ಸಹಾಯವಾಣಿಗೆ ಮೊರೆ - ಜೈಲಿಗೆ ದಾರಿ
ಇದು ಎಂಟು ವರುಷಗಳ ಮುಂಚೆ ನಡೆದ ಘಟನೆ. ರೈತರ ಸಹಾಯವಾಣಿಗೆ ರೈತನೊಬ್ಬ ಕರೆ ಮಾಡುತ್ತಾನೆ. ಅದರಿಂದಾದ ಘಟನಾವಳಿಗಳಿಂದಾಗಿ ಜೈಲು ಸೇರುತ್ತಾನೆ. ಇದು ಆಂಧ್ರಪ್ರದೇಶದ ಮೆಹಬೂಬ ನಗರದ ರೈತ ಬೋಯಾ ಮದಿಲೆಟ್ಟಿಯ ಪ್ರಕರಣ.
"ನನಗೆ ಸರಕಾರದಿಂದ ಬೇಕಾಗಿದ್ದದ್ದು, ಬ್ಯಾಂಕ್ ಸಾಲ ಪಡೆಯಲು ಸಹಾಯ - ಅಷ್ಟೇ. ನನ್ನ ಕುಟುಂಬಕ್ಕೆ ಹನ್ನೆರಡು ಎಕರೆ ಹೊಲವಿದೆ. ಅದು ಕಡಿಮೆಯೇನಲ್ಲ. ಅದರ ಭದ್ರತೆಯಿಂದ ನನಗೆ ಸಾಲ ಸಿಗಲೇ ಬೇಕು. ಆದರೆ ನನಗೆ ಸಾಲ ಸಿಗಲೇ ಇಲ್ಲ" ಎನ್ನುವಾಗ ಮದಿಲೆಟ್ಟಿಯ ಕಣ್ಣುಗಳು ತೇವವಾಗುತ್ತವೆ.
ನಾಲ್ಕು ತಿಂಗಳು ಅಧಿಕಾರಿಗಳ ಕಚೇರಿಗಳಿಗೆ ಅಲೆದಲೆದು ತನ್ನ ಕಷ್ಟಗಳನ್ನೆಲ್ಲ ಹೇಳಿಕೊಳ್ಳಲು ಹೆಣಗಿದರು ಮದಿಲೆಟ್ಟಿ. ಆದರೆ ಮೂರು ಲಕ್ಷ ರೂಪಾಯಿಗಳ ಸಾಲದಲ್ಲಿ ಮುಳುಗಿದ್ದ ಇವರ ಗೋಳು ಕೇಳುವವರೇ ಇಲ್ಲವಾಗಿತ್ತು. ಮದಿಲೆಟ್ಟಿಗೆ ಕಷ್ಟಗಳು ಹೊಸತಲ್ಲ. ೧೨ ಜನರ ಕುಟುಂಬದಲ್ಲಿ ಹಿರಿಯ ಮಗನಾಗಿ, ೨೯ ವರುಷಗಳ ಬದುಕಿನಲ್ಲಿ ಕಷ್ಟಗಳನ್ನೇ ಉಂಡು ಬೆಳೆದವರು ಮದಿಲೆಟ್ಟಿ. ಸೂರ್ಯಕಾಂತಿ, ಹತ್ತಿ ಮತ್ತು ಜೋಳ ಬೆಳೆಯುವುದರ ಜೊತೆಗೆ ಖಾಸಗಿ ಕಂಪೆನಿಗಾಗಿ ಬೀಜವನ್ನೂ ಬೆಳೆದು ಮಾರಿದವರು. ಮಧ್ಯವರ್ತಿಯ ಮೂಲಕ, ಆ ಕಂಪೆನಿಯಿಂದ ಸ್ವಲ್ಪ ಮುಂಗಡ ಹಣ ಸಿಗುತ್ತಿತ್ತು. ಆದರೆ ಇವರು ತೆಗೆದುಕೊಳ್ಳುವ ರಿಸ್ಕ್ ದೊಡ್ಡದು. ಆ ಕಂಪೆನಿಗಾಗಿ ಬೆಳೆ ಬೆಳೆದರೂ ನಷ್ಟವಾದಾಗ ಕಂಪೆನಿಯಾಗಲೀ ಮಧ್ಯವರ್ತಿಯಾಗಲೀ ನಷ್ಟ ಹಂಚಿಕೊಳ್ಳೋದಿಲ್ಲ. ಇದರಿಂದಾಗಿ ಮದಿಲೆಟ್ಟಿಯ ನಷ್ಟದ ಮೊತ್ತ ಹಂಗಾಮಿನಿಂದ ಹಂಗಾಮಿಗೆ ಹೆಚ್ಚುತ್ತಲೇ ಹೋಯಿತು. ನೀರಿಗಾಗಿ ಪರದಾಡುತ್ತಿದ್ದ ಮದಿಲೆಟ್ಟಿ ಎರಡು ಕೊಳವೆ ಬಾವಿ ಕೊರೆಸಿ, ಪೈಪುಲೈನ್ ಹಾಕಿಸಲು ಮಾಡಿದ್ದ ವೆಚ್ಚವೇ ರೂಪಾಯಿ ಮೂರು ಲಕ್ಷ ದಾಟಿತ್ತು.
ಮದಿಲೆಟ್ಟಿಯ ಸಾಲ ಏರುತ್ತಲೇ ಇತ್ತು. ಬಡ್ಡಿ ಬೆಳೆಯುತ್ತಲೇ ಇತ್ತು. ಅದರೊಂದಿಗೆ ಮಧ್ಯವರ್ತಿಗಳ ಕಾಟ ಹೆಚ್ಚುತ್ತಲೇ ಇತ್ತು. ಕೊನೆಗೊಮ್ಮೆ ಮದಿಲೆಟ್ಟಿ ಜಿಲ್ಲಾಧಿಕಾರಿಯನ್ನು ಭೇಟಿಯಾದರೂ ಅವರು ಏನನ್ನೂ ಕೇಳಲು ತಯಾರಿರಲಿಲ್ಲ. ಇತರ ಅಧಿಕಾರಿಗಳಂತೂ ಇವರ ಮುಖ ನೋಡಲೂ ತಯಾರಿರಲಿಲ್ಲ.
ಈ ಜಂಜಾಟದಲ್ಲಿ ಕೆಲವು ವಾರಗಳೇ ಉರುಳಿದವು. ಆಗ ನೆರೆಹೊರೆಯ ರೈತರು ಇವರಿಗಿತ್ತ ಸಲಹೆ: "ಸರಕಾರದ ಸಹಾಯವಾಣಿಗೆ ಫೋನ್ ಮಾಡು."
ಅಂತೂ ಸಹಾಯವಾಣಿಗೆ ಫೋನ್ ಮಾಡಿದರು ಮದಿಲೆಟ್ಟಿ. ಅದೇ ಅವರಿಗೆ ಮುಳುವಾಯಿತು. ಸಹಾಯವಾಣಿಯಿಂದ ಮಂಡಲ ಅಧಿಕಾರಿಯನ್ನು ಭೇಟಿಯಾಗಬೇಕೆಂಬ ಸಲಹೆ. ಅದರಂತೆ ಮದಿಲೆಟ್ಟಿ ಮಂಡಲ ರೆವಿನ್ಯೂ ಅಧಿಕಾರಿಯ ಎದುರು ದೈನ್ಯತೆಯಿಂದ ನಿಂತಾಗ, ಅವರಿತ್ತ ಆದೇಶ, "ಈ ಪ್ರಕರಣವನ್ನು ಒಬ್ಬ ರೆವಿನ್ಯೂ ಇನ್ಸ್ ಪೆಕ್ಟರ್ ಪರಿಶೀಲಿಸಬೇಕಾಗಿದೆ." "ಅಯ್ಯೋ, ಇನ್ನೇನನ್ನು ಪರಿಶೀಲಿಸ ಬೇಕಾಗಿದೆ? ನನಗೆ ಬೇಕಾಗಿರೋದು ಬ್ಯಾಂಕ್ ಸಾಲ. ನನ್ನ ಜಮೀನಿನ ದಾಖಲೆಗಳೆಲ್ಲ ನನ್ನ ಕೈಯಲ್ಲೇ ಇವೆ. ಇವನ್ನು ಇಲ್ಲೇ ಪರಿಶೀಲಿಸಿ" ಎಂದು ಬೋಯಾ ಮದಿಲೆಟ್ಟಿ ಪರಿಪರಿಯಾಗಿ ಬೇಡಿಕೊಂಡರೂ ಆ ಅಧಿಕಾರಿ ಕಿವಿಗೊಡಲಿಲ್ಲ.
"ಅನಂತರ ಆ ರೆವಿನ್ಯೂ ಇನ್ಸ್ ಪೆಕ್ಟರ್ ನನ್ನನ್ನು ಕರೆಸಿಕೊಂಡು ಲಂಚ ಕೇಳಿದ. "ನಿನಗೆ ಅನುಕೂಲವಾಗುವಂತೆ ನಾನು ವರದಿ ಬರೆಯಬೇಕಾದರೆ ೨,೦೦೦ ರೂಪಾಯಿ ಕೊಡು" ಎಂದು ಬಾಯಿಬಿಟ್ಟು ಕೇಳಿದ" ಎನ್ನುತ್ತಾರೆ ಮದಿಲೆಟ್ಟಿ ಜಿಗುಪ್ಸೆಯಿಂದ. ಆದರೆ ಮದಿಲೆಟ್ಟಿಗೆ ಅಷ್ಟು ಹಣ ಕೊಡಲು ಸಾಧ್ಯವಾಗಲಿಲ್ಲ. ಆಗೊಂದು ದಿನ, ಮದಿಲೆಟ್ಟಿ ಗ್ರಾಮದಲ್ಲಿ ಇಲ್ಲದ ಸಮಯದಲ್ಲಿ, ಆ ರೆವಿನ್ಯೂ ಇನ್ಸ್ ಪೆಕ್ಟರ್ ಮದಿಲೆಟ್ಟಿಯ ಮನೆಗೆ ಭೇಟಿ ನೀಡಿದ.
"ಆ ಭೇಟಿಯೇ ನನ್ನನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿತು. ಅದು ಊರಿನಲ್ಲೆಲ್ಲ ಸುದ್ದಿಯಾಯಿತು. ನನಗೆ ಅಲ್ಪಸ್ವಲ್ಪ ಸಾಲ ಕೊಡಲು ತಯಾರಿದ್ದವರೂ ಹಿಂದೇಟು ಹಾಕಿದರು" ಎಂದು ಹಲುಬುತ್ತಾರೆ ಮದಿಲೆಟ್ಟಿ. ಇದೆಲ್ಲದರಿಂದಾಗಿ ಅವರು ಕಂಗಾಲಾದರು. ೧೧ ಆಗಸ್ಟ್ ೨೦೦೫ರಂದು ಪುನಃ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ.
"ಆಗ ನನಗೆ ಉಳಿದದ್ದು ಒಂದೇ ದಾರಿ. ಅದು ಆತ್ಮಹತ್ಯೆ" ಎಂದು ಕಂಪಿಸುವ ಧ್ವನಿಯಲ್ಲಿ ಹೇಳುತ್ತಾರೆ ಮದಿಲೆಟ್ಟಿ. ಸಾಯುವ ಮುನ್ನ ರಕ್ತದಾನ ಮಾಡಲು ನಿರ್ಧರಿಸಿದರು, "ನಾನಂತೂ ಸಾಯುತ್ತೇನೆ. ನನ್ನಿಂದಾಗಿ ಯಾರದಾದರೂ ಜೀವ ಉಳಿಯಲಿ" ಎಂಬ ಭಾವದಿಂದ. ಆ ದಿನ ರೆಡ್ ಕ್ರಾಸ್ ಕೇಂದ್ರಕ್ಕೆ ಹೋಗಿ ರಕ್ತದಾನ ಮಾಡಿದರು.
ಅನಂತರ ನೇರವಾಗಿ ಜಿಲ್ಲಾಧಿಕಾರಿಯ ಕಚೇರಿಗೆ ತೆರಳಿದ ಮದಿಲೆಟ್ಟಿ, ತನ್ನ ಸಂಕಷ್ಟ ಹೇಳಿಕೊಳ್ಳಲು ಗಂಟೆಗಟ್ಟಲೆ ಕಾದರು. ಕೊನೆಗೆ ತೀರಾ ಹತಾಶರಾಗಿ, ಅದೇ ದಿನ ಖರೀದಿಸಿದ್ದ ಕೀಟನಾಶಕವನ್ನು ಅಲ್ಲೇ ನುಂಗಿದರು. ನೋವಿನಿಂದ ವಿಲವಿಲನೆ ಒದ್ದಾಡುತ್ತ ದೊಪ್ಪನೆ ನೆಲಕ್ಕೆ ಬಿದ್ದರು. ಇದನ್ನು ಕಂಡ ಅಟೆಂಡರ್ ಗಾಬರಿಯಾಗಿ ಕಚೇರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ. ಕೂಡಲೇ ಮದಿಲೆಟ್ಟಿಯನ್ನು ಕಾರಿನಲ್ಲಿ ಒಯ್ಯಲಾಯಿತು - ೧೦೦ ಕಿಮೀ ದೂರದ ಹೈದರಾಬಾದಿನ ನಿಜಾಮ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸಸ್‍ಗೆ. ಅಲ್ಲಿಯ ವರೆಗೆ ಮದಿಲೆಟ್ಟಿಯ ಮುಖ ನೋಡಲಿಕ್ಕೂ ಯಾರೊಬ್ಬ ಅಧಿಕಾರಿ ಸಿದ್ಧನಿರಲಿಲ್ಲ. ಈಗ ವಿಷ ಸೇವಿಸಿ ಯಾತನೆಯಿಂದ ತುಳ್ಳಾಡುತ್ತಿದ್ದ ಮದಿಲೆಟ್ಟಿಯ ಜೊತೆಗೊಬ್ಬ ಅಧಿಕಾರಿ!
"ಹೈದರಾಬಾದಿನ ಆಸ್ಪತ್ರೆಯಲ್ಲಿ ಇವನಿಗೆ ಎರಡು ವಾರ ಚಿಕಿತ್ಸೆ ನೀಡಬೇಕಾಯಿತು; ಹತ್ತು ಸಾವಿರ ರೂಪಾಯಿ ಖರ್ಚಾಯಿತು" ಎನ್ನುತ್ತಾರೆ ಮದಿಲೆಟ್ಟಿಯ ತಂದೆ ಈಶ್ವರಣ್ಣ. ೨೩ ಆಗಸ್ಟ್ ೨೦೦೫ರಂದು ಮದಿಲೆಟ್ಟಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆ ತರಲಾಯಿತು.
ವಿಷ ಸೇವನೆಯಿಂದ ಕಂಗೆಟ್ಟಿದ್ದ ಮದಿಲೆಟ್ಟಿ ಚೇತರಿಸಿಕೊಳ್ಳುತ್ತಾ ಇರುವಾಗ ಪೊಲೀಸರ ಆಗಮನ. "ಆತ್ಮಹತ್ಯೆಯ ಪ್ರಯತ್ನ" ಆರೋಪ ಹೊರಿಸಿ ಮದಿಲೆಟ್ಟಿಯ ಬಂಧನ. ಒಂದು ರಾತ್ರಿ ಅವರನ್ನು ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿಟ್ಟು, ಮರುದಿನ ಕೋರ್ಟಿನಲ್ಲಿ ನ್ಯಾಯಾಧೀಶರೆದುರು ಹಾಜರು ಪಡಿಸಲಾಯಿತು. ಅನಂತರ, ೧೫ ದಿನಗಳ ಜೈಲುವಾಸ. ಜಾಮೀನು ಪಡೆಯಲು ಹಣ ಇಲ್ಲದ್ದರಿಂದಾಗಿ ಇನ್ನೂ ಹಲವಾರು ದಿನ ಮದಿಲೆಟ್ಟಿ ಜೈಲಿನಲ್ಲಿ ಇರಬೇಕಾಗುತ್ತಿತ್ತು. "ಇದನ್ನೆಲ್ಲ ನೋಡುತ್ತ ನಮಗೆ ಸುಮ್ಮನಿರಲಾಗಲಿಲ್ಲ. ಹಳ್ಳಿಗರಿಂದ ಹಣ ಸಂಗ್ರಹಿಸಿ ಅವನನ್ನು ಜಾಮೀನಿನಲ್ಲಿ ಬಿಡಿಸಿ ತಂದೆವು" ಎನ್ನುತ್ತಾರೆ ಮದಿಲೆಟ್ಟಿಯ ನೆರೆಮನೆಯ ರೈತ.
ಬೋಯಾ ಮದಲೆಟ್ಟಿಯ ಸಂಕಟಗಳು ಅಲ್ಲಿಗೆ ಮುಗಿಯಲಿಲ್ಲ. ಅನಂತರ ಅನೇಕ ಬಾರಿ ಕೋರ್ಟಿಗೆ ಹಾಜರಾಗ ಬೇಕಾಯಿತು. ಪ್ರತೀ ಬಾರಿ ದಾವೆಯನ್ನು ಮುಂದೂಡಲಾಗುತ್ತಿತ್ತು. ಇಷ್ಟೆಲ್ಲ ಆದ ನಂತರವೂ ಜಿಲ್ಲಾಧಿಕಾರಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಲು ಮದಿಲೆಟ್ಟಿಗೆ ಸಾಧ್ಯವಾಗಲಿಲ್ಲ. ಅದೇನಿದ್ದರೂ, ಬ್ಯಾಂಕಿನಿಂದ ರೂಪಾಯಿ ೨೦,೦೦೦ ಸಾಲ ಶೇಕಡಾ ೮ರ ಬಡ್ಡಿಯಲ್ಲಿ ಮಂಜೂರಾಯಿತು. ಇದು ಮುಂಚೆಯೇ ಸಿಕ್ಕಿದ್ದರೆ .....
ಹಳ್ಳಿಗರು ಮದಿಲೆಟ್ಟಿಯ ಪ್ರಕರಣದಿಂದ ದೊಡ್ಡ ಪಾಠ ಕಲಿತಿದ್ದಾರೆ..... ಭಾರತ ಸ್ವಾತಂತ್ರ್ಯ ಗಳಿಸಿ ೬೬ ವರುಷಗಳಾಗಿರುವ ಈ ಸಂದರ್ಭದಲ್ಲಿ ನಮಗೆದುರಾಗುವ ದೊಡ್ಡ ಪ್ರಶ್ನೆ: ಈ ಪುಣ್ಯಭೂಮಿಯಲ್ಲಿ ಇಂತಹ ಅಸಹಾಯಕರಿಗೆ ಮುಂದೆ ಎಂತಹ ದಿನಗಳು ಕಾದಿವೆಯೋ?
Comments
ಉ: ಸಹಾಯವಾಣಿಗೆ ಮೊರೆ - ಜೈಲಿಗೆ ದಾರಿ