ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ
ಸೂತ್ರಧಾರ: ಕೇಳಿ ಸಜ್ಜನರೇ, ಒಂದು ದಿನ ಶ್ರೀಕೃಷ್ಣ ದ್ವಾರಕಾನಗರದಲ್ಲಿದ್ದಾಗ ನಾರದ ಅಲ್ಲಿಗೆ ಬರುತ್ತಾನೆ. ಕೃಷ್ಣ ಅವನನ್ನು ಸ್ವಾಗತಿಸಿ ಅದರಾತಿಥ್ಯ ಮಾಡುತ್ತಾನೆ. ನಾರದ ಮಹರ್ಷಿ ಕೃಷ್ಣನಿಗೆ ಒಂದು ದಿವ್ಯವಾದ ಪಾರಿಜಾತದ ಹೂವನ್ನು ಕೊಡುತ್ತಾನೆ. ಕೃಷ್ಣ ಏನು ಮಾಡಿದನಪ್ಪಾ ಅಂದರೆ, ಆ ಪಾರಿಜಾತವನ್ನು ಅತಿ ಪ್ರೀತಿಯಿಂದ ರುಕ್ಮಿಣಿಯ ತುರುಬಿಗೆ ಮುಡಿಸುತ್ತಾನೆ. ಈ ವಿಷಯ ಒಬ್ಬಳು ಸೇವಕಿಯಿಂದ ಸತ್ಯಭಾಮೆಗೆ ಗೊತ್ತಾಗುತ್ತದೆ. ಸವತಿ ಮಾತ್ಸರ್ಯದಿಂದ ಬುಸುಗುಡುವ ಸತ್ಯಭಾಮೆಗೆ ಕೋಪ ಬರುತ್ತದೆ. ಕೃಷ್ಣ ಬರುವ ಸಮಯಕ್ಕೆ ಸರಿಯಾಗಿ ಬಾಗಿಲನ್ನು ಭದ್ರವಾಗಿ ಹಾಕಿಕೊಂಡು ಮಲಗಿಬಿಡುತ್ತಾಳೆ. ಕೃಷ್ಣ ಬಂದು ಬಾಗಿಲು ಬಡಿದರೆ ತೆಗೆಯುವುದೇ ಇಲ್ಲ. ಆಗ ಅವರಿಬ್ಬರ ನಡುವೆ ನಡೆದ ಮಾತುಕತೆ ಏನಪ್ಪಾ ಅಂದ್ರೆ, . . ಬೇಡ, ಬೇಡ, ನಾನು ಹೇಳಿದರೆ ಅದರಲ್ಲಿ ಸ್ವಾರಸ್ಯ ಇರಲ್ಲ. ನೀವೇ ಕೇಳಿ. ಅವರು ಏನು ಮಾತನಾಡಿಕೊಂಡರು ಎಂದು ನಾನು ಹೇಳಿ ನಾನೇಕೆ ಮಧ್ಯ ಸಿಕ್ಕಿ ಹಾಕಿಕೊಳ್ಳಲಿ? ಇನ್ನು, ನೀವುಂಟು ಅವರುಂಟು.
ಕೃಷ್ಣ: ಗಿಣಿಯಂತೆ ಮಾತನಾಡುವವಳೇ, ತಾವರೆ ಹೂವಿನ ಸುಗಂಧದವಳೇ, ಮುದ್ದು ಚೆಲುವೆ ಬಾಗಿಲು ತೆಗೆಯೇ.
ಭಾಮೆ: ಬಾಗಿಲಲ್ಲಿ ನಿಂತು ಏನೇನೋ ಮಾತನಾಡುತ್ತಿರುವವನು ನೀನು ಯಾರು? ಹೇಳಯ್ಯಾ ನಿನ್ನ ಹೆಸರು.
ಕೃಷ್ಣ: ನಾಗವೇಣಿ, ಕೇಳು ಕೇಳೆಲೆ, ನಾನು ವೇಣುಗೋಪಾಲ ಕಣೇ.
ಭಾಮೆ: ನೀನು ವೇಣುಗೋಪಾಲ ಆದರೆ ಒಳ್ಳೆಯದೇ ಆಯಿತು. ಹೋಗಿ ದನ ಮೇಯಿಸು ಹೋಗಯ್ಯಾ.
ಕೃಷ್ಣ: ನಯನ ಮನೋಹರಿ, ನಾನು ಕ್ರೂರ ಕಾಳಿಂಗನ ಹೆಡೆ ಮೆಟ್ಟಿ ಮಣಿಸಿದವನು ಕಣೇ.
ಭಾಮೆ: ಅಂತಹ ಶೂರ ನೀನಾದರೆ ಒಳ್ಳೆಯದಾಯಿತು. ಹೋಗಿ ಹಾವಾಡಿಸು ಹೋಗಯ್ಯಾ.
ಕೃಷ್ಣ: ಜಟ್ಟಿಗಳ ಜಟ್ಟಿಗಳನ್ನೇ ಕುಟ್ಟಿ ಪುಡಿ ಮಾಡಿದಾತ ಬಂದಿರುವೆ, ಬಾಗಿಲು ತೆಗೆಯೇ.
ಭಾಮೆ: ಮಲ್ಲರ ಗೆದ್ದವನಾದರೆ ಇಲ್ಲಿಗೆ ಏಕೆ ಬಂದೆ, ಗರಡಿಗೆ ಹೋಗಿ ಸಾಮು ಮಾಡಯ್ಯಾ.
ಕೃಷ್ಣ: ಜಾಂಬವಂತನನ್ನು ಗೆದ್ದು ಕಾಮಿನಿಯ ಪಡೆದವನು ಕಾಣೇ, ಬಾಗಿಲು ತೆಗಿ.
ಭಾಮೆ: ಹಾಗಾದರೆ ಇಲ್ಲಿಗೆ ಏಕೆ ಬಂದೆ, ಕಾಡಿಗೆ ಹೋಗಿ ಬೇಡರ ಜೊತೆ ಬಾಳು ಹೋಗಯ್ಯಾ.
ಕೃಷ್ಣ: ಕಾಂತಾಮಣಿಯೇ, ವೃಷಭವ ಕಟ್ಟಿ ನೀಲಕಾಂತೆಯನ್ನು ತಂದವನು ನಾನೇ ಕಣೇ.
ಭಾಮೆ: ಅದೇ ಆಟ ಆಡಿ ಸಂತೋಷವಾಗಿರು ಹೋಗಯ್ಯಾ.
ಕೃಷ್ಣ: ಪ್ರಾಣಕಾಂತೆ, ನಿನ್ನನ್ನು ರಮಿಸಿ ಸಂತಸಪಡುವ ನಿನ್ನ ಪ್ರಿಯ ರಮಣ ಬಂದಿರುವೆ, ಬಾಗಿಲು ತೆಗೆಯೇ.
[ರಮಣನೆಂಬ ನುಡಿ ಕೇಳಿ ಖುಷಿಯಾದರೂ ಹೊರಗೆ ತೋರ್ಪಡಿಸದೆ ಸತ್ಯಭಾಮೆ ಬಾಗಿಲು ತೆರೆದು ಹುಸಿ ಮುನಿಸು ತೋರಿ ಪುನಃ ಮಂಚದ ಮೇಲೆ ಮಲಗುವಳು.]
ಕೃಷ್ಣ: ಮುನಿಸು ಬಿಡು ರಮಣಿ, ನಿನಗೆ ಒಂದು ಹೂವು ಕೊಡುವುದು ಏನು ಚಂದ, ನಿನಗೆ ಪಾರಿಜಾತದ ವೃಕ್ಷವನ್ನೇ ತಂದುಕೊಡುವೆ.
[ಇಷ್ಟರಲ್ಲೇ ಭಾಮೆಯ ಹುಸಿಮುನಿಸು ಎಲ್ಲೋ ಮಾಯವಾಗಿ ಪರಸ್ಪರರು ಸಮೀಪಿಸುವಾಗ . . ತೆರೆ ಎಳೆದು ಸೂತ್ರಧಾರ ಧಾವಿಸುವನು.]
ಸೂತ್ರಧಾರ: ನೋಡಿದಿರಾ. ಕೃಷ್ಣ ಏನು ಸಾಧನೆ ಮಾಡಿದ್ದರೇನು. ಭಾಮೆಗೆ ಬೇಕಿದ್ದು ಅವನ ಪ್ರೀತಿ. ಅದನ್ನು ತೋರಿಸಿದ ಮೇಲೆಯೇ ಅವಳು ಒಲಿದು ಬಂದದ್ದು. ಮುಂದೆ ನರಕಾಸುರನ ಹಾವಳಿ ಹೆಚ್ಚಿ ಜನರು ಕಷ್ಟ ಪಡುತ್ತಿರುತ್ತಾರೆ. ಕೃಷ್ಣ ಗರುಡನ ಬೆನ್ನೇರಿ ಭಾಮೆಯೊಂದಿಗೆ ಇಂದ್ರಲೋಕಕ್ಕೆ ಹೋಗುವ ದಾರಿಯಲ್ಲಿ ಪ್ರಾಗ್ಜೋತಿಷಪುರಕ್ಕೆ ಹೋಗಿ ಅಲ್ಲಿದ್ದ ಮುರ, ನರಕಾಸುರ ಮುಂತಾದ ರಾಕ್ಷಸರನ್ನು ಸಂಹರಿಸುತ್ತಾನೆ. ದೇವಲೋಕದಲ್ಲಿ ಕೃಷ್ಣ-ಭಾಮೆಯರಿಗೆ ಅದ್ಭುತವಾದ ಸ್ವಾಗತ ದೊರೆಯುತ್ತದೆ. ಕೃಷ್ಣ ಬೇಡವೆಂದರೂ ಕೇಳದೆ ಭಾಮೆ ದೇವಲೋಕದಲ್ಲಿದ್ದ ಪಾರಿಜಾತದ ವೃಕ್ಷವನ್ನು ಬೇರುಸಹಿತ ಕಿತ್ತು ಗರುಡನ ಬೆನ್ನ ಮೇಲೆ ಇಟ್ಟುಬಿಡುತ್ತಾಳೆ. ಈ ಕಾರಣಕ್ಕೆ ಇಂದ್ರನಿಗೂ, ಕೃಷ್ಣನಿಗೂ ಯುದ್ಧವಾಗಿ ಇಂದ್ರನ ಗರ್ವಭಂಗವೂ ಈ ನೆಪದಲ್ಲಿ ಆಗುತ್ತದೆ. ಲೋಕ ಕಲ್ಯಾಣವೂ ಆಗುತ್ತದೆ.
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿದ್ ದುಃಖ ಭಾಗಿನಃ ||
******
ರಚನೆ: ಕ.ವೆಂ.ನಾಗರಾಜ್.
ಸಲಹೆ: ಈ ಕಿರುರೂಪಕದ ಪ್ರಾರಂಭದಲ್ಲಿ ಕೃಷ್ಣನ ಕುರಿತು ಒಂದು ಹಾಡನ್ನೋ ಅಥವ ನೃತ್ಯವನ್ನೋ ಜೋಡಿಸಿಕೊಳ್ಳಬಹುದು.
ಆಧಾರ: ೧೮ನೆಯ ಶತಮಾನದ ಕೆಳದಿ ಸುಬ್ಬಕವಿಯ 'ಪಾರಿಜಾತ' ಕೃತಿಯ ಭಾಗ.
Comments
ಉ: ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ
ಕವಿ ನಾಗರಾಜರೆ, ಶ್ರೀ ಕೃಷ್ಣ ಪಾರಿಜಾತ ಕಿರುರೂಪಕ ಓದುತ್ತಿದ್ದರೆ ಸ್ಟೇಜಿನ ಚಿತ್ರ ಕಣ್ಮುಂದೆ ಬಂದು, ಎದುರಿಗೆ ನಡೆಯುತ್ತಿರುವಂತೆ ಭಾಸವಾಯ್ತು. ನಿರೂಪಣೆ ಚೆನ್ನಾಗಿ ಬಂದಿದೆ, ಆದರೆ ಸ್ವಲ್ಪ ಆತುರದಲ್ಲಿ ಮುಗಿಯಿತೇನೊ ಅನಿಸಿತು (ಇನ್ನು ಬೇಕಿತ್ತು ಅನ್ನುವಾಗಲೆ , ಊಟ ಮುಗಿಸಿ ಎದ್ದರೆ ಒಳ್ಳೆಯದು ಅನ್ನುತ್ತಾರದರೂ...) ಆದರೆ ಕಿರುರೂಪಕ ಎಂದು ಮೊದಲೆ ಹೇಳಿಬಿಟ್ಟಿದ್ದೀರಾ :-)
- ನಾಗೇಶ ಮೈಸೂರು
In reply to ಉ: ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ by nageshamysore
ಉ: ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ
:)) ಧನ್ಯವಾದ, ನಾಗೇಶರೇ. ಇನ್ನೂ ಎಳೆಯುವುದು ಬೇಡವೆಂದೆಣಿಸಿ ಮುಗಿಸಿದೆ. ನೀವು ಹೇಳಿದಂತೆ ಇನ್ನೂ ಬೇಕು ಅನ್ನಿಸಿದಾಗಲೇ ಮುಗಿಸಿದರೆ ರುಚಿ ಜಾಸ್ತಿ!!
ಉ: ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ
ನಾನು ಹೈಸ್ಕೂಲ್ ಓದುವ ಸಮಯದಲ್ಲಿ ರಾಜ್ ಕುಮಾರ್ ಸಿನಿಮಾ ಒಂದು ಬಂದಿತ್ತು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ ಅದರ ಹೆಸರು, ಅದರಲ್ಲಿ ಕೃಷ್ಣ ಪಾರಿಜಾನ ನಾಟಕದ ಪೂರ್ಣ ಹಾಡಿತ್ತು, ನಮೊ ನಮೊ ಶ್ರೀ ಕೃಷ್ಣಮುರಾರಿ... ಎಂದು ಪ್ರಾರಂಬವಾಗುವ ಆ ಹಾಡು ಸುಮಾರು ೧೫ ನಿಮಿಷ, ಈಗ ಆ ಹಾಡು ನೆನಪಿಗೆ ಬಂದಿತು ಆದರೆ ಅದರ ಪೂರ್ಣಪಾಠ ಎಲ್ಲಿಯು ಸಿಗುತ್ತಿಲ್ಲ ...
ನಿಮ್ಮ ಬರಹ ಆ ಹಾಡನ್ನು ನೆನಪಿಗೆ ತಂದಿತು :-)
In reply to ಉ: ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ by partha1059
ಉ: ಕಿರು ರೂಪಕ: ಕೃಷ್ಣ-ಸತ್ಯಭಾಮೆಯರ ಸಂಭಾಷಣೆ
:)) ನಾನೂ ಕೇಳಿರುವೆ. ಅದರಲ್ಲಿ ನಾರದ ಭಾಮೆಗೆ ವಿಷಯ ತಿಳಿಸುವ ಪ್ರಸಂಗವಿದೆ. ಧನ್ಯವಾದ ಪಾರ್ಥರೇ.