೬೯. ಶ್ರೀ ಲಲಿತಾ ಸಹಸ್ರನಾಮ ೨೫೧ರಿಂದ ೨೫೪ನೇ ನಾಮಗಳ ವಿವರಣೆ

೬೯. ಶ್ರೀ ಲಲಿತಾ ಸಹಸ್ರನಾಮ ೨೫೧ರಿಂದ ೨೫೪ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೫೧ - ೨೫೪

Cinmayī चिन्मयी (251)

೨೫೧. ಚಿನ್ಮಯೀ

             ಚಿನ್ಮಯೀ ಎಂದರೆ ದೇವಿಯು ಶುದ್ಧ ಚೈತನ್ಯದ ಸ್ವರೂಪದಲ್ಲಿದ್ದಾಳೆನ್ನುವುದನ್ನು ಸೂಚಿಸುತ್ತದೆ.  ಶುದ್ಧ ಚೈತನ್ಯದ ಹಂತದಲ್ಲಿ ಜ್ಞಾತೃ, ಜ್ಞಾನ, ಜ್ಞೇಯ ಈ ಮೂರು ತ್ರಿಪುಟಿಗಳಿಗೆ ಭೇದವಿರುವುದಿಲ್ಲ. ಈ ತ್ರಿಪುಟಿಗಳು ಇಲ್ಲದಿರುವ ಸ್ಥಿತಿಯೇ ಶುದ್ಧ ಚೈತನ್ಯದ ಹಂತವಾಗಿದೆ.  ಇನ್ನಷ್ಟು ವಿವರಗಳಿಗೆ ೨೫೪ನೇ ನಾಮವನ್ನೂ ನೋಡಿ. 

ಚೈತನ್ಯದ ಬಗೆಗೆ ಹೆಚ್ಚಿನ ವಿವರಗಳು:

             ಚೈತನ್ಯ ಅಥವಾ ಪ್ರಜ್ಞೆ ಎಂದರೆ ಈ ಹಂತದಲ್ಲಿ ಒಬ್ಬನಿಗೆ ತನ್ನ ಹಾಗೂ ತನ್ನ ಬಾಹ್ಯ ಪರಿಸ್ಥಿತಿಯ ಬಗ್ಗೆ ಅರಿವಿರುತ್ತದೆ. ಬ್ರಹ್ಮವು ಶುದ್ಧ ಚೈತನ್ಯವಾಗಿದ್ದು ಅದನ್ನೇ ಚಿತ್ ಎಂದು ಕರೆಯಲಾಗಿದೆ. ಯಾವಾಗ ಚಿತ್ ಎನ್ನುವುದು ಭಗವಂತನ ಸ್ವರೂಪವಾಗಿ ಬ್ರಹ್ಮಾಂಡ ಪ್ರಜ್ಞೆಯನ್ನು ಬಿಂಬಿಸುತ್ತದೆಯೋ ಆಗ ಅದು ತನ್ನ ಸರ್ವಜ್ಞತ್ವ ಮತ್ತು ಸರ್ವಶಕ್ತ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ. ಯಾವಾಗ ಅದು ವ್ಯಕ್ತಿಗತ ಪ್ರಜ್ಞೆಯಾಗಿ ಬಿಂಬಿತವಾಗುತ್ತದೆಯೋ ಆಗ ಪರಮ ಪ್ರಜ್ಞೆಯ ಸ್ಥಿತಿಯಿಂದ ಪರಿಮಿತವಾದ ಪ್ರಜ್ಞೆಯ ಸ್ಥಾಯಿಗೆ ಇಳಿಯುತ್ತದೆ. ಇದನ್ನೇ ಚಿತ್ತ ಅಥವಾ ವ್ಯಕ್ತಿಗತ ಪ್ರಜ್ಞೆ ಎಂದು ಕರೆಯಲಾಗುತ್ತದೆ. ಬ್ರಹ್ಮಾಂಡ ಪ್ರಜ್ಞೆಯು ಪ್ರಕೃತಿಯ ಸ್ಥೂಲ ರೂಪಾಂತರದ ಅನಾವರಣವನ್ನು (ವಿಕಾಸವನ್ನು) ಪ್ರಚೋದಿಸುತ್ತದೆ ಮತ್ತು ವ್ಯಕ್ತಿಗತ ಪ್ರಜ್ಞೆಯು ಸೂಕ್ಷ್ಮರೂಪದ ರೂಪಾಂತರಗಳನ್ನು ಪ್ರಚೋದಿಸುತ್ತದೆ. ಚಿತ್ ಮತ್ತು ಚಿತ್ತಗಳೆರಡೂ ಪ್ರಕೃತಿಯ ವಿಕಸನದ ಕ್ರಿಯೆಗಳನ್ನು ಚಾಲನೆಯಲ್ಲಿಡುತ್ತವೆ. ಪ್ರಜ್ಞೆಗೆ ವಿವಧ ಸ್ಥಾಯಿಯ ಹಂತಗಳಿವೆ ಅವುಗಳಲ್ಲಿ ಅತ್ಯಂತ ಕೆಳಗಿನ ಮಟ್ಟದ್ದು ಕ್ರಿಯಾಶೀಲ ಹಂತವಾದರೆ ಅವುಗಳಲ್ಲಿ ಉನ್ನತ ಸ್ತರಗಳಲ್ಲಿರುವುದು ತುರ್ಯಾವಸ್ಥೆ  ಆದರೆ ಪರಮೋನ್ನತವಾದದ್ದು ‘ತುರಿಯಾತೀತ’ವಾಗಿದೆ.

Paramānandā परमानन्दा (252)

೨೫೨. ಪರಮಾನಂದಾ

             ದೇವಿಯು ಪರಮಾನಂದದ ಮೂರ್ತರೂಪವಾಗಿದ್ದಾಳೆ. ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ. ಯಾವಾಗ ಚೈತನ್ಯವು ಶುದ್ಧವಾಗಿರುವುದೋ ಅಗ ಅದು ನಮ್ಮನ್ನು ಅತ್ಯುನ್ನತವಾದ ಸಂತೋಷದೆಡೆಗೆ ಕೊಂಡೊಯ್ಯುತ್ತದೆ; ಅದನ್ನೇ ಪರಮಾನಂದವೆಂದು ಕರೆಯಲಾಗಿದೆ.

              ಮಾಯೆಯನ್ನು ಕೈಬಿಟ್ಟಾಗ ಮಾತ್ರವೇ ಶುದ್ಧ ಚೈತನ್ಯದ ಹಂತವನ್ನು ತಲುಪಬಹುದು. ಮಾಯೆ ಅಥವಾ ಭ್ರಮೆಯನ್ನು ಹೋಗಲಾಡಿಸಿಕೊಳ್ಳಬೇಕೆಂದರೆ ಒಬ್ಬನು ನಿರಂತರವಾಗಿ ದೇವಿಯನ್ನು ನೆನೆಯುತ್ತಿರಬೇಕು. ಇದರ ಅರ್ಥ ಒಬ್ಬನು ತನ್ನ ದೈನಂದಿನ ಕೆಲಸಗಳನ್ನೆಲ್ಲಾ ಬದಿಗೊತ್ತಿ, ಏಕಾಂತ ಸ್ಥಳದಲ್ಲಿ ಕುಳಿತು ಅವಳನ್ನೇ ಕುರಿತು ಆಲೋಚಿಸ ಬೇಕಂದಲ್ಲ. ಇಲ್ಲಿ ವಿಧಿಸಲ್ಪಟ್ಟ ಕಾರ್ಯಗಳನ್ನು ಮಾಡುತ್ತಾ ಆ ಕಾರ್ಯಗಳನ್ನು ದೇವಿಯ ಆದೇಶದಂತೆ ಮಾಡುತ್ತಿದ್ದೇನೆಂಬ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿ ಮಾಡಬೇಕು, ಇದುವೇ ಅತ್ಮಸಾಕ್ಷಾತ್ಕಾರದ ತಿರುಳಾಗಿದೆ. ಯಾವಾಗ ಎಲ್ಲಾ ಕಾರ್ಯಗಳನ್ನು ದೇವಿಯ ಪರವಾಗಿ ಮಾಡುತ್ತಿರುವೆನೆಂಬ ಭಾವನೆಯಿಂದ ಮಾಡುತ್ತೇವೆಯೋ ಆಗ ಸಂತೋಷ ಅಥವಾ ದುಃಖದ ಪ್ರಶ್ನೆಯೇ ಏಳುವುದಿಲ್ಲ ಏಕೆಂದರೆ ಅದರ ಫಲಾಫಲಗಳನ್ನು ದೇವಿಗೇ ಅರ್ಪಿಸಿರುತ್ತೇವಾದ್ದರಿಂದ ಮತ್ತು ಒಬ್ಬನು ಕರ್ಮವನ್ನು ಮಾಡದೇ ಇರುವುದರಿಂದ ಅದರ ಕರ್ಮಫಲಗಳು ಅವನನ್ನು ಅಂಟಿಕೊಳ್ಳುವುದಿಲ್ಲ.  ಒಬ್ಬನ ಶರೀರಕ್ಕೆ ಬಾಧೆಯುಂಟಾಗಬಹುದು ಆದರೆ ಅವನ ಮನಸ್ಸಿಗಲ್ಲ. ಅವನ ಮನಸ್ಸು ಸಂತೋಷ ಮತ್ತು ದುಃಖಗಳನ್ನು ಸಮಾನಾಗಿಯೇ ಸ್ವೀಕರಿಸುತ್ತದೆ. ಈ ಹಂತವನ್ನು ತಲುಪಲು ಮಾಯೆಯ ಮುಸುಕಿನಿಂದ ಹೊರಬರಬೇಕು; ಈ ಹಂತದಲ್ಲಿ "ಅದುವೇ ನಾನು" ಎನ್ನುವ ಅನುಭೂತಿಯು ಉಂಟಾಗುತ್ತದೆ.

              ಛಾಂದೋಗ್ಯ ಉಪನಿಷತ್ತಿನ ೭ನೇ ಅಧ್ಯಾಯದ ೨೩ನೇ ಖಂಡದ ೧ನೇ ಶ್ಲೋಕವು ಹೀಗೆ ಹೇಳುತ್ತದೆ; "ಯೋ ವೈ ಭೂಮಾ ತತ್ ಸುಖಂ ನಾಲ್ಪೇ ಸುಖಮಸ್ತಿ ಭೂಮೈವ ಸುಖಂ ಭೂಮಾತ್ವೇವ ವಿಜಿಜ್ಞಾಸಿತವ್ಯ ಇತಿ ಭೂಮಾನಾಂ ಭಗವೋ ವಿಜಿಜ್ಞಾಸ ಇತಿ" ಅಂದರೆ "ಯಾವುದು ಭೂಮವೋ ಅದು ಸುಖವು, ಅಲ್ಪದಲ್ಲಿ ಸುಖವಿಲ್ಲ, ಭೂಮವೇ ಸುಖವು, ಭೂಮವನ್ನು ತಿಳಿದುಕೊಳ್ಳಲು ಬಯಸಬೇಕು"

             ಕೃಷ್ಣನೂ ಸಹ ಭಗವದ್ಗೀತೆಯಲ್ಲಿ (೬.೨೦), "ಸಾಧನೆಯ ಮೂಲಕ ನಿಯಂತ್ರಣದಲ್ಲಿಡಲ್ಪಟ್ಟ ಮನಸ್ಸು ನಿಶ್ಚಲವಾಗಿದ್ದು ಅದರಲ್ಲಿ ಆತ್ಮನು ಅರಿಯಲ್ಪಟ್ಟು ಜೀವಿಯು ಸಂತೋಷವನ್ನು ಹೊಂದುತ್ತಾನೆ" ಎಂದು ಹೇಳುತ್ತಾನೆ.

Vijñānaghana-rūpiṇī विज्ञानघन-रूपिणी (253)

೨೫೩. ವಿಜ್ಞಾನಘನ-ರೂಪಿಣೀ

            ದೇವಿಯು ಶುದ್ಧ ಚೈತನ್ಯದ ಸ್ವರೂಪವಾಗಿದ್ದಾಳೆ. ಸ್ವರೂಪವೆಂದರೆ ಇಲ್ಲಿ ಪ್ರಜ್ಞೆಯ ಸೂಕ್ಷ್ಮರೂಪವಾಗಿದೆ. ಆನಂದ ಅಥವಾ ಅತ್ಯುನ್ನತ ಸಂತೋಷವು ಪ್ರಜ್ಞೆಯ ಸ್ಥೂಲ ರೂಪವಾಗಿದೆ. ಇದನ್ನೇ ಬೃಹದಾರಣ್ಯಕ ಉಪನಿಷತ್ತಿನಲ್ಲಿ (೨.೪.೧೨) ಸುಂದರವಾಗಿ ವರ್ಣಿಸಲಾಗಿದೆ, "ಶುದ್ಧ ಮತ್ತು ಸೂಕ್ಷ್ಮರೂಪದ ಪ್ರಜ್ಞೆಯೆಂದರೆ ನೀರಿನಲ್ಲಿ ಒಂದು ಚಿಟಿಕೆ ಉಪ್ಪನ್ನು ಹಾಕಿದಂತೆ. ಅದು ನೀರಿನಲ್ಲಿ ಕರಗಿದಾಗ ಅದನ್ನು ನೀರಿನಿಂದ ಬೇರ್ಪಡಿಸಲಾಗದು. ಒಂದು ಚಿಟಿಕೆ ಉಪ್ಪು (ಸೂಕ್ಷ್ಮವು) ಮಡಕೆಯಲ್ಲಿರುವ ಇಡೀ ನೀರನ್ನು (ಸ್ಥೂಲವನ್ನು) ಉಪ್ಪನ್ನಾಗಿ ಪರಿವರ್ತಿಸುತ್ತದೆ. ಹೇಗೆ ಉಪ್ಪಿನಿಂದ ಆವರಿಸಲ್ಪಡುವ ನೀರು ಕ್ರಮೇಣವಾಗಿ ತನ್ನತನವನ್ನು ಕಳೆದುಕೊಳ್ಳುತ್ತದೆಯೋ ಅದೇ ರೀತಿ ಪ್ರತ್ಯೇಕವಾಗಿ ಹೊರಹೊಮ್ಮಿದ್ದ ನಾನು ಎನ್ನುವ ಅಹಂಕಾರ ಅಥವಾ ಅಹಂಭಾವವು ನಾಶವಾಗುತ್ತದೆ. ಹೀಗೆ ಅಹಂಕಾರವು ನಾಶವಾದ ನಂತರ ಕೇವಲ ಪರಮೋನ್ನತವಾದ ಆತ್ಮವು (ಪರಮಾತ್ಮವು) ಉಳಿಯುತ್ತದೆ. ಯಾವಾಗ ಈ ಹಂತವನ್ನು ತಲುಪುತ್ತೇವೆಯೋ ಆಗ ಪ್ರಜ್ಞೆ ಎನ್ನುವ ಪ್ರಶ್ನೆಯೂ ಉದ್ಭವಿಸದು. ಹಾಗಾದರೆ ಈ ಶುದ್ಧವಾದ ಚೈತನ್ಯವು ಹೇಗಿರುತ್ತದೆ? ಈ ಉಪನಿಷತ್ತು (೩.೪.೨) ಮುಂದುವರಿಯುತ್ತಾ ಹೀಗೆ ಹೇಳುತ್ತದೆ, "ಈ ನಿನ್ನೊಳಗಿರುವ ಆತ್ಮವೇ ಎಲ್ಲರೊಳಗೆ ಇದೆ. ಉಳಿದದ್ದೆಲ್ಲಾ (ಸ್ಥೂಲ ಶರೀರವೆಲ್ಲಾ) ನಾಶಹೊಂದುತ್ತದೆ".

            ಇನ್ನೊಂದು ರೀತಿಯಾದ ವ್ಯಾಖ್ಯಾನವೂ ಇದೆ. ವಿಜ್ಞಾನವೆಂದರೆ ಆತ್ಮ ಅಥವಾ ಜೀವ ಮತ್ತು ವಿಜ್ಞಾನಘನ ಎಂದರೆ ಪ್ರಪಂಚದಲ್ಲಿರುವ ಒಟ್ಟು ಆತ್ಮಗಳು. ಈ ಸಂಪೂರ್ಣ ಮೊತ್ತದ ಆತ್ಮಗಳನ್ನು ಹಿರಣ್ಯಗರ್ಭವೆಂದು (ಬಂಗಾರದ ಮೊಟ್ಟೆಯೆಂದು ಕರೆಯಲಾಗಿದೆ - ನಾಮ ೨೩೨ನ್ನು ನೋಡಿ). ವಿಜ್ಞಾನವನ್ನು ಹೀಗೆ ವಿವರಿಸಬಹುದು, ಬ್ರಹ್ಮದ ಮೂರು ವಿಧ ಕ್ರಿಯೆಗಳಾದ - ಸೃಷ್ಟಿ, ಸ್ಥಿತಿ, ಲಯಗಳಲ್ಲಿ ತನ್ನನ್ನು ತಾನು ಸಂಪೂರ್ಣ ಸ್ವತಂತ್ರ‍ವಾಗಿ ಅಭಿವ್ಯಕ್ತಗೊಳಿಸುಕೊಳ್ಳುವುದು. ಸಂಪೂರ್ಣ ಸೃಷ್ಟಿಯಲ್ಲಿ ಕಂಡು ಬರುವ ವಿಷಯ ಮತ್ತು ವಸ್ತು ಇವೆಲ್ಲವೂ ಕೇವಲ ವಿಜ್ಞಾನದ ಪ್ರತಿಬಿಂಬಗಳಾಗಿವೆ"

            ಈ ವ್ಯಾಖ್ಯಾನವನ್ನು ಪ್ರಶ್ನ ಉಪನಿಷತ್ತು (೫.೨) ಮತ್ತಷ್ಟು ವಿಶದ ಪಡಿಸುತ್ತದೆ, ಅದು ಹೀಗೆ ಹೇಳುತ್ತದೆ, “ಸ ಏತಸ್ಮಾಜ್ಜೀವಘನಾತ್ ಪರಾತ್ಪರಂ” ಅಂದರೆ "ಅವನು (ಬ್ರಹ್ಮನು) ಎಲ್ಲಾ ಜೀವಿಗಳ ಒಟ್ಟು ಮೊತ್ತವಾದ ಹಿರಣ್ಯಗರ್ಭಕ್ಕಿಂತಲೂ ಉನ್ನತವಾದದ್ದು"

Dhyāna-dhātṛ-dhyeya-rūpā ध्यान-धातृ-ध्येय-रूपा (254)

೨೫೪. ಧ್ಯಾನ-ಧಾತೃ-ಧ್ಯೇಯ-ರೂಪಾ

            ದೇವಿಯು ತ್ರಿಪುಟಿಯ ರೂಪದಲ್ಲಿದ್ದಾಳೆ - ಧ್ಯಾನ, ಧ್ಯಾನಿ ಮತ್ತು ಧ್ಯಾನದ ಗುರಿ (ಲಕ್ಷ್ಯ). ಈ ತ್ರಿಪುಟಿಯು ಮತ್ತೊಂದು ತ್ರಿಪುಟಿಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ, ಅದೆಂದರೆ, ಜ್ಞಾನಿ, ಜ್ಞಾತೃ ಮತ್ತು ಜ್ಞೇಯ. ಉನ್ನತವಾದ ಆಧ್ಯಾತ್ಮಿಕ ಜ್ಞಾನವನ್ನು ಕೇವಲ ಧ್ಯಾನದಿಂದ ಮಾತ್ರವೇ ಪಡೆಯಬಹುದಾಗಿದೆ. ಧ್ಯಾನವೆಂದರೆ ಮನಸ್ಸನ್ನು ಶಕ್ತಿಯುತವಾಗಿ ಕೇಂದ್ರೀಕರಿಸುವುದು. ಗ್ರಂಥಗಳನ್ನು ಓದುವುದು ಮತ್ತು ಹರಿಕಥೆಗಳನ್ನು ಕೇಳುವುದು ಜ್ಞಾನವಾಗಲಾರದು. ಆಂತರಿಕ ಜಿಜ್ಞಾಸೆ ಮತ್ತು ಶೋಧನೆಯಿಂದ ಮಾತ್ರವೇ ಜ್ಞಾನವು ಹೊಂದಲ್ಪಡುತ್ತದೆ (Knowledge is attained through internal quest and exploration). ಜ್ಞಾನದ ಸಂಗ್ರಹಾಗಾರವು ಬಾಹ್ಯವಾದುದಲ್ಲ ಆದರೆ ಆಂತರ್ಯದಲ್ಲಿರುವುದು. ಈ ಸಂಗ್ರಹಾಗಾರವು ಪರಮಾತ್ಮವಲ್ಲದೆ ಬೇರೆಯಲ್ಲ. ೨೫೧ನೇ ನಾಮವನ್ನೂ ಸಹ ನೋಡಿ.

           ಪತಂಜಲಿಯ ಯೋಗ ಸೂತ್ರ (೩.೨) ಇದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ. "ಅಕುಂಠಿತವಾಗಿ ಮನಸ್ಸಿನ ಚಲನೆಗಳನ್ನು ಲಕ್ಷ್ಯದೆಡೆಗೆ ಕೇಂದ್ರೀಕರಿಸುವುದೇ ಧ್ಯಾನ".

ಕಾಶ್ಮೀರ ಶೈವ ಸಿದ್ಧಾಂತವು ವಿಶಿಷ್ಠವಾದ ಅದ್ವೈತ ತತ್ವವನ್ನು ಹೊಂದಿದೆ ಅದನ್ನು ’ತ್ರೈಕ’ ಅಂದರೆ ಶಿವ, ಶಕ್ತಿ ಮತ್ತು ನರ ಅಥವಾ ಜೀವಿ ಇವುರುಗಳನ್ನು ಒಳಗೊಂಡ ತ್ರಿಪುಟಿ ಎನ್ನುತ್ತಾರೆ. 

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 251-254 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.  

 

Rating
Average: 5 (1 vote)

Comments

Submitted by nageshamysore Tue, 07/16/2013 - 19:10

ಶ್ರೀಧರರೆ, ಲಲಿತಾ ಸಹಸ್ರನಾಮ ೨೫೧ - ೨೫೪ ತಮ್ಮ ಅವಗಾಹನೆ / ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು
೨೫೧. ಚಿನ್ಮಯೀ
ಜ್ಞಾತೃ ಜ್ಞಾನ ಜ್ಞೇಯಗಳೆಂಬ ಮೂರು ತ್ರಿಪುಟಿ
ಶುದ್ಧ ಚೈತನ್ಯ ಹಂತದಲಿ ಭೇಧವಿರದಾ ಸ್ಥಿತಿ
ತ್ರಿಪುಟಿಗಳಿಲ್ಲದ ಸ್ಥಿತಿ ಶುದ್ಧ ಚೈತನ್ಯದ ಹಂತ
ಶುದ್ಧಚೈತನ್ಯ ಸ್ವರೂಪಿಣಿ ಚಿನ್ಮಯೀ ಶ್ರೀಲಲಿತ!
ಚೈತನ್ಯ:
ಶುದ್ಧ ಚೈತನ್ಯ ಪರಮಾ ಪ್ರಜ್ಞ ಬ್ರಹ್ಮವೆ ಚಿತ್ ಸ್ವರೂಪಾ
ಪರಿಮಿತ ಪ್ರಜ್ಞಾ ಸ್ಥಾಯಿಯ ಚಿತ್ತವಾಗಿ ವ್ಯಕ್ತಿಗತ ರೂಪ
ಪ್ರಕೃತಿ ಸ್ಥೂಲ ರೂಪಾಂತರ ವಿಕಸನಕೆ ಬ್ರಹ್ಮಾಂಡಪ್ರಜ್ಞೆ
ಸೂಕ್ಷ್ಮ ರೂಪಾಂತರಕೆ ವ್ಯಕ್ತಿಗತ ಪ್ರಜ್ಞ್ನೆ ವಿಕಾಸ ಚಾಲನೆ!
೨೫೨. ಪರಮಾನಂದಾ
ಮಾಯೆಯೆಂಬುದೆ ಉರುಳು ತ್ಯಜಿಸುವುದರಲ್ಲಿದೆ ತಿರುಳು
ನಿರಂತರ ಧ್ಯಾನಿಸೆ ದೇವಿಯ ಆತ್ಮಸಾಕ್ಷಾತ್ಕಾರದ ಕೊಳಲು
ಫಲಾಫಲ ದೇವಿಗೆ ಸಮರ್ಪಿಸಿ ಮಾಯೆಯಿಂದಾಚೆಗೆ ಬಂದ
ಶುದ್ಧಚೈತನ್ಯ ಮೂರ್ತರೂಪೀ ಲಲಿತೆ ನೀಡಿ ಪರಮಾನಂದಾ!
 
೨೫೩. ವಿಜ್ಞಾನಘನ-ರೂಪಿಣೀ 
ಪ್ರಜ್ಞೆಯ ಸ್ಥೂಲರೂಪವೆ ಆನಂದ ನೀರಲಿ ಉಪ್ಪಿನ ತರ
ನೀರಂತಾಗೆ ಅಹಂನಾಶ ಮಿಕ್ಕ ಪರಮಾತ್ಮವಷ್ಟೆ ಪ್ರಖರ
ಶುದ್ದ ಚೈತನ್ಯ ಸ್ವರೂಪದಿ ದೇವಿ ಪ್ರಜ್ಞೆಯ ಸೂಕ್ಷ್ಮ ರೂಪ
ಒಟ್ಟಾತ್ಮವೆ ಹಿರಣ್ಯಗರ್ಭ ವಿಜ್ಞಾನ ಸ್ವ-ಅಭಿವ್ಯಕ್ತಿ ಸ್ವರೂಪ!
೨೫೪. ಧ್ಯಾನ-ಧಾತೃ-ಧ್ಯೇಯ-ರೂಪಾ 
ಉನ್ನತ ಆಧ್ಯಾತ್ಮಿಕ ಜ್ಞಾನ ಪಡೆಯಲು ಬೇಕು ಧ್ಯಾನ
ಆಂತರಿಕ ಜಿಜ್ಞಾಸೆ ಶೋಧ ಫಲ ಆಂತರ್ಯದೆ ಜತನ
ಸಂಗ್ರಹಾಗಾರ ಪರಮಾತ್ಮ ಮನಸಾಗಿಸಿ ಕೇಂದ್ರೀಕೃತ
ಧ್ಯಾನ ಧ್ಯಾನಿ ಲಕ್ಷ್ಯದಿಂ ನಡೆ ಜ್ಞಾನಿ ಜ್ಞಾತೃ ಜ್ಞೇಯದತ್ತ!
   

ನಾಗೇಶರೆ,
ಈ ಕವನಗಳನ್ನು ಓದುತ್ತಿದ್ದರೆ ಇದರಲ್ಲಿರುವ ಓದು (ಬರಹ), ಓದುಗ ಮತ್ತು ಬರಹಗಾರರ ತ್ರಿಪುಟಿ ಏಕವಾಂತದಂತೆನಿಸುತ್ತಿದೆ.

೨೫೧. ಚಿನ್ಮಯೀ ...ಸರಿಯಾಗಿದೆ
ಚೈತನ್ಯ:
ಶುದ್ಧ ಚೈತನ್ಯ ಪರಮಾ ಪ್ರಜ್ಞ ಬ್ರಹ್ಮವೆ ಚಿತ್ ಸ್ವರೂಪಾ
ಪರಮಾ ಪ್ರಜ್ಞ = ಪರಮ ಪ್ರಜ್ಞಾ
:
:
೨೫೨. ಪರಮಾನಂದಾ
ಮಾಯೆಯೆಂಬುದೆ ಉರುಳು ತ್ಯಜಿಸುವುದರಲ್ಲಿದೆ ತಿರುಳು
ಮಾಯೆಯೆಂಬುದೆ=ಮಾಯೆಯಂಬ
:
:
೨೫೩. ವಿಜ್ಞಾನಘನ-ರೂಪಿಣೀ
:
ನೀರಂತಾಗೆ ಅಹಂನಾಶ ಮಿಕ್ಕ ಪರಮಾತ್ಮವಷ್ಟೆ ಪ್ರಖರ
=ನೀರಂತೆ ನಾಶವಾಗೆ ಅಹಂ ಮಿಕ್ಕ ಪರಮಾತ್ಮವಷ್ಟೆ ಪ್ರಖರ
:
:
೨೫೪. ಧ್ಯಾನ-ಧಾತೃ-ಧ್ಯೇಯ-ರೂಪಾ
:
:
ಧ್ಯಾನ ಧ್ಯಾನಿ ಲಕ್ಷ್ಯದಿಂ ನಡೆ ಜ್ಞಾನಿ ಜ್ಞಾತೃ ಜ್ಞೇಯದತ್ತ!
ಲಕ್ಷ್ಯದಿಂ=ಶಬ್ದ ಚೆನ್ನಾಗಿದೆ ಆದರೆ ಹಿಂದಿನ ಪದಗಳ ದೃಷ್ಟಿಯಿಂದ ’ಧ್ಯೇಯ’ ಪದ ಉಪಯೋಗಿಸಲು ಸಾಧ್ಯವೇ ನೋಡಿ.

ಈ ಅಲ್ಪ ಬದಲಾವಣೆಗಳನ್ನು ಮಾಡಿದರೆ ಸಾಕೆನಿಸುತ್ತದೆ.
ವಂದನಗೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮ ಸಲಹೆಗಳನ್ನೊಳಗೊಂಡ ತಿದ್ದುಪಡಿಗಳನ್ನು ಸೇರಿಸಿ ಅಂತಿಮ ಕೊಂಡಿಗೂ ಬಿಡುಗಡೆ ಮಾಡಿದ್ದೇನೆ. ಮತ್ತೇನಾದರೂ ತಿದ್ದುವುದಿದ್ದರು, ಅಲ್ಲಿ ತಿದ್ದಿಕೊಳ್ಳಬಹುದು.

ಲಲಿತಾ ಸಹಸ್ರನಾಮ ೨೫೧ - ೨೫೪
___________________________

೨೫೧. ಚಿನ್ಮಯೀ
ಜ್ಞಾತೃ ಜ್ಞಾನ ಜ್ಞೇಯಗಳೆಂಬ ಮೂರು ತ್ರಿಪುಟಿ
ಶುದ್ಧ ಚೈತನ್ಯ ಹಂತದಲಿ ಭೇಧವಿರದಾ ಸ್ಥಿತಿ
ತ್ರಿಪುಟಿಗಳಿಲ್ಲದ ಸ್ಥಿತಿ ಶುದ್ಧ ಚೈತನ್ಯದ ಹಂತ
ಶುದ್ಧಚೈತನ್ಯ ಸ್ವರೂಪಿಣಿ ಚಿನ್ಮಯೀ ಶ್ರೀಲಲಿತ!

ಚೈತನ್ಯ:
ಶುದ್ಧ ಚೈತನ್ಯ ಪರಮ ಪ್ರಜ್ಞಾ ಬ್ರಹ್ಮವೆ ಚಿತ್ ಸ್ವರೂಪಾ
ಪರಿಮಿತ ಪ್ರಜ್ಞಾ ಸ್ಥಾಯಿಯ ಚಿತ್ತವಾಗಿ ವ್ಯಕ್ತಿಗತ ರೂಪ
ಪ್ರಕೃತಿ ಸ್ಥೂಲ ರೂಪಾಂತರ ವಿಕಸನಕೆ ಬ್ರಹ್ಮಾಂಡಪ್ರಜ್ಞೆ
ಸೂಕ್ಷ್ಮ ರೂಪಾಂತರಕೆ ವ್ಯಕ್ತಿಗತ ಪ್ರಜ್ಞ್ನೆ ವಿಕಾಸ ಚಾಲನೆ!

೨೫೨. ಪರಮಾನಂದಾ
ಮಾಯೆಯೆಂಬ ಉರುಳು ತ್ಯಜಿಸುವುದರಲ್ಲಿದೆ ತಿರುಳು
ನಿರಂತರ ಧ್ಯಾನಿಸೆ ದೇವಿಯ ಆತ್ಮಸಾಕ್ಷಾತ್ಕಾರದ ಕೊಳಲು
ಫಲಾಫಲ ದೇವಿಗೆ ಸಮರ್ಪಿಸಿ ಮಾಯೆಯಿಂದಾಚೆಗೆ ಬಂದ
ಶುದ್ಧಚೈತನ್ಯ ಮೂರ್ತರೂಪೀ ಲಲಿತೆ ನೀಡಿ ಪರಮಾನಂದಾ!
 
೨೫೩. ವಿಜ್ಞಾನಘನ-ರೂಪಿಣೀ 
ಪ್ರಜ್ಞೆಯ ಸ್ಥೂಲರೂಪವೆ ಆನಂದ ನೀರಲಿ ಉಪ್ಪಿನ ತರ
ನೀರಂತೆ ನಾಶವಾಗೆ ಅಹಂ ಮಿಕ್ಕ ಪರಮಾತ್ಮವಷ್ಟೆ ಪ್ರಖರ
ಶುದ್ದ ಚೈತನ್ಯ ಸ್ವರೂಪದಿ ದೇವಿ ಪ್ರಜ್ಞೆಯ ಸೂಕ್ಷ್ಮ ರೂಪ
ಒಟ್ಟಾತ್ಮವೆ ಹಿರಣ್ಯಗರ್ಭ ವಿಜ್ಞಾನ ಸ್ವ-ಅಭಿವ್ಯಕ್ತಿ ಸ್ವರೂಪ!

೨೫೪. ಧ್ಯಾನ-ಧಾತೃ-ಧ್ಯೇಯ-ರೂಪಾ 
ಉನ್ನತ ಆಧ್ಯಾತ್ಮಿಕ ಜ್ಞಾನ ಪಡೆಯಲು ಬೇಕು ಧ್ಯಾನ
ಆಂತರಿಕ ಜಿಜ್ಞಾಸೆ ಶೋಧ ಫಲ ಆಂತರ್ಯದೆ ಜತನ
ಸಂಗ್ರಹಾಗಾರ ಪರಮಾತ್ಮ ಮನಸಾಗಿಸಿ ಕೇಂದ್ರೀಕೃತ
ಧ್ಯಾನ ಧ್ಯಾನಿ ಧ್ಯೇಯದಿಂ ನಡೆ ಜ್ಞಾನಿ ಜ್ಞಾತೃ ಜ್ಞೇಯದತ್ತ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
ಚೈತನ್ಯ:
:
:
ಸೂಕ್ಷ್ಮ ರೂಪಾಂತರಕೆ ವ್ಯಕ್ತಿಗತ ಪ್ರಜ್ಞ್ನೆ ವಿಕಾಸ ಚಾಲನೆ!
ಪ್ರಜ್ಞ್ನೆ= ಪ್ರಜ್ಞೆ ಈ ಬೆರಳಚ್ಚಿನ ತಪ್ಪನ್ನು ಸರಿಪಡಿಸಿ ಈ ಪರಿಷ್ಕರಣೆಯನ್ನು ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಅಂತಿಮ ಕೊಂಡಿಯಲ್ಲಿ ಪ್ರಜ್ಞಾವನ್ನು ತಿದ್ದಿ ಬಿಡುಗಡೆ ಮಾಡಿದ್ದೇನೆ.
 
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು