ಹೊಂಬೆಳಕು : ನಾಟಕ ( ಭಾಗ -1 )

ಹೊಂಬೆಳಕು : ನಾಟಕ ( ಭಾಗ -1 )

ಹೊಂಬೆಳಕು

ಕಲ್ಕತ್ತೆಯೊಳು ಕಾಳೀಮಂದಿರ ಅಲ್ಲಿಹ ಪರಮಹಂಸ
ರಾಮಕೃಷ್ಣರಿಂದಾದ ನರೇಂದ್ರನು ಸ್ವಾಮಿ ವಿವೇಕಾನಂದ ||ಪ||

ಗುರುಬಲದೊಂದಿಗೆ ಯೋಗದ ಬಲ್ಮೆ ಮಾತೆಯ ಕರುಣಾ ಹರಕೆ
ದೇಶದ ಸಜ್ಜನ ಬಂಧುಗಳೆಲ್ಲರ ಮನದಾಳದ ಹಾರೈಕೆ
ಫಲನೀಡಿದುದಾಮೇರಿಕೆಯಲ್ಲಿ ವಿಶ್ವಧರ್ಮ ಸಮ್ಮೇಳನದಿ
ಮೊಳಗಿಸಿ ಹಿಂದುಧರ್ಮದ ಕಹಳೆಯ ಅದ್ಯಾತ್ಮದ ಹೊಂಬೆಳಕಲ್ಲಿ ||1||

ಪಶ್ಚಿಮೋತ್ತರ ಪೂರ್ವದಕ್ಷಿಣ ದಿಕ್ಕುಗಳೆಲ್ಲವು ಪ್ರತಿಧ್ವನಿಸಿ
ಭಾರತಮಾತೆಯ ಒಳತೋಟಿಯ ಹೂ ಮಾತುಗಳೆಲ್ಲವು ನಳನಳಿಸಿ
ಬಂದಿತು ತತ್ವಾಸಕ್ತರ ಹಿಂಡು ಧೀರೋದಾತ್ತನನನುಸರಿಸಿ
ದ್ಯಾನದ ಯೋಗದ ಪ್ರಾಣಾಯಾಮದ ಋಷಿಸಂದೇಶವ ಗೌರವಿಸಿ ||2||

ಮಾರ್ಗರೇಟನೋಬೆಲ್ಲಳವಳು ಸಂನ್ಯಾಸಿನಿಯೇ ಆದಳಲ
ಸೋದರಿ ಯೋಗಿ ನಿವೇದಿತೆಯಾಗಿ ವೇದಮಾರ್ಗವನು ಹಿಡಿದಳಲ
ಶೋಷಿತ ದಲಿತರ ಪೀಡಿತ ಸ್ತ್ರೀಯರ ನೋವುಗಳಿಗೆ ಬಲು ಸ್ಪಂಧಿಸುತ
ಮಹಿಳಾ ಶಿಕ್ಷಣ ಸಬಲೀಕರಣ ತನ್ನಯ ಗುರಿಯದು ಎಂದೆನುತ ||3||

(ಪ್ರಾರ್ಥನಾ ಮಂದಿರ ದೃಶ್ಯ)

ವಿವೇಕಾನಂದ : ನಿವೇದಿತಾ ಎಲ್ಲ ಶಕ್ತಿಗಳೂ ನಿನ್ನಲ್ಲಿಗೆ ಹರಿಯಲಿ. ಜಗನ್ಮಾತೆಯೇ ನಿನಗೆ ಬುದ್ಧಿ ಹಸ್ತಗಳಾಗಲಿ. ಅನಂತಶಕ್ತಿ ಮತ್ತು ಶಾಂತಿ ಇವು ನಿನಗೆ ದೊರಕಲೆಂದು ನಾನು ಪ್ರಾರ್ಥಿಸುತ್ತೇನೆ.
ನಿವೇದಿತಾ : ನನ್ನ ಬದುಕಿನ ಸುದೈವವಿದು. ನೀವು ನನಗೆ ಆನಂದ ಲೋಕವನ್ನು ತೋರಿಸಿದಿರಿ. ಯೋಗದ ಮೇಲ್ಮೆಯೇನೆಂಬುದು ನನಗೀಗ ಗೊತ್ತಾಗಿದೆ. ದಾರಿ ಅನಂತವಾದರೂ ಗುರಿ ಬೇಕಲ್ಲ. ನಾನೇನು ಮಾಡಬೇಕು ? ಎಂಬ ಪ್ರಶ್ನೆ ಎದುರಾದಾಗಲೆಲ್ಲ ಗುರುವನ್ನೇ ಕೇಳಬೇಕೆಂದು ಭಾವಿಸುತ್ತೇನೆ.
ವಿವೇಕಾನಂದ : ಶ್ರೀ ರಾಮಕೃಷ್ಣರಲ್ಲಿ ಸತ್ಯವಿದ್ದರೆ ನನ್ನನ್ನೆಂತೊ ಅಂತು, ಇಲ್ಲ ಸಹಸ್ರಪಾಲು ಹೆಚ್ಚಾಗಿ ನಿನ್ನನ್ನು ತಮ್ಮ ಮಾರ್ಗದರ್ಶನದಲ್ಲಿಟ್ಟುಕೊಳ್ಳಲಿ. ಆದರೆ ನಿನ್ನ ಪ್ರಶ್ನೆಗೆ ಅಂತಿಮವಾಗಿ ನನ್ನ ಉತ್ತರ ಅಪೇಕ್ಷಿಸಿದ್ದಿ. ಇದು ಸರಿಯಲ್ಲ. ಹಾಗೆಂದು ತಪ್ಪೂ ಅಲ್ಲ. ಪದೇಪದೆ ಹೀಗೆ ಮಾಡಬೇಡ. ನೀನು ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕಿದೆ. ಉದ್ಯಮಿ ಟಾಟಾರವರು ನೀಡುತ್ತೇನೆಂದು ಹೇಳಿದ ಸಹಾಯವನ್ನು ಬಳಸಿಕೋ. ದೇಶದಲ್ಲಿ ಅನೇಕಾನೇಕ ಮಹನೀಯರು ಚಿಂತಕರು, ಜ್ಞಾನಿಗಳೂ ಇದ್ದಾರೆ. ಅವರುUಳ ಸಹಕಾರವನ್ನು ಪಡೆ. ಆಂಗ್ಲ ದುರಾಡಳಿತದಿಂದ ನೊಂದಿರುವ ಜಗತ್ತಿನ ಶ್ರೇಷ್ಠ ವಿಜ್ಞಾನಿ ಜಗಧೀಶ್ಚಂದ್ರ ಬೋಸರೂ ಹಾಗು ಇಂಗ್ಲೇಂಡಿನ ಎಲ್ಲ ಬಗೆಯನ್ನೂ ಚೆನ್ನಾಗಿ ತಿಳಿದೂ ತಿರಸ್ಕರಿಸಿ ದೇಶೀಯ ವಿಚಾರಧಾರೆಯನ್ನು ಮಾತು ಬರೆಹಗಳಲ್ಲಿ ತೋರುತ್ತಿರುವ ಅರವಿಂದ ಘೋಷರೂ ನಿನ್ನ ನೆರವಿಗೆ ಬರುತ್ತಾರೆ. ದೇಶದಲ್ಲಿ ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗಬೇಕಾಗಿದೆ. ಉನ್ನತ ಸ್ಥಾನಗಳಲ್ಲಿ ನಮ್ಮದೇಶದ ಮಹಿಳೆಯರು ಗೌರವದಿಂದ ತಮ್ಮ ಪ್ರತಿಭೆಗೆ ತಕ್ಕಂತೆ ಬಾಳುವಂತಾಗಬೇಕು. ಇದು ನಿನಗೆ ಅರ್ಥವಾಗದ್ದೇನಲ್ಲ. ಮಗೂ ನಿವೇದಿತಾ, ಸತ್ಸಂಕಲ್ಪದ ಹಿಂದೆ ಭಗವಂತನಿದ್ದಾನೆ. ಅಳುಕದೆ ಮುಂದಾಗು.
ನಿವೇದಿತಾ : ಗುರುದೇವಾ, ನನಗೆ ಗುರಿ ತೋರಿದಿರಿ. ಜಮ್‍ಶಡ್ಜೀ ಟಾಟಾರವರು ಹಾಗು ಅನಿಬೆಸೆಂಟ್‍ರವರು ಭಾರತದಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಬ್ರಿಟಿಷ್ ಸರಕಾರ ಅವಕಾಶ ನೀಡುತ್ತಿಲ್ಲ. ಭಾರತ ದಾಸ್ಯದಲ್ಲಿದ್ದುದರಿಂದ ಫ್ರಾನ್ಸ್ ದೇಶ ವೈಭವದಲ್ಲಿ ಮೆರೆಸಿದ ಜೆ.ಸಿ.ಬೋಸರನ್ನು ಬ್ರಿಟನ್ ತಿರಸ್ಕಾರದಿಂದ ಕಂಡಿತು. ನಿಮ್ಮ ದಯೆಯಿಂದ ನಾನು ಅದನ್ನು ವಿರೋಧಿಸಿ ಹೋರಾಡುತ್ತೇನೆ. ದೇಶದ ಪ್ರಥಮ ಮಹಿಳಾ ವಿಶ್ವ ವಿದ್ಯಾ ನಿಲಯವನ್ನು ಸ್ಥಾಪಿಸುತ್ತೇನೆ.
ವಿವೇಕಾನಂದ : ಬೇಷ್. ನಿರ್ಧಾರಗಳನ್ನು ಸಕಾಲದಲ್ಲಿ ನೀನೇ ತೆಗೆದುಕೊಳ್ಳುವಂತಾಗಲಿ. ನಿನ್ನ ಯಾವುದೇ ಚಟುವಟಿಕೆಗಳಿಗೆ ಮುನ್ನ ದುರ್ಗಾ ದುರ್ಗಾ ಎಂದು ಸ್ಮರಿಸು. ಶಕ್ತಿ ಮೈಗೂಡಿ ಕಾರ್ಯಸಾಧ್ಯವಾಗಲಿ. ಜಗತ್ತಿಗೆ ಒಳ್ಳೆಯದಾಗಲಿ.

ಮರೆಯಲಾಗದ ಸಾಧನೆ | ನಿವೇದಿತೆಗೆ ಕೊಡು ಮನ್ನಣೆ ||ಪ||
ಅರವಿಂದ ಘೋಷರು ಜೇಸಿ ಭೋಸರು | ವಂಗನಾಡಿನ ಹಿರಿಯರು ||
ಎಲ್ಲರೂ ಸಹಕರಿಸುತಂದು ಶಿಕ್ಷಣದ ಗುರಿ ಮೆರೆದರು ||1||
ಮರೆಯಲಾಗದ ಸಾಧನೆ | ನಿವೇದಿತೆಗೆ ಕೊಡು ಮನ್ನಣೆ ||ಪ||
ಕವಿರವೀಂದ್ರರು ಬಿ.ಸಿ.ಪಾಲರು | ಗೋಖಲೆ ಮೊದಲಾದ್ಯರು ||
ಅಬ್ದುಲ್‍ರಸೂಲರ್ಸುರೇಂದ್ರನಾಥರು | ಎಲ್ಲರೊಂದೆಡೆ ಕಲೆತರು ||2||
ಮರೆಯಲಾಗದ ಸಾಧನೆ | ನಿವೇದಿತೆಗೆ ಕೊಡು ಮನ್ನಣೆ ||ಪ||
 (ಸಭೆಯ ದೃಶ್ಯ)

ಗೋಖಲೆ : ಕೇಳಿರಿ. ಸೋದರಿ ನಿವೇದಿತಾ ಶೈಕ್ಷಣಿಕವಾಗಿ ಒಂದಷ್ಟು ಕ್ರಾಂತಿಯನ್ನು ಮಾಡಲು ಮನಸ್ಸು ಮಾಡಿದ್ದಾರೆ. ಇದು ನಮಗೆಲ್ಲಾ ಸಂತಸದ ಸಂಗತಿಯಾಗಿದೆ. ಏಕೆಂದರೆ ನಮ್ಮೆಲ್ಲರ ಹೋರಾಟವೂ ದೇಶವನ್ನು ಸ್ವತಂತ್ರಗೊಳಿಸುವುದು. ಅಂದರೆ, ರಾಜಕೀಯ ಮಾತ್ರವಲ್ಲದೆ ಉಳಿದೆಲ್ಲಾ ಮಹತ್ವಪೂರ್ಣ ಕ್ಷೇತ್ರಗಳೂ ಸ್ವಾಯತ್ತವಾಗಬೇಕಲ್ಲವೇ ? ಶೈಕ್ಷಣಿಕ ಕ್ರಾಂತಿ ಅತ್ಯವಶ್ಯವಾಗಿದೆ. ಇಂದು ಸೋದರಿ, ಸ್ವಾಮಿ ರಾಮಕೃಷ್ಣರ, ಮಾತೆ ಶಾರದಾದೇವಿಯವರ ಹಾಗು  ವಿವೇಕಾನಂದರ ಪೂರ್ಣ ಕೃಪೆಗೆ ಪಾತ್ರರಾದವರಾದುದರಿಂದ, ಇಲ್ಲಿರುವ ಮಹನೀಯರ ಸಹಕಾರದಿಂದ ಅದು ಸಾಧ್ಯವಿದೆ. ಏನೆನ್ನುತ್ತೀರಿ.
ಸುರೇಂದ್ರ ನಾಥ : ಗೋಖಲೆಯವರೇ ನಿಮ್ಮ ಮಾತು ನೂರಕ್ಕೆನೂರು ಸರಿಯಾಗಿದೆ.ಅತ್ಯಾವಶ್ಯವಾಗಿ ಇದುನಡೆಯಬೇಕು.  
ಅಬ್ಧುಲ್‍ರಸೂಲ್ : ಹೌದದು. ಮಹಿಳಾ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಲಿ ನಮ್ಮ ಪೂರ್ಣ ಸಹಕಾರವಿದೆ.
ಜೆ.ಸಿ.ಭೋಸ್ : ಭಾರತೀಯ ಯುವ ಪೀಳಿಗೆಗೆ ಯೋಗ್ಯ ಶಿಕ್ಷಣ, ಮಾರ್ಗ ದರ್ಶನ ಸಿಗುವಂತಾಗಬೇಕು. ವಿಶ್ವ ಸಮುದಾಯದೆದಿರು ಗೌರವದಿಂದ ನಮ್ಮ ಪ್ರತಿಭೆಗಳು ತಲೆಯೆತ್ತುವಂತಾಗಬೇಕು. ಸ್ವಾಮಿ ವಿವೇಕಾನಂದರ ಕನಸೂ ಇದೇ, ಕವಿ ರವೀಂದ್ರರ ನನಸೂ ಇದೇತಾನೆ. ನಮ್ಮ ಪೂರ್ಣ ಬೆಂಬಲ ನಿಮ್ಮ ಕಾರ್ಯಕ್ಕಿದೆ.
ರವೀಂದ್ರನಾಥ ಟಾಗೂರ್ : ನಿಜವಾದ ಮಾತುಗಳನ್ನಾಡಿದಿರಿ ಜಗಧೀಶ ಚಂದ್ರರೇ. ಜನ ಬೆಳೆದು ಜನಾಂಗವಾಗಲು ಉತ್ತಮ ಸಾಹಿತ್ಯಗಳು ಬೇಕು, ಮಗು ಬೆಳೆದು ಮಾನವನಾಗಲು ಉತ್ತಮಶಾಲೆ ಬೇಕೆಂದು ನನ್ನ ಭಾವನೆ. ಶ್ರೇಷ್ಠ,  ಸುಧೃಢ ಶಿಕ್ಷಣದಿಂದ ಮಾತ್ರವೇ ನಮ್ಮ ಅನೇಕಾನೇಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಶ್ರೀ ಅರವಿಂದರು ಇಂಗ್ಲೇಂಡನ್ನು ತ್ಯಜಿಸಿ, ಬರೋಡೆಯ ಅಧಿಕ ಸಂಬಳದ ಹಿರಿಯ ಅಧಿಕಾರವನ್ನೂ ತೊರೆದು ಇಲ್ಲಿ ಸೇವೆ ಸಲ್ಲಿಸಲು ಬಂದಿರುವುದು ಸುದೈವ. ಸೋದರೀ, ನಿಮ್ಮ ಕನಸಿನ ಮಹಿಳಾ ವಿಶ್ವ ವಿದ್ಯಾನಿಲಯದ ಸ್ಥಾಪನೆಯಾಗಲಿ.
ಬಿ.ಸಿ.ಪಾಲ್ : ಮತ್ತಿನ್ನೇನು? ಎಲ್ಲರಮಾತೂ ಒಂದೇ ಆದಮೇಲೆ ತಡವೇಕೆ ? ಶುಭಸ್ಯ ಶೀಘ್ರಂ ಬೇಗ ಆರಂಭಗೊಳ್ಳಲಿ.
ಎಲ್ಲರೂ :  ಬೋಲೋ ಭಾರತ್ ಮಾತಾಕೀ ಜೈ. ವಂದೇ ಮಾತರಂ.      

(ನಾಮ ಫಲಕ ಹಿಡಿದೆತ್ತುವರು)

ಸಂಕ್ಷಿಪ್ತ ಮಹಿಳಾ ವಿಶ್ವವಿದ್ಯಾ | ನಿಲಯ ಸ್ಥಾಪಿತವಾಯಿತು ||
ಭರತಖಂಡದ ಹಿರಿಯರೆಲ್ಲರ | ಕನಸುಗಳು ನನಸಾದವು ||3||
ಮರೆಯಲಾಗದ ಸಾಧನೆ | ನಿವೇದಿತೆಗೆ ಕೊಡು ಮನ್ನಣೆ ||ಪ||
ರಾಷ್ಟ್ರಪ್ರೇಮದ ಬುಗ್ಗೆಯೆಬ್ಬಿಸಿ | ವಜ್ರದೇಹಿಗಳಾಗಿ ನಿರ್ಮಿಸಿ ||
ವಜ್ರಲಾಂಛನವಿರುವ ಧ್ವಜದಡಿ | ಯುವಕರನು ಹುರಿದುಂಬಿಸಿ ||4||
ಮರೆಯಲಾಗದ ಸಾಧನೆ | ನಿವೇದಿತೆಗೆ ಕೊಡು ಮನ್ನಣೆ ||ಪ||
ಆಂಗ್ಲ ಸರಕಾರದ ವಿರುದ್ಧವೆ | ಆಂದೋಲನ ಮಾಡಲು ||
ಸ್ವಾತಂತ್ರ್ಯದ ಜ್ಯೋತಿ ಹೊಮ್ಮುತ | ಬಂಗಾಳದಿ ಬೆಳಗಿತು ||5||
ಮರೆಯಲಾಗದ ಸಾಧನೆ | ನಿವೇದಿತೆಗೆ ಕೊಡು ಮನ್ನಣೆ ||ಪ||

ವಂದೇ ಮಾತರಂ

ವಂದೇ ಮಾತರಂ ವಂದೇ ಮಾತರಂ | ಗಾಯತ್ರಿಯಾಯಿತಂದು ||
ಲಕ್ಷೋಪಲಕ್ಷ ಹೃದಯಾಳದಲ್ಲಿ | ಕರ್ತವ್ಯ ಮೂಡಿಬಂತು ||6||
ಮರೆಯಲಾಗದ ಸಾಧನೆ | ನಿವೇದಿತೆಗೆ ಕೊಡು ಮನ್ನಣೆ ||ಪ||

(ಆಂಗ್ಲ ಸೆಕ್ರೇಟರಿ ಆಫ್ ಸ್ಟೇಟ್ ಪ್ರಧಾನ ಕಛೇರಿ ದೃಶ್ಯ)

ಮೋರ್ಲೆ  :  ಮಿ.ಕ್ರೇಗನ್ ವ್ಹಾಟ್ ಈಸ್ ದಿಸ್ ? ಏನು ನಡೆಯ್ತಾ ಇದೆ ಇಲ್ಲಿ ? ಎಲ್ಲಿ ಕೇಳಿದ್ರೂ ವಂದೆಮಾತ್ರಂ ವಂದೆಮಾತ್ರಂ, ವಂದೆಮಾತ್ರಂ.  ನೀವು ...  ಏನು ಮಾಡ್ತಾ ಇದ್ದೀರಿ ?
ಕ್ರೇಗನ್ :  ಸಾರಿ ಸಾರ್. ಬಂಗಾಳದಲ್ಲಿ ಒಂದಷ್ಟು ಬುದ್ಧಿಜೀವಿಗಳು ಅಂತ ಕರೆಸ್ಕೊಂಡಿರೋರು ಇದಾರೆ ಸಾರ್. ಅವ್ರು ಭಾಷಣ ಮಾಡಿದ್ರೆ ಇಲ್ಲಾ ಪತ್ರಿಕೆಗಳಲ್ಲಿ ಬರೆದರೆ ಜನ ಮುಗಿಬಿದ್ದು ಕೇಳ್ತಾರೆ, ಓದುತ್ತಾರೆ ಸಾರ್.
ಮೋರ್ಲೆ :  ಯಾರು ಯಾರು ಅವ್ರು ?
ಕ್ರೇಗನ್  :  ಅದೇ ವಂದೇಮಾತ್ರಂ ಪತ್ರಿಕೆಯಲ್ಲಿ ಬರೀತಾನಲ್ಲ ಅವ್ನೇ. ಅರವಿಂದ ಘೋಷ್, ಲಂಡನ್ನಿನಲ್ಲೇ ಇದ್ದ. ಕೇಂಬ್ರೀಜ್‍ನಲ್ಲೆ ಓದ್ದೋನು. ಐ.ಪಿ.ಎಸ್. ಮುಗಿಸಿ ಭಾರತಕ್ಕೆ ಬಂದಿದಾನೆ. ಬರೋಡಾದಲ್ಲಿ ಹೆಚ್ಚು ಸಂಬಳ ಬರ್ತಿದ್ದ ಕೆಲ್ಸಕ್ಕೂ ರಾಜೀನಾಮೆ ಕೊಟ್ಟು ಕಲ್ಕತ್ತೆಗೆ ಬಂದು ಪಾಠ ಮಾಡ್ತಿದಾನೆ. ವಂದೇಮಾತರಂ ಹುಚ್ಚಿಗೆ ಅವ್ನೇ ಮುಖ್ಯ ಕಾರಣ ಸಾರ್. ಇನ್ನೂ ಕೆಲವರಿದ್ದಾರೆ. ಸಂದರ್ಭ ಸಿಕ್ಕರೆ ಅವರನ್ನ ಒದ್ದು ಒಳಗೆ ಹಾಕಿ ಬಿಡ್ತಿದ್ದೆ ಸಾರ್.
ಮೋರ್ಲೆ :  ಸರಿ ಸರಿ ಅವ್ರನ್ನೆಲ್ಲಾ ಸಮಯ ಸಿಕ್ಕಾಗ ಹಿಡಿದು ಮಟ್ಟ ಹಾಕ್ಬೇಕು. ಈ ಬಂಗಾಳಿಗಳಿಗೆ ಬಂದ ಹುಚ್ಚನ್ನು ಮೊದಲು ಬಿಡಿಸ್ಬೇಕು. ಒಂದು ಒಳ್ಳೇ ಪ್ಲಾನ್ ತಯಾರಾಗಿದೆ. ಲಾರ್ಡ್‍ಕರ್ಜನ್‍ರವರು ತಂದ ಕಾರ್ಯಸೂಚಿಯನ್ನು ಇದೇ ಟೈಮ್, ಸುಧಾರಣೆ ಅನ್ನೋ ಹೆಸರಲ್ಲಿ ಜಾರಿ ಮಾಡಿದ್ರೆ, ಇವ್ರ ಭಾರತ್ ಮಾತೆ ಪೀಸ್ ಪೀಸ್. ಅಹ್ಹಹ್ಹಾ
ಕ್ರೇಗನ್ :  ಮಿಂಟೋ ಮೋರ್ಲೆ    -         ಎಲ್ಲರು :  ಸುಧಾರಣೆ
ಕ್ರೇಗನ್ :  ಬಂಗಾಳದ           -         ಎಲ್ಲರು :  ವಿಭಜನೆ   

(ಎರಡು ಮೂರು ಬಾರಿ ಘೋಷಣೆ ಕೂಗುವರು)

           ರಾಷ್ಟ್ರದಿಂದ ಬಂಗಾಳವನ್ನು | ಬೇರೆ ಮಾಡಲು ಹವಣಿಸಿ ||
           ದಮನಕಾರಕ ನೀತಿಯಿಂದ | ಒಡೆದು ಆಳಲು ಚಿಂತಿಸಿ ||1||
           ಅರವಿಂದರ ಬಂಧನವಾಯ್ತು | ಹೋರಾಟದ ಬಿಸಿಹೆಚ್ಚಾಯ್ತು ||
           ಜನಮನ ಕುದಿಯುತ ನೆರವಾಯ್ತು | ಘೋಷರ ಬಿಡುಗಡೆ ಆಗೋಯ್ತು ||2||

(ಇನ್ನೂ ಇದೆ.)                              - ಸದಾನಂದ