೭೨. ಶ್ರೀ ಲಲಿತಾ ಸಹಸ್ರನಾಮ ೨೬೪ರಿಂದ ೨೬೫ನೇ ನಾಮಗಳ ವಿವರಣೆ

೭೨. ಶ್ರೀ ಲಲಿತಾ ಸಹಸ್ರನಾಮ ೨೬೪ರಿಂದ ೨೬೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೬೪ - ೨೬೫

Sṛṣṭi-kartrī सृष्टि-कर्त्री (264)

೨೬೪. ಸೃಷ್ಟಿ-ಕರ್ತ್ರೀ

              ಈ ನಾಮದಿಂದ ಪ್ರಾರಂಭಿಸಿ ೨೭೪ನೇ ನಾಮದವರೆಗೆ ಬ್ರಹ್ಮನ ಐದು ವಿಧವಾದ ಕ್ರಿಯೆಗಳನ್ನು ಕುರಿತಾಗಿ ಚರ್ಚಿಸಲಾಗುತ್ತಿದೆ. ಈ ಮುಂಚೆ ಪ್ರಜ್ಞೆಯ ಐದು ಹಂತಗಳನ್ನು ಕುರಿತಾಗಿ ಚರ್ಚಿಸಲಾಗಿತ್ತು. ಈಗ ಬ್ರಹ್ಮನ ಐದು ವಿಧವಾದ ಕ್ರಿಯೆಗಳ ಕುರಿತಾಗಿ ವಿವರಿಸಲಾಗುತ್ತಿದೆ. ವಾಕ್-ದೇವಿಯರು ಈ ಸಹಸ್ರನಾಮವನ್ನು ಯಾವ ವಿಧವಾಗಿ ರೂಪಿಸಿದ್ದಾರೆಂದರೆ ಇದು ಪರಬ್ರಹ್ಮದ (ಸಗುಣ ಹಾಗೂ ನಿರ್ಗುಣ ರೂಪಗಳೆರಡರ) ಎಲ್ಲಾ ಅಂಶಗಳನ್ನು ಕುರಿತು ಹೇಳುತ್ತದೆ. ಒಬ್ಬರು ಈ ಸಹಸ್ರನಾಮದ ಎಲ್ಲಾ ಅಂತರಾರ್ಥವನ್ನು ತಿಳಿದುಕೊಳ್ಳಬಲ್ಲರಾದರೆ ಅದು ಎಲ್ಲಾ ಉಪನಿಷತ್ತುಗಳ ಜ್ಞಾನಕ್ಕೆ ಸಮನಾದುದು ಎನ್ನುವುದರ ಅರಿವಾಗುತ್ತದೆ. ಆತ್ಮಸಾಕ್ಷಾತ್ಕಾರದ ಮಾರ್ಗದಲ್ಲಿ ಭಗವದ್ಗೀತೆಯು ಮತ್ತೊಂದು ಅನರ್ಘ್ಯ ನಿಧಿಯಾಗಿದೆ.

             ಈ ನಾಮದಲ್ಲಿ ಬ್ರಹ್ಮದ ಸೃಷ್ಟಿ ಕಾರ್ಯದ ಅಂಶವನ್ನು ಕುರಿತು ಹೇಳಲಾಗಿದೆ. ಸೃಷ್ಟಿಯು ದೇವಿಯ ತಮೋ ಗುಣದಿಂದ ಉದ್ಭವಿಸುತ್ತದೆ. ಬ್ರಹ್ಮದ ಮೂರು ಪ್ರಮುಖ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಅನುಕ್ರಮವಾಗಿ ದೇವರ ಮೂರು ರೂಪಗಳಾದ ಬ್ರಹ್ಮ, ವಿಷ್ಣು ಹಾಗೂ ರುದ್ರ ಇವರುಗಳು ಪ್ರತಿನಿಧಿಸುತ್ತಾರೆ.

          ಸೌಂದರ್ಯ ಲಹರಿಯು (ಶ್ಲೋಕ ೨೪) ಬ್ರಹ್ಮದ ಮೂರು ಕ್ರಿಯೆಗಳನ್ನು ಕುರಿತಾಗಿ ಹೇಳುತ್ತದೆ, "ಬ್ರಹ್ಮನು ಈ ವಿಶ್ವವನ್ನು ಸೃಜಿಸುತ್ತಾನೆ, ವಿಷ್ಣು ಇದನ್ನು ಸುಸ್ಥಿತಿಯಲ್ಲಿಡುತ್ತಾನೆ ಮತ್ತು ರುದ್ರನು ಇದನ್ನು ಲಯಗೊಳಿಸುತ್ತಾನೆ. ಈಶ್ವರನು ಅದನ್ನು ವಿನಾಶಗೊಳಿಸುವುದಲ್ಲದೇ ತನ್ನಷ್ಟಕ್ಕೆ ತಾನೇ ಮರೆಯಾಗುತ್ತಾನೆ. ಸದಾಶಿವನು, ಬಳ್ಳಿಯಂತಿರುವ ನಿನ್ನ ಕಣ್ಣ ಹುಬ್ಬಗಳನ್ನು (ದೇವಿಯ ಕಣ್ಣು ಹುಬ್ಬುಗಳ ಸಾಂಕೇತಿಕ ವರ್ಣನೆ) ಕ್ಷಣಕಾಲ ನೀನು ಚಲಿಸಿದಾಗ ನಿನ್ನ ಆಜ್ಞೆಗನುಗುಣವಾಗಿ ಈ ಎಲ್ಲಾ ಕ್ರಿಯೆಗಳನ್ನು ಅನುಮೋದಿಸುತ್ತಾನೆ.

ಗುಣಗಳ ಕುರಿತಾಗಿ ಇನ್ನಷ್ಟು ವಿವರಗಳು:

             ಮೂರು ವಿಧವಾದ ಗುಣಗಳಿವೆ; ಅವು ಪ್ರಕೃತಿಯ ಹುಟ್ಟು ಸ್ವಭಾವ ಅಥವಾ ಲಕ್ಷಣಗಳಾಗಿವೆ. ಆ ಮೂರು ಗುಣಗಳೆಂದರೆ ಸತ್ವ, ರಜೋ ಮತ್ತು ತಮೋ ಗುಣಗಳು. ಈ ಪ್ರತಿಯೊಂದು ಗುಣದಲ್ಲಿಯೂ ಇನ್ನೆರಡೂ ಗುಣಗಳು ಅಂತರ್ಗತವಾಗಿರುತ್ತವೆ. ಸತ್ವ ಗುಣವೆಂದರೆ ಎಲ್ಲಿ ಗುಣಮಟ್ಟ ಹಾಗೂ ಜ್ಞಾನವು ತನ್ನ ಅತ್ಯುತ್ಕೃಷ್ಟ ಸ್ಥಿತಿಯಲ್ಲಿರುತ್ತದೆಯೋ ಮತ್ತಲ್ಲಿ ಇತರೇ ಗುಣಗಳು ಕನಿಷ್ಟ ಪ್ರಮಾಣದಲ್ಲಿರುತ್ತವೆಯೋ ಅದು. ಈ ಹಂತದಲ್ಲಿಯೇ ಆಧ್ಯಾತ್ಮಿಕ ಬೆಳವಣಿಗೆಯ ವಿಕಸನವು ಆರಂಭವಾಗುತ್ತದೆ. ಯಾವಾಗ ಕ್ರಿಯೆ ಮತ್ತು ಉದ್ವೇಗಗಳು ಪ್ರಧಾನವಾಗಿರುತ್ತವೆಯೋ ಆಗ ರಜೋ ಗುಣವು ಪ್ರಮುಖವಾಗಿರುತ್ತದೆ. ಇದು ಭೂಮಟ್ಟದ ಸ್ತರದಲ್ಲಿದ್ದು ಅದು ದೈನಂದಿನ ಜ್ಞಾನಕ್ಕೆ ಸಂಭಂದಪಟ್ಟಿರುವುದಾಗಿದೆ. ಇದು ಪ್ರಾಪಂಚಿಕವಾಗಿ ಉನ್ನತವಾದ ಬಯಕೆಗಳಿಂದ ಕೂಡಿರುವುದಾಗಿದೆ. ಈ ಹಂತದಲ್ಲಿ ಗುರಿ ಅಥವಾ ಲಕ್ಷ್ಯವು ನಿರ್ದೇಶಿಸಲ್ಪಟ್ಟು ಮತ್ತದನ್ನು ಹೊಂದಲು ಮೋಹ, ಆತ್ಮವಂಚನೆ, ದುರಹಂಕಾರ (ಸೊಕ್ಕು), ಅಧರ್ಮ, ತಾತ್ಸಾರ, ದೂಷಣೆ/ನಿಂದನೆ ಮತ್ತು ತನ್ಮೂಲಕ ಉಂಟಾಗುವ ದುಃಖ ಮತ್ತು ಯಾತನೆಗಳ ಅನುಭವಿಸುವಿಕೆಯಾಗಿದೆ. ಈ ಹಂತದಲ್ಲಿಯೇ ಗರಿಷ್ಠ ಪ್ರಮಾಣದ ಕರ್ಮ ಫಲವು ಶೇಖರವಾಗುತ್ತದೆ. ತಮೋ ಗುಣವು ಜಡತ್ವ (ನಿಷ್ಕ್ರಿಯತೆ) ಮತ್ತು ಅಜ್ಞಾನವಾಗಿದೆ. ಇದು ಭೂ ಮಟ್ಟಕ್ಕಿಂತ ಕೆಳಗಿನ ಸ್ತರಗಳೊಂದಿಗೆ ಸಂಭಂದ ಹೊಂದಿದೆ. ಭ್ರಮೆ ಮತ್ತು ಅಜ್ಞಾನಗಳು ಇಲ್ಲಿ ಪ್ರಧಾನವಾಗಿರುತ್ತವೆ. ಸೋಮಾರಿತನ, ವ್ಯಾಮೋಹ, ಗೊಂದಲ, ಮೂರ್ಖತನ, ಜಿಗುಪ್ಸೆ, ಬೇಜವಾಬ್ದಾರಿತನ (ಅಜಾಗರೂಕತೆ), ಅಶ್ಲೀಲತೆ, ವ್ಯಸನ, ನೋವು, ಕಾತರತೆ, ದ್ವೇಷ, ಹಿಂಸೆ ಮೊದಲಾದವುಗಳು ತಮೋ ಗುಣದ ಪ್ರಮುಖ ಲಕ್ಷಣಗಳಾಗಿವೆ.

Brahma-rūpā ब्रह्म-रूपा (265)

೨೬೫. ಬ್ರಹ್ಮ-ರೂಪಾ

           ದೇವಿಯು ಸೃಷ್ಟಿಸುವ ದೇವರಾದ ಬ್ರಹ್ಮನ ರೂಪದಲ್ಲಿದ್ದಾಳೆ. ಬ್ರಹ್ಮನಿಗೆ ನಾಲ್ಕು ತಲೆಗಳಿವೆ. ಬಹುಶಃ ಈ ನಾಲ್ಕು ತಲೆಗಳು ಅಂತಃಕರಣದ ನಾಲ್ಕು ಅಂಶಗಳಾದ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳ ಪ್ರತೀಕವಾಗಿರಬೇಕು. ಈ ನಾಲ್ಕು ವಸ್ತುಗಳಿಲ್ಲದೆ ಸೃಷ್ಟಿಯು ಸಾಧ್ಯವಿಲ್ಲ. ಬ್ರಹ್ಮನ ನಾಲ್ಕು ತಲೆಗಳ ಕುರಿತಾಗಿ ಅನೇಕ ಕಥೆಗಳಿವೆ. ಮೊದಲು ಅವನಿಗೆ ಐದು ತಲೆಗಳಿದ್ದುವಂತೆ ಬಹುಶಃ ಅದು ಸೃಷ್ಟಿಗೆ ಅವಶ್ಯವಾದ ಪಂಚಭೂತಗಳಾಗಲಿ ಅಥವಾ ಪಂಚಪ್ರಾಣಗಳಾದ ಪ್ರಾಣ, ಅಪಾನ, ವ್ಯಾನ, ಸಮಾನ ಮತ್ತು ಉದಾನಗಳಾಗಿರಬಹದು. ಬ್ರಹ್ಮನು ಶಿವನಿಗೆ ಗೌರವ ತೋರದೇ ಇದ್ದುದರಿಂದ ಅವನ ತಲೆಯನ್ನು ಶಿವನು ಕತ್ತರಿಸಿದನೆಂದು ಹೇಳಲಾಗುತ್ತದೆ. ಮತ್ತೊಂದು ಕಥೆಯೂ ಇದೆ, ಅದರ ಪ್ರಕಾರ ಬ್ರಹ್ಮನು ತನ್ನ ದೇಹವನ್ನು ಅಡ್ಡವಾಗಿ ಕತ್ತರಿಸಿಕೊಂಡಿದ್ದನಂತೆ ಮತ್ತು ಅವುಗಳಲ್ಲಿ ಒಂದು ಪುರಷ ರೂಪವಾಗಿದ್ದರೆ ಇನ್ನೊಂದು ಸ್ತ್ರೀ ರೂಪವಾಗಿತ್ತು (ಇದಕ್ಕೂ ಶಿವನ ಅರ್ಧನಾರೀಶ್ವರ ರೂಪದ ಕಥೆಗೂ ಸಂಭಂದವಿಲ್ಲ, ಇದರಲ್ಲಿ ಶಿವನು ತನ್ನ ದೇಹವನ್ನು ಲಂಬವಾಗಿ ಕತ್ತರಿಸಿಕೊಂಡಿದ್ದ ಮತ್ತು ಅವನ ಇನ್ನೊಂದು ಭಾಗವನ್ನು ಶಕ್ತಿಯು ಆವರಿಸಿದ್ದಳು). ಬ್ರಹ್ಮನು ಮುತ್ತಾತನಾದರೆ, ವಿಷ್ಣುವು ತಾತ ಮತ್ತು ಶಿವನು ಎಲ್ಲಾ ಜೀವಿಗಳ ತಂದೆಯಾಗಿದ್ದಾನೆ ಎಂದೂ ಸಹ ಹೇಳಲಾಗಿದೆ.

ಸಂಕ್ಷಿಪ್ತವಾಗಿ ಸೃಷ್ಟಿಯ ಪ್ರಕ್ರಿಯೆಯನ್ನು ಕುರಿತು ಇನ್ನಷ್ಟು ಹೆಚ್ಚಿನ ವಿವರಗಳು:

          ಪುರಷ ಎಂದೂ ಕರೆಯಲ್ಪಡುವ ಆತ್ಮವು ಪ್ರಕೃತಿಯೊಂದಿಗೆ ಸಂಯೋಗ ಹೊಂದಿದಾಗ ಮಾತ್ರವೇ ಅದು ಅನಾವರಣಗೊಳ್ಳಲು ಸಾಧ್ಯ. ಯಾವಾಗ ಪುರುಷವು ಪ್ರಕೃತಿಯೊಂದಿಗೆ ಸಂಭಂದವನ್ನು ಹೊಂದುತ್ತದೆಯೋ ಆಗ ಪ್ರಕೃತಿಯು ಮೊದಲು ಸೂಕ್ಷ್ಮವಾದ ಅಭೌತಿಕ ವಸ್ತುವಾಗಿ ಮಾರ್ಪಟ್ಟು ಆಮೇಲೆ ಸ್ಥೂಲವಾಗಿ ರೂಪಾಂತರ ಹೊಂದುತ್ತದೆ. ಯಾವಾಗ ಸ್ಥೂಲ ರೂಪವು ಉಂಟಾಗುವುದೋ, ಆಗ ಅದರಿಂದ ಮೂರು ವಿಧವಾದ ಶರೀರಗಳು ಉತ್ಪನ್ನವಾಗುತ್ತವೆ; ಅವೆಂದರೆ ಸ್ಥೂಲ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ. ಸ್ಥೂಲ ಶರೀರವು ಬಾಹ್ಯವಾಗಿದ್ದರೆ, ಸೂಕ್ಷ್ಮ ಮತ್ತು ಕಾರಣ ಶರೀರಗಳು ಆಂತರಿಕವಾಗಿರುತ್ತವೆ. ಆತ್ಮವು ಮುಕ್ತಿಯನ್ನು ಪಡೆಯುವ ತನಕ ಸೂಕ್ಷ್ಮ ಮತ್ತು ಕಾರಣ ಶರೀರಗಳ ಸಂಭಂದವು ಅದರೊಂದಿಗೆ ಮುಂದುವರೆಯುತ್ತದೆ. ಕೇವಲ ಸ್ಥೂಲ ಶರೀರ ಮಾತ್ರವೇ ನಾಶ ಹೊಂದುತ್ತದೆ. ಅನೇಕ ಜನ್ಮಗಳಿಂದ ಪಡೆದ, ಗ್ರಹಿಕೆಗೆ ನಿಲುಕದ ಅಥವಾ ಅಗೋಚರವಾದ ಗುರುತುಗಳು (ನೆನಪುಗಳು) ಈ ಶರೀರಗಳಲ್ಲಿ ಹುದುಗಿಸಲ್ಪಟ್ಟಿರುತ್ತವೆ ಮತ್ತು ತನ್ಮೂಲಕ ಪ್ರತಿ ಜನ್ಮದಲ್ಲಿಯೂ ಮನಸ್ಸಿನ ಮೇಲೆ ಕೆಲವೊಂದು ಗುಣಗಳ ದಟ್ಟವಾದ ಪ್ರಭಾವವು ಉಂಟಾಗುತ್ತದೆ. ಇವು ಕರ್ಮದ ಬೀಜಗಳಾಗಿದ್ದು ಆತ್ಮದಲ್ಲಿ ಹುದುಗಿರುತ್ತವೆ.

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 257-263 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Sat, 07/20/2013 - 04:17

ಶ್ರೀಧರರೆ, ಲಲಿತಾ ಸಹಸ್ರನಾಮ ೨೬೪ - ೨೬೫ರ ಸಾರಾಂಶ ತಮ್ಮ ಪರಿಷ್ಕರಣೆ, ಅವಗಾಹನೆಗೆ ಸಿದ್ದ :-) - ನಾಗೇಶ ಮೈಸೂರು

೨೬೪. ಸೃಷ್ಟಿ-ಕತ್ರೀರ್ 
ಬ್ರಹ್ಮ ಕ್ರಿಯೆಗಳು ಐದರಲಿದು ಬ್ರಹ್ಮದ ಸೃಷ್ಟಿಯ ಕುರಿತು
ದೇವಿ ತಮೋ ಗುಣದಿಂದ ಉದ್ಭವ ಸೃಷ್ಟಿಯಾಗಿ ಅರಳಿತು
ಸೃಷ್ಟಿ ಸ್ಥಿತಿ ಲಯ ಪ್ರತಿನಿಧಿಸುತಿಹಾ ಬ್ರಹ್ಮ ವಿಷ್ಣು ರುದ್ರರು
ವಿನಾಶಕೆ ಈಶ್ವರ ಸೃಷ್ಟಿಕತ್ರೀರ್ಗನುಮೋದಿಸೆ ಸದಾಶಿವರು!

ಗುಣಗಳ ಕುರಿತಾಗಿ ಇನ್ನಷ್ಟು ವಿವರಗಳು: 
ಪ್ರಕೃತಿ ಹುಟ್ಟು ಸ್ವಭಾವ ಲಕ್ಷಣ ಸತ್ವ ರಾಜೋ ತಮ ಮೂರು
ಗರಿಷ್ಠ ಅತ್ಯುತ್ಕೃಷ್ಟ ಗುಣಮಟ್ಟ ಜ್ಞಾನ ಸತ್ವದೆ ಅಧ್ಯಾತ್ಮಿಕ ಸ್ವರ
ಕ್ರಿಯೆ ಉದ್ವೇಗ ಪ್ರಧಾನ ಲೌಕಿಕ ಬಯಕೆ ಕರ್ಮಫಲ ರಾಜೋ
ಭ್ರಮೆ ಅಜ್ಞಾನ ಪ್ರಧಾನ ಜಡತ್ವ ನಿಷ್ಕ್ರಿಯತೆ ತುಂಬಿದ ತಮೋ!

೨೬೫. ಬ್ರಹ್ಮ-ರೂಪಾ 
ಸೃಷ್ಟಿಕರ್ತ ಬ್ರಹ್ಮ ಚತುರ್ಶಿರ ಪ್ರತೀಕಾ ಅಂತಃಕರಣಕೆ
ಮನಸು ಬುದ್ಧಿ ಚಿತ್ತ ಅಹಂಕಾರ ಮೂಲವಸ್ತು ಸೃಷ್ಟಿಗೆ
ಬ್ರಹ್ಮನಾಗಿ ಮುತ್ತಾತ ತಾತ ವಿಷ್ಣು ತಂದೆ ಶಿವ ಜೀವಿಗೆ
ದೇವಿ ಬ್ರಹ್ಮ ರೂಪಾ ಲಲಿತೆ ಬ್ರಹ್ಮದ ಚಾಲನೆ ಸೃಷ್ಟಿಗೆ!
         
ಸಂಕ್ಷಿಪ್ತವಾಗಿ ಸೃಷ್ಟಿಯ ಪ್ರಕ್ರಿಯೆಯನ್ನು ಕುರಿತು ಇನ್ನಷ್ಟು ಹೆಚ್ಚಿನ ವಿವರಗಳು:

ಪುರುಷಾತ್ಮ ಪ್ರಕೃತಿ ಸಂಯೋಗಕೆ ಮಾತ್ರ ಸೃಷ್ಟಿ ಅನಾವರಣ
ಅಭೌತಿಕತೆ ಸೂಕ್ಷ್ಮದಿಂದ ಪ್ರಕೃತಿ ಸ್ಥೂಲವಾಗಿ ರೂಪಾಂತರಣ
ಬಾಹ್ಯ ಸ್ಥೂಲದ ಶರೀರ ಜತೆ ಆಂತರಿಕದ ಸೂಕ್ಷ್ಮ ಕಾರಣ ಶರೀರ
ಮುಕ್ತಾತ್ಮತನಕ ಬಂಧ ಸ್ಥೂಲನಾಶ ಕರ್ಮಬೀಜದೆ ಜನ್ಮಾಂತರ!