ಅಷ್ಟಲಕ್ಷ್ಮಿಯರ ವರ

ಅಷ್ಟಲಕ್ಷ್ಮಿಯರ ವರ

ಅಷ್ಟ ಲಕ್ಷ್ಮಿಯರ ಕರುಣೆ ಕೃಪೆ ಸದಾ ತಮ್ಮ ಮೇಲಿರಲೆಂದು ಪೂಜಿಸುವ ಸಂಪ್ರದಾಯಸ್ತ ಮಹಿಳಾಗಣ ನಮ್ಮಲ್ಲಿ ಸಾಮಾನ್ಯ. ಈಗಿನ ನಾಗರೀಕ ವೇಗ ಜೀವನ ಜಂಜಡದಲ್ಲಿ ಹೊಸ ಪೀಳಿಗೆಗಳು ಅದನ್ನು ಹಾಗೆ ಉಳಿಸಿ, ಬೆಳೆಸಿ ಮುಂದೊಯ್ಯುವ ಕಾರ್ಯ ಮಾಡುವರೊ ಇಲ್ಲವೊ ಹೇಳಲಾಗದಿದ್ದರೂ, ಆ ಸಂಸ್ಕಾರವನ್ನು ಮಕ್ಕಳಿಗೆ ದಾಟಿಸಬಯಸುವ ಹಿರಿಯರ ಸಂಖ್ಯೆ ಕಡಿಮೆಯೇನಿಲ್ಲ. ಹಬ್ಬ ಹರಿದಿನಗಳು ಬಂದಾಗ ಈ ಸಂಪ್ರದಾಯಗಳ ಗರಿಬಿಚ್ಚಿ ಅನಾವರಣಗೊಂಡು, ಕಿರಿಯ ಮನಗಳಲ್ಲಿ ಅದೇ ರೀತಿಯ ಭಾವನೆಗಳನ್ನು ಹುಟ್ಟುಹಾಕಿ ಸಂಪ್ರದಾಯ, ಸಂಸ್ಕಾರಗಳ ಮೂಸೆಯಲ್ಲಿ ಹೂರಣ ತುಂಬುವ ಕಾರ್ಯ ಮಾಡತೊಡಗುತ್ತವೆ. ಅದರಿಂದಾಗಿ ಈ ಹಬ್ಬಗಳು ಮುಖ್ಯವಾಗುತ್ತವೆ.

ಈ ದಿನದ ವರ ಮಹಾಲಕ್ಷ್ಮಿ ಪೂಜೆಯ ದಿನ, ಲಕ್ಷ್ಮಿಯ ಎಂಟು ರೂಪಗಳನ್ನು ವರ್ಣಿಸುವ ಈ ಪುಟ್ಟ ಕವನ ಆ ಭಕ್ತಿ ಭಾವಕೆ ಜತೆಗೊಡುವ ಒಂದು ಪುಟ್ಟ ಕಾಣಿಕೆ - ಮೆಚ್ಚುಗೆಯಾದೀತೆಂದು ಆಶಿಸುತ್ತ - ನಾಗೇಶ ಮೈಸೂರು

ಅಷ್ಟಲಕ್ಷ್ಮಿಯರ ವರ
________________

ತಾಯಿ ಅಷ್ಟಲಕ್ಷ್ಮಿ 
ಕಷ್ಟ ಮಾಡಿಸೆ ಕಮ್ಮಿ 
ನಿಜ ಭಕ್ತಿ ಭಾವ ಚಿಮ್ಮಿ 
ಹಾಡುವಂತೆ ಮನ ಹೊಮ್ಮಿ!

ಆದಿಲಕ್ಷ್ಮಿ ಮೊದಲು
ಮಹಾಲಕ್ಷ್ಮಿಯೆ ಕೇಳು
ಭೃಗು ಋಷಿಗೇ ಮಗಳು
ಪ್ರಾಚೀನ ರೂಪದಲೆ ತಾಳು!

ಕಾಂಚಣ ಬಂಗಾರ
ವನಿತೆಯರ ಶೃಂಗಾರ
ತೊಟ್ಟೊಡವೆ ಕಾಸಿನಸರ
ಧನಲಕ್ಷ್ಮಿಯಾಗಿ ಅವತಾರ!

ಕಾಳುಕಡ್ಡಿ ಅಕ್ಷಯ
ಸಂಪತ್ತಾಗಿ ಬೇಸಾಯ
ನರಳದಂತೆ ವ್ಯವಸಾಯ
ಧಾನ್ಯಲಕ್ಷ್ಮಿ ಕೃಪೆ ತೋರೆಯ!

ಗಾಂಭಿರ್ಯ ಶೌರ್ಯ
ಕಡಲ ಪಾಲ ಐಶ್ವರ್ಯ
ಇಂದ್ರನಿಗ್ಹಿಂದಿರುಗೌದಾರ್ಯ
ಗಜಲಕ್ಷ್ಮಿ ತಾಯಿ ನಿನ್ನ ಕಾರ್ಯ!

ಇಹಪರದ ಮೋಕ್ಷ
ಗಳಿಸುವ ಜೀವನ ಲಕ್ಷ್ಯ
ಮಕ್ಕಳನೆ ಕರುಣಿಸಿದ ಭಿಕ್ಷ
ಸಂತಾನಲಕ್ಷ್ಮಿ ತೀರಿಸೆ ಅಭೀಷ್ಟ!

ಅಂಜಿಕೆಗಳೆ ದೂರ
ಬಾಳ ಕಷ್ಟಗಳ ಭಾರ
ತುಂಬಿಸೆ ಸ್ಪೂರ್ತಿಯಾಗರ  
ಧೈರ್ಯಲಕ್ಷ್ಮಿ ಕರುಣಾಸಾಗರ!

ಕದನದೆ ಸದನದೆ
ಹೋರಾಟವೆ ನಿಲದೆ
ದಯಪಾಲಿಸುತೆ ಜಯದೆ
ವಿಜಯಲಕ್ಷ್ಮಿಯಾಗಿ ಹರಸಿದೆ!

ಜ್ಞಾನ ಅಭಿದಾನ
ಕಲೆಯಾಗಿ ವಿಜ್ಞಾನ
ಕೊಟ್ಟು ಮನದಟ್ಟು ದಿನ
ವಿದ್ಯಾಲಕ್ಷ್ಮಿಯಾಗಿ ಆಗಮನ!

ರಾಜ್ಯ ಐಶ್ವರ್ಯ
ಅದೃಷ್ಟದ ಸೌಭಾಗ್ಯ
ವರಗಳ ಪಡೆವ ಭಾಗ್ಯ
ಅಷ್ಟಲಕ್ಷ್ಮಿ ಕೃಪೆಯಿರೆ ಲಭ್ಯ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

 

Comments

Submitted by makara Sat, 08/17/2013 - 08:59

ಸಿಂಗಾಪುರದಲ್ಲಿದ್ದುಕೊಂಡೂ ನಮ್ಮ ಆಚಾರ-ವಿಚಾರಗಳನ್ನು ಪರಿಪಾಲಿಸಿಕೊಂಡು ಬರುತ್ತಿರುವುದಕ್ಕೆ ಸಂತೋಷವೆನಿಸುತ್ತಿದೆ, ನಾಗೇಶರೆ. ಅದರೊಂದಿಗೆ ಸಮಯೋಚಿತವಾಗಿ ಬರಹ/ಲೇಖನಗಳನ್ನು ಸೇರಿಸುತ್ತಿರುವುದು ಸಹ ಸ್ತುತ್ಯಾರ್ಹ ಕಾರ್ಯವಾಗಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by nageshamysore Mon, 08/19/2013 - 02:35

In reply to by makara

ಶ್ರೀಧರರೆ, ಇಲ್ಲಿ ನಮ್ಮೆಲ್ಲಾ ಹಬ್ಬದ ಆಚರಣೆಗೆ ಸೂಕ್ತ ಸಲಕರಣೆ, ವಾತಾವರಣವಿರುವುದಿಲ್ಲ - ಕೆಲ ದೊಡ್ಡವನ್ನು ಹೊರತುಪಡಿಸಿದರೆ. ಹೀಗಾಗಿ, ನನ್ನ ಆಚರಣೆ / ಪೂಜೆಬ್ಕವಿತೆಯ ಮುಖಾಂತರ 'ಸಾಥ್' ಕೊಡುವುದೆ ಆಗಿದೆ. ಒಟ್ಟಾರೆ ಹಬ್ಬದ ಆಚಾರ - ವಿಚಾರಗಳಿಂದ ಪೂರ್ತಿ ದೂರಾಅದಂತೆ ಅನಿಸುವುದಿಲ್ಲ ನೋಡಿ :-)   ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು