ನಮ್ಮಲ್ಲಿನ ಸ್ಥಳ ಪುರಾಣಗಳು(Mythes) -3

ನಮ್ಮಲ್ಲಿನ ಸ್ಥಳ ಪುರಾಣಗಳು(Mythes) -3

ಕಾಂಗ್ರಾ(Kangraa)

 

    ಉತ್ತರ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿನ ವಜ್ರೇಶ್ವರಿ ದೇವಾಲಯವು ಬಹು ಪುರಾತನ ಹಾಗೂ ಪುರಾಣ ಪ್ರಸಿದ್ದವಾದುದು. ಶಿವನ ಪತ್ನಿಯಾದ ಸತಿದೇವಿಯು ತಾನು ಸ್ವತಃ ಆತ್ಮಾಹುತಿ ಮಾಡಿಕೊಂಡಂತಹಾ ಸಮಯದಲ್ಲಿ ಆ ದೇಹವನ್ನು ಹೊತ ಶಿವನು ಮೂಲೋಕವನ್ನು ಸುತ್ತುತಿರಲು ಲೋಕ ಕಲ್ಯಾಣಾರ್ಥ ಮಹವಿಷ್ಣುವು ಸತಿಯ ದೇಹವನ್ನು ತುಂಡರಿಸುತ್ತಾನೆ. ಆ ದೇಹವು ಒಟ್ಟು ಐವತ್ತೆರಡು ತುಂಡುಗಳಾಗಿ ವಿವಿಧೆಡೇಗಳಲ್ಲಿ ಬೀಳುತ್ತದೆ. ಅಂತಹಾ ಕ್ಷೇತ್ರಗಳೆಲ್ಲ ಮುಂದೆ ಶಕ್ಥಿಪೀಠಗಳೆನ್ನಿಸಿಕೊಳ್ಳುತ್ತವೆ. ಕಾಂಗ್ರಾದ ಈ ಪ್ರದೇಶದಲ್ಲಿ ದೇವಿಯ ಎಡಭಾಗದ ಸ್ತನ ಬಿದ್ದಿರುತ್ತದೆಂದು ನಂಬಲಾಗುತ್ತದೆ. ಮುಂದೆ ಮಹಾಭಾರತ ಕಾಲದಲ್ಲಿ ಪಾಂಡವರು ಇಲ್ಲಿನ ದೇವಿಗೆ ದೇವಾಲಯವನ್ನು ನಿರ್ಮಾಣ ಮಾಡಿದರೆಂದು ಹೇಳುತ್ತಾರೆ. ಭಾರತದಲ್ಲಿರುವ ಮಹಾನ್ ಯಾತ್ರಾಸ್ಥಳಗಳಲ್ಲಿ ಒಂದಾದ ವಜ್ರೇಶ್ವರಿ ದೇವಾಲಯಕ್ಕೆ ದಿನನಿತ್ಯವೂ ಸಾಕಷ್ಟು ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

   

    ಬಹಳ ಕಾಲದ ಹಿಂದೆ ಕಾಳಿಕಾಲ ಎನ್ನುವ ರಾಕ್ಷಸ ರಾಜನೋರ್ವ ವಡವಾಲಿ ಎನ್ನುವ ಪ್ರದೇಶ(ಈಗಿನ ಕಾಂಗ್ರಾ)ದಲ್ಲಿ ವಾಸಿಸುವ ಋಷಿಗಳಿಗೂ, ಜನಗಳಿಗೂ ಬಹಳ ತೊಂದರೆ ಕೊಡಲಾರಂಭಿಸಿದ. ಅದಾಗ ಋಷಿಗಳೆಲ್ಲಾ ಸೇರಿ ವಸಿಷ್ಠರ ನಾಯಕತ್ವದಲ್ಲಿ ಚಂಡಿ ಯಜ್ಞವನ್ನು ನಡೆಸಲು ಮುಂದಾದರು. ಅಂಥಹಾ ಸಮಯದಲ್ಲಿ ಯಜ್ಞದ ಆಹುತಿಯನು ದೇವತೆಗಳ ರಾಜನಾದ ಇಂದ್ರನಿಗೆ ಕೊಡುವದನ್ನು ಮರೆತ ಕಾರಣದಿಂದ ಕೋಪಗೊಂಡಂತಹಾ ಇಂದ್ರನು ತನ್ನಲ್ಲಿನ ಮಹಾ ಶಕ್ತಿಶಾಲಿ ಆಯುಧವಾದ ವಜ್ರಾಯುಧವನ್ನು ಋಷಿಗಳ ಮೇಲೆ ಪ್ರಯೋಗಿಸಿಅಲು ಹೊರಟನು. ಇದನ್ನು ಕಂಡು ಭಯಗೊಂಡ ಋಷಿಗಳು ಮತ್ತೆ ಚಂಡಿಕಾಂಬೆಯ ಮೊರೆಹೊಕ್ಕರು. ಆಗ ದೇವಿಯು ಸರ್ವಶಕ್ತಿಸ್ವರೂಪಿಣಿಯಾಗಿ ಕಾಣಿಸಿಕೊಂಡು ಆ ವಜ್ರಾಯುಧದ ಆಘಾತದಿಂದ ಋಷಿಗಳನ್ನು ಪಾರುಮಾಡಿದಳಲ್ಲದೆ ರಾಕ್ಷಸ ರಾಜ ಕಾಳಿಕಾಲನನ್ನು ವಧಿಸಿದಳು. ಈ ಸಂದರ್ಭದಲಿ ಋಷಿಗಳೂ ದೇವಿಯು ಇಲ್ಲೇ ನೆಲೆಸುವಂತೆ ಕೇಳಿಕೊಂಡಾಗ ದೇವಿ ಸಂತೋಷದಿಂದ ಒಪ್ಪಿ ವಜ್ರೇಶ್ವರಿ ಎನ್ನುವ ಹೆಸರಿನೊಂದಿಗೆ ನೆಲೆನಿಂತಳು.

    ಇನ್ನೊಂದು ಕಥೆಯಂತೆ ಇಂದ್ರಾದಿ ದೇವತೆಗಳು ತಮ್ಮನ್ನು ಕಾಳಿಕಾಲನಿಂದ ಪಾರು ಮಾಡುವಂತೆ ಪಾರ್ವತಿ ದೇವಿಯ ಮೊರೆಹೊಕ್ಕರು. ಆಗ ಪಾರ್ವತಿಯು “ನೀವು ಯುದ್ಧವನ್ನು ಆರಂಭಿಸಿ, ನಾನು ಸೂಕ್ತ ಸಮಯಕ್ಕೆ ನಿಮ್ಮ ಸಹಾಯಕ್ಕೆ ಬರುತ್ತೇನೆಂದು ಭರವಸೆಯನ್ನು ನೀಡಿದಳು. ಹಾಗೆ ಯುದ್ಧವನ್ನಾರಂಭಿಸಿದ ದೇವತೆಗಳಲ್ಲಿದ್ದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಾಳಿಕಾಲನು ತುಂಡರಿಸಿದನು. ಅಂತಿಮವಾಗಿ ಇಂದ್ರನು ತನ್ನಲ್ಲಿನ ವಜ್ರಾಯುಧವನ್ನು ಆತನ ಮೇಲೆ ಪ್ರಯೋಗಿಸಲು ದೇವಿಯು ಶ್ಕ್ತಿಸ್ವರೂಪಿಣಿಯಾಗಿ ಅದರಲ್ಲಿ ಅವಿತು ಆಕ್ಷಸನನ್ನು ಸಂಹಾರಗೈದಳು. ಅದಾಗ ತಾಯಿಯನ್ನು ವಜ್ರೇಶ್ವರಿಯೆನ್ನುವುದಾಗಿ ಕರೆದು ಸ್ತುತಿಸಿದ ದೇವಾನುದೇವತೆಗಳು ಅವಳಿಗೆ ದೇವಾಲಯವನ್ನು ನಿರ್ಮಿಸಿಕೊಟ್ಟರು. 

Rating
No votes yet