕ್ಕಷ್ಟೇ ಬಲಿಷ್ಠವಾಗಿರುತ್ತವೆ. ಅವಕ್ಕೆ ತಿಮಿಂಗಲವನ್ನು ಗಾಳ ಹಾಕಿ ಹಿಡಿಯುವುದು ಸಾಧ್ಯವಿಲ್ಲ. ಒಂದು ವೇಳೆ ಸಾರ್ವಜಿನಕ ಮಾಹ ಅಡಿ ರಾಜಕೀಯ ಪಕ್ಷಗಳೂ ಮಾಹಿತಿ ಒದಗಿಸಬೇಕೆಂದು ಕಡ್ಡಾಯಗೊಳಿಸಿದರೆ ಅವರು ಮೊದಲೇ ವೆಬ್‌ಸೈಟೊಂದನ್ನು ಓಪನ್ ಮಾಡಿ ಅದರೊಳಗೆ ತಪ್ಪು ಮಾಹಿತಿ ಒದಗಿಸಲು ಸಾಧ್ಯವಿದ್ದೇ ಇದೆಯಲ್ಲವೇ?

Submitted by ಕೀರ್ತಿರಾಜ್ ಮಧ್ವ Mon, 07/15/2013 - 21:16

ಬರಹಕ್ಕೆ ಧನ್ಯವಾದ. ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಪಡೆಯುವುದು ಹೇಗೆ ಎಂಬ ಬಗ್ಗೆ ಯಾರಾದರೂ ಸುವಿವರವಾಗಿ ಬರೆಯುವಿರಾ ?

Submitted by partha1059 Mon, 07/15/2013 - 21:39

In reply to by ಕೀರ್ತಿರಾಜ್ ಮಧ್ವ

rti.gov.in
ಎಂಬ ಸೈಟ್ ತೆಗೆದು ನೋಡಿ , ಭಾರತದ ಎಲ್ಲ ಭಾಷೆಗಳಲ್ಲಿ, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮಾಹಿತಿ ಹಕ್ಕಿನಡಿ ಮಾಹಿತೆ ಪಡೆಯುವ ವಿದಾನವನ್ನು ಸರ್ಕಾರದವರೆ ತಿಳಿಸಿದ್ದಾರೆ