ಬರ

ಬರ

ಕವನ

ಬರಿದಾದವೋ ಎಲ್ಲಾ ಬರಿದಾದವೋ

ಮನೆಯಲ್ಲಿ  ಆಡುವ  ಕೂಸುಗಳಿಲ್ಲ
ಬೆಳೆದು ನಿಂತಿಹ ಪುತ್ರರು ಇಲ್ಲ
ಪೇಟೆಯ ದುಡ್ಡಿಗೆ ಯುವಜನ ಸೋತಿರೆ 
ಊರಕೇರಿಯು ಬರಿದಾದವೋ...
ಎಲ್ಲಾ  ಬರಿದಾದವೋ.
 
ತೋಟ-ಗದ್ದೆಗೆ ಹೋಗೋರಿಲ್ಲ
ಹಟ್ಟಿ ಬೆಟ್ಟವ ಬೆಳೆಸೋರಿಲ್ಲ
ಹಳ್ಳಿ ಬದುಕನೇ ನೂಕಿ ನಿಂತಿರೆ
ಅನ್ನದ ಮೂಲವೇ  ಬರಿದಾದವೋ...
ಎಲ್ಲಾ  ಬರಿದಾದವೋ.

ಹಣತೆಗೆ ದೀಪವ ಹಚ್ಚೋರಿಲ್ಲ
ಹಬ್ಬ ಹರಿದಿನ ಮಾಡೋರಿಲ್ಲ
ಫೋನಲಿ ಶುಭಾಶಯ ಹೇಳಿ ಕುಳಿತರೆ
ಸಂತಸ ಕ್ಷಣಗಳೇ ಬರಿದಾದವೋ...
ಎಲ್ಲಾ  ಬರಿದಾದವೋ.

ನೆನಪಿನ ನೋವು ಕಾಡಿದೆಯಲ್ಲ 
ಮಕ್ಕಳ ಕರೆಯಲು ಇಲ್ಲೇನಿಲ್ಲ
ಸ್ಮಶಾನ ಮೌನ ಮನೆಯೋಳು ಹಬ್ಬಿರೆ   
ಕರುಳಿನ ಒಸರೆ ಬರಿದಾದವೋ...
ಎಲ್ಲಾ  ಬರಿದಾದವೋ.
 
ಇಂದಿನ ಇರಿವಿಗೆ ಅರ್ಥವೇ ಇಲ್ಲ
ನಾಳೆಗೆ ಗುರಿಯು ಕಾಣುವುದಿಲ್ಲ
ಬದುಕಿನ ಅರ್ಧದಿ ಕೆಲಸವೇ ಮುಗಿದಿರೆ
ಪಯಣದ ಹಾದಿ ಬರಿದಾದವೋ...
ಎಲ್ಲಾ  ಬರಿದಾದವೋ.
 
ಮುಪ್ಪಲಿ ಕಷ್ಟಕೆ ಆಗೋರಿಲ್ಲ 
ಹೃದಯದ ಡವಡವ ಕೇಳೋರಿಲ್ಲ
ಹೆತ್ತ ಜೀವವು ಒಂಟಿಯಾಗಿರೆ
ಬದುಕೋ ಆಸೆಯೇ ಬರಿದಾದವೋ...
ಎಲ್ಲಾ  ಬರಿದಾದವೋ.

 

ಚಿತ್ರ ಕೃಪೆ : ಗೂಗಲ್.

ಚಿತ್ರ್