ಕೊನೆಯಿರದ ದಾರಿ ಪಯಣ

ಕೊನೆಯಿರದ ದಾರಿ ಪಯಣ

ಕೊನೆಯಿರಿದ ದಾರಿ ಪಯಣ.. ಒಂದು ಲಹರಿ..

ದಾರಿಗಳು, ಬೀದಿಗಳು, ಹಾದಿಗಳು, ಮಾರ್ಗಗಳು, ಪಥಗಳು, ರಸ್ತೆಗಳು, ಗಲ್ಲಿಗಳು.. ಹೀಗೆ ದಾರಿಯೊಂದು ನಾಮಹಲವು. ದಾರಿಯ ಬೆನ್ಹತ್ತಿ ಹೋಗುವುದು ಒಬ್ಬರಿಗೆ ಒಂದು ತರಹದ ಅನುಭವ ನೀಡುತ್ತದೆ. ಗೊತ್ತಿರದ ಊರುಗಳು, ಗೊತ್ತಿರದ ದಾರಿಗಳು ಇವುಗಳ ಬೆನ್ಹತ್ತಿ ನಡೆಸುವ ಅಲೆದಾಟ, ಹುಡುಕಾಟ ಮನಸ್ಸಿನ ಮಿಡುಕಾಟ ಇವೆಲ್ಲ ಯಾಕೆ ಎಂದು ಕೇಳಿದರೆ ವಿವರಿಸಲಾಗದ ಸಂಗತಿಗಳು.

‘ದಿ ರೋಡ್‍ ನಾಟ್ ಟೇಕನ್‍’ ಎನ್ನುವ ಪದ್ಯ ನನ್ನ ತುಂಬ ಕಾಡಿದ ಪದ್ಯಗಳಲ್ಲಿ ಒಂದು. ಬದುಕಿನಲ್ಲಿ ನಾವೆಲ್ಲ ಒಂದೊಂದು ದಾರಿಯ ಹುಡುಕಾಟದಲ್ಲೇ ಇರುತ್ತೇವೆ ಅಲ್ಲವೇ? ಈ ‘ಹಾದಿ ತಪ್ಪಿದವರು’, ‘ಅಡ್ಡದಾರಿ ಹಿಡಿವರು’.. ಹೀಗೆಲ್ಲ ಅನ್ನುತ್ತಾರಲ್ಲ ಇದು ಬದುಕಿನಲ್ಲಿ ನಾವು ಹಿಡಿಯಬೇಕಾದ ದಾರಿಯ ಕುರಿತು ಸಮಾಜ ರೂಪಿಸಿರುವ ನಿಯಮಾವಳಿಗಳನ್ನು ಹೇಳುತ್ತದೆ ಅಲ್ಲವೆ? ಧರ್ಮ ಎಂದರೆ ಕೂಡ ಸಮಾಜದಲ್ಲಿ ಮನುಷ್ಯ ನಡೆಯಬೇಕಾದ ರೀತಿ-ನೀತಿಗಳ ಮಾರ್ಗದ ವಿವರಣೆ ಅಂತೆ. ಅಂದರೆ ಬದುಕು ಎಂದರೆ ದಾರಿಯ ಪಯಣ. ಅನೇಕಾನೇಕ ತಿರುವುಗಳ ಕೊನೆಯಿರದ ಪಯಣ...

ನೇರ ದಾರಿ, ಅಂಕು ಡೊಂಕಿನ ದಾರಿ, ಕಾಲುದಾರಿ ಭೂಮಿಯ ತುಂಬ ಎಷ್ಟೊಂದು ರೀತಿಯ ದಾರಿಗಳಿವೆ. ಯಾವ ದಾರಿ ಹಿಡಿದರೂ ಪಯಣಿಗ ಮಾತ್ರ ಪ್ರಯಾಣಿಸುತ್ತಾನೆ ದಾರಿ ನಿಂತಲ್ಲೇ ನಿಂತಿರುತ್ತದೆ. ಅದಕ್ಕೆ ಒಂದು ತರಲೆ ಮಾತಿದೆಯಲ್ಲ : ‘ಈ ದಾರಿ ಎಲ್ಲಿಗೆ ಹೋಗುತ್ತೆ? ಅಂತ ಕೇಳಿದರೆ ದಾರಿ ಎಲ್ಲಿಗೂ ಹೋಗಲ್ಲ ಇಲ್ಲೇ ಇರುತ್ತೆ. ನೀವು ಹೋಗಬೇಕು’ ಅಂತ. ಇದರ ತುಂಟತನದಲ್ಲಿ ಕೂಡ ಸತ್ಯವಿದೆ. ದಾರಿಯೆಂದರೆ ಪಯಣ ಪಯಣವೆಂದರೆ ಚಲನೆ ಚಲನೆ ಎಂದರೆ ಬದಲಾವಣೆ ಆದರೆ ಇವೆಲ್ಲ ನಡೆವ ಪಯಣಿಗರಿಗೆ ಮಾತ್ರ ದಾರಿಗಲ್ಲ.. ಭೂಮಿಯ ತುಂಬ ಈ ಬಗೆಯ ಎಷ್ಟೊಂದು ದಾರಿಗಳಿದೆಯಲ್ಲ! ಹಿಂದೊಮ್ಮೆ ಕ್ಲಾಸಿನಲ್ಲಿ ನಮ್ಮ ಮೇಷ್ಟ್ರೊಬ್ಬರು ಹೇಳಿದ್ದ ಕತೆ ನೆನಪಾಗುತ್ತಿದೆ: ‘ಒಂದು ಸಾರಿ ನರಿ ಭೂಮಿಯ ಹತ್ತಿರ ಒಂದು ಪೈಸೆ ಸಾಲ ಮಾಡಿತಂತೆ. ಅದನ್ನ ವಾಪಸ್ಸು ಕೊಡುವುದನ್ನ ಬಿಟ್ಟು ಭೂಮಿಯಿಂದ ತಪ್ಪಿಸಿಕೊಳ್ಳಲು ಯೋಚನೆ ಮಾಡಿ ಓಡಲು ಶುರುಮಾಡಿತಂತೆ ಎಷ್ಟು ಓಡಿದರೂ ಭೂಮಿಯಿಂದ ಹೊರಗೆ ಹೋಗಲು ಆಗದೆ ಸತ್ತೇ ಹೋಯಿತಂತೆ’. ಈ ಬದುಕಿನ ದಾರಿ ಕೂಡ ಕುತೂಹಲಕಾರಿ. ಇಲ್ಲಿ ತಿರುವುಗಳಿವೆ ಆದರೆ ಎಲ್ಲ ಏಕಮುಖ ರಸ್ತೆಗಳೇ.. ಕಳೆದ ಬದುಕಿನ ಹಾದಿಗೆ ಮರಳಿ ಬರಲಾಗುವುದಿಲ್ಲ. ‘ಭೂಮಿ ಗುಂಡಗಿದೆ ಎಲ್ಲಿಯಾದರೂ ಮತ್ತೆ ಸಿಕ್ಕೆ ಸಿಗುತ್ತೇವೆ’ ಅಂತ ಹೇಳ್ತಿವಲ್ಲ ಅದು ಕೂಡ ಭೂಮಿಯ ತುಂಬ ತುಂಬಿರುವ ಹಾದಿಯ ಕಾರಣದಿಂದಲೇ ಅಲ್ಲವೇ? ಗಾಳಿ ಹೆಜ್ಜೆ ಹಿಡಿದು ಸಾಗುವ ಸುಗಂಧಕ್ಕೆ, ಗಾಳಿಯಲ್ಲಿ ಹೆಜ್ಜೆ ಹಾಕುವ ಹಕ್ಕಿಗಳಿಗೆ, ಮೈಯೆಲ್ಲ ಕಾಲಿರುವ ನದಿಗೆ.. ಈ ದಾರಿಗಳ ಬಗ್ಗೆ ಏನನ್ನಿಸಬಹುದು?