ಪಲ್ಲಕ್ಕಿ ಹಿಡಿದು ನಿಂತವರು, ವಾಲಗದವರು, ಆರತಿ ತಟ್ಟೆ ಹಿಡಿದೋರು ಒಟ್ಟಿನಲ್ಲಿ ಅವತ್ತು ದಿಬ್ಬಣಕ್ಕೆ ಹೊರಟಿದ್ದ ಎಲ್ರೂವೇ ಕಲ್ಲಾಗಿದ್ದಾರೆ ಕಣ್ರೀ... ಕತೆ ಕೇಳುತ್ತಿದ್ದ ನಮ್ಮ ಮುಖಗಳನ್ನು ನೋಡಿ ಮತ್ತೆ ಮುಂದುವರೆಸಿದ... ಇಗ್ಲೂ ಆ ಗುಡ್ಡದ ಮೇಲೆ ಆವತ್ತು ಕಲ್ಲಾದವರೆಲ್ಲಾ ಹಂಗೇ ನಿಂತಿದ್ದಾರೆ.. ಬೇಕಾರೆ ನೀವು ಹೋಗಿ ನೋಡಬಹುದು ಅಂದಾಗ ನಾವು ಒಮ್ಮೆ ಗುಡ್ಡ ನೋಡಿ ಇನ್ನೊಮ್ಮೆ ಆತನ ಮುಖ ನೋಡಿದೆವು. ಗುಡ್ಡದಷ್ಟೇ ನಿರ್ಲಿಪ್ತವಾಗಿತ್ತು ಕತೆ ಹೇಳುತ್ತಿದ್ದ ಮುದುಕನ ಮುಖ.
ದಟ್ಟ ಕಾಡಿನಿಂದ ಆವೃತ್ತವಾದ ಈ ಗುಡ್ಡದಲ್ಲಿ ಅಡಗಿರುವ ಕತೆ ನಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯತೊಡಗಿತು.
ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಹಾಗೇ ಒಂದು ಸುತ್ತು ಹೊರಡುವ ಚಾಳಿ ನಮಗೆ ಅಪರೂಪದ ಅನುಭವಗಳನ್ನು ನೀಡಿದೆ. ಶಿವಮೊಗ್ಗ ದಾಟುತ್ತಿದ್ದಂತೆ ಸಿಗುವ ಹರಕೆರೆ ಈಶ್ವರ ದೇವಾಲಯ, ಹೊಸಳ್ಳಿ, ಗಾಜನೂರಿನ ಡ್ಯಾಮು, ಇನ್ನೊಂದೈದು ನಿಮಿಷ ಸಾಗಿದರೆ ಸಕ್ಕರೆಬೈಲಿನ ಆನೆಗಳ ಬಿಡಾರ, ಅಲ್ಲಿಂದ ಕೂಗಳತೆಯಲ್ಲಿರುವ ಅಶ್ವಿನಿವನ ಹೀಗೆ ಸಾಗುತ್ತಿದ್ದಂತೆ ಮಂಡಗದ್ದೆಯಲ್ಲಿ ಪಕ್ಷಿಗಳ ಕಲರವ ಕೇಳಿಕೊಂಡು ಮಡುಬು ಸೇತುವೆ ಬಳಿ ಹೊಳೆಯಲ್ಲಿ ಒಂದಷ್ಟು ಮೀದು ಹಿಂತಿರುವುಗುದು. ನಾವೇನು ಮಹಾನ್ ಈಜುಗಾರರಲ್ಲ, ಸೊಂಟಮಟ್ಟದವರೆಗಿನ ನೀರಿನಲ್ಲಿ ಒಂದು ಬಂಡೆ ಹಿಡಿದುಕೊಂಡು ಕಾಲು ಬಡಿಯುವುದು, ಅಲ್ಲೆ ಮುಳುಗೇಳುವುದೇ ನಮ್ಮ ಈಜು. ಆದರೆ, ನಮ್ಮ ಕತೆಗಳನ್ನು ಕೇಳಿದವರು ನಾವೆಲ್ಲಾ ಮಹಾನ್ ಈಜುಗಾರರು ಎಂದೇ ಭಾವಿಸಿದ್ದಾರೆ. ಅಪ್ಪಿತಪ್ಪಿ ಯಾರಾದರೂ ಹೊಳೆಪಾಲಾದಾಗ ನಮ್ಮನ್ನು ಕರೆದರೆ....... ಮುಂಚೆ ಹೋಳೆಪಾಲಾದವನೊಂದಿಗೆ ನಾನೂ ಹೊಳೆಪಾಲು ಅಷ್ಟೇ, ಅಥವಾ ನನ್ನನ್ನೂ ಏಳೆಯಲು ಇನ್ನೊಬ್ಬ ಬರಬಕೇಷ್ಟೇ.
ನಮ್ಮ ಅರ್ಧ ದಿನದ ಫೆವರೆಟ್ ಪಿಕ್‌ನಿಕ್ ಇಷ್ಟು, ಇನ್ನಷ್ಟು ಸಮಯ ಇದ್ದರೆ ಮುಡುಬ ಸೇತುವೆ ದಾಟಿ ಖಾಂಡ್ಯದ ಮೂಲಕ ಮೃಗವಧೆ ದೇವಾಲಯಕ್ಕೆ ಹೋಗಿ ಅಲ್ಲಿ ಇನ್ನೊಂದಷ್ಟು ಹೊತ್ತು ನೀರಾಟ ನಂತರ ದೇವಾಲಯದಲ್ಲಿ ಪುಷ್ಕಳ ಭೋಜನ ಮುಗಿಸಿ ಕಾಡಿನ ನಡುವೆ ಯಾವುದಾದರೊಂದು ಮರದ ಕೆಳಗೆ ಒಂದು ಗಂಟೆ ಸಂಪಾದ ನಿದ್ದೆ ಮಾಡಿ ಸಂಜೆ ವೇಳೆಗೆ ಹಿಂತಿರುಗುವ ಮೂಲಕ ದಿನ ಕಳೆಯುವುದು. ಕೆಲ ದೇವಾಲಯಗಳು ನಮಗೆ ತುಂಬಾ ಇಷ್ಟವಾಗ್ತವೆ...ಅಲ್ಲಿನ ದೇವರಿಂದ ಖಂಡಿತಾ ಅಲ್ಲ.. ಅಲ್ಲಿ ದೊರೆಯುವ ರುಚಿಯಾದ ಊಟದಿಂದ. ದೇವರ ಮೇಲೆ ಭಕ್ತಿ ಇಲ್ಲದಿದ್ದರೂ ಊಟದ ಮೇಲಿನ ಆಪಾರ ಭಯ- ಭಕ್ತಿ ಇರುವುದರಿಂದ ಇಂಥ ಜಾಗಗಳಿಗೆ ಭೇಟಿ ನೀಡುತ್ತೇವೆ.
ಮುಡುಬದ ಮಂಜಪ್ಪಗೌಡ್ರ ಮನೆ ದಾಟಿದ ಒಂದು ಏರು ಇದು ಇಳಿಜಾರು ಮುಗಿದ ನಂತರ ಸಿಗೋದು ಮಲ್ಲಂದೂರು ಎಂಬ ಪುಟ್ಟ ಗ್ರಾಮ. ರಸ್ತೆಯ ಬಲಭಾಗದಲ್ಲಿ ಒಂದಷ್ಟು ಮನೆಗಳು ಎಡ ಭಾಗದಲ್ಲಿ ದೊಡ್ಡದಾದ ದಟ್ಟ ಮರಗಿಡ ಬಳ್ಳಿಗಳಿಂದ ಕೂಡಿದ ಗುಡ್ಡ, ಸುತ್ತ ಗದ್ದೆಬೈಲು, ಒಂದಷ್ಟು ಅಡಕೆ ತೋಟಗಳ ಇತ್ಯಾದಿಗಳಿಂದ ಕೂಡಿದ ಮಲೆನಾಡಿನ ಊರು.
ಅವತ್ತು ಮೃಗವಧೆಗೆ ಹೋಗುವಾಗ ಹಿಂದಿದ್ದವರು ಬರಲಿ ಎಂದು ಮಲ್ಲಂದೂರಿನ ಒಂದು ಅಂಗಡಿ ಮುಂದೆ ಸ್ವಲ್ಪಹೊತ್ತು ನಿಂತೆವು. ಆವಾಗ್ಲೆ ಈ ಮುದುಕ ನಮ್ಮೆದುರು ಬಂದು ನಿಂತದ್ದು, ಗುಡ್ಡದ ಕತೆ ಹೇಳಿದ್ದು.
ಕತೆ ನಡೆದದ್ದು ಪಾಳೆಗಾರರು ಈ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಂತೆ.....
ಚಿತ್ರ. ಮುಡುಬಾ ಸೇತುವೆ ಬಳಿಯ ನದಿ ತುಂಗೆ...
ಬಾಕಿ ಮುಂದಿನ ಕಂತಿನಲ್ಲಿ.......