೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೭೧ - ೨೭೪
Īśvarī ईश्वरी (271)
೨೭೧. ಈಶ್ವರೀ
ಹಿಂದಿನ ನಾಮದ ಚರ್ಚೆಯಲ್ಲಿ ತಿಳಿಸಿದಂತೆ ತಿರೋಧಾನ ಕ್ರಿಯೆಯನ್ನು ಕೈಗೊಳ್ಳುವವನು ‘ಮಹಾದೇವ’ ಅಥವಾ ಈಶ್ವರ. ೩೬ ತತ್ವಗಳಲ್ಲಿ ಈಶ್ವರ ತತ್ವವು ೩೩ನೆಯದಾಗಿದೆ ಮತ್ತು ಇಲ್ಲಿ ಜ್ಞಾನ ಶಕ್ತಿಯು ಪ್ರಧಾನವಾಗಿರುತ್ತದೆ (೩೬ ತತ್ವಗಳ ವಿವರಣೆಗಳಿಗೆ ೨೨೯ನೇ ನಾಮವನ್ನು ನೋಡಿ*). ಈಶ್ವರನು ಎಲ್ಲವನ್ನೂ ನಿಯಂತ್ರಿಸುತ್ತಾನೆ ಮತ್ತು ಅವನು ಪರಾಹಂತವಾಗಿದ್ದಾನೆ ಅಂದರೆ ಈಶ್ವರನು ಪರಮೋನ್ನತ ವ್ಯಕ್ತಿಯಾಗಿದ್ದಾನೆ. ವಿಷ್ಣು ಸಹಸ್ರನಾಮದ ೩೬ನೇ ನಾಮವೂ ಸಹ ಈಶ್ವರ ಆಗಿದೆ.
(*೨೨೯ನೇ ನಾಮದಲ್ಲಿರುವ ವಿವರಣೆಗಳು ಶ್ರೀಯುತ ಲಕ್ಷ್ಮಣ್ ಜೂ ಇವರ ಕಾಶ್ಮೀರ ಶೈವತತ್ವದ ಪುಸ್ತಕದ ಮೇಲೆ ಆಧರಿಸಿದೆ. ಈ ನಾಮದಲ್ಲಿರುವ ವಿವರಣೆಗಳನ್ನು ಶ್ರೀಯುತ ರವಿಯವರು ಅನೇಕ ಪುಸ್ತಕಗಳಿಂದ ಗ್ರಹಿಸಿದ ವಿಷಯಗಳಿಂದ ಮತ್ತು ಪ್ರಮುಖವಾಗಿ ಜಯದೇವ ಸಿಂಗ್ ಇವರ ಶಿವಸೂತ್ರ ಪುಸ್ತಕವನ್ನು ಆಧರಿಸಿ ರಚಿಸಿದ ಶಿವಸೂತ್ರಗಳ ಕುರಿತಾದ ಅವರ ಸ್ವಂತ ಪುಸ್ತಕದ ಆಧಾರದ ಮೇಲೆ ಈ ನಾಮದ ವಿವರಣೆಯನ್ನು ಕೊಟ್ಟಿರುತ್ತಾರೆ. ಆದ್ದರಿಂದ ಈ ನಾಮ ಮತ್ತು ೨೨೯ನೇ ನಾಮದಲ್ಲಿನ ಚರ್ಚೆಯಲ್ಲಿ ಸ್ವಲ್ಪ ವಿಭಿನ್ನವಾದ ವಿವರಣೆ/ಅಭಿಪ್ರಾಯಗಳಿವೆ).
Sadāśivā सदाशिवा (272)
೨೭೨. ಸದಾಶಿವಾ
ನಾಮಗಳ ಅನುಕ್ರಮಣಿಕೆಯ ಸುಂದರತೆಯನ್ನು ನೋಡಿ. ಮೊದಲೇ ಒತ್ತುಕೊಟ್ಟು ಹೇಳಿದಂತೆ, ಬ್ರಹ್ಮವು ಐದು ವಿಧವಾದ ಕರ್ತವ್ಯಗಳನ್ನು ನಿರ್ವಹಿಸಬೇಕು. ಮೊದಲ ನಾಲ್ಕನ್ನು ಹಿಂದಿನ ನಾಮಗಳ ಚರ್ಚೆಯಲ್ಲಿ ವಿವರಿಸಲಾಗಿದೆ. ಈ ನಾಮಗಳಲ್ಲಿ ಮೊದಲು ಕ್ರಿಯೆಯನ್ನು ಉಲ್ಲೇಖಿಸಿ ಆ ನಂತರ ಅದನ್ನು ನಿರ್ವಹಿಸುವ ಬ್ರಹ್ಮದ ರೂಪವನ್ನು ಕುರಿತು ಹೇಳಲಾಗಿದೆ. ಉದಾಹರಣೆಗೆ, ೨೬೪ ಹಾಗೂ ೨೬೫ನೇ ನಾಮಗಳನ್ನು ನೋಡೋಣ. ೨೬೪ನೇ ನಾಮವು ಸೃಷ್ಟಿಕರ್ತ್ರಿ ಅಂದರೆ ಸೃಷ್ಟಿ ಕ್ರಿಯೆಯನ್ನು ಕುರಿತಾಗಿ ಹೇಳಿದರೆ ೨೬೫ನೇ ನಾಮವು ಬ್ರಹ್ಮ-ರೂಪಾ ಎಂದರೆ ಸೃಷ್ಟಿಕ್ರಿಯೆಯನ್ನು ಕೈಗೊಳ್ಳುವ ದೇವರ ರೂಪವಾಗಿದೆ. ಇದು ಉಳಿದ ಮೂರು ಕ್ರಿಯೆಗಳಿಗೂ ಅನ್ವಯಿಸುತ್ತದೆ. ಬ್ರಹ್ಮದ ಅನುಗ್ರಹದ ಮೂಲಕ ಉಂಟಾಗುವ ಪುನಃ ಸೃಷ್ಟಿಯನ್ನು ಕುರಿತು ಹೇಳುವಾಗ ಇಲ್ಲಿ ಮೊದಲು ದೇವರನ್ನು ಕುರಿತು ಹೇಳಿ ತದನಂತರ ಅವನ ಕ್ರಿಯೆಯನ್ನು ಕುರಿತಾಗಿ ಹೇಳುತ್ತಿದ್ದಾರೆ. ಕೇವಲ ಈ ನಾಮೋಚ್ಛಾರಣೆ ಮಾತ್ರದಿಂದಲೇ ಕೈವಲ್ಯವನ್ನು ಹೊಂದಬಹುದೆಂದು ಬಹುಶಃ ವಾಗ್ದೇವಿಗಳು ಭಾವಿಸಿರಬಹುದು.
ದೇವಿಯು ಸದಾಶಿವಾ ರೂಪದಲ್ಲಿರುತ್ತಾಳೆ. ಸದಾ ಎಂದರೆ ನಿರಂತರ ಮತ್ತು ಶಿವ ಎಂದರೆ ಮಂಗಳಕರವಾದದ್ದು. ಬ್ರಹ್ಮದ ಸದಾಶಿವರೂಪವು ಅತ್ಯಂತ ಶುಭಪ್ರದವಾದುದಾಗಿದ್ದು ದೇವಿಯು ಈ ರೂಪದಲ್ಲಿದ್ದಾಳೆಂದು ಹೇಳಲಾಗಿದೆ. ಸದಾಶಿವ ತತ್ವದ ಈ ಹಂತದಲ್ಲಿ, ಇಚ್ಛಾ ಶಕ್ತಿಯು (ಸೃಷ್ಟಿಯನ್ನು ಉಂಟುಮಾಡುವ ಬಯಕೆಯು) ಪ್ರಧಾನವಾಗಿರುತ್ತದೆ. ಈ ಹಂತದಲ್ಲಿ ’ನಾನೇ ಇದು’ ಎನ್ನುವ ಅಂಶವು ಮಸುಕಾಗುತ್ತಾ ಹೋಗುತ್ತದೆ (ಈ ಹಂತವು ’ಅದುವೇ ನಾನು’ ಹಂತವಲ್ಲ); ಇಲ್ಲಿ ಸ್ಪಷ್ಟವಾದ ಪರಿಶುದ್ಧತೆಯು ಇನ್ನೂ ಹೊಂದಲ್ಪಟ್ಟಿರುವುದಿಲ್ಲ. ಈ ಹಂತದಲ್ಲಿ ಬ್ರಹ್ಮಾಂಡ ಪ್ರಜ್ಞೆಯ ದರ್ಶನವಾಗುತ್ತದೆ. ಇಲ್ಲಿ ವೈಯ್ಯಕ್ತಿಕ ಪ್ರಜ್ಞೆಯು ಬ್ರಹ್ಮಾಂಡ ಪ್ರಜ್ಞೆಯೊಂದಿಗೆ ಇನ್ನೂ ಒಂದಾಗಿ ಸೇರಿಲ್ಲ. ಶಕ್ತಿಯು ಪುನಃಸೃಷ್ಟಿ ಮಾಡುವ ಬ್ರಹ್ಮದ ಉದ್ದೇಶವಾಗಿದೆ. ಬ್ರಹ್ಮನ ಇಚ್ಛಾ ಶಕ್ತಿಯು, ಈ ಹಂತದಲ್ಲಿ ವಿಶ್ವವನ್ನು ಅನುಗ್ರಹಿಸಿ ಪುನಃಸೃಷ್ಟಿಯನ್ನು ಕೈಗೊಳ್ಳುವುದಾಗಿದೆ; ಈ ಕ್ರಿಯೆಯನ್ನು ಮುಂದಿನ ನಾಮದಲ್ಲಿ ವಿವರಿಸಲಾಗಿದೆ.
ಬ್ರಹ್ಮನ ಇಚ್ಛಾ ಶಕ್ತಿಯು ಮೂರು ವಿಶಿಷ್ಠ ವಿಧಗಳಲ್ಲಿ ಪ್ರಕಟಗೊಳ್ಳುತ್ತದೆ; ಅವು ಶುದ್ಧವಿದ್ಯಾ, ಈಶ್ವರ ಮತ್ತು ಸದಾಶಿವ.
Anugrahadā अनुग्रहदा (273)
೨೭೩. ಅನುಗ್ರಹದಾ
ಸದಾಶಿವನ ಕರುಣೆಯ ಕ್ರಿಯೆಯಾದ ಪುನಃಸೃಷ್ಟಿಯ ಅನುಗ್ರಹದ ಕುರಿತಾಗಿ ಇಲ್ಲಿ ಉಲ್ಲೇಖಿಸಲಾಗಿದೆ. ಅನುಗ್ರಹವೆಂದರೆ ಕೃಪೆ, ಪುರೋಗತಿ, ಮೊದಲಾದವುಗಳಾಗಿವೆ. ಯಾವಾಗ ಬ್ರಹ್ಮಾಂಡವು ಲಯವಾಗುತ್ತದೆಯೋ ಆಗ ಏನೂ ಉಳಿಯುವುದಿಲ್ಲ. ಆತ್ಮಗಳ ಪರಮಾಣುಗಳು ಸಂಕುಚಿತಗೊಂಡು ಅವುಗಳು ಹಿರಣ್ಯಗರ್ಭವೆಂದು ಕರೆಯಲ್ಪಡುವ ಬಂಗಾರದ ಮೊಟ್ಟೆಯಲ್ಲಿ ಹುದುಗಿಸಲ್ಪಡುತ್ತವೆ. ಬ್ರಹ್ಮದ ಅನುಗ್ರಹದ ಅಂಶವು ಪ್ರಳಯದ ನಂತರ ಈ ಸೃಷ್ಟಿಯನ್ನು ಪುನಃ ರಚಿಸುವುದೇ ಆಗಿದೆ. ಈ ಪುನಃಸೃಷ್ಟಿಯ ಕಾರ್ಯವನ್ನು ಜಗಜ್ಜನನಿಯಾದ ಶಕ್ತಿಯು ಕೈಗೊಳ್ಳುತ್ತಾಳೆ. ಬ್ರಹ್ಮದ ಸದಾಶಿವ ರೂಪವು ಕರುಣೆಯ ಗುಣದಿಂದ ತುಂಬಿದೆ.
ಪುರಾತನ ಶಾಸ್ತ್ರಗಳು, ಗುರುವಿನ ಮಹತ್ವದ ಬಗ್ಗೆ ಸಾರಿ ಹೇಳುತ್ತವೆ. ಶ್ರೀ ಚಕ್ರವನ್ನು ಪೂಜಿಸುವಾಗ ಗುರುವಿನ ವಂಶಾವಳಿಯು ಪ್ರಪ್ರಥಮವಾಗಿ ಪೂಜಿಸಲ್ಪಡುತ್ತದೆ. ಗುರುವನ್ನು ಮೊದಲು ಪ್ರಣವ ಅಥವಾ ಓಂಕಾರ ರೂಪದಲ್ಲಿ ಪೂಜಿಸಿ, ನಂತರ ಬ್ರಹ್ಮ, ವಿಷ್ಣು, ರುದ್ರ, ಮಹಾದೇವ ಮತ್ತು ಸದಾಶಿವರ ರೂಪಗಳಲ್ಲಿ ಪೂಜಿಸಲಾಗುತ್ತದೆ. ಹಿಂದಿನ ನಾಮಗಳಲ್ಲಿ ಚರ್ಚಿಸಿದ ಪರಬ್ರಹ್ಮದ ಈ ಐದು ರೂಪಗಳನ್ನು ಗುರುವಿನ ರೂಪದಲ್ಲಿ ಪೂಜಿಸಲಾಗುತ್ತದೆ.
Pañcakṛtya-parāyaṇā पञ्चकृत्य-परायणा (274)
೨೭೪. ಪಂಚಕೃತ್ಯ-ಪರಾಯಣಾ
ದೇವಿಯು ಇದುವರೆಗೆ ಚರ್ಚಿಸಲ್ಪಟ್ಟ ಬ್ರಹ್ಮದ ಐದು ವಿಧವಾದ ಕ್ರಿಯೆಗಳಿಗೆ ನಿಲಯವಾಗಿದ್ದಾಳೆ. ೨೫೦ನೇ ನಾಮವಾದ ಪಂಚ-ಬ್ರಹ್ಮ-ಸ್ವರೂಪಿಣೀ ಇದುವರೆಗಾಗಲೇ ದೇವಿಯು ಐದು ವಿಧವಾದ ಕ್ರಿಯೆಗಳಿಗೆ ಕಾರಣಕರ್ತಳಾಗಿದ್ದಾಳೆ ಎಂದು ಹೇಳಿದೆ. ಈ ಐದೂ ಕ್ರಿಯೆಗಳನ್ನು ದೇವಿಯು ತನ್ನ ‘ಪ್ರಕಾಶ (ಚಿತ್) ವಿಮರ್ಶ (ಶಕ್ತಿ) ಮಹಾ ಮಾಯಾ ಸ್ವರೂಪಿಣಿ’ಯಾಗಿ ಕೈಗೊಳ್ಳುತ್ತಾಳೆ. ಚಿತ್ ಎಂದರೆ ಪರಿಪೂರ್ಣವಾದ ಮತ್ತು ಬದಲಾವಣೆಗೊಳಪಡದ ಪ್ರಜ್ಞೆಯಾಗಿದೆ.
ಕಾಶ್ಮೀರ ಶೈವ ಸಿದ್ಧಾಂತದ ‘ಪ್ರತ್ಯಭಿಜ್ಞಾನಹೃದಯಂ’ ಎನ್ನುವ ಆತ್ಮಸಾಕ್ಷಾತ್ಕಾರವನ್ನು ಕುರಿತಾದ ಗ್ರಂಥವು ಹೀಗೆ ಹೇಳುತ್ತದೆ, ಶಕ್ತಿಯು ಈ ಬ್ರಹ್ಮಾಂಡವನ್ನು ತಾನೇ ಸ್ವತಂತ್ರವಾಗಿ (ಸ್ವಂತ ಇಚ್ಛೆಯಿಂದಲೇ) ಸೃಜಿಸುತ್ತಾಳೆಯೇ ಹೊರತು ಯಾವುದೇ ವಿಧವಾದ ಬಾಹ್ಯ ಶಕ್ತಿಗಳ ಪ್ರಚೋದನೆಯಿಂದಲ್ಲ. ಈ ಪ್ರಪಂಚವು ಅವಳಲ್ಲಾಗಲೇ ಅಂತರ್ಗತವಾಗಿದ್ದು ಅದನ್ನು ಅವಳು ಕೇವಲ ಬಹಿರ್ಗತಗೊಳಿಸುತ್ತಾಳಷ್ಟೇ. ಪ್ರತಿಯೊಂದು ಆತ್ಮದಲ್ಲಿಯೂ ಅವನು (ಶಿವನು) ಐದು ಕೃತ್ಯಗಳನ್ನು ಮಾಡುತ್ತಾನೆ. ಅವೆಂದರೆ ಪಂಚಾವಸ್ಥೆಗಳಾದ ಸೃಷ್ಟಿ, ಸ್ಥಿತಿ, ಲಯ, ತಿರೋಧಾನ (ಹಿಂತೆಗೆದುಕೊಳ್ಳುವಿಕೆ/ಒಳಸೆಳೆದುಕೊಳ್ಳುವಿಕೆ) ಮತ್ತು ಪ್ರಳಯ. ಒಬ್ಬನು ತನ್ನ ಸ್ವಂತ ಶಕ್ತಿಗಳನ್ನೇ (ಐದು ಕೃತ್ಯಗಳನ್ನೇ) ಅಜ್ಞಾನದಿಂದಾಗಿ ಗುರುತಿಸಲು ವಿಫಲನಾಗುತ್ತಾನೆ. ‘ಕೃತ್ಯ’ कृत्य ಎಂದರೆ ಮಾಡಬೇಕಾದದ್ದು ಮತ್ತು ‘ಕೃತ್ಯಾ’ कृत्या ಎಂದರೆ ದುಷ್ಟತನ ಎನ್ನುವುದನ್ನು ಗಮನಿಸಿ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 271-274 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪರಮ ಶಿವನ ಚಿತ್ರಕೃಪೆ: ಶ್ರೀಯುತ ವಿ. ರವಿ, ಚನ್ನೈ.
Comments
ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ ೨೭೧ - ೨೭೪ ರ ಕಾವ್ಯ ರೂಪ ತಮ್ಮ ಅವಗಾಹನೆ, ಪರಿಶೀಲನೆಗೆ ಸಿದ್ದ - ನಾಗೇಶ ಮೈಸೂರು :-)
ಲಲಿತಾ ಸಹಸ್ರನಾಮ ೨೭೧ - ೨೭೪
________________________________
೨೭೧. ಈಶ್ವರೀ
ಸಕಲ ನಿಯಂತ್ರಕ ಈಶ್ವರ ಪರಾಹಂತ ಪರಮೋನ್ನತ
ಜ್ಞಾನ ಶಕ್ತಿ ಪ್ರಧಾನಿಸುವ ತತ್ವ ಸಾಂಕೇತಿಕತೆ ಸಮರ್ಥ
ಈಶ್ವರಾವತಾರ ಮಹಾದೇವ ತಿರೋಧಾನಕೆಲ್ಲ ಸವರಿ
ಮರುಸೃಷ್ಟಿಗೆ ಸಿದ್ದತೆ ಸಕಲ ನೇಪಥ್ಯದೆ ದೇವಿ ಈಶ್ವರೀ!
೨೭೨. ಸದಾಶಿವಾ
ತ್ರಿವಿಧ ಇಚ್ಛಾಶಕ್ತಿ ಬ್ರಹ್ಮಕೆ ಶುದ್ಧವಿದ್ಯ, ಈಶ್ವರ, ಸದಾಶಿವ
ದೇವಿ ಸದಾ ನಿರಂತರ ಶಿವ ಮಂಗಳಕರ ಶುಭಪ್ರದ ಭಾವ
ಇಚ್ಛಾಶಕ್ತಿ ಹೊಮ್ಮುತೆ ಸೃಷ್ಟಿಗೆ ಪರಿಶುದ್ಧತೆ ಬ್ರಹ್ಮಾಂಡಪ್ರಜ್ಞೆ
ಒಂದಾಗಿಸಿ ವೈಯಕ್ತಿಕ ಪ್ರಜ್ಞೆ ವಿಶ್ವಾನುಗ್ರಹ ಕೃಪೆಗೆ ಅನುಜ್ಞೆ!
೨೭೩. ಅನುಗ್ರಹದಾ
ಗುರು ವಂಶಾವಳಿ ಸಮೇತ ಪ್ರಥಮಪೂಜಾರಂಭ ಪ್ರಣವೋಂಕಾರ ರೂಪ
ತದನಂತರ ಪೂಜಿತ ಬ್ರಹ್ಮ ವಿಷ್ಣು ರುದ್ರ ಮಹಾದೇವ ಸದಾಶಿವ ಸ್ವರೂಪ
ಕರುಣಾಗುಣಪೂರಿತ ಸದಾಶಿವ ಬ್ರಹ್ಮರೂಪದೆ ಕೃಪೆಯೆ ಅನುಗ್ರಹದ ಶಕ್ತಿ
ಆತ್ಮಾಣು ಸಂಕುಚಿತ ಗರ್ಭ ಲಯ ಬ್ರಹ್ಮಾಂಡದೆ ಪುನರ್ಸೃಷ್ಟಿ ಪುರೋಗತಿ!
೨೭೪. ಪಂಚಕೃತ್ಯ-ಪರಾಯಣಾ
ಇಡೀ ಪ್ರಪಂಚವೆ ದೇವಿಯಂತರ್ಗತ ಸ್ವಯಿಚ್ಛಾ ಸ್ವತಂತ್ರದೆ ಬಹಿರ್ಗತ
ಲಲಿತೆ ಪಂಚ ಕ್ರಿಯಾ ನಿಲಯಾ ಪ್ರಕಾಶ ವಿಮರ್ಶ ರೂಪ ಕಾರಣಕರ್ತ
ಪರಿಪೂರ್ಣ ಸ್ಥಿರ ಪ್ರಜ್ಞೆ 'ಚಿತ್' ಶಿವರೂಪೆ ಆತ್ಮದೆ ನಡೆಸುತ ಪಂಚಕೃತ್ಯ
ಸ್ವಶಕ್ತಿ ಗ್ರಹಿಸದ ಅಜ್ಞಾನಕೃತ್ಯಾ ಗೆಲ್ಲೆ ಪಂಚಕೃತ್ಯ ಪರಾಯಣಾ ಸಾರಥ್ಯ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ by nageshamysore
ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ
೨೭೧. ಈಶ್ವರೀ
ಸಕಲ ನಿಯಂತ್ರಕ ಈಶ್ವರ ಪರಾಹಂತ ಪರಮೋನ್ನತ
ಜ್ಞಾನ ಶಕ್ತಿ ಪ್ರಧಾನಿಸುವ ತತ್ವ ಸಾಂಕೇತಿಕತೆ ಸಮರ್ಥ
ಪ್ರಧಾನಿಸುವ = ಪ್ರಸಾದಿಸುವ
ಈಶ್ವರಾವತಾರ ಮಹಾದೇವ ತಿರೋಧಾನಕೆಲ್ಲ ಸವರಿ
ಸವರಿ=ಬೇರೆ ಸೂಕ್ತ ಪದ ಸಾಧ್ಯವೇ ನೋಡಿ.
ಮರುಸೃಷ್ಟಿಗೆ ಸಿದ್ದತೆ ಸಕಲ ನೇಪಥ್ಯದೆ ದೇವಿ ಈಶ್ವರೀ!
೨೭೨. ಸದಾಶಿವಾ
ತ್ರಿವಿಧ ಇಚ್ಛಾಶಕ್ತಿ ಬ್ರಹ್ಮಕೆ ಶುದ್ಧವಿದ್ಯ, ಈಶ್ವರ, ಸದಾಶಿವ
ಶುದ್ಧವಿದ್ಯ=ಶುದ್ಧವಿದ್ಯೆ ಅಥವಾ ಶುದ್ಧವಿದ್ಯಾ ಮಾಡಿ
ದೇವಿ ಸದಾ ನಿರಂತರ ಶಿವ ಮಂಗಳಕರ ಶುಭಪ್ರದ ಭಾವ
ಇಚ್ಛಾಶಕ್ತಿ ಹೊಮ್ಮುತೆ ಸೃಷ್ಟಿಗೆ ಪರಿಶುದ್ಧತೆ ಬ್ರಹ್ಮಾಂಡಪ್ರಜ್ಞೆ
ಒಂದಾಗಿಸಿ ವೈಯಕ್ತಿಕ ಪ್ರಜ್ಞೆ ವಿಶ್ವಾನುಗ್ರಹ ಕೃಪೆಗೆ ಅನುಜ್ಞೆ!
ವೈಯಕ್ತಿಕ=ವೈಯ್ಯಕ್ತಿಕ ಅಥವಾ ವ್ಯಕ್ತಿಗತ ಮಾಡಿ
೨೭೩. ಅನುಗ್ರಹದಾ = ಎಲ್ಲಾ ಸರಿಯಾಗಿದೆ.
೨೭೪. ಪಂಚಕೃತ್ಯ-ಪರಾಯಣಾ
ಇಡೀ ಪ್ರಪಂಚವೆ ದೇವಿಯಂತರ್ಗತ ಸ್ವಯಿಚ್ಛಾ ಸ್ವತಂತ್ರದೆ ಬಹಿರ್ಗತ
ಸ್ವಯಿಚ್ಛಾ= ಬಿಡಿಸಿ ಬರೆದರೆ ಒಳಿತು - ಸ್ವ+ಇಚ್ಛೆ
ಲಲಿತೆ ಪಂಚ ಕ್ರಿಯಾ ನಿಲಯಾ ಪ್ರಕಾಶ ವಿಮರ್ಶ ರೂಪ ಕಾರಣಕರ್ತ
ಪರಿಪೂರ್ಣ ಸ್ಥಿರ ಪ್ರಜ್ಞೆ 'ಚಿತ್' ಶಿವರೂಪೆ ಆತ್ಮದೆ ನಡೆಸುತ ಪಂಚಕೃತ್ಯ
ಸ್ವಶಕ್ತಿ ಗ್ರಹಿಸದ ಅಜ್ಞಾನಕೃತ್ಯಾ ಗೆಲ್ಲೆ ಪಂಚಕೃತ್ಯ ಪರಾಯಣಾ ಸಾರಥ್ಯ!
>>ಪರಿಪೂರ್ಣ ಸ್ಥಿರ ಪ್ರಜ್ಞೆ 'ಚಿತ್' ಶಿವರೂಪೆ ಆತ್ಮದೆ ನಡೆಸುತ ಪಂಚಕೃತ್ಯ
ಸ್ವಶಕ್ತಿ ಗ್ರಹಿಸದ ಅಜ್ಞಾನಕೃತ್ಯಾ ಗೆಲ್ಲೆ ಪಂಚಕೃತ್ಯ ಪರಾಯಣಾ ಸಾರಥ್ಯ!>> ಈ ಎರಡು ಸಾಲುಗಳು ಈ ಕಂತಿನ ಹೈಲಟ್ ನಾಗೇಶರೆ. ಉಳಿದಂತೆ ಸಾರಗ್ರಾಹಿಯಾಗಿರುವ ನೀವು ಎಲ್ಲಾ ನಾಮಗಳ ಆಶಯವನ್ನು ಸರಿಯಾಗಿ ಬಿಂಬಿಸಿದ್ದೀರ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ by makara
ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ
ಶ್ರೀಧರರೆ ತಿದ್ದುಪಡಿಸಿದ ರೂಪ:
೨೭೧. ಈಶ್ವರೀ
ಸಕಲ ನಿಯಂತ್ರಕ ಈಶ್ವರ ಪರಾಹಂತ ಪರಮೋನ್ನತ
ಜ್ಞಾನ ಶಕ್ತಿ ಪ್ರಸಾದಿಸುವ ತತ್ವ ಸಾಂಕೇತಿಕತೆ ಸಮರ್ಥ
ಈಶ್ವರಾವತಾರ ಮಹಾದೇವ ತಿರೋಧಾನದ ರೂವಾರಿ
ಮರುಸೃಷ್ಟಿಗೆ ಸಿದ್ದತೆ ಸಕಲ ನೇಪಥ್ಯದೆ ದೇವಿ ಈಶ್ವರೀ!
೨೭೨. ಸದಾಶಿವಾ
ತ್ರಿವಿಧ ಇಚ್ಛಾಶಕ್ತಿ ಬ್ರಹ್ಮಕೆ ಶುದ್ಧವಿದ್ಯೆ, ಈಶ್ವರ, ಸದಾಶಿವ
ದೇವಿ ಸದಾ ನಿರಂತರ ಶಿವ ಮಂಗಳಕರ ಶುಭಪ್ರದ ಭಾವ
ಇಚ್ಛಾಶಕ್ತಿ ಹೊಮ್ಮುತೆ ಸೃಷ್ಟಿಗೆ ಪರಿಶುದ್ಧತೆ ಬ್ರಹ್ಮಾಂಡಪ್ರಜ್ಞೆ
ಒಂದಾಗಿಸಿ ವ್ಯಕ್ತಿಗತ ಪ್ರಜ್ಞೆ ವಿಶ್ವಾನುಗ್ರಹ ಕೃಪೆಗೆ ಅನುಜ್ಞೆ!
೨೭೩. ಅನುಗ್ರಹದಾ
ಗುರು ವಂಶಾವಳಿ ಸಮೇತ ಪ್ರಥಮಪೂಜಾರಂಭ ಪ್ರಣವೋಂಕಾರ ರೂಪ
ತದನಂತರ ಪೂಜಿತ ಬ್ರಹ್ಮ ವಿಷ್ಣು ರುದ್ರ ಮಹಾದೇವ ಸದಾಶಿವ ಸ್ವರೂಪ
ಕರುಣಾಗುಣಪೂರಿತ ಸದಾಶಿವ ಬ್ರಹ್ಮರೂಪದೆ ಕೃಪೆಯೆ ಅನುಗ್ರಹದ ಶಕ್ತಿ
ಆತ್ಮಾಣು ಸಂಕುಚಿತ ಗರ್ಭ ಲಯ ಬ್ರಹ್ಮಾಂಡದೆ ಪುನರ್ಸೃಷ್ಟಿ ಪುರೋಗತಿ!
೨೭೪. ಪಂಚಕೃತ್ಯ-ಪರಾಯಣಾ
ಇಡೀ ಪ್ರಪಂಚವೆ ದೇವಿಯಂತರ್ಗತ ಸ್ವ ಇಚ್ಛೆ ಸ್ವತಂತ್ರದೆ ಬಹಿರ್ಗತ
ಲಲಿತೆ ಪಂಚ ಕ್ರಿಯಾ ನಿಲಯಾ ಪ್ರಕಾಶ ವಿಮರ್ಶ ರೂಪ ಕಾರಣಕರ್ತ
ಪರಿಪೂರ್ಣ ಸ್ಥಿರ ಪ್ರಜ್ಞೆ 'ಚಿತ್' ಶಿವರೂಪೆ ಆತ್ಮದೆ ನಡೆಸುತ ಪಂಚಕೃತ್ಯ
ಸ್ವಶಕ್ತಿ ಗ್ರಹಿಸದ ಅಜ್ಞಾನಕೃತ್ಯಾ ಗೆಲ್ಲೆ ಪಂಚಕೃತ್ಯ ಪರಾಯಣಾ ಸಾರಥ್ಯ!
In reply to ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ by nageshamysore
ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ
ಈಶ್ವರೀ ನಾಮದ ವಿವರಣಾ ಕವನದಲ್ಲಿ ರೂವಾರಿ ಎನ್ನುವ ಅತ್ಯಂತ ಸೂಕ್ತ ಪದವನ್ನು ಬಳಿಸಿದ್ದೀರ ನಾಗೇಶರೆ. ಉಳಿದಂತೆ ಎಲ್ಲಾ ಸರಿಯಾಗಿದೆ. ಇದಕ್ಕೆ ಅಂತಿಮ ಕೊಂಡಿಯನ್ನು ಕೊಟ್ಟುಬಿಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ by makara
ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ
https://ardharaatria...
In reply to ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ by nageshamysore
ಉ: ೭೫. ಶ್ರೀ ಲಲಿತಾ ಸಹಸ್ರನಾಮ ೨೭೧ರಿಂದ ೨೭೪ನೇ ನಾಮಗಳ ವಿವರಣೆ
https://ardharaatria...
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು