೭೦. ಶ್ರೀ ಲಲಿತಾ ಸಹಸ್ರನಾಮ ೨೫೫ರಿಂದ ೨೫೬ನೇ ನಾಮಗಳ ವಿವರಣೆ

೭೦. ಶ್ರೀ ಲಲಿತಾ ಸಹಸ್ರನಾಮ ೨೫೫ರಿಂದ ೨೫೬ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೫೫ - ೨೫೬

Dharmādharma-vivarjitā धर्माधर्म-विवर्जिता (255)

೨೫೫. ಧರ್ಮಾಧರ್ಮಾ-ವಿವರ್ಜಿತಾ

              ದೇವಿಯು ಧರ್ಮ ಮತ್ತು ಅಧರ್ಮಗಳಿಗೆ ಅತೀತಳಾಗಿದ್ದಾಳೆ. ಧರ್ಮವು ಒಳ್ಳೆಯ ಕಾರ್ಯಗಳ ಫಲವಾಗಿದ್ದರೆ, ಅಧರ್ಮವು ಕೆಟ್ಟ ಕಾರ್ಯಗಳಿಂದ ಉದ್ಭವವಾಗುತ್ತದೆ. ಅಧರ್ಮದ ಫಲದಿಂದಾಗಿ ಪಾಪಗಳು ಹೆಚ್ಚುತ್ತಾ ಹೋಗುತ್ತವೆ. ಧರ್ಮ ಅಥವಾ ಅಧರ್ಮವೆನ್ನುವುದು ಆಯಾ ವ್ಯಕ್ತಿಗಳು ಕೈಗೊಳ್ಳುವ ಕಾರ್ಯದ ಮೇಲೆ ಅವಲಂಭಿಸಿರುತ್ತದೆ ಎಂದು ವಾದಿಸುವವರಿದ್ದಾರೆ. ಉದಾಹರಣೆಗೆ, ಗಲ್ಲಿಗೇರಿಸುವ ಕೆಲಸವನ್ನು ನಿರ್ವಹಿಸುವ ವ್ಯಕ್ತಿಯು ಅಪರಾಧಿಯನ್ನು ಗಲ್ಲಿಗೇರಿಸುವುದು ಅಧರ್ಮವಲ್ಲ ಆದರೆ ಒಬ್ಬ ಸಾಮಾನ್ಯ ನಾಗರೀಕ ಮತ್ತೊಬ್ಬನಿಗೆ ನೇಣು ಹಾಕಿದರೆ ಅದು ಅಧರ್ಮವಾಗುತ್ತದೆ. ಆದರೆ ಸಾಮಾನ್ಯವಾಗಿ ಧರ್ಮವೆಂದರೆ ಶಾಸ್ತ್ರಗಳು ಏನು ಬೋಧಿಸುತ್ತವೆಯೋ ಅದು. ತ್ರಿಗುಣಗಳಿಂದ ಉಂಟಾಗುವ ಕ್ರಿಯೆಯೇ ಧರ್ಮ ಮತ್ತು ಅಧರ್ಮಗಳೆಂದು ಸಹ ವಾದವನ್ನು ಮಂಡಿಸಬಹುದು. ಒಟ್ಟಾರೆಯಾಗಿ ದೇವಿಯು ತ್ರಿಗುಣಗಳಿಗೆ ಅತೀತಳಾಗಿರುವುದರಿಂದ ಧರ್ಮಾಧರ್ಮಾಗಳು ಆಕೆಗೆ ಅನ್ವಯಿಸುವುದಿಲ್ಲ.

              ಬಂಧನಕ್ಕೊಳಪಡಿಸುವ ಕಾರಣದ ರೀತ್ಯಾ, ಧರ್ಮ(ಮತದ ತಿರುಳು) ಎನ್ನುವುದಕ್ಕೆ ಇನ್ನೊಂದು ವಿಧವಾದ ವ್ಯಾಖ್ಯಾನವನ್ನೂ ಈ ರೀತಿಯಾಗಿ ಕೊಡಬಹುದು. ಬಂಧನಕ್ಕೆ ವಿರುದ್ಧವಾದದ್ದು ಮುಕ್ತಿ. ಬಂಧನ ಮತ್ತು ಮುಕ್ತಿಗಳು ಕೇವಲ ಜೀವಿಗಳಿಗೆ ಅನ್ವಯಿಸುತ್ತವೆಯೋ ಹೊರತು ಪರಬ್ರಹ್ಮಕ್ಕಲ್ಲ; ಏಕೆಂದರೆ ಪರಬ್ರಹ್ಮವು ಅತ್ಯುನ್ನತ ಪರಿಶುದ್ಧತೆಯ ಮೂರ್ತರೂಪವಾಗಿದೆ. ಇಲ್ಲಿ ದೇವಿಯ ಪರಬ್ರಹ್ಮಸ್ವರೂಪದ ಕುರಿತಾಗಿ ಹೇಳಲಾಗಿದೆ. ಅಂತಿಮ ಸಾಕ್ಷಾತ್ಕಾರವೆಂದರೆ ಅಲ್ಲಿ ಯಾವುದೇ ರೀತಿಯ ಬಂಧನ ಅಥವಾ ಆಸೆಗಳಿಲ್ಲದೇ ಇರುವುದಾಗಿದೆ. ಮುಕ್ತಿಯನ್ನು ಹೊಂದಬೇಕೆನ್ನುವುದೂ ಒಂದು ವಿಧವಾದ ಬಂಧನವಾಗಿದೆ. ಒಬ್ಬನಿಗೆ ದೇವಿಯಲ್ಲಿ ವಿಶ್ವಾಸವಿದ್ದರೆ ಅವನು ಯಾವುದಕ್ಕೂ ಆಶೆ ಪಡಬಾರದು; ಮುಕ್ತಿಯನ್ನೂ ಸೇರಿಸಿ. ದೇವಿಗೆ ಯಾವುದನ್ನು ಮತ್ತು ಯಾವಾಗ ದಯಪಾಲಿಸಬೇಕೆಂಬ ವಿಷಯವು ತಿಳಿದಿದೆ.

              ಮುಕ್ತಿ (ಅಂತಿಮ ಬಿಡುಗಡೆ) ಮತ್ತು ಮೋಕ್ಷಕ್ಕೆ ವ್ಯತ್ಯಾಸಗಳಿವೆ. ಮುಕ್ತಿ ಎಂದರೆ ಜೀವಿಗೆ ಪುನರ್ಜನ್ಮವಿರುವುದಿಲ್ಲ, ಆದರೆ ಮೋಕ್ಷವೆಂದರೆ ಜೀವಿಯು ಸ್ವರ್ಗಕ್ಕೆ ಹೋಗಿ ಸ್ವಲ್ಪ ಕಾಲಾನಂತರ ಭುವಿಯ ಮೇಲೆ ಮತ್ತೆ ಹುಟ್ಟಿ ಬರಬೇಕು. ಇದು ಕೇವಲ ಆತ್ಮದ ರೂಪಾಂತರದ ಭಾಗವಷ್ಟೇ; ಇದರರ್ಥ ಆತ್ಮವು ತನ್ನ ಕರ್ಮಶೇಷದಿಂದಾಗಿ ಪರಬ್ರಹ್ಮದೊಳಗೆ ಐಕ್ಯವಾಗಲು ಪೂರ್ಣಪಕ್ವತೆಯನ್ನು ಹೊಂದಿಲ್ಲವೆನ್ನುವುದು. ಇದರ ಕುರಿತಾಗಿ ಮುಂದಿನ ಭಾಗಗಳಲ್ಲಿ ಕೂಲಂಕಷವಾಗಿ ನೋಡೋಣ.

Viśvarūpā विश्वरूपा (256)

೨೫೬. ವಿಶ್ವರೂಪಾ

              ಈ ನಾಮದಿಂದ ಪ್ರಾರಂಭಿಸಿ ಮುಂದಿನ ೧೯ನಾಮಗಳವರೆಗೆ ಅಂದರೆ ೨೭೪ನೇ ನಾಮದವರೆಗೂ ಆತ್ಮ ಮತ್ತು ಪರಬ್ರಹ್ಮಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಕುರಿತು ಈ ಸಹಸ್ರನಾಮವು ಹೇಳುತ್ತದೆ.

              ವಿಶ್ವರೂಪಾ ಎಂದರೆ ಸರ್ವವ್ಯಾಪಕತ್ವ. ಈ ನಾಮವು ಬ್ರಹ್ಮದ ಹಲವು ವಿಧವಾದ ಲಕ್ಷಣಗಳನ್ನು ಕುರಿತಾಗಿ ಚರ್ಚಿಸುತ್ತದೆ. ಸರ್ವವ್ಯಾಪಕವಾಗಿರುವುದು ಬ್ರಹ್ಮದ ವಿಶಿಷ್ಠ ಲಕ್ಷಣವಾಗಿದೆ. ಈ ಬ್ರಹ್ಮಾಂಡದ ಸೃಷ್ಟಿಯ ಕುರಿತಾಗಿ ೨೫೦ನೇ ನಾಮದಲ್ಲಿ ಚರ್ಚಿಸಲಾಗಿತ್ತು. ಬ್ರಹ್ಮಕ್ಕೆ ಹಲವು ವಿಧವಾದ ರೂಪ ಮತ್ತು ಆಕಾರಗಳಿವೆ ಏಕೆಂದರೆ ಬ್ರಹ್ಮವು ಪ್ರಪಂಚದಲ್ಲಿರುವ ಸಕಲ ಚರಾಚರ ವಸ್ತುಗಳಲ್ಲಿ ಇರುತ್ತದೆ. ನಿರ್ಜೀವವಾದ ವಸ್ತುಗಳಲ್ಲಿ ಆತ್ಮವಿಲ್ಲದೇ ಇರುವುದರಿಂದ ಅವುಗಳ ಇಚ್ಛೆಯನುಸಾರ ಯಾವುದೇ ಕ್ರಿಯೆಗಳು ಆಗುವುದಿಲ್ಲ. ಸಮಸ್ತ ಬ್ರಹ್ಮಾಂಡದಲ್ಲಿ ಪರಬ್ರಹ್ಮವು ಇಲ್ಲದ ಸ್ಥಳವೇ ಇಲ್ಲ. ಸೃಷ್ಟಿ ಕ್ರಿಯೆಯು ಮೊದಲು ಸಂಪೂರ್ಣ ಕತ್ತಲೆಯಲ್ಲಿ ಪ್ರಾರಂಭವಾಗುತ್ತದೆ. ಈ ಕತ್ತಲೆಯಿಂದ ಬುದ್ಧಿಯ ಉಗಮವಾಗುತ್ತದೆ. ಈ ಬುದ್ಧಿಯಿಂದ ಅಹಂಕಾರವು ಉಂಟಾಗುತ್ತದೆ ಮತ್ತು ಈ ಅಹಂಕಾರದಿಂದ ಪಂಚಭೂತಗಳ ವಿಕಾರಗಳು (ನಾನಾ ರೂಪಾಂತರಗಳು) ಉಂಟಾಗುತ್ತವೆ ಮತ್ತು ಅವುಗಳಿಂದ ಈ ಬ್ರಹ್ಮಾಂಡದಲ್ಲಿ ವಾಸಿಸುವ ವಿವಿಧ ರೀತಿಯ ಜೀವಿಗಳು ಉದ್ಭವಿಸುತ್ತವೆ. ಈ ಪ್ರಪಂಚವು ಮೂರು ವಿಧವಾದ ರೂಪಾಂತರಗಳಿಂದ ಹೊರಹೊಮ್ಮುತ್ತದೆ ಅವೆಂದರೆ, ‘ಸ್ಥೂಲ’, ‘ಸೂಕ್ಷ್ಮ’ ಮತ್ತು ‘ಕಾರಣ’ಗಳಾಗಿದ್ದು ಇವುಗಳಿಂದ ವೈಶ್ವಾನರಾ, ಹಿರಣ್ಯಗರ್ಭಾ ಮತ್ತು ಈಶ್ವರಾ ಇವರುಗಳ ಉಗಮವಾಗುತ್ತದೆ. ಈ ಮೂರು ರೂಪಾಂತರಗಳು ಮಾನವ ಜೀವಿತದಲ್ಲಿ ಜಾಗ್ರತ್, ಸ್ವಪ್ನ, ಮತ್ತು ಸುಷುಪ್ತಿಯಾಗಿ ಅಸ್ತಿತ್ವದಲ್ಲಿರುತ್ತವೆ. ಶಾಸ್ತ್ರಗಳು ಕೇವಲ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಮಾತ್ರವೇ ಒಪ್ಪಿಕೊಳ್ಳುತ್ತವೆ. ಆದರೆ ತಂತ್ರ ಶಾಸ್ತ್ರಗಳು ಬ್ರಹ್ಮದ ಇನ್ನೆರಡು ಕ್ರಿಯೆಗಳ ಕುರಿತಾಗಿ ಹೇಳುತ್ತವೆ, ಅವೆಂದರೆ ತಿರೋಧಾನ ಮತ್ತು ಅನುಗ್ರಹ. ಇವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ೨೭೦ರಿಂದ ೨೭೩ನೇ ನಾಮಗಳ ಚರ್ಚೆಯೆಲ್ಲಿ ನೋಡಬಹುದು. (ಮೂಲ ಮಾಹಿತಿಗಾಗಿ ೨೪೯ ಮತ್ತು ೨೫೦ನೇ ನಾಮಗಳನ್ನು ನೋಡಿ). ಇವುಗಳಿಗೆ ಸಂಭಂದಿಸಿದ ಮತ್ತೆರಡು ಹಂತಗಳಾದ ತುರ್ಯಾ ಮತ್ತು ತುರಿಯಾತೀತಗಳನ್ನು ತಿಳಿದುಕೊಳ್ಳಬಹುದು. ತುರ್ಯಾ ಸ್ಥಿತಿಯು ರೂಪಾಂತರದ ಹಂತವಾಗಿದೆ. ತುರ್ಯಾವಸ್ಥೆಯನ್ನು ಅಧಿಗಮಿಸಿದ ಹಂತವು ದೈತ್ವಕ್ಕೆ ಹೊರತಾಗಿದೆ. ಈ ಹಂತವನ್ನೇ ತುರಿಯಾತೀತವೆಂದು ಕರೆಯಲಾಗಿದೆ. ತುರಿಯಾತೀತಾವಸ್ಥೆಯಲ್ಲಿ ಆತ್ಮ ಮತ್ತು ಪರಬ್ರಹ್ಮದ ಒಂದುಗೂಡುವಿಕೆಯು ಉಂಟಾಗುತ್ತದೆ ಮತ್ತು ಅಂತಿಮ ಹಂತವಾದ ಕೈವಲ್ಯದೊಳಗೆ ಪರಿಸಮಾಪ್ತವಾಗುತ್ತದೆ. ಈ ಹಂತದಲ್ಲಿ ಆತ್ಮದ ಯಾತ್ರೆಯು ಮುಗಿದು ಅದು ತನ್ನ ಅಸ್ತಿತ್ವವನ್ನು ಇಲ್ಲವಾಗಿಸಿಕೊಳ್ಳುತ್ತದೆ. ಈ ಹಂತವನ್ನು ತಲುಪಬೇಕಾದರೆ ಅಥವಾ ಈ ವಿಧವಾದ ಐಕ್ಯತೆಯನ್ನು ಹೊಂದಬೇಕಾದರೆ ಒಬ್ಬನು ಸಾಧನೆಯನ್ನು ಕೈಗೊಳ್ಳಬೇಕು ಅವು ಮೊದಲ ಮೂರು ಹಂತಗಳಾದ ಜಾಗೃತ್, ಸ್ವಪ್ನ ಮತ್ತು ಸುಷುಪ್ತಿಗಳಂತೆ ಸಹಜವಾಗಿ ಹೊಂದಲಾಗುವುದಿಲ್ಲ. ವೈಶ್ವಾನರಾ, ಹಿರಣ್ಯಗರ್ಭಾ ಮತ್ತು ಈಶ್ವರಾ ಅಥವಾ ಬ್ರಹ್ಮ, ವಿಷ್ಣು ಮತ್ತು ರುದ್ರ ಇವುರುಗಳು ತ್ರಿಮೂರ್ತಿಗಳಾಗಿದ್ದಾರೆ. ಇವರನ್ನು ಸಾಮಾನ್ಯವಾಗಿ ಸೃಷ್ಟಿಕರ್ತ, ಸ್ಥಿತಿಕರ್ತ ಮತ್ತು ಲಯಕರ್ತ ಎಂದು ಕರೆಯಲಾಗುತ್ತದೆ.

              ಸಾಮಾನ್ಯವಾಗಿ ಎಲ್ಲರಿಗೂ ಮೊದಲೆರಡು ಹಂತಗಳಾದ ಜಾಗ್ರತ್ (ಎಚ್ಚರ) ಮತ್ತು ಸ್ವಪ್ನ (ಕನಸಿನ) ಇವುಗಳ ಕುರಿತಾಗಿ ತಿಳಿದಿರುತ್ತದೆ. ಮೂರನೆಯ ಹಂತವಾದ ಸುಷುಪ್ತಿಯಲ್ಲಿ ಅಥವಾ ಎಚ್ಚರವಿರದ/ಪ್ರಜ್ಞೆಯಿರದ ದೀರ್ಘನಿದ್ರಾವಸ್ಥೆಯಲ್ಲಿ ತನ್ನ ಸುತ್ತಲೂ ಏನಾಗುತ್ತದೆ ಎಂದು ಒಬ್ಬನಿಗೆ ಅರಿವಾಗುವುದಿಲ್ಲ. ಆದರೆ ಯೋಗಿಯೊಬ್ಬನು ಉಳಿದೆರಡೂ ಹಂತಗಳನ್ನು ತಲುಪಬಲ್ಲ, ಏಕೆಂದರೆ ಅವನಿಗೆ ತಾನೇ ಶಿವನೆಂಬ ಸಂಪೂರ್ಣ ಅರಿವಿರುವುದರಿಂದಾಗಿ. ಯಾವಾಗ ಅವನ ಚೇತನವು ಪರಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆಯೋ ಆಗ ಅವನ ಕರ್ಮಗಳು ನಶಿಸಿಹೋಗಿ ಅವನು ಒಂದು ಹಂತವನ್ನು ಸೇರುತ್ತಾನೆ ಈ ಸ್ಥಿತಿಯಲ್ಲಿ ಸಂತೋಷ ಅಥವಾ ದುಃಖಗಳಿರುವುದಿಲ್ಲ. ಯಾವಾಗ ಮನಸ್ಸು ಆಲೋಚಿಸುವುದನ್ನು ನಿಲ್ಲುಸುತ್ತದೆಯೋ ಅಥವಾ ಮನಸ್ಸು ಇಂದ್ರಿಯಗಳಿಂದ ಸಂಪೂರ್ಣವಾಗಿ ಪ್ರತ್ಯೇಕಗೊಳ್ಳುತ್ತದೆಯೋ ಆಗ ಇಂತಹ ಸ್ಥಿತಿಯು ಹೊಂದಲ್ಪಡುತ್ತದೆ. ಈ ಹಂತದಲ್ಲಿ ಮಾತ್ರವೇ ವಿಶ್ವರೂಪದ ಸಾಕ್ಷಾತ್ಕಾರವಾಗುತ್ತದೆ. ದೇವಿಯು ವಿಶ್ವರೂಪಾ ಎಂದರೆ ಸರ್ವವ್ಯಾಪಿಯಾಗಿದ್ದಾಳೆ.

              ಭಗವದ್ಗೀತೆಯಲ್ಲಿ (೧೧.೧೬) ಅರ್ಜುನನು ಕೃಷ್ಣನನ್ನು ಸಂಬೋಧಿಸಿ ಹೇಳುತ್ತಾನೆ, "ಓ! ಈ ವಿಶ್ವದ ಒಡೆಯನಾದ ಭಗವಂತನೇ, ಬ್ರಹ್ಮಾಂಡವಾಗಿ ಅನಾವರಣವಾಗಿರುವ ನಿನ್ನಲ್ಲಿ, ನಾನು ಲೆಕ್ಕವಿಲ್ಲದಷ್ಟು ಬಾಹುಗಳನ್ನು, ಉದರಗಳನ್ನು, ಬಾಯಿಗಳನ್ನು ಹಾಗೂ ಕಣ್ಣುಗಳನ್ನು ಹೊಂದಿರುವ ಮತ್ತು ಅನಂತ ರೂಪಗಳನ್ನು ಹೊಂದಿರುವ ನಿನ್ನನ್ನು ಎಲ್ಲಾ ಕಡೆಗಳಲ್ಲಿ ಕಾಣುತ್ತಿದ್ದೇನೆ. ನಾನು ನಿನ್ನ ಆರಂಭವನ್ನಾಗಲಿ, ಮಧ್ಯವನ್ನಾಗಲಿ ಅಥವಾ ಅಂತ್ಯವನ್ನಾಗಲಿ ಕಾಣಲಾಗುತ್ತಿಲ್ಲ." ವಿಶ್ವರೂಪಾ ಎನ್ನುವುದನ್ನು ಇಲ್ಲಿ ಇಡೀ ಬ್ರಹ್ಮಾಂಡವಾಗಿ ಮಾರ್ಪಾಡಾಗಿರುವ ಕೃಷ್ಣನ ಕುರಿತಾಗಿ ಹೇಳಲಾಗಿದೆ. 

******

             ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 255-256 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.  

Rating
No votes yet

Comments

Submitted by nageshamysore Tue, 07/16/2013 - 20:23

ಶ್ರೀಧರರೆ, ಲಲಿತಾ ಸಹಸ್ರನಾಮ ೨೫೫ - ೨೫೬ ಕಾವ್ಯ ರೂಪಕ ತಮ್ಮ ಪರಿಶೀಲನೆ, ಅವಗಾಹನೆಗೆ ಸಿದ್ದ :-) - ನಾಗೇಶ ಮೈಸೂರು
೨೫೫. ಧರ್ಮಾಧರ್ಮಾ-ವಿವರ್ಜಿತಾ
ತ್ರಿಗುಣಗಳಿಂದುಧ್ಭವಕ್ರಿಯೆ ಧರ್ಮಾಧರ್ಮ ಮೊತ್ತ
ಧರ್ಮಾಧರ್ಮಗಳನ್ವಯಿಸದ ದೇವಿ ತ್ರಿಗುಣಾತೀತ
ಬಂಧನ ಮುಕ್ತಿ ಜೀವಿಗಷ್ಟೆ ಅನ್ವಯ ಪರಬ್ರಹ್ಮ ಶುದ್ಧ
ಆಸೆ ಬಂಧನ ಬಿಡೆ ಅಂತಿಮ ಸಾಕ್ಷಾತ್ಕಾರ ಪರಿಶುದ್ಧ!
೨೫೬. ವಿಶ್ವರೂಪಾ
ಸರ್ವ ವ್ಯಾಪಿ ಬ್ರಹ್ಮವೆ ವಿಶ್ವರೂಪ
ಜಗ ಸಕಲ ಚರಾಚರದೆ ವಾಸಿಪ
ಬ್ರಹ್ಮವಿಲ್ಲದೆಡೆ ಬ್ರಹ್ಮಾಂಡದಲೆಲ್ಲೆ
ಕ್ರಿಯಾತ್ಮರಹಿತ ನಿರ್ಜೀವಕು ನೆಲೆ!

ಶ್ರೀಧರರೆ, 'ವಿಶ್ವರೂಪಾ'ದ ವಿವರಣೆ ಚಿಕ್ಕ ಪದ್ಯದಲ್ಲಿ ಸಾಕಾಗದು ಅನಿಸಿತು. ಅದಕ್ಕೆ ಮತ್ತೆ ಹೊಸದಾಗಿ ಬರೆದುಬಿಟ್ಟೆ. ಇದನ್ನೆ ಪರಿಷ್ಕರಿಸೋಣ :-) - ನಾಗೇಶ ಮೈಸೂರು
ವಿಶ್ವರೂಪಾ (ಸೃಷ್ಟಿ ಚಕ್ರ)
ಸರ್ವ ವ್ಯಾಪಿ ಬ್ರಹ್ಮಲಕ್ಷಣವಾಗಿ ವಿಶ್ವರೂಪ
ಚರಾ ಚರ ಜೀವ ನಿರ್ಜೀವದಲೆಲ್ಲ ಪ್ರಸ್ತಾಪ
ಆತ್ಮ ಸಹಿತ ಜೀವ ಕ್ರಿಯಾನಿರತ ಸ್ವಭಾವ
ಆತ್ಮರಹಿತ ನಿರ್ಜೀವಕೆ ಕ್ರಿಯೆಯೆ ಅಭಾವ!
ವಾತನಿರ್ವಾತ ಬ್ರಹ್ಮಾಂಡದೆಲ್ಲೆಡೆ ಪರಬ್ರಹ್ಮ
ತಮದಿಂದುಸುತ ಸೃಷ್ಟಿಗೆ ಬುದ್ದಿಯ ಉಗಮ
ಹುಟ್ಟಿತಲ್ಲಿ ಅಹಂಕಾರಾ ಪಂಚಭೂತ ವಿಕಾರ
ಜಗದಲಿ ಜೀವೋಧ್ಭವ ನಾನಾಜೀವಿ ಸಾಕಾರ!
ಹೊರಹೊಮ್ಮೊ ಸೃಷ್ಟಿಕುಣಿತ ತ್ರೈರೂಪಿ ಕುಂಚ
ಸ್ಥೂಲ ಸೂಕ್ಷ್ಮ ಕಾರಣ ರೂಪಾಂತರದ ಪ್ರಪಂಚ
ವೈಶ್ವಾನರ ಸೂತ್ರಾತ್ಮ ಈಶ್ವರರುಗಳ ಆಗಮನ
ಜಾಗ್ರತ್ ಸ್ವಪ್ನ ಸುಷುಪ್ತಿ ಜೀವಿತದೆ ಅನಾವರಣ!
ಶಾಸ್ತ್ರಾನುಸಾರ ಅನ್ವಯ ಬರಿ ಸೃಷ್ಟಿ ಸ್ಥಿತಿ ಲಯ
ತಂತ್ರಾ ತಿರೋಧಾನ ಅನುಗ್ರಹ ಬ್ರಹ್ಮದಕಾರ್ಯ
ತುರ್ಯಾ ರೂಪಾಂತರತೆ ತುರ್ಯಾತೀತ ಅದ್ವೈತ
ಆತ್ಮಪರಮಾತ್ಮ ಮಿಲನ ಕೈವಲ್ಯದೆ ಪರಿಸಮಾಪ್ತ!
ಕೈವಲ್ಯಕೆ ಮುಗಿದಾತ್ಮಯಾತ್ರೆ ಅಸ್ತಿತ್ವವೆ ಮಾಯ
ಜಾಗೃತ್ ಸ್ವಪ್ನ ಸುಷುಪ್ತಿ ಮೀರಿದ ಸಾಧನೆ ನಿಶ್ಚಯ
ಸೃಷ್ಟಿ ಸ್ಥಿತಿ ಲಯಕರ್ತರಾಗಿಹ ಬ್ರಹ್ಮ ವಿಷ್ಣು ರುದ್ರ
ವೈಶ್ವಾನರ ಹಿರಣ್ಯಗರ್ಭ ಈಶ್ವರ ಅವರ ಅವತಾರ!
ಜಾಗೃತ್ ಎಚ್ಚರ ಸ್ವಪ್ನ ಕನಸೆ ಸುಷುಪ್ತಿ ಧೀರ್ಘನಿದ್ರೆ
ತುರ್ಯಾ ತುರ್ಯಾತೀತಕೆ ಯೋಗಿ ತಲುಪೆ ಶ್ರದ್ಧೆ
ಚೇತನ ಪರಬ್ರಹ್ಮ ಸಾಕ್ಷಾತ್ಕಾರ ಕರ್ಮವೆ ಸಂಹಾರ
ಇಂದ್ರಿಯಾತೀತತೆಗೆ ದೇವಿ ವಿಶ್ವರೂಪ ಸಾಕ್ಷಾತ್ಕಾರ!
ದೇವಿ ವಿಶ್ವರೂಪ ಸರ್ವವ್ಯಾಪಿ ಅಗಣಿತ ಅಂಗ ರೂಪ
ಆದಿ ಮಧ್ಯ ಅಂತ್ಯವಿರದೆ ಎಲ್ಲೆಡೆ ಅನಂತಾ ಸ್ವರೂಪ
ಬ್ರಹ್ಮಾಂಡವಾಗಿ ಮಾರ್ಪಟ್ಟ ಕೃಷ್ಣನ ವಿಶ್ವರೂಪದಂತೆ
ವಿಶ್ವರೂಪಿ ಸರ್ವವ್ಯಾಪಿ ದೇವಿ ಕೃಷ್ಣನಾಗಿ ಶ್ರೀಲಲಿತೆ!

ನಾಗೇಶರೆ,
ನಿಮ್ಮನ್ನು ಹಿಂದಿಕ್ಕೋಣವೆಂದು ಮಂಗಳವಾರ ಎರಡು ಬರಹಗಳನ್ನು ಸೇರಿಸಿ ನಾನು ಸ್ವಲ್ಪ ಸಮಯ ವಿರಮಿಸಿಕೊಳ್ಳೋಣವೆಂದು ಕೊಂಡೆ? ನನ್ನ ಊಹೆಯನ್ನು ಸುಳ್ಳಾಗಿಸಿ ಬಾಕಿ ಇದ್ದ ಎಲ್ಲಾ ಮೂರು ಕಂತುಗಳಿಗೂ ಒಂದೇ ಬಾರಿ ಕವನಗಳನ್ನು ಹೊಸೆದಿದ್ದೀರ. ಬಹುಶಃ ಜಗನ್ಮಾತೆ ನನ್ನ ಮೇಲೆ ಕೋಪಿಸಿಕೊಂಡು ನನ್ನ ಕೆಲಸವನ್ನು ನಿಧಾನವಾಗಿಸಿದಳು; ಮೂರು ದಿನ ನಾನು ಬೇರೆ ಕೆಲಸಗಳಲ್ಲಿ ವ್ಯಸ್ತನಾಗಿರುವಂತೆ ಮಾಡಿದಳು. ಹೀಗಾದದ್ದರಿಂದ ೭೧ನೇ ಕಂತನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗದೇ ಅದನ್ನು ಇಂದು ಬೆಳಿಗ್ಗೆ ಅಂತಿಮವಾಗಿ ಪರಿಷ್ಕರಿಸಿ ಸಂಪದದಲ್ಲಿ ಸೇರಿಸುವ ಸಾಹಸ ಮಾಡಬೇಕಾಯಿತು. ಈ ಒಂದು ಕಂತೇ ಸ್ವಲ್ಪ ಹೆಚ್ಚು ಕಡಿಮೆ ನಾಲ್ಕು ಕಂತುಗಳಿಗಾಗುವಷ್ಟು ವಿಷಯವನ್ನು ಹೊಂದಿದೆ, ಎನ್ನುವುದು ಬೇರೆ ವಿಷಯ. ನಿಮ್ಮ ೬೮-೭೦ನೇ ಕಂತಿನ ನಿಮ್ಮ ಕವನಗಳನ್ನು ಸ್ವಲ್ಪ ನಿಧಾನವಾಗಿ ಓದಿ ಮತ್ತೆ ಅವುಗಳ ಕುರಿತು ಅಭಿಪ್ರಾಯ ತಿಳಿಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ,  ಬಹುಶಃ ನಮ್ಮಿಬ್ಬರನ್ನು ರೇಸಿಗೆ ಹಚ್ಚಿ, ಫಲಿತವಾಗಿ ನಾಮಾವಳಿ ಬರಹದ ವೇಗ ಹೆಚ್ಚಿಸುವ ಹುನ್ನಾರವಿರಬೇಕು ದೇವಿಯದು! ಏನೆ ಇರಲಿ, ಹೆಜ್ಜೆಹೆಜ್ಜೆಯಾಗಿ, ನಿಧಾನವಾಗಿಯಾದರೂ ಸರಿ - ಪ್ರಗತಿ ಕಾಣಿಸುತ್ತಿದ್ದರೆ ದೇವಿಯೂ ಸಂತೃಪ್ತಳಾಗುತ್ತಾಳೆ. ನಿಮ್ಮ ಮೇಲವಳು ಮುನಿಸಿಕೊಳ್ಳುವ ಮಾತೆ ಇಲ್ಲ ಬಿಡಿ, ನಿಮ್ಮ ಶ್ರಮಕ್ಕೆ ಬೇರೆ ಕೆಲಸದ ರೂಪದಲ್ಲಿ ಬಲವಂತದ ರಜೆ ದಯಪಾಲಿಸಿದ್ದಾಳೆ.
ಅಂದ ಹಾಗೆ, ಈಚೆಗೆ ನಾಡಿಗರ ಪ್ರತಿಕ್ರಿಯೆಯೊಂದರಲ್ಲಿ ನೋಡಿದೆ - ಸಂಪದದಲ್ಲಿ ಹಾಕುವ ಲಿಂಕುಗಳಿಂದಾಗಿ ಸಹ ಡೇಟಾಬೇಸಿನ ಮೇಲಿನ ಭಾರ, ಒತ್ತಡ ತೊಂದರೆ ಕೊಡುತ್ತದೆ - ಎಂದು. ಅದನ್ನು ಓದಿದ ಮೇಲೆ, ನಾವು ಅಂತಿಮಗೊಳಿಸಿದ ಪ್ರತಿ ಕಂತಿಗು ಅಂತಿಮ ಕೊಂಡಿ ಸೇರಿಸುವುದು ಉಚಿತವೆ ಎಂದು ಸಂಶಯ ಶುರುವಾಗಿದೆ. ಬಹುಶಃ ಲಿಂಕಿನ ಬದಲು ಬರಿ ಮಾಹಿತಿ ಹಾಕಿದರೆ ಸಾಕೆನಿಸುತ್ತಿದೆ (ಟೆಕ್ಸ್ಟ್ ರೂಪದಲ್ಲಿ). ಬೇಕಿದ್ದರೆ, ಕೊನೆಯ ಕಂತಿನಲ್ಲಿ ಸಮಗ್ರವಾಗಿ ಸೇರಿಸಿದ ನಂತರ, ಒಂದು ಕೊಂಡಿ ಕೊಟ್ಟರೆ ಒಳ್ಳೆಯದೇನೊ. ಸದ್ಯಕ್ಕೆ ಅಂತಿಮ ಕೊಂಡಿಯ ಬಗ್ಗೆ ಮರು ಚಿಂತಿಸಬೇಕಿದೆ
ಇಂದಿನ ಕಂತು ನೀವು ಹೇಳಿದ ಹಾಗೆಯೆ ಮೂರು ಕಂತಿನ ವಸ್ತು, ಈ ಬಾರಿ ದೇವಿ ನನ್ನಾಗಿಸುವಳು ಬೇಸ್ತು! :-)
- ನಾಗೇಶ ಮೈಸೂರು

ಹಾಗಾದರೆ ಆದಿರಿ ನೀವು ಸುಸ್ತು :))
ನಿಮ್ಮ‌ ಪದಕೋಶದಲ್ಲಿ ಬಹುಶಹ‌ ಆ ಶಬ್ಫವೇ ಇಲ್ಲವೇನೋ ಬಿಡಿ. ಪುನಹ‌ ಬೆಳಿಗ್ಗೆ ಸಿಕ್ಕೋಣ‌ ನಾಗೇಶರೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

>>>ಈಚೆಗೆ ನಾಡಿಗರ ಪ್ರತಿಕ್ರಿಯೆಯೊಂದರಲ್ಲಿ ನೋಡಿದೆ - ಸಂಪದದಲ್ಲಿ ಹಾಕುವ ಲಿಂಕುಗಳಿಂದಾಗಿ ಸಹ ಡೇಟಾಬೇಸಿನ ಮೇಲಿನ ಭಾರ, ಒತ್ತಡ ತೊಂದರೆ ಕೊಡುತ್ತದೆ - ಎಂದು.
- ನನಗೆ ಈ ವಿಷಯ ಗೊತ್ತಿರಲಿಲ್ಲ. :( ನಾನು ಆಗಾಗ ಲಿಂಕುಗಳನ್ನು ಕೊಟ್ಟುಕೊಂಡು ನನ್ನ ಭಾರದ ಜತೆ ಡೇಟಾಬೇಸಿನ ಭಾರನೂ ಜಾಸ್ತಿ ಮಾಡುತ್ತಿದ್ದೆ :(.
ನಾಗೇಶರೆ ನಿಮ್ಮ ಕವಿತೆಗಳು ಚೆನ್ನಾಗಿವೆ.

ನಾಗೇಶರೆ,
ಈ ಕಂತನ್ನು ಬಹಳ ತಡವಾಗಿ ಪರಿಷ್ಕರಿಸಲು ಎತ್ತಿಕೊಳ್ಳುತ್ತಿರುವುದಕ್ಕೆ ಕ್ಷಮೆಯಿರಲಿ.
೨೫೫. ಧರ್ಮಾಧರ್ಮಾ-ವಿವರ್ಜಿತಾ
:
:
:
ಆಸೆ ಬಂಧನ ಬಿಡೆ ಅಂತಿಮ ಸಾಕ್ಷಾತ್ಕಾರ ಪರಿಶುದ್ಧ!
ಆಸೆ ಬಂಧನ = ಆಸೆ ಮೋಹ ಮಾಡಿ, ಏಕೆಂದರೆ ಆಸೆ ಮತ್ತು ಮೋಹಗಳ ಬಂಧನದಿಂದಾಗಿ ಒಬ್ಬನು ಪ್ರಪಂಚಕ್ಕೆ ಕಟ್ಟಿಹಾಕಲ್ಪಟ್ಟಿರುತ್ತಾನೆ.

೨೫೬. ವಿಶ್ವರೂಪಾ
ಸರ್ವ ವ್ಯಾಪಿ ಬ್ರಹ್ಮವೆ ವಿಶ್ವರೂಪ
ಜಗ ಸಕಲ ಚರಾಚರದೆ ವಾಸಿಪ
ಬ್ರಹ್ಮವಿಲ್ಲದೆಡೆ ಬ್ರಹ್ಮಾಂಡದಲೆಲ್ಲೆ
=ಈ ಸಾಲಿನ ಅರ್ಥವು ಸ್ವಲ್ಪ ಗೋಜಲೆನಿಸುತ್ತದೆ; ಸೂಕ್ತವಾಗಿ ಬದಲಿಸಬಹುದೇನೋ ನೋಡಿ.
ಕ್ರಿಯಾತ್ಮರಹಿತ ನಿರ್ಜೀವಕು ನೆಲೆ!

ಈ ಅಲ್ಪ ಬದಲಾವಣೆಗಳೊಂದಿಗೆ ಇದನ್ನು ಅಂತಿಮಗೊಳಿಸಬಹುದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಾಗೇಶರೆ,
ವಿಶ್ವರೂಪದ ವಿವರಣೆಯ ಉದ್ದನೆಯ ಕವನ ಅದ್ಭುತವಾಗಿದೆ. ನನ್ನ ಅನುವಾದದಲ್ಲಿ ಸುಷುಪ್ತಿ ಎನ್ನುವುದನ್ನು ದೀರ್ಘ ನಿದ್ರಾವಸ್ಥೆ ಎಂದು ತಪ್ಪಾಗಿ ಅನುವಾದಿಸಿದ್ದೇನೆ ಅದನ್ನು ಗಾಢ ನಿದ್ರಾವಸ್ಥೆ ಎಂದು ಮಾಡಿದರೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ ಎಂದುಕೊಳ್ಳುತ್ತೇನೆ. ಏಕೆಂದರೆ ಕುಂಭಕರ್ಣನದು ದೀರ್ಘನಿದ್ರಾವಸ್ಥೆಯಲ್ಲವೇ? ಗಾಢ ನಿದ್ರಾವಸ್ಥೆ ನಿಮಗೆ ಸರಿಯೆನಿಸಿದರೆ ಆ ಪದವನ್ನು ನಿಮ್ಮ ಪದ್ಯದಲ್ಲೂ ಬದಲಾಯಿಸಿ. ಈ ಒಂದು ಸಣ್ಣ ಬದಲಾವಣೆಯನ್ನು ಒಂದು ವೇಳೆ ನೀವು ಮಾಡಿದರಷ್ಟೇ ಈ ಕವನದಲ್ಲಿ ಮಾಡಬೇಕಾಗಿರುವ ಪರಿಷ್ಕರಣೆ. ಇಲ್ಲವೆಂದರೆ ಅದನ್ನು ಹಾಗೆಯೇ ಉಳಿಸಿ ಅಂತಿಮ ರೂಪವನ್ನು ಕೊಡಿ. ಅದ್ಭುತ ಕವನಕ್ಕೆ ಅಭಿನಂದನೆಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಮೂರನೆ ಸಾಲನ್ನು ತಿದ್ದಿದ್ದೇನೆ. ಬಹುಶಃ, ವಿಶ್ವರೂಪದ ಸೃಷ್ಟಿಚಕ್ರದ ವರ್ಣನೆಯ ನಂತರ ಈ ಪಂಕ್ತಿ ಇರದಿದ್ದರೂ ನಡೆಯುವುದೆಂದು ಕಾಣುತ್ತದೆ. ಆದರೂ ಪುಟ್ಟದಾಗಿರುವುದರಿಂದ ಅರ್ಥಪಲ್ಲಟವಾಗಿರದಿದ್ದರೆ, ಉಳಿಸಿಕೊಳ್ಳೋಣ. ಈ ತಿದ್ದುಪಡಿಯನ್ನೆ ಅಂತಿಮ ಕೊಂಡಿಗೂ ಸೇರಿಸುತ್ತಿದ್ದೇನೆ. ಸೃಷ್ಟಿ ಚಕ್ರದಲ್ಲಿ ಗಾಢ ನಿದ್ರೆ ಬದಲಾವಣೆ ಮಾಡಿದ್ದೇನೆ.

೨೫೬. ವಿಶ್ವರೂಪಾ
ಸರ್ವ ವ್ಯಾಪಿ ಬ್ರಹ್ಮವೆ ವಿಶ್ವರೂಪ
ಜಗ ಸಕಲ ಚರಾಚರದೆ ವಾಸಿಪ
ಬ್ರಹ್ಮವಿಲ್ಲದೆಡೆಯಿಲ್ಲ ಬ್ರಹ್ಮವೆ ಎಲ್ಲೆ
ಕ್ರಿಯಾತ್ಮರಹಿತ ನಿರ್ಜೀವಕು ನೆಲೆ!

ವಿಶ್ವರೂಪಾ (ಸೃಷ್ಟಿ ಚಕ್ರ)
__________________

ಸರ್ವ ವ್ಯಾಪಿ ಬ್ರಹ್ಮಲಕ್ಷಣವಾಗಿ ವಿಶ್ವರೂಪ
ಚರಾ ಚರ ಜೀವ ನಿರ್ಜೀವದಲೆಲ್ಲ ಪ್ರಸ್ತಾಪ
ಆತ್ಮ ಸಹಿತ ಜೀವ ಕ್ರಿಯಾನಿರತ ಸ್ವಭಾವ
ಆತ್ಮರಹಿತ ನಿರ್ಜೀವಕೆ ಕ್ರಿಯೆಯೆ ಅಭಾವ!

ವಾತ ನಿರ್ವಾತ ಬ್ರಹ್ಮಾಂಡದೆಲ್ಲೆಡೆ ಪರಬ್ರಹ್ಮ
ತಮದಿಂದುದಿಸುತ ಸೃಷ್ಟಿಗೆ ಬುದ್ದಿಯ ಉಗಮ
ಹುಟ್ಟಿತಲ್ಲಿ ಅಹಂಕಾರಾ ಪಂಚಭೂತ ವಿಕಾರ
ಜಗದಲಿ ಜೀವೋಧ್ಭವ ನಾನಾಜೀವಿ ಸಾಕಾರ!

ಹೊರಹೊಮ್ಮೊ ಸೃಷ್ಟಿಕುಣಿತ ತ್ರೈರೂಪಿ ಕುಂಚ
ಸ್ಥೂಲ ಸೂಕ್ಷ್ಮ ಕಾರಣ ರೂಪಾಂತರದ ಪ್ರಪಂಚ
ವೈಶ್ವಾನರ ಸೂತ್ರಾತ್ಮ ಈಶ್ವರರುಗಳ ಆಗಮನ
ಜಾಗ್ರತ್ ಸ್ವಪ್ನ ಸುಷುಪ್ತಿ ಜೀವಿತದೆ ಅನಾವರಣ!

ಶಾಸ್ತ್ರಾನುಸಾರ ಅನ್ವಯ ಬರಿ ಸೃಷ್ಟಿ ಸ್ಥಿತಿ ಲಯ
ತಂತ್ರಾ ತಿರೋಧಾನ ಅನುಗ್ರಹ ಬ್ರಹ್ಮದಕಾರ್ಯ
ತುರ್ಯಾ ರೂಪಾಂತರತೆ ತುರ್ಯಾತೀತ ಅದ್ವೈತ
ಆತ್ಮಪರಮಾತ್ಮ ಮಿಲನ ಕೈವಲ್ಯದೆ ಪರಿಸಮಾಪ್ತ!

ಕೈವಲ್ಯಕೆ ಮುಗಿದಾತ್ಮಯಾತ್ರೆ ಅಸ್ತಿತ್ವವೆ ಮಾಯ
ಜಾಗೃತ್ ಸ್ವಪ್ನ ಸುಷುಪ್ತಿ ಮೀರಿದ ಸಾಧನೆ ನಿಶ್ಚಯ
ಸೃಷ್ಟಿ ಸ್ಥಿತಿ ಲಯಕರ್ತರಾಗಿಹ ಬ್ರಹ್ಮ ವಿಷ್ಣು ರುದ್ರ
ವೈಶ್ವಾನರ ಹಿರಣ್ಯಗರ್ಭ ಈಶ್ವರ ಅವರ ಅವತಾರ!

ಜಾಗೃತ್ ಎಚ್ಚರ ಸ್ವಪ್ನ ಕನಸೆ ಸುಷುಪ್ತಿ ಗಾಢ ನಿದ್ರೆ
ತುರ್ಯಾ ತುರ್ಯಾತೀತಕೆ ಯೋಗಿ ತಲುಪೆ ಶ್ರದ್ಧೆ
ಚೇತನ ಪರಬ್ರಹ್ಮ ಸಾಕ್ಷಾತ್ಕಾರ ಕರ್ಮವೆ ಸಂಹಾರ
ಇಂದ್ರಿಯಾತೀತತೆಗೆ ದೇವಿ ವಿಶ್ವರೂಪ ಸಾಕ್ಷಾತ್ಕಾರ!

ದೇವಿ ವಿಶ್ವರೂಪ ಸರ್ವವ್ಯಾಪಿ ಅಗಣಿತ ಅಂಗ ರೂಪ
ಆದಿ ಮಧ್ಯ ಅಂತ್ಯವಿರದೆ ಎಲ್ಲೆಡೆ ಅನಂತಾ ಸ್ವರೂಪ
ಬ್ರಹ್ಮಾಂಡವಾಗಿ ಮಾರ್ಪಟ್ಟ ಕೃಷ್ಣನ ವಿಶ್ವರೂಪದಂತೆ
ವಿಶ್ವರೂಪಿ ಸರ್ವವ್ಯಾಪಿ ದೇವಿ ಕೃಷ್ಣನಾಗಿ ಶ್ರೀಲಲಿತೆ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ,
ಸಂಕ್ಪಿಪ್ತ ಪದ್ಯ ದೀರ್ಘ ಪದ್ಯ ಎರಡೂ ಇರಲಿ ಬಿಡಿ. ಸಮಯವಿಲ್ಲದವರು ಸಂಕ್ಷಿಪ್ತವಾದುದನ್ನಷ್ಟೇ ಓದಿಕೊಳ್ಳಲಿ. ಈ ಪರಿಷ್ಕೃತ ರೂಪವನ್ನು ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಅಂತಿಮ ಕೊಂಡಿಯನ್ನು ಎರಡೂ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದ್ದೇನೆ.
 
ಧನ್ಯವಾದಗಳೊಂದಿಗೆ 
 ನಾಗೇಶ ಮೈಸೂರು