ವಿವೇಕ ಮಾತ್ರ…..

ವಿವೇಕ ಮಾತ್ರ…..

ಅವ ಬಂದು ಒದೆಯುವವರೆಗೂ

ನನಗೆ ಎದುರು ನಿಲ್ಲಬಹುದೆಂದು ಗೊತ್ತೇ ಇರಲಿಲ್ಲ.

 

ಇನ್ನೊಬ್ಬರ ತಂಟೆಗೆ ಹೋಗದ ನನಗೆಲ್ಲಿ ಶತ್ರು?

ಎಲ್ಲರೂ ಮಿತ್ರರೇ!!

ಹೌದು ಅದೇ ಭಾವನೆ ಇತ್ತು ಮೊನ್ನೆ ಒದೆ ಬೀಳುವವರೆಗೂ!!

 

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಪಮಾನಯೋ:

ಕೃಷ್ಣ ಅದೆಷ್ಟು ಸೊಗಸಾಗಿ ಹೇಳಿದ್ದಾನೆ!

ಅದನ್ನೇ ನಾನೂ ಭಾಷಣದಲ್ಲಿ ಒದರಿದ್ದೇ ಒದರಿದ್ದು!!

 

ಒದ್ದವ ಶತ್ರು, ಬೆನ್ನು ತಟ್ಟಿದವ ಮಿತ್ರ

ಇಬ್ಬರೂ ಒಂದೆ –ಎಂದು ಭಾಷಣದಿ  ಒದರಿದ್ದೆ

ಆದರೆ…. ಒದೆತ ಬಿದ್ದ ಮೇಲೆ

 

ಮೈಯೆಲ್ಲಾ ಹಣ್ಣುಗಾಯಿ ನೀರು ಗಾಯಿ!

ಅದೇನು ಅವತ್ತು ನಾನು ಒದರಿದ್ದು… “ಸಮ: ಶತ್ರೌ ಚ ಮಿತ್ರೇ ಚ”

ಅರೇ ಭಾಷಣ ಬರೀ ಬುರುಡೆ ಹೊಡೆಯೋದಕ್ಕಲ್ಲಾ!

ಅಂತಾ ನಾನೇ ಒದರಿದ್ದ ನೆನಪು ಮಾಸೇ ಇಲ್ಲವಲ್ಲಾ!!

 

ತಡೆಯಲಾರದ ನೋವಿನಲ್ಲೂ 

ಕೃಷ್ಣನ ಮಾತು ಮರೆತಿಲ್ಲ “ ಸಮ: ಶತ್ರೌ ಚ ಮಿತ್ರೇ ಚ”

 

ಅಯ್ಯೋ ಬೆಪ್ಪೇ “ಅಸತ್ಯ ಅಧರ್ಮ ಅನ್ಯಾಯಕ್ಕೆ ತಲೆ ಬಾಗುವುದು ಹೇಡಿತನ”

ಇದನ್ನೂ ನೀನೇ ಭಾಷಣ ಮಾಡುತ್ತಾ ಒದರಿದ್ದ ಮರೆತೆಯಾ?

 

ಛೇ!! ಎಲ್ಲಾ ಭಾಷಣ ಬಿಗಿಯಲು ಚಂದ!!

ಸಮಯಕ್ಕೆ ನೆರವು ನೀಡುವುದು “ ವಿವೇಕ” ಮಾತ್ರ!!!

Rating
No votes yet

Comments

Submitted by nageshamysore Sun, 07/21/2013 - 07:01

ಚೆನ್ನಾಗಿದೆ ಶ್ರೀಧರರೆ, ನಿಮ್ಮ ಕವನ ಒಂದು ಓದುತ್ತ ಗಾದೆ ನೆನಪಾಯ್ತು - 'ಆಚಾರ ಹೇಳೋಕೆ, ಬದನೆ ಕಾಯಿ ತಿನ್ನೋಕೆ'; ಹಾಗೆ ಗಾಂಧಿಯವರ ಎಡಗೆನ್ನೆ, ಬಲಗೆನ್ನೆ ಕಥೆಯೂ ನೆನಪಾಯ್ತು!

ಹಿತೈಷಿ ಮಿತ್ರನಂತೆ ಶತ್ರುವು ಸಖ 
ಹಿತವೆಲ್ಲಾ ಬರಿ ಮಾತಾಗಿರುವತನಕ
ಸುಮ್ಮನಿದ್ದರೆ ಶರಣು, ಬಿದ್ದರೂ ಹೊಡೆತ
ಹೋಯ್ತೆಲ್ಲಿ ವಿವೇಕ? ನಕ್ಕಿತಂತೆ ಅವಿವೇಕ!

- ನಾಗೇಶ ಮೈಸೂರು