ನೇರಳೆ ಬಣ್ಣದ ಹಣ್ಣಿನ ರಾಣಿ - ಮಾಂಗಸ್ಟೀನ್

ನೇರಳೆ ಬಣ್ಣದ ಹಣ್ಣಿನ ರಾಣಿ - ಮಾಂಗಸ್ಟೀನ್

ಹಣ್ಣಲ್ಲೆ ಹೂವಿನ ಬೆಡಗು, ಬಿನ್ನಾಣ ತೋರುವ ಸೊಗಸುಗಾತಿ 'ಮಾಂಗಸ್ಟೀನ್'.


ಸಿಂಗಪೂರಿನ ಕಡೆಯ ಹಣ್ಣಿನ ರಾಜ ಡುರಿಯನ್ ಕುರಿತು ಬರೆಯುತ್ತಿದ್ದಾಗ, ಇಲ್ಲಿನ ಹಣ್ಣಿನ ರಾಣಿ ಯಾರೆಂದು ಹುಡುಕುತಿದ್ದೆ. ಆಗ ಸಿಕ್ಕ ಉತ್ತರ - 'ಮಾಂಗಸ್ಟೀನ್'. ರಾಣಿಯೆಂಬ ಪಟ್ಟವೇಕಿದೆಯೆಂದು ಕುತೂಹಲದಿಂದ ಲಿಂಕು ಹುಡುಕುತ್ತಾ ಹೋದಂತೆ ಕೊಂಚ ವಿಶಿಷ್ಟವಾಗಿ ಇಂಗ್ಲೆಂಡಿನ ರಾಣಿಯ ಜತೆ ಥಳುಕು ಹಾಕಿಕೊಂಡಿರುವ ಸ್ವಾರಸ್ಯವೂ ಬೆಳಕಿಗೆ ಬಂತು. ಬಹುಶಃ ಆ 'ಕನೆಕ್ಷನ್ನಿನಿಂದಲೆ' 'ರಾಣಿಯ ಹಣ್ಣು' ಕಾಲ ಕಳೆದಂತೆ 'ಹಣ್ಣಿನ ರಾಣಿ'ಯಾಗಿಬಿಟ್ಟಿತೊ ಏನೊ? ಈ ದಂತ ಕಥೆಯಿಂದಲೆ ಈ ರಾಣಿಯ ಪ್ರವರವನ್ನು ಶುಭಾರಂಭಿಸಿಬಿಡುವ - ಬನ್ನಿ!


ಚರಿತ್ರೆಯಲಿ ಇಣುಕಿ ನೋಡಿದರೆ ವಿಕ್ಟೋರಿಯಾ ರಾಣಿಗೂ ಈ 'ಮಾಂಗಸ್ಟೀನ್' ಅತ್ಯಂತ ಪ್ರಿಯವಾದ ಹಣ್ಣಾಗಿತ್ತಂತೆ. ಬಹುಶಃ ಇದನ್ನು ಹಣ್ಣುಗಳ ರಾಣಿಯೆಂದು ಬಣ್ಣಿಸಲು ಅದೊಂದು ಗುಣಾತ್ಮಕ ಪರಿಗಣನೆಯಾಗಿ ಜತೆಗೆ ಸೇರಿಕೊಂಡಿರಬೇಕೆಂದು ಕಾಣುತ್ತದೆ! ಅಂದಹಾಗೆ ಈ ಹಣ್ಣು ಹಾಗೂ ರಾಣಿ ವಿಕ್ಟೋರಿಯ ನಡುವೆ ಇರುವ ನಂಟಿನ ಕುರಿತು ಸುತ್ತಾಡುತ್ತಿರುವ ದಂತ ಕಥೆ ಈ ರೀತಿ ಇದೆ - ನೇರಳೆ ಬಣ್ಣದ ಹೊದಿಕೆಯ ಅದ್ಭುತ ರುಚಿಯ ಹಣ್ಣೊಂದು ಆಗ್ನೇಯ ಏಶಿಯಾ ಭಾಗದಲ್ಲಿ ಬೆಳೆಯುತ್ತದೆಂದು ಅವಳ ಕಿವಿಗೆ ಬಿದ್ದಾಗ, ಆ ಹಣ್ಣನ್ನು ತಿನ್ನಬಹುದಾದ ಸ್ಥಿತಿಯಲ್ಲಿ ಇಂಗ್ಲೆಂಡಿಗೆ ತಂದುಕೊಟ್ಟವರಿಗೆ 'ಸರದಾರಿಕೆ ಪಟ್ಟ' (ನೈಟ್ ಹುಡ್) ದಯಪಾಲಿಸುವುದಾಗಿ ವಾಗ್ದಾನದ ಆಮಿಷವಿತ್ತರೂ, ಹತ್ತೊಂಬತ್ತನೆ ಶತಮಾನದ ಆ ದಿನಗಳ ಸಾಗಾಣಿಕೆಯ ಮಿತಿಯಲ್ಲಿ ಯಾರಿಗೂ ಅದನ್ನು ತಿನ್ನುವ ಸ್ಥಿತಿಯಲ್ಲಿ ತರಲು ಸಾಧ್ಯವೇ ಆಗಲಿಲ್ಲವಂತೆ! ಅದರ ಸೂಕ್ಷ್ಮ ಗುಣದಿಂದಾಗಿ ಬ್ರಿಟನ್ ತಲುಪುವ ಮೊದಲೆ ಹಾಳಾಗಿ ಹೋಗಿರುತ್ತಿತ್ತಂತೆ. ಇಷ್ಟೆಲ್ಲ ಸೂಕ್ಷ್ಮಜ್ಞತೆಯಿದ್ದ ಮೇಲೆ ಅದು 'ರಾಣಿ ಹಣ್ಣೆ' ಆಗಿರಬೇಕು ಬಿಡಿ, ಸಂಶಯವಿಲ್ಲ!


ಮಲೇಶಿಯಾ ಪೆನಿನ್ಸುಲಾದ ಮೂಲನಿವಾಸಿಯಾದ ಈ ನಿತ್ಯ ಹರಿದ್ವರ್ಣದ ಹಣ್ಣನ್ನು 'ಮಲೈ' ಭಾಷೆಯಲ್ಲಿ 'ಮಂಗಿಸ್' ಎಂದು ಕರೆಯುತ್ತಾರೆ. ಥಾಯ್ಲ್ಯಾಂಡ್, ಫಿಲಿಫೈನ್ಸ್ ಹಾಗೂ ಭಾರತದ ಕೆಲವೆಡೆ, ಸೂಕ್ತ ವಾತಾವರಣವಿದ್ದಲ್ಲಿ ಈ ಹಣ್ಣನ್ನು ಬೆಳೆಯುತ್ತಾರಂತೆ. ದಟ್ಟ ನೆರಳೆಯ ಸಿಪ್ಪೆಯಡಿಯಿರುವ ಬಿಳಿಯ ಸಿಹಿ ಹಣ್ಣನ್ನು ಸ್ಥಳಿಯರೂ, ವಿದೇಶೀಯರೂ, ಡ್ಯುರಿಯನ್ನಿನ ತರಹದ ಯಾವುದೆ ಪರಿಮಿತಿಗಳಿಡದೆ ಧಾರಾಳವಾಗಿ ಮುಕ್ತ ಮನಸ್ಸಿನಿಂದ ತಿನ್ನಬಹುದು! ಹೆಚ್ಚುಕಡಿಮೆ ಎರಡು ಹಣ್ಣು ಒಂದೆ ಸಮಯದಲ್ಲಿ ದೊರಕುವುದರಿಂದ , ಒಂದರ ಸಂವಾದಿಯಾಗಿ ಮತ್ತೊಂದನ್ನು ತಿನ್ನುವುದು ಸಾಮಾನ್ಯವಾಗಿ ಕಾಣುವ ದೃಶ್ಯ; ಕಾರಣ - ಡ್ಯೂರಿಯನ್ನು ಅಪ್ಪಟ 'ಉಷ್ಣಕ್ಕೆ' ಹೆಸರಾಗಿದ್ದರೆ, ಈ ಮಾಂಗಸ್ಟೀನ್ ವಿರುದ್ದವಾಗಿ 'ತೀರಾ ಶೀತಲ' ಪರಿಣಾಮದ ಹೆಣ್ಣು. ಅಲ್ಲಿಗೆ ಪ್ರತಿ ಡ್ಯುರಿಯನ್ನಿಗೂ ಒಂದೊಂದು ಮಾಂಗಸ್ಟೀನ್ ತಿನ್ನುತ್ತಿದ್ದರಾಯ್ತಲ್ಲಾ - ಪರಿಪೂರ್ಣ ಸಮತೋಲನತೆಗೆ! ತೀರಾ ರಸಭರಿತ 'ಘನ ಜ್ಯೂಸಿನಂತಹ' ಬಿಳಿ ತಿರುಳು ಸಿಹಿಯಾಗಿದ್ದರೂ ಮೆಲುವಾದ ಆಮ್ಲೀಯತೆಯನ್ನು ಒಳಗೊಂಡ ರುಚಿಯಿರುತ್ತದೆ. ಸಾಲದ್ದಕ್ಕೆ ಯಥೇಚ್ಚವಾಗಿ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ 'ಬಿ' ಮತ್ತು 'ಸಿ'ಗಳು ಸೇರಿಕೊಂಡಿವೆಯಾಗಿ , ಈ ಎಲ್ಲಾ 'ಸಕಲ ಕಲಾ ವಲ್ಲಭತೆ'ಯಿಂದಾಗಿಯೂ ರಾಣಿಯ ಪಟ್ಟ ಸಿಕ್ಕಿರಬೇಕು. ಸಾಧಾರಣವಾಗಿ ಕೈಯ್ಬೆರಳುಗಳಿಂದ ಎರಡೂ ಕಡೆ ಮೆಲುವಾಗಿ ಒತ್ತಡ ಹಾಕಿ ಹಿಂಡುವ ರೀತಿ ಹಿಂಜಿದರೆ ಸಿಪ್ಪೆ ಬಾಯ್ಬಿಟ್ಟುಕೊಂಡು ಒಳಗಿನ ಬಿಳಿ ತಿರುಳನ್ನು ಕಂದನ ನಗುವಿನ ಹಾಗೆ ತೋರಿಸುತ್ತದೆ (ಪುಟ್ಟ ಮಕ್ಕಳ ಹಾಲುಗಲ್ಲವನ್ನು ಮೆಲುವಾಗಿ ಒತ್ತಿದರೆ ಹಲ್ಲಿರದ ಬೊಚ್ಚು ಬಾಯಿ ಮಲ್ಲಿಗೆ ನಗೆಯಾಗಿ ಬಿಚ್ಚಿಕೊಳ್ಳುವ ಹಾಗೆ). ಒಂದು ವೇಳೆ ಸಿಪ್ಪೆ ಬಾಯ್ಬಿಡಲು ತಕರಾರಿಟ್ಟಿತೆಂದರೆ, ಇನ್ನು ಹಣ್ಣಾಗಿಲ್ಲವೆಂದೆ ಅರ್ಥ - ಹಾಗಾದಲ್ಲಿ ಇನ್ನು ಒಂದೆರಡು ದಿನ ಹಣ್ಣಾಗಲಿಕ್ಕೆ ಬಿಡುವುದೆ ಕ್ಷೇಮ. ಅಂದ ಹಾಗೆ ಹಣ್ಣಾಗಿದ್ದವುಗಳ ಜತೆಯು ಒಂದು ಮುಖ್ಯ ಮುನ್ನೆಚ್ಚರಿಕೆ - ಅಪ್ಪಿ ತಪ್ಪಿಯು, ಈ ರಸಭರಿತ ಹಣ್ಣಿನ ರಸವನ್ನು ಬಟ್ಟೆಯ ಮೇಲೆ ಬೀಳಲು ಬಿಡಬೇಡಿ (ಎಳೆ ಮಗುವನ್ನು ಎತ್ತಿಕೊಳ್ಳುವ ಮೊದಲು ಪ್ಯಾಂಪರೊ ಅಥವಾ ನಮ್ಮ ಸಾಂಪ್ರದಾಯಿಕ ಹನುಮಾನ್ ಲಂಗೋಟಿಯ ತರದ್ದೇನಾದರೂ ಬಟ್ಟೆ ಇದೆಯೊ ಇಲ್ಲವೊ ಖಚಿತಪಡಿಸಿಕೊಳ್ಳುವ ಹಾಗೆ - ಗಂಗಾಸ್ನಾನಕ್ಕೂ ಹೊತ್ತು ಗೊತ್ತಿರಬೇಕಲ್ಲ!) ಒಂದು ವೇಳೆ ಬಿದ್ದರೆ, ನಿಮಗೊಂದು ಶಾಶ್ವತವಾದ, ಅಳಿಸಲಾಗದ ಹೊಸ ಡಿಸೈನೊಂದು ಕಲೆಯ ರೂಪದಲ್ಲಿ ಪುಕ್ಕಟೆಯಾಗಿ ಸಿಕ್ಕಿತೆಂದೆ ಅರ್ಥ! ಆ ರೀತಿಯ ಡಿಸೈನ್ ಬೇಕೆಂದೇ, ಉದ್ದೇಶಪೂರ್ವಕವಾಗಿ ಹಳೆ ಬಟ್ಟೆ ಬಳಿಸಿದರೆ - ಅದು ಬೇರೆ ವಿಷಯ ಬಿಡಿ. ನಾನು ಹೇಳಿದ್ದರಲ್ಲಿ ನಿಮಗೆ ನಂಬಿಕೆಯಿರದಿದ್ದರೆ, ಬೇಕಿದ್ದರೆ ನೀವೆ ಈ ಕೊಂಡಿಯನ್ನು ಗಿಂಡಿ ನೋಡಿ, ಅವರೂ ಹೀಗೆ ಎಚ್ಚರಿಸುತ್ತಾರೆ!

http://meridian103.com/issue-7/flora-and-fauna/


ಔಷದೀಯ ಗುಣಾಲಕ್ಷಣಗಳು ಹೇರಳವಾಗಿರುವ ಈ ಉಷ್ಣವಲಯದ ಹಣ್ಣಿನ ಬರಿ ಒಳ ತಿರುಳು, ಹಣ್ಣಿನ ರಸಗಳು ಮಾತ್ರವಲ್ಲದೆ ಈ ಮರದ ರೆಂಬೆ, ಕೊಂಬೆ, ತೊಗಟೆಯನ್ನೆಲ್ಲ ಔಷದಿಯಾಗಿ ಬಳಸುತ್ತಾರಂತೆ. ಅದರಲ್ಲೂ ಆಮಶಂಕೆ, ಮೂತ್ರನಾಳದುರಿತ, ಗೋನೋರಿಯ, ಕ್ಯಾನ್ಸರ, ಋತುಚಕ್ರ ಅಸಮತೆ, ಕ್ಷಯ, ಸಂಧಿವಾತ ಸಂಬಂಧಿ ಕಾಯಿಲೆಗಳೆಲ್ಲದರ ಚಿಕಿತ್ಸೆಯಲ್ಲಿ ಇದರ ಬಳಕೆಯುಂಟಂತೆ. ಪ್ರತಿರೋಧಕತೆಯನ್ನು ಚುರುಕಾಗಿಸಲೂ ಮತ್ತು ಮಾನಸಿಕ ಆರೋಗ್ಯದ ದೃಢತೆಗೂ ಇದರ ಬಳಕೆ ಸಾಧ್ಯವೆನ್ನುತ್ರದೆ ಈ ಕೆಳಗಿನ ಕೊಂಡಿ. ಸಾಲದೆಂಬಂತೆ ಇಸುಬಿನ ತರದ ಚರ್ಮರೋಗಕ್ಕೂ ಇದನ್ನು ಹಚ್ಚುತ್ತಾರಂತೆ, ಔಷದಿಯ ರೂಪದಲ್ಲಿ. ಹಣ್ಣು, ಜಾಮಿನ ರೂಪದಲಷ್ಟೆ ಅಲ್ಲದೆ ಈ ಹಣ್ಸುಂದರಿಯನ್ನು, 'ಕ್ಸಾಂಗೊ' (Xango) ಜ್ಯೂಸಿನ ವಾಣಿಜ್ಯ ಹೆಸರಿನಡಿಯಲ್ಲಿ ಹಣ್ಣಿನರಸದ ರೂಪದಲ್ಲಿ, ಆರೋಗ್ಯಕಾರಕ ಪೇಯವೆಂದು ಕುಡಿಯುತ್ತಿರುವುದು ಈತ್ತೀಚಿನ ದಿನಗಳ ಹೊಸ ಬೆಳವಣಿಕೆಯಂತೆ. ರಾಮರಾಮ...! ಇಷ್ಟೆಲ್ಲಾ ತರತರ ರೋಗಗಳಿಗೆಲ್ಲ ರಾಮಬಾಣವೆಂದರೆ, ಕುಡಿಯಲಿಚ್ಚಿಸದವರಾರು ಹೇಳಿ? ನಿಮಗಿನ್ನು ಏನೇನು ಮಾಡಿಬಿಡಬಹುದೀ ಶ್ವೇತಾಗ್ರಣಿ ರಾಣಿಯೆಂದು ತಿಳಿಯುವ ಬಯಕೆಯಿದ್ದರೆ, ಹಾಗೆ ಈ ಹೇಳಿಕೆಗಳಲ್ಲಿಹ ಎಳ್ಳೆಷ್ಟು, ಜೊಳ್ಳೆಷ್ಟು, ಸತ್ಯ-ಮಿಥ್ಯ ಇತ್ಯದಿಗಳ ಶಸ್ತ್ರ ಚಿಕಿತ್ಸೆ ಮಾಡಬೇಕಿದ್ದರೆ, ಈ ಕೆಳಗಿನ ಕೊಂಡಿಯಲ್ಲಿ ಜಾಲಾಡಿ ನೋಡಿ!

http://www.webmd.com/vitamins-supplements/ingredientmono-1081-Mangosteen.aspx?activeIngredientId=1081&activeIngredientName=Mangosteen&source=1


ಅಂದಹಾಗೆ, ಈ ಹಣ್ಣಲ್ಲಿ ಇನ್ನೇನೇನು ಆರೋಗ್ಯದ ಸುಲಕ್ಷಣಗಳಿವೆಯೆಂಬ ಕುತೂಹಲ ಮೇಲಿನ ಲಿಂಕನ್ನು ನೋಡಿದ ಮೇಲೂ ತಣಿಯದಿದ್ದರೆ, ಇಲ್ಲಿದೆ ನೋಡಿ ಮತ್ತೊಂದು ಉದ್ದನೆಯ ಪಟ್ಟಿ; ಎಷ್ಟು ಸುಳ್ಳೊ ನಿಜವೊ ಗೊತ್ತಿಲ್ಲ - ಅದೇನಿದ್ದರೂ ನೀವುಂಟು, ಆ ವೆಬ್ ಸೈಟಿನವರುಂಟು. ಸೈಟು ಮಾತ್ರ ಗಾಢ ಹಣ್ಣಿನ ಬಣ್ಣದಲ್ಲೆ ಇದೆ.

http://www.naturalfoodbenefits.com/mobile/display.asp?CAT=1&ID=48


ಭಾರತದಲ್ಲಿ ಕೇರಳದಲ್ಲಿ ಈ ಮರವನ್ನು ಬೆಳೆಸಲು ಪ್ರಯತ್ನ ನಡೆದಿದೆಯೆಂದು ಹೇಳುತ್ತದೆ 'ವಿಕಿ'. ವಿಕಿಯಲ್ಲೂ, ರಾಣಿ ವಿಕ್ಟೋರಿಯ ಕಥೆಯ ಪ್ರಸ್ತಾಪ ಬರುತ್ತಾದರೂ, 'ನೈಟ್ ಹುಡ್' ಬದಲಿಗೆ 'ನೂರು ಸ್ಟರ್ಲಿಂಗ್ ಪೌಂಡ್' ಎನ್ನುತ್ತದೆ ( ಆ ಕಾಲಕ್ಕೆ ಅದು ಸರದಾರಿಕೆಗಿಂತ ದೊಡ್ಡದಿತ್ತೊ ಅಥವಾ ಸರದಾರಿಕೆಗೆ ಕೊಡುತ್ತಿದ್ದ ಇನಾಮೆ ಅದಾಗಿತ್ತೊ ಗೊತ್ತಿಲ್ಲ). ಹೆಚ್ಚಿನ ಮಾಹಿತಿ ಬೇಕಿದ್ದರೆ ಕೆಳಗಿನ ವಿಕಿಯ ಲಿಂಕನ್ನು ಹಿಂಡಿ ನೋಡಿ.

http://en.wikipedia.org/wiki/Purple_mangosteen


ಈ ರಾಣಿ ಹಣ್ಣಿನ ಬಗ್ಗೆ ಇನ್ನು ಹೆಚ್ಚಿನ ಸ್ವಾನುಭವದ ಮಾಹಿತಿಗಾಗಿ, ನಾನು ನನ್ನ ಮಗರಾಯನೊಡನೆ ಸಂಶೋಧನೆಗಿಳಿದ ಕಥೆಯೂ ತುಸು ಆಸಕ್ತಿದಾಯಕವಾಗಿಯೆ ಇತ್ತು - ಆಸಕ್ತಿಯಿದ್ದರೆ ಅದರ ಬಣ್ಣನೆ 'ತುಸು ಸಿಂಗಪೂರಿನ ಶೈಲಿಯಲ್ಲಿ' ಕೆಳಗಿದೆ ಓದಿ ನೋಡಿ. ಅಂದ ಹಾಗೆ ನೀವು ನೋಡುತ್ತಿರುವ ಚಿತ್ರಗಳೆಲ್ಲ ಆ ಸಮಯದಲ್ಲೆ ಕ್ಲಿಕ್ಕಿಸಿದ್ದು. ಅದು ಬಿಟ್ಟರೆ ಮಿಕ್ಕೆಲ್ಲಾ ಮಾಹಿತಿ ಹಕ್ಕು, ಕೃಪೆಯೆಲ್ಲ - ಆಯಾ ಕೊಂಡಿಯ ಮಾಲೀಕರಿಗೆ ಸೇರಿದ್ದು. ಲೇಖನ ಬರೆಯುವ ಮೊದಲೆ ಈ ಸಂಶೋಧನೆ ನಡೆಸಿದ್ದರಿಂದ ಬರೆದಾದ ಮೇಲೆ ಪರಿಹಾರಗೊಂಡ ಕೆಲವು ಸಂಶಯಗಳು, ಆ ಹೊತ್ತಿನಲ್ಲಿ ಇನ್ನು ಹಾಗೆ ಇತ್ತು. ಒರಿಜಿನಾಲಿಟಿಗೆಂದು ಅದನ್ನು ಹೆಚ್ಚು ಬದಲಿಸಲು ಹೋಗಿಲ್ಲ. ಹಾಗಾಗಿ ಕೆಲವು ಅಸಮರ್ಪಕತೆಗಳು ಇಲ್ಲಿ ಕಂಡುಬಂದರೆ ಅದಕ್ಕೆ ಕಾರಣವೇನೆಂದು ನಿಮಗೆ ಅರಿವಾಗಿಬಿಡುತ್ತದೆ!

ಸ್ವಾನುಭವದ ಉಪಕಥೆ:

ಈ ರಾಣಿಯ ಜಾತಕ ಹುಡುಕೋಣವೆಂದು ಒಂದು ಕೈಯಲ್ಲಿ ಪೋನ್ ಕ್ಯಾಮರ, ಮತ್ತೊಂದು ಕೈಲಿ ಜತೆಗೆ ಬರದೆ ತಪ್ಪಿಸಿಕೊಳ್ಳಲ್ಹವಣಿಸುತ್ತಿದ್ದ ನಿರಾಸಕ್ತ ಮಗನ ಕೈಯನ್ನು ಹಿಡಿದೆಳೆದುಕೊಂಡೆ ಹತ್ತಿರದ ಸೂಪರ ಮಾರ್ಕೆಟ್ಟಿನತ್ತ ಹೆಜ್ಜೆ ಹಾಕಿದೆ. ಒಂದೆರಡು ಕಡೆ ಸುತ್ತಿ ಕೊನೆಗೊಂದು ದೊಡ್ಡ ಮಳಿಗೆಯತ್ತ ಬಂದು ಕಣ್ಣಾಡಿಸಿದಾಗ ಅಲ್ಲಿ ಕಾಣಿಸಿತು ಸಣ್ಣ ಟೋಪಿ ಧರಿಸಿಕೊಂಡು ಕೂತ ಕಂದು / ನೇರಳೆ ಬಣ್ಣದ ದಿರುಸಿನ ಈ ರಾಣಿ ಹಣ್ಣು. ಅದನ್ನು ನೋಡಿದ ಮೊದಲ ನೋಟಕ್ಕೆ ತುಸು ನಿರಾಸೆಯಾಯ್ತೆಂದೆ ಹೇಳಬೇಕು ; ರಾಣಿಗೆ ಹೋಲಿಸಿದ ಮೇಲೆ, ನೋಡಲು ಘನಂಧಾರಿ ಗಾಂಭಿರ್ಯದಿಂದ, ಅಪ್ರತಿಮ ಸೌಂದರ್ಯದಿಂದ ಕಣ್ಸೆಳೆಯುವಂತಿರುತ್ತದೆಂದು ಊಹಿಸಿದ್ದ ನನಗೆ, ತುಸು ತೆಳುವಿನಿಂದ ಗಾಢ ನೇರಳೆ-ಕೆಂಪು ಮಿಶ್ರಿತವಾಗಿ, ಸಣ್ಣ ನಿಂಬೆಯ ಗಾತ್ರದಿಂದ ನಡುಗಾತ್ರದ ಕಿತ್ತಳೆಯಷ್ಟು ದಪ್ಪವಾಗಿ ರಾಶಿಯಲ್ಲಿ ಗುಪ್ಪೆ ಹಾಕಿದ್ದು ಕಂಡು, ಇದರಲ್ಲೇನು ವಿಶೇಷವೆಂದು ಒಂದರೆಗಳಿಗೆ ತಲೆ ಕೆರೆದುಕೊಳ್ಳುವಂತಾಯ್ತು. ತಲೆಯ ಮೇಲೊಂದು ತೀರಾ ಪುಟ್ಟ ಮುಕುಟವೊಂದನ್ನು ಹಾಕಿದ್ದನ್ನು ಬಿಟ್ಟರೆ ಅಲ್ಲಿ ಮಹಾರಾಣಿಯೆನ್ನಬಹುದಾದ ಬೇರಾವ ಯೋಗ್ಯತೆಗಳು ನನಗಂತೂ ಕಾಣಲಿಲ್ಲ. ಹೆಚ್ಚುಕಡಿಮೆ ಮಗನು ಅದನ್ನೆ ಅನುಮೋದಿಸಿದಾಗ ಯಾವುದಕ್ಕೂ ಇರಲೆಂದು ಮತ್ತೆ ಹೆಸರಿನ ಲೇಬಲಿನತ್ತ ತಲೆಚಾಚಿ, ಕಣ್ಣು ಹಿಗ್ಗಿಸಿ, ಕನ್ನಡಕ ಮೇಲೆತ್ತಿ, ತಳಗಿಳಿಸಿದ ಸರ್ಕಸ್ಸು ಮಾಡಿ ನೋಡಿದರೂ - ಅನುಮಾನವೆ ಇಲ್ಲ, ಹೆಸರು ಮಾತ್ರ ಅದೆ ಇತ್ತು. ಪಕ್ಕದಲ್ಲಿ ಬೇರಾವ ಹಣ್ಣು ಇರಲಿಲ್ಲವಾಗಿ ನಾನು ಹುಡುಕಿ ಬಂದ ಹಣ್ಣು ಮಾತ್ರ ಇದೆ ಎಂದು ಖಚಿತವಾಗುತ್ತ ಬಂತು.


ಅನತಿ ದೂರದಿಂದಲೆ ನಮ್ಮೆಲ್ಲಾ ಸರ್ಕಸ್ಸುಗಳನ್ನು ನೋಡುತ್ತಿದ್ದ ವಯಸಾದ ಚೀನಿ ಹಿರಿಯ ವ್ಯಕ್ತಿಯೊಬ್ಬರು, ಸಿಂಗ್ಲೀಷಿನ ದನಿ ಮತ್ತು ಉಚ್ಚಾರಣೆಯಲ್ಲಿ, ' ಸೀ ವಾಟ್ ಲಾ? ಮಂಗೋಸ್ಟೀನ್, ಮಂಗೋಸ್ಟೀನ್..ವೆರಿ ನೈಸ್... ಬೈ..ಲಾ' ಅಂದಾಗ ನೂರಕ್ಕೆ, ನೂರು ಇದೇ ಮಾಂಗಸ್ಟೀನ್ ಎಂದು ಖಚಿತವಾಗಿ , ಆದದ್ದಾಗಲಿ ಖರೀದಿಸಿ ನೋಡೆಬಿಡುವ, ಬಹುಶಃ ಇದರ ರುಚಿಗೆ ಇದನ್ನು ರಾಣಿ ಎನ್ನುತ್ತಾರೋ, ಏನೊ ಅಂದುಕೊಂಡು ತುಂಬಿಸಿಡಲು ಪ್ಲಾಸ್ಟಿಕ್ಕಿನ ಚೀಲವೊಂದನ್ನು ಎಳೆದು ತರಲು ಮಗನನ್ನು ಓಡಿಸಿದೆ. ಅಂದಹಾಗೆ ಈ 'ಲಾ' ಅಂದರೇನು, ಯಾವ ಇಂಗ್ಲೀಷು ಎಂದು ನಿಮಗಾಗಲೆ ಅನುಮಾನ ಬಂದಿರಲೆಬೇಕು; ಇದು ಇಂಗ್ಲೀಷೆಂದು ಗಾಬರಿ ಬೀಳುವಂತಾದ್ದೇನಿಲ್ಲ ಬಿಡಿ, ಯಾಕೆಂದರೆ ಇದೊಂದು ಚೀನಿ ಪದ. ಮಾತಿನ ವಾಕ್ಯದ ಕೊನೆಯಲ್ಲಿ ಬೇಕಿರಲಿ, ಬಿಡಲಿ ಒಂದು 'ಲಾ' ಬಂತೆಂದರೆ ಅದು 'ಸಿಂಗ್ಲೀಷ್' ಅನ್ನುವುದು ಅರ್ಧಕರ್ಧ ಗಟ್ಟಿ! ಚೀನಿ ಭಾಷೆಯಲ್ಲಿ ತೀರಾ ಅರ್ಥ ವಿಶೇಷವೇನೂ ಇರದಿದ್ದರೂ 'ಪಾರ್ಟಿಕಲ್ಲಿನ' ಹಾಗೆ ಸೇರಿಕೊಳ್ಳುವುದೆ ಇದರ ವೈಶಿಷ್ಟ್ಯ. ಇದು ಒಂದು ರೀತಿ ನಮ್ಮಲ್ಲೂ ಇರುವ '..ಯಾರ್', 'ಏನ್ ಗುರೂ..', 'ಏನಮ್ಮಾ...', 'ಗೋ ಡಾ', 'ಕಮ್ ಡಾ' ಜಾತಿಗೆ ಸೇರಿದ್ದು. ಚೀಣಿ ಭಾಷೆಯಿಂದ ಅನಾಮತ್ತಾಗಿ ಎತ್ತಿಕೊಂಡು ಸಿಂಗ್ಲೀಷಿಗೆ ಸೇರಿಸಿ ಯಥೇಚ್ಚವಾಗಿ ಬಳಸಾಡಿಬಿಟ್ಟಿರುವುದರಿಂದ ನೀವು ಬರಿಯ ಟೂರಿಸ್ಟ್ ಆಗಿ ಮೂರೆ ದಿನದ ಪ್ರವಾಸಕ್ಕೆ ಬಂದರೂ ಮೊದಲು ಹೇಳಿಸಿಕೊಳ್ಳದೆ ಕಲಿಯುವ ಪದವೆಂದರೆ ಇದೇ! ಇನ್ನು ಕೆಲವು ವಿಶೇಷಜ್ಞರನ್ನು ಕೇಳಿದರೆ ಅವರು ಇನ್ನು ಕೆಲವು ಹೊಸ ಅರ್ಥಗಳನ್ನು ಎತ್ತಿ ತೋರಿಸುತ್ತಾರೆ. ಸಿಂಗಪುರದಲ್ಲಿ ಕಟ್ಟುನಿಟ್ಟಿನ ಕಾನೂನು, ನಿಯಮಪಾಲನೆ ಪ್ರಮುಖವಾದ ಸಂಗತಿಯಾಗಿರುವುದರಿಂದ ಇಲ್ಲಿನ 'ಲಾ (ಕಾನೂನು)' ಪಾಲಿಸುವುದು ಬಹಳ ಮುಖ್ಯ; ಅದನ್ನು ನೆನಪಿಸಲು ಸದಾ, ಪ್ರತಿ ಮಾತಿನಲ್ಲೂ 'ಲಾ (LAW)' ಬಳಸುವುದು ಎನ್ನುತ್ತಾರೆ. ಇನ್ನೂ ಕೆಲವರು ಮತ್ತೊಂದೆಜ್ಜೆ ಮುಂದೆ ಹೋಗಿ ' ಜಸ್ಟ್ ಫಾಲೋ ಲಾ..' ಅಂತ ಚಲನ ಚಿತ್ರವನ್ನೆ ಮಾಡಿರುವುದನ್ನು ತೋರಿಸುತ್ತಾರೆ. ಅಲ್ಲಿರುವ 'ಲಾ' ಚೀನಿ 'ಲಾ' ನೊ ಅಥವಾ ಇಂಗ್ಲೀಷಿನ ಕಾನೂನಿನ 'ಲಾ' ವೊ ಅಥವ ವಿಜ್ಞಾನದ ನಿಯಮಗಳ 'ಲಾ' ವೊ ಅನ್ನುವ ಗೊಂದಲ, ಜಿಜ್ಞಾಸೆಯೆ ಮತ್ತೊಂದು ಲೇಖನವಾಗುವುದರಿಂದ ಸದ್ಯಕ್ಕೊಂದು ಅರ್ಧ ವಿರಾಮ ಹಾಕಿರೋಣ - ಬೈ 'ಲಾ' (by Law, ಬೈದುಕೊಳ್ಲಾ ಅಂತಲ್ಲ!). ಆದರೂ ಒಂದು ಕೊನೆ ಹನಿ - ಚೆನ್ನಾಗಿದೆ ಅಂದುಕೊಂಡು ಕನ್ನಡದಲ್ಲೂ 'ಲಾ' ಬಳಸೋಕೆ ಶುರು ಮಾಡಿಬಿಡಬೇಡಿ - ಏನ್ಲಾ, ಹೋಗ್ಲಾ, ಬಾರ್ಲಾ, ತಿಕ್ಲಾ - ಇತ್ಯಾದಿಗಳಲ್ಲಿ ಸೇರಿಕೊಂಡು ಅರ್ಥಕ್ಕಿಂತ ಅಪಾರ್ಥವಾಗುವ ಸಾಧ್ಯತೆಯೆ ಹೆಚ್ಚು!


ಮತ್ತೆ ಈ ರಾಣಿಯ ವಿಷಯಕ್ಕೆ ಬರೋಣ - ನಮ್ಮದು ಅದೆ ಚಾಣಾಕ್ಷ್ಯ ಬುದ್ದಿ ತಾನೆ ? ಹೇಗೂ ದುಡ್ಡು ಕೊಟ್ಟೆ ಕೊಳ್ಳುವುದು - ಎಲ್ಲಾ ಸರಿಯಾದ ಸೈಜಿನದೆ, ದೊಡ್ಡ ದೊಡವಾಗಿರುವ ಹಣ್ಣುಗಳನ್ನೆ ಆರಿಸಿಕೊಳ್ಳಬೇಕೆಂದು ಒಂದು ಕಡೆ ನಾನು, ಮತ್ತೊಂದು ಕಡೆ ಮಗರಾಯನು ಇಡಿ ರಾಶಿಯನ್ನು ಸೋವಿಕೊಂಡು ಆಳದಲ್ಲಿ ಹುದುಗಿರಬಹುದಾದ ದಪ್ಪದಪ್ಪ ಹಣ್ಣನ್ನೆಲ್ಲ ಹೆಕ್ಕಿಹೆಕ್ಕಿ ತುಂಬಿಕೊಳ್ಳತೊಡಗಿದೆವು. ಆಗ ಅಲ್ಲೆ ಅದೇ ಹಣ್ಣನ್ನು ಆಯ್ಕೆ ಮಾಡುತ್ತಿದ್ದ ಆ 'ಲಾ ಮ್ಯಾನ್' , 'ಡೋಂಟ್ ಬೀ ಗ್ರೀಡೀ ಲಾ.. ಬಿಗ್ ವನ್ಸ್ ಆರ್ ನಾಟ್ ಗುಡ್ ಟು ಈಟ್..ಪಿಕ್ ದ ಸ್ಮಾಲ್ ವಾನ್ಸ್...ಹೂಂ...' ಎಂದು ಹಿತೋಪದೇಶ ಮಾಡಿದಾಗ ಆರಿಸಿದ್ದ ದಪ್ಪ ಹಣ್ಣನ್ನೆಲ್ಲ ಮತ್ತೆ ಹಿಂದಕ್ಕೆ ಸುರಿದು , ಹೊಸದಾಗಿ ಆಯಲು ಹಚ್ಚಿಕೊಂಡೆವು. ಅನುಭವಕ್ಕಿಂತ ಹಿರಿದಾದದ್ದು ಯಾವುದಿದೆ ಹೇಳಿ? ಯಾವುದಕ್ಕು ಮತ್ತೆ ಏಮಾರಬಾರದೆಂದು ಯಾವ ತರದ ಹಣ್ಣು ಆರಿಸಿದರೆ ಚೆನ್ನವೆಂದು ಆತನನ್ನೆ ಕೇಳಿದೆ. ಅವನಿದ್ದುಕೊಂಡು ಸಣ್ಣಗಿರುವ ಹಣ್ಣಾದರೆ ಸಣ್ಣ ಬೀಜವಿರುತ್ತದೆ, ತಿನ್ನಲು ಸುಲಭವಾಗುತ್ತದೆ; ಹಾಗೆಯೆ ಹಿಚುಕಿ ನೋಡಿ ತುಸು ಮೆತ್ತಗಿರುವ ಹಣ್ಣನ್ನು ಆರಿಸಿಕೊಳ್ಳಬೇಕು, ಬರಿಗೈಯಿಂದಲೆ ಸಿಪ್ಪೆ ಸುಲಿಯಲು ಸರಾಗ ಎಂದಾಗ ಯಾಕೊ ಅನುಮಾನವೂ ಆಯ್ತು. ಒಂದೆಡೆ ಸಣ್ಣದನ್ನು ಹುಡುಕು ಅನ್ನುತ್ತಾನೆ; ಮತ್ತೊಂದೆಡೆ ಗಟ್ಟಿಯಿರುವ ಹಣ್ಣನ್ನು ಬಿಟ್ಟು ಅಜ್ಜಿಬಜ್ಜಿಯತರ ಮೃದು ಹಣ್ಣನ್ನೂ ಆರಿಸಿ ಅನ್ನುತ್ತಾನೆ. ನಮ್ಮಲ್ಲಿ ಕೊಳೆತ ಮಾಗಿದ, ಕೆಟ್ಟ ಅಥವಾ ಕೊಳೆತ ಹಣ್ಣುಗಳು ಆ ರೀತಿಯ ಮೇಲ್ಮೈ ಹೊಂದಿರುವುದು ನೋಡಿ ಅಭ್ಯಾಸ.. ಸರಿ ಯಾವುದಕ್ಕೂ ಇರಲೆಂದು, ಅವನ ಕಣ್ಣಿಗೆ ಬೀಳದ ಹಾಗೆ ತುಸು ದೊಡ್ಡ ಹಣ್ಣುಗಳನ್ನು, ತುಸು ಗಟ್ಟಿ ಮೈಯಿನವನ್ನು ಜತೆಗೆ ಸೇರಿಸಿಬಿಟ್ಟೆ - ಕನಿಷ್ಟ ಅವನು ಹೇಳಿದ್ದು ಸುಳ್ಳೊ, ನಿಜವೊ ಅಂತಾದರೂ ಪರೀಕ್ಷಿಸಿ ನೋಡಬೇಡವೆ?


ಅಂತೂ ವ್ಯಾಪಾರ ಮುಗಿಸಿ ಮನೆಗೆ ತಂದಿಟ್ಟ ಮೇಲೆ ಮೊದಲಂಕ ಮುಗಿದಂತಾಯ್ತು. ಅಲ್ಲಿಗಾಗಲೆ ಒಂದೆರಡು ಫೋಟೊಗಳೂ ಕ್ಲಿಕ್ಕಿಸಿ ಆಗಿತ್ತು. ಮೊದಲು ಆತನ ಮಾತು ನಿಜವೆ , ಸುಳ್ಳೆ ಎಂದು ಪರೀಕ್ಷಿಸುವ ಕುತೂಹಲದಿಂದ ಮೊದಲು ದಪ್ಪ, ಗಟ್ಟಿ ಹೊರ ಮೈನ ಹಣ್ಣೊಂದನ್ನು ಕೈಯಲ್ಹಿಡಿದು , ತೋರುಬೆರಳು, ನಡು ಬೆರಳ ಮತ್ತು ಹೆಬ್ಬೆರಳ ತುದಿಗಳ ನಡುವೆ ಹಿಡಿದು, ಹೊರಮೈ ಕಿವುಚಿ ಬಾಯ್ಬಿಡಿಸಲು ಯತ್ನಿಸಿದರೆ ಆಸಾಮಿ ಜಗ್ಗುತ್ತಲೆ ಇಲ್ಲ! ತಿರುಳಿಗೆ ಅಂಟಿಯೂ ಅಂಟದಂತಿರಬೇಕಾದ ದಪ್ಪನೆಯ ಹೊರಕಚವೆಲ್ಲ, ಭದ್ರವಾಗಿ ತಿರುಳಿಗೆ ಅಂಟಿಕೊಂಡು ಸುಲಲಿತವಾಗಿ ಬಿಡಿಸಿಕೊಂಡು ಬರುವ ಬದಲು, ಚಕ್ಕೆ ಚಕ್ಕೆಯಂತೆ ಎಡೆದುಕೊಂಡು ಬರುತ್ತಿದೆ! ಒಳಗೆ ನೋಡಿದರೆ ಬಿಳಿಯ ಹಣ್ಣಿನ ತೊಳೆಗಳೆಲ್ಲ ದಪ್ಪ ದಪ್ಪ ಬೀಜದ ಸಮೇತ! ಅಲ್ಲಿಗೆ ಆತ ಹೇಳಿದ್ದರಲ್ಲಿ ಸುಳ್ಳಿರುವಂತೆ ಏನೂ ಕಾಣಲಿಲ್ಲ - ಕನಿಷ್ಠ ಅರ್ಧ ಸತ್ಯವಾದರೂ ಗಟ್ಟಿ. ಅದೆ ಹೊತ್ತಿನಲ್ಲಿ ತುಸು ಮೃದುವಾದ , ಸಡಿಲ ಕವಚ ಹೊದ್ದು ಒಳಗೆ ಸರಾಗವಾಗಿ ಓಡಾಡಿಕೊಂಡಿದ್ದಂತ ಸಣ್ಣ ಹಣ್ಣೊಂದನ್ನು ಹಿಡಿದು ಮೆಲುವಾಗಿ ಅಮುಕುತ್ತಿದ್ದಂತೆ, ನಿರಾಯಾಸವಾಗಿ ಬಾಯಿ ಬಿಟ್ಟು ಒಳಗಿನ ಬಿಳಿಹಣ್ಣನ್ನು ತೋರಿಸಿಬಿಡುವುದೆ? ಅಲ್ಲಿಗೆ ಆತನ ಎರಡು ಮಾತು ಸತ್ಯವಾಗಿತ್ತು. ಇನ್ನು ಕೊನೆಯ ಬೀಜದ ಮಾತಿನ ಕಥೆಯೇನೆಂದು ನೋಡಹೊರಟರೆ, ಅಲ್ಲೂ ಆತನ ಅನುಭವ ನುಡಿ ನೂರಕ್ಕೆ ನೂರು ಸತ್ಯವಾಗಿತ್ತು. ಸಣ್ಣ ಹಣ್ಣಿನಲ್ಲಿ ಇದೆಯೊ, ಇಲ್ಲವೊ ಅನ್ನುವಷ್ಟು ಮಟ್ಟಿನ ಸಣ್ಣ ಬೀಜವಿದ್ದರೆ, ದೊಡ್ಡ ಹಣ್ಣಿನ ಅರ್ಧಕರ್ಧ ಭಾಗವೆ ಬೀಜವಾಗಿತ್ತು! ಸಾಲದೆಂಬಂತೆ ದೊಡ್ಡ ಹಣ್ಣಿನಲ್ಲಿದ್ದ ತಿರುಳು ಒಳಗಿನ ಬೀಜಕ್ಕೆ ಅದೆಷ್ಟು ತೀವ್ರವಾಗಿ , ಬಲವಾಗಿ ಅಂಟಿಕೊಂಡಿತ್ತೆಂದರೆ ಹಲ್ಲಿಂದ ಅದನ್ನು ಕಿತ್ತು ತಿನ್ನಲೆ ಸಾಕು ಸಾಕಾಗಿ ಹೋದಂತಾಗಿತ್ತು. ಸ್ಥೂಲ ಹೋಲಿಕೆಯಲ್ಲಿ ನಮ್ಮ ಸೀತಾಫಲದ ಒಳಗಿರುವ ಬೀಜಸಮೇತದ ತಿರುಳಿನ ಹಾಗೆ ಕಾಣುವ ಈ ಹಣ್ಣಿನ ತಿರುಳ ಸ್ಪರ್ಷಾನುಭೂತಿ ನವಿರಾದ ಮೃದುಲ ತೊಳೆಯಂತೆ , ಮೃದುವಾಗಿ, ಬೀಜಕ್ಕೆ ಕಚ್ಚಿಕೊಂಡೆ ಕೂತಿರುತ್ತದೆ. ಹೀಗಾಗಿ ತಿನ್ನುವಾಗ ಆ ಬೀಜದ ಕಹಿಯನ್ನು ಸೇರಿಸಿಯೆ ತಿನ್ನಬೇಕಾಗಿ ಬಂದು ಹಣ್ಣಿನ ರುಚಿಯೊ, ಬೀಜದ ಕಹಿಯೊ ತಿಳಿಯಲಾಗದ ಗೊಂದಲವನ್ನು ಹುಟ್ಟಿಸಿಬಿಟ್ಟಿತು. ಅದೆ ಚಿಕ್ಕದಾಗಿದ್ದ ಮತ್ತು ಸಡಿಲ ತಿರುಳಿನ ಸಣ್ಣ ಹಣ್ಣೊಂದನ್ನು ಬಾಯ್ಗಿಟ್ಟರೆ, ಒಳಗಿನ ಬೀಜ ತೀರಾ ಸಣ್ಣದು; ಕೆಲವು ಹಣ್ಣುಗಳಂತೂ ಬೀಜವೆ ಇಲ್ಲದ ಭಾವ ಹುಟ್ಟಿಸಿ ನಾಲಿಗೆ ನೇವರಿಸಿ ನವಿರಾಗಿ ಜಾರಿ ಹೊಟ್ಟೆಯೊಳಗೆ ಪ್ರಸ್ಥಾನಗೊಂಡವು. ಅಲ್ಲಿಗೆ ಆ ತಾತನ ಮಾತು ನೂರಕ್ಕೆ ನೂರು ಸತ್ಯವೆಂದರಿವಾಗಿತ್ತು!


ಆದರೆ ಆ ಹಣ್ಣಿನ ಸಿಪ್ಪೆ ತೆಗೆಯುವ ಹೊತ್ತಿನಲ್ಲಿ ಅದಕ್ಕೆ ಯಾಕೆ ರಾಣಿಯ ಪಟ್ಟ ಕೊಟ್ಟಿರಬೇಕೆಂದು ತುಸು ಅರಿವಿಗೆ ಬಂತು. ಹೊರಗಿಂದ ಅಂತಹ ಭಾರಿ ಸೊಬಗಿನ ಸುಂದರಿಯಂತೆ ಕಾಣದಿದ್ದರು, ದಪ್ಪನೆಯ ಸಿಪ್ಪೆ ತೆಗೆದರೆ ಒಳಗಿರುವ ಅಪ್ಪಟ ಬಿಳಿಯ, ತೊಳೆಗಳಾಗಿ ಜೋಡಿಸಿದ ಹಣ್ಣು ಕಣ್ಣಿಗೆ ಬಿದ್ದ ಪರಿ ಮಾತ್ರ ಸುಂದರವಾಗಿ ಕಂಡಿತು. ತಟ್ಟನೆ ನೋಡಿದರೆ ಉಂಡೆ ಬೆಳ್ಳುಳ್ಳಿಯ ಆಕಾರವನ್ನು ನೆನಪಿಸುವ ಈ ಹಣ್ಣಿನ ತೊಳೆಗಳ ಜೋಡನೆ, ಸುಂದರವಾದ ಬಿಳಿ ಹೂವ್ವಿನ ರಾಜಕುಮಾರಿಯ ಹಾಗೆ ಕಾಣುತ್ತದೆ (ಚಿತ್ರ ನೋಡಿ).  ಆಕಾರದಲ್ಲಿ ಮಾತ್ರವಲ್ಲದೆ ಸ್ಪರ್ಶದಲ್ಲೂ ಇದು ಹೂವಿನಷ್ಟೆ ನಯವಾದ, ಮೊದಲೆ ಹೇಳಿದ ಸೀತಾಫಲದ ಹಣ್ಣಿನ ರೀತಿಯ ತಿರುಳಿನ ಹಣ್ಣು - ಆದರೆ ಸೀತಾಫಲದಷ್ಟು ಸುಲಭವಾಗಿ ಬೀಜದಿಂದ ಬೇರ್ಪಡುವುದಿಲ್ಲ. ಈ ಸಿಹಿಯಾದ ಹಣ್ಣು ತಿಂದು ಬಾಯಿಂದಲೆ ಬೀಜ ತುಪ್ಪಬೇಕೆನ್ನುವಾಗ, ಸ್ವಲ್ಪ ತಿಣುಕಾಡಬೇಕಾಗಿ ಈ ವ್ಯತ್ಯಾಸ ಗಮನಕ್ಕೆ ಬಂತು - ಬಹುಶಃ ಬೀಜಕ್ಕೆ ತೀರ ಗಟ್ಟಿಯಾಗಿ ಅಂಟಿಕೊಂಡ ಕಾರಣಕ್ಕೊ ಏನೊ. ನಾನು ಬಿಚ್ಚಿ ನೋಡಿದ ಪ್ರತಿ ಹಣ್ಣಿಗೂ ಐದಾರು ತೊಳೆಗಳಿದ್ದು, ಅದರಲ್ಲಿ ಒಂದು ಅತಿ ದೊಡ್ಡ ಗಾತ್ರವಿದ್ದರೆ, ಮಿಕ್ಕದ್ದು ಮಧ್ಯಮ ಹಾಗೂ ಸಣ್ಣ ಗಾತ್ರದ್ದು. ಬಹುಶಃ ಈ ಗಾತ್ರ ವೈವಿಧ್ಯವೂ ಅದರ ಸುಂದರ ಹೂವಿನ ರೂಪಕ್ಕೆ ಮೆರುಗಿತ್ತಿದೆಯೊ ಏನೊ. ಈ ನವಿರು ಹಣ್ಣಿನ ರುಚಿ ಚೆನ್ನಾಗಿದ್ದರೂ, ತೀರಾ ಸಣ್ಣ ಬೀಜಗಳಿದ್ದರೆ ಹಣ್ಣಿನ ಜತೆಗೆ ಸೇರಿಕೊಂಡು ತುಸು ಬೇರೆ ರುಚಿ ಕೊಡುವುದರಿಂದ ತಿನ್ನಲಾರಂಬಿಸುವ ಮೊದಲೆ ಬೀಜವನ್ನು ಹೊರಗ್ಹಾಕುವುದು ಉತ್ತಮ.


ಅಂತೂ ಹಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಬಿಚ್ಚಿ ನೋಡುತ್ತಲೆ ಒಂದಷ್ಟು ಫೋಟೊ ಕ್ಲಿಕ್ಕಿಸಿಕೊಂಡು, ಕೊಂದ ಪಾಪವನ್ನು ತಿಂದು ಪರಿಹರಿಸಿಕೊಳ್ಳುತ್ತಲೆ ಹಣ್ಣಿನ ರಾಣಿ 'ಮಾಂಗಸ್ಟೀನ್' ಪ್ರಕರಣಕ್ಕೆ ಮಂಗಳ ಹಾಡಿದೆವು. ನಾನು ಲೇಖನ ಬರೆಯಲು ಎದ್ದು ಹೊರಟೆ!


- ನಾಗೇಶ ಮೈಸೂರು

Comments

Submitted by makara Sun, 07/21/2013 - 08:30

ನಾಗೇಶರೆ, ಚೆನ್ನಾಗಿದೆ ನಿಮ್ಮ ಢ್ಯೂರಿಯನ್ ಹಣ್ಣು ಮತ್ತು ಮ್ಯಾಂಗೋಸ್ಟೀನ್ ಹಣ್ಣಿನ ಕಥಾನಕ. ರಾಜ ಮತ್ತು ರಾಣಿ ಹಣ್ಣುಗಳ ಈ ಹೋಲಿಕೆ ನನಗೆ ಕುರುಬರ ಲಕ್ಕನೂ ಎಲಿಝಬೆತ್ ರಾಣಿಯೂ ಎನ್ನುವ ಕಥೆಯ ಶೀರ್ಷಿಕೆಯನ್ನು ನೆನಪಿಗೆ ತಂದಿತು. ಢ್ಯೂರಿಯನ್ ಹಣ್ಣು ಕುರುಬರ ಲಕ್ಕನಾದರೆ ಮ್ಯಾಂಗೋಸ್ಟೀನ್ ಹಣ್ಣು ಎಲಿಝಬೆತ್ ರಾಣಿಯಂತೆ :))ಚೆನ್ನಾಗಿದೆ ನಿಮ್ಮ ಹಣ್ಣುಗಳ ಪರಿಚಯ ವಿಧಾನ; ನಿಮ್ಮ ಲೇಖನವನ್ನು ಓದುತ್ತಿದ್ದರೆ ಆ ಹಣ್ಣುಗಳನ್ನು ನಾವೇ ಸ್ವತಃ ತಿಂದು ಅವುಗಳ ಸ್ವಾದವನ್ನು ಅನುಭವಿಸಿದಂತಾಯಿತು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by nageshamysore Tue, 07/23/2013 - 19:39

In reply to by makara

ಕುರುಬರ ಲಕ್ಕ ಮತ್ತು ಎಲಿಜಬೆತ್ ರಾಣಿ - ಸೊಗಸಾದ ಅನಾಲಜಿ :-) ಈ ಲೇಖನ ಬರೆಯುವವರೆಗೂ ಯಾವ ಆಧಾರದ ಮೇಲೆ ಈ ಎರಡು ಹಣ್ಣುಗಳನ್ನು ಜೊತೆ ಮಾಡಿದ್ದಾರೆ ಅಂತ ತಲೆ ಕೆರೆದುಕೊಳ್ಳುತ್ತಲೆ ಇದ್ದೆ. ಕಡೆಗೆ ಡ್ಯುರಿಯನ್ನು 'ಉಷ್ಣಕಾರಕ' ಮತ್ತು ಮಾಂಗಸ್ಟೀನ್ 'ತಂಪು/ಶೀತ ಕಾರಕ' ಅಂತ ಗೊತ್ತಾದ ಮೇಲೆ ಬಹುಶಃ ಈ ಗುಣಗಳೆ ಅವನ್ನು ಜೋಡಿ ಮಾಡಿಸಿರಬೇಕೆನಿಸಿತು - ಒಬ್ಬರ ವೀಕ್ನೆಸ್ ಮತ್ತೊಬ್ಬರು ಪರಿಹರಿಸಬಹುದಲ್ಲಾ :-)
Submitted by hpn Sun, 07/21/2013 - 09:46

ಮಾಂಗಸ್ಟೀನ್ ಬೆಂಗಳೂರಲ್ಲಿ ಸಿಗುತ್ತದಾದರೂ ಅದರ ಬೆಲೆ ತೀರ ಜಾಸ್ತಿ! ಯಾವಾಗಲೋ ಒಮ್ಮೆ ತಿನ್ನಲು ಕೊಂಡು ತರಬಹುದು ಅಷ್ಟೆ. ಮೂಡುಬಿದರೆಯ ಸೋನ್ಸ್ ಫಾರ್ಮಿನಲ್ಲಿ ಡಾ. ಎಲ್ ಸಿ ಸೋನ್ಸ್ ಭಾರತದಲ್ಲೇ ಮ್ಯಾಂಗಸ್ಟೀನ್ ಬೆಳೆಸಿದ್ದಾರೆ. ಸುಮಳ ಅಜ್ಜ ಅಡ್ಡೂರು ಶಿವಶಂಕರ ರಾವ್ ಕೂಡ ಇದನ್ನು ಅವರ ತೋಟದಲ್ಲಿ ಬೆಳೆಸಿದ್ದರು. ಹಣ್ಣುಗಳ ಕುರಿತು ನಿಮಗಿರುವ ಆಸಕ್ತಿ ಮೆಚ್ಚುವಂಥಾದ್ದು! ಇವುಗಳನ್ನು ಕುರಿತು ಚೆನ್ನಾಗಿ ಬರೆಯುತ್ತಿರುವಿರಿ. ಅಭಿನಂದನೆಗಳು.
Submitted by nageshamysore Tue, 07/23/2013 - 20:05

In reply to by hpn

ಕರ್ನಾಟಕದಲ್ಲೂ ಬೆಳೆಯುತ್ತಿರುವ ವಿಷಯ ಕುತೂಹಲಕಾರಿ.  ಹಾಗೆ ಯಾವುದೊ ಮಾಹಿತಿ ಜಾಲಾಡುವಾಗ '10 must try exotic fruits' ತಲೆಬರಹದಡಿಯಲ್ಲಿ ಈ ಲೇಖನ ಕಣ್ಣಿಗೆ ಬಿತ್ತು. ಇದರಲ್ಲಿ ಮಂಗೊಸ್ಟೀನ್, ಡ್ಯುರಿಯನ್, ರಂಬುತ್ತಾನ್, ಡ್ರಾಗನ್ ಪ್ರೂಟ್ ಸೇರಿದಂತೆ ಒಟ್ಟು ಹತ್ತು ಹಣ್ಣುಗಳಿವೆ - ನಮ್ಮ ಹಲಸಿನ ಹಣ್ಣು ಸೇರಿದಂತೆ. ಆದರೆ ಆಫ್ರಿಕನ್ ಕುಕುಂಬರ್ ಮತ್ತು ಪ್ಯಾಶನ್ ಪ್ರೂಟ್ಗಳು ಸೇರಿವೆ. ಚಿತ್ರಗಳು ಚೆನ್ನಗಿತ್ತು - ಅದಕ್ಕೆ ಲಿಂಕು ಕೊಡುತ್ತಿದ್ದೇನೆ. http://www.hotelclub...
Submitted by ಗಣೇಶ Sun, 07/28/2013 - 20:53

ನಾಗೇಶರೆ, ನಿಮ್ಮಿಂದ ಸಿಂಗಾಪುರದ ಮಾತ್ರವಲ್ಲ ನಮ್ಮಲ್ಲಿಯ ಎಲ್ಲಾ ಹಣ್ಣುಗಳ ವಿವರ ಪಡೆಯಬೇಕು ಅನಿಸುತ್ತದೆ. ಅಷ್ಟು ಚೆನ್ನಾಗಿ ಬರೆಯುತ್ತೀರಿ. ಆದರೆ ಚರಿತ್ರೆ ಬೇರೇನೇ ಇದೆ. ಈ ಇಂಗ್ಲೀಷರು ತಮಗೆ ಬೇಕಾದ ಹಾಗೆ ಬರೆದರು. ನಿಜವಾದ ಚರಿತ್ರೆ- ಸಿಂಗಾಪುರದ ಹಣ್ಣಿನ ರಾಜ ಒಮ್ಮೆ ಇಂಡಿಯಾಕ್ಕೆ ಬಂದು ಇಲ್ಲಿನ ರಾಜ "ಮ್ಯಾಂಗೋ"ನ ಸ್ಟೈಲ್, ಪರಿಮಳ...ಇತ್ಯಾದಿಗೆ ಮಾರು ಹೋಗಿ, "ನನಗೆ ಸಿಂಗಾಪುರದ ರಾಜ ಪದವಿ ಬೇಡ, ನೀವೇ ನಮ್ಮಲ್ಲಿ ರಾಜರಾಗಿ" ಎಂದು ಬೇಡಿಕೊಂಡನು. "ಹಾಗೆಲ್ಲಾ ಇನ್ನೊಬ್ಬರ ರಾಜ ಪದವಿ ಕಸಿದುಕೊಳ್ಳಲು ನಾವೇನು ಬ್ರಿಟಿಷರಾ? ನಿಮ್ಮ ಸ್ನೇಹ ನಮಗೆ ಸಾಕು" ಎಂದ ಮ್ಯಾಂಗೋ ತನ್ನ ಜತೆಗಿದ್ದ "ಕೋಕಂ"ನ ಪ್ರಾಯಕ್ಕೆ ಬಂದ ತಂಗಿಯನ್ನು ಮದುವೆ ಮಾಡಿ ಕಳುಹಿಸಿದನು. ಡುರಿಯನ್ ತನ್ನ ರಾಣಿ (ಕೋಕಂ ತಂಗಿ)ಯನ್ನು ಮ್ಯಾಂಗೋ ನೆನಪಿಗೆ "ಮಾಂಗಸ್ಟೀನ್" ಎಂದು ಕರೆದ. ಆಧಾರ ಬೇಕಿದ್ದರೆ- http://moskalinenalu... http://en.wikipedia.... ಇದೇ ಕೋಕಂ ಜ್ಯೂಸ್‌ಬಗ್ಗೆ ಬರೆದಾಗ ನಿಮ್ಮಲ್ಲಿರುವ ಹಣ್ಣುಗಳ ಬಗ್ಗೆ ಬರೆಯಿರಿ ಎಂದು ಕೇಳಿದ್ದೆ. ( http://sampada.net/b... ) ಸೊಗಸಾಗಿ ಬರೆಯುತ್ತಿರುವಿರಿ. ಧನ್ಯವಾದಗಳು.
Submitted by nageshamysore Sun, 07/28/2013 - 21:05

In reply to by ಗಣೇಶ

ಗಣೇಶ್ ಜಿ, ಹಣ್ಣುಗಳ ಬಗ್ಗೆ ಬರೆಯೋದಕ್ಕೆ 'ಕಿಕ್' ಕೊಟ್ಟವರು ನೀವೆ - ಅಲ್ಲಿತನಕ ಹೀಗೆ ಬರಿಯಬಹುದು ಅನ್ನೊ ಐಡಿಯಾ ಕೂಡ ಇರಲಿಲ್ಲ. ಹೀಗಾಗಿ ಈ ಸರಣಿ ಚೆನ್ನಾಗಿ ಬಂದರೆ ಅದರ 90% ಕ್ರೆಡಿಟ್ ನಿಮಗೆ, ಬಾಕಿ 10% ಕೋಕಂಗೆ :-) ಅಂದ ಹಾಗೆ ಕೋಕಂ ಮ್ಯಾಂಗೊರಾಜನ ರಾಣಿಯಾ ಹೇಗೆ? (ಇನ್ನೊಂದು ಕುರುಬರ ಲಕ್ಕ, ಎಲಿಜಿಬೆತ್ ರಾಣಿ ಕಥೆ?)
Submitted by ಗಣೇಶ Sun, 07/28/2013 - 21:24

In reply to by nageshamysore

ಅಂದ ಹಾಗೆ ಕೋಕಂ ಮ್ಯಾಂಗೊರಾಜನ ರಾಣಿಯಾ ಹೇಗೆ? ರಾಜ ಅಂದ ಮೇಲೆ ರಾಣಿ ಇರಲೇ ಬೇಕಲ್ಲಾ! ಆದರೆ ಮ್ಯಾಂಗೋ ಗೆ ತಕ್ಕ ರಾಣಿ ನಮ್ಮಲ್ಲಿ ಸಿಲೆಕ್ಟೇ ಮಾಡಿಲ್ಲ. ನರೇಂದ್ರ ಮೋದಿ ತರಹ ರಾಜಕೀಯದಲ್ಲಿ ಮುಳುಗಿ ರಾಣಿ ಆಯ್ಕೆ ಮಾಡಲು ಆಗಲಿಲ್ಲವೋ ಏನೋ:( ಅದಕ್ಕೆ ಕೋಕಂ ಬಗ್ಗೆ ಬರೆಯುವಾಗ ಮ್ಯಾಂಗೋ ಜತೆಗಿದ್ದ ಎಂದು ಬರೆದೆ. ಮ್ಯಾಂಗೋಗೆ ತಕ್ಕ ರಾಣಿಯನ್ನು ನಾವಾದರೂ ಆಯ್ಕೆ ಮಾಡೋಣವಾ? ನನ್ನ ಪ್ರಕಾರ ರಾಣಿಗೆ ತಕ್ಕ ಗತ್ತು ಗಾತ್ರ ಎಲ್ಲಾ ಇರುವುದರಿಂದ "ಹಲಸಿನಹಣ್ಣು" ಮಾವಿನ ಪಟ್ಟದರಾಣಿ. ಕಲ್ಲಂಗಡಿ ಎರಡನೇ ಪತ್ನಿ. "ಆಪ್‌ಲ್" ಕಿರಿಪತ್ನಿ. :)
Submitted by nageshamysore Sun, 07/28/2013 - 21:41

In reply to by ಗಣೇಶ

ನನ್ನ ಪಟ್ಟದ ರಾಣಿ ವೋಟು ಹಲಸಿನ ಹಣ್ಣಿಗೇನೆ....ತಿಂದಷ್ಟು ತಿನ್ನಬೇಕೆನಿಸೋದು ಹಲಸಿನ ವಿಶೇಷ. ಹಾಗೆಯೆ, ರಾಣಿಯ ರೀತಿಯ ಗತ್ತಲ್ಲಿ ವಿಶೇಷ ಪರಿಮಳ, ಸುವಾಸನೆಯಿರುವುದು ಹಲಸಿಗೆ ಮಾತ್ರವೆ (ಸದ್ಯ ವಾಸನೆ ಡುರಿಯನ್ನಿನ ಹಾಗಲ್ಲ). ರಾಜಾ ಬಹು ಪತ್ನಿ ವಲ್ಲಭಾಃ ಅಂತ ಲೈಸನ್ಸೆ ಇರುವುದರಿಂದ ಪತ್ನಿ, ಉಪ ಪತ್ನಿ, ಹಿರಿ ಪತ್ನಿ, ಕಿರಿ ಪತ್ನಿ - ಎಲ್ಲವೂ ಉಚಿತವೆ - ಬನ್ನಿ ವಿಧ್ಯುಕ್ತವಾಗಿ ಉದ್ಘಾಟನೆಯನ್ನೂ ಮಾಡಿಬಿಡೋಣ ನಿಮ್ಮ ಸಲಹೆಯನ್ನ :-) ಆರತಿ ಬೆಳಗಿರೆ ನಮ್ಮ ಮಾವಿನ ಮಹರಾಜನಿಗೆ ಪರಿಮಳ ಸುಂದರಿ ರಾಣಿ ಹಲಸಿನ್ಹಣ್ಣ ತೇಜನಿಗೆ ನೀರ್ಕುಡಿಸೊ ಕಲ್ಲಂಗಡಿ ಹಣ್ಣೆರಡನೆ ರಾಣಿ ನಿನಗೆ ಜಾಬ್ಸಿಲ್ಲ - ಬದುಕಿದೆ ರಾಣಿ ಆಪಲ್ಲು ನಿನ್ನ ಬಲೆಗೆ!
Submitted by nageshamysore Sun, 07/28/2013 - 21:44

In reply to by nageshamysore

ಆರತಿ ಬೆಳಗಿರೆ ನಮ್ಮ ಮಾವಿನ ಮಹರಾಜನಿಗೆ

ಪರಿಮಳ ಸುಂದರಿ ರಾಣಿ ಹಲಸಿನ್ಹಣ್ಣ ತೇಜನಿಗೆ ನೀರ್ಕುಡಿಸೊ ಕಲ್ಲಂಗಡಿ ಹಣ್ಣೆರಡನೆ ರಾಣಿ ನಿನಗೆ ಜಾಬ್ಸಿಲ್ಲ - ಬದುಕಿದೆ ರಾಣಿ ಆಪಲ್ಲು ನಿನ್ನ ಬಲೆಗೆ!
Submitted by nageshamysore Mon, 07/29/2013 - 03:24

In reply to by nageshamysore

ಯಾಕೊ ಸಾಲುಗಳೆಲ್ಲ ಮತ್ತೆ ಕಲೆಸಿಕೊಳ್ಳುತ್ತಿವೆ - ಅದಕ್ಕೆ ಮತ್ತೊಮ್ಮೆ ಪ್ರಯತ್ನ:

ಆರತಿ ಬೆಳಗಿರೆ ನಮ್ಮ ಮಾವಿನ ಮಹರಾಜನಿಗೆ,

ಪರಿಮಳ ಸುಂದರಿ ರಾಣಿ ಹಲಸಿನ್ಹಣ್ಣ ತೇಜನಿಗೆ,

ನೀರ್ಕುಡಿಸೊ ಕಲ್ಲಂಗಡಿ ಹಣ್ಣೆರಡನೆ ರಾಣಿ ನಿನಗೆ,

ಜಾಬ್ಸಿಲ್ಲ - ಬದುಕಿದೆ ರಾಣಿ ಆಪಲ್ಲು ನಿನ್ನ ಬಲೆಗೆ!

Submitted by ಗಣೇಶ Mon, 07/29/2013 - 23:35

In reply to by nageshamysore

ನಾಗೇಶರೆ, ನಿನ್ನೆ ರಾತ್ರಿ ನೆಟ್ ಕನೆಕ್ಷನ್ ಕಟ್ ಆಯಿತು. :( ರಾಣಿಯರ ಆಯ್ಕೆಯನ್ನು ಸ್ವಾಗತಿಸಿದ್ದೂ ಅಲ್ಲದೇ ಅದರ ಬಗ್ಗೆ ಕವನವನ್ನೂ ಬರೆದುದಕ್ಕೆ ಧನ್ಯವಾದಗಳು. ನೀರು ಕುಡಿಸೋ ಎರಡನೇ ರಾಣಿ, ಮೂರನೇ ರಾಣಿ ಬಲೆಗೆ ರಾಜನೋ, ರಾಜನ ಬಲೆಗೆ ರಾಣಿಯೋ! ಸೂಪರ್.
Submitted by nageshamysore Mon, 07/29/2013 - 20:10

In reply to by gopinatha

ಗೋಪಿನಾಥರೆ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಈ ಹಣ್ಣಿನ ಸರಣಿ ಲೇಖನವನ್ನು ಮಾಮೂಲಿಗಿಂತ ತುಸು ವಿಭಿನ್ನ ಶೈಲಿಯಲ್ಲಿ ಬರೆಯುವ ಯತ್ನ ನಿಮ್ಮಂತವರಿಗೆಲ್ಲ ಹಿಡಿಸಿದ್ದು ತುಂಬಾ ಸಂತಸ.