ಯಾಮಿನಿ

ಯಾಮಿನಿ

ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದ ಹುಡುಗ ಇಲ್ಲಿಯ ‘ಶಾಪಿಂಗ್‍ಮಾಲ್’ ಗಳಿಗೆ ತಕ್ಕಂತೆ, ಇಲ್ಲಿಯ ಜನರಿಗೆ ತಕ್ಕಂತೆ ಬದಲಾಗದಿದ್ದರೆ ಸಿಲಿಕಾನ್ ಸಿಟಿಗೇ ಅವಮಾನ ಅಲ್ಲವೇ? ಈ ಬದಲಾವಣೆ ಸುರೇಶನಲ್ಲಿ ಬಹು ಬೇಗ ಆಯಿತು. ‘ಕಂಪನಿಗೆ’ ತಕ್ಕಂತೆ ಭಾಷೆ, ‘ಪಬ್’ ಗಳಿಗೆ ತಕ್ಕಂತೆ ಉಡುಗೆ-ತೊಡುಗೆ! ಪಬ್ ಗಳಿಗೆ ಒಬ್ಬಂಟಿಯಾಗಿ ಹೋದರೆ ಹುಡುಗನಿಗೆ ಭೂಷಣವೆ? ಪಕ್ಕದಲ್ಲಿ ಒಂದು ಹುಡುಗಿ. ಪ್ರೀತಿಸುತ್ತೇನೆ ಅಂತ ಹೊರಡುವ ಹುಡುಗ-ಹುಡುಗಿಯರಿಗೇನು ಕಡಿಮೆಯೇ? ಸುರೇಶನೂ ತನ್ನ ಜೊತೆ ಕೆಲಸ ಮಾಡುವ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. “ಒಂದೇ ಮೋಬೈಲ್ ಡ್ಯುಯಲ್ ಸಿಮ್” ಹೇಗೊ ಹಾಗೇ ಬದುಕುತ್ತಿದ್ದಾರೆ. ಬೆಳೆಗ್ಗೆ ಎದ್ದ ತಕ್ಷಣ ಮೆಸ್ಸೆಜು, ಆಫೀಸಲ್ಲಿ ಮಾತಾಡತಾನೆ ಕೆಲಸ, ರಾತ್ರಿ ಮಲಗೋಕು ಪುರುಸೊತ್ತು ಇಲ್ಲದೆ ‘ಮೋಬೈಲ್’ ನಲ್ಲಿ ಮಾತು. ಅದೇನು ಮಾತಾಡುತ್ತಿರುತ್ತಾರೋ ಮೋಬೈಲ್ ಗೆ ಗೊತ್ತು...!        ಸುರೇಶ ಒಂದು ಪ್ರತಿಷ್ಟಿತ ಬಹುರಾಷ್ಟ್ರಿಯ ಕಂಪನಿಯಲ್ಲಿ “ಪ್ರೋಗ್ರಾಂ ಡೆವಲಪರ್” ಆಗಿ ಕೆಲಸ ಮಾಡುತ್ತಿದ್ದಾನೆ. ಇವನು ಬೆಳೆದಿದ್ದು ಒಂದು ಹಳ್ಳಿಯಲ್ಲಿ. ಓದಿದ್ದು ಮಾತ್ರ ಹತ್ತಿರದಲ್ಲೇ ಇರುವ ನಗರದಲ್ಲಿ. ರಂಗಪ್ಪ-ಚೆನ್ನಮ್ಮರಿಗೆ ಒಬ್ಬನೆ ಮಗ. ಮನೆಯಲ್ಲಿ ಆರ್ಥಿಕ ಪರಸ್ಥಿತಿ ಚೆನ್ನಾಗಿಲ್ಲದಿದ್ದರೂ ಇವನ ಓದಿಗೆ ದಕ್ಕೆಯುಂಟಾಗಲಿಲ್ಲ. ಹಾಗಾಗಿ ಸುರೇಶ ಇಂಜನಿಯರಿಂಗ ಪದವಿದರನಾದ.        ತಂದೆ-ತಾಯಿಗಳ ಶ್ರಮ ವ್ಯರ್ಥವಾಗದಂತೆ ಸುರೇಶ ಚೆನ್ನಾಗಿ ಓದಿದ. ಕ್ಯಾಂಪಸ್ ಸೆಲೆಕ್ಸನ್ ಲ್ಲಿ ಕೂಡಾ ಸೆಲೆಕ್ಟಾದ. ಕಾಲೇಜ್ ನಲ್ಲಿರುವಾಗ ಸುರೇಶನಿಗೆ ಕಾಲೇಜು ಮತ್ತು ಹಾಸ್ಟೆಲ್ ನಡುವೆ ಇರುವ ದಾರಿಯೊಂದನ್ನು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ. ಮಗನ ಜೊತೆ ಮಾತಾಡಬೇಕು ಎಂದು ಅಪೇಕ್ಷೆ ಪಟ್ಟಾಗ ರಂಗಪ್ಪ-ಚೆನ್ನಮ್ಮರೇ ಮಗನು ಕೊಟ್ಟಿದ್ದ ಹಾಸ್ಟೆಲ್ ಲ್ಯಾಂಡಲೈನ್ ನಂಬರಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಕಾಲಕ್ಕೆ ತಕ್ಕಂತೆ ಬದಲಾಗದಿದ್ದರೆ ಈ ಭೂಮಿಯ ಮೇಲೆ ಇರುವಿಕೆಯ ಅಸ್ಥಿತ್ವವನ್ನೇ ಕಳೆದುಕೊಂಡು ಬಿಡುತ್ತೇವೆ. ಈಗ ಇವನ ಕೈಯಲ್ಲಿ ‘ಐಫೋನ್’.   ಅಪ್ಪ-ಅಮ್ಮನ ಕಾಟಕ್ಕೆ ಮಣಿದು ಮನೆಯಲ್ಲೂ ಒಂದು ಮೋಬೈಲ್ ಕೊಡಿಸಿದ್ದ.                                         ಇದೆಲ್ಲಾ ಹಾಳಾಗಿ ಹೋಗ್ಲಿ. ವಿಷಯಕ್ಕೆ ಬನ್ನಿ...............       ರಾತ್ರಿ ಸುರೇಶ ತನ್ನ ಪ್ರೀಯತಮೆ ‘ಯಾಮಿನಿ’ ಯ ಜೊತೆ ಮೋಬೈಲ್ ನಲ್ಲಿ ಮಾತಾಡುವಾಗ ಇನ್ನೊಂದು ಕರೆಯ ‘ಬೀಪ್ ಸೌಂಡ್’ ಬಂದ ಹಾಗಾಯಿತು, ಪರದೆಯ ಮೇಲೆ ಕಣ್ಣಾಯಿಸಿದ, ಅಪ್ಪ ಎಂದು ತೋರಿಸುತ್ತಿತ್ತು. ಮಗ ಕರೆಯನ್ನು ಸ್ವಿಕರಿಸಲಿಲ್ಲ. ಪ್ರೀಯತಮೆಯ ಪ್ರಣಯದ ಮಾತುಗಳು ತಾರಕಕ್ಕೆರಿದ್ದವಾದ್ದರಿಂದ ಮೊಟುಕುಗೊಳಿಸಲು ಇಷ್ಟವಿಲ್ಲದೇ ತಂದೆಯ ಕರೆಗೆ ಉದಾಸೀನತೆ ತೋರಿಸಿದ. ಆದರೆ ತಂದೆ ಒಂದೇ ಬಾರಿ ಕರೆ ಮಾಡಿ ಸುಮ್ಮನಿರದೆ ಮೇಲಿಂದ ಮೇಲೆ ನಾಲ್ಕೈದು ಬಾರಿ ಪ್ರಯತ್ನ ಪಟ್ಟರೂ ಫಲಕಾರಿಯಾಗಲಿಲ್ಲ. ಇದಾದ ಒಂದುವರೆ ಘಂಟೆಯ ನಂತರ ಪ್ರೀಯತಮೆಯನ್ನು ಸಮಾಧಾನಿಸಿ ಕರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದ ನಂತರ ಮಗನು ತಂದೆಗೆ ಫೋನಾಯಿಸಿದ. ಅತ್ತಲಿಂದ ಇವನ ಕರೆಗೋಸ್ಕರ ಕಾಯುತ್ತಿದ್ದ ದಂಪತಿಗಳು ಒಂದೇ ರಿಂಗಿಗೆ ‘ಹಲೋ’...ಎಂದಿತು ತಾಯಿಯ ಧ್ವನಿ.         ಅತ್ತಲಿಂದ ಇವನಿಗೆ ಮಾತಾಡಲೂ ಬಿಡದೇ ಭಯ-ಭೀತಿಯಿಂದ ಇವನ ಕುಶಲ-ಕ್ಷೇಮದ ಬಗ್ಗೆ ವಿಚಾರಿಸಿ ದೃಡಪಡಿಸಿಕೊಂಡು, ಕರೆಯನ್ನು ಇಷ್ಟೋತ್ತು ಯಾಕೆ ಸ್ವಿಕರಿಸಲಿಲ್ಲ ಎಂದು ವಿನಯದಿಂದ ಕೇಳಿದರು. ಅದಕ್ಕೆ ಏನೋ ಒಂದು ಸಮಜಾಯಿಸಿ ನೀಡಿದ ಸುಪುತ್ರ.         ಮಗನನ್ನು ನೋಡದೆಯೇ ಎಷ್ಟೋ ತಿಂಗಳಾಗಿತ್ತು ಹೆತ್ತ ಜೀವಕ್ಕೆ. ಒಬ್ಬನೆ ಮಗ ಬೇರೆ. ಇವನಿಗೆ ಹುಡುಗಿ ಸಿಕ್ಕಿದ ನಂತರ ಊರನ್ನೇ ಮರೆತಿದ್ದ ಭೂಪ. ಏಕೋ ಏನೋ ಇವತ್ತು ಮಗನ ಮಾತಿಂದ ಹೆತ್ತ ಕರುಳಿಗೆ ಸಮಾಧಾನವಾಗಲಿಲ್ಲ, ಮಗನ ಮುಖ ನೋಡಬೇಕು ಎಂದೆನಿಸಿತು. ವಿಚಾರ ಮಾಡುವಷ್ಟು ತಾಳ್ಮೆ ಇರಲಿಲ್ಲ ಜೀವಕ್ಕೆ, ಫೋನಲ್ಲಿ ಮಗನಿಗೆ ತಾವೇ ಶನಿವಾರ ಬರುವುದಾಗಿ ಹೇಳಿ, ಮಗನಿಗೆ ಇಷ್ಟವಾಗುವ ತಿಂಡಿ-ತಿನಿಸುಗಳ ಪಟ್ಟಿ ತಯಾರಿಸಿದಳು. ಅವರಿಗೆ ಗೊತ್ತಿತ್ತು ಇವನು ಕರೆದರೆ ಊರಿಗೆ ಬರಲ್ಲ. ಏನಾದರೂ ಒಂದು ನೆಪ ಹೇಳಿ ಮುಂದಕ್ಕೆ ಹಾಕುತ್ತಾನೆಂತ, ಎರಡ್ಮೂರು ಬಾರಿ ಪ್ರಯತ್ನ ಪಟ್ಟು ಸುಮ್ಮನಾಗಿದ್ದರು. ಇತ್ತಲಿಂದ ಮಗ ಏನೂ ಮಾತಾಡಲಿಲ್ಲ, ಸರಿ ಬನ್ನಿ ಎಂದು ಫೋನಿಟ್ಟ.        ಮರುದಿನ ನಿಯಮದಂತೆ ಶುರುವಾಯಿತು, ಆಫಿಸಿಗೆ ಹೋದ, ಪ್ರೀಯತಮೆಗೆ ಮುಖ ತೋರಿಸಿ ಅವಳಿಗೆ ಗ್ರೀಟ್ ಮಾಡಿ, ಹೆಚ್ಚುವರಿಯಾಗಿ ಅವಳ ವೇಷಭೂಷಣವನ್ನು ಹೊಗಳಿದ ಮೇಲೆ ಟೀ ಕುಡಿದುಕೊಂಡು ಬಂದು ತಮ್ಮ ತಮ್ಮ ಕ್ಯುಬಿಕಲ್ ಗೆ ಸರಿದರು. ಸಿಸ್ಟಮ್ ಮುಂದೆ ಕುಳಿತುಕೊಂಡು ಹತ್ತು ನಿಮಿಷವೂ ಆಗಿರಲಿಲ್ಲ ಪ್ರೋಜೆಕ್ಟ ಮ್ಯಾನೇಜರಿಂದ ಕರೆ ಬಂತು. ಮ್ಯಾನೇಜರ್ ಚೇಂಬರ್ ಗೆ ಹೋದ ಇವನಿಗೆ ಪ್ರಮೋಷನ್ ಆರ್ಡರ್ ಕಾಯುತ್ತಿತ್ತು. ಆರ್ಡರ್ ಕಾಪಿ ಹಿಡಿದು ಖುಷಿ ಖುಷಿಯಿಂದ ಬಂದು ಪ್ರೀಯತಮೆಗೆ ಮೊದಲು ತಿಳಿಸಿದ. ಅವಳು ಯಾವ ಭಾವನೆಯನ್ನೂ ತೋರ್ಪಡಿಸದೇ ‘ಪಾರ್ಟಿ’ ಯಾವಗ ಎಂದಳು. ಏಕೆಂದರೆ ಇಬ್ಬರೂ ಒಂದೇ ದಿನ ಸಂಸ್ಥೆಗೆ ಸೇರಿದ್ದರೂ ಇವಳಿಗೆ ಪ್ರಮೋಷನ್ ಆಗಿರಲಿಲ್ಲ. ಆದರೆ ಇವನಿಗೆ ಅವಳು ‘ಪಾರ್ಟಿ’ ಕೇಳಿದ್ದೇ ಪ್ರಮೋಷನ್ ಸಿಕ್ಕಿದ್ದಕ್ಕಿಂತ ಹೆಚ್ಚಿಗೆ ಖುಷಿಯಾಗಿತ್ತು. ಸರಿ ಏನು ಬೇಕು ಕೇಳು ಅಂದ. ನಾಳೆ ಶನಿವಾರ, ರಜೆ. ಅದಕ್ಕೆ ‘ಪಿವಿಆರ್’ ನಲ್ಲಿ ಒಂದು ಸಿನಿಮಾ ತೋರಿಸ್ತಿಯಾ? ಇಷ್ಟು ಕೇಳಿದ ತಕ್ಷಣ ಹುಡುಗ ಕೇಳದೆ ಬಂದ ಭಾಗ್ಯವೆಂದು ಒಪ್ಪಿಕೊಂಡುಬಿಟ್ಟ. ಸಂಭ್ರಮದಿಂದ ಮನೆಗೆ ಬಂದ.        ನಿನ್ನೆಯ ಸಮಯಕ್ಕೆ ಸರಿಯಾಗಿ ತಂದೆಯಿಂದ ಕರೆ ಬಂತು. ಇವನು ಕರೆ ಸ್ವಿಕರಿಸಿದ ನಂತರ ತಂದೆಯವರು ನಾಳೆ ಬರುವುದಾಗಿ ಹೇಳಿದರು. ಆಗಲೇ ಇವನು ವಾಸ್ತವಕ್ಕೆ ಬಂದಿದ್ದು. ಇಷ್ಟೋತ್ತು ಯಾಮಿನಿಯ ಭ್ರಮಾ ಲೋಕದಲ್ಲಿ ತೇಲಾಡುತ್ತಾ, ಇಷ್ಟ ಬಂದಹಾಗೆ ಕಲ್ಪಿಸಿಕೊಳ್ಳುತ್ತ ಸುಖವಾಗಿ ಆಡ್ಡಾಗಿದ್ದ. ಇಲ್ಲಿಯವರೆಗೂ ತಂದೆ-ತಾಯಿ ಬರುತ್ತೇವೆಂದು ಹೇಳಿದ್ದೂ ಮರೆತುಹೋಗಿತ್ತು. ಈಗ ಉಭಯ ಸಂಕಟಕ್ಕೆ ಸಿಕ್ಕಿ ಹಾಕಿಕೊಂಡ, ಇತ್ತ ತಂದೆ-ತಾಯಿ ಮೊದಲ ಬಾರಿಗೆ ನನ್ನ ನೋಡೊದಿಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ, ಅತ್ತ ಪ್ರೀಯತಮೆಗೆ ಮಾತು ಕೊಟ್ಟಿದ್ದೆನೆ. ಏನು ಮಾಡುವುದು? ಬಹಳ ಹೊತ್ತು ಚಿಂತಿಸಿದ.        ಹುಡುಗಿಗೆ ಫೋನಾಯಿಸಿದ ಆಕಡೆಯಿಂದ ಅವಳ ಆ ಮಧುರ ಧ್ವನಿಯಿಂದಲೇ ಇವನು ವಿಚಲಿತನಾದ ಹೇಳುವುದನ್ನು ಹೇಳಬೇಕೋ ಬೇಡವೋ ಎಂದು. ಆದರೂ ಗಟ್ಟಿಮನಸ್ಸು ಮಾಡಿ, ಏನೆಂಬವುಳೋ ಎಂಬ ಆತಂಕ ಮತ್ತು ಅರೆಮನಸ್ಸಿನಿಂದ “ಸಾರಿ ಕಣೇ, ನಾಳೆ ನನ್ನ ಪೇರೆಂಟ್ಸ ಬರ್ತಿದಾರೆ ಅದಕ್ಕೆ ನಾನು ನಿಂಜೊತಿ ನಾಳೆ ಬರಕ್ಕಾಗಲ್ಲ, ಬೇಕಾದರೆ ಭಾನುವಾರ ಹೋಗೊಣ್ವಾ?” ಎಂದು ಬೇಡಿಕೊಂಡ. ಅವಳು ಸಿಡಿಮಿಡಿಗೊಂಡು “ಅಲ್ಲ ಕಣೋ, ನಾಳೆ ನಮ್ಮಮ್ಮನ ಜೊತೆ ಬ್ಯೂಟಿಪಾರ್ಲರಗೆ ಹೋಗಬೇಕಾಗಿದ್ದನ್ನು ನಿನಗಾಗಿ ಕ್ಯಾನ್ಸಲ್ ಮಾಡಿದಿನಿ, ಆದರೆ ನೀನಿವಾಗ ಹೀಗೆ ಹೇಳಬಹುದಾ? ನನಗೆ ಭಾನುವಾರ ಬೇರೆ ಕೆಲಸ ಇರಲ್ವಾ? ಅದೆಲ್ಲ ಆಗಲ,್ಲ ಹೋಗೊದಾದರೆ ನಾಳೆನೆ ಹೋಗೊದು. ಇಲ್ಲಾಂದರೆ ಇಲ್ಲ.” ಎಂದುಸಿರಿದಳು ಹಠದಿಂದ. ಅವಳಿಗೆ ಇವನೊಬ್ಬನೇನಾ? ಇವನು ಎಷ್ಟೋ ಬೇಡಿಕೊಂಡರೂ ಕಿವಿಗೆ ಹಾಕಿಕೊಳ್ಳದೇ “ನಂಜೊತಿ ಮಾತಾಡಲೇ ಬೇಡ...”ಎಂದು ಫೋನ್ ಕಟ್ ಮಾಡಿದಳು.        ಥೂ... ಯಾರೂ ಅರ್ಥಾನೇ ಮಾಡ್ಕೋಳಲ್ಲ ಅಂತಾರೆ. ಇವಳು ಬೇರೆ ಹಿಂಗೆ, ಅವರೂ ನಾಳೆನೇ ಬರಬೇಕಾಗಿತ್ತಾ? ತದೇಕ ಚಿತ್ತದಿಂದ ಸೀಲಿಂಗ್ ಫ್ಯಾನ್ ನೋಡುತ್ತಾ ಚಿಂತಿಸುತ್ತಿದ್ದವನಿಗೆ ನಿದ್ರಾದೇವಿ ಯಾವಾಗ ಆವರಿಸಿಕೊಂಡಳೋ? ಬೆಳಗಿನ ಜಾವ ಪಕ್ಕದಲ್ಲಿದ್ದ ಮೋಬೈಲ್ ಜೋರಾಗಿ ತನ್ನ ಇರುವಿಕೆಯನ್ನು ಕರ್ಕಶ ರಾಗದಲ್ಲಿ ಹೇಳಿತು. ಬೆಚ್ಚಿ ಹಲೋ... ಅಂದ ರಭಸಕ್ಕೆ, ನಿದ್ದೆಗಣ್ಣಲ್ಲಿದ್ದ ರಂಗಪ್ಪ ತಲೆ ಜಾಡಿಸಿ, ನಾವು ರೈಲ್ವೆಸ್ಟೆಷನ್ನಿನಲ್ಲಿ ಇಳಿದುಕೊಂಡಿದ್ದೆವೆ. ನೀನೆನು ಬರುವುದು ಬೇಡ. ಹೇಗೆ ಬರಬೇಕು ಹೇಳು ನಾವೇ ಬರುತ್ತೇವೆ... ಅಂದುದಕ್ಕೆ ಪಕ್ಕದಲ್ಲೇ ಇದ್ದ ಚೆನ್ನಮ್ಮ, ಅವನನ್ನೇ ಬಾ ಅಂತ ಹೇಳಿ ನಮಗೆ ಹೇಗೆ ಗೊತ್ತಾಗುತ್ತೆ? ಗೊತ್ತಿಲ್ಲದೂರು. ಅವನು ನಿದ್ದೆಯಲ್ಲಿರುತ್ತಾನೆ. ಯಾಕೆ ಸುಮ್ಮನೆ ಅವನಿಗೆ ತೊಂದರೆ, ಮಲಗಿಕೊಳ್ಳಲಿ. ಎಂದು ಹೆಂಡತಿಗೆ ಸಮಾಧಾನಿಸಿ ಮತ್ತೆ ಮೋಬೈಲ್ ಕಿವಿಗಿಟ್ಟುಕೊಂಡ. ಮಗನು ಹೇಳಿದ ಪ್ಲಾಟ್ ಪಾರಂ, ಬಸ್ಸ್ ಸಂಖ್ಯೆಯನ್ನು ಅವರಿವರನ್ನು ಕೇಳುತ್ತ, ತಡಕಾಡಿ ಬಸ್ಸ್ ಹಿಡಿದೊರಟರು.         ದಂಪತಿಗಳು, ಮಗನು ಹೇಳಿದ ನಗರದ ಹೆಸರು ಹೇಳಿ ಚೀಟಿ ಪಡೆದುಕೊಂಡರು. ತಾವು ಇಳಿದುಕೊಳ್ಳುವ ನಿಲ್ದಾಣ ಬಂದ ತಕ್ಷಣ ತಮಗೆ ತಿಳಿಸಬೇಕೆಂದು ‘ಕಂಡಕ್ಟರ್’ ನ್ನು ಕೇಳಿಕೊಂಡರು. ಎರ್ಡ್ಮೂರು ನಿಲ್ದಾಣಗಳನ್ನು ದಾಟಿ ಹೋದಾಗ, ಚೆನ್ನಮ್ಮ ಇನ್ನೋಮ್ಮೆ ಕೇಳಿ ನೋಡಿ ಎಷ್ಟು ದೂರ ಇದೆಯೆನೋ? ಅಂದಾಗ ಅವಳ ಅಣತಿಯಂತೆ ರಂಗಪ್ಪ ಕೇಳಿದ್ದಕ್ಕೆ ಕಂಡಕ್ಟರ್ ‘ರೀ...ಆಗಲೇ ಹೇಳಲಿಲ್ವಾ, ಬಂದ್ರೆ ನಾನೇ ಹೇಳ್ತಿನಿ.’ ಎಂದು ರೇಗಿಕೊಂಡ. ಬಸ್ಸು ಕೊನೆಯ ನಿಲ್ದಾಣಕ್ಕೆ ಬಂದು ನಿಂತಾಗ, ಮುಂದಿನಿಂದ ಕೂಗಿ ಇದೆ ‘ಲಾಸ್ಟಸ್ಟಾಪ್’ ಇಳಿದುಕೊಳ್ಳಿ ಎಂದ ಕಂಡಕ್ಟರ್.        ಬಸ್ಸಿನಿಂದ ಇಳಿದ ದಂಪತಿಗಳಿಗೆ, ನಿಲ್ದಾಣಕ್ಕೆ ಬಂದು ನಿಂತಿರುತ್ತೇನೆ ಎಂದ ಮಗನ ದರ್ಶನವೇ ಇಲ್ಲ. ಒಂದ್ನಿಮಿಷ ಇಬ್ಬರಿಗೂ ಅನುಮಾನ. ಕಂಡಕ್ಟರ್ ಬೇರೆ ಇನ್ನಾವುದೋ ಸ್ಟಾಪಿನಲ್ಲಿ ಇಳಿಸಿ ಬಿಟ್ಟನೋ? ಅಂದುಕೊಳ್ಳುವಷ್ಟರಲ್ಲಿ ರಂಗಪ್ಪನಿಗೆ ಮಗನು ದೂರದಲ್ಲಿ ಬರುತ್ತಿದ್ದನ್ನು ಕಂಡು ಆತಂಕ ಮಾಯವಾಯಿತು.       ಬಾಡಿದ ಸೌತೆಕಾಯಿಯಂತೆ ಇದ್ದ ಮಗನ ಮುಖ ನೋಡಿದಾಕ್ಷಣ ತಾಯಿಯ ಕರುಳು ಚುರುಗುಟ್ಟಿತು. ಮನೆಗೆ ಹೋದ ನಂತರ ಹಾಲಿನ ಪ್ಯಾಕೆಟ್ ತರಿಸಿ, ಟೀ ಮಾಡಿಕೊಟ್ಟು, ಅಸ್ಥವ್ಯಸ್ತವಾಗಿ ಮನೆಯ ತುಂಬ ಹರಡಿಕೊಂಡ ವಸ್ತುಗಳನ್ನು ನೀಟಾಗಿ ಹೊಂದಿಸಿದಳು. ಕಸ-ಮುಸರೆ ಮಾಡಿ, ಹೊಲಸಾದ ಬಟ್ಟೆಯನ್ನೆಲ್ಲಾ ಒಂದುಗೂಡಿಸಿ ತೊಳೆಯಲು ಹೊರಟಾಗ...ಅದೆಲ್ಲ ಯಾಕೆ ಮಾಡುತ್ತಿಯಾ ಬಿಡು. ಎಂದ ಮಗನಿಗೆ ಪ್ರತ್ತ್ಯೂತ್ತರವಾಗಿ ಇವತ್ತೊಂದಿನ ಬಂದಿದ್ದೆನೆ. ಮಾಡುತ್ತೇನೆ. ಇದನ್ನೂ ಬೇಡ ಅಂದರೆ ಹೇಗೆ? ನಮಗೆ ಇರೋದು ನೀನೊಬ್ಬನೆ. ನಿನ್ನನ್ನು ಬಿಟ್ಟರೆ ನಮಗ್ಯಾರಿದ್ದಾರೆ? ನೀನೆ ಆಗಾಗ ಬರ್ತಾ-ಹೊಗ್ತಾ ಇದ್ದರೆ ಎಷ್ಟು ಚೆಂದ? ಎಂದು ಕಣ್ಣು ಹನಿಗೂಡಿದವು.        ಇವತ್ತು ಸುರೇಶನ ಮುಖದಲ್ಲಿ ಕಳೆನೇ ಇಲ್ಲ. ಮನಸ್ಸು ದುಗುಡತೆಯಿಂದ ತುಂಬಿ ಹೋಗಿದೆ. ಇತ್ತ ತಂದೆ-ತಾಯಿಗಳಿಗೆ ಏನೋ ಒಂದು ಹೇಳಲಾರದಂತಹ ನೆಮ್ಮದಿ;ಸಮಾಧಾನ. ಇಬ್ಬರೂ ಮನೆತುಂಬ ಓಡಾಡುತ್ತಿದ್ದಾರೆ. ಚೆನ್ನಮ್ಮ ಮಗನ ಹತ್ತಿರ ಬಂದು, ಪ್ರೀತಿತುಂಬಿದ ಕೈಗಳಿಂದ ಜೋಲು ಮುಖ ಮಾಡಿಕೊಂಡು ಕುಳಿತಿದ್ದ ಸುರೇಶನ ತಲೆಯನ್ನು ನೇವರಸಿ, ಹೀಗ್ಯಾಕೆ ಕುಳಿತ್ತಿದ್ದಿಯಾ? ಮೈಯಲ್ಲಿ ಹುಷಾರಿಲ್ಲವಾ? ಹೀಗೆ ಕುಳಿತುಕೊಂಡರೆ ನಿಮ್ಮಪ್ಪನಿಗೆ ಹೇಗಾಗೊಲ್ಲ? ಏಳು...ಸ್ನಾನ ಮಾಡಿ, ನಿಮ್ಮಪ್ಪನಿಗೆ ವಿಧಾನಸೌಧ ನೋಡಬೇಕಂತಾ ಬಹಳ ಆಸೆ ಇದೆ. ಹೋಗಿ ತೋರಿಸಿಕೊಂಡು ಬಾ.        ಸುರೇಶ ಇಡೀ ಬೆಂಗಳೂರನ್ನೇ ಸುತ್ತಿಸಿದ ಮನಸ್ಸಿಲ್ಲದ ಮನಸ್ಸಿನಿಂದ. ರಂಗಪ್ಪ-ಚೆನ್ನಮ್ಮ ಬೆಂಗಳೂರಿನಂತಹ ದೈತ್ಯನಗರವನ್ನು ಜೀವನದಲ್ಲಿ ಮೋದಲ ಬಾರಿಗೆ ನೋಡುತ್ತಿದ್ದರಾದ್ದರಿಂದ ಕುತೂಹಲ, ಕೌತುಕಭರಿತವಾಗಿ ಕಣ್ಣರೆಪ್ಪೆ ಮಿಟುಕಿಸದೆ ಆಶ್ಚರ್ಯಕರರೀತಿಯಿಂದ ಕಣ್ಣು ತುಂಬಿಸಿಕೊಳ್ಳುತ್ತಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ಮಗ ತಮ್ಮ ಜೊತೆ ಇದ್ದಾನಲ್ಲಾ ಎಂಬ ಸಂತೋಷ. ವಿಧಾನಸೌಧ, ಹೈಕೋರ್ಟ ಮುಂದೆ ನಿಂತು ಫೋಟೋ ತೆಗಿಸಿಕೊಂಡರು. ಏನು ಅಂದಗಿತ್ತಿಯರು ಇಲ್ಲಿಯ ಹುಡುಗಿಯರು! ನಮ್ಮ ಹಳ್ಳಿಯಲ್ಲಿ ಇಷ್ಟು ಚಂದ ಇಲ್ಲ ಬಿಡು. ಎಂದು ಬಾಯಿಮೇಲೆ ಬೆರಳನಿಟ್ಟುಕೊಂಡಳು ಚೆನ್ನಮ್ಮ. ಇಂತದೆ ಒಂದು ಹುಡುಗಿಯನ್ನು ಹುಡುಕಿ ನಮ್ಮ ಸುರೇಶಗ ಮದುವೆ ಮಾಡಿಬೇಕು. ಮಗ ಮದುವೆ ಆಗುವುದನ್ನು ಕಲ್ಪಿಸಿಕೊಂಡು ಸಂಭ್ರಮಪಟ್ಟಳು.       ರಾತ್ರಿ ಇನ್ನೇನು ಊರಿಗೆ ಹೋರಡಲು ಅಣಿಯಾದರು... ತಾಯಿಗೆ ಇಷ್ಟೋತ್ತು ಹಿಡಿದಿಟ್ಟುಕೊಂಟ ದುಃಖ ತಡೆಯಲಾಗಲಿಲ್ಲ. ಒಂದೊಂದು ಕಣ್ಣಿರ ಹನಿಯೂ ಮಗನನ್ನು ಜಪ ಮಾಡುವ ಮಾಲೆಯ ಹಾಗೆ ಉದುರಿದವು. ಇದರಿಂದ ರಂಗಪ್ಪನ ಕಣ್ಣುಗಳೂ ತೇವಗೊಂಡವು. ಸುರೇಶನು ತಂದೆ-ತಾಯಿಗಳ ಪ್ರೀತಿಯ ಮುಂದೆ ಮುದುಡಿಹೋದ. ಬಸ್ಸ್ ಸ್ಟಾಪಿಗೆ ಕಳಿಸಲು ಬಂದ ಮಗನನ್ನು ಸಂತೃಪ್ತಿಯ ಜೊತೆಗೆ ಭಾರವಾದಮನಸ್ಸಿನಿಂದ ನೋಡಿದರು. ಜಾಗೂರುಕತೆಯಿಂದಿರು, ಆರೋಗ್ಯದ ಬಗ್ಗೆ ಕಾಳಜಿವಹಿಸು, ಆಗಾಗ ಊರಿಗೆ ಬರ್ತಾಯಿರೆಂದು ವಿಧವಿಧವಾಗಿ ಹೇಳಿದರು. ಬಸ್ಸ್ ಬಂದ ತಕ್ಷಣ ಮಗ ಇಬ್ಬರನ್ನೂ ಒಳಗೆ ಕೂರಿಸಿ, ತಾನು ಹೊರಗಡೆ ಕಿಟಕಿಯ ಬಳಿ ಬಂದು ನಿಂತ. ಯಾರಿಗೂ ಮಾತೇ ಹೋರಡತಾಯಿಲ್ಲ...ಆ ಒಂದು ವಾತಾವರಣವೇ ಗಂಭೀರತೆಯಿಂದ ಕೂಡಿದೆ. ಬಸ್ಸ್ ಹೊರಟಿತು. ತಾಯಿ ಕೊನೆಯ ಬಾರಿಯೇನೋ ಎಂಬಂತೆ ಮಗನ ಮುಖ ನೋಡಿತು. ಇವನು ಅವರತ್ತ ಕೈ ಬೀಸಿದ.       ಅಪ್ಪ-ಅಮ್ಮನನ್ನು ಕಳಿಸಿ ಮನೆಗೆ ಬಂದ ಸುರೇಶನಿಗೆ ಏನೋ ಒಂದು ಭಾರವಾದ ವಸ್ತುವನ್ನು ಇಳಿಸಿದೆಂತೆನಿಸಿತು. ಆದರೆ ಈಗ ಕಾಡುತ್ತಿರುವ ಒಂದೇ ಒಂದು ಸಮಸ್ಯೆ...ಹೇಗೆ ನನ್ನ ಯಾಮಿನಿಯನ್ನು ಸಮಾಧಾನಿಸಲಿ? ನಿನ್ನೆ ಕೋಪ ಮಾಡಿಕೊಂಡು ಬಿಟ್ಟಳು. ನಾನೀಗ ಕರೆ ಮಾಡಿದರೆ ಸ್ವಿಕರಿಸುತ್ತಾಳೆಯೇ? ಅಥವಾ ನನ್ನ ಜೊತೆ ಮಾತೇ ಆಡದಿದ್ದರೇ?. ಇಲ್ಲ ಇಲ್ಲ ಹಾಗನ್ನೋದಿಲ್ಲ. ತನ್ನನ್ನೆ ಸಮಾಧಾನಿಸಿಕೊಂಡ. ಆದ್ರೂ ಏನೊ ಒಂದು ರೀತಿಯ ಆತಂಕ. ಈನ್ಮಾಡ್ಲಿ? ಹೀಗೆ ಒಂದು ಘಂಟೆಗೂ ಹೆಚ್ಚು ಕಾಲ ಯೋಚಿಸಿ ಧೈರ್ಯ ತಂದುಕೊಂಡು ಪ್ರೀಯತಮೆಗೆ ಫೋನಾಯಿಸಿದ.       ಅತ್ತಲಿಂದ ಕರೆ ಸ್ವಿಕರಿಸಿದ ಧ್ವನಿ ಖುಷಿಯಿಂದ ಮಾತಿಗಾರಂಬಿಸಿತು. ‘ಏನ್ಮಾಡ್ತಾಯಿದ್ದಿಯಾ ಡಾರ್ಲಿಂಗ್’ ಅಂತ ಕೇಳಿದ ಕಿವಿಗಳಿಗೆ ಒಂದು ಸೆಕೆಂಡ್ ಅನುಮಾನ. ನನ್ನ ಜೊತೆ ಮಾತಾಡಿರಲಿಕ್ಕಿಲ್ಲ, ಎಂದು ನಾನು ಸುರೇಶ ಅಂದ. ಯಾಕೋ ಹೀಗೆ ಮಾತಾಡ್ತಾಯಿದ್ದಿಯಾ? ಗೊತ್ತು ಕಣೋ, ಎಂದಳು ತಮಾಷೆಯ ಧ್ವನಿಯಲ್ಲಿ. ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಬೇರೆಯವರ ಜೊತೆ ತಿರುಗಾಡಿಕೊಂಡು ಬಂದಿದ್ದರಿಂದ ಖುಷಿಖುಷಿಯಾಗಿದ್ದಳು. ಅವಳಿಗೆ ಅವನ ಮಾತಿನಲ್ಲಿರುವ ಸಂಕೋಚ ಈಗ ಅರ್ಥವಾಯಿತು. ಸ್ವಲ್ಪ ಹುಸಿಮುನಿಸಿನ ನಾಟಕವಾಡಿ, ನೀನು ಹಾಗೆ ಮಾಡಬಹುದಿತ್ತಾ? ಮತ್ತೆ ಕೇಳಿದಳು. ಇದರಿಂದ ಸುರೇಶನಿಗೆ ಒಂದು ದಿನದ ತಲೆನೋವೆಲ್ಲ ಒಂದೇ ನಿಮಿಷದಲ್ಲಿ ವಾಸಿಯಾಗಿತ್ತು. ಮತ್ತೆ ಮಂದಹಾಸ ಅವನ ಮುಖದ ಮೇಲೆ ಮರಳಿತು. ವಿರಹದ ವೇದನೆಯಿಂದ ತಪಿಸಿದ್ದವನಿಗೆ ಬೆಂಕಿಯ ಕೆಂಡದ ಮೇಲೆ ತಣ್ಣಿರು ಬಿದ್ದಂತಾಗಿ ತಂಪಾದ!         ಬಸ್ಸು ಚಲಿಸಿತು ಆದರೆ ಚೆನ್ನಮ್ಮ-ರಂಗಪ್ಪರ ಮನಸ್ಸುಗಳು ನಿಶ್ಚಲವಾಗಿಬಿಟ್ಟಿವೆ. ಚೆನ್ನಮ್ಮನ ಹೃದಯ ಏನೊ ಒಂದು ರೀತಿಯಿಂದ ಸೆಳೆಯುತ್ತಿದೆ. ಇಬ್ಬರ ಕಣ್ಣಗಳಲ್ಲಿ ಶೂನ್ಯತೆ. ಮುಖಗಳು ಸೋತು ಹೋಗಿವೆ. ಮುಂದಾಗುವುದನ್ನು ಅರಿತಂತ್ತಿದ್ದರು. ಬಸ್ಸು ಜನಗಳಿಂದ ತುಂಬಿದೆ. ಸ್ವಲ್ಪ ಜನ ನಿದ್ದೆಗೆ ಜಾರಿದ್ದರೆ, ಇನ್ನೋಂದಿಷ್ಟು ಜನ ನಿದ್ದೆಗೆ ಜಾರಲು ಅಣಿಯಾಗಿದ್ದಾರೆ. ಯುವಕ-ಯುವತಿಯರು ಮಾತ್ರ ಅವರವರ ಮೋಬೈಲ್ ಗಳಲ್ಲಿ ಬಿಜಿಯಾಗಿದ್ದಾರೆ. ಬಸ್ಸು ತುಮಕೂರು ದಾಟಿತ್ತು. ಕಂಡಕ್ಟರ್ ಪ್ರಯಾಣಿಕರಿಗೆ ಚೀಟಿ ಕೊಟ್ಟು ಬಂದು ಎಂಟ್ರಿ ಮಾಡ್ತಾಯಿದ್ದ. ಡ್ರೈವರ್ ತನ್ನ ಕೆಲಸವನ್ನು ಜಾಗೂರುಕತೆಯಿಂದ ನಿರ್ವಹಿಸುತ್ತಿದ್ದ. ಆದರೆ ಎದುರಿನಿಂದ ಬರತ್ತಿರುವ ಲಾರಿ ಸ್ವಲ್ಪ ಓಲಾಡಿತೇನೊ ಎಂದೆನಿಸಿತು. ಹೌದು, ಲಾರಿ ಡ್ರೈವರ್ ಹೆಂಡ ಕುಡಿದ ಅಮಲಿನಲ್ಲಿ ಗಾಡಿಯನ್ನು ಓಲಾಡಿಸಿದ್ದ. ಆದರೆ ಅತಿಶೀಘ್ರದಲ್ಲಿ ಎಚ್ಚರಗೊಂಡು ಮುಂದೆ ನಡೆಸಿದ್ದ. ಆದ್ದರಿಂದ ಬಸ್ಸ್ ಡ್ರೈವರ್ ಹೆಚ್ಚಿಗೆ ಅನುಮಾನಿಸದೇ ಮುನ್ನಡೆಸಿದ್ದ. ಆದರೆ ಅಂದುಕೊಂಡಿರಲಾರದಂತಹ ದುರ್ಘಟನೆ ನಡೆದಿದ್ದು ಇಬ್ಬರಿಗೂ ಗೊತ್ತಿರಲಿಲ್ಲ. ಬಸ್ಸು ಲಾರಿಗೆ ಇಪ್ಪತ್ತು ಅಡಿ ದೂರ ಇರುವಾಗ, ಅರೆಗಣ್ಣಲ್ಲಿದ್ದ ಲಾರಿ ಡ್ರೈವರ್ ನಿಗೆ ಬಸ್ಸಿನ ಹೆಡ್ಲೈಟ್ ನಿಂದ ಹೊರಬೀಳುವ ಪ್ರಕಾಶಮಾನವಾದ ಬೆಳಕಿನಿಂದ ಕಣ್ಣಲ್ಲಿ ಕತ್ತಲೆ ತುಂಬಿದಂತಾಗಿ ಸ್ಟೇರಿಂಗ್ ಯಾವ ದಿಕ್ಕಿನೆಡೆಗೆ ತಿರುಗಿಸಿದ್ದನೋ ಗೊತ್ತಿರಲಿಲ್ಲ. ಹೀಗೆ ಅತಿ ವೇಗದಲ್ಲಿದ್ದ ಎರಡೂ ಧೈತ್ಯ ವಾಹನಗಳು ಎದುರು-ಬದುರು ಡಿಕ್ಕಿ ಹೊಡೆದು ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾದವು.         ರಸ್ತೆಯ ತುಂಬೆಲ್ಲ ರಕ್ತದೊಕುಳಿ. ಸ್ವಲ್ಪ ಜನ ಮಲಗಿದಲ್ಲಿಯೇ ಅಸುನೀಗಿದ್ದರು. ಇನ್ನಷ್ಟು ಜನಕ್ಕೆ ಏನಾಗಿದೆ ಎಂಬುದರಿವಿರಲಿಲ್ಲ. ಅಲ್ಲೊಬ್ಬ-ಇಲ್ಲೊಬ್ಬರಂತೆ ಚಿರಾಡುತ್ತಿದ್ದರು. ಆದರೆ, ಅದೃಷ್ಟವೋ...ದುರದೃಷ್ಟವೋ... ರಂಗಪ್ಪನಿಗೆ ತರಿಚಿದ ಗಾಯಗಳನ್ನು ಬಿಟ್ಟರೆ ಏನಾಗಿರಲಿಲ್ಲ. ಅವನಿಗೂ ಏನಾಗುತ್ತಿದೆಂದು ಅರ್ಥವೇ ಆಗಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಮಿಂಚಿನಂತೆ ಹೊಳೆದು ಎಲ್ಲ ಸ್ಪಷ್ಟವಾಯಿತು. ಪಕ್ಕದಲ್ಲಿಯೇ ಇದ್ದ ಹೆಂಡತಿಯ ಕಡೆ ನೋಡಿದ. ಅರಿವಿಲ್ಲದೆ ಬಿದ್ದಿದ್ದಾಳೆ. ರಂಗಪ್ಪನಿಗೆ ತಲೆನೆ ಖಾಲಿಯಾದಂತೆನಿಸಿ, ನಾಲಗೆ ಬಿದ್ದೊಗಿದೇನೋ ಎಂಬಂತೆ ಧ್ವನಿಯೇ ಬರ್ತಾಯಿಲ್ಲ. ಸಾವರಿಸಿಕೊಂಡು, ಹೆಂಡತಿಯನ್ನು ಕೂಗಿ ಎಚ್ಚರಿಸಲು ಪ್ರಯತ್ನಪಟ್ಟ. ಕಣ್ಣು ಬಿಡುತ್ತಿಲ್ಲ ಚೆನ್ನಮ್ಮ. ಅವಳ ಬಲಗೈ ರಟ್ಟೆಯನ್ನಿಡಿದು ತನ್ನ ಎಡಗೈಲಿ ತಲೆಯನ್ನು ಎತ್ತಿದ, ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿದೆ. ರಂಗಪ್ಪನಿಗೆ ಜೀವಕಿತ್ತು ಕೈಗೆ ಬಂದಹಾಗಾಯಿತು. ಅವಳ ಕೆನ್ನೆಯ ಮೇಲೆ ಕೈಯಿಟ್ಟು ಎಬ್ಬಿಸಲು ಪ್ರಯತ್ನಿಸಿದ. ಅಷ್ಟೊತ್ತಿಗಾಗಲೆ ಹಿಂದೆ ಬಂದ ಗಾಡಿಯ ಜನಗಳು ಅಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದ ಜನಗಳನ್ನು-ಹೆಣಗಳನ್ನು ಹೊರಗೆ ತರಲು ಪ್ರಯಾಸಪಡುತ್ತಿದ್ದರು. ರಂಗಪ್ಪನೂ ತನ್ನ ಹೆಂಡತಿಯನ್ನು ಹೊತ್ತುಕೊಂಡು ಕಷ್ಟಪಟ್ಟು ಹೊರಗೆ ಬಂದ. ಹೊರಗೆ ಬಂದಾಕ್ಷಣ ಕೈಯಲ್ಲಿದ್ದ ಚೆನ್ನಮ್ಮ ದೊಡ್ಡದಾಗಿ ಉಸಿರೆಳೆದುಕೊಂಡಳು. ಅಸ್ಪಷ್ಟತೆ ಅವಳ ಮುಖದಲ್ಲಿ ಎದ್ದು ತೋರುತ್ತಿತ್ತು. ರಂಗಪ್ಪನಿಗೆ ನಿಂತುಹೋದ ಉಸಿರು ತಿರುಗಿ ಬಂದಹಾಗಾಯಿತು. ಎತ್ತಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ಸಾವಕಾಶವಾಗಿ ಕೂರಿಸಿದ. ಚೆನ್ನಮ್ಮನಿಗೆ ತಾನು ಬದುಕುವುದಿಲ್ಲ ಎಂಬ ಕಟುಸತ್ಯ ಗೊತ್ತಾಗಿತ್ತೋ ಏನೋ? ಮಗನ ಹೆಸರನ್ನೆ ಜಪಿಸುತ್ತಿದ್ದಳು. ಗಂಡನಿಗೆ ತಡವರಿಸುತ್ತಾ ಹೇಳಿದಳು...ಸುರೇಶನ ಜೊತೆ ಮಾತಾಡಬೇಕು. ಧ್ವನಿಯಲ್ಲಿ ಸ್ಪಷ್ಟತೆ ಇರಲಿಲ್ಲ. ರಂಗಪ್ಪನಿಗೆ ಏನು ಮಾಡಬೇಕು ಅಂತ ತೋಚುತ್ತಿಲ್ಲ. ಅದೇನೋ ಹೊಳೆದವನ ಹಾಗೆ ಅಂಗಿಯ ಜೇಬುಗಳಲ್ಲಿ ತಡಕಾಡಿದ. ಮೋಬೈಲ್ ಕೈಗೆತ್ತಿಕೊಂಡ. ಕೈಗಳು ಗಡಗಡ ನಡುಗುತ್ತಿವೆ. ಲೋ ಬ್ಯಾಟರಿ ತೋರಿಸುತ್ತಿದ್ದ ಮೋಬೈಲ್ ನಲ್ಲಿ ಮಗನ ನಂಬರನ್ನು ಹುಡುಕಿ ಮಗನಿಗೆ ಕರೆಮಾಡಿದ. ಆದರೆ ಮಗನ ಮೋಬೈಲ್ ಕಾರ್ಯನಿರತವಾಗಿದೆ ಎಂಬ ಉತ್ತರ ಬಂತು. ಸದ್ಯದ ಪರಿಸ್ಥಿತಿಯನ್ನು ಹಳಿದುಕೊಂಡು, ಒಂದು ಚಿಕ್ಕ ಆಸೆ, ಕಾತರತೆ, ಉದ್ವೆಗದಿಂದ ಮೂರು ಬಾರಿ ಕರೆ ಮಾಡಿದ. ಆಕಡೆಯಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ನಾಲ್ಕನೆ ಬಾರಿ ಮಾಡುವಷ್ಟರಲ್ಲಿ ಮೋಬೈಲ್ ‘ಸ್ವಿಚ್ ಆಪ್’ ಆಯಿತು. ಹತಾಸೆ, ಭಾವೋದ್ವೆಗದಿಂದ ಕಣ್ಣಲ್ಲಿ ನೀರು ತುಂಬಿ ಹರಿಯಿತು. ಇವನ ತೊಡೆಗೆ ಅಂಟಿಕೊಂಡು ಕುಳಿತಿದ್ದ ಚೆನ್ನಮ್ಮ ಗಂಡನ ಕಣ್ಣಿರನ್ನು ಶಕ್ತಿಯನ್ನೇ ಕಳೆದುಕೊಂಡ ತನ್ನ ಕೈಗಳಿಂದ ವರೆಸಿದಳು.          ಸುರೇಶ-ಯಾಮಿನಿಯ ಮಾತುಕತೆಗಳು ಮುಂದುವರಿದು ಒಂದೂಮುಕ್ಕಾಲು ಘಂಟೆಯಾಗಿತ್ತೇನೊ ತಂದೆಯ ಕರೆಯ ‘ಬೀಪ್ ಸೌಂಡ್’ ಇವನನ್ನು ಡಿಸ್ಟರ್ಬ ಮಾಡಿತು. ಇದನ್ನು ನೊಡಿದ ತಕ್ಷಣ ಸುರೇಶನಿಗೆ ಕೋಪ ನೆತ್ತಿಗೇರಿತು. ಕಳಿಸಿ ಬಂದು ಒಂದು ಘಂಟೆ ಕೂಡ ಆಗಿಲ್ಲ ಮತ್ತೇನು ಇವರ ರಗಳೆ? ಫೂರ್ತಿ ಒಂದಿನಾ ಜೊತೆಯಲ್ಲೇ ಇದ್ರೂ ಮತ್ತೆ ಇವರ್ಕಾಟ! ನಂತರ ನಾನೇ ಕರೆ ಮಾಡಿದರಾಯಿತು. ಇವಳನ್ನೆ ಸಮಾಧಾನ ಮಾಡೊದಿಕ್ಕೆ ಸಾಕು-ಬೇಕಾಯಿತು. ಈಗ ಕಾಲ್ ಕಟ್ ಮಾಡಿದ್ರೆ ಅಷ್ಟೆ! ಇವರದಿದ್ದಿದ್ದೆ ಎಂದು ತಂದೆಯ ಕರೆಗೆ ಅಸಡ್ಡೆ ತೋರಿಸಿದ. ತಂದೆ ಮೂರುಬಾರಿ ಪ್ರಯತ್ನಪಟ್ಟರೂ ಮಗ ಕರೆ ಸ್ವಿಕರಿಸಲಿಲ್ಲ. ಇದಾದ ಒಂದು ಘಂಟೆಗೂ ಹೆಚ್ಚು ಕಾಲ ಇವರ ಮಾತುಗಳು ಮುಂದುವರೆದಿದ್ದವು. ಇದರ ನಡುವೆ ತಂದೆಯ ಕರೆ ಮತ್ತೆ ಬರಲಿಲ್ಲ. ನಿರ್ಭಿಡೆಯಿಂದ ಖಾಲಿಮಾತುಗಳನ್ನು ಸರಬರಾಜು ಮಾಡಿಕೊಡರು. ಆದರೆ ಒಂದು ಮಾತಂತು ನಿಜ, ಇಷ್ಟೋತ್ತು ಏನು ಮಾತಾಡಿದೆವು ಎಂಬುದು ಇಬ್ಬರಿಗೂ ಗೊತ್ತಿಲ್ಲ. ಅಂತೂ ಮೋಬೈಲಿಗೆ ವಿಶ್ರಾಂತಿ ಕೊಟ್ಟರು. ಯಾಮಿನಿಯ ಕಾಲ್ ಕಟ್ ಮಾಡಿದನಂತರ ತಪ್ಪಿ ಹೋದ ಕರೆಗಳಲ್ಲಿ ಅಪ್ಪ-(3) ಎಂದು ತೋರಿಸುತ್ತಿತ್ತು. ಓ...ರಾಗ ಎಳೆಯುತ್ತ ತಂದೆಗೆ ಕರೆ ಮಾಡಿದ. ಆದರೆ ಅತ್ತಲಿಂದ “ನೀವು ಕರೆ ಮಾಡಿದ ಚಂದಾದಾರರು ಅಸ್ಥಿತ್ವದಲ್ಲಿಲ್ಲ” ಎಂದಿತು ಹೆಣ್ಣು ಧ್ವನಿ ತಂದೆಯ ಬದಲಾಗಿ.          ಅಂಬುಲೆನ್ಸ್ ರಂಗಪ್ಪ-ಚೆನ್ನಮ್ಮರನ್ನು ಆಸ್ಪತ್ರೆಗೆ ಸಾಗಿಸಿತು. ರಂಗಪ್ಪ ಪಕ್ಕದಲ್ಲೆ ಕುಳಿತು ಶೂನ್ಯತೆಯಿಂದ ಚೆನ್ನಮ್ಮನನ್ನು ದೃಷ್ಟಿಸುತ್ತಿದ್ದ. ಚೆನ್ನಮ್ಮ ಒಮ್ಮೆ ಗಟ್ಟಿಯಾಗಿ ಉಸಿರು ತೆಗೆದುಕೊಂಡು ಹಾಗೆ ಬಿಟ್ಟು, ಗಂಡನಕಡೆ ಮುಖ ತಿರುಗಿಸಿ...ಸುರೇಶನನ್ನು ಚೆನ್ನಾಗಿ ನೋಡಿಕೊಳ್ಳಿ...ಎಂದಳು ತೊದಲುತ್ತಾ. ಏನಾಗಲ್ಲ ಸುಮ್ಮನಿರು ಅಂದ ಗಂಡ. ಚೆನ್ನಮ್ಮ ಪಕ್ಕದಲ್ಲೆ ಕುಳಿತ ಪತಿಯ ಮೊಣಕಾಲಿನ ಮೇಲೆ ತನ್ನ ಬಲಗೈನ್ನು ಸಾವಕಾಶವಾಗಿ ಇಟ್ಟಳು. ಸುರೇಶ... ಸುರೇಶ... ಸುರೇಶ... ಸುರೇ...ಜೀವ ಹಾರಿತ್ತು ಕಾಣದೊಂದು ಲೋಕಕ್ಕೆ.         ಅಲ್ಲಿದ್ದ ನರ್ಸು ಎಚ್ಚರಿಸುವುದು ಒಂದು ಸೆಕೆಂಡ್ ಹೆಚ್ಚಾಗಿದ್ದರೂ ರಂಗಪ್ಪನ ಪ್ರಾಣವೂ ಹೋಗಿರುತ್ತಿತ್ತೇನೋ? ಪ್ರಜ್ಞೆ ಬಂದ ನಂತರ ರಂಗಪ್ಪನಿಗೆ ಎಲ್ಲವೂ ಶೂನ್ಯ. ನಾನೇಕೆ ಬದುಕಿದೆ? ಎಂಬುದೆ ಅವನಪಾಲಿಗೆ ಕಹಿ ಸತ್ಯವಾಗಿತ್ತು. ಕಣ್ಣಿರು ಧಾರಾಕಾರವಾಗಿ ಸುರಿಯುತ್ತಿದೆ. ಆ ಕಣ್ಣಿರಲ್ಲಿ ಮಗನ ಮುಖ ಪ್ರತಿಪಲಿಸಿದಂತಾಗಿ ಮರೆಯಾಯಿತು. ಹೌದು, ಅವಳ ಆಸೆಯಂತೆ ಮಗನಿಗೋಸ್ಕರ ಬದುಕಬೇಕು. ಮದುವೆ ಮಾಡಬೇಕು. ಮನಸ್ಸನ್ನು ಕಲ್ಲು ಮಾಡಿ, ಸಮಾಧಾನ ತಂದುಕೊಂಡ. ಆಸ್ಪತ್ರೆಯವರು ಪಂಚನಾಮಿ ಮಾಡಿ ದೇಹ ಕೊಡುವುದಾಗಿ ಹೇಳಿದರು. ಆಗ ಬೆಳಗಿನ ಮುಂಜಾವು.          ‘ಸ್ವಿಚ್ ಆಪ್’ ಆದ ಮೋಬೈಲ್ ನ್ನು ಅಲ್ಲಿದ್ದ ಸಿಬ್ಬಂದಿಗಳಿಗೆ ತೋರಿಸಿ, ನನ್ನ ಮಗನ ನಂಬರ್ ಇದರಲ್ಲಿದೆ...ಸ್ವಲ್ಪ ನೋಡಿ, ಕರೆ ಮಾಡಿಕೊಡಿ ಎಂದು ಬೇಡಿಕೊಂಡ. ಒಬ್ಬ ರಂಗಪ್ಪನ ಮೊಬೈಲ್ ನಿಂದ ಸಿಮ್ ತೆಗೆದು ತನ್ನ ಮೊಬೈಲ್ ಗೆ ಹಾಕಿ, ಸುರೇಶ ಎನ್ನುವ ಹೆಸರು ಹಡುಕಿ ಕರೆ ಮಾಡಿ ಕೊಟ್ಟ. ಅತ್ತಲಿಂದ ನಿದ್ದೆಗಣ್ಣಲ್ಲಿ ಹಲೋ...ಅಂದ ಏಕಮಾತ್ರಸುಪುತ್ರ. ರಂಗಪ್ಪ ದುಃಖ ತಪ್ತನಾಗಿ ನಡೆದದ್ದೆಲ್ಲವನ್ನೂ ಹೇಳಿದ. ಸುರೇಶ ತನಗೇನಾಗುತ್ತಿದೆ ಎಂಬುದರಿವಿಲ್ಲದೆ ನಿಂತಲ್ಲೆಯೇ ಮೂರ್ಛೆ ಹೋಗಿ ಬಿದ್ದ. ಕೈಯಲ್ಲಿದ್ದ ಪ್ರೀತಿಯ ಮೊಬೈಲ್ ಚೂರು-ಚೂರಾಗಿ ಬಿದ್ದಿತು.       ನೀನೊಂದು ಅನಿಶ್ಚಿತ ಛಾಯೆ... ಜ್ಞಾನ ದೀವಿಗೆಯಿಂದ ನೀನು ಕಾಣೆ. ಸೋಮಾರಿಯಾದ ನನಗೆ ನೀನೇ ಒಂದು ಮಾಯೆ! ನೀನು ಕವಿದರೆ ನನ್ನ ಇರುವಿಕೆ ನೆಪ ಮಾತ್ರ. ಆಳುತ್ತಿಯೋ? ಅಳಿಯುತ್ತಿಯೋ? ಎಲ್ಲ ನಿನಗೆ ಬಿಟ್ಟಿದ್ದೇ...ಯಾಮಿನಿ.                                                                                                      -ಧಾತು (ಉದಯಕುಮಾರ)