೯೬. ಲಲಿತಾ ಸಹಸ್ರನಾಮ ೩೫೫ರಿಂದ ೩೬೧ನೇ ನಾಮಗಳ ವಿವರಣೆ

೯೬. ಲಲಿತಾ ಸಹಸ್ರನಾಮ ೩೫೫ರಿಂದ ೩೬೧ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೫೫ - ೩೬೧

Saṃhṛtāśeṣa-pāṣaṇḍā संहृताशेष-पाषण्डा (355)

೩೫೫. ಸಂಹೃತಾಶೇಷ-ಪಾಶಂಡಾ

         ದೇವಿಯು ಪಾಶಂಡಿಗಳ ಅಥವಾ ಧರ್ಮದಿಂದ ವಿಮುಖರಾದವರನ್ನು ನಾಶಪಡಿಸುವುವಳೆಂದು ಈ ನಾಮದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಪಾಶಂಡಿಗಳೆಂದರೆ ವೇದಗಳಲ್ಲಿ ವಿಧಿಸಲ್ಪಟ್ಟ ತತ್ವಗಳನ್ನು ಯಾರು ಅನುಸರಿಸುವುದಿಲ್ಲವೋ ಅವರು. ಹದಿನಾಲ್ಕು ಸ್ಥಳಗಳನ್ನು (ಇವುಗಳಲ್ಲಿ ನಾಲ್ಕು ವೇದಗಳು ಹಾಗೂ ಅದರ ಅಂಗಗಳು ಒಳಗೊಂಡಿವೆ) ಧರ್ಮದ ಮರ್ಮ ಸ್ಥಾನಗಳೆಂದು ಹೇಳಲ್ಪಟ್ಟಿವೆ. ಯಾರು ಈ ಧರ್ಮ- ನಿಯಮಗಳ ಎಲ್ಲೆಯನ್ನು ಮೀರುತ್ತಾರೆಯೋ ಅವರನ್ನು ಪಾಶಂಡಿಗಳೆಂದು ಕರೆಯಲಾಗಿದೆ. ದೇವಿಯು, ಧರ್ಮಕ್ಕೆ ವಿರುದ್ಧವಾಗಿ ಯಾರು ನಡೆದುಕೊಳ್ಳುತ್ತಾರೆಯೋ ಅವರನ್ನು ನಾಶಪಡಿಸುತ್ತಾಳೆ.

Sadācāra-pravartikā सदाचार-प्रवर्तिका (356)

೩೫೬. ಸದಾಚಾರ-ಪ್ರವರ್ತಿಕಾ

        ಆತ್ಮಕ್ಕೆ ಬ್ರಹ್ಮಸಾಕ್ಷಾತ್ಕಾರವನ್ನು ಹೊಂದಲು ಅಡಚಣೆಯಾಗಿರುವ ಜನ್ಮತಃ ಬಂದ ಅಜ್ಞಾನವನ್ನು ದೇವಿಯು ಹೋಗಲಾಡಿಸುತ್ತಾಳೆ. ಅಜ್ಞಾನಿಗಳಿಗೆ ಆಕೆಯು ಮಹತ್ತರವಾದ ಕಾರ್ಯಗಳನ್ನು ಮಾಡುವಂತೆ ಪ್ರೇರಣೆಯನ್ನುಂಟು ಮಾಡುತ್ತಾಳೆ ಎಂದು ಈ ನಾಮದಲ್ಲಿ ಹೇಳಲಾಗಿದೆ. ಒಬ್ಬರು ಮಾಡುವ ಒಳ್ಳೆಯ ಕೆಲಸಗಳನ್ನು ಸತ್ ಎನ್ನುವುದು ಸೂಚಿಸಿದರೆ, ಆಚಾರವೆನ್ನುವುದು ಅವರು ಮಾಡುವ ಪುಣ್ಯದ ಕಾರ್ಯಗಳನ್ನು ಕುರಿತು ಹೇಳುತ್ತದೆ. ಅವಳು ಅಜ್ಞಾನಿಗಳನ್ನು (ಅಜ್ಞಾನಿಗಳು ಎಂದರೆ ಬ್ರಹ್ಮದ ಕುರಿತಾಗಿ ತಿಳುವಳಿಕೆ ಇಲ್ಲದವರು ಅಥವಾ ಅಜ್ಞಾನಿಗಳೆಂದರೆ ಅದು ಆತ್ಮ ಮತ್ತು ಪರಮಾತ್ಮಗಳು ಬೇರೆ ಎನ್ನುವ ದ್ವಂದ್ವ ಭಾವನೆಯನ್ನು ಹೊಂದಿದವರೆಂದೂ ಇರಬಹುದು) ಧಾರ್ಮಿಕ ಅಥವಾ ಪುಣ್ಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತಾಳೆ. ಸತ್ಕಾರ್ಯಗಳ ಕುರಿತಾದ ವಿವರಣೆಗಳು ವೇದೋಪನಿಷತ್ತುಗಳಲ್ಲಿ ಅನಾವರಣಗೊಳಿಸಲ್ಪಟ್ಟಿವೆ. ಆ ವಿವರಣೆಗಳು (ತತ್ವಗಳು) ಧರ್ಮ/ಶಾಸ್ತ್ರ ಗ್ರಂಥಗಳಿಗೆ  ಮೂಲಾಧಾರವಾಗಿವೆ.

Tāpatrayāgni-santapta-samāhlādana-candrikā तापत्रयाग्नि-सन्तप्त-समाह्लादन-चन्द्रिका (357)

೩೫೭. ತಾಪತ್ರಯಾಗ್ನಿ-ಸಂತಪ್ತ-ಸಮಾಹ್ಲಾದನ-ಚಂದ್ರಿಕಾ

          ಪುರಾತನ ಶಾಸ್ತ್ರ ಗ್ರಂಥಗಳು ಮೂರು ವಿಧವಾದ ಬಾಧೆಗಳನ್ನು ಕುರಿತಾಗಿ ಹೇಳುತ್ತವೆ; ಶರೀರಕ್ಕೆ ಸಂಭಂದಿಸಿದ್ದು, ಮೂಲ ಧಾತುಗಳಿಗೆ (ಪಂಚಭೂತಗಳಿಗೆ) ಸಂಭಂದಿಸಿದ್ದು ಮತ್ತು ದೇವರುಗಳಿಗೆ ಸಂಭಂದಿಸಿದ್ದು. ಈ ಮೂರು ವಿಧವಾದ ಬಾಧೆಗಳನ್ನು ಬೆಂಕಿ ಅಥವಾ ಅಗ್ನಿಗಳೊಂದಿಗೆ ಹೋಲಿಸಲಾಗಿದೆ. ಈ ಮೂರು ವಿಧವಾದ ಬೆಂಕಿಗಳು ಯಾರು ಸಂಸಾರ ಬಂಧನದ ಕಷ್ಟಗಳನ್ನು ಅನುಭವಿಸುತ್ತಾರೆಯೋ ಅವರಿಗೆ ತೀವ್ರತರವಾದ ಹಾನಿಯನ್ನುಂಟು ಮಾಡುತ್ತವೆ. ದೇವಿಯು ತನ್ನ ಕೃಪೆಯಿಂದ, ಚಂದ್ರನ ಬೆಳಕು ತಂಪನ್ನೆರೆಯುವಂತೆ ಆ ಮೂರು ವಿಧವಾದ ತಾಪತ್ರಯಗಳಿಂದ ಬಾಧೆಗೊಳಗಾದವರಿಗೆ ಸಂತೋಷವನ್ನುಂಟು ಮಾಡುತ್ತಾಳೆ. ಈ ನಾಮದ ಒಟ್ಟಾರೆ ಅರ್ಥವೇನೆಂದರೆ ಮೂರು ವಿಧವಾದ ತಾಪಗಳಿಂದ (ಬಾಧೆಗಳಿಂದ) ಕಷ್ಟಕ್ಕೊಳಗಾದವರಿಗೆ ದೇವಿಯು ತನ್ನ ಕೃಪೆಯಿಂದ ಅವನ್ನು ನಾಶಮಾಡಿ ಸಂತೋಷವನ್ನುಂಟು ಮಾಡುತ್ತಾಳೆ ಎನ್ನುವುದಾಗಿದೆ.  

          ಮೂರು ವಿಧವಾದ ತಾಪಗಳೆಂದರೆ - ೧) ಆಧ್ಯಾತ್ಮಿಕ - ಇದು ಅಂತಃಕರಣದ ನಾಲ್ಕು ಅಂಶಗಳು, ಐದು ಕರ್ಮೇಂದ್ರಿಯಗಳು ಮತ್ತು ಐದು ಜ್ಞಾನೇಂದ್ರಿಯಗಳು; ೨) ಆಧಿಭೌತಿಕ - ಐದು ಮೂಲಭೂತ ತತ್ವಗಳು (ಪಂಚ ಮಹಾಭೂತಗಳು) ಮತ್ತು ತನ್ಮಾತ್ರಗಳು ೩) ಆಧಿದೈವತ - ಅತಿ ಮಾನವ ಶಕ್ತಿಗಳ ಪ್ರಭಾವ. ಈ ಮೂರು ವಿಧವಾದ ತಾಪಗಳನ್ನು ತಾಪತ್ರಯಗಳೆಂದು ಕರೆಯುತ್ತಾರೆ ಏಕೆಂದರೆ ಅವುಗಳು ಗ್ರಹಣೇಂದ್ರಿಯಗಳು ಒದಗಿಸುವ ಮಾಹಿತಿಯನ್ನಾಧರಿಸಿ ಕಾರ್ಯನಿರ್ವಹಿಸುತ್ತವೆ.

           ಬೃಹದಾರಣ್ಯಕ ಉಪನಿಷತ್ತು (೪. ೪. ೨೫) ಹೇಳುತ್ತದೆ, “ಆ ಮಹತ್ತರವಾದ ಆತ್ಮವು ವಿನಾಶ ಹೊಂದದ, ಶಾಶ್ವತವಾದ, ಸಾವಿಲ್ಲದ, ಭಯವಿಲ್ಲದ....."

Taruṇī तरुणी (358)

೩೫೮. ತರುಣೀ

          ದೇವಿಯು ನಿತ್ಯ ಯೌವನವತಿಯಾಗಿದ್ದಾಳೆ. ನಿತ್ಯ ಯೌವನವು ಯಾವುದೇ ವಿಧವಾದ ಬದಲಾವಣೆಗಳಿಲ್ಲದಾಗ ಮಾತ್ರ ಸಾಧ್ಯವಾಗುತ್ತದೆ; ಇದು ಬ್ರಹ್ಮದ ವಿಶಿಷ್ಠ ಲಕ್ಷಣವಾಗಿದೆ. ಬ್ರಹ್ಮವು ವಿನಾಶವಿಲ್ಲದ್ದು ಮತ್ತು ಸಾವಿಲ್ಲದ್ದು ಎಂದು ಬೃಹದಾರಣ್ಯಕ ಉಪನಿಷತ್ತು ಹೇಳಿದೆ. ಬ್ರಹ್ಮದ ನಿತ್ಯ ನಿರಂತರತೆಯನ್ನು ೧೩೬, ೨೯೨ ಮತ್ತು ೩೪೪ನೇ ನಾಮಗಳಲ್ಲಿ ಕೂಡ ಚರ್ಚಿಸಲಾಗಿದೆ.

           ವಿಶ್ವದಲ್ಲಿನ ಶಕ್ತಿಯನ್ನು ಹೆಚ್ಚಿಸಲಾಗದು ಅಥವಾ ಕಡಿಮೆಗೊಳಿಸಲಾಗದು ಅಂದರೆ ಶಕ್ತಿಯ ಪ್ರಮಾಣವು ಒಂದೇ ವಿಧವಾಗಿರುತ್ತದೆ ಮತ್ತು ತಾರುಣ್ಯದಲ್ಲಿ ಪೂರ್ಣ ಶಕ್ತಿಯನ್ನು ಒಬ್ಬನು ಹೊಂದಿರುತ್ತಾನೆ. ಅದನ್ನೇ ಈ ನಾಮದಲ್ಲಿ ಸೂಚ್ಯವಾಗಿ ತರುಣೀ ಎಂದು ಹೇಳಲಾಗಿದೆ.

Tāpasārādhyā तापसाराध्या (359)

೩೫೯. ತಾಪಸಾರಾಧ್ಯಾ

          ದೇವಿಯು ಋಷಿಗಳಿಂದ ಪೂಜಿಸಲ್ಪಡುತ್ತಾಳೆ. ಋಷಿಗಳು ಅತ್ಯಂತ ಪೂಜ್ಯರು ಏಕೆಂದರೆ ಅವರು ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆಯಲು ಎಲ್ಲಾ ವಿಧವಾದ ಸುಖ ಕೊಡುವ ಸಾಧನಗಳಿಂದ ದೂರವಿರುತ್ತಾರೆ. ಅವರು ಉಪದೇವರುಗಳನ್ನು ಪೂಜಿಸುವುದಿಲ್ಲ, ಏಕೆಂದರೆ ಅವರ ಏಕೈಕ ಉದ್ದೇಶವು ಅಂತಿಮ ಸತ್ಯವನ್ನು ಅರಿಯುವುದಾಗಿರುತ್ತದೆ. ಇಂತಹ ಋಷಿಗಳಿಂದ ಪೂಜಿಸಲ್ಪಡುವುದು ಆಕೆಯು ಪರಬ್ರಹ್ಮವೆನ್ನುವುದನ್ನು ದೃಢಪಡಿಸುತ್ತದೆ.

          ಇನ್ನೂ ಒಂದು ವಿಧವಾದ ವ್ಯಾಖ್ಯಾನವಿದೆ. ತಪ ಎಂದರೆ ಬಂಧನ ಮತ್ತದು ಎಲ್ಲಾ ವಿಧವಾದ ಕಷ್ಟಗಳಿಗೆ ಮೂಲವಾಗಿದೆ. ಸಾರಾಧ್ಯ ಎನ್ನುವುದನ್ನು ಬಿಡಿಸಿದರೆ, ಸಾರ (ಸಂಪೂರ್ಣ ತತ್ವ)+ ಆ (ದೀರ್ಘ) + ಧ್ಯಾ (ಧ್ಯಾನ) ಆಗುತ್ತದೆ. ಸಂಸಾರದಿಂದ ಉಂಟಾಗುವ ತಾಪತ್ರಯಗಳನ್ನು ದೇವಿಯನ್ನು ಧ್ಯಾನಿಸಿವುದರ ಮೂಲಕವಷ್ಟೇ ಹೋಗಲಾಡಿಸಿಕೊಳ್ಳಬಹುದು. ಅಥವಾ ಸಾರಯುತವಾದ ದೀರ್ಘ ಧ್ಯಾನದ ಮೂಲಕ ಬಂಧನವನ್ನು ಹೋಗಲಾಡಿಸಬಹುದು.

Tanumadhyā तनुमध्या (360)

೩೬೦. ತನುಮಧ್ಯಾ

          ದೇವಿಗೆ ಸಪೂರವಾದ (ತೆಳುವಾದ) ಸೊಂಟವಿದೆ. ಹೆಚ್ಚಿನ ವಿವರಗಳಿಗೆ ೮೫ನೇ ನಾಮವಳಿಯನ್ನೂ ನೋಡಿ. ತನುಮಧ್ಯಾ ಎನ್ನುವ ಛಂದಸ್ಸು ಸಹ ಇದೆ. ಛಂದಸ್ಸು ಎಂದರೆ ಒಂದು ಶ್ಲೋಕ ಅಥವಾ ಕಾವ್ಯ ರಚನೆಯಲ್ಲಿರುವ ಅಕ್ಷರಗಳ ಅನುಕ್ರಮಣಿಕೆಯನ್ನು ಹೇಳುತ್ತದೆ. ದೇವಿಯು ತನುಮಧ್ಯಾ ಛಂದಸ್ಸಿನ ರೂಪದಲ್ಲಿದ್ದಾಳೆ ಎಂದು ಹೇಳಲಾಗುತ್ತದೆ. ಕೃಷ್ಣನು ಭಗವದ್ಗೀತೆಯಲ್ಲಿ (ಅಧ್ಯಾಯ ೧೦.೩೫ರಲ್ಲಿ), "ಗಾಯತ್ರೀ ಛಂದಸಾಮಹಂ" ಅಂದರೆ ಛಂದಸ್ಸಿನಲ್ಲಿ ನಾನು ಗಾಯತ್ರೀ ಎಂದು ಹೇಳಿದ್ದಾನೆ.

Tamopah तमॊपहा (361)

೩೬೧. ತಮೋಪಹಾ

             ತಮಸ್ಸು ಎಂದರೆ ಅಜ್ಞಾನವಾಗಿದ್ದು ಅದರ ಮುಖ್ಯ ಅಂಶಗಳು ಮಾನಸಿಕ ಕತ್ತಲೆ, ಅವಿದ್ಯೆ, ಭ್ರಮೆ ಮತ್ತು ತಪ್ಪು ಕಲ್ಪನೆ. ತಮೋ ಗುಣವು ತ್ರಿಗುಣಗಳಲ್ಲಿ ಒಂದಾಗಿದೆ. ಅಜ್ಞಾನದಿಂದ ಕೂಡಿದ ವ್ಯಕ್ತಿಯು ತಮೋ ಗುಣವನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತದೆ.

         ಈಶೋಪನಿಷತ್ತಿನಲ್ಲಿ (ಶ್ಲೋಕ ೯) ಅಜ್ಞಾನದ ಕುರಿತಾದ ಸುಂದರವಾದ ವ್ಯಾಖ್ಯೆಯಿದೆ. "ಯಾರು ಪೂಜಾಚರಣೆಗಳನ್ನು ಯಾಂತ್ರಿಕವಾಗಿ ಮಾಡುತ್ತಾರೋ ಅವರು ಕತ್ತಲೆಯೊಳಗೆ ಸಾಗಿ ಕುರುಡರಂತಾಗುತ್ತಾರೆ. ಆದರೆ ಯಾರು ಕಾಟಾಚಾರಕ್ಕಾಗಿ ದೇವರನ್ನು ಪೂಜಿಸುತ್ತಾರೆಯೋ ಅವರು ಇನ್ನಷ್ಟು ಆಳವಾದ ಕತ್ತಲೆಯೊಳಗೆ ಸಾಗುತ್ತಾರೆ. ಐಹಿಕ ಸುಖಭೋಗಗಳಿಗಾಗಿ ಅಥವಾ ಸ್ವಾರ್ಥದಿಂದ ಕೂಡಿದ ಪೂಜೆಗಳು ಎಂದಿಗೂ ಫಲವನ್ನೀಯುವುದಿಲ್ಲ. ಅಂತಹ ಮನುಷ್ಯರು ಅಜ್ಞಾನಿಗಳೆನಿಸಿಕೊಳ್ಳುತ್ತಾರೆ. ದೇವಿಯು ಈ ವಿಧವಾದ ಅಜ್ಞಾನವನ್ನು ನಾಶಮಾಡುತ್ತಾಳೆಂದು ಹೇಳಲಾಗುತ್ತದೆ.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 355-361 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

 

 

Rating
No votes yet

Comments

Submitted by nageshamysore Mon, 08/19/2013 - 19:52

ಶ್ರೀಧರರೆ ೯೬. ಲಲಿತಾ ಸಹಸ್ರನಾಮ ೩೫೫ರಿಂದ ೩೬೧ನೇ ನಾಮಗಳ ವಿವರಣೆ ಕಾವ್ಯ ಸಾರ ತಮ್ಮ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೫೫ - ೩೬೧
_____________________________________

೩೫೫. ಸಂಹೃತಾಶೇಷಾ-ಪಾಷಾಂಡ
ವೇದ ವೇದಾಂಗಾದಿ ಚತುರ್ದಶ ಸ್ಥಾನ, ಧರ್ಮದ ಮರ್ಮಸ್ಥಾನ
ವಿಧಿಸಿದ ತತ್ವ ನಿಯಮಗಳೆಲ್ಲೆ, ಮೀರುವವರದೆ ಪಾಶಾಂಡಿತನ
ಧರ್ಮ ವಿರುದ್ಧ ನಡೆವವರನು ಬಿಡದು, ವಿನಾಶದ ಕರ್ಮಕಾಂಡ
ಭೂ ಭಾರ ಹೆಚ್ಚಿದಾಗ ಅವತರಿಸಿ, ಸಂಹೃತಾಶೇಷಾ ಪಾಷಾಂಡ!

೩೫೬. ಸದಾಚಾರ-ಪ್ರವರ್ತಿಕಾ
ವೇದೋಪನಿಷತ್ಸೂಚಿತ ಸತ್ಕಾರ್ಯ, ಧರ್ಮಕರ್ಮಪುಣ್ಯ ಹೊಣೆ
ಬ್ರಹ್ಮದರಿವಿರದ ಅಜ್ಞಾನಿಗೆ, ದ್ವಂದ್ವಭಾವ ನಿವಾರಿಸಿ ಪ್ರೇರೇಪಣೆ
ಜನ್ಮಸ್ಯ ಅಜ್ಞಾನದ ತೊಡಕು, ಹೋಗಲಾಡಿಸುವ ದೇವಿ ಮರುಕ
ಅಜ್ಞಾನಿಗೂ ಬ್ರಹ್ಮಸಾಕ್ಷಾತ್ಕರಿಸಿ, ಲಲಿತೆ ಸದಾಚಾರ ಪ್ರವರ್ತಿಕ!

೩೫೭. ತಾಪತ್ರಯಾಗ್ನಿ-ಸಂತಪ್ತ-ಸಮಾಹ್ಲಾದನ-ಚಂದ್ರಿಕಾ
ಭಾಧೆಗಳು ಮೂರು ತರ, ಶರೀರ ಮೂಲಧಾತು ದೇವರುಗಳ ದ್ವಾರ
ಅಗ್ನಿತೀಕ್ಷ್ಣ ಸಂಸಾರ ಬವಣೆ, ತೀವ್ರತರ ನರಳಿಸೆ ಭಾಧೆ ಹಾನಿಕಾರಕ
ತಾಪತ್ರಯದಿ ಕಂಗೆಟ್ಟವಗೆ ದೇವಿ ಕೃಪೆ, ಕಷ್ಟ ನಿವಾರಣೆ ಸಮ್ಮೋಹಕ
ಭಾಧೆಗೆ ತಂಪೀವ ತಾಪತ್ರಯಾಗ್ನಿ ಸಂತಪ್ತ ಸಮಾಹ್ಲಾದನ ಚಂದ್ರಿಕಾ!

ತಾಪಗಳ ಮೂರು ತರ ಆಧ್ಯಾತ್ಮಿಕ ಆಧಿ-ಭೌತಿಕ ಆದಿ-ದೈವತಾ
ಗ್ರಹಣೇಂದ್ರೀಯ ಮಾಹಿತಿಗನುಸಾರ ತಾಪತ್ರಯ ಕಾರ್ಯನಿರತ
ಆಧ್ಯಾತ್ಮಿಕಕೆ ನಾಲ್ಕಂತಃಕರಣ ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯ
ಆಧಿಭೌತಿಕ ಪಂಚಮಹಾಭೂತ ತನ್ಮಾತ್ರ, ಆದಿದೈವತ ಅಮಾನುಶ ಶಕ್ತಿಯ!

೩೫೮. ತರುಣೀ
ನಿತ್ಯ ನಿರಂತರ ಯೌವ್ವನ ಬದಲಾಗದ ವಿಶಿಷ್ಟ ಬ್ರಹ್ಮಲಕ್ಷಣ
ಸಾವಿಲ್ಲದ ಅವಿನಾಶಿ ಬ್ರಹ್ಮ ಅನಂತವಾಗಿ ಶಕ್ತಿ ನಿತ್ಯತರುಣ
ಕುಂದದ ವಿಸ್ತರಿಸದ ಸ್ಥಿರ ಪ್ರಮಾಣ ಶಕ್ತಿ ಬ್ರಹ್ಮವಾಗಿ ಅನನ್ಯ ಗಣಿ
ಅಂತೆ ನಿತ್ಯನಿರಂತರ ಯೌವ್ವನ ಸ್ಥಿತಿ ಲಲಿತೆಯಾಗಿಹಳು ತರುಣೀ!

೩೫೯. ತಾಪಸಾರಾಧ್ಯಾ
ಪೂಜನೀಯರು ಋಷಿವರರು ಪೂಜಿಸರುಪದೇವತೆ, ಸುಖಸಾಧನದಿಂ ದೂರ
ಅಂತಿಮಸತ್ಯ ಶೋಧನೆಯೊಂದೆ ಗಮ್ಯ ಬ್ರಹ್ಮ ಸಾಕ್ಷಾತ್ಕಾರಕಷ್ಟೆ ಸಾಧಕ ಸ್ವರ 
ತಾಪವೆ ಬಂಧನ ಸಕಲ ಕಷ್ಟಗಳ ಮೂಲ, ದೇವಿ ಧ್ಯಾನದೆ ತಾಪತ್ರಯ ಕ್ಷಯ
ಸಾರಯುತ ಧ್ಯಾನದೆ ಸಂಸಾರ ಬಂಧನ, ಬಿಡಿಸುವಳು ದೇವಿ ತಾಪಸಾರಾಧ್ಯ!

೩೬೦. ತನುಮಧ್ಯಾ
ಶ್ಲೋಕ ಕಾವ್ಯದ ಸೌಂದರ್ಯ, ಅಕ್ಷರಾನುಕ್ರಮಣಿಕೆಯಾಗೆ ಛಂದಸ್ಸಿನ ಲಾಸ್ಯ
ನಿಯಮಬದ್ದ ರಚನಾ ಕೌಶಲ, ಪ್ರಮಾಣಬದ್ದ ಲಹರಿಯಾಗ್ಹರಿಯುವ ಭಾಷ್ಯ
ಸಪೂರ ಕಟಿ ಲತಾಮಯಿ ಲಲಿತೆಯತನು, ಲಾವಣ್ಯದಲಿ ಛಂಧಸ್ಸಿನ ಗಂಧ
ಗಾಯತ್ರಿಯಾದಂತೆ ಛಂಧಸ್ಸಿನಲಿ, ಛಂದೋರೂಪಿಣೀ ಲಲಿತಾ ತನುಮಧ್ಯಾ!

೩೬೧. ತಮೋಪಹಾ
ಯಾಂತ್ರಿಕ ಪೂಜಾಚರಣೆ, ಹೊಕ್ಕಂತೆ ಕುರುಡ ಕತ್ತಲರಮನೆ
ಕಾಟಾಚಾರಧೋರಣೆ ಸುಖಭೋಗ ಸ್ವಾರ್ಥ ಅಜ್ಞಾನವೆ ಕೊನೆ
ಮನಸ ಕತ್ತಲೆ ಅವಿದ್ಯೆ ಭ್ರಮೆ ತಪ್ಪು ಕಲ್ಪನೆ ತಮಸ್ಸಿನ ದಾಹ
ತಮೋಗುಣದಜ್ಞಾನ ನಾಶಮಾಡುವಳು ದೇವಿ ತಮೋಪಹಾ!
 

ಧನ್ಯವಾದಗಳೊಂದಿಗೆ,
-ನಾಗೇಶ ಮೈಸೂರು

ನಾಗೇಶರೆ,
ಈ ದಿನ ಮಗನ ಪರೀಕ್ಷೆಯ ಹೊಣೆಯಿಂದ ತುಸು ಬಿಡುವು ಸಿಕ್ಕಂತಿದೆ. ಹಾಗಾಗಿ ಎಲ್ಲಿಯೂ ಅರ್ಥಪಲ್ಲಟವಾಗದಂತೆ ಸೊಗಸಾಗಿ ಕಾವ್ಯ ಹೊಸೆದಿದ್ದೀರ. ಇದರಲ್ಲಿ ಹುಡುಕಲೇ ಬೇಕೆಂದು ಹುಡುಕಿದಾಗ ಒಂದು ಸಣ್ಣ ಕಾಗುಣಿತ ತಪ್ಪು ಕಂಡುಬಂತು :)
೩೫೭. ತಾಪತ್ರಯಾಗ್ನಿ-ಸಂತಪ್ತ-ಸಮಾಹ್ಲಾದನ-ಚಂದ್ರಿಕಾ
ಅದೇನೆಂದರೆ ಭಾಧೆ=ಬಾಧೆ ಮಾಡಿ ಮತ್ತು ಆಧಿ ಇರುವ ಕಡೆ ಆದಿ ಮಾಡಿ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಕಾಗುಣಿತ ತಿದ್ದುಪಡಿಸಿದ ರೂಪ ಇಲ್ಲಿದೆ. ಅಂದ ಹಾಗೆ ಈವತ್ತಿನಿಂದ ಪ್ರಿಪರೇಟರಿ ಎಗ್ಸಾಮ್ (ಸಿದ್ದತಾ ಪರೀಕ್ಷೆ) ಆರಂಭ :-)

೩೫೭. ತಾಪತ್ರಯಾಗ್ನಿ-ಸಂತಪ್ತ-ಸಮಾಹ್ಲಾದನ-ಚಂದ್ರಿಕಾ
ಬಾಧೆಗಳು ಮೂರು ತರ, ಶರೀರ ಮೂಲಧಾತು ದೇವರುಗಳ ದ್ವಾರ
ಅಗ್ನಿತೀಕ್ಷ್ಣ ಸಂಸಾರ ಬವಣೆ, ತೀವ್ರತರ ನರಳಿಸೆ ಬಾಧೆ ಹಾನಿಕಾರಕ
ತಾಪತ್ರಯದಿ ಕಂಗೆಟ್ಟವಗೆ ದೇವಿ ಕೃಪೆ, ಕಷ್ಟ ನಿವಾರಣೆ ಸಮ್ಮೋಹಕ
ಬಾಧೆಗೆ ತಂಪೀವ ತಾಪತ್ರಯಾಗ್ನಿ ಸಂತಪ್ತ ಸಮಾಹ್ಲಾದನ ಚಂದ್ರಿಕಾ!

ತಾಪಗಳ ಮೂರು ತರ ಆಧ್ಯಾತ್ಮಿಕ ಆದಿ-ಭೌತಿಕ ಆದಿ-ದೈವತಾ
ಗ್ರಹಣೇಂದ್ರೀಯ ಮಾಹಿತಿಗನುಸಾರ ತಾಪತ್ರಯ ಕಾರ್ಯನಿರತ
ಆಧ್ಯಾತ್ಮಿಕಕೆ ನಾಲ್ಕಂತಃಕರಣ ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯ
ಆದಿಭೌತಿಕ ಪಂಚಮಹಾಭೂತ ತನ್ಮಾತ್ರ, ಆದಿದೈವತ ಅಮಾನುಶ ಶಕ್ತಿಯ!

ಈ ಕಂತನ್ನು ಅಂತಿಮಗೊಳಿಸಿ ಹಾಕಿದ್ದೇನೆ.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು