ತಂತಿ ಕಳೆದು ಕೊಂಡ ಬಿ ಎಸ್ ಎನ್ ಎಲ್ ಕಛೇರಿ...

ತಂತಿ ಕಳೆದು ಕೊಂಡ ಬಿ ಎಸ್ ಎನ್ ಎಲ್ ಕಛೇರಿ...

ಈ ಜಗತ್ತಿನಲ್ಲಿರುವ ಸಮಸ್ತ ಜೀವಿಗಳಿಗೂ ಅಂತ್ಯ ಅನ್ನುವುದು ಶಾಶ್ವತವಲ್ಲವೇ? ಅದು ಸಜೀವಿಯೇ ಆಗಿರಲಿ, ನಿರ್ಜೀವಿಯೇ ಆಗಿರಲಿ ಅಂತ್ಯ ಅನ್ನುವುದು ಇರಲೇ ಬೇಕಲ್ಲವೇ. ಕೆಲವಕ್ಕೆ ಸೆಕೆಂಡುಗಳಲ್ಲಿರಬಹುದು, ಕೆಲವಕ್ಕೆ ಸಹಸ್ರಾರು ವರ್ಷಗಳಿರಬಹುದು. ಸಜೀವ ವಸ್ತುಗಳನ್ನು ಕಳೆದುಕೊಂಡಾಗ ಆಗುವಷ್ಟು ನೋವು ನಿರ್ಜೀವ ವಸ್ತುಗಳನ್ನು ಕಳೆದುಕೊಂಡಾಗ ಆಗದಿರಬಹುದು. ಆದರೂ ಕೆಲವೊಂದು ನಿರ್ಜೀವ ವಸ್ತುಗಳು, ಸಜೀವಿಗಳಲ್ಲಿ, ಜೀವ ತುಂಬಿ, ಅವರ ಸುಖ-ದುಖಗಳಲ್ಲಿ ಬಾಗಿಯಾಗಿ, ಒಮ್ಮೇಲೆ ತನ್ನ ಅಸ್ತಿತ್ವವನ್ನು ಕಳೆದುಕೊಂಡು, ಈ ಜಗತ್ತಿನಿಂದ ನಿರ್ಗಮಿಸಿದಾಗಲೂ ಒಮ್ಮೊಮ್ಮೆ ಮನಸ್ಸಿಗೆ ದುಖವಾಗುವುದುಂಟು. ಅಂತಹ ಒಂದು ವಸ್ತುಗಳಲ್ಲಿ ಟೆಲಿಗ್ರಾಮ್(ತಂತಿ) ಕೂಡ ಒಂದು. ಸುಮಾರು ೧೬೦ ವರ್ಷಗಳವರೆಗೆ, ಬಾಳಿ ಬದುಕಿ ಜನಮನದಲ್ಲಿ ಸುಖ ದುಖಗಳನ್ನು ಹಂಚಿ, ಇಂದು ಸಮಾಧಿಯನ್ನು ಸೇರಿದೆ.

ಅದೊಂದು ಕಾಲವಿತ್ತು, ದೂರದ ಊರಿನಲ್ಲಿರುವ ಸಂಬಂದಿಗಳಿಗೆ ಏನಾದರು ತುರ್ತಾಗಿ ಸುದ್ದಿಯನ್ನು ತಲುಪಿಸಬೇಕು ಅಂತಿದ್ದರೆ ಅದು ತಂತಿಯ(ಟೆಲಿಗ್ರಾಮ್) ಮೂಲಕ ಮಾತ್ರ ಸಾದ್ಯವಿತ್ತು. ಪತ್ರ ವ್ಯವಹಾರವಿದ್ದರೂ ಕೂಡ ಅದು ತಂತಿಯಷ್ಟು ವೇಗವಾಗಿರಲಿಲ್ಲ. ಮುಂದೆ ದೂರವಾಣಿ ವ್ಯವಸ್ತೆ ಬಂದ ಮೇಲೂ, ತಂತಿಯ ಉಪಯೋಗ ಅಷ್ಟಾಗಿ ಕಡಿಮೆ ಆಗಿರಲಿಲ್ಲ. ಆದರೆ ತೀರ ಇತ್ತಿಚೆಗೆ ಕಂಪ್ಯುಟರ್, ಮೊಬೈಲ್, ಇಂಟರ್ನೆಟ್ ಇವೆಲ್ಲ ಬಂದ ಮೇಲೆ, ಜನರು ತಂತಿ ಸೇವೆಯಿಂದ ದೂರ ಸರಿಯಲಾರಂಬಿಸಿದರು. ಹೀಗಾಗಿ ತಂತಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಯಿತು.

ಹಾಗಂತ ಇದು ಕೊನೆಯೇನಲ್ಲ, ಇದು ಪ್ರಾರಂಭಮಾತ್ರ. ಇಂದು ಟೆಲಿಗ್ರಾಮ್, ನಾಳೆ ಸ್ಥಿರ ದೂರವಾಣಿ ಹೀಗೆ ಮುಂದುವರೆದಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ನಾವು ಚಿಕ್ಕವರಾಗಿದ್ದಾಗಿನ ಮಾತು. ಅಂದರೆ ಸುಮಾರು ೨೦ ರಿಂದ ೨೫ ವರ್ಷಗಳಷ್ಟು ಹಿಂದಿನ ಮಾತು. ನಮ್ಮದು ಒಂದು ಚಿಕ್ಕ ಊರು. ೮೦ ರಿಂದ ೧೦೦ ಮನೆಗಳಿರುವ ಊರು. ಆಗ ನಮ್ಮೂರಲ್ಲಿ ದೂರವಾಣಿ ಅಂತಾ ಇದ್ದಿದ್ದು ಒಂದೆರಡು ಮನೆಗಳಲ್ಲಿ ಮಾತ್ರ. ಆದರೆ ಇಂದು ದೂರವಾಣಿ ಇರದ ಮನೆಯೇ ಇಲ್ಲ. ಮೊಬೈಲ್ ಇಲ್ಲದ ಯುವಕರೇ ಇಲ್ಲ. ಕಾಲೇಜಿಗೆ ಹೋಗುವ ಮಕ್ಕಳ ಕೈಯಲ್ಲೂ ಮೊಬೈಲ್ ಇದೆ. ಇಂದು ಮೊಬೈಲ್ ಅಲ್ಲಿ ಏನಿದೆ ಏನಿಲ್ಲ. ಒಂದೇ ಸೆಕೆಂಡನಲ್ಲಿ ವಿಶ್ವದ ಯಾವ ಮೂಲೆಯನ್ನಾದರೂ ಸಂಪರ್ಕಿಸಬಹುದು. ಅಷ್ಟೇ ಅಲ್ಲ  ವಿದ್ಯುತ್ ಬಿಲ್ ಪಾವತಿಸಬಹುದು, ದೂರವಾಣಿ ಬಿಲ್ ಪಾವತಿಸಬಹುದು, ಒಂದೇ ಒಂದು ಸೆಕೆಂಡಿನಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದು, ಮೊಬೈಲನಲ್ಲಿಯೇ ಪುಸ್ತಕಗಳನ್ನ್ ಡೌನಲೋಡ್ ಮಾಡಿಕೊಂಡು ಒದಬಹುದು.  ಈ ಮೊಬೈಲ್ ಹಾವಳಿಯಿಂದ ಕ್ರಮೇಣ ಸ್ಥಿರ ದೂರವಾಣಿ ಕೂಡ ಇನ್ನೇನು ದೂರ ಸರಿಯುವ ದಿನ ದೂರವೆನಿಲ್ಲ.

ಈ ಆದುನಿಕತಯೇ ಹಾಗಲ್ಲವೇ, ಒಂದು ಬೆಳೆದು ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕೆಂದರೆ, ಇನ್ನೊಂದನ್ನು ಮೂಲೆಗೊತ್ತಿ ತಾನೆ ಬೆಳೆಯಬೇಕಲ್ಲವೇ. ಇದು ಜಗತ್ತಿನ ನಿಯಮವಲ್ಲವೇ. ಬದಲಾವಣೆಯ ಹಾದಿಯಲ್ಲಿ ಅದೆಷ್ಟೋ ವಸ್ತುಗಳು ಆಗಮಿಸುತ್ತವೆ, ಅದೆಷ್ಟೋ ವಸ್ತುಗಳು ತನ್ನ ಅಸ್ಥಿತ್ವವನ್ನು ಕಳೆದುಕೊಂಡು ನಿರ್ಗಮಿಸುತ್ತವೆ. ಅಂತಹ ಒಂದು ನಿರ್ಗಮಿಸಿರುವ ವಸ್ತುಗಳಲ್ಲಿ ತಂತಿ ಕೂಡ ಒಂದು ಅಷ್ಟೇ.

                                                                                                                                                                                                                                                                 ---ಮಂಜು ಹಿಚ್ಕಡ್

Rating
No votes yet