೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೩೦೭ - ೩೧೦
Ramyā रम्या (307)
೩೦೭. ರಮ್ಯಾ
ದೇವಿಯು ಎಲ್ಲರಿಗಿಂತಲೂ ಅತ್ಯಂತ ಸುಂದರಳಾಗಿದ್ದಾಳೆ.
Rājivalocanā राजिवलोचना (308)
೩೦೮. ರಾಜೀವಲೋಚನಾ
ವಾಕ್ ದೇವಿಗಳು ಆಯ್ದುಕೊಂಡಿರುವ ಶಬ್ದಗಳು ಸೋಜಿಗವನ್ನುಂಟು ಮಾಡುತ್ತವೆ. ರಾಜೀವ ಎಂದರೆ ಜಿಂಕೆ, ಮೀನು ಅಥವಾ ಕಮಲದ ಹೂವು ಎನ್ನುವ ಸಾಂದರ್ಭಿಕ ಅರ್ಥಗಳು ಇವೆ ಮತ್ತು ಲೋಚನಾ ಎಂದರೆ ಕಣ್ಣುಗಳು. ಜಗನ್ಮಾತೆಯ ಕಣ್ಣುಗಳು ಜಿಂಕೆಯಂತೆ ಕಾಣಿಸುತ್ತವೆ ಅಥವಾ ಮೀನಿನಂತಿವೆ ಅಥವಾ ಕಮಲದ ಹೂವಿನಂತಿದೆ. ವಾಕ್ ದೇವತೆಗಳು ದೇವಿಯನ್ನು ಮೀನಾಕ್ಷೀ (ನಾಮ ೧೮ನ್ನು ನೋಡಿ) ಅಂದರೆ ಮೀನಿನಂತಹ ಕಣ್ಣುಳ್ಳವಳು ಅಥವಾ ಅವರು ಕಮಲ ನಯನಾ (ನಾಮ ೬೨ನ್ನು ನೋಡಿ) ಉಪಯೋಗಿಸಬಹುದಿತ್ತು. ಅವರು ಕೇವಲ ಮೃಗಾಕ್ಷೀ (ನಾಮ ೫೬೧) ಅಂದರೆ ಆಕೆಯ ಕಣ್ಣುಗಳು ಜಿಂಕಯ ಕಣ್ಣುಗಳಂತೆ ಇವೆಯಂದು ವರ್ಣಿಸಿದ್ದಾರೆ ಮತ್ತು ಈ ನಾಮವನ್ನೂ ಸಹ ದೇವಿಯ ಕಣ್ಣುಗಳನ್ನು ವರ್ಣಿಸಲು ಬಳಸಿಕೊಂಡಿದ್ದಾರೆ.
ಈ ನಾಮದ ಉದ್ದೇಶಿತ ಅರ್ಥವೇನೆಂದರೆ ದೇವಿಯ ಕಣ್ಣುಗಳನ್ನು ಯಾವುದರೊಂದಿಗೂ ಹೋಲಿಸಲಾಗದು ಎನ್ನುವುದೇ ಆಗಿದೆ. ದೇವಿಯ ಕಣ್ಣುಗಳು ಸಂಪೂರ್ಣವಾಗಿ ದಯೆ ಮತ್ತು ಕರುಣೆಯಿಂದ ಕೂಡಿವೆ. ಆಕೆಯು ಕೇವಲ ತನ್ನ ಕಣ್ಣನ್ನು ಮಿಟುಕಿಸುವ ಮೂಲಕ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳನ್ನು ಕೈಗೊಳ್ಳುತ್ತಾಳೆ (ನಾಮ ೨೮೧). ರಾಜೀವ ಎಂದರೆ ರಾಜನೆನ್ನುವ ಅರ್ಥವೂ ಇದೆ ಮತ್ತು ರಾಜೀವಲೋಚನಾ ಎಂದರೆ ಯಾರು ರಾಜನ ಮೇಲೆ ಅವಲಂಬಿತವಾಗಿರುವರೋ ಅವರ ಕಣ್ಣುಗಳೆಂದರ್ಥ. ಈಗಾಗಲೇ ಶಿವನು ರಾಜರಾಜನೆಂದು ಕರೆಯಲ್ಪಟ್ಟಿದ್ದಾನೆಂದು ತಿಳಿದುಕೊಂಡಿದ್ದೇವೆ ಮತ್ತು ಅವನ ಮೇಲೆ ಅವಲಂಬಿತರೆನ್ನುವುದು ಅವನ ಭಕ್ತರನ್ನು ಸೂಚಿಸುತ್ತದೆ. ದೇವಿಯು ಅವನ ಭಕ್ತರನ್ನು ತನ್ನ ಕೃಪಾದೃಷ್ಟಿಯಿಂದ ಆಶೀರ್ವದಿಸುತ್ತಾಳೆ.
Rañjanī रञ्जनी (309)
೩೦೯. ರಂಜನೀ
ದೇವಿಯು ತನ್ನ ಭಕ್ತರಿಗೆ ಈ ಜನ್ಮದಲ್ಲಿ ಹಾಗೂ ಸ್ವರ್ಗದಲ್ಲಿಯೂ ಸಹ ಸಂತೋಷವನ್ನುಂಟು ಮಾಡುತ್ತಾಳೆ ಅಂದರೆ ಬಹುಶಃ ಪುನರ್ಜನ್ಮವಿಲ್ಲದಂತೆ ಮಾಡುತ್ತಾಳೆನ್ನುವ ಅರ್ಥವಿರಬಹುದೆನಿಸುತ್ತದೆ. ಆದರೆ ಈ ನಾಮದ ಹೆಚ್ಚು ಸಮಂಜಸವಾದ ವಿಶ್ಲೇಷಣೆಯು ಈ ವಿಧವಾಗಿದೆ: ರಂಜನಾ ಎಂದರೆ ಬಣ್ಣ ಹಾಕುವ ಕ್ರಿಯೆ, ಪ್ರೀತಿಯುಕ್ಕುವಂತಿರುವುದು, ರಮಣೀಯವಾಗಿರುವಿಕೆ, ಸಂತಸಪಡುವುದು, ಸಂತೋಷವುಕ್ಕುವಂತೆ ಮಾಡುವುದು, ಸ್ನೇಹಮಯವಾಗಿರುವುದು ಮೊದಲಾದವು. ಈ ದೃಷ್ಟಿಯಿಂದ ನೋಡಿದಾಗ, ದೇವಿಗೆ ಸಂಭಂದಪಟ್ಟ ಎಲ್ಲವೂ ಕೆಂಪಾಗಿರುತ್ತವೆ. ಶಿವನು ಎಲ್ಲಾ ಬಣ್ಣಗಳಿಗೆ ಅತೀತನಾಗಿದ್ದು ಅವನು ಸ್ಪಟಿಕದಂತೆ ವರ್ಣರಹಿತನಾಗಿದ್ದಾನೆ. ಯಾವಾಗ ದೇವಿಯು ಶಿವನೊಂದಿಗೆ ಕುಳಿತುಕೊಳ್ಳುತ್ತಾಳೆಯೋ, ಶಿವನ ಮೈಕಾಂತಿಯು ಕೆಂಪಾಗಿ ಪರಿವರ್ತಿತವಾಗುತ್ತದೆ. ಅವನ ಸ್ಪಟಿಕದಂತಹ ಮೈಕಾಂತಿಯು ಜಗನ್ಮಾತೆಯ ಕೆಂಪು ವರ್ಣದ ಮೈಕಾಂತಿಯಿಂದಾಗಿ ಕೆಂಪು ಬಣ್ಣದಿಂದ ಹೊಳೆಯಲಾರಂಭಿಸುತ್ತದೆ. ಸೌಂದರ್ಯ ಲಹರಿಯ ೯೨ನೇ ಸ್ತೋತ್ರವು ಈ ಸನ್ನಿವೇಶವನ್ನು ಇನ್ನೊಂದು ವಿಧವಾಗಿ ವಿವರಿಸುತ್ತದೆ. "ನಿನ್ನ ಹೊಂಗಿರಣಗಳ ಪ್ರಭೆಯಿಂದಾಗಿ ಶಿವನು ತನ್ನ ಸ್ಪಟಿಕದಂತಹ ಮೈಕಾಂತಿಯನ್ನು ಕೆಂಪಾದ ಹೊದಿಕೆಯಾಗಿ, ಕಾಮವಾಂಛೆಗಳ ಮೂರ್ತರೂಪವೋ ಎನ್ನುವಂತೆ ಮಾರ್ಪಡಿಸಿಕೊಂಡಿರುವುದು ನಿನ್ನ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ".
Ramaṇī रमणी (310)
೩೧೦. ರಮಣೀ
ದೇವಿಯು ಎಲ್ಲಾ ಕಡೆ ಆಟವಾಡಿಕೊಂಡಿರುತ್ತಾಳೆ, ಆಕೆಯು ತನ್ನ ಭಕ್ತರೊಡನೆಯೂ ಆಟವಾಡುತ್ತಾಳೆ. ಭಕ್ತರೇ ಆಕೆಗೆ ಎಲ್ಲವೂ ಆಗಿದ್ದಾರೆ. ದೇವಿಯು ಅವರಿಗೆ ಸಂತೋಷವನ್ನುಂಡು ಮಾಡುವುದಲ್ಲದೆ ಅವರೊಂದಿಗೆ ಆಟವನ್ನೂ ಆಡುತ್ತಾಳೆ. ತನ್ನ ಮಕ್ಕಳಿಗೆ ಸಂತೋಷವನ್ನುಂಡು ಮಾಡುವುದು ಮತ್ತು ಅವರೊಂದಿಗೆ ಆಟವಾಡುವುದು ತಾಯಿಯ ಲಕ್ಷಣಗಳು. ಇಲ್ಲಿ ಆಕೆಯ ತಾಯ್ತನದ ಲಕ್ಷಣವನ್ನು ಒತ್ತುಕೊಟ್ಟು ಹೇಳಲಾಗಿದೆ. ಆದರೆ ಭಕ್ತರು ಭಯ ಮತ್ತು ಗೌರವಗಳಿಂದಾಗಿ ಆಕೆಯಿಂದ ದೂರವುಳಿಯುತ್ತಾರೆ. ಇದುವೇ ದೈವಸಾಕ್ಷಾತ್ಕಾರಕ್ಕೆ ಇರುವ ಅತಿ ದೊಡ್ಡ ತೊಡಕಾಗಿದೆ. ಹೆದರಿಕೆ ಮತ್ತು ಗೌರವಗಳು ಯಾವಗಲೂ ಪ್ರೀತಿ ಮತ್ತು ಮಮತೆಗಳಿಗೆ ದಾರಿ ಮಾಡಿಕೊಡಬೇಕು. ದುರುದೃಷ್ಟವಶಾತ್, ದೇವಿಯನ್ನು ತನಗೆ ಸಂಭಂದಿಸಿದವಳಲ್ಲವೆಂದು ಮತ್ತವಳು ಬೇರೆ ಯಾವುದೋ ವರ್ಗಕ್ಕೆ ಅಥವಾ ಗುಂಪಿಗೆ ಸೇರಿದ ವ್ಯಕ್ತಿಯೆಂದು ತಿಳಿಯುತ್ತಾರೆ. ಯಾವಾಗ ನಾವು ಆಕೆಯನ್ನು ಸರ್ವಾಂತರ್ಯಾಮಿ ಎಂದು ಹೇಳುತ್ತೇವೆಯೋ ಆವಾಗ ಆಕೆಯನ್ನು ಬೇರೊಬ್ಬ ವ್ಯಕ್ತಿಯೆಂದು ಪರಿಗಣಿಸುವುದಾದರೂ ಏತಕ್ಕೆ?
ಇದನ್ನೇ ಛಾಂದೋಗ್ಯ ಉಪನಿಷತ್ತು (೮.೧೨.೩) ಹೀಗೆ ಹೇಳುತ್ತದೆ, "ಅದೇ ವಿಧವಾಗಿ*, ಆನಂದಪೂರ್ಣ ಆತ್ಮವು ದೇಹದಿಂದ ಮೇಲೇರಿ ಬ್ರಹ್ಮಾಂಡ ಆತ್ಮದ ಬೆಳಕನ್ನು ಹೊಂದಿ ತನ್ನದೇ ರೂಪವಾದ ಪರಮಾತ್ಮ ಅಥವಾ ಬ್ರಹ್ಮಾಂಡದ ಆತ್ಮವಾಗಿ ಕಾಣಿಸಿಕೊಳ್ಳುತ್ತದೆ. ಈ ಅನುಭವದ ನಂತರ ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯು ತಿನ್ನುತ್ತಾ, ಆಡುತ್ತಾ ಅಥವಾ ಸ್ತ್ರೀಯರು, ಸ್ನೇಹಿತರು ಮತ್ತು ಬಂಧುಗಳೊಂದಿಗೆ ಆನಂದಿಸುತ್ತಾ, ತಾನು ಯಾವ ದೇಹದಲ್ಲಿ ಜನಿಸಿದ್ದೇನೆಂದು ನೆನಪಿಸಿಕೊಳ್ಳದೇ ಸ್ವೇಚ್ಛೆಯಾಗಿ ತಿರುಗುತ್ತಾನೆ. ಯಾವ ವಿಧವಾಗಿ ಕುದರೆಗಳು ಅಥವಾ ಎತ್ತುಗಳು ಗಾಡಿಗೆ ಕಟ್ಟಲ್ಪಟ್ಟಿರುತ್ತವೆಯೋ ಅದೇ ವಿಧವಾಗಿ ಕರ್ಮದ ಫಲದಿಂದಾಗಿ ಜೀವವು (ಆತ್ಮವು) ಈ ದೇಹಕ್ಕೆ ಕಟ್ಟಿಹಾಕಲ್ಪಟ್ಟಿರುತ್ತದೆ." (*ಹಿಂದಿನ ಸೂಕ್ತಿಯಲ್ಲಿ ಸೂರ್ಯನಿಂದ ಹುಟ್ಟಿದ ಗುಡುಗು ಮಿಂಚುಗಳು ಸುಪ್ತವಾಗಿ ಆಕಾಶದಲ್ಲಿ ಇದ್ದು ಸೂಕ್ತ ಪರಿಸ್ಥಿತಿಗಳಲ್ಲಿ ಅವು ಏರ್ಪಟ್ಟು ಸೂರ್ಯನಲ್ಲಿಯೇ ಲೀನವಾಗುವಂತೆ; ಪರಮಾತ್ಮದಿಂದಲೇ ಹುಟ್ಟಿದ ಮನುಷ್ಯನು ಸೂಕ್ತ ಸಮಯದಲ್ಲಿ ಮಿಂಚಿನಂತೆ ಹುಟ್ಟಿ ಪರಮಾತ್ಮನಲ್ಲಿಯೇ ಲೀನವಾಗುತ್ತಾನೆ ಎಂದು ಹೇಳಲಾಗಿದೆ).
ಈ ಉಪನಿಷತ್ತಿನ ಸೂಕ್ತಿಯು ಆತ್ಮವು ಪರಮಾತ್ಮಕ್ಕಿಂತ (ಪರಬ್ರಹ್ಮಕ್ಕಿಂತ) ಬೇರೆಯಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಯಾರಿಗಾದರೂ ಅವರೆಡರ ನಡುವೆ ವ್ಯತ್ಯಾಸವಿದೆಯೆಂದು ಅನಿಸಿದರೆ ಅದು ಮಾಯೆಯ ಕಾರಣದಿಂದಾಗಿ. ನಾವು ಯಾವಾಗ ಮಾಂಸವನ್ನು ತಿನ್ನುತ್ತೇವೆಯೋ ಆಗ ದೇವಿಯೂ ಸಹ ನಮ್ಮೊಂದಿಗೆ ಮಾಂಸವನ್ನು ತಿನ್ನುತ್ತಾಳೆ. ನಾವು ಯಾವಾಗು ಈರುಳ್ಳಿಯನ್ನು ಆಸ್ವಾದಿಸುತ್ತೇವೆಯೋ ಆಕೆಯೂ ನಮ್ಮೊಂದಿಗೆ ಈರುಳ್ಳಿಯನ್ನು ಆಸ್ವಾದಿಸುತ್ತಾಳೆ. ಯಾವಾಗ ನಾವು ಬಡವರಾಗಿರುತ್ತೇವೆಯೋ ಆಗ ಆಕೆಯೂ ಬಡತನವನ್ನು ಹೊಂದಿರುತ್ತಾಳೆ ಮತ್ತು ನಾವು ಯಾವಾಗ ಶ್ರೀಮಂತರಾಗಿರುತ್ತೇವೆಯೋ ಆಗ ಆಕೆಯೂ ಸಹ ಶ್ರೀಮಂತಳಾಗಿರುತ್ತಾಳೆ. ಇದುವೇ ಸರ್ವಾಂತರಯಾಮಿಯ ವಿಶಿಷ್ಠ ಲಕ್ಷಣ.
ವಿಶ್ವರೂಪ ದರ್ಶನದ ನಂತರ ಅರ್ಜುನನು ಶ್ರೀಕೃಷ್ಣನಿಗೆ ಹೀಗೆ ಹೇಳುತ್ತಾನೆ, "ಯಾವತ್ತೂ ಕಂಡಿರದಂತಹ ಇಂತಹ ದೃಶ್ಯವನ್ನು ನೋಡಿ ಆನಂದತುಂದಿಲನಾದರೂ ಸಹ, ನನ್ನ ಮನಸ್ಸು ಭಯದಿಂದ ಪೀಡಿತವಾಗಿದೆ. ನೀನು ನನ್ನ ಮೇಲೆ ಕರುಣೆತೋರಿ ನಿನ್ನ ದೈವೀ ರೂಪವನ್ನಷ್ಟೇ (ಶ್ರೀಕೃಷ್ಣನ ಮೂಲರೂಪವನ್ನಷ್ಟೇ) ತೋರು" (ಭಗವದ್ಗೀತಾ ೧೧.೪೫). ನಾವು ಯಾವಾಗಲೂ ಭಗವಂತನು ನಮಗಿಂತ ಭಿನ್ನವಾದವನೆಂದು ತಿಳಿಯಬಾರದು. ಅವನಲ್ಲಿರುವ ದೈವತ್ವವೇ ನಮ್ಮಲ್ಲೂ ಇದೆ. ಈ ವ್ಯತ್ಯಾಸವು ಆತ್ಮಗಳನ್ನು ಆಧರಿಸಿದೆ, ಏಕೆಂದರೆ ಕೆಲವು ಆತ್ಮಗಳು ದೈವಸಾಕ್ಷಾತ್ಕಾರವನ್ನು ಹೊಂದಿದರೆ ಕೆಲವು ಅದನ್ನು ಹೊಂದಲಾಗುವುದಿಲ್ಲ ಮತ್ತದು ಅಪ್ಪಟವಾಗಿ ಒಬ್ಬನ ಕರ್ಮದ ಮೇಲೆ ಅವಲಂಬಿಸಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 307-310 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ ೩೦೭ - ೩೧೦ (ಕಂತು ೮೫ ರ) ಪ್ರಥಮ ಅವೃತ್ತಿ ಪರಿಷ್ಕರಣೆಗೆ ಸಿದ್ದ :-)
ಲಲಿತಾ ಸಹಸ್ರನಾಮ ೩೦೭ - ೩೧೦
___________________________________
೩೦೭. ರಮ್ಯಾ
ಅಸೀಮಾ ಅದ್ವಿತೀಯ ವರ್ಣನಾತೀತ ದೇವಿ ಸೌಂದರ್ಯ
ಸರಿಗಟ್ಟುವರಾರಿಲ್ಲದ ಸುರೂಪ, ಅಪರೂಪದ ಅಂತರ್ಯ
ಮನೋಹರರೂಪದೆ ಸೆಳೆದೆ, ಭಕ್ತರನಾಗಿಸುತೆ ಶೀಲರಮ್ಯ
ಆಕರ್ಷಿಸಿ ಆಹ್ಲಾದಿನಿ ರಮ್ಯಾ, ಬಿಡದೆ ತಲುಪಿಸುತ ಗಮ್ಯ!
೩೦೮. ರಾಜೀವಲೋಚನಾ
ವರ್ಣಿಸಲು ದೇವಿ ಲೋಚನ, ವಾಕ್ ದೇವಿಗಳದೆಷ್ಟೋ ಅಲೋಚನ
ಕಮಲ ಮತ್ಸ್ಯ ಹರಿಣಿ ಕಣ್ಣನೆ, ಹೋಲಿಸಿಯೂ ಹೋಲಿಕೆ ಅಪೂರ್ಣ
ದಯಾ ಕರುಣೆ ಸೃಷ್ಟಿ ಸ್ಥಿತಿ ಲಯ ಕಣ್ಣೋಟದಲೆ ನಡೆಸುವ ವದನ
ರಾಜರಾಜ ಶಿವ ಭಕ್ತರ ಕರುಣಿಸೆ, ಕೃಪಾದೃಷ್ಟಿ ರಾಜೀವಲೋಚನಾ!
೩೦೯. ರಂಜನೀ
ಸ್ಪಟಿಕದಂತೆ ವರ್ಣರಹಿತ ಶಿವ, ವರ್ಣಗಳೆಲ್ಲಕೂ ಅತೀತ ಭಾವ
ರೋಹಿತ ಪ್ರಭೆ ಆಸೀನೆ ಲಲಿತೆ, ಶಿವಕಾಂತಿ ಬೆಳಗಿ ಕೆಂಪೋದ್ಭವ
ಸೊಬಗಿನ ಹೊಂಗಿರಣದೆ ರಂಜನೀ , ಶಿವ ಶಕ್ತಿ ಏಕೀಕೃತ ಛಾಯೆ
ಬ್ರಹ್ಮವಾಗಿ ಭಕ್ತರ ಮಾಯೆ ನಿವಾರಿಸುವಳು ರಂಜನಾ ಸಮಯೆ!
೩೧೦. ರಮಣೀ
ಭಕ್ತಜನರೊಡನೊಡಗೂಡಿ ಆಡುತ ನಕ್ಕು ನಲಿಸಿ ಲಲಿತಾ ರಮಣೀ
ಹಸುಗಂದರ ಲಾಲಿಸಿ ಪಾಲಿಸಿ ಆಟವಾಡಿಸಿ ಮಾತೃಪ್ರೇಮದ ಗಣಿ
ಭಕ್ತರೇಕೊ ಗೌರವ ದೂರ ತೊಡಕಾಗದಿರುವುದೆ ಆತ್ಮಸಾಕ್ಷಾತ್ಕಾರ
ಸರ್ವಾಂತರ್ಯಾಮಿ ಪ್ರೀತಿ ಮಮತೆ ಅರಿಯದ ಪರಕೀಯತೆ ಭಾರ!
ಸುಪ್ತವಾಗಿಹ ಮಿಂಚು ಗುಡುಗು ಅವಿರ್ಭವಿಸಿ ಸೂಕ್ತ ಸೂರ್ಯ ಲೀನ
ಸೂಕ್ತ ರೀತ್ಯ ಪರಮಾತ್ಮ ಜನ್ಯ ಮನುಜನವನಲ್ಲೆ ಮಿಂಚಂತೆ ವಿಲೀನ
ಮೇಲೇರಿ ತಾನಾಗಿ ಬ್ರಹ್ಮಾಂಡಾತ್ಮ, ಸಾಕ್ಷಾತ್ಕಾರ ಸ್ವೇಚ್ಛೆ ಸದರಾಸಕ್ತ
ಅರಿಯನೇಕೆ ಕರ್ಮಫಲಕೆ ಕಟ್ಟಿ ಹಾಕಿದ ಆತ್ಮ ದೇಹದಲಷ್ಟೆ ಅಮುಕ್ತ!
ಆತ್ಮ ಪರಮಾತ್ಮದ ಅಂತರ ಶೂನ್ಯ, ಅನಿಸಿಕೆಯಿದ್ದರೂ ಮಾಯಾಜನ್ಯ
ಸರ್ವಾಂತರ್ಯಾಮಿಯ ವಿಶಿಷ್ಠ ಲಕ್ಷಣ,ನಾವೇನೊ ಅದಾಗುವ ಅನನ್ಯ
ನಮ್ಮಲಿಹ ಪರಮಾತ್ಮ ದೈವತ್ವ, ಹೇಗಾಗುವುದೊ ಭಿನ್ನ ಅವನದೆ ಸತ್ವ
ಕರ್ಮವಷ್ಟೆ ಫಲಾಧಿಕಾರಿ, ಕೊಡುವ ಬಿಡುವ ಆತ್ಮಸಾಕ್ಷಾತ್ಕಾರದ ತತ್ವ!
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
In reply to ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ by nageshamysore
ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ನಾಗೇಶರೆ,
ನಿಮ್ಮ ಶಕ್ತಿಯ ಮೂಲವೇನು, ಅದು ಬೂಷ್ಟೋ ಅಥವಾ ಹಾರ್ಲಿಕ್ಸೋ ಇಲ್ಲಾ ಕಾಂಪ್ಲೇನೋ ದಯಮಾಡಿ ತಿಳಿಸಿ :))
ನಡುವೆ ಹಲವಾರು ದಿನಗಳ ಕಂತುಗಳು ತಪ್ಪಿದ್ದರಿಂದ ಸ್ವಲ್ಪ ಹೆಚ್ಚಿನ ಕಂತುಗಳನ್ನು ಈ ವಾರದಲ್ಲಿ ನಾನು ಸೇರಿಸಿದ್ದೇನೆ. ಆದರೆ, ನಾನು ಒಂದು ಕಂತನ್ನು ಪ್ರಕಟಿಸಿ ಮತ್ತೊಂದು ಕಂತನ್ನು ಪ್ರಕಟಿಸುವಷ್ಟರಲ್ಲಿ ನಿಮ್ಮ ಕವನಗಳು ಸಿದ್ಧವಾಗಿರುತ್ತಿರುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತಿದೆ. ಇರಲಿ ಬಿಡಿ ನಿಮ್ಮ ವೇಗಕ್ಕೆ ನಾನೂ ಹೊಂದಿಕೊಳ್ಳಬೇಕಾಗಿರುವುದರಿಂದ ಈ ನಾಮಗಳ ಪರಿಷ್ಕರಣೆಗಳನ್ನು ಸ್ವಲ್ಪ ತ್ವರಿತವಾಗಿಯೇ ಮಾಡಿದ್ದೇನೆ :)
೩೦೭. ರಮ್ಯಾ
ಅಸೀಮಾ ಅದ್ವಿತೀಯ ವರ್ಣನಾತೀತ ದೇವಿ ಸೌಂದರ್ಯ
ಸರಿಗಟ್ಟುವರಾರಿಲ್ಲದ ಸುರೂಪ, ಅಪರೂಪದ ಅಂತರ್ಯ
ಅಂತರ್ಯ=ಆಂತರ್ಯ
ಮನೋಹರರೂಪದೆ ಸೆಳೆದೆ, ಭಕ್ತರನಾಗಿಸುತೆ ಶೀಲರಮ್ಯ
ಆಕರ್ಷಿಸಿ ಆಹ್ಲಾದಿನಿ ರಮ್ಯಾ, ಬಿಡದೆ ತಲುಪಿಸುತ ಗಮ್ಯ!
ಒಂದೇ ಸಾಲಿನಲ್ಲಿದ್ದ ಈ ವಿವರಣೆಯನ್ನು ನಿಮ್ಮ ಅದ್ಭುತ ಕಲ್ಪನೆಯಿಂದಾಗಿ ಚೆನ್ನಾದ ಕವಿತೆಯಾಗಿ ಹೊರಹೊಮ್ಮಿಸಿದ್ದೀರ.
೩೦೮. ರಾಜೀವಲೋಚನಾ = ಇದು ಈ ಕಂತಿನ ಉತ್ಕೃಷ್ಟ ರಚನೆ; ಪದಗಳ ಲಾಲಿತ್ಯ ಮನಸ್ಸಿಗೆ ಮುದ ನೀಡಿತು.
೩೦೯. ರಂಜನೀ=ಇದೂ ಸಹ ಅತ್ಯುತ್ತಮವಾಗಿ ಮೂಡಿ ಬಂದಿದೆ.
೩೧೦. ರಮಣೀ
೧) ಭಕ್ತಜನರೊಡನೊಡಗೂಡಿ ಆಡುತ ನಕ್ಕು ನಲಿಸಿ ಲಲಿತಾ ರಮಣೀ
ಹಸುಗಂದರ ಲಾಲಿಸಿ ಪಾಲಿಸಿ ಆಟವಾಡಿಸಿ ಮಾತೃಪ್ರೇಮದ ಗಣಿ
ಭಕ್ತರೇಕೊ ಗೌರವ ದೂರ ತೊಡಕಾಗದಿರುವುದೆ ಆತ್ಮಸಾಕ್ಷಾತ್ಕಾರ
ಭಕ್ತರೇಕೊ=? ಭಯ, ಭಕ್ತಿ ಮತ್ತು ಗೌರವಗಳಿಮದಾಗಿ ಭಕ್ತರು ದೇವಿಯಿಂದ ದೂರವುಳಿಯುತ್ತಾರೆ. ಆದ್ದರಿಂದ ಆ ಭಾವ ವ್ಯಕ್ತವಾಗುವಂತೆ ಅಲ್ಪ ಬದಲಾವಣೆ ಮಾಡಲು ಸಾಧ್ಯವೇ ನೋಡಿ.
ಸರ್ವಾಂತರ್ಯಾಮಿ ಪ್ರೀತಿ ಮಮತೆ ಅರಿಯದ ಪರಕೀಯತೆ ಭಾರ!
೨) ಸುಪ್ತವಾಗಿಹ ಮಿಂಚು ಗುಡುಗು ಅವಿರ್ಭವಿಸಿ ಸೂಕ್ತ ಸೂರ್ಯ ಲೀನ
ಸೂಕ್ತ=ನಭದಿ ಎಂದು ಮಾಡಿ ಏಕೆಂದರೆ ಗುಡುಗು ಮಿಂಚುಗಳು ಆವಿರ್ಭವಿಸುವುದು ಆಕಾಶದಲ್ಲಿ.
ಸೂಕ್ತ ರೀತ್ಯ ಪರಮಾತ್ಮ ಜನ್ಯ ಮನುಜನವನಲ್ಲೆ ಮಿಂಚಂತೆ ವಿಲೀನ
ಮೇಲೇರಿ ತಾನಾಗಿ ಬ್ರಹ್ಮಾಂಡಾತ್ಮ, ಸಾಕ್ಷಾತ್ಕಾರ ಸ್ವೇಚ್ಛೆ ಸದರಾಸಕ್ತ
ಸದರಾಸಕ್ತ=? ಸ್ವಲ್ಪ ವಿವರಿಸಿ/ಸೂಕ್ತ ಪದ ಬಳಸಿ.
ಅರಿಯನೇಕೆ ಕರ್ಮಫಲಕೆ ಕಟ್ಟಿ ಹಾಕಿದ ಆತ್ಮ ದೇಹದಲಷ್ಟೆ ಅಮುಕ್ತ!
ಕರ್ಮಫಲದಿಂದ ಬದ್ಧನಾದ ಆತ್ಮನು ತನ್ನನ್ನು ತಾನು ದೇಹದೊಂದಿಗೆ ಗುರುತಿಸಿಕೊಳ್ಳುತ್ತಾನೆ ಆದರೆ ಮನುಷ್ಯರ ರೂಪದಲ್ಲಿ ಆನಂದ ಹೊಂದುವವಳು ದೇವಿಯೇ ಆದರೆ ಅದು ಆತ್ಮಸಾಕ್ಷಾತ್ಕಾರ ಪಡೆದವರಿಗಷ್ಟೇ ಅನುಭವಕ್ಕೆ ಬರುತ್ತದೆ. ಈ ಹಿನ್ನಲೆಯಲ್ಲಿ ಕಡೆಯ ಎರಡು ಸಾಲುಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ.
೩) ಆತ್ಮ ಪರಮಾತ್ಮದ ಅಂತರ ಶೂನ್ಯ, ಅನಿಸಿಕೆಯಿದ್ದರೂ ಮಾಯಾಜನ್ಯ
ಸರ್ವಾಂತರ್ಯಾಮಿಯ ವಿಶಿಷ್ಠ ಲಕ್ಷಣ,ನಾವೇನೊ ಅದಾಗುವ ಅನನ್ಯ
ನಾವೇನೊ=ನಾವೂ ಸಹ/ನಾವೂನೂ
ನಮ್ಮಲಿಹ ಪರಮಾತ್ಮ ದೈವತ್ವ, ಹೇಗಾಗುವುದೊ ಭಿನ್ನ ಅವನದೆ ಸತ್ವ
ಕರ್ಮವಷ್ಟೆ ಫಲಾಧಿಕಾರಿ, ಕೊಡುವ ಬಿಡುವ ಆತ್ಮಸಾಕ್ಷಾತ್ಕಾರದ ತತ್ವ!
ಆತ್ಮಸಾಕ್ಷಾತ್ಕಾರವು ಆತ್ಮದ ಕರ್ಮಫಲದ ಮೇಲೆ ಅವಲಂಬಿಸಿದೆ ಆದ್ದರಿಂದ ಕೆಲವೊಂದು ಆತ್ಮಗಳಿಗೆ ಅದು ಸಿದ್ಧಿಸಿದರೆ ಇನ್ನು ಕೆಲವಕ್ಕೆ ಅದು ಸಿದ್ಧಿಸುವುದಿಲ್ಲ ಎನ್ನುವ ಅರ್ಥ ಹೊಮ್ಮ ಬೇಕು. (ಆತ್ಮ ಮತ್ತು ಪರಮಾತ್ಮದ ಕಾಣುವ ಭಿನ್ನತೆಗೂ ಸಹ ಮಾಯಾ ಪ್ರೇರಿತ ಕರ್ಮವೇ ಕಾರಣ - ಇದು ಮೊದಲೆರಡು ಸಾಲುಗಳಲ್ಲಿ ವ್ಯಕ್ತವಾಗಿದೆ). ಈ ಹಿನ್ನಲೆಯಲ್ಲಿ ಕಡೆಯ ಸಾಲನ್ನು ಸೂಕ್ತವಾಗಿ ಮಾರ್ಪಡಿಸಿ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ by makara
ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ಶ್ರೀಧರರೆ,
$$$$ನಿಮ್ಮ ಶಕ್ತಿಯ ಮೂಲವೇನು, ಅದು ಬೂಷ್ಟೋ ಅಥವಾ ಹಾರ್ಲಿಕ್ಸೋ ಇಲ್ಲಾ ಕಾಂಪ್ಲೇನೋ ದಯಮಾಡಿ ತಿಳಿಸಿ :))$$$$
- ಬಹುಶಃ ಪ್ರಾಜೆಕ್ಟುಗಳಲ್ಲಿ ಡೆಡ್ಲೈನ್ ತಪ್ಪಿ ಒದ್ದಾಡಿದ ಅನುಭವವಿರಬಹುದೆ?? :-))
ತಿದ್ದುಪಡಿ ಮರು ಅವಗಾಹನೆಗೆ:
-------------------------------------------
೩೦೭. ರಮ್ಯಾ
ಅಸೀಮಾ ಅದ್ವಿತೀಯ ವರ್ಣನಾತೀತ ದೇವಿ ಸೌಂದರ್ಯ
ಸರಿಗಟ್ಟುವರಾರಿಲ್ಲದ ಸುರೂಪ, ಅಪರೂಪದ ಆಂತರ್ಯ
ಮನೋಹರರೂಪದೆ ಸೆಳೆದೆ, ಭಕ್ತರನಾಗಿಸುತೆ ಶೀಲರಮ್ಯ
ಆಕರ್ಷಿಸಿ ಆಹ್ಲಾದಿನಿ ರಮ್ಯಾ, ಬಿಡದೆ ತಲುಪಿಸುತ ಗಮ್ಯ!
೩೧೦. ರಮಣೀ
೧) ಕಡೆಯ ಎರಡು ಸಾಲಿಗೆ ಎರಡು ಸಾಧ್ಯತೆ ತೋರಿಸಿದ್ದೇನೆ. ಯಾವುದು ಹೆಚ್ಚು ಸೂಕ್ತವೆನಿಸುತ್ತದೆ?
1)
ಭಕ್ತಜನರೊಡನೊಡಗೂಡಿ ಆಡುತ ನಕ್ಕು ನಲಿಸಿ ಲಲಿತಾ ರಮಣೀ
ಹಸುಗಂದರ ಲಾಲಿಸಿ ಪಾಲಿಸಿ ಆಟವಾಡಿಸಿ ಮಾತೃಪ್ರೇಮದ ಗಣಿ
ಭಯಭಕ್ತಿಗೌರವದುಳಿಯೆ ಭಕ್ತ ದೂರ ತೊಡಕು ದೈವಸಾಕ್ಷಾತ್ಕಾರ
ಸರ್ವಾಂತರ್ಯಾಮಿ ಪ್ರೀತಿ ಅರಿಯದ ಪರಕೀಯತೆ ಸಲ್ಲದವಿಚಾರ!
2)
-----
-----
ಭಯಭಕ್ತಿಗೌರವದುಳಿಯೆ ಭಕ್ತ ದೂರ ತೊಡಕು ದೈವಸಾಕ್ಷಾತ್ಕಾರ
ಮಾತೆಯಲ್ಲ ಅಪರಿಚಿತೆ ಸರ್ವಾಂತರ್ಯಾಮಿ ತಾ ಮಮತಾ ಪೂರ!
೨)ಕಡೆಯ ಎರಡು ಸಾಲಿಗೆ ಈ ಮಾರ್ಪಾಡು ಸರಿ ಹೊಂದುವುದೆ? ಬಹುಶಃ ಕಡೆಯೆರಡು ಸಾಲು ಅದಲು ಬದಲಾಗಿಸಬೇಕೆ (ಸರಿಯಿದ್ದರೆ)?
ಸುಪ್ತವಾಗಿಹ ಮಿಂಚು ಗುಡುಗು ಅವಿರ್ಭವಿಸಿ ನಭದಿ ಸೂರ್ಯ ಲೀನ
ಸೂಕ್ತ ರೀತ್ಯ ಪರಮಾತ್ಮ ಜನ್ಯ ಮನುಜನವನಲ್ಲೆ ಮಿಂಚಂತೆ ವಿಲೀನ
ಅರಿಯುತ ತಾನೆ ಬ್ರಹ್ಮಾಂಡಾತ್ಮ, ಸಾಕ್ಷಾತ್ಕಾರ ಸ್ವೇಚ್ಛೆ ಆನಂದಿಸುತ
ಕರ್ಮಫಲಬದ್ಧ ಮೋಹಾತ್ಮ ಸಾಕ್ಷಾತ್ಕಾರದಲಿ ದೇವಿ ಏಕೀಭವಿಸುತ!
೩) ಈ ಬದಲಾವಣೆ ಸೂಕ್ತ ಕಾಣುತ್ತಿದೆಯೆ?
ಆತ್ಮ ಪರಮಾತ್ಮದ ಅಂತರ ಶೂನ್ಯ, ಅನಿಸಿಕೆಯಿದ್ದರೂ ಮಾಯಾಜನ್ಯ
ಸರ್ವಾಂತರ್ಯಾಮಿಯ ವಿಶಿಷ್ಠ ಲಕ್ಷಣ,ನಾವೂನೂ ಅದಾಗುವ ಅನನ್ಯ
ನಮ್ಮಲಿಹ ಪರಮಾತ್ಮ ದೈವತ್ವ, ಹೇಗಾಗುವುದೊ ಭಿನ್ನ ಅವನದೆ ಸತ್ವ
ಕರ್ಮಫಲ ತೋರುವ ದಾರಿ, ಅರಿತಾತ್ಮಕೆ ಸಿದ್ದಿ ಆತ್ಮಸಾಕ್ಷಾತ್ಕಾರ ತತ್ವ!
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
In reply to ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ by nageshamysore
ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ನಾಗೇಶರೆ,
ಈಗ ಎಲ್ಲಾ ಕವನಗಳ ತಿದ್ದುಪಡಿ ಸರಿಯಾಗಿದೆ. ರಮಣೀ ಪದ್ಯದಲ್ಲಿನ ಎರಡನೇ ಸಾದ್ಯತೆಯನ್ನೇ ಉಳಿಸಿಕೊಳ್ಳಿ.
೩೧೦. ರಮಣೀ
ಭಕ್ತಜನರೊಡನೊಡಗೂಡಿ ಆಡುತ ನಕ್ಕು ನಲಿಸಿ ಲಲಿತಾ ರಮಣೀ
ಹಸುಗಂದರ ಲಾಲಿಸಿ ಪಾಲಿಸಿ ಆಟವಾಡಿಸಿ ಮಾತೃಪ್ರೇಮದ ಗಣಿ
ಭಯಭಕ್ತಿಗೌರವದುಳಿಯೆ ಭಕ್ತ ದೂರ ತೊಡಕು ದೈವಸಾಕ್ಷಾತ್ಕಾರ
ಮಾತೆಯಲ್ಲ ಅಪರಿಚಿತೆ ಸರ್ವಾಂತರ್ಯಾಮಿ ತಾ ಮಮತಾ ಪೂರ!
ಈ ಆವೃತ್ತಿಯನ್ನೇ ಅಂತಿಮಗೊಳಿಸಿ; ಇದು ಹೆಚ್ಚು ಅರ್ಥಪೂರ್ಣವಾಗಿದೆ.
ಈಗ ನಿಮ್ಮ ಕವನಗಳನ್ನು ಓದಿದ ಮೇಲೆ ಅದೇ ನನಗೆ ಬೂಸ್ಟ್ ಕುಡಿದಂತೆ :))
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ by makara
ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ಇಲ್ಲಿ ಕುಡಿದರೂ ಶಕ್ತಿ ಪೇಯ
ಬಾಕಿ ಕವನಗಳ ರಿಪೇರಿಗೆಲ್ಲ ವ್ಯಯ
ಸಹನೆ ಹೀಗೆ ಇರಲಿ ಜೀಯಾ
ಸಾವಿರ ಮೆಟ್ಟಲು ತಲುಪುವ ದಾಯ!
ಈ ಕಂತನ್ನು ಅಂತಿಮಗೊಳಿಸಿದ್ದೇನೆ :-)
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ by nageshamysore
ಉ: ೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ನಿಮ್ಮ ಆಶಯದಂತೆಯೇ ಆಗಲಿ ನಾಗೇಶರೆ, ಧನ್ಯವಾದಗಳು :))