ನ್ಯಾನೊ ಕತೆಗಳು( ಭಾಗ ಐದು)

ನ್ಯಾನೊ ಕತೆಗಳು( ಭಾಗ ಐದು)

ತಾನು ಪ್ರೀತಿಸಿದ ಹುಡುಗ ಬೇರೆ ಜಾತಿಯವನಾದರೂ ಒಳ್ಳೆಯವನೆ೦ದು ತನ್ನ ತ೦ದೆಯನ್ನು ಹುಡುಗಿ ಒಪ್ಪಿಸಿದಳು.ಹುಡುಗನ ಜಾತಕ ನೋಡಿದ ಜ್ಯೋತಿಷಿಗಳು,ಮದುವೆಯಾದ ಒ೦ದು ವರ್ಷದಲ್ಲಿ ಹುಡುಗಿಯ ಸಾವು ಎ೦ಬ ದೋಷ ಹುಡುಗನ ಜಾತಕದಲ್ಲಿದೆ ಎ೦ದು ತಿಳಿಸಿದರು.ತ೦ದೆ ಜಾತಕ ದೋಷವನ್ನಿಟ್ಟು ಹುಡುಗಿಯನ್ನು ಬೇರೆ ಮದುವೆಗೊಪ್ಪಿಸಿದರು.ತ೦ದೆ ನೋಡಿದ ಹುಡುಗನ ಜಾತಕದಲ್ಲೂ ಅದೇ ದೋಷ ಕ೦ಡು ಬ೦ದಿತು.ಹುಡುಗನಿಗೆ ಬಾಳೆ ಗಿಡದೊಟ್ಟಿಗೆ ಮದುವೆ ಮಾಡಿ ,ಗಿಡವನ್ನು ಕತ್ತಿಯಿ೦ದ ಕತ್ತರಿಸಿ ಎಸೆಯುವ ಶಾಸ್ತ್ರ ಜರುಗಿಸಿ ಹುಡುಗಿಯ ಮದುವೆಯನ್ನು ತ೦ದೆ ಸಾ೦ಗೋಪಾ೦ಗವಾಗಿ ಜರುಗಿಸಿದರು.ಹುಡುಗಿಯನ್ನು ಪ್ರೀತಿಸಿದ ತಪ್ಪಿಗೆ ಹುಡುಗ ನೇಣು ಹಾಕಿಕೊ೦ಡ.

*********************************************************************************************************

'ಮಮ್ಮಿ ಒಂಚೂರು ಚೆನ್ನಾಗಿಲ್ಲ ಈ ಲಾಲಿ ಪಾಪ್,ತು೦ಬಾ ಹುಳಿ'ಎಂದು ಮುಖ ಕಿವುಚಿದ ಕಾರಿನಲ್ಲಿ ಕುಳಿತು ಲಾಲಿ ಪಾಪ್ ಚೀಪುತ್ತಿದ್ದ ಪುಟ್ಟ ಬಾಲಕ.'ಹೌದಾ ಪುಟ್ಟಾ ಟೆನ್ ರೂಪೀಸ್ದು ಇನ್ನ್ಹೇಗಿರುತ್ತೆ,ಎಸೆದು ಬಿಡು,ಮುಂದೆ ಒಳ್ಳೆದು ಕೊಡಿಸ್ತೀನಿ ನಿಂಗೆ'ಎಂದಳು ಅವನಮ್ಮ ಅವನ ತಲೆ ನೇವರಿಸುತ್ತಾ.ಚಲಿಸುತ್ತಿದ್ದ ಕಾರಿನಿಂದ ರಪ್ಪನೇ ಅದನ್ನು ಹೊರಗೆಸೆದ ಬಾಲಕ.ಅಲ್ಲೇ ಚಿಂದಿ ಆಯುತ್ತಿದ್ದ ಹುಡುಗರು ಮಣ್ಣಾಗಿದ್ದ ಲಾಲಿಪಾಪನ್ನು ತಮ್ಮ ಕೆಟ್ಟಾಕೊಳಕು ಅಂಗಿಯಿಂದ ಒರೆಸಿಕೊಂಡು ಒಬ್ಬರಾದಮೇಲೊಬ್ಬರು ನೆಕ್ಕತೊಡಗಿದರು

*********************************************************************************************************

'ಈ ಪ್ರಪಂಚದಲ್ಲಿ ದೇವರು ನಿಮಗೆ ಯಾವ ರೂಪದಲ್ಲಾದರೂ ಕಾಣಿಸಿಕೊಳ್ಳಬಹುದು.ಸಾಧು ಸನ್ಯಾಸಿಗಳು,ದೈವ ಭಕ್ತರಿಗೆ ಯಾವ ಭೂತ ಪ್ರೇತಗಳೂ ತೊಂದರೆ ಕೊಡಲಾರವು'ಎಂದು ಹೇಳುತ್ತಾ ತಮ್ಮ ಪ್ರವಚನ ಮುಗಿಸಿದರು ಸಾಧು ಮಹಾರಾಜರು.ಕೇಳುತ್ತ ಕುಳಿತಿದ್ದ ಜನರೆಲ್ಲರೂ ಸಾಧುವಿಗೆ ನಮಸ್ಕರಿಸಿ ತಮ್ಮತಮ್ಮ ಮನೆಗೆ ತೆರಳಿದರು.ಮಧ್ಯರಾತ್ರಿಯಾದರೂ ಮನೆಗೆ ತೆರಳದೇ ತನ್ನನ್ನೇ ನೋಡುತ್ತ ನಿಂತಿದ್ದ ಆ ವ್ಯಕ್ತಿಯನ್ನು ಕಂಡು ಆಶ್ಚರ್ಯಗೊಂಡ ಸಾಧು 'ಯಾರಪ್ಪ ನೀನು' ಎಂದು ಕೇಳಿದ.ಸಾಧುವನ್ನುನೋಡಿ ಮುಗುಳ್ನಕ್ಕ ಆ ವ್ಯಕ್ತಿ,'ನಾನು...ದೇವರು'ಎಂದು ಹೇಳಿ ಮಾಯವಾಗಿಬಿಟ್ಟ.'ಅದನ್ನು ಕಂಡ ಸಾಧು,'ಅಯ್ಯೋ..!! ದೆವ್ವ,ದೆವ್ವ...ಕಾಪಾಡಿ..'ಎನ್ನುತ್ತ ಗಾಭರಿಯಾಗಿ ಅಲ್ಲಿಂದ ಓಡತೊಡಗಿದ.